ಸೋಮವಾರ, ಜೂನ್ 29, 2015

ಸ್ಮಾರ್ಟ್‌ಫೋನ್ ಮುಖ ೫: ಮಾಹಿತಿಯ ಮಹಾಮಳಿಗೆ

ವಿಶ್ವವ್ಯಾಪಿ ಜಾಲದಲ್ಲಿ (ವರ್ಲ್ಡ್‌ವೈಡ್ ವೆಬ್) ಮಾಹಿತಿಯ ಮಹಾಪೂರವೇ ಇದೆಯಲ್ಲ, ಅಲ್ಲಿಗೆ ಪ್ರವೇಶಿಸಲು ಮೊಬೈಲ್ ದೂರವಾಣಿಯೇ ನಮ್ಮ ಹೆಬ್ಬಾಗಿಲು. ಸರ್ಚ್ ಇಂಜನ್‌ಗಳನ್ನು ಬಳಸಿ ಮಾಹಿತಿಯನ್ನು ಹುಡುಕಲು, ಹುಡುಕಿದ ಮಾಹಿತಿಯಲ್ಲಿ ನಮಗೆ ಬೇಕಾದ್ದನ್ನು ಉಳಿಸಿಟ್ಟುಕೊಳ್ಳಲು, ಹಾಗೆ ಉಳಿಸಿಟ್ಟದ್ದನ್ನು ಸುಲಭವಾಗಿ ಮತ್ತೆ ತೆರೆದು ಓದಲು ಬೇಕಾದ ಅನೇಕ ಸೌಲಭ್ಯಗಳನ್ನು ಸ್ಮಾರ್ಟ್‌ಫೋನುಗಳು ನಮಗೆ ಒದಗಿಸುತ್ತವೆ. ವಿಕಿಪೀಡಿಯದಂತಹ ವಿಶ್ವಕೋಶಗಳು ಇದೀಗ ಮೊಬೈಲ್ ಆಪ್ ಮೂಲಕ ನಮ್ಮ ಅಂಗೈಯಲ್ಲೇ ದೊರಕುತ್ತವೆ. ಕ್ಷಣಕ್ಷಣದ ಸುದ್ದಿಗಳನ್ನು ಬಿತ್ತರಿಸುವ ಅದೆಷ್ಟೋ ಸೌಲಭ್ಯಗಳು ಇಂದು ಮೊಬೈಲಿನಲ್ಲಿವೆ. ಪತ್ರಿಕೆಗಳೂ ಅಷ್ಟೆ, ಯಾವ ದೇಶದಲ್ಲಿ ಪ್ರಕಟವಾಗುವ ಪತ್ರಿಕೆಯೇ ಆದರೂ ಅದು ಪ್ರಕಟವಾಗುತ್ತಿದ್ದಂತೆಯೇ ನಮ್ಮ ಮೊಬೈಲಿನಲ್ಲಿ ಪ್ರತ್ಯಕ್ಷವಾಗುವಂತೆ ಮಾಡಿಕೊಳ್ಳುವುದು ಸಾಧ್ಯ. ಇನ್ನು ಪುಸ್ತಕಗಳಂತೂ ಸಾವಿರಾರು ಸಂಖ್ಯೆಯಲ್ಲಿ ನಮ್ಮ ಮೊಬೈಲಿನಲ್ಲೇ ದೊರಕಬಲ್ಲವು. ಅಪರಿಚಿತ ಭಾಷೆಯ ಪಠ್ಯ ಅಥವಾ ಚಿತ್ರವನ್ನು ನಮ್ಮ ಭಾಷೆಗೆ ಅನುವಾದಿಸಿಕೊಳ್ಳುವುದರಿಂದ ಪ್ರಾರಂಭಿಸಿ ಹೊಸ ಭಾಷೆಯನ್ನು ಕಲಿಯುವತನಕ ಸ್ಮಾರ್ಟ್‌ಫೋನುಗಳು ನಮಗೆ ಹಲವು ಬಗೆಯಲ್ಲಿ ನೆರವಾಗುತ್ತವೆ. ಪ್ರವಾಸಿ ತಾಣಗಳ, ಹೋಟಲ್ಲುಗಳ ಬಗ್ಗೆ ತಿಳಿಯಬೇಕೆಂದರೆ ಅದಕ್ಕೂ ಮೊಬೈಲ್ ಫೋನ್ ಮೊರೆಹೋಗಬಹುದು.

ಮುಂದಿನ ವಾರ: ದಾರಿತೋರುವ ಮಾರ್ಗದರ್ಶಕ | ಈವರೆಗಿನ ಮುಖಗಳು

ಮಂಗಳವಾರ, ಜೂನ್ 23, 2015

ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ : ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪ

