ಶುಕ್ರವಾರ, ಆಗಸ್ಟ್ 29, 2014

ಉದಯಶಂಕರ ಪುರಾಣಿಕ ಹೇಳುತ್ತಾರೆ... "ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಅನುಭವವಿರುವ ವಿಮರ್ಶಕರ ಕೊರತೆಯಿದೆ"

ತಂತ್ರಜ್ಞಾನ ಕ್ಷೇತ್ರದ ಹೊಸ ಮಾಹಿತಿಯನ್ನು ಕನ್ನಡದ ಲೋಕಕ್ಕೆ ಪರಿಚಯಿಸುತ್ತಿರುವವರಲ್ಲಿ ಶ್ರೀ ಉದಯಶಂಕರ ಪುರಾಣಿಕರದು ಪ್ರಮುಖ ಹೆಸರು. ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಕನ್ನಡಮ್ಮ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಅವರ ಅಂಕಣಗಳು ಬೆಳಕು ಕಂಡಿವೆ. ಮಾಹಿತಿ ತಂತ್ರಜ್ಞಾನ ಕುರಿತ ಅವರ ಹಲವಾರು ಬರಹಗಳು ಅನೇಕ ಸಂಕಲನಗಳಲ್ಲಿ, ವಿಶ್ವಕೋಶಗಳಲ್ಲಿಯೂ ಪ್ರಕಟವಾಗಿವೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ..
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಗಳಿಸಿರುವ ಇಪ್ಪತ್ತನಾಲ್ಕು ವರ್ಷಗಳ ಅನುಭವ, ಹೆಸರಾಂತ ಸಂಸ್ಥೆಗಳು ಮತ್ತು ತಂತ್ರಜ್ಞರ ಜೊತೆ ಕೆಲಸ ಮಾಡಿ ಪಡೆದಿರುವ ಪರಿಣಿತಿಯನ್ನು ಜನಸಾಮಾನ್ಯರೊಂದಿಗೆ ಹಂಚಿಕೊಳ್ಳಲು ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಲು, ಸಂವಹನ ಮಾಧ್ಯಮವನ್ನು ಆರಿಸಿಕೊಂಡಿದ್ದೇನೆ.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಕಾರ್ಲ್ ಸಗಾನ್‍ರವರು ಪುಸ್ತಕ, ಲೇಖನಗಳ ಜೊತೆಯಲ್ಲಿ ಟಿವಿ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿದವರು.

ಗುರುವಾರ, ಆಗಸ್ಟ್ 21, 2014

ಡಾ. ಪಾಲಹಳ್ಳಿ ವಿಶ್ವನಾಥ್ ಹೇಳುತ್ತಾರೆ... "ವಿಜ್ಞಾನ ಸಾಮಾನ್ಯ ಜನತೆಯನ್ನು ಮುಟ್ಟದೇ ಹೋದರೆ ಸಮಾಜದಲ್ಲಿ ಬದಲಾವಣೆಗಳು ಬರುವುದಿಲ್ಲ"

