ಮಂಗಳವಾರ, ಡಿಸೆಂಬರ್ 25, 2012

ಕ್ಯಾಮೆರಾ ಕುಟುಂಬಕ್ಕೊಂದು ಹೊಸ ಸೇರ್ಪಡೆ


ಟಿ. ಜಿ. ಶ್ರೀನಿಧಿ

ಅತ್ಯುತ್ತಮ ಗುಣಮಟ್ಟದ ಛಾಯಾಚಿತ್ರಗಳಿಗೆ ಡಿಎಸ್‌ಎಲ್‌ಆರ್ ಕ್ಯಾಮೆರಾಗಳನ್ನು ಬಿಟ್ಟರಿಲ್ಲ ಎನ್ನುವುದು ಡಿಜಿಟಲ್ ಛಾಯಾಗ್ರಹಣದ ಅಆಇಈ ಬಲ್ಲವರಿಗೆಲ್ಲ ಗೊತ್ತಿರುವ ವಿಷಯವೇ. ಆದರೆ ಈ ಕ್ಯಾಮೆರಾಗಳ ದೊಡ್ಡ ಗಾತ್ರ ಹಲವು ಸನ್ನಿವೇಶಗಳಲ್ಲಿ ಕಿರಿಕಿರಿ ಮಾಡುವುದೂ ಉಂಟು.

ಒಂದೆರಡು ದಿನಗಳ ಪ್ರವಾಸಕ್ಕಾಗಿ ರೈಲಿನಲ್ಲೋ ಬಸ್ಸಿನಲ್ಲೋ ಹೊರಟಾಗಲಂತೂ ನಮ್ಮ ಇತರೆಲ್ಲ ಲಗ್ಗೇಜಿನಷ್ಟು, ಅಥವಾ ಅದಕ್ಕಿಂತ ಹೆಚ್ಚಿನದೇ ಜಾಗವನ್ನು ಡಿಎಸ್‌ಎಲ್‌ಆರ್ ಕ್ಯಾಮೆರಾ ಮತ್ತು ಅದರ ಪರಿಕರಗಳು ಆಕ್ರಮಿಸಿಕೊಂಡುಬಿಟ್ಟಿರುತ್ತವೆ. ಪದೇಪದೇ ಇಂತಹ ಅನುಭವಗಳಾದಾಗ ಸಾಮಾನ್ಯ ಪಾಯಿಂಟ್-ಆಂಡ್-ಶೂಟ್ ಕ್ಯಾಮೆರಾಗಳೇ ಡಿಎಸ್‌ಎಲ್‌ಆರ್‌ಗಳಿಗಿಂತ ಹೆಚ್ಚು ಆಪ್ಯಾಯಮಾನವಾಗಿ ಕಂಡರೂ ಆಶ್ಚರ್ಯವಿಲ್ಲ. ಸಣ್ಣ ಕ್ಯಾಮೆರಾಗಳ ಗಾತ್ರದಲ್ಲಿ ಡಿಎಸ್‌ಎಲ್‌ಆರ್ ವೈಶಿಷ್ಟ್ಯಗಳೆಲ್ಲ ಸಿಗುವಂತಿದ್ದರೆ ಎಷ್ಟು ಚೆನ್ನಾಗಿತ್ತಲ್ಲಪ್ಪ ಅನಿಸುವುದು ಅದೆಷ್ಟು ಬಾರಿಯೋ.

