ಮಂಗಳವಾರ, ಫೆಬ್ರವರಿ 26, 2013

ಮೊಬೈಲ್ ಕ್ಯಾಮೆರಾ ಮ್ಯಾಜಿಕ್


ಟಿ. ಜಿ. ಶ್ರೀನಿಧಿ

ಮನೆಯಲ್ಲಿ ಎಷ್ಟು ಒಳ್ಳೆಯ ಡಿಜಿಟಲ್ ಕ್ಯಾಮೆರಾ ಇದ್ದರೂ ಅದನ್ನು ಎಲ್ಲಕಡೆಯೂ ಕೊಂಡೊಯ್ಯುವುದು ಅಸಾಧ್ಯ. ಆದರೆ ಉತ್ತಮ ಫೋಟೋ ತೆಗೆಯಬಹುದಾದಂತಹ ಅದೆಷ್ಟೋ ಸನ್ನಿವೇಶಗಳು ನಮ್ಮಲ್ಲಿ ಕ್ಯಾಮೆರಾ ಇಲ್ಲದ ಸಮಯದಲ್ಲೇ ಎದುರಾಗುತ್ತವಲ್ಲ!

ಉದಾಹರಣೆಗೆ ಕಳೆದವಾರ ರಷ್ಯಾದಲ್ಲಿ ಸಂಭವಿಸಿದ ಉಲ್ಕಾಪಾತದ ಘಟನೆಯನ್ನೇ ನೋಡಿ. ಆ ಸಂದರ್ಭದಲ್ಲಿ ಹೊರಗಡೆ ಇದ್ದವರ ಕೈಯಲ್ಲಿ ಕ್ಯಾಮೆರಾ ಇಲ್ಲದಿದ್ದರೆ ಇಂತಹ ಅಪರೂಪದ ವಿದ್ಯಮಾನ ನೋಡಿಯೂ ಫೋಟೋ ತೆಗೆಯುವುದು ಸಾಧ್ಯವಾಗುತ್ತಿರಲಿಲ್ಲ. ಆದರೆ ರಷ್ಯಾದವರಿಗೇನೋ ಅಂತಹ ಪರಿಸ್ಥಿತಿ ಬರಲಿಲ್ಲ ಬಿಡಿ. ಅಲ್ಲಿನ ರಸ್ತೆಗಳಲ್ಲಿ ಸುರಕ್ಷತೆ ಅದೆಷ್ಟು ಹದಗೆಟ್ಟಿದೆಯೆಂದರೆ ಪೋಲೀಸರು ಕಳ್ಳರು ಎಲ್ಲರೂ ಒಂದೇ ರೀತಿಯಲ್ಲಿ ವಾಹನ ಚಾಲಕರನ್ನು ಗೋಳುಹೊಯ್ದುಕೊಳ್ಳುತ್ತಾರಂತೆ. ಅಂತಹ ಸನ್ನಿವೇಶಗಳಲ್ಲಿ ಸಿಕ್ಕಿಕೊಂಡಾಗ ಸಹಾಯಕ್ಕಿರಲಿ ಎಂದು ಕಾರುಗಳ ಡ್ಯಾಶ್‌ಬೋರ್ಡಿನಲ್ಲಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದು ಅಲ್ಲಿ ತೀರಾ ಸಾಮಾನ್ಯ. ಹಾಗಾಗಿ ಮೊನ್ನೆ ಉಲ್ಕಾಪಾತವಾಗುತ್ತಿದ್ದಂತೆ ಆಗ ರಸ್ತೆಯಲ್ಲಿದ್ದ ಬಹುತೇಕ ಕಾರುಗಳಲ್ಲಿದ್ದ ಕ್ಯಾಮೆರಾಗಳಲ್ಲಿ ಆ ದೃಶ್ಯ ಸೆರೆಯಾಗಿತ್ತು.

ರಷ್ಯಾದಲ್ಲೇನೋ ಸರಿ, ಆದರೆ ನಮ್ಮೂರಿನಲ್ಲಿ? ನಮ್ಮಲ್ಲಿ ಸುರಕ್ಷತೆಯ ಪರಿಸ್ಥಿತಿ ಕಾರಿನಲ್ಲಿ ಕ್ಯಾಮೆರಾ ಇಟ್ಟುಕೊಂಡು ತಿರುಗುವಷ್ಟು ಇನ್ನೂ ಕೆಟ್ಟಿಲ್ಲ. ಜೊತೆಗೆ ಕಾರಿನಲ್ಲೊಂದು ಕ್ಯಾಮೆರಾ ಇದ್ದರೂ ಬೆಂಗಳೂರಿನಲ್ಲಿ ಎಲ್ಲ ಕಡೆಗೂ ಕಾರು ತೆಗೆದುಕೊಂಡು ಹೋಗುವಷ್ಟು ಜಾಗವೇ ಇಲ್ಲವಲ್ಲ; ಪಕ್ಕದ ರಸ್ತೆಯ ಪಾರ್ಕಿಂಗ್ ಲಾಟಿನಲ್ಲಿ ಕಾರು ನಿಲ್ಲಿಸಿ ನಡೆದುಕೊಂಡು ಹೋಗುತ್ತಿದ್ದಾಗ ಫೋಟೋ ತೆಗೆಯಬೇಕೆನಿಸಿದರೆ ಏನು ಮಾಡುವುದು?