ಬೇಳೂರು ಸುದರ್ಶನ

ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ (ಸ್ಥಾಪನೆ: ಕ್ರಿಶ ೧೯೧೫) ಪ್ರಕಟಿಸಲು ಉದ್ದೇಶಿಸಿರುವ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ೧೭ ಸಂಪುಟಗಳಲ್ಲಿ ೧೪ನೇ ಸಂಪುಟವೇ ಮೊಟ್ಟಮೊದಲನೆಯದಾಗಿ ಬಿಡುಗಡೆಯಾಗಿದೆ. ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದ ಈ `ವಿಜ್ಞಾನ ತಂತ್ರಜ್ಞಾನ’ ಸಂಪುಟವು ಅತ್ಯಂತ ಹೊಣೆಗಾರಿಕೆಯಿಂದ ಪ್ರಕಟಿಸಿದ ಸಂಪಾದಿತ ಕೃತಿಯಾಗಿದೆ. ವಿಜ್ಞಾನ ತಂತ್ರಜ್ಞಾನ ಕುರಿತು ಕನ್ನಡದಲ್ಲಿ ನಡೆದ ಸಾಹಿತ್ಯಕ ಪ್ರಯತ್ನಗಳ ಸಮಗ್ರ ಚಿತ್ರಣವನ್ನು ಅಚ್ಚುಕಟ್ಟಾಗಿ ಮತ್ತು ಕೊನೇಕ್ಷಣದ ಬೆಳವಣಿಗೆಗಳನ್ನೂ ಸೇರಿಸಿ ಪ್ರಕಟಿಸಿರುವುದು ಅಭಿನಂದನೀಯ. ಸ್ವತಃ ವಿಜ್ಞಾನ ಲೇಖಕರಾಗಿ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ, ವಿವಿಧ ಸಂಪಾದಿತ ಕೃತಿಗಳಲ್ಲಿ ಹೊಣೆಗಾರಿಕೆ ಹೊತ್ತುಕೊಂಡು ಸಂಪೂರ್ಣಗೊಳಿಸಿರುವ ಹಿರಿಯರಾದ ಟಿ ಆರ್ ಅನಂತರಾಮು ಈ ಸಂಪುಟದಲ್ಲೂ ತಮ್ಮ ವೃತ್ತಿಪರತೆ ತೋರಿದ್ದಾರೆ. ಕನ್ನಡದ ವಿಜ್ಞಾನ ಲೇಖಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಯಕ್ಕೆ ಸರಿಯಾಗಿ ಸಂಪುಟವನ್ನು ಮುದ್ರಿಸಿಕೊಟ್ಟ ಅವರು ಕೃತಿಯ ಮೂಲಕವೇ ವೈಜ್ಞಾನಿಕ ಮನೋಭಾವ ಪ್ರದರ್ಶಿಸಿದ್ದಾರೆ!

ಕರ್ನಾಟಕದ ವಿಜ್ಞಾನ ಬರವಣಿಗೆಯೂ ಸರಿಸುಮಾರು ಕಸಾಪದಷ್ಟೇ ಹಳತು. ೧೯ನೇ ಶತಮಾನದಲ್ಲಿ ಚಿಗುರೊಡೆದು ೨೦ನೇ ಶತಮಾನದ ಆರಂಭದಲ್ಲಿ ಯೌವ್ವನಾವಸ್ಥೆಗೆ ಬಂದ ವಿಜ್ಞಾನ ಸಾಹಿತ್ಯವು ಈಗ ಪ್ರೌಢತೆಯ ಹೆಜ್ಜೆಗಳನ್ನು ಇಡುತ್ತಿದೆ. ಭಾರತೀಯ ವಿಜ್ಞಾನ ಸಂಸ್ಥೆ ಸೇರಿದಂತೆ ಹಲವು ವಿಜ್ಞಾನ ತಂತ್ರಜ್ಞಾನ ಸಂಸ್ಥೆಗಳನ್ನು ಹೊಂದಿರುವ ಕನ್ನಡ ನಾಡಿನಲ್ಲಿ ವಿಜ್ಞಾನ ಸಾಹಿತ್ಯ ವಿಪುಲವಾಗಿದೆ; ಹಲವು ರಂಗಗಳನ್ನು ವ್ಯಾಪಿಸಿದೆ; ವೈಜ್ಞಾನಿಕ ಪರಿಭಾಷೆಯನ್ನು ರೂಪಿಸಿದೆ; ನಿಘಂಟು, ವಿಶ್ವಕೋಶಗಳು ಪ್ರಕಟವಾಗಿವೆ; ವಿಜ್ಞಾನ ಆಧಾರಿತ ಹೋರಾಟಗಳು ನಡೆದಿವೆ.

ಇಂಥ ವೈವಿಧ್ಯಮಯ ಹಿನ್ನೆಲೆಯನ್ನು ಶಿಸ್ತಿನಿಂದ ದಾಖಲಿಸುವುದು ಸವಾಲಿನ ಕೆಲಸ. ಆದರೆ ಟಿ ಆರ್ ಅನಂತರಾಮು ವಿಜ್ಞಾನ ಲೇಖಕರ ಪಡೆಯನ್ನೇ ಕಟ್ಟಿಕೊಂಡು ಈ ಸವಾಲನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ವಿಜ್ಞಾನ ಸಾಹಿತ್ಯ, ತಾಂತ್ರಿಕ ಸಾಹಿತ್ಯ, ಮಾಹಿತಿ ತಂತ್ರಜ್ಞಾನ – ಹೀಗೆ ಮೂರು ಕವಲುಗಳಲ್ಲಿ ವಿಷಯವಸ್ತುಗಳನ್ನು ಹರವಿಕೊಂಡ ಅವರು ವಿಜ್ಞಾನ ಸಾಹಿತ್ಯ ವಿಭಾಗದಲ್ಲಿ ಕನ್ನಡ ವಿಜ್ಞಾನ ಸಾಹಿತ್ಯದ ಎಲ್ಲ ಆಯಾಮಗಳನ್ನು ಒಂದೊಂದಾಗಿ ಪರಿಚಯಿಸಿದ್ದಾರೆ.