ಅಂತಹುದೊಂದು ಕನಸನ್ನು ನನಸುಮಾಡುವ ನಿಟ್ಟಿನಲ್ಲಿ ಸೃಷ್ಟಿಯಾಗಿರುವುದೇ ಕಾಂಪ್ಯಾಕ್ಟ್ ಸಿಸ್ಟಂ ಕ್ಯಾಮೆರಾ. ಸಾಮಾನ್ಯ ಕ್ಯಾಮೆರಾಗಳ ಗಾತ್ರದ ಆಸುಪಾಸಿನಲ್ಲಿ ಡಿಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿರುವಂತಹ ಸೌಲಭ್ಯಗಳನ್ನು ಒದಗಿಸುವುದು ಈ ಕ್ಯಾಮೆರಾಗಳ ವೈಶಿಷ್ಟ್ಯ. ಮಿರರ್‌ಲೆಸ್ ಇಂಟರ್‌ಚೇಂಜಬಲ್ ಲೆನ್ಸ್ ಕ್ಯಾಮೆರಾ (ಐಎಲ್‌ಸಿ) ಎಂದೂ ಕರೆಸಿಕೊಳ್ಳುವ ಇದೇ ಡಿಜಿಟಲ್ ಕ್ಯಾಮೆರಾ ಕುಟುಂಬದ ಹೊಚ್ಚಹೊಸ ಸದಸ್ಯ!

ಬುಧವಾರ, ಡಿಸೆಂಬರ್ 19, 2012

ಬೆಂಗಳೂರಿನಲ್ಲಿ ವಿಜ್ಞಾನ-ತಂತ್ರಜ್ಞಾನ ಅಕಾಡೆಮಿ ಸಮ್ಮೇಳನ


ಇಜ್ಞಾನ ವಾರ್ತೆ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಐದನೇ ವಾರ್ಷಿಕ ಸಮ್ಮೇಳನ ಬೆಂಗಳೂರಿನ ದಯಾನಂದ ಸಾಗರ್ ವಿದ್ಯಾಸಂಸ್ಥೆಯಲ್ಲಿ ಇಂದು ಬೆಳಿಗ್ಗೆ ಉದ್ಘಾಟನೆಯಾಯಿತು. ಬುಧವಾರ (ಡಿಸೆಂಬರ್ ೧೯, ೨೦೧೨) ಹಾಗೂ ಗುರುವಾರ (ಡಿಸೆಂಬರ್ ೨೦, ೨೦೧೨) ನಡೆಯಲಿರುವ ಈ ಸಮ್ಮೇಳನದಲ್ಲಿ ಅನೇಕ ವಿಷಯತಜ್ಞರು ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ.

ಹಿರಿಯ ವೈದ್ಯರೂ ಜನಪ್ರಿಯ ವಿಜ್ಞಾನ ಸಂವಹನಕಾರರೂ ಆದ ಡಾ. ಪಿ. ಎಸ್. ಶಂಕರ್ ಅವರನ್ನು ಅವರ ಜೀವಮಾನದ ಸಾಧನೆಗಾಗಿ ಉದ್ಘಾಟನಾ ಸಮಾರಂಭದಲ್ಲಿ ಗೌರವಿಸಲಾಯಿತು. ಈ ಗೌರವ ಪಡೆದಿರುವ ಡಾ. ಶಂಕರ್ ಅವರನ್ನು ಇಜ್ಞಾನ ಬಳಗ ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.


ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಪತ್ರಿಕೆ 'ವಿಜ್ಞಾನ ಲೋಕ'ದ ಸಂಚಿಕೆಗಳಿಂದ ಆಯ್ದ ಪ್ರಾತಿನಿಧಿಕ ಬರೆಹಗಳ ಸಂಕಲನ 'ವಿಜ್ಞಾನ ದೀಪ್ತಿ'ಯನ್ನು ಉದ್ಘಾಟನಾ ಸಮಾರಂಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಸದ್ಯಕ್ಕೆ ಮೂರು ತಿಂಗಳಿಗೊಮ್ಮೆ ಪ್ರಕಟವಾಗುತ್ತಿರುವ 'ವಿಜ್ಞಾನ ಲೋಕ'ವನ್ನು ಪ್ರತಿ ತಿಂಗಳಿಗೊಮ್ಮೆ ಏಕೆ ಪ್ರಕಟಿಸಬಾರದು ಎಂಬ ಪ್ರಶ್ನೆ ಎದ್ದಿದ್ದು, ಹಾಗೂ ಆ ನಿಟ್ಟಿನಲ್ಲಿ ಬೇಕಾದ ನೆರವನ್ನು ಒದಗಿಸಿಕೊಡುವ ಆಶ್ವಾಸನೆ ಸ್ವತಃ ಮುಖ್ಯಮಂತ್ರಿಗಳಿಂದಲೇ ದೊರೆತದ್ದು ಇಂದಿನ ಕಾರ್ಯಕ್ರಮದ ವಿಶೇಷ.

