ಮಂಗಳವಾರ, ಅಕ್ಟೋಬರ್ 26, 2010

ವರ್ಮಾಘಾತ!

ಟಿ ಜಿ ಶ್ರೀನಿಧಿ

ಆರ್ಕುಟ್ ಡಾಟ್ ಕಾಮ್ - ವಿಶ್ವವ್ಯಾಪಿ ಜಾಲದಲ್ಲಿ ಗೆಳೆಯರೊಡನೆ ಸಂಪರ್ಕದಲ್ಲಿರಲು ಅನುವುಮಾಡಿಕೊಡುವ ತಾಣಗಳಲ್ಲೊಂದು; ವಿಶ್ವವೆಲ್ಲ ಫೇಸ್‌ಬುಕ್ ಜಪ ಮಾಡುತ್ತಿರುವಾಗಲೂ ಭಾರತ ಹಾಗೂ ಬ್ರೆಜಿಲ್‌ನಂತಹ ದೇಶಗಳಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಸಾಮಾಜಿಕ ಜಾಲತಾಣ. ಈಚೆಗೊಂದು ದಿನ ಈ ತಾಣದಲ್ಲೆಲ್ಲ 'ಬಾಮ್ ಸಬಾಡೋ'ದೇ ಸುದ್ದಿ; ಎರಡು ಪದಗಳ ಈ ಸಂದೇಶವನ್ನು ಕಂಡ ಬಳಕೆದಾರರೆಲ್ಲ ಬೆಚ್ಚಿಬೀಳುವ ಪರಿಸ್ಥಿತಿ.

ಬಾಮ್ ಸಬಾಡೋ ಅಂದರೆ ಪೋರ್ಚುಗೀಸ್ ಭಾಷೆಯಲ್ಲಿ ಶುಭ ಶನಿವಾರ ಎಂದರ್ಥ. ಆರ್ಕುಟ್ ಬಳಕೆದಾರರ ಸ್ಕ್ರಾಪ್‌ಬುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಸಂದೇಶ ಅವರ ಗೆಳೆಯರ ಹೆಸರಿನಲ್ಲೇ ಬಂದಿರುತ್ತಿತ್ತು; ಅಷ್ಟೇ ಅಲ್ಲ, ಅದರಲ್ಲೊಂದು ಕೊಂಡಿ (ಹೈಪರ್‌ಲಿಂಕ್) ಕೂಡ ಇರುತ್ತಿತ್ತು. ಅಪ್ಪಿತಪ್ಪಿ ಅದರ ಮೇಲೇನಾದರೂ ಕ್ಲಿಕ್ ಮಾಡಿದ್ದೇ ಆದರೆ ಆ ಸಂದೇಶ ಅವರ ಮಿತ್ರರೆಲ್ಲರ ಸ್ಕ್ರಾಪ್‌ಬುಕ್‌ಗೂ ತಲುಪುತ್ತಿತ್ತು. ಜೊತೆಗೆ ಬಳಕೆದಾರರ ಖಾತೆಗೆ ಯಾವ್ಯಾವುದೋ ಕಮ್ಯೂನಿಟಿಗಳು ತನ್ನಷ್ಟಕ್ಕೇ ಸೇರಿಕೊಳ್ಳುತ್ತಿದ್ದವು. ಈ ಸಂದೇಶ ಪಡೆದ ಮಿತ್ರರ ಖಾತೆಯಲ್ಲೂ ಇದೇ ಘಟನಾವಳಿ ರಿಪೀಟ್. ಕೆಲವೇ ಗಂಟೆಗಳಲ್ಲಿ ಇದರ ಹಾವಳಿ ತಡೆಯಲಾರದೆ ಇಡೀ ಆರ್ಕುಟ್ ತಾಣ ಅಲ್ಲಾಡಿಹೋಗಿತ್ತು.

ಇಷ್ಟೆಲ್ಲ ಹಾವಳಿ ಮಾಡಿದ ಬಾಮ್ ಸಬಾಡೋ ಒಂದು ವರ್ಮ್, ಕಂಪ್ಯೂಟರ್‌ಗಳನ್ನು ಕಾಡುವ ಕುತಂತ್ರಾಂಶಗಳಲ್ಲೊಂದು.

