ಶನಿವಾರ, ಸೆಪ್ಟೆಂಬರ್ 27, 2014

ಪ್ರೊ. ನಾಗರಾಜು ಹೇಳುತ್ತಾರೆ... "ಹೀಗೆಯೇ ಸಂವಹನ ಮಾಡಬೇಕೆಂದು, ಹೀಗೆ ಸಂವಹನ ಮಾಡಲೇಬಾರದೆಂದು ತೋರಿಸಿಕೊಟ್ಟ ಎಲ್ಲರೂ ನನ್ನ ಗುರುಗಳು"

ವಿಜ್ಞಾನ ಸಂವಹನ, ಅದರಲ್ಲೂ ಮೌಖಿಕ ರೂಪದ ವಿಜ್ಞಾನ ಸಂವಹನವನ್ನು ತಮ್ಮ ಬದುಕಿನ ಗುರಿಯಾಗಿಸಿಕೊಂಡ ಅಪರೂಪದ ವಿದ್ವಾಂಸರು ಪ್ರೊ. ಎಂ. ಆರ್. ನಾಗರಾಜು. ವಿಜ್ಞಾನ ಸಂವಹನದಲ್ಲಿ ಸಾಹಿತ್ಯದ ಸ್ಪರ್ಶವಿರಬೇಕು ಎಂದು ನಂಬಿರುವ ಕೆಲವೇ ಲೇಖಕರಲ್ಲಿ ಅವರೂ ಒಬ್ಬರು. ತಮ್ಮ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟರಾದ ಎಂಆರ್‌ಎನ್ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪ್ರಕಟಣೆ 'ಬಾಲವಿಜ್ಞಾನ'ದ ಮೂಲಕ ರಾಜ್ಯದ ಮೂಲೆಮೂಲೆಗಳ ವಿದ್ಯಾರ್ಥಿಗಳನ್ನು ತಲುಪಿದ್ದಾರೆ. ೧೫,೦೦೦ಕ್ಕೂ ಹೆಚ್ಚು ಮಕ್ಕಳು ಕೇಳಿದ ಪ್ರಶ್ನೆಗಳಿಗೆ ವೈಯಕ್ತಿಕ ಉತ್ತರಗಳನ್ನು ಕಳುಹಿಸಿಕೊಟ್ಟಿರುವ ಅಪರೂಪದ ಸಾಧನೆ ಅವರದ್ದು. 'ತಾಪ ಪ್ರತಾಪ', 'ರಸಸ್ವಾರಸ್ಯ' ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿರುವ ಎಂಆರ್‌ಎನ್ ಪತ್ರಿಕಾ ಲೇಖನಗಳ ಮೂಲಕವೂ ಕನ್ನಡದ ಓದುಗರಿಗೆ ಪರಿಚಿತರಾಗಿದ್ದಾರೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ವಿಜ್ಞಾನ ಮತ್ತು ಪ್ರಕೃತಿ ಕುರಿತ ಅದಮ್ಯ ಕುತೂಹಲವನ್ನು ಜನರಲ್ಲಿ ರೂಪಿಸಿ ತಣಿಸುವುದು ಅಗತ್ಯ ಎಂದು ಭಾವಿಸಿ ನಾನು ವಿಜ್ಞಾನ ಸಂವಹನಕಾರನಾಗಿರಬೇಕು. ಕಲಿತ ವಿಜ್ಞಾನಕ್ಕೂ ಪರಿಚಿತ ಅನುಭವಕ್ಕೂ ಸೇತುವೆ ನಿರ್ಮಿಸಿ ಕೊಟ್ಟಾಗ ಆನಂದಿಸಿ ನನ್ನ ಕೆಲಸ ಮುಂದುವರೆಸಲು ಪ್ರೇರೇಪಿಸುತ್ತಿರುವ ಅಭಿಮಾನಿಗಳು ಬರೆಸುತ್ತಿರುವದೂ ನನ್ನ ಸಂವಹನ ಮುಂದುವರಿಕೆಗೆ ಕಾರಣ. ತಾನು ಕಲಿತದ್ದನ್ನು, ಸಂವಹನ ಮಾಡಿದ್ದನ್ನು ಜನ ಪ್ರೋತ್ಸಾಹಿಸಿದಾಗ ಅದು ಸಹಜ.