ವಿಜ್ಞಾನಿಗಳು ಸಾಮಾನ್ಯ ಜನರಿಗೋಸ್ಕರ ಬರೆಯುವುದು ಅಪರೂಪ ಎಂಬ ಆಪಾದನೆಗೆ ಅಪವಾದದಂತೆ ನಮಗೆ ಸಿಗುವವರು ಬಹಳ ಕಡಿಮೆ ಜನ. ಅಂತಹವರಲ್ಲೊಬ್ಬರು ಡಾ. ಪಾಲಹಳ್ಳಿ ವಿಶ್ವನಾಥ್. ಮೈಸೂರು ಮತ್ತು ಮಿಶಿಗನ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನಮಾಡಿ ಮುಂಬಯಿಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಿ. ಐ. ಎಫ್. ಆರ್) ಮತ್ತು ಬೆಂಗಳೂರಿನ ಭಾರತೀಯ ಜ್ಯೋತಿರ್ವಿಜ್ಞಾನ ಸಂಸ್ಥೆಯಲ್ಲಿ (ಐ. ಐ. ಎ)  ಸೇವೆಸಲ್ಲಿಸಿರುವ ಡಾ. ವಿಶ್ವನಾಥ್ ಭಾರತ ಮತ್ತು ಅಮೆರಿಕದಲ್ಲಿ ಹಲವಾರು ಭೌತವಿಜ್ಞಾನ ಮತ್ತು ಖಗೋಳ ವಿಜ್ಞಾನದ ಪ್ರಯೋಗಗಳಲ್ಲಿ ಭಾಗಿಯಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಕನ್ನಡದಲ್ಲಿ ವಿಜ್ಞಾನ ಬರವಣಿಗೆಯಲ್ಲಿ ತೊಡಗಿರುವ ಅವರ ಲೇಖನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಭೂಮಿಯಿಂದ ಬಾನಿನತ್ತ', 'ಕಣ ಕಣ ದೇವಕಣ', 'ಖಗೋಳ ವಿಜ್ಞಾನದ ಕಥೆ' ಮೊದಲಾದವು ಅವರ ಪುಸ್ತಕಗಳು. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಸುಮಾರು ೫೦ ವರ್ಷಗಳಷ್ಟು ಸಮಯ ಭೌತ ಮತ್ತು ಖಗೋಳವಿಜ್ಞಾನ ಕ್ಷೇತ್ರದಲ್ಲಿ ಸಂಶೋಧಕನಾಗಿ ಕೆಲಸಮಾಡಿದ್ದೇನೆ. ಮೂಲಭೂತ ವಿಜ್ಞಾನ ಕ್ಷೇತ್ರಗಳಿಗೆ ಹೆಚ್ಚು ವಿದ್ಯಾರ್ಥಿಗಳು ಬರದಿರುವ ಅಂಶವನ್ನು ಗಮನಿಸಿದಾಗ ನನಗೆ ವಿಜ್ಞಾನ ಸಂವಹನದ ಅಗತ್ಯ ಕಂಡುಬಂತು. ಯಾವ ಭಾಷೆಯಲ್ಲಿ ಬರೆಯುವುದು ಎನ್ನುವುದು ಮುಂದಿನ ಪ್ರಶ್ನೆಯಾಯಿತು. ಹೇಗೂ ದೇಶದ ಮಹಾನಗರಗಳಲ್ಲಿ ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನ , ಮ್ಯಾನೇಜ್‌ಮೆಂಟ್ ಇತ್ಯಾದಿ ಕ್ಷೇತ್ರಗಳಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದು, ಮೂಲವಿಜ್ಞಾನವನ್ನು ನಿರ್ಲಕ್ಷಿಸುತ್ತಿದ್ದಾರೆ. ಹಾಗೊಮ್ಮೆ ಆಸಕ್ತಿ ಇದ್ದರೂ ಅವರಿಗೆ ಇಂಗ್ಲಿಷಿನಲ್ಲಿ ಪರಿಣಿತಿಯಿದ್ದು ಆ ಭಾಷೆಯಲ್ಲಿ ಅನೇಕ ಪುಸ್ತಕಗಳಿರುವುದರಿಂದ ಯಾವ ತೊಂದರೆಯೂ ಇಲ್ಲ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ನನಗೆ ಇಂಗ್ಲಿಷಿನಲ್ಲಿ ಬರೆಯುವ ಅವಶ್ಯಕತೆ ಕಂಡುಬರಲಿಲ್ಲ.  ಆದರೆ ಗ್ರಾಮೀಣ ಪ್ರದೇಶಗಳು ಮತ್ತು ಚಿಕ್ಕ ಊರುಗಳ ವಿದ್ಯಾರ್ಥಿಗಳು ಪ್ರಾದೇಶಿಕ ಭಾಷೆಯಲ್ಲೇ‌ ಹೆಚ್ಚು ಸಂಪರ್ಕ ಇಟ್ಟುಕೊಂಡಿದ್ದಾರೆ. ಈ ವಿದ್ಯಾರ್ಥಿಗಳು ತಮ್ಮ ಭಾಷೆಯಲ್ಲೇ ಓದಲು ವಿಜ್ಞಾನದ ಹೆಚ್ಚು ಪುಸ್ತಕಗಳಿಲ್ಲ. ಆದ್ದರಿಂದ ಪ್ರಾದೇಶಿಕ ಭಾಷೆಯಲ್ಲಿ ವಿಜ್ಞಾನ ಸಂವಹನೆಯ ಅವಶ್ಯಕತೆ ಬಹಳವಿದೆ.