ಗಣಕದಲ್ಲಿರುವ ಮಾಹಿತಿಯನ್ನು ಅಳಿಸಿಹಾಕುವುದು, ತಂತ್ರಾಂಶಗಳು ಕೆಲಸಮಾಡದಂತೆ ಮಾಡುವುದು, ಕಡತಗಳನ್ನು ತೆರೆಯಲಾಗದಂತೆ ಮಾಡಿ ಅವುಗಳಲ್ಲಿರುವ ಮಾಹಿತಿ ನಮಗೆ ಸಿಗದಂತೆ ಮಾಡುವುದು, ಅಂತರ್ಜಾಲದ ಸಂಪನ್ಮೂಲಗಳನ್ನು ಸುಖಾಸುಮ್ಮನೆ ಬಳಸಿಕೊಂಡು ನಿಜವಾದ ಬಳಕೆದಾರರಿಗೆ ತೊಂದರೆ ಉಂಟುಮಾಡುವುದು - ಹೀಗೆ ನೂರೆಂಟು ಬಗೆಯಲ್ಲಿ ತೊಂದರೆಕೊಡುವ ದುರುದ್ದೇಶಪೂರಿತ ತಂತ್ರಾಂಶಗಳನ್ನು ಮಾಲ್‌ವೇರ್‌ಗಳೆಂದು ಕರೆಯುತ್ತಾರೆ.

ವರ್ಮ್‌ಗಳು ಈ ಮಾಲ್‌ವೇರ್‌ನ ಒಂದು ವಿಧ. ಈ ತಂತ್ರಾಂಶಗಳು ಗಣಕ ಜಾಲಗಳ ಮೂಲಕ ಹರಡುತ್ತ ಹೋಗಿ ಗಣಕಗಳ ನಡುವಿನ ಮಾಹಿತಿ ಸಂಚಾರಕ್ಕೆ ತಡೆಯೊಡ್ಡುತ್ತವೆ. ವೆಬ್‌ಸರ್ವರ್‌ಗಳ ಮೇಲೆ ದಾಳಿಮಾಡಿ ಅಲ್ಲಿ ಶೇಖರವಾಗಿರುವ ಜಾಲತಾಣದ ಪುಟಗಳನ್ನು ವಿರೂಪಗೊಳಿಸುವ ಉದ್ದೇಶ ಕೂಡ ಕೆಲ ವರ್ಮ್‌ಗಳಿಗಿರುತ್ತದೆ. ಒಂದೇ ಸಮಯದಲ್ಲಿ ಒಂದೇ ಜಾಲತಾಣಕ್ಕೆ ಸಾವಿರಾರು ಗಣಕಗಳಿಂದ ಮಾಹಿತಿಗಾಗಿ ಕೋರಿಕೆ ಕಳುಹಿಸಿ ಆ ತಾಣವನ್ನು ನಿಷ್ಕ್ರಿಯಗೊಳಿಸುವ ಕಾನ್ಸರ್ಟೆಡ್ ಅಟ್ಯಾಕ್‌ಗಳೆಂಬ ದಾಳಿ ನಡೆಸುವುದು ಕೂಡ ವರ್ಮ್‌ಗಳ ಉದ್ದೇಶವಾಗಿರುವುದು ಸಾಧ್ಯ.

ಇನ್ನು ಬಾಮ್ ಸಬಾಡೋನಂತಹ ವರ್ಮ್‌ಗಳು ಜಾಲತಾಣಗಳಲ್ಲಿರುವ ಸುರಕ್ಷತಾ ದೌರ್ಬಲ್ಯಗಳನ್ನು ದುರುಪಯೋಗಪಡಿಸಿಕೊತ್ತವೆ. ಸಾಮಾನ್ಯ ಕೊಂಡಿಯಂತೆಯೇ ಕಾಣುವ ಹೈಪರ್‌ಲಿಂಕ್ ಮೇಲೆ ಕ್ಲಿಕ್ಕಿಸಿದಾಗ ಬೇರೊಂದು ದುರುದ್ದೇಶಪೂರಿತ ತಾಣಕ್ಕೆ ಕೊಂಡೊಯ್ಯುವುದು, ಬಳಕೆದಾರರ ಖಾಸಗಿ ಮಾಹಿತಿ ಕದಿಯುವುದು ಇವೆಲ್ಲ ಈ 'ಕ್ರಾಸ್-ಸೈಟ್ ಸ್ಕ್ರಿಪ್ಟಿಂಗ್' ವರ್ಮ್‌ಗಳ ಕೆಲಸ. ಆರ್ಕುಟ್ ಮಾತ್ರವಲ್ಲದೆ ಫೇಸ್‌ಬುಕ್, ಟ್ವಿಟರ್ ಮುಂತಾದ ಹಲವಾರು ಸಾಮಾಜಿಕ ಜಾಲತಾಣಗಳು ಈಗಾಗಲೇ ಈ ವರ್ಮ್‌ಗಳಿಂದ ತೊಂದರೆ ಅನುಭವಿಸಿವೆ.