ಸೋಮವಾರ, ಫೆಬ್ರವರಿ 25, 2013

ಸೆಲ್ಫ್ ಪಬ್ಲಿಶಿಂಗ್ - ನಮ್ಮ ಪುಸ್ತಕ ನಾವೇ ಪ್ರಕಟಿಸೋಣ!


ಟಿ. ಜಿ. ಶ್ರೀನಿಧಿ

ಬರವಣಿಗೆಯ ಹವ್ಯಾಸ ಅಪರೂಪದ್ದೇನೂ ಅಲ್ಲ. ಕತೆ-ಕವನ-ಲಲಿತಪ್ರಬಂಧ-ಲೇಖನ ಇತ್ಯಾದಿ ಯಾವುದೋ ಒಂದು ಪ್ರಕಾರದಲ್ಲಿ ಸಾಹಿತ್ಯಕೃಷಿ ಮಾಡುವವರು ಅನೇಕ ಜನರಿದ್ದಾರೆ.

ಹಿಂದೆ ಬರವಣಿಗೆಯ ಪ್ರಕಟಣೆ ಪತ್ರಿಕೆಗಳಲ್ಲಷ್ಟೆ ಆಗಬೇಕಿದ್ದಾಗ ಹವ್ಯಾಸಿ ಬರಹಗಾರರು ಬರೆದದ್ದು ಪ್ರಕಟವಾಗಲು ಅವಕಾಶ ಕಡಿಮೆಯಿತ್ತು. ಹಾಗಾಗಿ ಅನೇಕರ ಬರವಣಿಗೆಯೆಲ್ಲ ಅವರ ಡೈರಿಯೊಳಗೇ ಹುದುಗಿ ಕುಳಿತಿರುವುದು ಸಾಮಾನ್ಯವಾಗಿತ್ತು.

ಮುಂದೆ ವಿಶ್ವವ್ಯಾಪಿ ಜಾಲದ ಹರವು ವ್ಯಾಪಕವಾದ ಮೇಲೆ ನಮ್ಮ ಬರವಣಿಗೆಯನ್ನು ಅದರ ಮೂಲಕ ಪ್ರಕಟಿಸುವ ಹೊಸ ಸಾಧ್ಯತೆ ಸೃಷ್ಟಿಯಾಯಿತು. ವೆಬ್‌ಸೈಟು-ಬ್ಲಾಗುಗಳಲ್ಲಿ ನಾವು ಬರೆದದ್ದನ್ನೆಲ್ಲ ಪ್ರಕಟಿಸುವ ಜೊತೆಗೆ ಓದುಗರೊಡನೆ ಕ್ಷಿಪ್ರ ವಿಚಾರ ವಿನಿಮಯ ಕೂಡ ಸಾಧ್ಯವಾಯಿತು. ಈ ಹೊಸ ಮಾಧ್ಯಮದ ಮೂಲಕ ಬೆಳಕಿಗೆ ಬಂದ ಪ್ರತಿಭಾನ್ವಿತ ಲೇಖಕರ ಸಂಖ್ಯೆಯೂ ಸಣ್ಣದೇನಲ್ಲ.

ಒಂದಷ್ಟು ಸಮಯದವರೆಗೆ ಬರಹಗಳನ್ನು ಹೀಗೆ ಪ್ರಕಟಿಸಿದ ಮೇಲೆ ಅದನ್ನೆಲ್ಲ ಪುಸ್ತಕರೂಪಕ್ಕೆ ತರುವ ಯೋಚನೆ ಬಾರದಿರುವುದು ಅಪರೂಪ. ಯೋಚನೆ ಬಂದರೆ ಸಾಕೆ, ಪ್ರಕಟಿಸಲು ಪ್ರಕಾಶಕರು ಬೇಕಲ್ಲ! ಕೆಲವು ಬರಹಗಾರರಿಗೇನೋ ಈ ಯೋಚನೆ ಕಾಡುವುದಿಲ್ಲ. ಆದರೆ ಉಳಿದವರು ಏನು ಮಾಡಬೇಕು? ಆಗ ನೆರವಿಗೆ ಬರುವುದೇ ಸ್ವಯಂಪ್ರಕಾಶನ ಅಥವಾ ಸೆಲ್ಫ್ ಪಬ್ಲಿಶಿಂಗ್‌ನ ಪರಿಕಲ್ಪನೆ.

ಮಂಗಳವಾರ, ಫೆಬ್ರವರಿ 19, 2013

ನೆಟ್‌ಲೋಕದಲ್ಲಿ ನೆಟ್ಟಗಿರೋಣ!

ತಪ್ಪು ಮಾಹಿತಿ ತಪ್ಪಿಸಲು ಕೆಲ ಸೂತ್ರಗಳು

ಟಿ. ಜಿ. ಶ್ರೀನಿಧಿ

ನಮ್ಮ ಬದುಕಿನ ಮೇಲೆ ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಪ್ರಭಾವ ಹೆಚ್ಚುತ್ತಿರುವಂತೆಯೇ ವಿವಿಧ ಮಾಹಿತಿಗಾಗಿ ನಾವು ಅದನ್ನು ಅವಲಂಬಿಸುವುದೂ ಜಾಸ್ತಿಯಾಗಿದೆ. ಯಾವ ವಿಷಯದ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೂ ವಿಶ್ವವ್ಯಾಪಿ ಜಾಲವನ್ನು ಪ್ರಮುಖ ಆಕರವಾಗಿ ಪರಿಗಣಿಸುವ ಅಭ್ಯಾಸ ಅನೇಕರಲ್ಲಿ ಈಗಾಗಲೇ ಬೆಳೆದುಬಿಟ್ಟಿದೆ.