ಭಾನುವಾರ, ಆಗಸ್ಟ್ 17, 2014

ವಿಶ್ವ ಛಾಯಾಗ್ರಹಣ ದಿನ ವಿಶೇಷ: ಛಾಯಾಗ್ರಹಣಕ್ಕೆ ೧೭೫ ವರ್ಷ

ಕಂಪ್ಯೂಟರ್ ಕ್ಷೇತ್ರದಲ್ಲಿ ಜನಪ್ರಿಯವಾಗಿರುವ 'ಓಪನ್ ಸೋರ್ಸ್' ಪರಿಕಲ್ಪನೆಯ ರೂಪವೊಂದನ್ನು ೧೭೫ ವರ್ಷಗಳ ಹಿಂದೆಯೇ ಪರಿಚಯಿಸಿದ್ದು ಡಿಗೇರೋಟೈಪ್ ತಂತ್ರಜ್ಞಾನ. ಲೂಯಿ ಡಿಗೇರ್ ರೂಪಿಸಿದ ಈ ತಂತ್ರಜ್ಞಾನದ ಹಕ್ಕುಸ್ವಾಮ್ಯವನ್ನು ೧೮೩೯ರಲ್ಲಿ ಫ್ರೆಂಚ್ ಸರಕಾರ ಕೊಂಡು ಅದನ್ನು "ಮನುಕುಲಕ್ಕೆ ಕೊಡುಗೆ"ಯಾಗಿ ಸಮರ್ಪಿಸಿದ ದಿನವೇ ಆಗಸ್ಟ್ ೧೯. ಇದೀಗ ವಿಶ್ವ ಛಾಯಾಗ್ರಹಣ ದಿನವೆಂದು ನಾವು ಗುರುತಿಸುವುದು ಇದೇ ದಿನವನ್ನು. ಈ ಸಂದರ್ಭದಲ್ಲಿ ಛಾಯಾಗ್ರಹಣದ ವಿಕಾಸದತ್ತ ಹೀಗೊಂದು ನೋಟ...
ಟಿ. ಜಿ. ಶ್ರೀನಿಧಿ

ಮನುಷ್ಯ ತನ್ನ ಕಣ್ಣಮುಂದಿನ ದೃಶ್ಯವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಉದ್ದೇಶದಿಂದ ಮಾಡದ ಪ್ರಯತ್ನವೇ ಇಲ್ಲ ಎನ್ನಬಹುದೇನೋ. ಶಿಲಾಯುಗದ ರೇಖಾಚಿತ್ರಗಳಿಂದ ಪರಿಣತರ ಕಲಾಕೃತಿಗಳವರೆಗೆ ಅನೇಕ ಸೃಷ್ಟಿಗಳ ಉದ್ದೇಶ ಇದೇ ಆಗಿರುವುದನ್ನು ನಾವು ಗಮನಿಸಬಹುದು.

ಆದರೆ ಇಂತಹ ಪ್ರಯತ್ನಗಳಿಗೆ ಒಂದು ದೊಡ್ಡ ಸಮಸ್ಯೆ ಅಡ್ಡಬರುತ್ತಿತ್ತು - ಕಂಡದ್ದನ್ನು ಕಂಡಂತೆ ಚಿತ್ರಿಸಲು ಎಲ್ಲರಿಗೂ ಬರುವುದಿಲ್ಲ, ಹಾಗೂ ನಮಗೆ ಬಂದಂತೆ ಚಿತ್ರಿಸಿದರೆ ಅದು ನಾವು ಕಂಡದ್ದನ್ನು ನಿಖರವಾಗಿ ಪ್ರತಿನಿಧಿಸುವುದಿಲ್ಲ!

ಹಾಗಾದರೆ ನಾವು ಕಂಡದ್ದನ್ನು ಕಂಡಹಾಗೆಯೇ ದಾಖಲಿಸಿಟ್ಟುಕೊಳ್ಳುವುದು ಹೇಗೆ? ಈ ನಿಟ್ಟಿನಲ್ಲಿ ನಡೆದ ಪ್ರಯತ್ನಗಳು ಒಂದೆರಡಲ್ಲ.

