ಶುಕ್ರವಾರ, ಏಪ್ರಿಲ್ 26, 2013

ಮೊಬೈಲ್‌ನಲ್ಲಿ ಫೋಟೋ ಮೇಕಪ್


ಟಿ. ಜಿ. ಶ್ರೀನಿಧಿ


ಡಿಜಿಟಲ್ ಕ್ಯಾಮೆರಾಗಳ ಆವಿಷ್ಕಾರ ಫಿಲಂ ಕ್ಯಾಮೆರಾಗಳ ಕಾಲದಲ್ಲಿದ್ದ ಹಲವು ಅಭ್ಯಾಸಗಳನ್ನು ಬದಲಿಸಿತು. ಡೆವೆಲಪ್ ಮಾಡಿಸುವುದು, ಪ್ರಿಂಟು ಹಾಕಿಸುವುದು ಮೊದಲಾದ ತಾಪತ್ರಯಗಳನ್ನು ದೂರಮಾಡಿದ್ದು ಇದೇ ಡಿಜಿಟಲ್ ತಂತ್ರಜ್ಞಾನ ತಾನೆ!

ಆದರೆ ಡಿಜಿಟಲ್ ಕ್ಯಾಮೆರಾಗಳನ್ನೂ ಒಂದಷ್ಟು ಕಾಲ ಬಳಸಿದ ಮೇಲೆ ಅದರ ಜೊತೆಗೆ ಬಂದ ಕೆಲ ಅಭ್ಯಾಸಗಳೂ ತಾಪತ್ರಯ ಎನಿಸಲು ಶುರುವಾಯಿತು. ಫೋಟೋ ಕ್ಲಿಕ್ಕಿಸಿದ ತಕ್ಷಣ ಕ್ಯಾಮೆರಾದ ಪುಟಾಣಿ ಪರದೆಯಲ್ಲಿ ಕಾಣಿಸುತ್ತದೇನೋ ಸರಿ, ಆದರೆ ಚಿತ್ರವನ್ನು ಪೂರ್ಣಗಾತ್ರದಲ್ಲಿ ನೋಡಲು - ಅಗತ್ಯ ಬದಲಾವಣೆಗಳನ್ನು ಮಾಡಲು ಕಂಪ್ಯೂಟರಿಗೆ ವರ್ಗಾಯಿಸಲೇಬೇಕು. ನಾವು ಹೋದಕಡೆ ಕಂಪ್ಯೂಟರ್-ಇಂಟರ್‌ನೆಟ್ ಇತ್ಯಾದಿಗಳೆಲ್ಲ ಇಲ್ಲದಿದ್ದರೆ? ನಾವು ತೆಗೆದ ಚಿತ್ರಗಳನ್ನೆಲ್ಲ ಮಿತ್ರವೃಂದಕ್ಕೆ ತೋರಿಸಲು ಫೇಸ್‌ಬುಕ್ಕಿಗೋ ಇನ್ನಾವುದೋ ತಾಣಕ್ಕೋ ಸೇರಿಸುವುದು ಹೇಗೆ?

ಈ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿರುವುದು ಕ್ಯಾಮೆರಾ ಫೋನುಗಳ ಹೆಚ್ಚುಗಾರಿಕೆ. ಈಗಂತೂ ದೊಡ್ಡದೊಂದು ಕ್ಯಾಮೆರಾ ಹಿಡಿದುಕೊಂಡು ಓಡಾಡುವವರು ಕ್ಲಿಕ್ಕಿಸುವಂತಹುದೇ ಚಿತ್ರಗಳನ್ನು ಜೇಬಿನಲ್ಲಿ ಮೊಬೈಲ್ ಫೋನ್ ಇಟ್ಟುಕೊಂಡವರೂ ಕ್ಲಿಕ್ಕಿಸುವುದು ಸಾಧ್ಯವಾಗಿದೆ.

ಕ್ಯಾಮೆರಾ ಫೋನುಗಳಲ್ಲಿ ಇನ್ನೂ ಒಂದು ವೈಶಿಷ್ಟ್ಯವಿದೆ: ಫೋಟೋ ಕ್ಲಿಕ್ಕಿಸಿದ ನಂತರ ಅದನ್ನು ಬೇರೆಯವರೊಡನೆ ಹಂಚಿಕೊಳ್ಳಲು ಕಂಪ್ಯೂಟರಿನತ್ತ ಮುಖಮಾಡುವುದನ್ನೇ ಅವು ತಪ್ಪಿಸುತ್ತವೆ.

