ಸೋಮವಾರ, ಜುಲೈ 29, 2019

ಗ್ಯಾಜೆಟ್ ಇಜ್ಞಾನ: 'ಟೆಕ್ನೋ ಫ್ಯಾಂಟಮ್ ೯' ಫೋನಲ್ಲಿ ಏನೆಲ್ಲ ಇದೆ?

ಇಜ್ಞಾನ ವಿಶೇಷ


ಸಾಮಾನ್ಯ ಫೋನುಗಳ ಹೋಲಿಕೆಯಲ್ಲಿ ಮುಂದುವರೆದ ಸೌಲಭ್ಯಗಳು, ಹೆಚ್ಚು ಸಾಮರ್ಥ್ಯ ಹಾಗೂ ಕಾರ್ಯಕ್ಷಮತೆಯಿರುವ 'ಫ್ಲ್ಯಾಗ್‌ಶಿಪ್'ಗಳು ಮೊಬೈಲ್ ಜಗತ್ತಿನಲ್ಲಿ ಸದಾ ಸುದ್ದಿಯಲ್ಲಿರುತ್ತವೆ. ಹತ್ತಾರು ವೈಶಿಷ್ಟ್ಯಗಳೊಡನೆ ಮಾರುಕಟ್ಟೆಗೆ ಬರುವ ಈ ಫೋನುಗಳ ಬೆಲೆಯೂ ಸಾಮಾನ್ಯಕ್ಕಿಂತ ಹೆಚ್ಚಿರುತ್ತದೆ. ಈ ಹಣೆಪಟ್ಟಿ ಹೊತ್ತುಬರುವ ಫೋನುಗಳ ಬೆಲೆ ಆರಂಕಿ ಮುಟ್ಟುವುದೂ ಅಪರೂಪವೇನಲ್ಲ.

ಕೈಗೆಟುಕುವ ಬೆಲೆಯ ಫೋನುಗಳಲ್ಲೂ ಹೆಚ್ಚಿನ ಸೌಲಭ್ಯಗಳನ್ನು ಕೊಟ್ಟು ಫ್ಲ್ಯಾಗ್‌ಶಿಪ್‌ಗಳೊಡನೆ ಸೀಮಿತ ಮಟ್ಟದಲ್ಲಾದರೂ ಸ್ಪರ್ಧೆಗಿಳಿಯುವ ಪ್ರಯತ್ನಗಳನ್ನು ಹಲವು ಸಂಸ್ಥೆಗಳು ಮಾಡುತ್ತಾ ಬಂದಿವೆ. ಇಂತಹ ಪ್ರಯತ್ನಗಳ ಫಲವಾಗಿ ಹಲವು ಹೊಸ ಮಾದರಿಗಳೂ ಮಾರುಕಟ್ಟೆಗೆ ಬಂದಿವೆ, ಬರುತ್ತಿವೆ.

ಇಂತಹ ಮಾದರಿಗಳಿಗೆ ಲೇಟೆಸ್ಟ್ ಉದಾಹರಣೆಯೇ ಟೆಕ್ನೋ ಸಂಸ್ಥೆಯ 'ಫ್ಯಾಂಟಮ್ ೯'.

ಬುಧವಾರ, ಜುಲೈ 24, 2019

ಫೇಸ್ಆಪ್ ಎಂಬ ಹೊಸ ಮುಖ: ಎಷ್ಟು ಸುಖ, ಎಷ್ಟು ದುಃಖ?

ಟಿ. ಜಿ. ಶ್ರೀನಿಧಿ


ಸಮಾಜಜಾಲಗಳಲ್ಲಿ ಸದಾಕಾಲ ಹೊಸ ವಿಷಯಗಳದೇ ಸುದ್ದಿ. ಸುದ್ದಿ ಮಾತ್ರವೇ ಏಕೆ, ಕೆಲವು ವಿಷಯಗಳು ಬಳಕೆದಾರರಲ್ಲಿ ಅತ್ಯುತ್ಸಾಹವನ್ನೂ ಮೂಡಿಸಿಬಿಡುತ್ತವೆ.