ಇಂತಹ ಪ್ರಯತ್ನಗಳಲ್ಲೊಂದಾದ 'ಕ್ಯಾಮೆರಾ ಅಬ್ಸ್‌ಕ್ಯೂರಾ' (Camera Obscura, ಪಿನ್‌ಹೋಲ್ ಕ್ಯಾಮೆರಾ ಎಂದೂ ಪರಿಚಿತ) ನಮ್ಮ ಎದುರಿನ ದೃಶ್ಯದ ತಲೆಕೆಳಗಾದ ರೂಪವನ್ನು ಪರದೆಯ ಮೇಲೆ ಚಿಕ್ಕದಾಗಿ ಮೂಡಿಸಿ ಚಿತ್ರಕಾರರಿಗೆ ಅದನ್ನು ನಕಲು ಮಾಡಿಕೊಳ್ಳಲು ನೆರವಾಗುತ್ತಿತ್ತು. ಬೇಕಾದ ದೃಶ್ಯವನ್ನು ಕ್ಷಿಪ್ರವಾಗಿ ಬರೆದುಕೊಳ್ಳುವ ಕಲಾವಿದರಿಗೇನೋ ಸರಿ, ಆದರೆ ಚಿತ್ರಬಿಡಿಸಲು ಬಾರದವರಿಗೆ ಇದರಿಂದ ಯಾವ ಉಪಯೋಗವೂ ಆಗುತ್ತಿರಲಿಲ್ಲ.

ಚಿತ್ರಬಿಡಿಸಲು ಬಾರದವರೂ ಈ ತಂತ್ರ ಬಳಸಬೇಕೆಂದರೆ ಪರದೆಯ ಮೇಲೆ ಮೂಡುವ ಚಿತ್ರ ತನ್ನಷ್ಟಕ್ಕೆ ತಾನೇ ಒಂದೆಡೆ ದಾಖಲಾಗುವಂತಿರಬೇಕು. ಹಾಗೆಂದು ಯೋಚಿಸಿ ಕಾರ್ಯಪ್ರವೃತ್ತನಾದವನು ಫ್ರಾನ್ಸಿನ ನಿಸೆಫೋರ್ ನಿಯಪ್ಸ್ ಎಂಬ ವ್ಯಕ್ತಿ. ಕ್ಯಾಮೆರಾ ಅಬ್ಸ್‌ಕೂರಾದಲ್ಲಿ ಚಿತ್ರಕಾರರಿಗಾಗಿ ಇದ್ದ ಪರದೆಯ ಜಾಗದಲ್ಲಿ ರಾಸಾಯನಿಕವಾಗಿ ಸಂಸ್ಕರಿಸಿದ ಲೋಹದ ಫಲಕವನ್ನು ತಂದು ಕೂರಿಸಿ 'ಹೀಲಿಯೋಗ್ರಫಿ' ಎಂಬ ತಂತ್ರಜ್ಞಾನವನ್ನು ರೂಪಿಸಿದ್ದು ಇವನ ಸಾಧನೆ.

ಶನಿವಾರ, ಆಗಸ್ಟ್ 16, 2014

ಡಾ. ರವಿಕುಮಾರ್ ಹೇಳುತ್ತಾರೆ... "ಕನ್ನಡದಲ್ಲಿ ಸಂಶೋಧನಾ ಪ್ರಬಂಧಗಳನ್ನು ಬರೆಯುವುದು, ಮಂಡಿಸುವುದು ಸಾಧ್ಯವಾಗಬೇಕು"