ಸಮಾಜದ - ಸಾಮಾಜಿಕರ ಶುದ್ಧೀಕರಣ ವಿಜ್ಞಾನದ ಸಾಮಾಜೀಕರಣದಿಂದ ಮಾತ್ರ ಸಾಧ್ಯ ಎಂದು ಈಗಲೂ ನನ್ನ ಬಲವಾದ ನಂಬಿಕೆ. ಉಳಿದ ಕಾರಣಗಳೂ ಇರಬಹುದು. ಅದನ್ನೆಲ್ಲ ಹೇಳತೊಡಗಿದರೆ ಅದೇ ಒಂದು ಪುಸ್ತಕ ಆದೀತು.

ಶುಕ್ರವಾರ, ಸೆಪ್ಟೆಂಬರ್ 12, 2014

ಡಾ. ರಾಧಾಕೃಷ್ಣ ಹೇಳುತ್ತಾರೆ... "ಓದಿಗಿಂತ ಪರಮ ಸುಖ ಬೇರಿಲ್ಲ"

ಮೂಲವಿಜ್ಞಾನದ ವಿಷಯಗಳ ಕುರಿತು ಕನ್ನಡದಲ್ಲಿ ಬರೆಯುವ ಅಪರೂಪದ ಸಂವಹನಕಾರ ಡಾ. ಎ. ಪಿ. ರಾಧಾಕೃಷ್ಣ. ಪುತ್ತೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿರುವ ರಾಧಾಕೃಷ್ಣರ ಲೇಖನಗಳು ಉದಯವಾಣಿ, ಸುಧಾ, ಕಸ್ತೂರಿ, ತರಂಗ, ಪುಸ್ತಕ ಪ್ರಪಂಚ, ವಿಜ್ಞಾನ ಲೋಕ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿಶ್ವಕಿರಣಗಳ ಮಾಯಾಲೋಕ (ಕನ್ನಡ ಪುಸ್ತಕ ಪ್ರಾಧಿಕಾರ), ಮನೆಯಂಗಳದಲ್ಲಿ ಕೃಷ್ಣ ವಿವರ (ಪ್ರಸಾರಾಂಗ ಮಂಗಳೂರು ವಿವಿ) ಸೇರಿದಂತೆ ಈವರೆಗೆ ಪ್ರಕಟವಾಗಿರುವ ಪುಸ್ತಕಗಳ ಸಂಖ್ಯೆ ಮೂರು. ನೊಬೆಲ್ ವಿಜ್ಞಾನಿಗಳು (ಉದಯವಾಣಿ) ಹಾಗೂ ಜ್ಞಾನವಿಜ್ಞಾನ (ವಿಜಯ ಕರ್ನಾಟಕ) ಎಂಬ ಅಂಕಣಗಳನ್ನು ಬರೆದದ್ದೂ ಉಂಟು. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ಕವನ- ಪ್ರಬಂಧ ಬರೆಯುವ ಹುಚ್ಚು ಶಾಲಾ ದಿನಗಳಲ್ಲೇ ಇತ್ತು. ನಾನು ಹತ್ತನೇ ತರಗತಿಯಲ್ಲಿದ್ದೆ (೧೯೭೯). ಬೆಂಗಳೂರಿನ ವೈಮಾಂತರಿಕ್ಷ ಪ್ರಯೋಗಾಲಯದ ಕನ್ನಡ ಸಾಂಸ್ಕೃತಿಕ ಸಂಘ ತನ್ನ ಕಣಾದ ವಾರ್ಷಿಕ ಸಂಚಿಕೆಗಾಗಿ  ಕನ್ನಡ ವಿಜ್ಞಾನ ಪ್ರಬಂಧ ಸ್ಪರ್ಧೆ ಏರ್ಪಡಿಸಿರುವುದನ್ನು ಪತ್ರಿಕೆಯಲ್ಲಿ ನೋಡಿದಾಗ ನಾನೇಕೆ ಬರೆಯಬಾರದು ಎಂಬ ಪ್ರಶ್ನೆ ಮೂಡಿತು. ಶಕ್ತಿ ಸಮಸ್ಯೆಗಳು ಎಂಬ ಪ್ರಬಂಧ ಕಳುಹಿಸಿದೆ.  ಶಾಲಾ ವಿಭಾಗದಲ್ಲಿ ಪ್ರಥಮ ಬಹುಮಾನ ದೊರೆಯುವುದರೊಂದಿಗೆ ಕನ್ನಡದಲ್ಲಿ ವಿಜ್ಞಾನ ಲೇಖನ ಬರೆಯುವ ಉತ್ಸಾಹ ಮೊಳೆಯಿತು. ಸ್ಪರ್ಧೆಯಲ್ಲಿ ಪ್ರತಿವರ್ಷ ಭಾಗವಹಿಸುತ್ತ ಬಂದಂತೆ ಕನ್ನಡದಲ್ಲಿ ವಿಜ್ಞಾನ ಬರವಣಿಗೆಯ ಆಸಕ್ತಿ ಇನ್ನಷ್ಟು ಬಲವಾಯಿತು.