ಶುಕ್ರವಾರ, ಏಪ್ರಿಲ್ 19, 2013

ಅಂತರಜಾಲದ ಅಂಚೆವ್ಯವಸ್ಥೆ


ಟಿ. ಜಿ. ಶ್ರೀನಿಧಿ

ನೂರು ಮನೆಗಳಿರುವ ಒಂದು ಊರಿದೆ ಎಂದುಕೊಳ್ಳೋಣ. ಬಹಳ ಕಾಲದಿಂದಲೂ ಅಲ್ಲಿರುವ ಮನೆಗಳ ಸಂಖ್ಯೆ ಅಷ್ಟೇ ಇರುವುದರಿಂದ ಊರಿನ ಎಲ್ಲ ವ್ಯವಸ್ಥೆಗಳೂ ನೂರು ಮನೆಗಳಿಗಷ್ಟೆ ಸರಿಯಾಗಿ ಕೆಲಸಮಾಡುವಂತೆ ರೂಪುಗೊಂಡುಬಿಟ್ಟಿವೆ. ನೂರು ಮನೆಗಳಿಗೆ ಸಾಲುವಷ್ಟು ನೀರು-ವಿದ್ಯುತ್ ಪೂರೈಕೆ, ನೂರು ಮನೆಗಳಿಗೆ ಬೇಕಾದಷ್ಟು ಅಂಗಡಿಗಳು, ನೂರು ಮನೆಗಳನ್ನಷ್ಟೆ ನಿಭಾಯಿಸಲು ಶಕ್ತವಾದ ಅಂಚೆ ವ್ಯವಸ್ಥೆ, ನೂರೇ ನೂರು ದೂರವಾಣಿ ಸಂಪರ್ಕ; ಯಾರಿಗೂ ಯಾವುದರಲ್ಲೂ ಕೊರತೆಯಿಲ್ಲ.

ಊರಿನಲ್ಲಿ ವ್ಯವಸ್ಥೆ ಇಷ್ಟೆಲ್ಲ ಸಮರ್ಪಕವಾಗಿದೆ ಎನ್ನುವ ಸುದ್ದಿ ಕೇಳಿದ ಅನೇಕ ಜನರು ಆ ಊರಿನತ್ತ ಆಕರ್ಷಿತರಾದರು. ಪರಿಣಾಮವಾಗಿ ಅಲ್ಲಿನ ರಿಯಲ್ ಎಸ್ಟೇಟ್ ಉದ್ದಿಮೆ ದೊಡ್ಡದಾಗಿ ಬೆಳೆಯಿತು. ದೊಡ್ಡ ಸಂಖ್ಯೆಯಲ್ಲಿ ಹೊಸ ಮನೆಗಳು, ಅಪಾರ್ಟ್‌ಮೆಂಟುಗಳೆಲ್ಲ ಸೃಷ್ಟಿಯಾದವು. ಒಂದೊಂದಾಗಿ ಹೊಸ ಕುಟುಂಬಗಳೂ ಆ ಮನೆಗಳಿಗೆ ಬಂದು ಸೇರಿಕೊಂಡವು.

ಮೂಲ ಊರಿನ ಸುತ್ತ ಬೇಕಾದಷ್ಟು ಜಾಗವೇನೋ ಇತ್ತು, ರಿಯಲ್ ಎಸ್ಟೇಟ್ ಉದ್ಯಮಿಗಳು ಅಲ್ಲೆಲ್ಲ ಮನೆ ಕಟ್ಟಿ ಮಾರಿಬಿಟ್ಟರು. ಆದರೆ ಅಷ್ಟೆಲ್ಲ ಸಂಖ್ಯೆಯ ಹೊಸ ಮನೆಗಳಿಗೆ ನೀರು-ವಿದ್ಯುತ್-ದೂರವಾಣಿ ಸಂಪರ್ಕಗಳನ್ನು ಕೊಡುವಷ್ಟು ಸಾಮರ್ಥ್ಯ ಅಲ್ಲಿನ ವ್ಯವಸ್ಥೆಗೆ ಇಲ್ಲ; ಬೇರೆಲ್ಲ ಹೋಗಲಿ ಎಂದರೆ ಹೊಸ ಮನೆಗಳವರ ಅಗತ್ಯಗಳನ್ನು ಪೂರೈಸುವಷ್ಟು ಸಾಮರ್ಥ್ಯವೂ ಊರಿನ ಅಂಗಡಿಗಳಿಗಿಲ್ಲ.