ಜನಪ್ರಿಯ ವಿಜ್ಞಾನದ ಮಟ್ಟವನ್ನು ಮೀರಿದ ವಿಜ್ಞಾನ-ತಂತ್ರಜ್ಞಾನದ ಬರಹಗಳು, ಕನ್ನಡದ ಮಟ್ಟಿಗಂತೂ, ಕೊಂಚ ಅಪರೂಪವೇ ಎನ್ನಬೇಕು. ಇಂತಹ ಅಪರೂಪದ ಬರಹಗಳ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರು ಡಾ. ಸಿ. ಪಿ. ರವಿಕುಮಾರ್. ಕಂಪ್ಯೂಟರ್ ವಿಜ್ಞಾನದಲ್ಲಿ ಪಿಎಚ್‌ಡಿ ಮಾಡಿರುವ ರವಿಕುಮಾರ್ ಐಐಟಿ ದೆಹಲಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಟೆಕ್ಸಾಸ್ ಇನ್ಸ್‌ಟ್ರುಮೆಂಟ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಂಪ್ಯೂಟರ್ ವಿಜ್ಞಾನ ಕುರಿತು ಕನ್ನಡದಲ್ಲಿ ವಿಶಿಷ್ಟ ಲೇಖನಗಳನ್ನು ಬರೆದಿರುವ ರವಿಕುಮಾರ್ ಅವರ ಹೊಸ ಬರಹಗಳು ಅವರ ಬ್ಲಾಗ್ 'ಸಿ.ಪಿ. ಸಂಪದ'ದಲ್ಲಿ ನಿಯಮಿತವಾಗಿ ಪ್ರಕಟವಾಗುತ್ತವೆ. ವಿಜಯ ಕರ್ನಾಟಕದಲ್ಲಿ ಅವರು 'ಜನಮುಖಿ ತಂತ್ರಲೋಕ' ಅಂಕಣವನ್ನೂ ಬರೆಯುತ್ತಿದ್ದಾರೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಪಿಎಚ್.ಡಿ. ಮಾಡುತ್ತಿದ್ದ ಕಾಲದಲ್ಲಿ ಇಂಟರ್‌ನೆಟ್ ಮೊದಲಾದ ಬೆಳವಣಿಗೆಗಳು ಜಗತ್ತನ್ನು ಮಾರ್ಪಡಿಸುವುದನ್ನು ಕಂಡು ಅದನ್ನು ಕನ್ನಡಿಗರ ಜೊತೆ ಹಂಚಿಕೊಳ್ಳಬೇಕು ಎನ್ನುವ ಹಂಬಲದಿಂದ ಕನ್ನಡಪ್ರಭ ಪತ್ರಿಕೆಯಲ್ಲಿ ಕೆಲವು ಲೇಖನಗಳನ್ನು ಬರೆದೆ (1990). ಈ ಲೇಖನಗಳನ್ನು ಮುಂದೆ ಅಭಿನವ ಪ್ರಕಾಶನದವರು 'ಕಂಪ್ಯೂಟರ್‌ಗೊಂದು ಕನ್ನಡಿ' ಎಂಬ ಪುಸ್ತಕದಲ್ಲಿ ಅಚ್ಚುಮಾಡಿದರು. ನಂತರ ದಿವಂಗತ  ಚಿ. ಶ್ರೀನಿವಾಸರಾಜು ಅವರು ನನ್ನನ್ನು 2001 ನಲ್ಲಿ ಸಂಪರ್ಕಿಸಿ ಹಂಪಿ ವಿಶ್ವವಿದ್ಯಾಲಯಕ್ಕಾಗಿ 'ಮಾಹಿತಿ ತಂತ್ರಜ್ಞಾನ' ವಿಷಯ ಒಂದು ಪುಸ್ತಕ ಬರೆದುಕೊಡಲು ಕೇಳಿದರು. ಕಾರಣಾಂತರಗಳಿಂದ ಅದು ಪ್ರಕಟವಾಗದೆ ಹಸ್ತಪ್ರತಿಯಾಗಿ ನನ್ನ ಬಳಿಯೇ ಉಳಿಯಿತು! ಹಾಗೆಯೇ ಒಂದು ಕನ್ನಡ ವಿಶ್ವಕೋಶದ ಯೋಜನೆಗೆ ನನ್ನಿಂದ ಕೆಲವು ಬರಹಗಳನ್ನು ಬರೆಸಿಕೊಂಡರೂ ಆ ಯೋಜನೆ ಕಾರ್ಯರೂಪಕ್ಕೆ ಇಳಿದಂತೆ ಕಾಣೆ!  ಇತ್ತೀಚೆಗೆ ಬ್ಲಾಗ್ ಮಾಧ್ಯಮದ ಮೂಲಕ ಆತ್ಮಸಂತೋಷಕ್ಕಾಗಿ ಕಂಪ್ಯೂಟರ್ ಕುರಿತು ಕೆಲವು ಬರಹಗಳನ್ನು ಪ್ರಕಟಿಸಿದ್ದೇನೆ.

