ಜನಪ್ರಿಯ ವಿಜ್ಞಾನದ ಮಟ್ಟವನ್ನು ಮೀರಿದ ವಿಜ್ಞಾನ-ತಂತ್ರಜ್ಞಾನದ ಬರಹಗಳು, ಕನ್ನಡದ ಮಟ್ಟಿಗಂತೂ, ಕೊಂಚ ಅಪರೂಪವೇ ಎನ್ನಬೇಕು. ಇಂತಹ ಅಪರೂಪದ ಬರಹಗಳ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವವರು ಡಾ. ಸಿ. ಪಿ. ರವಿಕುಮಾರ್. ಕಂಪ್ಯೂಟರ್ ವಿಜ್ಞಾನದಲ್ಲಿ ಪಿಎಚ್‌ಡಿ ಮಾಡಿರುವ ರವಿಕುಮಾರ್ ಐಐಟಿ ದೆಹಲಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಟೆಕ್ಸಾಸ್ ಇನ್ಸ್‌ಟ್ರುಮೆಂಟ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಂಪ್ಯೂಟರ್ ವಿಜ್ಞಾನ ಕುರಿತು ಕನ್ನಡದಲ್ಲಿ ವಿಶಿಷ್ಟ ಲೇಖನಗಳನ್ನು ಬರೆದಿರುವ ರವಿಕುಮಾರ್ ಅವರ ಹೊಸ ಬರಹಗಳು ಅವರ ಬ್ಲಾಗ್ 'ಸಿ.ಪಿ. ಸಂಪದ'ದಲ್ಲಿ ನಿಯಮಿತವಾಗಿ ಪ್ರಕಟವಾಗುತ್ತವೆ. ವಿಜಯ ಕರ್ನಾಟಕದಲ್ಲಿ ಅವರು 'ಜನಮುಖಿ ತಂತ್ರಲೋಕ' ಅಂಕಣವನ್ನೂ ಬರೆಯುತ್ತಿದ್ದಾರೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಪಿಎಚ್.ಡಿ. ಮಾಡುತ್ತಿದ್ದ ಕಾಲದಲ್ಲಿ ಇಂಟರ್‌ನೆಟ್ ಮೊದಲಾದ ಬೆಳವಣಿಗೆಗಳು ಜಗತ್ತನ್ನು ಮಾರ್ಪಡಿಸುವುದನ್ನು ಕಂಡು ಅದನ್ನು ಕನ್ನಡಿಗರ ಜೊತೆ ಹಂಚಿಕೊಳ್ಳಬೇಕು ಎನ್ನುವ ಹಂಬಲದಿಂದ ಕನ್ನಡಪ್ರಭ ಪತ್ರಿಕೆಯಲ್ಲಿ ಕೆಲವು ಲೇಖನಗಳನ್ನು ಬರೆದೆ (1990). ಈ ಲೇಖನಗಳನ್ನು ಮುಂದೆ ಅಭಿನವ ಪ್ರಕಾಶನದವರು 'ಕಂಪ್ಯೂಟರ್‌ಗೊಂದು ಕನ್ನಡಿ' ಎಂಬ ಪುಸ್ತಕದಲ್ಲಿ ಅಚ್ಚುಮಾಡಿದರು. ನಂತರ ದಿವಂಗತ ಚಿ. ಶ್ರೀನಿವಾಸರಾಜು ಅವರು ನನ್ನನ್ನು 2001 ನಲ್ಲಿ ಸಂಪರ್ಕಿಸಿ ಹಂಪಿ ವಿಶ್ವವಿದ್ಯಾಲಯಕ್ಕಾಗಿ 'ಮಾಹಿತಿ ತಂತ್ರಜ್ಞಾನ' ವಿಷಯ ಒಂದು ಪುಸ್ತಕ ಬರೆದುಕೊಡಲು ಕೇಳಿದರು. ಕಾರಣಾಂತರಗಳಿಂದ ಅದು ಪ್ರಕಟವಾಗದೆ ಹಸ್ತಪ್ರತಿಯಾಗಿ ನನ್ನ ಬಳಿಯೇ ಉಳಿಯಿತು! ಹಾಗೆಯೇ ಒಂದು ಕನ್ನಡ ವಿಶ್ವಕೋಶದ ಯೋಜನೆಗೆ ನನ್ನಿಂದ ಕೆಲವು ಬರಹಗಳನ್ನು ಬರೆಸಿಕೊಂಡರೂ ಆ ಯೋಜನೆ ಕಾರ್ಯರೂಪಕ್ಕೆ ಇಳಿದಂತೆ ಕಾಣೆ! ಇತ್ತೀಚೆಗೆ ಬ್ಲಾಗ್ ಮಾಧ್ಯಮದ ಮೂಲಕ ಆತ್ಮಸಂತೋಷಕ್ಕಾಗಿ ಕಂಪ್ಯೂಟರ್ ಕುರಿತು ಕೆಲವು ಬರಹಗಳನ್ನು ಪ್ರಕಟಿಸಿದ್ದೇನೆ.
ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ದಿವಂಗತ ನಿರಂಜನ ಅವರು ಸಂಪಾದಿಸಿದ ಜ್ಞಾನಗಂಗೋತ್ರಿಯ ಸಂಪುಟಗಳನ್ನು ನಾನು ವಿದ್ಯಾರ್ಥಿಯಾಗಿದ್ದಾಗ ಓದಿದ್ದೇನೆ; ಇದು ಬಹಳ ಒಳ್ಳೆಯ ಪ್ರಯತ್ನ. ನಿರಂಜನ ಅವರಿಗೆ ಮತ್ತು ಅವರು ಪ್ರೋತ್ಸಾಹಿಸಿದ ವಿಜ್ಞಾನ ಬರಹಗಾರರಿಗೆ ನಾವು ಋಣಿಗಳು.
ನಿಮ್ಮ (ಹಾಗೂ ಇತರ ಸಂವಹನಕಾರರ) ಕೆಲಸವನ್ನು ಸಮಾಜ ಹೇಗೆ ಸ್ವೀಕರಿಸುತ್ತಿದೆ?
ಕನ್ನಡದಲ್ಲಿ ವೈಜ್ಞಾನಿಕ ಬರಹಗಳು ಕಡಿಮೆ; ಇಂಥ ಬರಹಗಾರರಿಗೆ ಪ್ರೋತ್ಸಾಹ ಸಾಲದು. ಇದೇ ಕಾರಣವೋ ಏನೋ ಕೇವಲ ಜನಪ್ರಿಯ ವಿಜ್ಞಾನದ ಸ್ತರದಲ್ಲಿ ಕೆಲಸ ಸಾಗುತ್ತಿದೆ. ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಲ್ಲಿ ಕನ್ನಡ ಬಳಸುವಂತೆ ಆಗಬೇಕು. ಕನ್ನಡದಲ್ಲಿ ಸಂಶೋಧನಾ ಮಟ್ಟದ ಪ್ರಬಂಧಗಳನ್ನು ಬರೆಯುವುದು, ಮಂಡಿಸುವುದು ಸಾಧ್ಯವಾಗಬೇಕು. ಆಗ ಶಾಲಾ ಕಾಲೇಜುಗಳಲ್ಲಿ ಕನ್ನಡಕ್ಕೆ ಮಹತ್ವ ಬರುತ್ತದೆ.
ಈ ಕ್ಷೇತ್ರದಲ್ಲಿ ನೀವು ಮಾಡಬಯಸುವ ಮುಂದಿನ ಕೆಲಸ ಯಾವುದು?
ಸದ್ಯಕ್ಕೆ ನನ್ನ ಬ್ಲಾಗ್ 'ಸಿ.ಪಿ. ಸಂಪದ' ನನ್ನ ಪ್ರಯೋಗಶಾಲೆ!
ವಿಜ್ಞಾನ ಸಂವಹನ ಹೊರತುಪಡಿಸಿ ನಿಮ್ಮ ಇತರ ಆಸಕ್ತಿಗಳು ಯಾವುವು?