ಶುಕ್ರವಾರ, ಜೂನ್ 19, 2015

ಸ್ಮಾರ್ಟ್‌ಫೋನ್ ಮುಖ ೪: ಮನರಂಜನೆಯ ಸಾಧನ

ಪ್ರಯಾಣದ ಸಂದರ್ಭದಲ್ಲಿ ಹಾಡು ಕೇಳಬೇಕು ಎಂದರೆ ವಾಕ್‌ಮನ್ ಅನ್ನೋ ಎಫ್‌ಎಂ ರೇಡಿಯೋವನ್ನೋ ಜೊತೆಗೆ ಕೊಂಡೊಯ್ಯುವ ಅಭ್ಯಾಸ ಒಂದು ಕಾಲದಲ್ಲಿತ್ತು. ಮೊಬೈಲ್ ಬಳಕೆ ವ್ಯಾಪಕವಾದಂತೆ ವಾಕ್‌ಮನ್ ಮಾತ್ರವೇ ಏಕೆ, ಇದೀಗ ಐಪಾಡ್ ಕೂಡ ಮೂಲೆಗುಂಪಾಗಿದೆ. ಹಾಗೆಂದಮಾತ್ರಕ್ಕೆ ಮೊಬೈಲ್ ನೀಡುವ ಮನರಂಜನೆ ಹಾಡು ಕೇಳಿಸುವುದಕ್ಕಷ್ಟೇ ಸೀಮಿತವೇನೂ ಆಗಿಲ್ಲ. ಇಂದಿನ ಫೋನುಗಳಲ್ಲಿ ಅತ್ಯಾಧುನಿಕ ಆಟಗಳನ್ನು ಆಡುವುದು ಸಾಧ್ಯ. ಇಂತಹ ಆಟಗಳು ಫೋನಿನಲ್ಲಿರುವ ವಿವಿಧ ಸೆನ್ಸರುಗಳನ್ನು ಬಳಸುವುದರಿಂದ ಫೋನನ್ನು ಆಚೀಚೆ ತಿರುಗಿಸುವಷ್ಟರಿಂದಲೇ ಆಟದ ನಿಯಂತ್ರಣಗಳೆಲ್ಲ ನಮ್ಮ ಕೈವಶವಾಗಿಬಿಡುತ್ತವೆ; ಅಂದರೆ ಕಾರ್ ರೇಸಿನ ಆಟದಲ್ಲಿ ನಮ್ಮ ಮೊಬೈಲನ್ನೇ ಸ್ಟೀರಿಂಗ್ ಚಕ್ರವಾಗಿ ಬಳಸುವುದು ಸಾಧ್ಯವಾಗುತ್ತದೆ. ಇನ್ನು ಮೊಬೈಲಿನಲ್ಲಿ ಅತಿವೇಗದ ಅಂತರಜಾಲ ಸಂಪರ್ಕ (೩ಜಿ, ೪ಜಿ ಇತ್ಯಾದಿ) ಸಿಗುತ್ತಿರುವುದರಿಂದ ಟೀವಿ ಕಾರ್ಯಕ್ರಮ, ಸಿನಿಮಾ ಇತ್ಯಾದಿಗಳನ್ನು ನೋಡುವುದಕ್ಕೂ ನಾವು ಮೊಬೈಲನ್ನೇ ಬಳಸುವುದು ಸಾಧ್ಯವಾಗಿದೆ. ಅತ್ಯುತ್ತಮ ಸ್ಪಷ್ಟತೆಯ ಮೊಬೈಲ್ ಪರದೆಯ ಮೇಲೆ ಉತ್ತಮ ಗುಣಮಟ್ಟದ ವೀಡಿಯೋ ಮೂಡಿಬಂದಿತೆಂದರೆ ನಾವು ಕುಳಿತ ಜಾಗವೇ ದಿವಾನಖಾನೆಯಾಗುತ್ತದೆ, ಮೊಬೈಲೇ ಟೀವಿಯಾಗುತ್ತದೆ!

ಮುಂದಿನ ವಾರ: ಮಾಹಿತಿಯ ಮಹಾಮಳಿಗೆ | ಈವರೆಗಿನ ಮುಖಗಳು

ಬುಧವಾರ, ಜೂನ್ 17, 2015

ಸ್ಮಾರ್ಟ್ ಪೆನ್ನು ಸ್ಮಾರ್ಟ್ ಕಾಗದ!

ಟಿ. ಜಿ. ಶ್ರೀನಿಧಿ

"ಎಲ್ಲಕಡೆಯೂ ಕಂಪ್ಯೂಟರುಗಳು ಬಂದಮೇಲೆ ಕಾಗದ ಬಳಸುವ ಅಗತ್ಯವೇ ಇರುವುದಿಲ್ಲ" - ಎನ್ನುವ 'ಪೇಪರ್‌ಲೆಸ್' ಪ್ರಪಂಚದ ಕಲ್ಪನೆ ಕಂಪ್ಯೂಟರುಗಳು ಪರಿಚಯವಾದ ಕಾಲದಿಂದಲೇ ಚಾಲ್ತಿಯಲ್ಲಿದೆ. ಕಾಗದದ ಮೇಲಿನ ನಮ್ಮ ಅವಲಂಬನೆ ಕೆಲವೇ ವರ್ಷಗಳಲ್ಲಿ ಕಡಿಮೆಯಾಗಲಿದೆ ಎಂದು ಹೇಳಲು ಶುರುಮಾಡಿ ದಶಕಗಳೇ ಕಳೆದಿವೆ.