ಶುಕ್ರವಾರ, ಆಗಸ್ಟ್ 8, 2014

ಡಾ. ಸೋಮೇಶ್ವರ ಹೇಳುತ್ತಾರೆ... "ಬದುಕ ಬದಲಿಸಬಹುದಾದ ಅರಿವನ್ನು ಹಂಚುವುದು ನಾಗರಿಕನೊಬ್ಬನ ಕರ್ತವ್ಯ"

ದೂರದರ್ಶನ ಚಂದನ ವಾಹಿನಿಯ ಜನಪ್ರಿಯ ಕ್ವಿಜ್ ಕಾರ್ಯಕ್ರಮ 'ಥಟ್ ಅಂತ ಹೇಳಿ!' ಮೂಲಕ ಜನಪ್ರಿಯರಾಗಿರುವ ಡಾ. ನಾ. ಸೋಮೇಶ್ವರ ಕನ್ನಡದ ಹೆಸರಾಂತ ವಿಜ್ಞಾನ ಸಂವಹನಕಾರರಲ್ಲೊಬ್ಬರು. ಆರೋಗ್ಯ ಸಂಬಂಧಿ ಕೃತಿಗಳ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಹಲವು ಜನಪ್ರಿಯ ಪುಸ್ತಕಗಳನ್ನೂ ರಚಿಸಿರುವ ಸೋಮೇಶ್ವರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ, ಡಾ. ಪಿ. ಎಸ್. ಶಂಕರ್ ಶ್ರೇಷ್ಠ ವೈದ್ಯ ಸಾಹಿತಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. 'ಥಟ್ ಅಂತ ಹೇಳಿ!' ಕಾರ್ಯಕ್ರಮದ ೨೫೦೦ಕ್ಕೂ ಹೆಚ್ಚು ಕಂತುಗಳನ್ನು ನಡೆಸಿಕೊಟ್ಟಿರುವ ಅಪರೂಪದ ದಾಖಲೆಯೂ ಅವರ ಹೆಸರಿನಲ್ಲಿದೆ. ಈ ದಾಖಲೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ಸ್ಥಾನಪಡೆದಿರುವುದು ವಿಶೇಷ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...

ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ಸಮಾಜದ ಋಣ ಸಂದಾಯ ಮಾಡಬೇಕೆನ್ನುವ ಬಯಕೆ, ಹಾಗೂ ಕುತೂಹಲಕರವಾದುದನ್ನು ಹಂಚಿಕೊಳ್ಳುವ ಮನೋಭಾವ - ಇವು ನಾನು ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ಬರಲು ಕಾರಣವಾದ ಅಂಶಗಳು ಎನ್ನಬಹುದು. ನನ್ನ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ನೋಡಿದರೂ ಸಾರ್ವಜನಿಕ ಆರೋಗ್ಯ ಶಿಕ್ಷಣ ವೈದ್ಯಕೀಯ ನೀತಿ ಸಂಹಿತೆಯ ಒಂದು ಭಾಗ. ಇದರ ಜೊತೆಗೆ ಬದುಕ ಬದಲಿಸಬಹುದಾದ ಅರಿವನ್ನು ಹಂಚುವುದು ನಾಗರಿಕನೊಬ್ಬನ ಕರ್ತವ್ಯ ಎನ್ನುವ ಅನಿಸಿಕೆ, ಹಾಗೂ ಸಾರ್ವಜನಿಕರಲ್ಲಿ ವಿಶಿಷ್ಠ ಲೇಖಕ ಎಂದು ಗುರುತಿಸಿಕೊಳ್ಳುವ ಬಯಕೆ ಕೂಡ ನನ್ನನ್ನು ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ಕರೆತಂದಿದೆ.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಡಾ. ಶಿವರಾಂ (ರಾಶಿ) ಹಾಗೂ ಡಾ. ಬಿ.ಜಿ.ಎಲ್. ಸ್ವಾಮಿ