ಈವರೆಗೆ ವರ್ಮ್‌ಗಳ ಹಾವಳಿ ಕೇವಲ ವೈಯುಕ್ತಿಕ ಗಣಕ ಅಥವಾ ಪರ್ಸನಲ್ ಕಂಪ್ಯೂಟರ್‌ಗಳಿಗೆ ಮಾತ್ರ ಸೀಮಿತವಾಗಿತ್ತು. ಸಿಡಿ, ಪೆನ್‌ಡ್ರೈವ್ ಮೂಲಕವೋ ವಿಶ್ವವ್ಯಾಪಿ ಜಾಲದಲ್ಲೋ ಹರಡುವ ಇಂತಹ ವರ್ಮ್‌ಗಳಿಂದ ಉಂಟಾಗುವ ತೊಂದರೆ ದೊಡ್ಡಪ್ರಮಾಣದ್ದೇ ಆದರೂ ಅವುಗಳಿಂದ ಪಾರಾಗುವ ವಿಧಾನ ಸುಲಭ. ವೈರಸ್ ವಿರೋಧಿ ತಂತ್ರಾಂಶಗಳ (ಆಂಟಿ ವೈರಸ್) ಬಳಕೆ, ಅಪರಿಚಿತ ಜಾಲತಾಣಗಳಿಂದ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡದಿರುವುದು, ಸಂಶಯಾಸ್ಪದ ಇಮೇಲ್‌ಗಳನ್ನು ತೆರೆಯದಿರುವುದು, ಸಿಕ್ಕಸಿಕ್ಕ ಹೈಪರ್‌ಲಿಂಕ್‌ಗಳ ಮೇಲೆಲ್ಲ ಕ್ಲಿಕ್ ಮಾಡದಿರುವುದು ಮುಂತಾದ ಕೆಲ ಸರಳ ಕ್ರಮಗಳನ್ನು ಪಾಲಿಸುವುದರಿಂದ ವರ್ಮ್‌ಗಳನ್ನು ದೂರವಿಡುವುದು ಸಾಧ್ಯ.

ಆದರೆ ಇದೀಗ ವರ್ಮ್‌ಗಳ ವ್ಯಾಪ್ತಿ ನಮ್ಮ ನಿಮ್ಮ ಗಣಕಗಳಿಂದಾಚೆಗೆ ಬೆಳೆಯುತ್ತಿದೆ. ಸಂಶೋಧನಾ ಸಂಸ್ಥೆಗಳು, ವಿದ್ಯುತ್ ಉತ್ಪಾದನಾ ಘಟಕಗಳು, ಅಣುಶಕ್ತಿ ಕೇಂದ್ರಗಳು, ಕಾರ್ಖಾನೆಗಳು ಮುಂತಾದ ಕಡೆ ಪ್ರಮುಖ ಚಟುವಟಿಕೆಗಳಲ್ಲಿ ಬಳಕೆಯಾಗುವ ಗಣಕೀಕೃತ ಯಂತ್ರೋಪಕರಣಗಳನ್ನು ಬಾಧಿಸುವ ಸ್ಟಕ್ಸ್‌ನೆಟ್ ಎಂಬ ಕಂಪ್ಯೂಟರ್ ವರ್ಮ್ ಇತ್ತೀಚೆಗೆ ಬೆಳಕಿಗೆ ಬಂದಿದೆ.

ಔದ್ಯಮಿಕ ಕೇಂದ್ರಗಳನ್ನೇ ಗುರಿಯಾಗಿಸಿಕೊಂಡ ಇಂತಹ ವರ್ಮ್‌ಗಳನ್ನು ಸೈಬರ್ ಬ್ರಹ್ಮಾಸ್ತ್ರಗಳೆಂದು ಕರೆಯಬಹುದು. ದೇಶದ ಅತ್ಯಂತ ಮಹತ್ವದ ಕೇಂದ್ರಗಳ ಚಟುವಟಿಕೆಯನ್ನೇ ಹಾಳುಗೆಡವಬಲ್ಲ ಇಂತಹ ವರ್ಮ್‌ಗಳಿಂದ ಉಂಟಾಗಬಹುದಾದ ತೊಂದರೆ ಅಗಾಧ ಪ್ರಮಾಣದ್ದು. ಅತ್ಯುನ್ನತ ಮಟ್ಟದ ತಾಂತ್ರಿಕತೆ ಬಳಸುವ ಈ ಬಗೆಯ ವರ್ಮ್‌ಗಳನ್ನು ವೈರಿದೇಶಗಳು ತಮ್ಮ ಶತ್ರುಗಳಿಗೆ ತೊಂದರೆಕೊಡಲು ಬಳಸುತ್ತಿವೆ ಎಂದು ನಂಬಲಾಗಿದೆ.