ಮಂಗಳವಾರ, ಡಿಸೆಂಬರ್ 18, 2012

ಇದು ಡಿಎಸ್‌ಎಲ್‌ಆರ್!


ಟಿ. ಜಿ. ಶ್ರೀನಿಧಿ

ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಕ್ಯಾಮೆರಾಗಳು ನಮ್ಮೆಲ್ಲರ ಬದುಕಿನಲ್ಲಿ ಅದೆಷ್ಟರ ಮಟ್ಟಿಗೆ ಹಾಸುಹೊಕ್ಕಾಗಿ ಸೇರಿಕೊಂಡಿವೆಯೆಂದರೆ ಮನೆಗಳಲ್ಲಿ ಡಿಜಿಟಲ್ ಕ್ಯಾಮೆರಾ ಇರುವುದು ಟೀವಿ, ಕಂಪ್ಯೂಟರ್ ಇರುವಷ್ಟೇ ಸಾಮಾನ್ಯವಾಗಿಬಿಟ್ಟಿದೆ. ಅಷ್ಟೇ ಅಲ್ಲ, ಡಿಜಿಟಲ್ ಕ್ಯಾಮೆರಾ ಮಾರುಕಟ್ಟೆಯಲ್ಲಿರುವ ವೈವಿಧ್ಯದ ಪರಿಣಾಮವಾಗಿ ಎಲ್ಲ ಬಜೆಟ್ಟುಗಳಿಗೂ ಹೊಂದಿಕೆಯಾಗಬಲ್ಲ ಕ್ಯಾಮೆರಾಗಳು ಸಿಗುತ್ತಿವೆ. ಅದೆಷ್ಟೋ ಜನರ ಮಟ್ಟಿಗೆ ಅವರ ಮೊಬೈಲುಗಳೇ ಡಿಜಿಟಲ್ ಕ್ಯಾಮೆರಾ ಕೂಡ ಆಗಿರುತ್ತವೆ.

ಇನ್ನು ಯಾವುದಾದರೂ ಪ್ರವಾಸಿ ಸ್ಥಳದ ಉದಾಹರಣೆ ತೆಗೆದುಕೊಂಡರಂತೂ ಅಲ್ಲಿರುವ ಪ್ರವಾಸಿಗರ ಕೈಗಳಲ್ಲೇ ನಮಗೆ ಹತ್ತಾರು ಬಗೆಯ ಕ್ಯಾಮೆರಾಗಳು ಕಾಣಸಿಗುತ್ತವೆ. ಕೆಲವೇ ಸಾವಿರ ಬೆಲೆಯ ಮೊಬೈಲಿನಲ್ಲಿರುವ ಕ್ಯಾಮೆರಾದಿಂದ ಪ್ರಾರಂಭಿಸಿ ಹತ್ತಾರು ಸಾವಿರ ರೂಪಾಯಿ ಬೆಲೆಯ ಅತ್ಯಾಧುನಿಕ ಕ್ಯಾಮೆರಾಗಳವರೆಗೆ ಡಿಜಿಟಲ್ ಕ್ಯಾಮೆರಾಗಳು ತೀರಾ ಸಾಮಾನ್ಯವೇ ಆಗಿಹೋಗಿವೆ. ಪ್ರೊಜೆಕ್ಟರ್ ಇರುವ ಕ್ಯಾಮೆರಾ, ಥ್ರೀಡಿ ಚಿತ್ರಗಳನ್ನು ತೆಗೆಯಬಲ್ಲ ಕ್ಯಾಮೆರಾ, ಎಚ್‌ಡಿ ವೀಡಿಯೋ ಸೆರೆಹಿಡಿಯಬಲ್ಲ ಕ್ಯಾಮೆರಾ - ಹೀಗೆ ಕ್ಯಾಮೆರಾಗಳಲ್ಲಿ ಕಾಣಸಿಗುವ ವೈವಿಧ್ಯಕ್ಕೆ ಕೊನೆಯೇ ಇಲ್ಲ!