ಈ ಅಭ್ಯಾಸ ತಪ್ಪು ಎನ್ನುವಂತೇನೂ ಇಲ್ಲ. ಏಕೆಂದರೆ ವಿಶ್ವವ್ಯಾಪಿ ಜಾಲ ನಿಜಕ್ಕೂ ಅಮೂಲ್ಯ ಮಾಹಿತಿಯ ಗಣಿ. ಆದರೆ ಇಲ್ಲಿ ಗಣಿಗಾರಿಕೆ ಮಾಡಲು ಹೊರಟಾಗ ಕೆಲವೊಮ್ಮೆ ಬಂಗಾರದ ಬದಲಿಗೆ ಕಾಗೆಬಂಗಾರ ಸಿಕ್ಕಿಬಿಡುತ್ತದೆ. ಅಂದರೆ, ಜಾಲಲೋಕದಲ್ಲಿ ಉಪಯುಕ್ತ ಮಾಹಿತಿ ಎಷ್ಟಿದೆಯೋ ಅಷ್ಟೇ, ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದ ಸುಳ್ಳುಗಳೂ ಅಲ್ಲಿ ಸುಳಿದಾಡುತ್ತಿರುತ್ತವೆ.

ವಿಶ್ವವ್ಯಾಪಿ ಜಾಲದ ಸಾಮಾನ್ಯ ಬಳಕೆದಾರರಾದ ನಾವು ಅಲ್ಲಿ ಸುಳ್ಳುಗಳನ್ನು ಸೃಷ್ಟಿಸುವ, ಇಲ್ಲವೇ ಅಂತಹ ಸುಳ್ಳುಗಳನ್ನು ಬಳಸಿ ಇತರರನ್ನು ವಂಚಿಸುವ ಉಸಾಬರಿಗೆ ಹೋಗುವುದಿಲ್ಲ ನಿಜ. ಆದರೆ ಜಾಲಲೋಕದಲ್ಲಿ ನಮ್ಮ ಗಮನಕ್ಕೆ ಬಂದ ಮಾಹಿತಿಯನ್ನೆಲ್ಲ ಸುಳ್ಳೋ ನಿಜವೋ ನೋಡದೆ ಎಲ್ಲರಿಗೂ ಹಂಚಿಬಿಡುವ ಹವ್ಯಾಸ ಮಾತ್ರ ನಮ್ಮಲ್ಲಿ ಅನೇಕರಿಗೆ ಇರುತ್ತದೆ. ಫೇಸ್‌ಬುಕ್‌ನಲ್ಲಂತೂ ಸಿಕ್ಕಿದ್ದನ್ನೆಲ್ಲ ಶೇರ್ ಮಾಡುವುದೇ ಹಲವರ ಕೆಲಸ.

ಕಂಪ್ಯೂಟರ್ ವೈರಸ್ಸುಗಳ ಬಗ್ಗೆ ಕಪೋಲಕಲ್ಪಿತ ಮಾಹಿತಿ, ಫೇಸ್‌ಬುಕ್ ಸೇವೆ ನಿಂತುಹೋಗಲಿದೆ ಎನ್ನುವಂತಹ ಬೆದರಿಕೆಗಳು, ಅದೇನೇನೋ ಮಾಡಿದರೆ ಐಪ್ಯಾಡು-ಲ್ಯಾಪ್‌ಟಾಪುಗಳೆಲ್ಲ ಉಚಿತವಾಗಿ ಸಿಗುತ್ತದೆ ಎನ್ನುವಂತಹ ಬೊಗಳೆ - ಇವು ಜಾಲಲೋಕದಲ್ಲಿ ಹರಿದಾಡುವ ತಲೆಬುಡವಿಲ್ಲದ ಸಂಗತಿಗಳಿಗೆ ಕೆಲವು ಉದಾಹರಣೆಗಳಷ್ಟೆ. ಇವೆಲ್ಲ ಹಾಗಿರಲಿ, ಇಂತಹ ಇನ್ನೂ ಕೆಲ ಸಂದೇಶಗಳು ಆರೋಗ್ಯ ಹಾಗೂ ಔಷಧಗಳಿಗೆ ಸಂಬಂಧಿಸಿದ ಸುಳ್ಳು ಅಥವಾ ತಪ್ಪು ಮಾಹಿತಿಯನ್ನು ಹಂಚುತ್ತವೆ.

ಇಂತಹ ಮಾಹಿತಿಯನ್ನು ಹಂಚುವುದು ಮತ್ತು ನಂಬುವುದು ಎರಡೂ ಶುದ್ಧ ತಪ್ಪು. ಅದರಿಂದಾಗಿ ಸಮಯ ಹಾಳಾಗುವುದು ಅಥವಾ ಮಿತ್ರರಿಂದ ಬೈಸಿಕೊಳ್ಳುವುದಷ್ಟೇ ಅಲ್ಲ, ಆರೋಗ್ಯಕ್ಕೆ ಸಂಬಂಧಿಸಿದಂತೆ ಸಿಕ್ಕಸಿಕ್ಕ ಸಲಹೆಯನ್ನೆಲ್ಲ ಪಾಲಿಸಹೋಗುವುದು ಹಾನಿಕಾರಕವೂ ಆಗಬಹುದು.

