ಸೋಮವಾರ, ಏಪ್ರಿಲ್ 26, 2010

ಇ-ಜ್ಞಾನಕ್ಕೆ ಮೂರು ತುಂಬಿತು!

ವಿಜ್ಞಾನ ತಂತ್ರಜ್ಞಾನ ವಿಷಯಗಳಿಗೆ ಮೀಸಲಾದ ನನ್ನ ಕನ್ನಡ ಬ್ಲಾಗು ಇ-ಜ್ಞಾನ ಪ್ರಾರಂಭವಾಗಿ ಇಂದಿಗೆ ಮೂರು ವರ್ಷ. ಮೂರು ವರ್ಷಗಳ ಈ ಅವಧಿಯಲ್ಲಿ ಇಲ್ಲಿ ಪ್ರಕಟವಾಗಿರುವ ಲೇಖನಗಳ ಸಂಖ್ಯೆ ಹೇಳಿಕೊಳ್ಳುವಷ್ಟು ದೊಡ್ಡದಲ್ಲದಿದ್ದರೂ ಓದುಗ ಮಿತ್ರರಿಂದ ದೊರೆತಿರುವ ಸಹಕಾರ ಮಾತ್ರ ಅಪಾರವಾದದ್ದು. ಇ-ಜ್ಞಾನದತ್ತ ಬಂದುಹೋಗುತ್ತ, ಇಲ್ಲಿನ ಲೇಖನಗಳನ್ನು ಮೆಚ್ಚುತ್ತ, ತಪ್ಪುಗಳನ್ನು ತೋರಿಸುತ್ತ ಈ ಬಳಗದ ಸದಸ್ಯರಾಗಿರುವ ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಇ-ಜ್ಞಾನದೊಂದಿಗಿನ ನಿಮ್ಮ ಒಡನಾಟ ಹೀಗೆಯೇ ಮುಂದುವರೆಯಲಿ.

ವಿಶ್ವಾಸಪೂರ್ವಕ,
ಟಿ ಜಿ ಶ್ರೀನಿಧಿ

ಜಾಲಲೋಕದ ಮಬ್ಬಿನಲ್ಲಿ ಸರ್ಚ್ ಇಂಜನ್ ಬೆಳಕು

ಟಿ ಜಿ ಶ್ರೀನಿಧಿ

ಸುಮಾರು ಹದಿನೈದು ವರ್ಷ ಹಿಂದಿನ ಘಟನೆಯಿರಬೇಕು. ನನ್ನ ಅಕ್ಕನ ಶಾಲೆಯಲ್ಲಿ ಕರ್ನಾಟಕದ ಪ್ರಸಿದ್ಧ ಪ್ರವಾಸಿತಾಣಗಳ ಬಗೆಗೆ ಒಂದು ಚಿತ್ರಸಹಿತ ಪ್ರಬಂಧ ಬರೆದುತನ್ನಿ ಎಂದು ಹೇಳಿದ್ದರು. ಪ್ರಬಂಧವೇನೋ ಸರಿ, ಆದರೆ ಚಿತ್ರಗಳಿಗೇನು ಮಾಡೋಣ? ಆಗ ಮನೆಮಂದಿಯೆಲ್ಲ ಎರಡು ದಿನ ಕುಳಿತು ಹಳೆಯ ಪತ್ರಿಕಾ ಪುರವಣಿಗಳು ಹಾಗೂ ದೀಪಾವಳಿ ಸಂಚಿಕೆಗಳ ಸಂಗ್ರಹವನ್ನೆಲ್ಲ ಜಾಲಾಡಿ ಚಿತ್ರಗಳನ್ನು ಸಂಗ್ರಹಿಸಿದ್ದು, ಆಮೇಲೆ ನಮ್ಮಕ್ಕ ಪ್ರಬಂಧವನ್ನು ಸಿದ್ಧಪಡಿಸಿದ್ದು ನನಗಿನ್ನೂ ಚೆನ್ನಾಗಿ ನೆನಪಿದೆ.