ಬುಧವಾರ, ಆಗಸ್ಟ್ 6, 2014

ಮೊಬೈಲ್ ಲೋಕದ ಹೊಸ ತಲೆಮಾರು: 4G

ಟಿ ಜಿ ಶ್ರೀನಿಧಿ

ಅದೇನೋ ಮೊಬೈಲ್ ಅಂತೆ, ಜೇಬಿನಲ್ಲಿ ಇಟ್ಟುಕೊಳ್ಳುವ ಫೋನು. ಒಂದು ನಿಮಿಷ ಮಾತಾಡಿದರೆ ಹದಿನೈದೋ ಇಪ್ಪತ್ತೋ ರೂಪಾಯಿ ಕೊಡಬೇಕಂತೆ; ಅಷ್ಟೇ ಅಲ್ಲ, ನಮಗೆ ಬೇರೆಯವರು ಫೋನ್ ಮಾಡಿದಾಗ ಅವರ ಜೊತೆ ಮಾತಾಡುವುದಕ್ಕೂ ನಾವೇ ದುಡ್ಡು ಕೊಡಬೇಕಂತೆ! ಎನ್ನುವುದರೊಡನೆ ಶುರುವಾದದ್ದು ಮೊಬೈಲ್ ಜೊತೆಗಿನ ನಮ್ಮ ಒಡನಾಟ. ಈಗ ಅದು ಎಲ್ಲಿಗೆ ತಲುಪಿದೆ ಅಂದರೆ ತಣ್ಣನೆಯ ಕೋಣೆಯಲ್ಲಿ ಕೂತು ಕೆಲಸಮಾಡುವವನಿಂದ ಹಿಡಿದು ರಸ್ತೆಯಲ್ಲಿ ತರಕಾರಿ ಮಾರುವಾತನವರೆಗೆ ಎಲ್ಲರ ಕೈಯಲ್ಲೂ ಇದೀಗ ಒಂದೊಂದು ಮೊಬೈಲ್ ಇದೆ. ಯುವಜನತೆಯ ಮಟ್ಟಿಗಂತೂ ಮೊಬೈಲ್ ಎನ್ನುವುದು ಊಟ-ಬಟ್ಟೆ-ಸೂರಿನಷ್ಟೇ ಮುಖ್ಯವಾಗಿಬಿಟ್ಟಿದೆ.

ಇದರ ಜತೆಗೇ ಮೊಬೈಲ್ ದೂರವಾಣಿಗಳ ಅವತಾರವೂ ಕಾಲಕಾಲಕ್ಕೆ ಬದಲಾಗುತ್ತ ಬಂದಿದೆ. 'ಇನ್‌ಕಮಿಂಗ್ ಮೂರು ರೂಪಾಯಿ, ಔಟ್‌ಗೋಯಿಂಗ್ ಆರು ರೂಪಾಯಿ' ಕಾಲದಿಂದ 'ಇನ್‌ಕಮಿಂಗ್ ಫ್ರೀ, ಔಟ್‌ಗೋಯಿಂಗ್ ಅರ್ಧ ಪೈಸಾ!' ಕಾಲದವರೆಗೆ, ಎಸ್ಸೆಮ್ಮೆಸ್‌ನಿಂದ ವಾಟ್ಸ್‌ಆಪ್‌ವರೆಗೆ ಈ ಪುಟ್ಟ ಸಾಧನ ಕ್ರಮಿಸಿರುವ ಹಾದಿ ಸಣ್ಣದೇನೂ ಅಲ್ಲ.

ಮೊಬೈಲಿನಲ್ಲಿ ಕಂಡುಬಂದಿರುವ ಇಷ್ಟೆಲ್ಲ ಬದಲಾವಣೆಗಳನ್ನು ನಾವು ಹಲವು ವಿಧಗಳಾಗಿ ವಿಂಗಡಿಸುವುದು ಸಾಧ್ಯ. ಮೊಬೈಲ್ ಮೂಲಕ ದೊರಕುವ ಸೌಲಭ್ಯಗಳಲ್ಲಿನ ಬದಲಾವಣೆ ಈ ಪೈಕಿ ನಮಗೆ ಹೆಚ್ಚು ಪರಿಚಿತವಾದದ್ದು ಎನ್ನಬಹುದು. ಮೊಬೈಲ್ ದೂರವಾಣಿ ಉಪಕರಣಗಳಲ್ಲಿ (ಹ್ಯಾಂಡ್‌ಸೆಟ್) ಕಂಡುಬಂದಿರುವ ಕ್ರಾಂತಿಕಾರಕ ಬದಲಾವಣೆಗಳದ್ದು, ಬಹುಶಃ, ಎರಡನೆಯ ಸ್ಥಾನ.

