ಪ್ರಯಾಣದ ಸಂದರ್ಭದಲ್ಲಿ ಹಾಡು ಕೇಳಬೇಕು ಎಂದರೆ ವಾಕ್‌ಮನ್ ಅನ್ನೋ ಎಫ್‌ಎಂ ರೇಡಿಯೋವನ್ನೋ ಜೊತೆಗೆ ಕೊಂಡೊಯ್ಯುವ ಅಭ್ಯಾಸ ಒಂದು ಕಾಲದಲ್ಲಿತ್ತು. ಮೊಬೈಲ್ ಬಳಕೆ ವ್ಯಾಪಕವಾದಂತೆ ವಾಕ್‌ಮನ್ ಮಾತ್ರವೇ ಏಕೆ, ಇದೀಗ ಐಪಾಡ್ ಕೂಡ ಮೂಲೆಗುಂಪಾಗಿದೆ. ಹಾಗೆಂದಮಾತ್ರಕ್ಕೆ ಮೊಬೈಲ್ ನೀಡುವ ಮನರಂಜನೆ ಹಾಡು ಕೇಳಿಸುವುದಕ್ಕಷ್ಟೇ ಸೀಮಿತವೇನೂ ಆಗಿಲ್ಲ. ಇಂದಿನ ಫೋನುಗಳಲ್ಲಿ ಅತ್ಯಾಧುನಿಕ ಆಟಗಳನ್ನು ಆಡುವುದು ಸಾಧ್ಯ. ಇಂತಹ ಆಟಗಳು ಫೋನಿನಲ್ಲಿರುವ ವಿವಿಧ ಸೆನ್ಸರುಗಳನ್ನು ಬಳಸುವುದರಿಂದ ಫೋನನ್ನು ಆಚೀಚೆ ತಿರುಗಿಸುವಷ್ಟರಿಂದಲೇ ಆಟದ ನಿಯಂತ್ರಣಗಳೆಲ್ಲ ನಮ್ಮ ಕೈವಶವಾಗಿಬಿಡುತ್ತವೆ; ಅಂದರೆ ಕಾರ್ ರೇಸಿನ ಆಟದಲ್ಲಿ ನಮ್ಮ ಮೊಬೈಲನ್ನೇ ಸ್ಟೀರಿಂಗ್ ಚಕ್ರವಾಗಿ ಬಳಸುವುದು ಸಾಧ್ಯವಾಗುತ್ತದೆ. ಇನ್ನು ಮೊಬೈಲಿನಲ್ಲಿ ಅತಿವೇಗದ ಅಂತರಜಾಲ ಸಂಪರ್ಕ (೩ಜಿ, ೪ಜಿ ಇತ್ಯಾದಿ) ಸಿಗುತ್ತಿರುವುದರಿಂದ ಟೀವಿ ಕಾರ್ಯಕ್ರಮ, ಸಿನಿಮಾ ಇತ್ಯಾದಿಗಳನ್ನು ನೋಡುವುದಕ್ಕೂ ನಾವು ಮೊಬೈಲನ್ನೇ ಬಳಸುವುದು ಸಾಧ್ಯವಾಗಿದೆ. ಅತ್ಯುತ್ತಮ ಸ್ಪಷ್ಟತೆಯ ಮೊಬೈಲ್ ಪರದೆಯ ಮೇಲೆ ಉತ್ತಮ ಗುಣಮಟ್ಟದ ವೀಡಿಯೋ ಮೂಡಿಬಂದಿತೆಂದರೆ ನಾವು ಕುಳಿತ ಜಾಗವೇ ದಿವಾನಖಾನೆಯಾಗುತ್ತದೆ, ಮೊಬೈಲೇ ಟೀವಿಯಾಗುತ್ತದೆ!
ಮುಂದಿನ ವಾರ: ಮಾಹಿತಿಯ ಮಹಾಮಳಿಗೆ | ಈವರೆಗಿನ ಮುಖಗಳು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