ಕಂಪ್ಯೂಟರ್ ಎಂದತಕ್ಷಣ ನಮ್ಮ ಮನಸ್ಸಿಗೆ ಬರುವ ಚಿತ್ರ ಮಾನಿಟರ್, ಕೀಬೋರ್ಡ್, ಮೌಸ್ ಹಾಗೂ ಪಕ್ಕದಲ್ಲೊಂದು ದೊಡ್ಡ ಕ್ಯಾಬಿನೆಟ್. ಇಂತಹ ದೊಡ್ಡ ಪರದೆಯ, ಮೇಜಿನ ಮೇಲೆ ಸ್ಥಾಪಿತವಾಗುವ ('ಡೆಸ್ಕ್‌ಟಾಪ್') ಕಂಪ್ಯೂಟರುಗಳ ಕಾಲ ಲ್ಯಾಪ್‌ಟಾಪು-ಟ್ಯಾಬ್ಲೆಟ್ಟುಗಳ ಭರಾಟೆಯಲ್ಲಿ ಇನ್ನೇನು ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಕಂಪ್ಯೂಟರಿನ ರೂಪಾಂತರ ಪರ್ವ ಪ್ರಾರಂಭವಾಗಿದೆ. ಮಿನಿ, ಮೈಕ್ರೋ ಹಾಗೂ ಆಲ್-ಇನ್-ಒನ್‌ಗಳ ಮೂಲಕ ಕಂಪ್ಯೂಟರ್ ಇಡಲು ಬೇಕಾದ ಜಾಗವನ್ನು ಕಡಿಮೆ ಮಾಡಲಾಗುತ್ತಿದೆ. ದಿವಾನಖಾನೆಯ ಟೀವಿಗೇ ಜೋಡಿಸಬಹುದಾದ ಸಾಧನಗಳು ದಶಕಗಳ ಹಿಂದಿನ ವಿನ್ಯಾಸವನ್ನು ಮತ್ತೆ ನೆನಪಿಸುತ್ತಿವೆ. ಕಂಪ್ಯೂಟರ್ ಜಗದ ಫ್ಯಾಶನ್ ಚಕ್ರ ಪೂರ್ತಿ ಒಂದು ಸುತ್ತು ಬಂದಿದೆ!ಟಿ. ಜಿ. ಶ್ರೀನಿಧಿ
ಕಂಪ್ಯೂಟರಿಗೆ ನಮ್ಮ ಮನೆಗಳಲ್ಲಿ ಪ್ರಮುಖ ಸ್ಥಾನ ಸಿಕ್ಕಿದ್ದು ಮಾಹಿತಿ ತಂತ್ರಜ್ಞಾನದ ಪ್ರಭಾವ ಬೆಳೆಯಲು ಶುರುವಾದ ಸಮಯದಲ್ಲೇ ಇರಬೇಕು. ಅಲ್ಲಿಂದ ಈಚೆಗಿನ ದಶಕಗಳಲ್ಲಿ ಟೀವಿ ಫ್ರಿಜ್ಜು ಮಿಕ್ಸಿಗಳಂತೆ ಕಂಪ್ಯೂಟರ್ ಕೂಡ ಮನೆಯಲ್ಲಿ ಸಾಮಾನ್ಯವಾಗಿ ಇರಬೇಕಾದ ಸಾಧನಗಳ ಪಟ್ಟಿಗೆ ಸೇರಿಕೊಂಡುಬಿಟ್ಟಿದೆ.
ಮನೆಯ ಕಂಪ್ಯೂಟರ್ ಎಂದಾಕ್ಷಣ ನಮ್ಮ ಮನಸ್ಸಿಗೆ ಬರುವ ಮೊದಲ ಚಿತ್ರ ಮಾನಿಟರ್, ಕೀಬೋರ್ಡ್, ಮೌಸ್, ಸ್ಪೀಕರ್ ಮತ್ತು ಅದೆಲ್ಲವನ್ನೂ ಸಂಪರ್ಕಿಸುವ - ಮದರ್‌ಬೋರ್ಡ್, ಹಾರ್ಡ್ ಡಿಸ್ಕ್, ರ್‍ಯಾಮ್ ಇತ್ಯಾದಿಗಳನ್ನೆಲ್ಲ ತುಂಬಿಟ್ಟುಕೊಂಡಿರುವ - ದೊಡ್ಡದೊಂದು ಪೆಟ್ಟಿಗೆ. ಡಬ್ಬ ಎಂದಾದರೂ ಕರೆಯಿರಿ, ಕ್ಯಾಬಿನೆಟ್ ಎಂದಾದರೂ ಹೆಸರಿಸಿ - ಅದಂತೂ ಆದರ್ಶ ಡೆಸ್ಕ್‌ಟಾಪ್ ಕಂಪ್ಯೂಟರಿನ ಅವಿಭಾಜ್ಯ ಅಂಗ. ಇನ್ನು ವಿದ್ಯುತ್ ಕೈಕೊಟ್ಟಾಗ ನೆರವಿಗೆ ಬರುವ ಚಿಕ್ಕದೊಂದು ಯುಪಿಎಸ್ ಹಾಗೂ ಕಂಪ್ಯೂಟರಿನ ಸಮಸ್ತ ಅಂಗಗಳಿಗೂ ಆಶ್ರಯನೀಡುವ ಕಂಪ್ಯೂಟರ್ ಟೇಬಲ್ ಕೂಡ ಬಹಳ ಮನೆಗಳಲ್ಲಿ ಇರುತ್ತವೆ.