ಹಾಗಾದರೆ ಇದರಿಂದ ಪಾರಾಗಲು ನಾವೇನು ಮಾಡಬೇಕು? ಜಾಲಲೋಕದಲ್ಲಿರುವ ಅಪಾರ ಫಸಲಿನಲ್ಲಿ ಕಾಳನ್ನಷ್ಟೆ ತೆಗೆದುಕೊಂಡು ಜೊಳ್ಳು ಸಿಕ್ಕಸಿಕ್ಕಲ್ಲೆಲ್ಲ ಹಾರಾಡದಂತೆ ನೋಡಿಕೊಳ್ಳುವುದು ಹೇಗೆ? ಈ ನಿಟ್ಟಿನಲ್ಲಿ ಒಂದಷ್ಟು ಮಾಹಿತಿ ಇಲ್ಲಿದೆ.

ಸೋಮವಾರ, ಫೆಬ್ರವರಿ 18, 2013

ಗೋಗಿಯ ಪಾಶ ದೂರಸರಿಸಿದ ವಿಜ್ಞಾನ ಲೇಖನ


ಗುಲಬರ್ಗಾ ಜಿಲ್ಲೆಯ ಗೋಗಿಯಲ್ಲಿ ಯುರೇನಿಯಂ ಗಣಿಗಾರಿಕೆ ಪ್ರಾರಂಭವಾಗುವ ಸುದ್ದಿ ಕೇಳಿದಾಗ ಕನ್ನಡದ ಹಿರಿಯ ವಿಜ್ಞಾನ ಲೇಖಕ ಶ್ರೀ ನಾಗೇಶ ಹೆಗಡೆಯವರು ೨೦೧೧ರಲ್ಲಿ ಒಂದು ಲೇಖನ ಬರೆದಿದ್ದರು. ಯುರೇನಿಯಂ ಗಣಿಗಾರಿಕೆಯ ಸಮಸ್ಯೆಗಳು, ಹಾಗೊಮ್ಮೆ ಗಣಿಗಾರಿಕೆ ಮಾಡಲೇಬೇಕೆಂದರೆ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು ಮುಂತಾದವನ್ನೆಲ್ಲ ಮನೋಜ್ಞವಾಗಿ ವಿವರಿಸಿದ್ದ ಆ ಲೇಖನವೇ 'ಜಾದೂಗುಡದಿಂದ ಬಂದೀತು ಗೋಗಿಯ ಪಾಶ'. 
ಸಾವಿರಕ್ಕೂ ಕಡಿಮೆ ಪದಗಳಿದ್ದ ಈ ಲೇಖನ ಜನರಲ್ಲಿ ಮೂಡಿಸಿದ ಅರಿವು ಎಷ್ಟು ಪ್ರಮಾಣದಲ್ಲಿತ್ತೆಂದರೆ ಅದೊಂದು ಆಂದೋಲನವನ್ನೇ ಹುಟ್ಟುಹಾಕಿತು. ಇದೆಲ್ಲದರ ಪರಿಣಾಮವಾಗಿ ಕೇಂದ್ರ ಸರಕಾರ ಅಲ್ಲಿ ಯುರೇನಿಯಂ ಗಣಿಗಾರಿಕೆಯನ್ನು ನಿಲ್ಲಿಸಹೊರಟಿದೆ ಎಂದು ಕನ್ನಡಪ್ರಭ ವರದಿಮಾಡಿದೆ. ಜನಸಾಮಾನ್ಯರಲ್ಲಿ ಅರಿವುಮೂಡಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ವಿಜ್ಞಾನ ಸಂವಹನದ ಪಾತ್ರ ಎಷ್ಟು ಮಹತ್ವದ್ದು ಎನ್ನುವುದಕ್ಕೆ ಈ ಲೇಖನ ಒಳ್ಳೆಯ ಉದಾಹರಣೆ ಎಂದು ಇಜ್ಞಾನ ಡಾಟ್ ಕಾಮ್ ಭಾವಿಸುತ್ತದೆ. 
ಪ್ರಜಾವಾಣಿಯ ಆಗಸ್ಟ್ ೯, ೨೦೧೧ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನವನ್ನು ಶ್ರೀ ನಾಗೇಶ ಹೆಗಡೆಯವರ ಅನುಮತಿಯೊಡನೆ ಇಲ್ಲಿ ಮತ್ತೆ ಪ್ರಕಟಿಸುತ್ತಿದ್ದೇವೆ