ಇವೆಲ್ಲವುದರ ನಡುವೆ ಒಂದು ವಿಶೇಷ ಬಗೆಯ ಕ್ಯಾಮೆರಾ ಬಹಳ ಬೇಗನೆ ನಮ್ಮ ಗಮನಸೆಳೆಯಬಲ್ಲದು. ಇತರ ಕ್ಯಾಮೆರಾಗಳಿಗಿಂತ ಕೊಂಚ ದಪ್ಪಗಿರುವ ಈ ಕ್ಯಾಮೆರಾಗೆ ಬೇರೆ ಕ್ಯಾಮೆರಾಗಳಲ್ಲಿ ಕಾಣಸಿಗದಷ್ಟು ಉದ್ದದ ಲೆನ್ಸೊಂದು ಅಂಟಿಕೊಂಡಿರುವುದೂ ಅಪರೂಪವೇನಲ್ಲ.

ಡಿಎಸ್‌ಎಲ್‌ಆರ್ ಕ್ಯಾಮೆರಾಗಳೆಂದು ಕರೆಯುವುದು ಇವನ್ನೇ.

ಮಂಗಳವಾರ, ಡಿಸೆಂಬರ್ 11, 2012

ಪಾಸ್‌ವರ್ಡ್: ಪಾಸೋ ಫೇಲೋ? - ಭಾಗ ೨


ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಪ್ರಪಂಚದಲ್ಲಿನ ನಮ್ಮ ಚಟುವಟಿಕೆಗಳನ್ನೆಲ್ಲ ಸುರಕ್ಷಿತವಾಗಿಡುವ ಒಂದು ಬೀಗ ಇದೆ ಎಂದು ಭಾವಿಸಿಕೊಂಡರೆ ಪಾಸ್‌ವರ್ಡುಗಳನ್ನು ಆ ಬೀಗದ ಕೀಲಿಕೈ ಎಂದೇ ಕರೆಯಬಹುದು.

ನಮ್ಮದೇ ಬೇಜವಾಬ್ದಾರಿಯಿಂದಲೋ ಕಳ್ಳರ ಕೈಚಳಕದಿಂದಲೋ ಕೀಲಿಕೈ ಕಳೆದುಹೋದರೆ ತೊಂದರೆಯಾಗುವುದು ನಮ್ಮ ಸುರಕ್ಷತೆಗೇ ತಾನೆ! ಹೀಗಾಗಿ ಬಾಹ್ಯ ಪ್ರಪಂಚದಲ್ಲಿರುವಂತೆ ಕಂಪ್ಯೂಟರಿನ ವರ್ಚುಯಲ್ ಲೋಕದಲ್ಲೂ ಪಾಸ್‌ವರ್ಡ್ ರೂಪದ ಕೀಲಿಕೈಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕಾದ್ದು ಅನಿವಾರ್ಯ.

ಕಂಪ್ಯೂಟರ್ ಪ್ರಪಂಚದಲ್ಲಿ ನಮ್ಮ ಸುರಕ್ಷತೆಗಾಗಿ ಪಾಸ್‌ವರ್ಡುಗಳನ್ನು ಜೋಪಾನಮಾಡುವುದು ಹೇಗೆ? ಅವುಗಳ ಆಯ್ಕೆ-ಬಳಕೆಯಲ್ಲಿ, ಗೌಪ್ಯತೆ ಕಾಪಾಡಿಕೊಳ್ಳುವುದರಲ್ಲಿ ನಾವು ಅನುಸರಿಸಬೇಕಾದ ಕ್ರಮಗಳೇನು? ಈ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ.