ಆದರೆ ಕಾಗದದ ಬೆಲೆ ಕಡಿಮೆಯಿರುವುದರಿಂದಲೋ, ಡಿಜಿಟಲ್ ರೂಪಕ್ಕಿಂತ ಕಾಗದವೇ ನಮ್ಮ ಮನಸ್ಸಿಗೆ ಹೆಚ್ಚು ಆಪ್ತವೆನಿಸುವುದರಿಂದಲೋ ಕಾಗದದ ಬಳಕೆ ಇಷ್ಟೆಲ್ಲ ಸಮಯದ ನಂತರವೂ ಮುಂದುವರೆದಿದೆ. ಕೆಲವು ಸಂದರ್ಭಗಳಲ್ಲಿ ಕಾಗದಕ್ಕೆ ಪೆನ್ನು ಜೋಡಿಯಾಗಿದ್ದರೆ ಇನ್ನು ಕೆಲವು ಬಾರಿ ಕಂಪ್ಯೂಟರಿನಲ್ಲಿರುವ ಮಾಹಿತಿಯೇ ಪ್ರಿಂಟರ್ ಮಾರ್ಗವಾಗಿ ಕಾಗದದ ಮೇಲಿಳಿಯುತ್ತದೆ. ಹೇಗೋ, ಪ್ರಪಂಚ ಮಾತ್ರ ಇನ್ನೂ 'ಪೇಪರ್‌ಲೆಸ್' ಆಗಿಯೇ ಇಲ್ಲ.

ಹಾಗೆಂದಮಾತ್ರಕ್ಕೆ ಕಾಗದದ ಬಳಕೆಯ ಮೇಲೆ ತಂತ್ರಜ್ಞಾನ ಪ್ರಭಾವವನ್ನೇ ಬೀರಿಲ್ಲ ಎನ್ನುವಂತಿಲ್ಲ.

ಸೋಮವಾರ, ಜೂನ್ 15, 2015

ಸಂವಹನಕ್ಕೆ ಸಿದ್ಧತೆ: ತಂತ್ರಜ್ಞಾನದ ಸವಲತ್ತುಗಳು

ಮೇ ೧೬, ೨೦೧೫ರಂದು ಬೆಂಗಳೂರಿನಲ್ಲಿ ನಡೆದ 'ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ'ದಲ್ಲಿ ಮಾಡಿದ ಭಾಷಣದ ಪಠ್ಯರೂಪ
ಸುಧೀಂದ್ರ ಹಾಲ್ದೊಡ್ಡೇರಿ

ನಾನಿಂದು ಮಾತನಾಡುತ್ತಿರುವ ವಿಷಯ ಕೇವಲ ಸಂವಹನಕ್ಕಷ್ಟೇ ಸೀಮಿತವಾಗಿಲ್ಲ, ನಮ್ಮ ಇಡೀ ಜೀವನಶೈಲಿಗೇ ಅನ್ವಯಿಸುವಂಥದ್ದು. ಕಾರಣ, ತಂತ್ರಜ್ಞಾನ ನೀಡುತ್ತಿರುವ ಸವಲತ್ತುಗಳ ಹೊರತಾಗಿ ನಾವು ಏನನ್ನೂ ಊಹಿಸಿಕೊಳ್ಳಲಾರದ ಸ್ಥಿತಿಯಲ್ಲಿದ್ದೇವೆ. ಹಾಗೆಂದ ಮಾತ್ರಕ್ಕೆ "ನಮ್ಮ ಕಾಲದಲ್ಲಿ ಎಷ್ಟೆಲ್ಲಾ ಕಷ್ಟ ಪಡುತ್ತಿದ್ದೆವು, ಈಗಿನವರಿಗೆ ಅನುಕೂಲಗಳು ಜಾಸ್ತಿ, ಶ್ರದ್ಧೆ ಕಡಿಮೆ, ಕಾರ್ಯಭಾರವೂ ಹೆಚ್ಚಿಲ್ಲ" ಎಂದು ಹಳಿಯಲು ಹೊರಟಿಲ್ಲ. ನಿಗದಿತ ಹಳಿಯ ಮೇಲೆ ನನ್ನ ಯೋಚನಾ ಲಹರಿಯ ಬೋಗಿಗಳನ್ನು ಕೂಡಿಸಲು ಹೊರಟಿದ್ದೇನೆ.

ಸಿದ್ಧತೆಯೆಂಬುದು ನಮ್ಮೆಲ್ಲ ಕೆಲಸಗಳಿಗೆ ಅತ್ಯಗತ್ಯವಾದದ್ದು. ಸಿದ್ಧತೆಯಿಲ್ಲದ ಯಾವುದೇ ಕಾರ್ಯ ಅಪೂರ್ಣವಾಗಬಲ್ಲದ್ದು. ಸಂವಹನವೆಂದೊಡನೆ ಅದು ಪತ್ರಿಕೆಗಳ ಮೂಲಕ ಇರಬಹುದು ಅಥವಾ ರೇಡಿಯೊ ಮೂಲಕ ಇರಬಹುದು, ಟೀವಿ ಚಾನೆಲ್ ಮೂಲಕ ಇರಬಹುದು ಅಥವಾ ಇಂಟರ್‌ನೆಟ್ ಮೂಲಕ ನಡೆಸುವ ಬಹು-ಮಾಧ್ಯಮ ಅಭಿವ್ಯಕ್ತಿಯಿರಬಹುದು. ಮೊದಲ ಸಿದ್ಧತೆ ವಿಷಯವೊಂದರ ಕುರಿತು ಮಾಹಿತಿ ಟಿಪ್ಪಣಿ ಸಂಗ್ರಹಣೆ.