ಶುಕ್ರವಾರ, ಫೆಬ್ರವರಿ 15, 2013

ಕಾಪಿ ಪೇಸ್ಟ್‌‌ಗೆ ಕಂಪ್ಯೂಟರ್ ಕಡಿವಾಣ


ಟಿ. ಜಿ. ಶ್ರೀನಿಧಿ

ವಿಶ್ವವ್ಯಾಪಿ ಜಾಲದಿಂದಾಗಿ ಮಾಹಿತಿ ನಮಗೆ ಎಷ್ಟೆಲ್ಲ ಸುಲಭವಾಗಿ ಸಿಗುವಂತಾಗಿದೆಯಲ್ಲ? ಶಾಲೆ-ಕಾಲೇಜಿನ ಅಸೈನ್‌ಮೆಂಟ್ ಮಾಡಲು ಲೈಬ್ರರಿಗೆ ಹೋಗುವ, ಪಕ್ಕದ ಮನೆಯ ಮೇಷ್ಟರ ಹತ್ತಿರ ಪುಸ್ತಕ ಕೇಳುವ ಕೆಲಸವೆಲ್ಲ ತಪ್ಪಿ ನಮಗೆ ಬೇಕಾದ ಮಾಹಿತಿಯೆಲ್ಲ ಕ್ಷಣಾರ್ಧದಲ್ಲೇ ಪ್ರತ್ಯಕ್ಷವಾಗುವಂತೆ ಮಾಡಿದ್ದು ವಿಶ್ವವ್ಯಾಪಿ ಜಾಲದ ಹಿರಿಮೆ.

ಬೇಕಾದ ಮಾಹಿತಿಯೆಲ್ಲ ಇಷ್ಟು ಸುಲಭವಾಗಿ ಸಿಗುವಾಗ ಅದನ್ನು ಬಳಸಲೇನು ಹಿಂಜರಿಕೆ? ಕೃತಿಚೌರ್ಯ, ಅಂದರೆ ಎಲ್ಲಿಂದಲೋ ತೆಗೆದ ಮಾಹಿತಿಯನ್ನು ನಮ್ಮದೇ ಎಂದು ಕಾಪಿ ಪೇಸ್ಟ್ ಮಾಡುವ ಚಟ, ವ್ಯಾಪಕವಾಗಿ ಬೆಳೆದದ್ದು ಈ ಧೋರಣೆಯಿಂದಾಗಿಯೇ. ಪ್ರೈಮರಿ ಶಾಲೆಯ ಹೋಮ್‌ವರ್ಕಿನಿಂದ ಪ್ರಾರಂಭಿಸಿ ಡಾಕ್ಟರೇಟಿನ ಪ್ರಬಂಧದವರೆಗೆ ಕೃತಿಚೌರ್ಯದ ಕಾಟ ಯಾವುದನ್ನೂ ಬಿಟ್ಟಿಲ್ಲ!

ಪ್ರೈಮರಿ ಶಾಲೆಯ ಮಗು ತನ್ನ ಪ್ರಬಂಧವನ್ನು ಎಲ್ಲಿಂದಲೋ ಕಾಪಿಮಾಡಿಕೊಂಡು ಬಂದಿದ್ದರೆ ಹಾಗೆ ಮಾಡಬಾರದೆಂದು ಒಳ್ಳೆಯ ಮಾತಿನಲ್ಲೇ ತಿಳಿಹೇಳೋಣ. ಆದರೆ ಡಾಕ್ಟರೇಟ್ ಪ್ರಬಂಧದಲ್ಲೂ ಇದೇ ತಾಪತ್ರಯ ಕಾಣಿಸಿಕೊಂಡರೆ? ಜರ್ಮನಿಯಲ್ಲಿ ಇತ್ತೀಚೆಗೆ ನಡೆದದ್ದು ಇದೇ. ಸಾಮಾನ್ಯ ವ್ಯಕ್ತಿಯಲ್ಲ, ಅಲ್ಲಿನ ಶಿಕ್ಷಣ ಸಚಿವರೇ ಹೀಗೆ ಕಾಪಿ ಪೇಸ್ಟ್ ಮಾಡಿ ಸಿಕ್ಕಿಕೊಂಡು ಅವರ ಡಾಕ್ಟರೇಟನ್ನು ವಾಪಸ್ ಪಡೆದು ಏನೆಲ್ಲ ಫಜೀತಿಯಾಗಿಬಿಟ್ಟಿತ್ತು.

ಅದೆಲ್ಲ ಸರಿ, ವಿಶ್ವವ್ಯಾಪಿ ಜಾಲದಲ್ಲಿ ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದಷ್ಟು ಅಗಾಧ ಪ್ರಮಾಣದ ಮಾಹಿತಿಯಿರುತ್ತದಲ್ಲ. ಅಲ್ಲಿ ಯಾವುದೋ ಮೂಲೆಯಿಂದ ಒಂದಷ್ಟನ್ನು ಯಾರಾದರೂ ಕದ್ದರೆ ಅದು ಪತ್ತೆಯಾಗುವುದು ಹೇಗೆ? ಅದು ಹುಲ್ಲುಬಣವೆಯಲ್ಲಿ ಸೂಜಿ ಹುಡುಕಿದಂತಾಗುವುದಿಲ್ಲವೆ?

ಶುಕ್ರವಾರ, ಫೆಬ್ರವರಿ 8, 2013

ನೆನಪುಗಳ ಮಾತಲ್ಲ, ಇದು ನೆನಪುಗಳ ಫೋಟೋ ಆಲ್ಬಮ್!