ಈಚಿನ ಕೆಲ ವಾರಗಳಲ್ಲಿ ಇಂತಹ ಅತ್ಯುತ್ಸಾಹಕ್ಕೆ ಕಾರಣವಾಗಿರುವ ವಿಷಯಗಳ ಪೈಕಿ 'ಫೇಸ್‌ಆಪ್' ಎಂಬ ಮೊಬೈಲ್ ತಂತ್ರಾಂಶಕ್ಕೆ ಪ್ರಮುಖ ಸ್ಥಾನವಿದೆ. ರಷ್ಯನ್ ಸಂಸ್ಥೆಯೊಂದು ಎರಡು ವರ್ಷಗಳ ಹಿಂದೆಯೇ ರೂಪಿಸಿದ್ದರೂ ಈಗ ದಿಢೀರ್ ಜನಪ್ರಿಯತೆ ಗಳಿಸಿಕೊಂಡಿರುವುದು ಈ ಆಪ್‌ನ ಹೆಚ್ಚುಗಾರಿಕೆ. ಫೇಸ್‌ಬುಕ್ ಹಾಗೂ ವಾಟ್ಸ್‌ಆಪ್ ಎರಡೂ ಹೆಸರುಗಳ ಅರ್ಧರ್ಧ ಸೇರಿಸಿ ಹೆಸರಿಟ್ಟಂತೆ ತೋರುವ ಈ ತಂತ್ರಾಂಶವನ್ನು ಈವರೆಗೆ ಗೂಗಲ್ ಪ್ಲೇಸ್ಟೋರ್‌ ಒಂದರಿಂದಲೇ ಹತ್ತು ಕೋಟಿಗೂ ಹೆಚ್ಚುಬಾರಿ ಡೌನ್‌ಲೋಡ್ ಮಾಡಿಕೊಳ್ಳಲಾಗಿದೆ!

ಗುರುವಾರ, ಜುಲೈ 18, 2019

ಡಿಜಿಟಲ್ ಸಂವಹನದ ಹಲವು ಅವತಾರ

ಟಿ. ಜಿ. ಶ್ರೀನಿಧಿ


ಕಂಪ್ಯೂಟರಿನ ಜೊತೆ ವ್ಯವಹಾರ ಎಂದ ತಕ್ಷಣ ನಮಗೆ ಅದರ ಕೀಲಿಮಣೆ ಮತ್ತು ಮೌಸ್ ನೆನಪಾಗುತ್ತವೆ. ಮೊಬೈಲ್ ಫೋನ್ ಜೊತೆಗೆ ವ್ಯವಹರಿಸುವಾಗಲೂ ಅಷ್ಟೇ - ಫೀಚರ್ ಫೋನಿನ ಭೌತಿಕ ಕೀಲಿಮಣೆಯನ್ನೋ ಸ್ಮಾರ್ಟ್‌ಫೋನಿನ ವರ್ಚುಯಲ್ ಕೀಲಿಮಣೆಯನ್ನೋ ನಾವು ಬಳಸಿಯೇ ಬಳಸುತ್ತೇವೆ.

ಕ್ಯಾಲ್ಕ್ಯುಲೇಟರ್ ಕಾಲದಿಂದ ಕಂಪ್ಯೂಟರಿನವರೆಗೆ ಏನೆಲ್ಲಾ ಬದಲಾವಣೆಗಳಾಗಿದ್ದರೂ ಹೆಚ್ಚಿನ ವ್ಯತ್ಯಾಸಗಳಾಗದಿರುವುದು ಇದೊಂದು ವಿಷಯದಲ್ಲಿ ಮಾತ್ರವೇ ಇರಬೇಕು. ಕಂಪ್ಯೂಟರ್ ಹಾಗೂ ಮೊಬೈಲುಗಳನ್ನು ಬಳಸಿ ಅತ್ಯಂತ ಸಂಕೀರ್ಣವಾದ ಕೆಲಸಗಳನ್ನು ಸಾಧಿಸಿಕೊಳ್ಳುವ ಸಾಧ್ಯತೆ ಇರುವ ಇಂದಿನ ಕಾಲದಲ್ಲೂ, ನಾವು ಅವುಗಳೊಡನೆ ಸಂವಹನ ನಡೆಸಲು ಮೌಖಿಕವಲ್ಲದ (ನಾನ್-ವರ್ಬಲ್) ಮಾರ್ಗಗಳನ್ನೇ ಹೆಚ್ಚಾಗಿ ಬಳಸುತ್ತೇವೆ. ಮೇಲೆ ಹೇಳಿದ ಕೀಲಿಮಣೆ ಕುಟ್ಟುವ, ಟಚ್ ಸ್ಕ್ರೀನ್ ಮುಟ್ಟುವ ನಿದರ್ಶನಗಳೆಲ್ಲ ಈ ನಾನ್-ವರ್ಬಲ್ ಸಂವಹನದ ಉದಾಹರಣೆಗಳೇ.