ಶುಕ್ರವಾರ, ಜೂನ್ 12, 2015

ಸ್ಮಾರ್ಟ್‌ಫೋನ್ ಮುಖ ೩: ಛಾಯಾಗ್ರಹಣದ ಸಂಗಾತಿ

ಚಿತ್ರಗಳನ್ನು ಕ್ಲಿಕ್ಕಿಸುವುದು ಹಾಗೂ ವೀಡಿಯೋ ಸೆರೆಹಿಡಿಯುವ ಕೆಲಸ ಈಚೆಗೆ ಮೊಬೈಲ್ ಫೋನಿನ ಪ್ರಮುಖ ಜವಾಬ್ದಾರಿಗಳಲ್ಲೊಂದಾಗಿ ಬೆಳೆದುಬಿಟ್ಟಿದೆ. ಮೊಬೈಲಿನಲ್ಲೂ ಫೋಟೋ ತೆಗೆಯಬಹುದು ಎನ್ನುವ ಕಾಲ ಹೋಗಿ ಮೊಬೈಲೇ ನಮ್ಮ ಕ್ಯಾಮೆರಾ ಎಂದು ಹೇಳುವ ಪರಿಸ್ಥಿತಿ ಬಂದಿದೆ ಎಂದರೂ ಸರಿಯೇ. ಮೊಬೈಲ್ ಕ್ಯಾಮೆರಾಗಳ ಸಾಮರ್ಥ್ಯವೂ ಇದಕ್ಕೆ ತಕ್ಕಂತೆ ಬೆಳೆಯುತ್ತಿದೆ. ಸುಮ್ಮನೆ ಮೆಗಾಪಿಕ್ಸೆಲ್‌ಗಳ ಲೆಕ್ಕ ತೋರಿಸುವ ಬದಲಿಗೆ ನಿಜಕ್ಕೂ ಉತ್ತಮ ಗುಣಮಟ್ಟದ ಛಾಯಾಚಿತ್ರ-ವೀಡಿಯೋಗಳನ್ನು ಸೆರೆಹಿಡಿಯುವ ಕ್ಯಾಮೆರಾಗಳನ್ನು ನಾವು ಇಂದಿನ ಫೋನುಗಳಲ್ಲಿ ನೋಡಬಹುದು. ಮಾರುಕಟ್ಟೆಯಲ್ಲಿರುವ ಕೆಲ ಫೋನುಗಳನ್ನು ಗಮನಿಸಿದರೆ ಕಡಿಮೆ ಬೆಳಕಿನಲ್ಲೂ ಉತ್ತಮ ಗುಣಮಟ್ಟದ ಚಿತ್ರಗಳನ್ನು ಕ್ಲಿಕ್ಕಿಸುವ ಸಾಮರ್ಥ್ಯ ಅದರ ಕ್ಯಾಮೆರಾಗಳಲ್ಲಿರುವುದನ್ನು ನಾವು ನೋಡಬಹುದು. ಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿರುವಂತೆ ವಿವಿಧ ವಿವರಗಳನ್ನೆಲ್ಲ ನಾವೇ ಹೊಂದಿಸುವ (ಮ್ಯಾನ್ಯುಯಲ್ ಸೆಟ್ಟಿಂಗ್ಸ್) ಸೌಲಭ್ಯವೂ ಹಲವು ಫೋನುಗಳಲ್ಲಿರುತ್ತದೆ. ಇಷ್ಟೆಲ್ಲ ಸಮರ್ಥವಾದ ಕ್ಯಾಮೆರಾ ಜೊತೆಗೆ ಕ್ಲಿಕ್ಕಿಸಿದ ಚಿತ್ರವನ್ನು ಚೆಂದಗಾಣಿಸುವ - ವೀಡಿಯೋ ಅನ್ನು ಸಂಪಾದಿಸುವ ಸೌಲಭ್ಯವೂ ಮೊಬೈಲಿನಲ್ಲೇ ಸಿಗುತ್ತಿರುವುದರಿಂದ ಇಂದಿನ ಮೊಬೈಲ್ ಫೋನುಗಳು ನಿಜಕ್ಕೂ ನಮ್ಮ ಛಾಯಾಗ್ರಹಣದ ಸಂಗಾತಿಗಳಾಗಿ ಬೆಳೆದುಬಿಟ್ಟಿವೆ ಎನ್ನಬಹುದು.