ಟಿ. ಜಿ. ಶ್ರೀನಿಧಿ

ಮದುವೆ, ಗೃಹಪ್ರವೇಶ, ಹುಟ್ಟುಹಬ್ಬಗಳಂತದ ಸ್ಮರಣೀಯ ಸನ್ನಿವೇಶಗಳನ್ನು ಛಾಯಾಚಿತ್ರಗಳಲ್ಲಿ ಸೆರೆಹಿಡಿದಿಡುವುದು ನಮಗೇನೂ ಹೊಸ ವಿಷಯವಲ್ಲ. ದೊಡ್ಡ ಕಾರ್ಯಕ್ರಮಗಳಿರಲಿ, ಎಲ್ಲ ಮೊಬೈಲುಗಳಲ್ಲೂ ಕ್ಯಾಮೆರಾ ಬಂದಮೇಲೆ ದಿನನಿತ್ಯದ ಕೆಲ ಘಟನೆಗಳು ಕೂಡ ಛಾಯಾಚಿತ್ರಗಳಾಗಿ ನಮ್ಮ ಸಂಗ್ರಹಕ್ಕೆ ಸೇರುತ್ತಿವೆ.

ಆದರೆ ಫೋಟೋ ತೆಗೆಯಬೇಕು ಅನ್ನಿಸಿದಾಗಲೆಲ್ಲ ಫೋಟೋ ತೆಗೆಯುವುದು ಸಾಧ್ಯವಾಗಬೇಕಲ್ಲ! ಸ್ಟೇಜಿನ ಮೇಲೆ ನಿಂತು ಭಾಷಣ ಬಿಗಿಯುತ್ತಿರುವಾಗ ಭಾಷಣಕಾರನಿಗೆ ಎಷ್ಟೇ ಆಸೆಯಾದರೂ ಆತನೇ ಸಭಿಕರ ಫೋಟೋ ಕ್ಲಿಕ್ಕಿಸುವುದು ಅಸಹಜವಾಗಿ ಕಾಣುತ್ತದೆ. ಅಂತೆಯೇ ಶಾಪಿಂಗ್ ಮುಗಿಸಿ ಎರಡು ಕೈಯಲ್ಲೂ ಒಂದೊಂದು ಚೀಲ ಹಿಡಿದು ಬರುವಾಗ ಯಾವುದೋ ಫೋಟೋ ಕ್ಲಿಕ್ಕಿಸಬೇಕೆಂದರೂ ಅದು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಬಹುತೇಕ ನೆನಪುಗಳನ್ನು ಉಳಿಸಿಟ್ಟುಕೊಳ್ಳಲು ನಾವು ಇನ್ನೂ ಜ್ಞಾಪಕಶಕ್ತಿಯನ್ನೇ ಅವಲಂಬಿಸಬೇಕಿದೆ.

ಇದರ ಬದಲಿಗೆ ನಮ್ಮ ದಿನನಿತ್ಯದ ಎಲ್ಲ ನೆನಪುಗಳನ್ನೂ ಛಾಯಾಚಿತ್ರಗಳ ರೂಪದಲ್ಲಿ ಸಂಗ್ರಹಿಸಿಡುವಂತಿದ್ದರೆ? ಹತ್ತು ವರ್ಷಗಳ ಹಿಂದೆ ಇದೇ ದಿನ ನಾನು ಏನೆಲ್ಲ ಮಾಡಿದ್ದೆ ಎನ್ನುವಂತಹ ವಿವರಗಳನ್ನು ನಮಗೆ ಬೇಕಾದಾಗಲೆಲ್ಲ ನೆನಪಿಸಿಕೊಳ್ಳಬಹುದಿತ್ತು ಅಲ್ಲವೆ?

ಮಂಗಳವಾರ, ಫೆಬ್ರವರಿ 5, 2013

ಪುಟ್ಟ ಮಗು ಕೊಟ್ಟ ದೊಡ್ಡ ಐಡಿಯಾ


ಟಿ. ಜಿ. ಶ್ರೀನಿಧಿ

ಪ್ರವಾಸಕ್ಕೆಂದು ಬೇರೆ ಊರಿಗೆ ಹೊರಟಾಗ ಮಕ್ಕಳಿಗೆ ಎಲ್ಲಿಲ್ಲದ ಉತ್ಸಾಹ ಬಂದುಬಿಟ್ಟಿರುತ್ತದೆ. ಹಾಗಾಗಿಯೇ ಇತರ ದಿನಗಳಲ್ಲಿ ಎಂಟುಗಂಟೆಗೆ ಏಳುವಾಗಲೂ ಎಂಟುಬಾರಿ ಎಬ್ಬಿಸಿಕೊಳ್ಳುವ ಮಕ್ಕಳು ಪ್ರವಾಸ ಹೋಗಬೇಕು ಎನ್ನುವ ದಿನಗಳಲ್ಲಿ ಎಲ್ಲರಿಗಿಂತ ಮುಂಚೆ ಎದ್ದು ಕುಳಿತಿರುತ್ತಾರೆ. ಅವರ ಆತುರ ಅಷ್ಟಕ್ಕೇ ಮುಗಿಯುವುದಿಲ್ಲ. ಪ್ರಯಾಣದ ಸಂದರ್ಭದಲ್ಲಿ ಗಳಿಗೆಗೊಮ್ಮೆ "ನಾವು ಹೋಗಬೇಕಾದ ಜಾಗ ಬಂತಾ?", "ಇನ್ನೂ ಎಷ್ಟು ಹೊತ್ತು" ಎನ್ನುವಂತಹ ಪ್ರಶ್ನೆಗಳನ್ನೆಲ್ಲ ಕೇಳುತ್ತಲೇ ಇರುತ್ತಾರೆ. ಇಂತಹ ಅದಮ್ಯ ಕುತೂಹಲದ ಮಗುವೊಂದರ ಕತೆಯೇ ಇದು.