ಸ್ಟಕ್ಸ್‌ನೆಟ್ ಹಾವಳಿಯ ಬಗೆಗೆ ಮೊದಲ ಗಂಭೀರ ಸುದ್ದಿ ಬಂದದ್ದು ಇರಾನ್ ದೇಶದಿಂದ. ಅಲ್ಲಿನ ಅಣುಶಕ್ತಿ ಕೇಂದ್ರವೊಂದರ ಯಂತ್ರೋಪಕರಣಗಳು ಈ ವರ್ಮ್‌ನಿಂದ ಬಾಧಿತವಾಗಿರುವ ಸಮಾಚಾರ ವಿಶ್ವದೆಲ್ಲೆಡೆ ಗಾಬರಿ ಮೂಡಿಸಿದೆ. ಇರಾನ್ ಮಾತ್ರವಲ್ಲದೆ ಚೀನಾ, ಇಂಡೋನೇಶಿಯಾ ಮೊದಲಾದೆಡೆಗಳಲ್ಲೂ ಈ ವರ್ಮ್ ಹರಡುತ್ತಿದೆಯಂತೆ.

ಭಾರತದಲ್ಲೂ ಈ ವರ್ಮ್ ಹಾವಳಿ ಕಾಣಿಸಿಕೊಂಡಿದೆ ಎಂದು ಗಣಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಜುಲೈನಲ್ಲಿ ಇದ್ದಕ್ಕಿದ್ದಂತೆ ತೊಂದರೆಗೀಡಾಗಿ ಈಗ ಭಾಗಶಃ ನಿಷ್ಕ್ರಿಯವಾಗಿರುವ ಇನ್‌ಸ್ಯಾಟ್-೪ಬಿ ಉಪಗ್ರಹದ ವೈಫಲ್ಯಕ್ಕೆ ಇದೇ ವರ್ಮ್ ಕಾರಣವಿರಬಹುದು ಎಂದು ಜೆಫ್ರಿ ಕಾರ್ ಎಂಬ ತಜ್ಞ ಹೇಳಿದ್ದಾನೆ. ಈ ಉಪಗ್ರಹದ ವೈಫಲ್ಯದಿಂದಾಗಿ ಭಾರತದ ಎರಡು ಪ್ರಮುಖ ಡಿಟಿಎಚ್ ಸಂಸ್ಥೆಗಳು ಚೀನಾದೇಶದ ಉಪಗ್ರಹವೊಂದರ ಸೇವೆಯನ್ನು ಕೊಳ್ಳಬೇಕಾಯಿತು. ಬಾಹ್ಯಾಕಾಶ ವಿಜ್ಞಾನದಲ್ಲಿ ಹೆಚ್ಚುಹೆಚ್ಚಿನ ಸಾಧನೆ ಮಾಡಲು ಭಾರತ ಹಾಗೂ ಚೀನಾದ ನಡುವೆ ಏರ್ಪಟ್ಟಿರುವ ಸ್ಪರ್ಧೆಯ ಹಿನ್ನೆಲೆಯಲ್ಲಿ ಈ ಘಟನೆಯನ್ನು ಗಮನಿಸಿದರೆ ಸೈಬರ್ ಯುದ್ಧದ ಇನ್ನೂ ಕುತೂಹಲಕರ ಅಂಶಗಳು ಹೊರಬರಬಹುದೇನೋ!

ಅಕ್ಟೋಬರ್ ೨೬, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಗುರುವಾರ, ಅಕ್ಟೋಬರ್ 21, 2010

ಟಾಕಿನ್ ಎಂಬ ವಿಶಿಷ್ಟಜೀವಿ

ಟಿ ಜಿ ಶ್ರೀನಿಧಿ

"ಹದಿನೈದನೇ ಶತಮಾನದಲ್ಲಿ ಭೂತಾನಿನಲ್ಲೊಬ್ಬ ಸಂತನಿದ್ದನಂತೆ. ಆತ ಚಿತ್ರವಿಚಿತ್ರ ಪವಾಡಗಳನ್ನು ಮಾಡಬಲ್ಲ ಎಂಬ ನಂಬಿಕೆ ವ್ಯಾಪಕವಾಗಿತ್ತು. ಆತ ಎಲ್ಲಿಯೇ ಹೋದರೂ ಆತನ ಪವಾಡಗಳನ್ನು ನೋಡಲು ಜನರು ಮುಗಿಬೀಳುತ್ತಿದ್ದರು.