ಮುಂದಿನ ವಾರ: ಮನರಂಜನೆಯ ಸಾಧನ | ಈವರೆಗಿನ ಮುಖಗಳು

ಬುಧವಾರ, ಜೂನ್ 10, 2015

'ಕಾಲ್ ಡ್ರಾಪ್' ಕಾಲ

ಕಳೆದ ಕೆಲದಿನಗಳಿಂದ ಮಾಧ್ಯಮಗಳಲ್ಲಿ 'ಕಾಲ್ ಡ್ರಾಪ್' ಕುರಿತ ಸುದ್ದಿ ನಮಗೆ ಪದೇಪದೇ ಕಾಣಸಿಗುತ್ತಿದೆ. ಇಷ್ಟಕ್ಕೂ ಈ 'ಕಾಲ್ ಡ್ರಾಪ್' ಎಂದರೇನು? ಕಾಲ್‌ಗಳೇಕೆ ಡ್ರಾಪ್ ಆಗುತ್ತವೆ? ಇದರ ಬಗ್ಗೆ ಸರಕಾರ ತಲೆ ಕೆಡಿಸಿಕೊಂಡಿರುವುದೇಕೆ?
ಟಿ. ಜಿ. ಶ್ರೀನಿಧಿ

ಬಸ್ಸಿನಲ್ಲೋ ಕಾರಿನಲ್ಲೋ ಕುಳಿತು ಮೊಬೈಲಿನಲ್ಲಿ ಮಾತನಾಡುತ್ತಿರುವಾಗ ಇದ್ದಕ್ಕಿದ್ದಂತೆ ಆ ಕರೆ ಸ್ಥಗಿತಗೊಳ್ಳುವುದು ಮೊಬೈಲ್ ಬಳಕೆದಾರರೆಲ್ಲರ ಸಾಮಾನ್ಯ ಅನುಭವವೆಂದೇ ಹೇಳಬೇಕು. ಹೊರಗಡೆಯ ಮಾತು ಹಾಗಿರಲಿ, ಮೊಬೈಲಿನಲ್ಲಿ ಮಾತನಾಡುತ್ತ ಮನೆಯೊಳಗೆ ಓಡಾಡುವಾಗಲೂ ಕೆಲವೊಮ್ಮೆ ಈ ಅನುಭವ ಆಗುವುದುಂಟು.

"ಅರೆ, ಈಗಷ್ಟೆ ಸರಿಯಾಗಿ ಕೇಳಿಸುತ್ತಿದ್ದದ್ದು ಇದ್ದಕ್ಕಿದ್ದಂತೆ ಸ್ಥಗಿತವಾಗಿಬಿಟ್ಟಿತಲ್ಲ, ಸಿಗ್ನಲ್ ಕೂಡ ಚೆನ್ನಾಗಿಯೇ ಇದೆ. ಇದೆಂಥದಿದು ವಿಚಿತ್ರ!" ಎನ್ನುವುದು ಇಂತಹ ಸನ್ನಿವೇಶಗಳಲ್ಲಿ ನಮ್ಮ ಪ್ರತಿಕ್ರಿಯೆಯಾಗಿರುತ್ತದೆ. ಎರಡು ಹೆಜ್ಜೆಯೂ ದಾಟಿಲ್ಲ, ಮೊಬೈಲ್ ಕರೆ ತನ್ನಷ್ಟಕ್ಕೆ ತಾನೇ ಸ್ಥಗಿತವಾಗಿಬಿಟ್ಟಿದೆ; ದೊಡ್ಡ ಬದಲಾವಣೆಯೇನೂ ಇಲ್ಲದಿದ್ದರೂ ಇದೇನು ಹೀಗೆ ಎಂದು ನಾವು ಕೇಳುತ್ತೇವೆ.

ಮೊಬೈಲ್ ಫೋನ್ ಏನಾದರೂ ತನ್ನ ಅಭಿಪ್ರಾಯ ಹೇಳುವಂತಿದ್ದರೆ ಅದು ನಮ್ಮ ಅಭಿಪ್ರಾಯಕ್ಕೆ ಸಂಪೂರ್ಣ ವಿರುದ್ಧವಾಗಿರುತ್ತದೆ. ಏಕೆಂದರೆ ನಾವು ಎರಡು ಹೆಜ್ಜೆಯ ದೂರ ಕ್ರಮಿಸುತ್ತಿರುವಾಗ ಆ ಫೋನಿನ ದೃಷ್ಟಿಯಲ್ಲಿ ದೊಡ್ಡ ಬದಲಾವಣೆಗಳೇ ಆಗಿರುತ್ತವೆ!

ಮೊಬೈಲ್ ಫೋನನ್ನು ಸೆಲ್ ಫೋನ್ ಎಂದು ಕರೆಯುತ್ತೇವಲ್ಲ, ಅದಕ್ಕೆ ಕಾರಣ ಮೊಬೈಲ್ ನೆಟ್‌ವರ್ಕುಗಳ ವಿನ್ಯಾಸ.

ಸೋಮವಾರ, ಜೂನ್ 8, 2015

ವಿಜ್ಞಾನ ಬರವಣಿಗೆಗೆ ಸಿದ್ಧತೆ

ಮೇ ೧೬, ೨೦೧೫ರಂದು ಬೆಂಗಳೂರಿನಲ್ಲಿ ನಡೆದ 'ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ'ದಲ್ಲಿ ಮಾಡಿದ ಭಾಷಣದ ಪಠ್ಯರೂಪ
ಸಿ ಪಿ ರವಿಕುಮಾರ್

ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಬರೆಯಲು ಹಲವು ಸಿದ್ಧತೆಗಳು ಬೇಕು: ಕನ್ನಡದಲ್ಲಿ ಬರೆಯಬೇಕೆಂಬ ಮಾನಸಿಕ ಸಿದ್ಧತೆ, ವಿಜ್ಞಾನ ಬರವಣಿಗೆಗೆ ಬೇಕಾದ ಹಿನ್ನೆಲೆ, ಓದು ಹಾಗೂ ಭಾಷಾಸಿದ್ಧತೆ.