ಸೋಮವಾರ, ಡಿಸೆಂಬರ್ 10, 2012

'ಫ್ಲಾಪಿಯಿಂದ ಫೇಸ್‌ಬುಕ್‌ವರೆಗೆ' ಓದಿದಿರಾ?


ಮೈಸೂರಿನ ಭಾರತೀ ಪ್ರಕಾಶನ ಪ್ರಕಟಿಸಿರುವ ಟಿ. ಜಿ. ಶ್ರೀನಿಧಿಯವರ 'ಫ್ಲಾಪಿಯಿಂದ ಫೇಸ್‌ಬುಕ್‌ವರೆಗೆ' ಕೃತಿ ಕಳೆದ ಡಿಸೆಂಬರ್ ೮ರ ಸಂಜೆ ಬೆಂಗಳೂರಿನಲ್ಲಿ ಲೋಕಾರ್ಪಣೆಯಾಯಿತು.

ಈ ಪುಸ್ತಕದಲ್ಲೇನಿದೆ? ತಿಳಿಯಲು ಚುಕ್ಕುಬುಕ್ಕು ಡಾಟ್ ಕಾಮ್ ನೋಡಬಹುದು.

ಅಂತೆಯೇ ಈ ಪುಸ್ತಕವನ್ನು ಆನ್‌ಲೈನ್ ಅಂಗಡಿಯಲ್ಲಿ ಕೊಳ್ಳಲು ಆಕೃತಿ ಪುಸ್ತಕದ ಜಾಲತಾಣಕ್ಕೆ ಭೇಟಿಕೊಡಿ!

ಬುಧವಾರ, ಡಿಸೆಂಬರ್ 5, 2012

ಪಾಸ್‌ವರ್ಡ್: ಪಾಸೋ? ಫೇಲೋ? - ಭಾಗ ೧

ಟಿ. ಜಿ. ಶ್ರೀನಿಧಿ

ಎಂಟೋ ಹತ್ತೋ ಅಕ್ಷರಗಳ ಒಂದು ಪದದ ಮೇಲೆ ನಮ್ಮ ಇಡೀ ಬದುಕೇ ಅವಲಂಬಿತವಾಗಿದ್ದರೆ ಹೇಗಿರುತ್ತಿತ್ತು?

"ಛೆ ಛೆ, ಅದೆಲ್ಲಾದರೂ ಸಾಧ್ಯವೆ, ನಮ್ಮ ಇಡೀ ಬದುಕು ಒಂದೇ ಪದದ ಮೇಲೆ ಅವಲಂಬಿತವಾಗಲು ಹೇಗೆತಾನೆ ಸಾಧ್ಯ?" ಎಂದಿರಾ? ಇನ್ನೊಮ್ಮೆ ಯೋಚಿಸಿ, ಆಗಲೂ ಹೊಳೆಯದಿದ್ದರೆ ಡಿಜಿಟಲ್ ಪ್ರಪಂಚಕ್ಕೆ ಬನ್ನಿ.

ಮೇಜಿನ ಮೇಲಿನ ಕಂಪ್ಯೂಟರಿನಿಂದ ಪ್ರಾರಂಭಿಸಿ ಇಂಟರ್‌ನೆಟ್ ಸಂಪರ್ಕ, ಇಮೇಲ್, ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್, ಸಮಾಜ ಜಾಲ ಇತ್ಯಾದಿಗಳವರೆಗೆ ನಮ್ಮ ಬದುಕಿಗೆ ಸಂಬಂಧಪಟ್ಟ ಸಮಸ್ತ ಮಾಹಿತಿಯೂ ತನ್ನ ಸುರಕ್ಷತೆಗಾಗಿ ಒಂದು ಪದವನ್ನು ನೆಚ್ಚಿಕೊಂಡಿರುತ್ತದೆ.