ಇಂಥದ್ದೇ ಒಂದು ಸಂದರ್ಭದಲ್ಲಿ ಆ ಸಂತನನ್ನು ಮುತ್ತಿಕೊಂಡ ಜನರು ತಮಗೇನಾದರೂ ಪವಾಡ ಮಾಡಿ ತೋರಿಸಿ ಅಂತ ದುಂಬಾಲುಬಿದ್ದರು. ಸರಿ ಅದಕ್ಕೇನಂತೆ ಅಂದ ಸಂತ ಮೊದಲು ನನಗೊಂದು ಮೇಕೆ ಮತ್ತೊಂದು ಹಸು ತಂದುಕೊಡಿ ಅಂದರು. ಓಹೋ ಇದೇನೋ ಭಾರೀ ಪವಾಡವೇ ಇರಬೇಕು ಅಂದುಕೊಂಡ ಜನ ಎಲ್ಲಿಂದಲೋ ಒಂದು ಹಸು, ಮೇಕೆ ಎರಡನ್ನೂ ಹಿಡಿದುಕೊಂಡು ಬಂದರೆ ಆ ಸಂತ ಎರಡನ್ನೂ ಹಿಡಿದು ತಿಂದೇಬಿಟ್ಟರು. ಮಿಕ್ಕಿದ್ದು ಬರಿಯ ಮೂಳೆ ಮಾತ್ರ.

ಜನರೆಲ್ಲ ಇದೊಳ್ಳೆ ಕಥೆಯಾಯಿತಲ್ಲ ಅಂದುಕೊಳ್ಳುತ್ತಿರುವಷ್ಟರಲ್ಲೇ ಹಸುವಿನ ದೇಹದ ಮೂಳೆಗಳಿಗೆ ಮೇಕೆಯ ತಲೆಬುರುಡೆ ಅಂಟಿಸಿದ ಸಂತ ಅದಕ್ಕೆ ಜೀವಕೊಟ್ಟರಂತೆ. ತಕ್ಷಣ ಮೇಲೆದ್ದ ಹಸುವಿನ ದೇಹ, ಮೇಕೆಯ ತಲೆಯ ಆ ವಿಚಿತ್ರ ಪ್ರಾಣಿ ಓಡಿಹೋಗಿ ಕಾಡುಸೇರಿತಂತೆ" - ಇದು ಟಾಕಿನ್ ಎಂಬ ವಿಚಿತ್ರಪ್ರಾಣಿ ಸೃಷ್ಟಿಯಾದ ಬಗೆಗೆ ಭೂತಾನಿನಲ್ಲಿ ಪ್ರಚಲಿತದಲ್ಲಿರುವ ಜಾನಪದ ಕತೆ.

ಹಸುವಿನ ದೇಹ, ಮೇಕೆಯ ತಲೆಯ ಟಾಕಿನ್ (Budorcas taxicolor) ಈ ಕಥೆಯಷ್ಟೇ ವಿಚಿತ್ರವಾಗಿರುವುದು ತಮಾಷೆಯ ಸಂಗತಿ. ಜೀವವಿಜ್ಞಾನಿಗಳಿಗೂ ಇದರ ವೈಚಿತ್ರ್ಯ ವಿಶೇಷವಾಗಿ ಕಾಣಿಸಿರುವುದರಿಂದ ಅವರೂ ಈ ಪ್ರಾಣಿಯನ್ನು ತನ್ನದೇ ಆದ ವಿಶೇಷ ಗುಂಪಿಗೆ ಸೇರಿಸಿಬಿಟ್ಟಿದ್ದಾರೆ. ಇನ್ನು ಭೂತಾನ್ ದೇಶವಂತೂ ಟಾಕಿನ್ ಅನ್ನು ತನ್ನ ರಾಷ್ಟ್ರೀಯ ಪ್ರಾಣಿಯಾಗಿ ಗುರುತಿಸಿದೆ.
ಹಿಮಾಲಯದ ಆಸುಪಾಸಿನ ಪ್ರದೇಶ ಹಾಗೂ ಚೀನಾದ ಪಶ್ಚಿಮ ಭಾಗಗಳು ಟಾಕಿನ್‌ಗಳ ನೆಲೆ. ನಾಲ್ಕುಸಾವಿರ ಅಡಿಗೂ ಎತ್ತರದ ಪರ್ವತಪ್ರದೇಶಗಳಲ್ಲಿ ಮಾತ್ರವೇ ಕಂಡುಬರುವ ಟಾಕಿನ್ ತನ್ನ ವಿಶಿಷ್ಟ ರೂಪ ಹಾಗೂ ದಟ್ಟ ತುಪ್ಪಳದಿಂದಾಗಿ ಗಮನಸೆಳೆಯುತ್ತದೆ. ಪರ್ವತ ಪ್ರದೇಶದಲ್ಲಿ ಚಳಿ ತೀವ್ರವಾದಾಗ ಮಾತ್ರ ಇವು ಕೆಳಗಿನ ಕಣಿವೆಗಳತ್ತ ವಲಸೆಹೋಗುತ್ತವೆ.