ಆದರೆ ಈಗ ಪರಿಸ್ಥಿತಿ ಹಾಗಿಲ್ಲ ಎಂದು ಮೊನ್ನೆತಾನೆ ನೆನೆಪಿಸಿದವಳು ನನ್ನ ಇನ್ನೊಬ್ಬ ಅಕ್ಕನ ಮಗಳು. ಅವಳ ಶಾಲೆಯಲ್ಲಿ ಆಫ್ರಿಕಾದ ಕಾಡುಪ್ರಾಣಿಗಳ ಚಿತ್ರಗಳನ್ನು ಸಂಗ್ರಹಿಸಿತನ್ನಿ ಎಂದು ಹೇಳಿದ್ದರಂತೆ. ಜಾಸ್ತಿ ಸಮಯ ಇಲ್ಲ, ಬೇಗ ಹುಡುಕಿಕೊಡು ಅಂತ ನನಗೆ ದುಂಬಾಲುಬಿದ್ದಳು. ನಾನು ಗೂಗಲ್ ಮಾಡಿದೆ, ಚಿತ್ರಗಳನ್ನು ಮುದ್ರಿಸಿ ಅವಳಿಗೆ ಕೊಟ್ಟೆ. ಅರ್ಧಗಂಟೆಯೊಳಗೆ ಅವಳ ಚಿತ್ರಸಂಗ್ರಹ ಸಿದ್ಧವಾಗಿತ್ತು.

ಹೌದಲ್ಲ, ಈಗ ಪರಿಸ್ಥಿತಿ ಎಷ್ಟು ಬದಲಾಗಿದೆ. ಪ್ರಪಂಚದ ಮೂಲೆಮೂಲೆಗಳ ಮಾಹಿತಿ ನಮ್ಮ ಗಣಕದಲ್ಲಿ ಕ್ಷಣಾರ್ಧದಲ್ಲಿ ಲಭ್ಯವಾಗುತ್ತಿದೆ. ವಿಶ್ವವ್ಯಾಪಿ ಜಾಲ ಅದೆಷ್ಟು ಶಕ್ತವಾಗಿ ಬೆಳೆದಿದೆಯೆಂದರೆ ಪುಟ್ಟ ಮಕ್ಕಳ ಹೋಮ್‌ವರ್ಕ್‌ನಿಂದ ಹಿಡಿದು ದೊಡ್ಡವರ ಪ್ರಾಜೆಕ್ಟ್ ರಿಪೋರ್ಟ್‌ವರೆಗೂ ಅದೆಷ್ಟೋ ಕೆಲಸಗಳಿಗೆ ಬೇಕಾದ ಮಾಹಿತಿ ನಮಗೆ ಬೇಕಾದಾಗ ಬೇಕಾದ ಕಡೆ ದೊರಕುವಂತಾಗಿದೆ.

ಇದನ್ನು ಸಾಧ್ಯವಾಗಿಸಿರುವ ತಂತ್ರಾಂಶಗಳೇ ಸರ್ಚ್ ಇಂಜನ್ಗಳು ಅಥವಾ ಶೋಧನ ಚಾಲಕ ತಂತ್ರಾಂಶಗಳು. ಇವು ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಹುಡುಕಲು ಸಹಾಯಮಾಡುತ್ತವೆ. ಗೂಗಲ್, ಬಿಂಗ್ ಇವೆಲ್ಲ ಸರ್ಚ್ ಇಂಜನ್‌ಗಳಿಗೆ ಉದಾಹರಣೆಗಳು. ಗೂಗಲ್ ಅಂತೂ ಅದೆಷ್ಟು ಪ್ರಸಿದ್ಧವಾಗಿದೆಯೆಂದರೆ ಸರ್ಚ್‌ಇಂಜನ್ ಬಳಸಿ ಅಂತರ್ಜಾಲದಲ್ಲಿ ಮಾಹಿತಿಗಾಗಿ ಹುಡುಕಾಡುವ ಪ್ರಕ್ರಿಯೆಗೆ googಟiಟಿg ಅಥವಾ ಗೂಗಲ್ ಮಾಡುವುದು ಎಂಬ ಅಡ್ಡಹೆಸರೇ ಹುಟ್ಟಿಕೊಂಡುಬಿಟ್ಟಿದೆ.