ನೂರು ಮನೆಗಳಿದ್ದಾಗ ಯಾವ ಕೊರತೆಯೂ ಇಲ್ಲದ ಊರು ಅತಿ ಶೀಘ್ರದಲ್ಲೇ ಸಮಸ್ಯೆಗಳ ಆಗರವಾಗುವುದು ಎಷ್ಟು ಸುಲಭ ಅಲ್ಲವೆ? ಸ್ವಲ್ಪ ಹೆಚ್ಚೂಕಡಿಮೆಯಾದರೆ ನಮ್ಮ ಅಂತರಜಾಲವೂ ಇಂತಹುದೇ ಪರಿಸ್ಥಿತಿಯತ್ತ ಹೋಗಬಹುದು ಎಂದು ತಜ್ಞರು ಹೇಳುತ್ತಾರೆ.

ಸೋಮವಾರ, ಏಪ್ರಿಲ್ 15, 2013

ಮಾತು ಮಾತುಗಳನು ದಾಟಿ...

ಟಿ. ಜಿ. ಶ್ರೀನಿಧಿ

ಕಳೆದ ಕೆಲ ದಶಕಗಳಲ್ಲಿ ನಮ್ಮ ಬದುಕನ್ನು ತೀರಾ ಗಣನೀಯವಾಗಿ ಬದಲಿಸಿರುವ ವಸ್ತುಗಳಲ್ಲಿ ಮೊಬೈಲ್ ದೂರವಾಣಿಯದು ಪ್ರಮುಖ ಸ್ಥಾನ. ಬಹಳ ಕಡಿಮೆ ಸಮಯದಲ್ಲಿ ಅಪಾರ ಜನಪ್ರಿಯತೆ ಗಳಿಸಿದ ಹೆಚ್ಚುಗಾರಿಕೆ ಈ ಮೊಬೈಲ್ ಫೋನಿನದು.

ಮೊಬೈಲ್ ದೂರವಾಣಿಯ ಕಲ್ಪನೆ ಸುಮಾರು ಐವತ್ತು-ಅರವತ್ತು ವರ್ಷಗಳಷ್ಟು ಹಳೆಯದು. ಸಾಮಾನ್ಯ ದೂರವಾಣಿ, ಅಂದರೆ ಲ್ಯಾಂಡ್‌ಲೈನ್, ಆ ವೇಳೆಗಾಗಲೇ ಸಾಕಷ್ಟು ವ್ಯಾಪಕವಾಗಿ ಬಳಕೆಯಾಗುತ್ತಿತ್ತು; ರೇಡಿಯೋ ಕಲ್ಪನೆ ಕೂಡ ಸುಮಾರು ಹಳೆಯದಾಗಿತ್ತು. ಒಬ್ಬರ ಮಾತನ್ನು ಇನ್ನೊಬ್ಬರಿಗೆ ತಲುಪಿಸುವ ಸಾಮಾನ್ಯ ಫೋನು ತಂತಿಗಳ ನೆರವಿಲ್ಲದೆ, ಅಂದರೆ ರೇಡಿಯೋ ರೀತಿಯಲ್ಲಿ, ಕೆಲಸ ಮಾಡಿದರೆ ಎಷ್ಟೊಂದು ಅನುಕೂಲ ಎನ್ನುವ ಯೋಚನೆ ಮೊಬೈಲ್ ದೂರವಾಣಿಯ ಸೃಷ್ಟಿಗೆ ಕಾರಣವಾಯಿತು.

ಆದರೆ ಅವತ್ತಿನ ಮೊಬೈಲ್ ತಂತ್ರಜ್ಞಾನ ಇವತ್ತಿನಷ್ಟು ಮುಂದುವರೆದಿರಲಿಲ್ಲ. ಮೊಬೈಲ್ ಕರೆಗಳ ದರ ವಿಪರೀತ ಜಾಸ್ತಿಯಿದ್ದದ್ದಷ್ಟೇ ಅಲ್ಲ, ಫೋನುಗಳೂ ತೀರಾ ದೊಡ್ಡದಾಗಿದ್ದವು. ಅವುಗಳ ಗಾತ್ರ ಎಷ್ಟು ದೊಡ್ಡದಿತ್ತೆಂದರೆ ಮೊದಮೊದಲು ಬಂದ ಮೊಬೈಲ್ ಫೋನುಗಳನ್ನು ಕಾರುಗಳಲ್ಲಷ್ಟೇ ಇಟ್ಟುಕೊಳ್ಳಲು ಸಾಧ್ಯವಿತ್ತು.