ಸುಮಾರು ನಾಲ್ಕು ಅಡಿಯಷ್ಟು ಎತ್ತರ ಹಾಗೂ ಐದಾರುನೂರು ಕೆಜಿ ತೂಕದವರೆಗೂ ಬೆಳೆಯುವ ಈ ಪ್ರಾಣಿ ಅಪ್ಪಟ ಸಸ್ಯಾಹಾರಿ. ಗಂಡು ಹೆಣ್ಣು ಎರಡರ ತಲೆ ಮೇಲೂ ಕೊಂಬು ನೋಡಬಹುದು. ತಮ್ಮ ನಿಲುಕಿಗೆ ಸಿಗಬಲ್ಲ ಯಾವುದೇ ಗಿಡ-ಮರದ ಸೊಪ್ಪು ಇವುಗಳ ಮುಖ್ಯ ಆಹಾರ. ಎಲೆಗಳು ಸುಲಭಕ್ಕೆ ನಿಲುಕದಿದ್ದರೆ ಎರಡು ಕಾಲುಗಳ ಮೇಲೆ ನಿಂತು ಅಥವಾ ಇನ್ನು ಕೆಲ ಸಂದರ್ಭಗಳಲ್ಲಿ ಗಿಡವನ್ನೇ ಬೀಳಿಸಿ ಮೇಯುವ ಅಭ್ಯಾಸ ಕೂಡ ಇದೆ.

ಹಗಲುಹೊತ್ತಿನಲ್ಲಿ ಚುರುಕಾಗಿರುವ ಈ ಪ್ರಾಣಿಗಳದು ಗುಂಪುಗಳಲ್ಲಿ ಮೇಯುವ ಅಭ್ಯಾಸ. ಒಂದೇ ಗುಂಪಿನಲ್ಲಿ ಮುನ್ನೂರು ಟಾಕಿನ್‌ಗಳನ್ನು ನೋಡಿರುವವರೂ ಇದ್ದಾರೆ. ಆದರೆ ವಯಸ್ಸಾದ ಗಂಡುಗಳು ಮಾತ್ರ ಒಬ್ಬಂಟಿಯಾಗಿರುತ್ತವೆ.

ಬೇಸಿಗೆಕಾಲ, ಟಾಕಿನ್‌ಗಳ ಸಂತಾನೋತ್ಪತ್ತಿಯ ಸಮಯ. ಏಳೆಂಟು ತಿಂಗಳ ನಂತರ ಹುಟ್ಟುವ ಮರಿ ಮೂರೇ ದಿನದಲ್ಲಿ ತಾಯಿಯೊಡನೆ ಸರಾಗವಾಗಿ ಓಡಾಡಲು ಕಲಿತುಬಿಡುತ್ತದೆ. ಹುಲಿಮರಿಯನ್ನು ಕಬ್ ಎಂದು ಕರೆಯುವಂತೆ ಟಾಕಿನ್ ಮರಿಯನ್ನು ಕಿಡ್ ಎನ್ನುತ್ತಾರೆ.

ಕರಡಿ, ಹಿಮಚಿರತೆ ಹಾಗೂ ತೋಳ ಟಾಕಿನ್‌ನನ್ನು ಕಾಡುವ ಪ್ರಮುಖ ಬೇಟೆಗಾರ ಪ್ರಾಣಿಗಳು. ಮಾನವ ಬೇಟೆಗಾರರ ಉಪಟಳವೂ ಇಲ್ಲದಿಲ್ಲ. ಜೊತೆಗೆ ಅರಣ್ಯಗಳಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚುತ್ತಿರುವುದರಿಂದ ಇವುಗಳ ನೆಲೆ ದಿನೇದಿನೇ ಕ್ಷೀಣಿಸುತ್ತಿದೆ; ಮೇವಿಗಾಗಿ ಸಾಕುಪ್ರಾಣಿಗಳೊಡನೆ ಸ್ಪರ್ಧಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.  ಹೀಗಾಗಿ ಇವನ್ನು ಸಂರಕ್ಷಣಾ ದೃಷ್ಟಿಯಿಂದ ತೊಂದರೆಗೊಳಗಾಗಿರುವ ಪ್ರಭೇದ (ವಲ್ನರಬಲ್ ಸ್ಪೀಷೀಸ್) ಎಂದು ಗುರುತಿಸಲಾಗಿದೆ.