ಯಾವುದೇ ವಿಷಯದ ಕುರಿತು ವಿಶ್ವವ್ಯಾಪಿ ಜಾಲದಲ್ಲಿ ಇರಬಹುದಾದ ಮಾಹಿತಿಯನ್ನು ಅತ್ಯಂತ ಸುಲಭವಾಗಿ ಹುಡುಕಿಕೊಡುವ ಈ ತಂತ್ರಾಂಶಗಳು ವಿಶ್ವದಾದ್ಯಂತ ಇರುವ ಅಂತರ್ಜಾಲ ಬಳಕೆದಾರರಲ್ಲಿ ಅತ್ಯಂತ ಜನಪ್ರಿಯವಾಗಿವೆ. ವಿವಿಧ ವಿಷಯಗಳಿಗೆ ಸಂಬಂಧಪಟ್ಟ ಪಠ್ಯರೂಪದ ಮಾಹಿತಿಯಷ್ಟೇ ಅಲ್ಲದೆ ಚಿತ್ರಗಳು, ಸುದ್ದಿಗಳು, ಇ-ಪುಸ್ತಕಗಳು, ಭೂಪಟಗಳು ಮುಂತಾದ ಅನೇಕ ರೂಪಗಳಲ್ಲಿರುವ ಮಾಹಿತಿಯನ್ನು ಸರ್ಚ್ ಇಂಜನ್‌ಗಳು ಹುಡುಕಿಕೊಡುತ್ತವೆ. ಬೇರೆ ತಾಣಗಳಲ್ಲಿರುವ ಮಾಹಿತಿಯ ಮಾತು ಹಾಗಿರಲಿ, ನಮ್ಮ ಗಣಕದಲ್ಲಿರುವ ಮಾಹಿತಿಯನ್ನು ಹುಡುಕುವುದಕ್ಕಾಗಿಯೂ ಸರ್ಚ್ ಇಂಜನ್‌ಗಳು ಲಭ್ಯವಿವೆ.

* * *

ನಿಮ್ಮ ಇಚ್ಛೆಯ ವಿಷಯಗಳಿಗಾಗಿ ವಿಶ್ವವ್ಯಾಪಿ ಜಾಲದ ಪುಟಗಳ ನಡುವೆ ಹುಡುಕಾಟ ನಡೆಸುವುದು ಸರ್ಚ್ ಇಂಜನ್‌ಗಳ ಕೆಲಸ. ನಾವು ಹುಡುಕುತ್ತಿರುವ ವಿಷಯಕ್ಕೆ ಸಂಬಂಧಿಸಿದ ಮುಖ್ಯ ಪದಗಳನ್ನು (ಕೀ ವರ್ಡ್ಸ್) ನಿರ್ದಿಷ್ಟರೂಪದಲ್ಲಿ ಬೆರಳಚ್ಚಿಸಿ, ಹುಡುಕುವ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಿದರೆ, ಸರ್ಚ್ ಇಂಜನ್‌ಗಳು ನಮಗೆ ಬೇಕಾದ ಮಾಹಿತಿ ವಿಶ್ವವ್ಯಾಪಿ ಜಾಲದಲ್ಲಿ ಎಲ್ಲೆಲ್ಲಿ ಲಭ್ಯವಿದೆ ಎಂಬುದನ್ನು ಹುಡುಕಿಕೊಡುತ್ತವೆ; ಕಡತಗಳು, ಚಿತ್ರಗಳು, ಸುದ್ದಿಗಳು, ವಿಡಿಯೋಗಳು - ಹೀಗೆ ನಮಗೆ ಬೇಕಾದ ವಿಷಯಕ್ಕೆ ಸಂಬಂಧಪಟ್ಟ, ಯಾವುದೇ ರೂಪದಲ್ಲಿರುವ ಮಾಹಿತಿಯನ್ನು ಪತ್ತೆಮಾಡುತ್ತವೆ.