ಇದನ್ನೆಲ್ಲ ನೋಡುತ್ತಿದ್ದ ಮಾರ್ಟಿನ್ ಕೂಪರ್ ಎಂಬ ತಂತ್ರಜ್ಞರಿಗೆ ಒಂದು ಯೋಚನೆ ಬಂತು; ದೂರವಾಣಿಯನ್ನು ಒಂದು ಮನೆಗೆ, ಕಚೇರಿಗೆ ಅಥವಾ ಈಗ ವಾಹನಕ್ಕೆ ಸೀಮಿತಗೊಳಿಸಿಬಿಟ್ಟಿದ್ದೇವಲ್ಲ, ಅದರ ಬದಲು ದೂರವಾಣಿಗಿರುವ ಭೌಗೋಳಿಕ ಮಿತಿಯನ್ನು ಸಂಪೂರ್ಣವಾಗಿ ಹೋಗಲಾಡಿಸಿ ಒಬ್ಬ ವ್ಯಕ್ತಿಗೆ ಒಂದು ದೂರವಾಣಿ ಸಂಖ್ಯೆ ಕೊಡುವಂತಿದ್ದರೆ ಹೇಗೆ?

ಮಂಗಳವಾರ, ಏಪ್ರಿಲ್ 9, 2013

ತಿರುಗಿ ನೋಡುವ ಸಮಯ

ಉದಯವಾಣಿಯ 'ಜೋಶ್' ಪುರವಣಿಯಲ್ಲಿ ಕಳೆದ ೧೨೨ ವಾರಗಳಿಂದ ಪ್ರಕಟವಾಗುತ್ತಿದ್ದ 'ವಿಜ್ಞಾಪನೆ' ಅಂಕಣ ಇಂದಿನ ಲೇಖನದೊಡನೆ ಮುಕ್ತಾಯವಾಗುತ್ತಿದೆ. ಈ ಅಂಕಣವನ್ನು ಮೆಚ್ಚಿಕೊಂಡು ಪ್ರೋತ್ಸಾಹಿಸಿದ ಎಲ್ಲ ಓದುಗರಿಗೂ ಉದಯವಾಣಿಯ ಸಂಪಾದಕವರ್ಗಕ್ಕೂ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಉದಯವಾಣಿ ಮಂಗಳೂರು ಆವೃತ್ತಿಯ 'ಯುವ ಸಂಪದ'ದಲ್ಲಿ ಪ್ರಕಟವಾಗುತ್ತಿರುವ ಅಂಕಣ 'ಸ್ವ-ತಂತ್ರ' ಸದ್ಯಕ್ಕೆ ಹಾಗೆಯೇ ಮುಂದುವರೆಯುತ್ತದೆ. ಇತರ ಹೊಸ ಬರಹಗಳು ಇಜ್ಞಾನ ಡಾಟ್ ಕಾಮ್‌ನಲ್ಲಿ ಎಂದಿನಂತೆ ಪ್ರಕಟವಾಗುತ್ತವೆ.
ಟಿ. ಜಿ. ಶ್ರೀನಿಧಿ

"ಈಗ ನಾವಿದ್ದೇವಲ್ಲ ಪರಿಸ್ಥಿತಿ, ತಂತ್ರಜ್ಞಾನ ಈಗಲೇ ಎಷ್ಟೊಂದು ಬೆಳೆದುಬಿಟ್ಟಿದೆ! ಮುಂದೆಯೂ ಹೀಗೆಯೇ ಬೆಳೆಯುತ್ತ ಹೋದರೆ ಏನು ಗತಿ?" ಎಂಬಂತಹ ಮಾತುಗಳು ನಾಗರೀಕತೆಯ ಪ್ರತಿಯೊಂದು ಹಂತದಲ್ಲೂ ಕೇಳಿಬಂದಿವೆ. ಕಳೆದೊಂದು ಶತಮಾನದಲ್ಲಂತೂ ಮಾಹಿತಿ ತಂತ್ರಜ್ಞಾನ ಬೆಳೆಯುತ್ತಹೋದಂತೆ ನಮ್ಮ ಸುತ್ತಲೂ ಸೃಷ್ಟಿಯಾಗುತ್ತಿರುವ ಮಾಹಿತಿಯ ಮಹಾಪೂರದ ಬಗ್ಗೆ ಕಾಳಜಿ ವ್ಯಕ್ತವಾಗುತ್ತಲೇ ಇದೆ.