* * *

ಕೆಲವು ದಶಕಗಳ ಹಿಂದಿನ ಮಾತು. ಅಮೆರಿಕಾದ ಎಡ್ವಿನ್ ಲ್ಯಾಂಡ್ ತನ್ನ ಮೂರು ವರ್ಷದ ಮಗಳೊಂದಿಗೆ ಪ್ರವಾಸ ಹೊರಟಿದ್ದ ಸಂದರ್ಭ. ಪ್ರವಾಸದ ಸಂದರ್ಭದಲ್ಲಿ ಆತ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದಾಗೆಲ್ಲ ಆ ಛಾಯಾಚಿತ್ರವನ್ನು ತನಗೂ ತೋರಿಸು ಎಂದು ಮಗಳು ದುಂಬಾಲುಬೀಳುತ್ತಿದ್ದಳು.

ಕ್ಲಿಕ್ಕಿಸಿದ ತಕ್ಷಣ ಚಿತ್ರವನ್ನು ತೋರಿಸುವ ಡಿಜಿಟಲ್ ಕ್ಯಾಮೆರಾ ತಂತ್ರಜ್ಞಾನ ಆಗಿನ್ನೂ ಬಂದಿರಲಿಲ್ಲ. ಹಾಗಾಗಿ "ನಾವು ಊರಿಗೆ ಹೋದಮೇಲೆ ಫಿಲಂ ರೋಲನ್ನು ತೊಳೆಸಿ ಪ್ರಿಂಟು ಹಾಕಿಸುತ್ತೇನೆ, ಆಗ ನೀನು ಈ ಚಿತ್ರಗಳನ್ನೆಲ್ಲ ನೋಡುವೆಯಂತೆ" ಎನ್ನುವ ವಿವರಣೆ ಎಡ್ವಿನ್ ಕಡೆಯಿಂದ ಬಂತು. ಆಗ ಆತನ ಮಗಳು ಕೇಳಿದ್ದು ಹೀಗೆ - "ನಾವು ಫೋಟೋ ನೋಡಲು ಅಷ್ಟೆಲ್ಲ ಯಾಕೆ ಕಾಯಬೇಕು?"

ಬೇರೆ ಯಾರಾದರೂ ಆಗಿದ್ದರೆ ಈ ಪ್ರಶ್ನೆಗೆ ಉತ್ತರವಾಗಿ ನಕ್ಕು ಸುಮ್ಮನಾಗಿಬಿಡುತ್ತಿದ್ದರೇನೋ. ಆದರೆ ಎಡ್ವಿನ್ ಲ್ಯಾಂಡ್ ಹಾಗೆ ಮಾಡಲಿಲ್ಲ. ಪುಟ್ಟ ಮಗುವಿನ ಮುಗ್ಧ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಯೋಚಿಸಲು ಪ್ರಾರಂಭಿಸಿದ ಆತ ಆಗಿನ ಕಾಲಕ್ಕೆ ಕ್ರಾಂತಿಕಾರಕ ಎನ್ನಬಹುದಾಗಿದ್ದ ಪೋಲರಾಯ್ಡ್ ಕ್ಯಾಮೆರಾವನ್ನು ಸೃಷ್ಟಿಸಿದ.

ಸೋಮವಾರ, ಫೆಬ್ರವರಿ 4, 2013

ಗುಲಬರ್ಗಾದಲ್ಲಿ ಜನಪ್ರಿಯ ವಿಜ್ಞಾನ ಸಾಹಿತಿಗಳ ಸಮಾವೇಶ

ಇಜ್ಞಾನ ವಾರ್ತೆ

ಜನಪ್ರಿಯ ವಿಜ್ಞಾನ ಸಾಹಿತಿಗಳ ರಾಜ್ಯಮಟ್ಟದ ಆರನೇ ಸಮಾವೇಶ ಬರುವ ಫೆಬ್ರುವರಿ ೧೬ ಹಾಗೂ ೧೭ರಂದು ಗುಲಬರ್ಗಾದಲ್ಲಿ ನಡೆಯಲಿದೆ. ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಜನಪ್ರಿಯ ವಿಜ್ಞಾನ ಸಾಹಿತಿಗಳ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಗುಲಬರ್ಗಾದ ನೂತನ ವಿದ್ಯಾಲಯ ಕಾಲೇಜಿನ ಅನಂತರಾವ್ ದೇಶ್‌ಮುಖ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಎರಡು ದಿನಗಳ ಈ ಸಮಾವೇಶದಲ್ಲಿ ಮಂಡಿಸಲಾಗುವ ಪ್ರಬಂಧಗಳನ್ನು `ವಿಜ್ಞಾನ ಸಂವಹನ: ೩ನೇ ಆಯಾಮ' ಎಂಬ ಹೆಸರಿನ ಪುಸ್ತಕರೂಪದಲ್ಲಿ ಪ್ರಕಟಿಸಲಾಗುವುದು.

ಶುಕ್ರವಾರ, ಫೆಬ್ರವರಿ 1, 2013

ಮ್ಯೂಸಿಕ್ ಸ್ಟ್ರೀಮಿಂಗ್: ಸಿನಿಮಾ ಹಾಡಿನ ಆನ್‌ಲೈನ್ ಪಾಡು!