ಹೀಗೆ ಹುಡುಕಿದ ಮಾಹಿತಿಯನ್ನು ಅದರ ಪ್ರಾಮುಖ್ಯತೆಗೆ ಅನುಗುಣವಾಗಿ ಜೋಡಿಸಿ ಅವು ನಿಮ್ಮ ಮುಂದೆ ಪ್ರದರ್ಶಿಸುತ್ತವೆ. ಇಂತಹ ಪ್ರತಿಯೊಂದು ಮಾಹಿತಿಯೂ ಒಂದೊಂದು ತಂತು ಅಥವಾ ಲಿಂಕ್ನ ರೂಪದಲ್ಲಿರುವುದರಿಂದ ಅವುಗಳ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದ ಮಾಹಿತಿ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ.

ಈ ಮಾಹಿತಿ ಹುಡುಕಾಟ ನಡೆಸಲು ಸರ್ಚ್ ಇಂಜನ್‌ಗಳು ವೆಬ್ ಸ್ಪೈಡರ್‌ಗಳೆಂಬ ತಂತ್ರಾಂಶಗಳನ್ನು ಬಳಸುತ್ತವೆ. ಇವನ್ನು ನಾವು ಜೇಡಗಳೆಂದು ಕರೆಯೋಣ. ವಿಶ್ವವ್ಯಾಪಿ ಜಾಲದಲ್ಲಿರುವ ಲಕ್ಷಾಂತರ ಜಾಲತಾಣಗಳನ್ನು (ವೆಬ್‌ಸೈಟ್) ಹಾಗೂ ಅವುಗಳಲ್ಲಿರುವ ಪುಟಗಳನ್ನು ಅವುಗಳ ಜನಪ್ರಿಯತೆಗೆ ಅನುಗುಣವಾಗಿ ವರ್ಗೀಕರಿಸಿ, ಆ ಪುಟಗಳಲ್ಲಿರುವ ಮಾಹಿತಿ ಯಾವ ವಿಷಯಗಳಿಗೆ ಸಂಬಂಧಿಸಿದ್ದು ಎಂಬ ಅಂಶವನ್ನು ದಾಖಲಿಸಿಕೊಳ್ಳುವುದು ಈ ಜೇಡಗಳ ಕೆಲಸ. ಜಾಲತಾಣಗಳನ್ನು ರೂಪಿಸುವವರು ಇಂತಹ ಸ್ಪೈಡರ್‌ಗಳಿಗೆ ಸಹಾಯವಾಗಲೆಂದೇ ತಮ್ಮ ತಾಣದ ಪುಟಗಳ ಬಗ್ಗೆ ಪ್ರಮುಖ ಮಾಹಿತಿಗಳನ್ನು ಮೆಟಾ ಟ್ಯಾಗ್ಗಳ ರೂಪದಲ್ಲಿ ಸಂಕ್ಷಿಪ್ತವಾಗಿ ಶೇಖರಿಸಿಟ್ಟಿರುತ್ತಾರೆ. ಸ್ಪೈಡರ್‌ಗಳ ಹುಡುಕಾಟ ಇದೇ ಮೆಟಾ ಟ್ಯಾಗ್‌ಗಳನ್ನು ಆಧರಿಸಿರುತ್ತದೆ.