ಅದೇ ಪಾಸ್‌ವರ್ಡ್. ಡಿಜಿಟಲ್ ಪ್ರಪಂಚದಲ್ಲಿ ನಮ್ಮ ಮಾಹಿತಿಯನ್ನೆಲ್ಲ ಸುರಕ್ಷಿತವಾಗಿಡಲು, ಅದು ಅಪಾತ್ರರ ಕೈಗೆ ಸಿಗದಂತೆ ನೋಡಿಕೊಳ್ಳಲು, ನಮ್ಮ ಮಾಹಿತಿ ನಮಗಷ್ಟೆ ಗೊತ್ತು ಎಂಬ ಸಮಾಧಾನದ ಭಾವನೆ ಮೂಡಿಸಲು ಪಾಸ್‌ವರ್ಡ್ ಬೇಕೇ ಬೇಕು.

ಹಾಗೆಂದಮಾತ್ರಕ್ಕೆ ಕಂಪ್ಯೂಟರುಗಳು ಆಗಮಿಸುವ ಮೊದಲು ಪಾಸ್‌ವರ್ಡ್‌ಗಳು ಇರಲೇ ಇಲ್ಲ ಎಂದೇನೂ ಅರ್ಥವಲ್ಲ. ಒಂದಲ್ಲ ಒಂದು ಉದ್ದೇಶಕ್ಕಾಗಿ ರಹಸ್ಯ ಪದಗಳನ್ನು ಬಳಸುವ ಅಭ್ಯಾಸ ಬೆಳೆದುಬಂದಿರುವುದು ಇತಿಹಾಸದಲ್ಲಿ ಹಲವೆಡೆ ಕಾಣಸಿಗುತ್ತದೆ. ಚಿತ್ರದುರ್ಗದ ಕುರಿತು ತರಾಸುರವರ ಅಮರ ಕಾದಂಬರಿ ಸರಣಿಯನ್ನೇ ನೋಡಿ, ಅದೆಷ್ಟು ಕಡೆ ಬೇಹುಗಾರರು ತಮ್ಮ ಗುರುತು ತಿಳಿಸಲು 'ಸಂಜ್ಞಾಶಬ್ದ'ಗಳನ್ನು ಬಳಸುತ್ತಾರೆ; ಇಂದಿನ ಲೆಕ್ಕದಲ್ಲಿ ನೋಡಿದರೆ ಅದೂ ಪಾಸ್‌ವರ್ಡೇ!

ಶನಿವಾರ, ಡಿಸೆಂಬರ್ 1, 2012

ಹೊಸ ಪುಸ್ತಕ ರೆಡಿ!

ಹೊಸ ಪುಸ್ತಕ ಇದೀಗ ರೆಡಿಯಾಗಿದೆ! ಬರುವ ಡಿಸೆಂಬರ್ ೮ರ ಸಂಜೆ ೫ ಗಂಟೆಗೆ ರಾಜಾಜಿನಗರದಲ್ಲಿರುವ ಆಕೃತಿ ಪುಸ್ತಕ ಮಳಿಗೆಯಲ್ಲಿ ಈ ಕೃತಿ ಲೋಕಾರ್ಪಣೆಯಾಗಲಿದೆ. ಇದೇ ಸಂದರ್ಭದಲ್ಲಿ 'ಕಂಪ್ಯೂಟರ್ ಮತ್ತು ಕನ್ನಡ' ಸಂವಾದ ಕಾರ್ಯಕ್ರಮ ಇದೆ, 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಕೃತಿಯ ಮರುಮುದ್ರಣವೂ ಹೊರಬರುತ್ತಿದೆ. ಲೋಕಾರ್ಪಣೆ ಕಾರ್ಯಕ್ರಮಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ!


badge