೧೯೭೧ರಲ್ಲಿ ಪ್ರಕಟವಾದ ಲೇಖನವೊಂದು ಈಗಾಗಲೇ ನಮ್ಮಲ್ಲಿ ಐದಾರು ಟೀವಿ ಚಾನೆಲ್ಲುಗಳಿವೆ, ಇದು ಹೀಗೆಯೇ ಬೆಳೆಯುತ್ತ ಹೋಗಿ ಮುಂದೆ ನೂರಾರು ಚಾನೆಲ್ಲುಗಳಾದರೆ ಏನು ಗತಿ? ಎಂದು ಆತಂಕ ವ್ಯಕ್ತಪಡಿಸಿತ್ತಂತೆ. ತಮಾಷೆಯ ವಿಷಯವೆಂದರೆ, ಕೆಲವೇ ದಶಕಗಳ ನಂತರ, ಈಗ ನೂರಾರು ಚಾನೆಲ್ಲುಗಳು ಇರುವುದಷ್ಟೇ ಅಲ್ಲ, ನಮಗೆ ಅದು ವಿಶೇಷ ಎನಿಸುತ್ತಲೂ ಇಲ್ಲ!

ಬೇರೆಯವರ ವಿಷಯವೆಲ್ಲ ಏಕೆ, ಕಂಪ್ಯೂಟರ್ ವಿಜ್ಞಾನದ ಆದ್ಯ ತಜ್ಞರಲ್ಲೊಬ್ಬರಾದ ಅಲನ್ ಟ್ಯೂರಿಂಗ್ ಕೂಡ ೧೯೫೦ರಲ್ಲಿ ಇಂತಹುದೇ ಒಂದು ಮಾತು ಹೇಳಿದ್ದರಂತೆ. ಮುಂದಿನ ಐವತ್ತು ವರ್ಷಗಳಲ್ಲಿ ಕಂಪ್ಯೂಟರಿನ ಮೆಮೊರಿ ನೂರು ಕೋಟಿ ಬಿಟ್‌ಗಳನ್ನು ಉಳಿಸಿಕೊಳ್ಳುವ ಮಟ್ಟಕ್ಕೆ ಬೆಳೆಯಲಿದೆ ಎನ್ನುವುದು ಅವರ ಮಾತಿನ ಸಾರಾಂಶವಾಗಿತ್ತು. ನೂರು ಕೋಟಿ ಎನ್ನುವ ಸಂಖ್ಯೆ ಬಹಳ ದೊಡ್ಡದೇ, ನಿಜ. ಆದರೆ ಅದು ೧೨೮ ಎಂಬಿಗಿಂತ ಕೊಂಚ ಕಡಿಮೆಯೇ ಎನ್ನುವುದನ್ನು ಗಮನಿಸಿದಾಗ ಕಳೆದ ಐವತ್ತು-ಅರವತ್ತು ವರ್ಷಗಳಲ್ಲಿ ತಂತ್ರಜ್ಞಾನ ಹೇಗೆ ಬೆಳೆದಿದೆ ಎನ್ನುವುದು ನಮ್ಮ ಗಮನಕ್ಕೆ ಬರುತ್ತದೆ. ೧೨೮ಎಂಬಿ ಎಲ್ಲಿ, ಇಂದಿನ ಟೆರಾಬೈಟುಗಳೆಲ್ಲಿ!

ನಮ್ಮ ಸುತ್ತ ಇರುವ ಮಾಹಿತಿಯ ಪ್ರಮಾಣ ಹಾಗೂ ಕಂಪ್ಯೂಟರ್ ಮೆಮೊರಿಯ ಮಾತೆಲ್ಲ ಹಾಗಿರಲಿ. ಇದೆಲ್ಲದರ ಬೆಳವಣಿಗೆಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಕಾರಣವಾಗಿರುವುದು ಸಂಸ್ಕರಣಾ ಸಾಮರ್ಥ್ಯ, ಅಂದರೆ ಪ್ರಾಸೆಸಿಂಗ್ ಪವರ್ ಬೆಳೆದಿರುವ ರೀತಿ. ಬಹಳ ಹಿಂದಿನ ಮಾತೆಲ್ಲ ಏಕೆ, ಈ ಶತಮಾನದ ಪ್ರಾರಂಭದಲ್ಲೂ ಇನ್ನೂರು-ಮುನ್ನೂರು ಮೆಗಾಹರ್ಟ್ಸ್ ಆಸುಪಾಸಿನಲ್ಲೇ ಇದ್ದ ಪ್ರಾಸೆಸರ್ ಸಾಮರ್ಥ್ಯ ಗಿಗಾಹರ್ಟ್ಸ್‌ಗಳನ್ನು ದಾಟಿ ಅದೆಷ್ಟೋ ಕಾಲವಾಗಿದೆ. ಒಂದರ ಜಾಗದಲ್ಲಿ ಪ್ರಾಸೆಸರ್ ಒಳಗೆ ನಾಲ್ಕು ತಿರುಳುಗಳು (ಕ್ವಾಡ್-ಕೋರ್) ಬಂದು ಕುಳಿತುಬಿಟ್ಟಿವೆ!