ಈ ಜೇಡಗಳು ಸಾಮಾನ್ಯವಾಗಿ ತಮ್ಮ ಹುಡುಕಾಟವನ್ನು ಅತ್ಯಂತ ಪ್ರಸಿದ್ಧ ಜಾಲತಾಣಗಳು ಹಾಗೂ ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ಸರ್ವರ್‌ಗಳಿಂದ ಪ್ರಾರಂಭಿಸುತ್ತವೆ. ಅಲ್ಲಿಂದ ಮುಂದಕ್ಕೆ ಆ ಜಾಲತಾಣ ಹಾಗೂ ಆ ಜಾಲತಾಣವನ್ನು ಹೊಂದಿರುವ ಸರ್ವರ್‌ನಲ್ಲಿರುವ ಎಲ್ಲ ಪುಟಗಳ ಮೇಲೂ ಒಮ್ಮೆ ಕಣ್ಣಾಡಿಸಿ ಅವುಗಳಲ್ಲಿರುವ ಮಾಹಿತಿಯನ್ನು ವರ್ಗೀಕರಿಸಿಟ್ಟುಕೊಳ್ಳುವ ಕೆಲಸ ಪ್ರಾರಂಭವಾಗುತ್ತದೆ. ಒಂದು ಜಾಲತಾಣದಲ್ಲಿರುವ ಎಲ್ಲ ತಂತುಗಳನ್ನೂ ಈ ಜೇಡಗಳು ಹಿಂಬಾಲಿಸುವುದರಿಂದ ಅವುಗಳ ನಿಲುಕಿಗೆ ಸಿಗುವ ಪುಟಗಳ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ. ಸ್ಪೈಡರ್‌ಗಳು ಸಂಗ್ರಹಿಸುವ ಮಾಹಿತಿಯ ಅಧಾರದ ಮೇಲೆ ಒಂದು ಅಕಾರಾದಿಯನ್ನು (ಇಂಡೆಕ್ಸ್) ತಯಾರಿಸಿಕೊಳ್ಳುವ ಸರ್ಚ್ ಇಂಜನ್‌ಗಳು ನಮಗೆ ಬೇಕಾದ ಮಾಹಿತಿಯನ್ನು ಅತ್ಯಂತ ವೇಗವಾಗಿ ಹುಡುಕಿಕೊಳ್ಳಲು ಸಹಾಯ ಮಾಡುತ್ತವೆ.

* * *

ಸರ್ಚ್ ತಂತ್ರಜ್ಞಾನ ಬೆಳೆದಂತೆ ಎಲ್ಲಬಗೆಯ ಮಾಹಿತಿಯನ್ನೂ ಹುಡುಕುಕೊಡುವ ಗೂಗಲ್‌ನಂತಹ ಸರ್ಚ್‌ಇಂಜನ್‌ಗಳ ಜೊತೆಗೆ ನಿರ್ದಿಷ್ಟ ವಿಷಯಗಳಿಗೆ (ಉದ್ಯೋಗಾವಕಾಶಗಳು, ವೈಜ್ಞಾನಿಕ ಮಾಹಿತಿ, ಪ್ರವಾಸ ಇತ್ಯಾದಿ) ಮಾತ್ರವೇ ಸೀಮಿತವಾದ ವರ್ಟಿಕಲ್ ಸರ್ಚ್ ಇಂಜನ್‌ಗಳೂ ಹುಟ್ಟಿಕೊಂಡಿವೆ. ಯಾವುದೇ ವಿಷಯವನ್ನು ಕುರಿತಾದ ಮಾಹಿತಿಯನ್ನು ಜನರ ನೆರವಿನಿಂದಲೇ ಒಟ್ಟುಗೂಡಿಸಿ ಹುಡುಕಾಟದ ಪ್ರಕ್ರಿಯೆಯನ್ನು ಸುಲಭಗೊಳಿಸುವ ಆಶಯ ಹೊಂದಿರುವ ಸಮುದಾಯ ಸರ್ಚ್‌ಇಂಜನ್‌ಗಳೂ ಪ್ರಚಲಿತಕ್ಕೆ ಬರುತ್ತಿವೆ.