ಮಾನಸಿಕ ಸಿದ್ಧತೆ ಕನ್ನಡದಲ್ಲಿ ವಿಜ್ಞಾನದ ಬರವಣಿಗೆಯನ್ನು ತಂದ ದಿಗ್ಗಜರು ಹಲವರು. ಡಾ| ಕೋಟ ಶಿವರಾಮ ಕಾರಂತರು ಮಕ್ಕಳಿಗಾಗಿ ಬರೆದ, ಸಂಪಾದಿಸಿದ ವಿಜ್ಞಾನ ಸಂಬಂಧಿ ಪುಸ್ತಕಗಳನ್ನು ನಾನು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ಓದಿದೆ. ನಿರಂಜನ ಅವರ ಸಂಪಾದಕತ್ವದಲ್ಲಿ ಸಿದ್ಧವಾದ ಜ್ಞಾನಗಂಗೋತ್ರಿ ವಿಶ್ವಕೋಶ ಸಂಪುಟಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಒಂದು ಇಡೀ ಸಂಪುಟವನ್ನು ಮೀಸಲಾಗಿಟ್ಟಿದ್ದರು. ತಮ್ಮ ನವಿರುಹಾಸ್ಯ ಬೆರೆತ ಶೈಲಿಯಲ್ಲಿ ಸಸ್ಯಗಳ ಬಗ್ಗೆ ಬರೆದ ಪ್ರೊ| ಬಿಜಿಎಲ್ ಸ್ವಾಮಿ ಅವರ ಭಾಷಣ ಕೇಳುವ ಸದವಕಾಶ ನನಗೆ ನ್ಯಾಷನಲ್ ಕಾಲೇಜ್ ವಿದ್ಯಾರ್ಥಿಯಾಗಿದ್ದಾಗ ದೊರಕಿತ್ತು. ಪ್ರೊ| ಜಿ.ಟಿ. ನಾರಾಯಣರಾವ್ ಅವರ ಅನೇಕ ಪುಸ್ತಕಗಳನ್ನು ನಾನು ಓದಿದ್ದೇನೆ. ನನ್ನ ‘ಕಂಪ್ಯೂಟರ್ ಗೊಂದು ಕನ್ನಡಿ’ ಪುಸ್ತಕ ಪ್ರಕಟವಾದಾಗ ಅವರು ನನಗೆ ಮೆಚ್ಚುಗೆಯ ಮಾತು ಬರೆದು ಪ್ರೋತ್ಸಾಹಿಸಿದರು.

ಶುಕ್ರವಾರ, ಜೂನ್ 5, 2015

ಸ್ಮಾರ್ಟ್‌ಫೋನ್ ಮುಖ ೨: ಕಂಪ್ಯೂಟರಿಗೊಂದು ಪುಟ್ಟ ಪರ್ಯಾಯ

ಒಂದು ಕಾಲದ ಕಂಪ್ಯೂಟರುಗಳಲ್ಲಿ ಏನೆಲ್ಲ ಸಾಧ್ಯವಾಗುತ್ತಿತ್ತೋ ಅದಕ್ಕಿಂತ ಹೆಚ್ಚಿನ ಕೆಲಸಗಳನ್ನು ಇಂದಿನ ಮೊಬೈಲ್ ಫೋನ್ ಬಳಸಿ ಸಾಧಿಸಿಕೊಳ್ಳಬಹುದು. ಜೊತೆಗೆ ಎಲ್ಲಿಗೆ ಬೇಕಿದ್ದರೂ ಸುಲಭವಾಗಿ ಕೊಂಡೊಯ್ಯುವ ಸೌಲಭ್ಯ ಬೇರೆ ಸಿಗುತ್ತದಲ್ಲ! ಹಾಗಾಗಿ ಮೊಬೈಲ್ ಫೋನುಗಳು ಕಂಪ್ಯೂಟರಿಗೆ ಪುಟ್ಟದೊಂದು ಪರ್ಯಾಯವಾಗಿ ರೂಪುಗೊಳ್ಳುತ್ತಿವೆ. ಸ್ಮಾರ್ಟ್‌ಫೋನುಗಳ ಪರದೆಯ ಗಾತ್ರ, ಪ್ರಾಸೆಸರಿನ ಸಂಸ್ಕರಣಾ ಸಾಮರ್ಥ್ಯ ಹಾಗೂ ಲಭ್ಯವಿರುವ ರ್‍ಯಾಮ್ ಪ್ರಮಾಣ ದಿನೇ ದಿನೇ ಹೆಚ್ಚುತ್ತಿರುವುದನ್ನು ನೋಡಿದರೆ ಫೋನಿಗೂ ಕಂಪ್ಯೂಟರಿಗೂ ಹೆಚ್ಚಿನ ವ್ಯತ್ಯಾಸವೇ ಇಲ್ಲದ ಪರಿಸ್ಥಿತಿ ಬರುತ್ತಿದೆಯೇನೋ ಎನ್ನಿಸದಿರದು. ಕಂಪ್ಯೂಟರಿನಲ್ಲಿ ದೊರಕುವ ಬಹುಪಾಲು ತಂತ್ರಾಂಶಗಳು ಆಪ್‌ಗಳ ರೂಪದಲ್ಲಿ ಈಗ ಮೊಬೈಲಿನಲ್ಲೂ ಸಿಗುತ್ತವೆ. ಹಾಗಾಗಿ ಕಚೇರಿಯ ಕೆಲಸವನ್ನೂ ಮೊಬೈಲಿನಲ್ಲೇ ಮಾಡಿಕೊಳ್ಳುವುದು ಸಾಧ್ಯವಾಗಿದೆ. ಟಚ್‌ಸ್ಕ್ರೀನಿನಲ್ಲಿ ಟೈಪಿಸುವುದು ಕಷ್ಟ ಎನ್ನುವವರಿಗೆ ಮೊಬೈಲ್ ಜೊತೆ ಬಳಸಲು ಪುಟ್ಟ ಕೀಬೋರ್ಡುಗಳೂ ಸಿಗುತ್ತಿವೆ!