ನಾನು ಕಂಪ್ಯೂಟರ್ ಇಂಜಿನಿಯರಿಂಗ್ ನಲ್ಲಿ ಪಿಎಚ್.ಡಿ. ಪಡೆದು ವಿಎಲ್ಎಸ್ಐ, ಕಂಪ್ಯೂಟರ್ ಆರ್ಕಿಟೆಕ್ಚರ್, ಪ್ಯಾರಲೆಲ್ ಪ್ರಾಸೆಸಿಂಗ್ ಮೊದಲಾದ ಕಾರ್ಯಕ್ಷೇತ್ರಗಳಲ್ಲಿ ಸಂಶೋಧನೆ ಮಾಡಿದ್ದೇನೆ. ಐಐಟಿ ದೆಹಲಿಯಲ್ಲಿ ಪ್ರಾಧ್ಯಾಪಕನಾಗಿದ್ದು ಈಗ ಟೆಕ್ಸಾಸ್ ಇನ್ಸ್‌ಟ್ರುಮೆಂಟ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ; ಹಾಗೇ ಐಐಟಿ ಮದ್ರಾಸ್‌ನಲ್ಲಿ ಗೌರವ ಪ್ರಾಧ್ಯಾಪಕನಾಗಿದ್ದೇನೆ. ಕನ್ನಡದಲ್ಲಿ ಬರವಣಿಗೆ ನನ್ನ ಹವ್ಯಾಸ. ಕನ್ನಡದಿಂದ ಇಂಗ್ಲಿಷಿಗೆ, ಇಂಗ್ಲಿಷ್ ಮತ್ತು ಹಿಂದಿಯಿಂದ ಕನ್ನಡಕ್ಕೆ ಕತೆ/ಕವಿತೆಗಳನ್ನು ಭಾಷಾಂತರಿಸುವುದು ನನಗೆ ಇಷ್ಟವಾದ ಕೆಲಸ.
ಡಾ. ಸಿ. ಪಿ. ರವಿಕುಮಾರ್ ಅವರ ಬ್ಲಾಗುಗಳು: ಸಿ. ಪಿ. ಸಂಪದ | ರವಿ ಕಾಣದ್ದು | समुन्दर और सीपी | An English Mirror for Kannada Poetry
ಕನ್ನಡದ ವಿಜ್ಞಾನ - ತಂತ್ರಜ್ಞಾನ ಸಂವಹನಕಾರರು ಅವರ ಬರವಣಿಗೆಯ ಮೂಲಕ ಬಹಳಷ್ಟು ಓದುಗರಿಗೆ ಪರಿಚಿತರು. ಆದರೆ ವೈಯಕ್ತಿಕವಾಗಿ ಅವರ ಪರಿಚಯ ಬಹಳಷ್ಟು ಓದುಗರಿಗೆ ಇರುವುದಿಲ್ಲ. ಈ ಕೊರತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಇಜ್ಞಾನ ಡಾಟ್ ಕಾಮ್ ಪ್ರಾರಂಭಿಸಿರುವ ಸಂದರ್ಶನ ಸರಣಿಯೇ 'ಪೆನ್ ಸ್ಟಾಂಡ್'. ಈ ಸರಣಿಯ ಬಗ್ಗೆ ನಿಮ್ಮ ಅನಿಸಿಕೆ - ಅಭಿಪ್ರಾಯಗಳಿಗೆ ಹಾರ್ದಿಕ ಸ್ವಾಗತ!
ಪೆನ್ ಸ್ಟಾಂಡ್ ಸಂದರ್ಶನ ಸರಣಿಯಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳೂ ಸಂದರ್ಶಿತರ ವೈಯಕ್ತಿಕ ಅನಿಸಿಕೆಗಳು.
1 ಕಾಮೆಂಟ್:
ಅಂದರೆ ಕನ್ನಡದಲ್ಲಿ ಆ ಎಲ್ಲಾ ಪದಗುಚ್ಛಗಳು ಬರೆಬೆಕು. ಕನ್ನಡಕ್ಕೆ ಅನೇಕ ಕಡೆಗಳಿಂದ ಪಡಗಳು ಹರಿದು ಬರಬೇಕು.
ಕಾಮೆಂಟ್ ಪೋಸ್ಟ್ ಮಾಡಿ