ನವೆಂಬರ್ ೨೦೧೦ರ ವಿಜ್ಞಾನ ಲೋಕದಲ್ಲಿ ಪ್ರಕಟವಾದ ಲೇಖನ

ಬುಧವಾರ, ಅಕ್ಟೋಬರ್ 20, 2010

ನಿಲ್ಲದ ವಿಮಾನಕ್ಕಾಗಿ ಮುಗಿಯದ ಹುಡುಕಾಟ

ಟಿ ಜಿ ಶ್ರೀನಿಧಿ

ಈಚಿನ ವರ್ಷಗಳಲ್ಲಿ  ಚಾಲಕರಹಿತ ವಿಮಾನಗಳು (ಅನ್‌ಮ್ಯಾನ್ಡ್ ಏರಿಯಲ್ ವೆಹಿಕಲ್ - ಯುಎವಿ) ರಕ್ಷಣಾ ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿವೆ. ರಕ್ಷಣಾ ಸಿಬ್ಬಂದಿಯ ಜೀವಹಾನಿಯಾಗುವ ಭಯವಿಲ್ಲದೆ, ಶತ್ರುಪ್ರದೇಶದಲ್ಲಿ ಏನೇನು ನಡೆಯುತ್ತಿದೆ ಎನ್ನುವುದನ್ನು ಗಮನಿಸಲು, ಅಲ್ಲಿನ ಚಲನವಲನಗಳ ಚಿತ್ರಗಳನ್ನು ಪಡೆಯಲು,  ಕಡೆಗೆ ಆ ಪ್ರದೇಶಗಳ ಮೇಲೆ ದಾಳಿ ನಡೆಸಲು ಕೂಡ ಈ ವಿಮಾನಗಳು ಉಪಯುಕ್ತವಾಗಿವೆ. ಕೈಯಲ್ಲಿ ಹಿಡಿದುಕೊಳ್ಳುವಷ್ಟು ಪುಟ್ಟ ಗಾತ್ರದಿಂದ ಪ್ರಾರಂಭಿಸಿ ಒಂದೆರಡು ಸಾವಿರ  ಕೆಜಿ ತೂಗುವ ದೊಡ್ಡ ವಿಮಾನಗಳವರೆಗೆ ಅನೇಕ ಬಗೆಯ ಚಾಲಕರಹಿತ ವಿಮಾನಗಳು ವಿಶ್ವದ ವಿವಿಧೆಡೆಗಳಲ್ಲಿ ಬಳಕೆಯಲ್ಲಿವೆ.

ಆದರೆ ಇಂತಹ ವಿಮಾನಗಳ  ಬಳಕೆಯಲ್ಲಿ ಅವುಗಳಿಗೆ ಪೂರೈಸಬೇಕಾದ  ಇಂಧನದ್ದೇ ಬಹುದೊಡ್ಡ ಸಮಸ್ಯೆ. ಎಷ್ಟೇ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ  ವಿಮಾನವಾದರೂ  ಅದರಲ್ಲಿ ಸೀಮಿತ ಪ್ರಮಾಣದ  ಇಂಧನವನ್ನಷ್ಟೆ ಶೇಖರಿಸಿಡಲು ಸಾಧ್ಯ; ಹೀಗಾಗಿ  ನಿರ್ದಿಷ್ಟ ಸಮಯದ ಹಾರಾಟದ ನಂತರ ಅವು ತಮ್ಮ ನಿಯಂತ್ರಣ ಕೇಂದ್ರಕ್ಕೆ ವಾಪಸ್  ಬರಬೇಕಾಗುತ್ತದೆ. ಇದರಿಂದ ಸಮಯ ವ್ಯರ್ಥವಾಗುವುದಷ್ಟೇ ಅಲ್ಲದೆ ಶತ್ರುಪ್ರದೇಶದಲ್ಲಿ ಹೆಚ್ಚು ದೂರ ಸಾಗುವುದೂ ಅಸಾಧ್ಯವಾಗುತ್ತದೆ; ಹೀಗಾಗಿ ಈ ವಿಮಾನಗಳ ಕಾರ್ಯಕ್ಷೇತ್ರವೂ ಸೀಮಿತವಾಗುತ್ತದೆ.

ಈ ಸಮಸ್ಯೆಯನ್ನು ಹೋಗಲಾಡಿಸಲು ಬಹುದಿನಗಳಿಂದ ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಸಾಂಪ್ರದಾಯಿಕ ಇಂಧನ ಮೂಲಗಳ ಬದಲಿಗೆ ಸೌರಶಕ್ತಿ ಬಳಸಿದರೆ ಸುದೀರ್ಘ  ಕಾಲದವರೆಗೆ ನಿಲ್ಲದೆ ಹಾರಾಡುವಂತಹ ವಿಮಾನಗಳನ್ನು ಸೃಷ್ಟಿಸುವುದು ಸಾಧ್ಯ ಎಂಬ ಪರಿಕಲ್ಪನೆಯನ್ನಿಟ್ಟುಕೊಂಡೇ ಸಾಕಷ್ಟು ಕೆಲಸ ನಡೆದಿದೆ. ೧೯೭೪ರಷ್ಟು ಹಿಂದೆಯೇ ಆಸ್ಟ್ರೋಫ್ಲೈಟ್ ಸನ್‌ರೈಸ್ ಎಂಬ ಹೆಸರಿನ ಸೌರಶಕ್ತಿಚಾಲಿತ ವಿಮಾನ ಯಶಸ್ವಿ ಹಾರಾಟ ನಡೆಸಿತ್ತು. ೨೦೦೦ನೇ ಇಸವಿಯ ಆಸುಪಾಸಿನಲ್ಲಿ ಸಾಕಷ್ಟು ಸುದ್ದಿಮಾಡಿದ್ದ ಹೀಲಿಯೋಸ್ ಎಂಬ ಸೌರ ವಿಮಾನವಂತೂ ಮೂವತ್ತು ಸಾವಿರ ಅಡಿಗಳಷ್ಟು ಎತ್ತರಕ್ಕೆ ಹಾರಿ ದಾಖಲೆ ನಿರ್ಮಿಸಿತ್ತು.