ಇದೇಕೆ ಹೀಗೆ? ವ್ಯಕ್ತಿಗಳ ಜೊತೆ ಮೌಖಿಕ (ವರ್ಬಲ್) ಸಂವಹನ ನಡೆಸುವಂತೆ ಯಂತ್ರಗಳ ಜೊತೆಗೂ ಮಾತನಾಡುವುದು, ಬೈಟು ಕಾಫಿ ಬೇಕೆಂದು ಹೋಟಲಿನವರಿಗೆ ಹೇಳುವಂತೆ ಮನೆಗೆ ಫೋನ್ ಮಾಡೆಂದು ಮೊಬೈಲಿಗೂ ಹೇಳುವುದು ಸಾಧ್ಯವಿಲ್ಲವೇ?

ಶುಕ್ರವಾರ, ಜುಲೈ 12, 2019

ವಾರಾಂತ್ಯ ವಿಶೇಷ: ಪರಿಸರ ರಕ್ಷಣೆ ಮತ್ತು ದತ್ತಾಂಶದ ವಿಜ್ಞಾನ

ಟಿ. ಜಿ. ಶ್ರೀನಿಧಿ


ಪ್ರತಿದಿನ ನಾವು ಮಾಡುವ ಪ್ರತಿಯೊಂದು ಕೆಲಸವೂ ಪರಿಸರದ ಮೇಲೆ ಒಂದಲ್ಲ ಒಂದು ರೀತಿಯ ಪರಿಣಾಮ ಬೀರುತ್ತದೆ. ಈ ಪೈಕಿ ಒಳ್ಳೆಯ ಪರಿಣಾಮ ಬೀರುವ ಕೆಲಸಗಳು ಕಡಿಮೆಯೇ ಎನ್ನುವುದು ಪರಿಸರದ ಸದ್ಯದ ಪರಿಸ್ಥಿತಿ ನೋಡಿದರೆ ನಮಗೇ ತಿಳಿಯುವ ವಿಷಯ.

ಇದೇ ರೀತಿ ನಾವು ಮಾಡುವ ಪ್ರತಿ ಕೆಲಸ ಒಂದಷ್ಟು ದತ್ತಾಂಶವನ್ನೂ (ಡೇಟಾ) ಸೃಷ್ಟಿಸುತ್ತದೆ. ದಿನಸಿ ಖರೀದಿಗೆ ಮಾಡಿದ ವೆಚ್ಚ, ವಾಹನಕ್ಕೆ ಹಾಕಿಸಿದ ಪೆಟ್ರೋಲಿನ ಪ್ರಮಾಣ, ವಿದ್ಯುತ್ ಬಿಲ್ಲಿನ ಮೊತ್ತ - ಹೀಗೆ ಈ ದತ್ತಾಂಶ ಹಲವು ವಿಷಯಗಳಿಗೆ ಸಂಬಂಧಪಟ್ಟಿರುವುದು ಸಾಧ್ಯ.