ಮನೆ ದೊಡ್ಡದಾಗಿದ್ದರೆ ಇಂಥದ್ದೊಂದು ಕಂಪ್ಯೂಟರ್ ಕುಟುಂಬಕ್ಕೆ ಜಾಗ ಕೊಡುವುದರಲ್ಲಿ ಹೆಚ್ಚಿನ ಸಮಸ್ಯೆಯೇನೂ ಇರುವುದಿಲ್ಲ. ಆದರೆ ಈಗಿನ ಕಾಲದಲ್ಲಿ ಮನೆ ಕಟ್ಟಲು ಬೇಕಾಗುವ ರಿಯಲ್ ಎಸ್ಟೇಟ್ ಹಾಗೂ ನಾವು ಕೊಳ್ಳುವ ಅಸಂಖ್ಯ ವಸ್ತುಗಳಿಗೆ ಮನೆಯೊಳಗೆ ಒದಗಿಸಬೇಕಾದ ರಿಯಲ್ ಎಸ್ಟೇಟುಗಳೆರಡೂ ದುಬಾರಿ. ಹೀಗಿರುವಾಗ ಕಂಪ್ಯೂಟರಿಗೆ ಅಷ್ಟೆಲ್ಲ ಜಾಗ ಕೊಡುವುದೆಂದರೇನು ತಮಾಷೆಯೇ?
ಹಾಗಾಗಿಯೇ ಈಗ ಸ್ಮಾಲ್ ಈಸ್ ಬ್ಯೂಟಿಫುಲ್. ದಿನದಿಂದ ದಿನಕ್ಕೆ ಕಂಪ್ಯೂಟರಿನ ಮೂತಿ, ಅಂದರೆ ಪರದೆ, ಚಿಕ್ಕದಾಗುತ್ತ ಸಾಗುತ್ತಿದೆ. ಈ ವಿದ್ಯಮಾನದಿಂದ ಅದರ ಕೀರ್ತಿಗೇನೂ ಕುಂದು ಬಾರದಂತೆ ನೋಡಿಕೊಳ್ಳಲು ಇತರ ಅಂಗಗಳೂ ಗಾತ್ರದಲ್ಲಿ ಕುಗ್ಗುವುದನ್ನು ಕಲಿತುಬಿಟ್ಟಿವೆ.
ಕಂಪ್ಯೂಟರಿಗೆ ಟೇಬಲ್ ಬೇರೆ ಯಾಕೆ, ಕೆಲಸಮಾಡುವಷ್ಟು ಹೊತ್ತು ತೊಡೆಯ ಮೇಲಿಟ್ಟುಕೊಂಡಿದ್ದು ಆನಂತರ ಬ್ಯಾಗಿನೊಳಕ್ಕೆ ತೂರಿಸಿದರೆ ಆಯಿತು - ಈಗ ಲ್ಯಾಪ್‌ಟಾಪ್ ಕೃಪೆಯಿಂದ ಕುಳಿತ ಜಾಗವೇ ಆಫೀಸು. ಆಫೀಸು ಕೆಲಸ ಮುಗಿಸಿದ ಮೇಲೆ ಇಂಟರ್‌ನೆಟ್ಟಿನಲ್ಲಿ ಆರಾಮವಾಗಿ ಈಜಾಡಲು ಹೇಗೂ ಟ್ಯಾಬ್ಲೆಟ್ ಇದೆ. ಇನ್ನು ಇಪ್ಪತ್ತನಾಲ್ಕು ಗಂಟೆಯೂ ವಾಟ್ಸಾಪಿನಲ್ಲಿ ವಾಟ್ಸಪ್ ಎನ್ನಲು ಜೇಬಿನಲ್ಲೊಂದು ಸ್ಮಾರ್ಟ್ ಫೋನು, ಅದನ್ನು ಜೇಬಿನಿಂದಾಚೆ ತೆಗೆಯದೆಯೇ ಓದಬೇಕೆಂದರೆ ಮುಂಗೈಯ ವಾಚ್ ಕೂಡ ಸ್ಮಾರ್ಟು. ಇಷ್ಟಿದ್ದ ಮೇಲೆ ಸ್ವರ್ಗಕ್ಕೆ ಕಿಚ್ಚು ಹಚ್ಚುವುದೇ ಇನ್ನೇನು!
.png)