ಕಂಪ್ಯೂಟರ್ ತಂತ್ರಜ್ಞಾನ ಈ ಪರಿಯ ಬೆಳವಣಿಗೆ ಕಾಣಲಿದೆ ಎಂದು ಬಹಳ ಹಿಂದೆಯೇ ಅನೇಕರು ಸರಿಯಾಗಿ ಊಹಿಸಿದ್ದರು.

ಶುಕ್ರವಾರ, ಏಪ್ರಿಲ್ 5, 2013

ಇಂಟರ್‌ನೆಟ್ ಲೋಕದ ಟ್ರಾಫಿಕ್ ಜಾಮ್


ಟಿ. ಜಿ. ಶ್ರೀನಿಧಿ

ನಮ್ಮ ಬೆಂಗಳೂರಿನ ಟ್ರಾಫಿಕ್ ಜಾಮ್‌ಗಳ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಐಬಿಎಂ ಗ್ಲೋಬಲ್ ಕಮ್ಯೂಟರ್ ಪೇನ್ ಸರ್ವೆ ಪ್ರಕಾರ ದಿನನಿತ್ಯದ ಪ್ರಯಾಣಿಕರು ಅತ್ಯಂತ ಹೆಚ್ಚು ಕಿರಿಕಿರಿ ಅನುಭವಿಸುವ ಪ್ರಪಂಚದ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೂ ಸ್ಥಾನವಿದೆಯಂತೆ.

ಇದೇ ಬೆಂಗಳೂರು ಮಾಹಿತಿ ತಂತ್ರಜ್ಞಾನದ ತವರೂ ಹೌದು. ಇಲ್ಲಿನ ಪುಟ್ಟ ಮಕ್ಕಳೂ ಬಹುಶಃ ಡಾಟ್ ಕಾಮ್ ಭಾಷೆಯನ್ನೇ ಮಾತನಾಡುತ್ತಾರೇನೋ! ಕುತೂಹಲದ ಸಂಗತಿಯೆಂದರೆ ಬೆಂಗಳೂರು ಅಥವಾ ಇನ್ನಾವುದೇ ನಗರದಲ್ಲಿರುವಂತೆ ಅಂತರಜಾಲದ ಲೋಕದಲ್ಲೂ ರಸ್ತೆಗಳಿವೆ; ಅಡ್ಡರಸ್ತೆ-ಮುಖ್ಯರಸ್ತೆ-ರೋಡ್‌ಹಂಪು-ಪಾಟ್‌ಹೋಲು ಎಲ್ಲವೂ ಆನ್‌ಲೈನ್ ಲೋಕದಲ್ಲೂ ಇವೆ. ಆಟೋ ಕಾರು ಬಸ್ಸು ಲಾರಿಗಳ ಬದಲಿಗೆ ಅಲ್ಲಿ ಮಾಹಿತಿ ಹರಿದಾಡುತ್ತದೆ ಎನ್ನುವುದೊಂದೇ ವ್ಯತ್ಯಾಸ ಅಷ್ಟೆ. ಹೀಗಾಗಿಯೇ ಇದನ್ನು 'ಇನ್‌ಫರ್ಮೇಶನ್ ಸೂಪರ್‌ಹೈವೇ' ಎಂದು ಕರೆಯಲಾಗುತ್ತದೆ.

ಕಚೇರಿಗೆ ಹೋಗುವ ಧಾವಂತದಲ್ಲಿ ಹೆಚ್ಚುಹೆಚ್ಚು ಕಾರು-ಬಸ್ಸು-ಬೈಕುಗಳು ರಸ್ತೆಗಿಳಿದಾಗ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗುತ್ತದಲ್ಲ, ಆನ್‌ಲೈನ್ ಪ್ರಪಂಚದಲ್ಲೂ ರಸ್ತೆಗಳಿವೆ ಎನ್ನುವುದಾದರೆ ಅಲ್ಲೂ ಟ್ರಾಫಿಕ್ ಜಾಮ್ ಆಗುವುದು ಸಾಧ್ಯವೆ?