ಮುಂದಿನ ವಾರ: ಛಾಯಾಗ್ರಹಣದ ಸಂಗಾತಿ | ಈವರೆಗಿನ ಮುಖಗಳು

ಸೋಮವಾರ, ಜೂನ್ 1, 2015

ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?

ಮೇ ೧೬, ೨೦೧೫ರಂದು ಬೆಂಗಳೂರಿನಲ್ಲಿ ನಡೆದ 'ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಾರರ ಸಮ್ಮೇಳನ/ಕಾರ್ಯಾಗಾರ'ದಲ್ಲಿ ಮಾಡಿದ ಭಾಷಣದ ಪಠ್ಯರೂಪ
ಬೇಳೂರು ಸುದರ್ಶನ
  • ಭೂಕಂಪ, ಚಂಡಮಾರುತ, ಸುನಾಮಿ; ಎಬೋಲಾ, ಏಯ್ಡ್ಸ್‌; ನಕ್ಷತ್ರಪುಂಜ, ಗ್ರಹಣ; ಮಾಲಿನ್ಯ, ಕಸ, ಹವಾಗುಣ, ಬಿಸಿಯಾಗುತ್ತಿರುವ ಭೂಮಿ...
  • ದಕ್ಷಿಣಕನ್ನಡದಲ್ಲಿ ಎಂಡೋಸಲ್ಫಾನ್‌ ದುರಂತ, ಗೋಗಿಯಲ್ಲಿ ಯುರೇನಿಯಂ ಗಣಿಗಾರಿಕೆ ಅಪಾಯ, ಕೂಡಗಿಯಲ್ಲಿ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ, ಬೆಂಗಳೂರಿನಲ್ಲಿ ಮರಗಳ ಸರ್ವನಾಶ, ರೈತರಿಂದ ಬಿಟಿ ಬೆಳೆಗಳ ನಾಶ, ಅಣ್ಣಿಗೇರಿಯ ತಲೆಬುರುಡೆಗಳು...
ಹೀಗೆ ನೀವು ಹುಡುಕಿದಲ್ಲೆಲ್ಲ ವಿಜ್ಞಾನದ ವರದಿಗಾರಿಕೆಗೆ ಸುದ್ದಿಗಳಿವೆ. ಬಚ್ಚಿಡಲಾಗದ ಸತ್ಯಗಳಿವೆ. ಸರ್ಕಾರದ ಪ್ರತಿನಿಧಿಗಳು, ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು ಪ್ರತಿದಿನವೂ ವಿಜ್ಞಾನ ವರದಿಗಾರಿಕೆಗೆ ಸಾಕಷ್ಟು ಸರಕುಗಳನ್ನು ಒದಗಿಸುತ್ತಲೇ ಇರುತ್ತಾರೆ. ನೋಡುವ ಕಣ್ಣು, ಬರೆಯುವ ಆಸಕ್ತಿ, ಹುಡುಕುವ ಮನಸ್ಸು ಇದ್ದರೆ ವಿಜ್ಞಾನ ವರದಿಗಾರಿಕೆ ಸುಲಭ!

`ವಿಜ್ಞಾನ ವರದಿಗಾರಿಕೆ' (Science Reporting) ಎಂದರೆ ಯಾವುದು ಎಂಬ ನಿರ್ದಿಷ್ಟತೆ ಇಟ್ಟುಕೊಳ್ಳಬೇಕು. ನೇಪಾಳದ ಭೂಕಂಪವು ಒಂದು ದುರಂತವೂ ಹೌದು; ವಿಜ್ಞಾನದ ವರದಿಗಾರಿಕೆಗೆ ಸಿಕ್ಕ ಅವಕಾಶವೂ ಹೌದು. ಇಲ್ಲಿ ಭೂಕಂಪದ ಹಿಂದಿದ್ದ ಕಾರಣಗಳನ್ನು ಗುರುತಿಸುವುದು, ಭೂಕಂಪದಲ್ಲಿ ಖಚಿತವಾಗಿ ಏನಾಯ್ತು ಎಂದು ಬರೆಯುವುದು, ಮುಂದೆ ಏನಾಗಬಹುದು ಎಂದು ವೈಜ್ಞಾನಿಕವಾಗಿ ಊಹಿಸುವುದು - ಇವು ವರದಿಗಾರಿಕೆಗೆ ಇರುವ ಅವಕಾಶಗಳು.
badge