ಭಾನುವಾರ, ಆಗಸ್ಟ್ 3, 2014

ಡಾ. ಪವನಜ ಹೇಳುತ್ತಾರೆ... "ನನಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿದ್ದೇ ಶಿವರಾಮ ಕಾರಂತರ ಪುಸ್ತಕಗಳಿಂದ"

ಕನ್ನಡ ಮತ್ತು ಕಂಪ್ಯೂಟರ್ ಎಂದಾಕ್ಷಣ ನಮಗೆ ನೆನಪಿಗೆ ಬರುವವರಲ್ಲಿ ಡಾ. ಯು. ಬಿ. ಪವನಜರದು ಪ್ರಮುಖ ಹೆಸರು. ವೈಜ್ಞಾನಿಕ ಸಂಶೋಧನೆ, ತಂತ್ರಾಂಶ ತಯಾರಿಕೆ, ತಂತ್ರಜ್ಞಾನ ಸಂವಹನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪುಮೂಡಿಸಿರುವ ಪವನಜರು ಪ್ರಸ್ತುತ ಬೆಂಗಳೂರಿನ ಸೆಂಟರ್ ಫಾರ್ ಇಂಟರ್‌ನೆಟ್ ಆಂಡ್ ಸೊಸೈಟಿಯಲ್ಲಿ ಕೆಲಸಮಾಡುತ್ತಿದ್ದಾರೆ. ಕರ್ನಾಟಕ ಸರಕಾರದ ತಂತ್ರಾಂಶ ಸಮಿತಿಯ ಸದಸ್ಯರೂ ಆಗಿರುವ ಡಾ. ಪವನಜ ತಮ್ಮ ಅಂಕಣಗಳಿಂದ ಜನಪ್ರಿಯರು. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ 'eಳೆ', 'ಒಂದು ಸೊನ್ನೆ', 'ಗಣಕಿಂಡಿ' ಮುಂತಾದ ಅಂಕಣಗಳಲ್ಲದೆ ಪ್ರಸ್ತುತ 'ಗ್ಯಾಜೆಟ್ ಲೋಕ' ಅಂಕಣ ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...

ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗ ಡಾ| ಶಿವರಾಮ ಕಾರಂತರ ವಿಜ್ಞಾನ ಪ್ರಪಂಚದ ನಾಲ್ಕೂ ಸಂಪುಟಗಳನ್ನು ಓದಿದ್ದೆ. ನನಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿದ್ದೇ ಆ ಪುಸ್ತಕಗಳನ್ನು ಓದಿದ್ದರಿಂದ. ಅನಂತರ ಕಸ್ತೂರಿಯಲ್ಲಿ ಪಾವೆಂ ಅವರ ವಿಶೇಷ ಆಸಕ್ತಿಯಿಂದ ಬರುತ್ತಿದ್ದ ವಿಜ್ಞಾನದ ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನೂ ಓದುತ್ತಿದ್ದೆ. ರಾಜಶೇಖರ ಭೂಸನೂರಮಠ ಅವರು ಬರೆಯುತ್ತಿದ್ದ ವೈಜ್ಞಾನಿಕ ಕಥೆಗಳೂ ನನ್ನ ವಿಜ್ಞಾನದ ಆಸಕ್ತಿಗೆ ನೀರೆರೆದವು. ವಿಜ್ಞಾನವನ್ನು ಓದಿ ಅದರಲ್ಲಿ ಸ್ನಾತಕೋತ್ತರ ಪದವಿ ಪಡೆದು ಮುಂಬಯಿಯ ಭಾಭಾ ಪರಮಾಣು ಸಂಶೋಧನಾ ಕೇಂದ್ರವನ್ನು ವಿಜ್ಞಾನಿಯಾಗಿ ಸೇರಲು - ಮತ್ತು ವಿಜ್ಞಾನ ಸಂವಹನದಲ್ಲಿ ತೊಡಗಿಕೊಳ್ಳಲು ಕೂಡ - ಇವೆಲ್ಲ ಪೂರಕವಾದವು.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಶಿವರಾಮ ಕಾರಂತ, ಬಿ.ಜಿ.ಎಲ್. ಸ್ವಾಮಿ, ನಾಗೇಶ ಹೆಗಡೆ, ಅನುಪಮಾ ನಿರಂಜನ, ಸಿ.ಆರ್. ಚಂದ್ರಶೇಖರ, ಟಿ. ಆರ್. ಅನಂತರಾಮು - ಈ ಪಟ್ಟಿ ಸಾಕಷ್ಟು ದೊಡ್ಡದೇ!
badge