ಗುರುವಾರ, ಏಪ್ರಿಲ್ 4, 2013

ಕಂಪ್ಯೂಟರ್ ಪ್ರಪಂಚ

ಟಿ. ಜಿ. ಶ್ರೀನಿಧಿಯವರ ಹೊಸ ಪುಸ್ತಕ 'ಕಂಪ್ಯೂಟರ್ ಪ್ರಪಂಚ' ನವಕರ್ನಾಟಕ ಪ್ರಕಾಶನದ ಮೂಲಕ ಇದೀಗ ಮಾರುಕಟ್ಟೆಗೆ ಬಂದಿದೆ. 

ಈ ಪುಸ್ತಕದಲ್ಲಿ ಏನಿದೆ? ಹಿರಿಯ ವಿಜ್ಞಾನ ಲೇಖಕ ಶ್ರೀ ಟಿ. ಆರ್. ಅನಂತರಾಮುರವರು ಬರೆದಿರುವ ಮುನ್ನುಡಿಯ ಕೆಲ ಸಾಲುಗಳು ಇಲ್ಲಿವೆ:

"ಕಂಪ್ಯೂಟರ್ ಚರಿತ್ರೆಯಿಂದ ತೊಡಗಿ ಕ್ಯೂಆರ್ ಕೋಡ್‌ವರೆಗೆ ವಿಸ್ತರಿಸಿರುವ `ಕಂಪ್ಯೂಟರ್ ಪ್ರಪಂಚ' ಕಲಿಯಲು ಪ್ರೇರೇಪಿಸುವ ಹೊಸ ಮಾರ್ಗವೊಂದನ್ನು ಅನಾವರಣಗೊಳಿಸಿದೆ. ಬ್ಲಾಗ್ ತೆರೆಯಬೇಕೆ? ಇಮೇಲ್ ಮಾಡಬೇಕೆ? ಇಂಟರ್‌ನೆಟ್ ಬಗ್ಗೆ ಇಣುಕು ನೋಟಬೇಕೆ? ಕುರ್ಚಿಯಲ್ಲಿ ಅಲ್ಲಾಡದೆ ಕುಳಿತು ಕಂಪ್ಯೂಟರ್ ಪ್ರಪಂಚದಲ್ಲಿ ವಿಹರಿಸಲು ನೆರವಾಗುವ ಆತ್ಮೀಯ ಧಾಟಿಯಲ್ಲಿ ನಿಮಗೆ ಇನ್‌ಸ್ಟ್ರಕ್ಷನ್ಸ್‌ಗಳನ್ನು ಕೊಡುವ ಕೃತಿ `ಕಂಪ್ಯೂಟರ್ ಪ್ರಪಂಚ'.

ಖುಷಿಕೊಡುವ ಒಂದು ವಿಚಾರ - ಅನೇಕ ಅಧ್ಯಾಯಗಳಲ್ಲಿ ನಿಮಗೆ ಟಿಪ್ಸ್‌ಗಳಿವೆ. ವಿಶೇಷ ಮಾಹಿತಿಗಳಿವೆ. ಮೌಸ್ ಜನ್ಮತಾಳಿದ್ದು ಯಾವ ಘಳಿಗೆಯಲ್ಲಿ? ಕವಿ ಬೈರನ್ ಮಗಳು - ಅಡ, ಮೊದಲ ಕಂಪ್ಯೂಟರ್ ಪ್ರೋಗ್ರಾಮರ್ ಆದದ್ದು, ಮಾರ್ಕ್ ೨ ಕಂಪ್ಯೂಟರ್ ಪರೀಕ್ಷೆಯಲ್ಲಿ ನಿಜವಾದ ಮೊದಲ ಜೀವಂತ ಬಗ್ ಕಂಡದ್ದು; ಇಂಥ ಅಪರೂಪದ ಕುತೂಹಲಕಾರಿ ಮಾಹಿತಿಗಳಿವೆ."

ದೊಡ್ಡ ಗಾತ್ರದ (೧/೪ ಕ್ರೌನ್) ೧೧೨ ಪುಟಗಳಿರುವ ಈ ಪುಸ್ತಕದ ಬೆಲೆ ರೂ. ೧೨೦.