ಅಷ್ಟೇ ಅಲ್ಲ, ಯಾವುದೇ ವಿಷಯದ ಕುರಿತು ಸಮಗ್ರ ಮಾಹಿತಿ ಒದಗಿಸುವ ನಾಲೆಜ್ ಇಂಜನ್‌ಗಳೂ ತಯಾರಾಗುತ್ತಿವೆ. ವುಲ್ಫ್‌ರಮ್ ಆಲ್ಫಾ ಎನ್ನುವುದು ಇಂತಹುದೊಂದು ನಾಲೆಜ್ ಇಂಜನ್. ಈ ತಾಣ ಯಾವುದೇ ವಿಷಯದ ಬಗ್ಗೆ ಜಾಲತಾಣಗಳಲ್ಲಿ ಲಭ್ಯವಿರುವ ಮಾಹಿತಿಯನ್ನಷ್ಟೆ ಹುಡುಕಿಕೊಡುವ ಬದಲಿಗೆ ಆ ವಿಷಯದ ಕುರಿತಾದ ಸಮಗ್ರ ಮಾಹಿತಿ ನೀಡುವ ಪ್ರಯತ್ನ ಮಾಡುತ್ತದೆ.

ಉದಾಹರಣೆಗೆ ಗೂಗಲ್‌ನಲ್ಲಿ ಮೈಸೂರು ಬೆಂಗಳೂರು ಎಂದು ದಾಖಲಿಸಿ ಹುಡುಕಲು ಹೇಳಿದಿರಿ ಎಂದುಕೊಳ್ಳೋಣ. ಅದಕ್ಕೆ ಉತ್ತರವಾಗಿ ನಿಮಗೆ ಸಿಗುವುದು ಮೈಸೂರು ಹಾಗೂ ಬೆಂಗಳೂರು ಎಂಬ ಎರಡೂ ಹೆಸರುಗಳ ಉಲ್ಲೇಖವಿರುವ ಜಾಲತಾಣಗಳ ಪಟ್ಟಿ. ಆದರೆ ವುಲ್ಫ್‌ರಮ್ ಆಲ್ಫಾ ತಾಣದಲ್ಲಿ ಮೈಸೂರು ಬೆಂಗಳೂರು ಎಂಬುದರ ಬಗ್ಗೆ ಹುಡುಕಿದರೆ ಈ ಊರುಗಳು ಎಲ್ಲಿವೆ, ಸಮುದ್ರಮಟ್ಟದಿಂದ ಎಷ್ಟು ಎತ್ತರದಲ್ಲಿವೆ, ಜನಸಂಖ್ಯೆ ಎಷ್ಟು, ಈಗ ಅಲ್ಲಿ ಟೈಮೆಷ್ಟು, ಒಂದಕ್ಕೊಂದು ಎಷ್ಟು ದೂರದಲ್ಲಿವೆ ಮುಂತಾದ ಎಲ್ಲ ವಿವರಗಳೂ ಒಂದೇ ಕಡೆ ಸಿಕ್ಕಿಬಿಡುತ್ತವೆ!

* * *

ಇದೀಗ ಪ್ರಚಲಿತದಲ್ಲಿರುವ ಪಠ್ಯಾಧಾರಿತ ಸರ್ಚ್ ಇಂಜನ್‌ಗಳ ಜೊತೆಗೆ ಚಿತ್ರಗಳ ನೆರವಿನಿಂದ ಹುಡುಕಾಟವನ್ನು ಸಾಧ್ಯವಾಗಿಸುವ ಸರ್ಚ್ ಇಂಜನ್‌ಗಳೂ ಸಿದ್ಧವಾಗುತ್ತಿವೆ. ಇಂತಹ ಸರ್ಚ್ ಇಂಜನ್‌ಗಳ ಸಹಾಯದಿಂದ ನಿಮ್ಮ ಬಳಿಯಿರುವ ಚಿತ್ರವನ್ನು ಆಧಾರವಾಗಿಟ್ಟುಕೊಂಡು ಆ ಚಿತ್ರಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಹುಡುಕುವುದು ಸಾಧ್ಯವಾಗಲಿದೆಯಂತೆ.