ಕಥೆ -ಕಾದಂಬರಿಗಳನ್ನು ಬರೆಯುತ್ತಿದ್ದ ಅಮ್ಮ ಎ. ಪಿ. ಮಾಲತಿ ನನ್ನ ಬರವಣಿಗೆಗೆ ಸದಾ ಸ್ಫೂರ್ತಿ. ನನ್ನ ತಂದೆಯ ಸೋದರ ಭಾವ - ಅಂದರೆ ನನ್ನ ಮಾವ ದಿವಂಗತ ಜಿ. ಟಿ. ನಾರಾಯಣರಾವ್ ಕೂಡ ತಮ್ಮ ಬರವಣಿಗೆ, ಉಪನ್ಯಾಸಗಳಿಂದ ನನ್ನ ಮೇಲೆ ಗಾಢ ಪ್ರಭಾವ ಬೀರಿದರು.

ಶನಿವಾರ, ಸೆಪ್ಟೆಂಬರ್ 6, 2014

ಖುಷಿಪಡಲು ೧೦೦,೦೦೦+ ಕಾರಣಗಳು


ಇಜ್ಞಾನ ಡಾಟ್ ಕಾಮ್‌ನಲ್ಲಿ ದಾಖಲಾಗಿರುವ ಪುಟವೀಕ್ಷಣೆಗಳ (ಪೇಜ್ ವ್ಯೂ) ಸಂಖ್ಯೆ ಇದೀಗ ಒಂದು ಲಕ್ಷದ ಗಡಿ ದಾಟಿದೆ. ಖುಷಿಗೆಂದು ಮಾಡುವ ಕೆಲಸ ಇಷ್ಟೆಲ್ಲ ಓದುಗರನ್ನು ಮುಟ್ಟಿರುವುದು ಅತ್ಯಂತ ಸಂತೋಷದ ಸಂಗತಿ. ನಿಮ್ಮ ಅಭಿಮಾನ ಹೀಗೆಯೇ ಇರಲಿ!

ಶುಕ್ರವಾರ, ಸೆಪ್ಟೆಂಬರ್ 5, 2014

ನಾಗೇಶ ಹೆಗಡೆ ಹೇಳುತ್ತಾರೆ... "ವಿಜ್ಞಾನ ಸಂವಹನ ಅನ್ನೋದು ನನ್ನ ಆಸಕ್ತಿಯ ವಿಷಯ ಅಲ್ಲವೇ ಅಲ್ಲ!"

