ಶುಕ್ರವಾರ, ಆಗಸ್ಟ್ 29, 2014

ಉದಯಶಂಕರ ಪುರಾಣಿಕ ಹೇಳುತ್ತಾರೆ... "ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಅನುಭವವಿರುವ ವಿಮರ್ಶಕರ ಕೊರತೆಯಿದೆ"

ತಂತ್ರಜ್ಞಾನ ಕ್ಷೇತ್ರದ ಹೊಸ ಮಾಹಿತಿಯನ್ನು ಕನ್ನಡದ ಲೋಕಕ್ಕೆ ಪರಿಚಯಿಸುತ್ತಿರುವವರಲ್ಲಿ ಶ್ರೀ ಉದಯಶಂಕರ ಪುರಾಣಿಕರದು ಪ್ರಮುಖ ಹೆಸರು. ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಕನ್ನಡಮ್ಮ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಅವರ ಅಂಕಣಗಳು ಬೆಳಕು ಕಂಡಿವೆ. ಮಾಹಿತಿ ತಂತ್ರಜ್ಞಾನ ಕುರಿತ ಅವರ ಹಲವಾರು ಬರಹಗಳು ಅನೇಕ ಸಂಕಲನಗಳಲ್ಲಿ, ವಿಶ್ವಕೋಶಗಳಲ್ಲಿಯೂ ಪ್ರಕಟವಾಗಿವೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ..
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಗಳಿಸಿರುವ ಇಪ್ಪತ್ತನಾಲ್ಕು ವರ್ಷಗಳ ಅನುಭವ, ಹೆಸರಾಂತ ಸಂಸ್ಥೆಗಳು ಮತ್ತು ತಂತ್ರಜ್ಞರ ಜೊತೆ ಕೆಲಸ ಮಾಡಿ ಪಡೆದಿರುವ ಪರಿಣಿತಿಯನ್ನು ಜನಸಾಮಾನ್ಯರೊಂದಿಗೆ ಹಂಚಿಕೊಳ್ಳಲು ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಲು, ಸಂವಹನ ಮಾಧ್ಯಮವನ್ನು ಆರಿಸಿಕೊಂಡಿದ್ದೇನೆ.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಕಾರ್ಲ್ ಸಗಾನ್‍ರವರು ಪುಸ್ತಕ, ಲೇಖನಗಳ ಜೊತೆಯಲ್ಲಿ ಟಿವಿ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿದವರು.
ಇವು ವಿವಿಧ ಬಾಷೆಗಳಲ್ಲಿ ಭಾಷಾಂತರಗೊಂಡರೂ, ಜನ ಸಾಮಾನ್ಯರನ್ನು ತಲುಪುವಲ್ಲಿ ಯಶಸ್ವಿಯಾದವು.

ನಿಮ್ಮ (ಹಾಗೂ ಇತರ ಸಂವಹನಕಾರರ) ಕೆಲಸವನ್ನು ಸಮಾಜ ಹೇಗೆ ಸ್ವೀಕರಿಸುತ್ತಿದೆ? 
ವಿಜ್ಞಾನ-ತಂತ್ರಜ್ಞಾನ ಕ್ಷೇತ್ರ ಕುರಿತು ಆಸಕ್ತಿ ಇದೆ, ಉತ್ತಮ ಲೇಖನಗಳಿಗೆ ಮತ್ತು ಪುಸ್ತಕಗಳಿಗೆ ಸಮಾಜ ಪ್ರೋತ್ಸಾಹ ನೀಡುತ್ತಿದೆ. ವಿಜ್ಞಾನ-ತಂತ್ರಜ್ಞಾನ ಕುರಿತ ಸಾಹಿತ್ಯವನ್ನು ಕನ್ನಡ ಸಾಹಿತ್ಯದ ಪ್ರಮುಖ ಭಾಗವನ್ನಾಗಿ ಸ್ವೀಕರಿಸುವ ಕೆಲಸವನ್ನು ಸಾಹಿತಿಗಳು ಮತ್ತು ಸರ್ಕಾರ ಮಾಡಬೇಕಾಗಿದೆ.

ಈ ಕ್ಷೇತ್ರದಲ್ಲಿ ನೀವು ಮಾಡಬಯಸುವ ಮುಂದಿನ ಕೆಲಸ ಯಾವುದು?
ವಿಜ್ಞಾನ-ತಂತ್ರಜ್ಞಾನ ಕುರಿತು ಕನ್ನಡದಲ್ಲಿ ಪುಸ್ತಕಗಳ ಸಂಖ್ಯೆ ಹೆಚ್ಚಾಗುತ್ತಿದೆ ಆದರೆ ಈ ಕ್ಷೇತ್ರದಲ್ಲಿ ಅನುಭವ ಹೊಂದಿರುವ ವಿಮರ್ಶಕರ ಕೊರತೆಯಿದೆ. ಜನಪ್ರಿಯ ವಿಜ್ಞಾನ-ತಂತ್ರಜ್ಞಾನ ಪ್ರಕಟಣೆಗಳನ್ನು ಕನ್ನಡದಲ್ಲಿ ಅನುವಾದ ಮಾಡುವ ಯೋಜನೆ ಇದೆ.

ವಿಜ್ಞಾನ ಸಂವಹನ ಹೊರತುಪಡಿಸಿ ನಿಮ್ಮ ಇತರ ಆಸಕ್ತಿಗಳು ಯಾವುವು?
ಸಂಶೋಧನೆ, ಪ್ರವಾಸ, ಪರಿಸರ ರಕ್ಷಣೆ ಮತ್ತು ಅನಾಥ ಮಕ್ಕಳಿಗೆ ಸಹಾಯ ಮಾಡುವುದು.
ಕನ್ನಡದ ವಿಜ್ಞಾನ - ತಂತ್ರಜ್ಞಾನ ಸಂವಹನಕಾರರು ಅವರ ಬರವಣಿಗೆಯ ಮೂಲಕ ಬಹಳಷ್ಟು ಓದುಗರಿಗೆ ಪರಿಚಿತರು. ಆದರೆ ವೈಯಕ್ತಿಕವಾಗಿ ಅವರ ಪರಿಚಯ ಬಹಳಷ್ಟು ಓದುಗರಿಗೆ ಇರುವುದಿಲ್ಲ. ಈ ಕೊರತೆಯನ್ನು ಹೋಗಲಾಡಿಸುವ ದೃಷ್ಟಿಯಿಂದ ಇಜ್ಞಾನ ಡಾಟ್ ಕಾಮ್ ಪ್ರಾರಂಭಿಸಿರುವ ಸಂದರ್ಶನ ಸರಣಿಯೇ 'ಪೆನ್ ಸ್ಟಾಂಡ್'. ಈ ಸರಣಿಯ ಬಗ್ಗೆ ನಿಮ್ಮ ಅನಿಸಿಕೆ - ಅಭಿಪ್ರಾಯಗಳಿಗೆ ಹಾರ್ದಿಕ ಸ್ವಾಗತ!
ಪೆನ್‌ ಸ್ಟಾಂಡ್ ಸಂದರ್ಶನ ಸರಣಿಯಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳೂ ಸಂದರ್ಶಿತರ ವೈಯಕ್ತಿಕ ಅನಿಸಿಕೆಗಳು.  

ಕಾಮೆಂಟ್‌ಗಳಿಲ್ಲ:

badge