ಇಷ್ಟೆಲ್ಲ ಮುಂದುವರೆದಿರುವ ಸರ್ಚ್ ತಂತ್ರಜ್ಞಾನದ ಮುಂದಿನ ಹಂತವಾಗಿ ಆಡುಮಾತಿನ ಪ್ರಶ್ನೆಗಳಿಗೆ (ನ್ಯಾಚುರಲ್ ಲ್ಯಾಂಗ್ವೇಜ್ ಕ್ವೆರಿಯಿಂಗ್) ಉತ್ತರಿಸು ವಂತಹ ಸರ್ಚ್ ಇಂಜನ್‌ಗಳು ರೂಪಗೊಳ್ಳುತ್ತಿವೆ. ಇಂದಿನ ಸರ್ಚ್ ಇಂಜನ್‌ಗಳಿಗಿಂತ ಹೆಚ್ಚು ಬುದ್ಧಿವಂತವಾಗಿರುವ ಇಂತಹ ಸರ್ಚ್ ಇಂಜನ್‌ಗಳು ನಿರ್ದಿಷ್ಟ ರೂಪದ ಕೀವರ್ಡ್‌ಗಳನ್ನೇನೂ ಬಳಸದೆ ಆಡುಮಾತಿನ ರೂಪದಲ್ಲೇ ಬರೆದ ನಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡಲಿವೆ.

ಶಿವರಾಮ ಕಾರಂತರು ಬರೆದ ಮೊದಲ ಪುಸ್ತಕ ಯಾವುದು ಎಂದು ಕೇಳಿದಾಗ ಶಿವರಾಮ ಕಾರಂತ ಪುಸ್ತಕ ಎಂಬ ಉಲ್ಲೇಖವಿರುವ ತಾಣಗಳನ್ನೆಲ್ಲ ತೋರಿಸುವ ಬದಲು ಅವರ ಮೊದಲ ಪುಸ್ತಕದ ಬಗೆಗಿನ ಮಾಹಿತಿಯನ್ನೇ ತೋರಿಸುವ ಚಾಕಚಕ್ಯತೆ ಇಂತಹ ಸರ್ಚ್ ಇಂಜನ್‌ಗಳಲ್ಲಿ ಇರಲಿದೆ.

ಈ ರೂಪದಲ್ಲಿ ಬರೆದ ಪ್ರಶ್ನೆಗಳ ಜೊತೆಗೆ ಧ್ವನಿಯ ರೂಪದಲ್ಲಿ ನಾವು ಕೇಳುವ ಪ್ರಶ್ನೆಗಳಿಗೂ ಉತ್ತರಿಸಬಲ್ಲ ಸರ್ಚ್ ಇಂಜನ್‌ಗಳೂ ಸಿದ್ಧವಾಗುತ್ತಿವೆ. ಸರ್ಚ್ ಇಂಜನ್ ಕ್ಷೇತ್ರದ ದಿಗ್ಗಜ ಗೂಗಲ್ ಈಗಾಗಲೇ ಇಂತಹುದೊಂದು ವ್ಯವಸ್ಥೆ ರೂಪಿಸಿದೆ. ನೋಕಿಯಾದ ಕೆಲ ಮಾದರಿ ಮೊಬೈಲ್‌ಗಳಲ್ಲಿ ಲಭ್ಯವಿರುವ ಈ ವ್ಯವಸ್ಥೆ ಇಂಗ್ಲಿಷ್ ಜೊತೆಗೆ ಚೈನೀಸ್ ಭಾಷೆಯನ್ನೂ ಅರ್ಥಮಾಡಿಕೊಳ್ಳಬಲ್ಲದಂತೆ!

ನವೆಂಬರ್ ೨೦೦೯ರಲ್ಲಿ ಬರೆದ ಲೇಖನ, ಮೇ ೨೦೧೦ರ 'ವಿಜ್ಞಾನ ಲೋಕ'ದಲ್ಲಿ ಪ್ರಕಟವಾಗಿದೆ.
badge