ಟಿ. ಜಿ. ಶ್ರೀನಿಧಿ

ಒಂದು ಕಾಲ ಇತ್ತು. ಹೊಸ ಸಿನಿಮಾದಲ್ಲಿ ನಮಗಿಷ್ಟವಾದ ಹಾಡುಗಳನ್ನು ಬೇಕೆಂದಾಗ ಕೇಳಲು ಅಂಗಡಿಗೆ ಹೋಗಿ ಆಡಿಯೋ ಕ್ಯಾಸೆಟ್ ಕೊಳ್ಳುವುದಷ್ಟೇ ಆಗ ನಮ್ಮ ಮುಂದಿದ್ದ ಆಯ್ಕೆಯಾಗಿತ್ತು. ಟೀವಿಯಲ್ಲಿ ಚಿತ್ರಹಾರ್-ಚಿತ್ರಮಂಜರಿ ನೋಡುವುದಂತೂ ಆಗ ಇಡೀ ಕುಟುಂಬಕ್ಕೇ ಒಂದು ಸಂಭ್ರಮ. ಆಮೇಲೆ ಮಾಹಿತಿ ತಂತ್ರಜ್ಞಾನ ಬಂತಲ್ಲ, ನಮ್ಮ ಬದುಕಿನ ಬೇರೆಲ್ಲ ಆಯಾಮಗಳಂತೆ ಅದು ಸಿನಿಮಾ ಹಾಡುಗಳನ್ನು ಆಲಿಸುವ ಅನುಭವವನ್ನೂ ಬದಲಿಸಿಬಿಟ್ಟಿತು. ಎಂಪಿಥ್ರೀ ದೆಸೆಯಿಂದ ಕೈಯಲ್ಲಿನ ಫೋನುಗಳೂ ಮ್ಯೂಸಿಕ್ ಪ್ಲೇಯರುಗಳಾಗಿ ಬದಲಾದವು.

ಇದರ ಜೊತೆಯಲ್ಲೇ ಬೆಳೆದದ್ದು ಪೈರಸಿ ಪಿಡುಗು. ಸಿನಿಮಾ ಹಾಡು ಬೇಕು ಎಂದಾಕ್ಷಣ ನಮಗೆ ಟೊರೆಂಟುಗಳೇ ಮೊದಲು ನೆನಪಾಗುತ್ತವೆ. ಸ್ವತಃ ಡೌನ್‌ಲೋಡ್ ಮಾಡದಿದ್ದರೆ ಸ್ನೇಹಿತರಿಂದ ಪಡೆದುಕೊಂಡಾದರೂ ಸರಿ ಎನ್ನುವ ನಮಗೆ ಸಿನಿಮಾ ಹಾಡುಗಳನ್ನು ಕೊಂಡು ಕೇಳುವ ಪರಿಕಲ್ಪನೆ ಅಷ್ಟಾಗಿ ಹಿಡಿಸುವುದೇ ಇಲ್ಲ. ಹಾಡುಕೇಳಲು ದುಡ್ಡುಕೊಡಿ ಎನ್ನುವ ಐಟ್ಯೂನ್ಸ್‌ನಂತಹ ಐಡಿಯಾಗಳು ಹೀಗಾಗಿಯೇ ನಮ್ಮಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿಲ್ಲ (ಐದು ಹತ್ತು ರೂಪಾಯಿಗಳಿಗೆ ಒಂದು ಹಾಡಿನಂತೆ ನಮಗಿಷ್ಟವಾದುದನ್ನು ಡೌನ್‌ಲೋಡ್ ಮಾಡಿಕೊಳ್ಳುವ ಸೌಲಭ್ಯವನ್ನು ಫ್ಲಿಪ್‌ಕಾರ್ಟ್ ಡಾಟ್ ಕಾಮ್ ಈಚೆಗಷ್ಟೇ 'ಫ್ಲೈಟ್' ಎಂಬ ಹೆಸರಿನಲ್ಲಿ ಪರಿಚಯಿಸಿದೆ: flipkart.com/mp3-downloads).

ಪೈರಸಿಗೆ ಪ್ರೋತ್ಸಾಹಿಸದೆಯೇ ಸೂಪರ್‌ಹಿಟ್ ಹಾಡುಗಳನ್ನು ಕೇಳುವ ಸೌಲಭ್ಯವನ್ನು ನಮಗೆ ಒದಗಿಸಿರುವುದು ಮ್ಯೂಸಿಕ್ ಸ್ಟ್ರೀಮಿಂಗ್ ತಾಣಗಳು. ಹಾಡನ್ನು ಡೌನ್‌ಲೋಡ್ ಮಾಡಿಕೊಳ್ಳಲು ಬಿಡದೆ ನಮಗೆ ಬೇಕಾದ ಹಾಡನ್ನು ವಿಶ್ವವ್ಯಾಪಿ ಜಾಲದಲ್ಲೇ ಕೇಳಿಸುವುದು ಈ ತಾಣಗಳ ವೈಶಿಷ್ಟ್ಯ. ಡೆಸ್ಕ್‌ಟಾಪ್-ಲ್ಯಾಪ್‌ಟಾಪ್‌ಗಳಲ್ಲಷ್ಟೇ ಏಕೆ, ಈ ಸೌಲಭ್ಯವನ್ನು ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಲ್ಲೂ ಬಳಸಬಹುದು.
badge