ಮಂಗಳವಾರ, ಏಪ್ರಿಲ್ 2, 2013

ಸ್ಪಾಮ್ ಅಲ್ಲ, ಇದು ಬೇಕನ್!


ಟಿ. ಜಿ. ಶ್ರೀನಿಧಿ

ಸ್ಪಾಮ್ ಬಗ್ಗೆ ಎಲ್ಲರಿಗೂ ಗೊತ್ತು. ಬೇಡದ ಮಾಹಿತಿಯ ಕಸವನ್ನು ಅನುಮತಿಯಿಲ್ಲದೆ ನಮ್ಮ ಇಮೇಲ್ ಖಾತೆಯೊಳಗೆ ತಂದು ಸುರಿಯುವ ಈ ಕೆಟ್ಟ ಅಭ್ಯಾಸದ ವಿರುದ್ಧ ಇಡೀ ಅಂತರಜಾಲವೇ ಹೋರಾಡುತ್ತಿದೆ ಎಂದರೂ ಸರಿಯೇ. ಸ್ಪಾಮ್ ಸಂದೇಶಗಳನ್ನು ಎಡೆಬಿಡದೆ ಕಳುಹಿಸುವ ಬಾಟ್‌ನೆಟ್‌ಗಳನ್ನು ಹುಡುಕಿ ಮಟ್ಟಹಾಕುವ ಹಾಗೂ ಆ ಬಾಟ್‌ನೆಟ್‌ಗಳು ರಕ್ತಬೀಜಾಸುರರಂತೆ ಮತ್ತೆ ತಲೆಯೆತ್ತುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.

ಹೀಗಿರುವಾಗ ಇಮೇಲ್ ಲೋಕಕ್ಕೆ ಹೊಸದೊಂದು ಉಪದ್ರವದ ಪ್ರವೇಶವಾಗಿದೆ. ಅತ್ತ ಸ್ಪಾಮ್‌ನಂತೆ ಸಂಪೂರ್ಣ ಅನಪೇಕ್ಷಿತವೂ ಅಲ್ಲದ, ಇತ್ತ ನಾವು ನಿರೀಕ್ಷಿಸುವ ಉಪಯುಕ್ತ ಸಂದೇಶವೂ ಅಲ್ಲದ ಹೊಸಬಗೆಯ ಈ ತಾಪತ್ರಯ ಈಗಾಗಲೇ ಅನೇಕ ಬಳಕೆದಾರರಿಗೆ ಕಿರಿಕಿರಿಮಾಡುತ್ತಿದೆ.

ಇದಕ್ಕೆ ತಜ್ಞರು ಇಟ್ಟಿರುವ ಹೆಸರು ಬೇಕನ್. ಇಂಗ್ಲಿಷಿನಲ್ಲಿ 'ಬಾಡಿಸಿದ ಅಥವಾ ಉಪ್ಪುಹಚ್ಚಿದ ಹಂದಿಯ ಮಾಂಸ' ಎಂದು ಅರ್ಥಕೊಡುವ ಈ ಪದವೇ ಇಮೇಲ್ ಪೆಟ್ಟಿಗೆಯ ಈ ತಾಪತ್ರಯಕ್ಕೆ ನಾಮಕಾರಣವಾಗಿದೆ; ಮೂಲದಿಂದ ಪ್ರತ್ಯೇಕವಾಗಿ ಗುರುತಿಸಲೋ ಏನೋ ಈ ಹೊಸ ಹೆಸರಿನ ಸ್ಪೆಲಿಂಗ್ ಮಾತ್ರ ಕೊಂಚ ಬದಲಾಗಿ bacon ಬದಲು bacn ಆಗಿದೆ ಅಷ್ಟೆ.

ಸ್ಪಾಮ್ ಅಂದರೇನು ಎನ್ನುವುದು ನಮಗೆಲ್ಲ ಗೊತ್ತು. ಯಾವುದೋ ವಿಷಯ ಕುರಿತ ಜಾಹೀರಾತು, ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ನೆರವಾಗುವ ಆಮಿಷ, ಮೋಸದ ಗಾಳ - ಹೀಗೆ ಅಪಾರ ವಿಷಯ ವೈವಿಧ್ಯ ಇಂತಹ ಸಂದೇಶಗಳಲ್ಲಿರುತ್ತದೆ. ಆದರೆ ಈ ಬೇಕನ್ ಅಂದರೇನು?
badge