ಎಲ್ಲೋ ಒಂದು ಕಡೆ ದಾಖಲಾಗುವ, ಅಗತ್ಯಬಿದ್ದರೆ ವಿಶ್ಲೇಷಣೆಗೆ ದಕ್ಕುವ ಇಂತಹ ದತ್ತಾಂಶದ ಜೊತೆಗೆ ಎಲ್ಲೂ ದಾಖಲಾಗದೆ ಕಳೆದುಹೋಗುವ ದತ್ತಾಂಶಗಳೂ ಇವೆ. ನಮ್ಮ ಮನೆಗಳ ಉದಾಹರಣೆಯನ್ನೇ ತೆಗೆದುಕೊಂಡರೆ ಹೊರಹೋಗುವ ಕಸ, ಪೋಲಾಗುವ ನೀರು, ಮರುಬಳಕೆಯಾಗದ ಪ್ಲಾಸ್ಟಿಕ್ ಮುಂತಾದವುಗಳ ಪ್ರಮಾಣವನ್ನು ನಾವು ಅಳೆಯುವುದೇ ಇಲ್ಲ!

ಬುಧವಾರ, ಜುಲೈ 3, 2019

ಮೊಬೈಲ್ ಎಂಬ ಮಾಯೆ!

ಟಿ. ಜಿ. ಶ್ರೀನಿಧಿ

ಈ ಹಿಂದೆ ಕಲ್ಪಿಸಿಕೊಳ್ಳಲೂ ಕಷ್ಟವಾಗುತ್ತಿದ್ದಂಥ ಅನುಕೂಲಗಳನ್ನು ಮೊಬೈಲ್ ಫೋನ್ ನಮಗೆ ತಂದುಕೊಟ್ಟಿದೆ. ಮನೆಗೆ ದಿನಸಿ ತರಿಸಿಕೊಳ್ಳುವುದರಿಂದ ಪ್ರಾರಂಭಿಸಿ ಹೊಸ ವಿಷಯಗಳ ಕುರಿತು ಅಧ್ಯಯನ ನಡೆಸುವವರೆಗೆ ನಾವು ಯಾವ ಕೆಲಸವನ್ನು ಎಲ್ಲಿ ಯಾವಾಗ ಬೇಕಾದರೂ ಮಾಡಿಕೊಳ್ಳಲು ಸಾಧ್ಯವಾಗಿರುವುದು ಈ ಸಾಧನದಿಂದಾಗಿಯೇ.

ಇಷ್ಟೆಲ್ಲ ಅನುಕೂಲಗಳ ಜೊತೆ ಮೊಬೈಲ್ ಫೋನಿನಿಂದಾಗಿ ಹಲವು ಹೊಸ ಸಮಸ್ಯೆಗಳೂ ಕಾಣಿಸಿಕೊಂಡಿವೆ. ಅಷ್ಟೇ ಅಲ್ಲ, ಅಂತಹ ಕೆಲ ಸಮಸ್ಯೆಗಳು ನಾವು ನಿರೀಕ್ಷಿಸಿಯೇ ಇರದ ಮಟ್ಟಕ್ಕೂ ಬೆಳೆಯುತ್ತಿವೆ.

ಮಾಧ್ಯಮಗಳಲ್ಲಿ ಈಚೆಗೆ ಕಾಣಿಸಿಕೊಂಡ ಒಂದೆರಡು ಘಟನೆಗಳನ್ನು ಇಲ್ಲಿ ಉದಾಹರಿಸಬಹುದು. ಮೊಬೈಲಿನಲ್ಲಿ ಚಿತ್ರೀಕರಿಸಲೆಂದು ಮೇಲಕ್ಕೆ ನೆಗೆದ ಯುವಕನೊಬ್ಬ ಕತ್ತಿನ ಮೂಳೆ ಮುರಿದುಕೊಂಡು ಮೃತಪಟ್ಟದ್ದು ಒಂದು ಘಟನೆಯಾದರೆ ಯಾವಾಗಲೂ ಮೊಬೈಲಿನಲ್ಲೇ ಮುಳುಗಿರಬೇಡ ಎಂದಿದ್ದಕ್ಕೆ ಕೋಪಗೊಂಡ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು ಇನ್ನೊಂದು ಘಟನೆ.   

ಈ ಎರಡೂ ಸುದ್ದಿಗಳ ಹಿನ್ನೆಲೆಯಲ್ಲಿರುವುದು 'ಟಿಕ್‌ಟಾಕ್' ಎಂಬ ಮೊಬೈಲ್ ಆಪ್.
badge