ಕನ್ನಡದ ವಿಜ್ಞಾನ-ತಂತ್ರಜ್ಞಾನ ಸಂವಹನಕಾರರ ಸಾಲಿನಲ್ಲಿ ಪ್ರಮುಖ ಹೆಸರು ಶ್ರೀ ನಾಗೇಶ ಹೆಗಡೆಯವರದ್ದು. ಪರಿಸರಪ್ರೇಮಿ ಎನ್ನಿ, ವಿಜ್ಞಾನ ಲೇಖಕರೆನ್ನಿ, ಪತ್ರಕರ್ತರೆನ್ನಿ, ತಂತ್ರಜ್ಞಾನ ಆಸಕ್ತರೆನ್ನಿ - ಎಲ್ಲ ವಿಶೇಷಣಗಳೂ ಹೆಗಡೆಯವರಿಗೆ ಅನ್ವಯಿಸುತ್ತವೆ. ಹೊಸ ಬರಹಗಾರರನ್ನು ತಿದ್ದಿ ಬೆಳೆಸುವಲ್ಲಿ ಅಪಾರ ಆಸಕ್ತಿಯಿರುವ ನಾಗೇಶ ಹೆಗಡೆಯವರು ಕಿರಿಯ ಬರಹಗಾರರ ಮಟ್ಟಿಗಂತೂ ಮೇಷ್ಟರೇ ಸರಿ. ಬರಹಗಾರರಿಗಷ್ಟೇ ಏಕೆ, ಪತ್ರಿಕೋದ್ಯಮದ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಪ್ರಾರಂಭಿಸಿ ಪ್ರಾಥಮಿಕ ಶಾಲೆಯ ಪುಟ್ಟಮಕ್ಕಳವರೆಗೆ ನಾಗೇಶ ಹೆಗಡೆಯವರ ಪಾಠ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಹಲವು ದಶಕಗಳಿಂದ ತಮ್ಮ ಪುಸ್ತಕಗಳ, ಲೇಖನಗಳ ಮೂಲಕ ಪರಿಸರ-ವಿಜ್ಞಾನ-ತಂತ್ರಜ್ಞಾನಗಳ ಕುರಿತು ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ನಾಗೇಶ ಹೆಗಡೆ ಮೇಷ್ಟ್ರು ಶಿಕ್ಷಕರ ದಿನದಂದು ನಮ್ಮ ವಿಶೇಷ ಅತಿಥಿ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ..
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ಆಗಿನ ಕಾಲದಲ್ಲಿ (1970ರಲ್ಲಿ) ಎಲ್ಲರೂ ಕತೆ, ಕಾದಂಬರಿ, ನಾಟಕ, ಕವನಗಳಂಥ ಊಹಾತ್ಮಕ ಬರವಣಿಗೆಗೆ ಬಿದ್ದವರೇ ಆಗಿದ್ದರು. ನಮ್ಮ ಪಠ್ಯಪುಸ್ತಕಗಳಲ್ಲೂ ಬರೀ ಅವೇ ತುಂಬಿಕೊಂಡಿದ್ದವು. ಬಿಟ್ಟರೆ ಇತಿಹಾಸದ ಪಾಠಗಳಿದ್ದವು. ನೈಜ ಸಂಗತಿಯನ್ನು ಹೇಳುವವರು ಬಿಜಿಎಲ್ ಸ್ವಾಮಿ, ಜಿ. ಟಿ. ನಾರಾಯಣರಾವ್ ಮತ್ತು ಅಪರೂಪಕ್ಕೆ ಡಾ. ಶಿವರಾಮ ಕಾರಂತ ಇಷ್ಟೇ. ಇಲ್ಲಿ ಸ್ಪರ್ಧೆಯೇ ಇರಲಿಲ್ಲ! ಅದಕ್ಕೇ ಇರಬೇಕು, ನಾನು ಹೊಸದಾಗಿ ಬರವಣಿಗೆ ಆರಂಭಿಸಿ, 'ಅಂತರ್ಗ್ರಹ ಯಾತ್ರೆ' ಹೆಸರಿನ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡಾಗ ನನಗೇ ಮೊದಲ ಬಹುಮಾನ ಸಿಕ್ಕಿತ್ತು. ಸಾಕಲ್ಲ ಈ ಎರಡು ಮೂರು ಕಾರಣಗಳು?
badge