ಇಷ್ಟೆಲ್ಲ ಆದರೂ ಇಂಧನ  ಮರುಪೂರೈಕೆಯ ಅಗತ್ಯವಿಲ್ಲದೆ ಸುದೀರ್ಘ ಅವಧಿಯ ಹಾರಾಟ ಕೈಗೊಳ್ಳುವ ನಿಟ್ಟಿನಲ್ಲಿ  ಮಾತ್ರ ಯಾವ ಗಮನಾರ್ಹ ಸಾಧನೆಯೂ  ಕಂಡುಬಂದಿರಲಿಲ್ಲ.  ೨೦೦೧ರಲ್ಲಿ ಸತತ ಮೂವತ್ತು  ಗಂಟೆಗಳ ಕಾಲ ಹಾರಾಟ ನಡೆಸಿದ ಗ್ಲೋಬಲ್ ಹಾಕ್ ವಿಮಾನದ್ದೇ ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. ಚಾಲಕರಹಿತ ವಿಮಾನವೇಕೆ,  ಮನುಷ್ಯಚಾಲಿತ ವಿಮಾನ ಕೂಡ ಇಂಧನ ಮರುಪೂರೈಕೆ ಬೇಡದೆ ಒಂಬತ್ತು ದಿನಗಳಿಗಿಂತ ಹೆಚ್ಚುಕಾಲ ಹಾರಾಡಿರಲಿಲ್ಲ.

ಆದರೆ ಈಗ ಹಿಂದಿನ  ಎಲ್ಲ ದಾಖಲೆಗಳನ್ನೂ ಮುರಿದಿರುವ ಕೈನೆಟಿಕ್ ಜಫೈರ್ ಎಂಬ ಚಾಲಕರಹಿತ ವಿಮಾನ ಒಮ್ಮೆಯೂ ನಿಲ್ಲದೆ ಸತತ ಎರಡು ವಾರಗಳ ಕಾಲ ಹಾರಾಟ ನಡೆಸಿ ಇತಿಹಾಸ ಸೃಷ್ಟಿಸಿದೆ. ಕಳೆದ ಜುಲೈ ೯ರಿಂದ ಜುಲೈ ೨೩ರ ಅವಧಿಯಲ್ಲಿ ಸತತವಾಗಿ ೩೩೬ ಗಂಟೆಗಳ ಕಾಲ ಹಾರಾಡಿದ ಈ ವಿಮಾನಕ್ಕೀಗ ಎಂದೆಂದೂ ನಿಲ್ಲದ ವಿಮಾನ ಎಂಬ ಬಿರುದಿನ ಹೆಮ್ಮೆ.

ಈ ವಿಮಾನದ ಮೈತುಂಬಾ ಅಳವಡಿಸಲಾಗಿದ್ದ ಸೌರಶಕ್ತಿ ಕೋಶಗಳು  ಸೂರ್ಯನ ಬೆಳಕನ್ನು ಸೌರಶಕ್ತಿಗೆ ಪರಿವರ್ತಿಸಿ ಲೀಥಿಯಂ-ಸಲ್ಫರ್ ಬ್ಯಾಟರಿಗಳಲ್ಲಿ ಶೇಖರಿಸುತ್ತವೆ. ಈ  ವಿದ್ಯುತ್ತಿನಿಂದಲೇ ವಿಮಾನದ ತಡೆರಹಿತ ಹಾರಾಟ ಸಾಧ್ಯವಾಗುತ್ತದೆ. ಹಗಲು ಹೊತ್ತಿನಲ್ಲಿ ಶೇಖರವಾದ ಹೆಚ್ಚಿನ ವಿದ್ಯುತ್ತು ರಾತ್ರಿಹೊತ್ತಿನ ಹಾರಾಟಕ್ಕೆ ಬಳಕೆಯಾಗುತ್ತದೆ.

ಇಂತಹ ಅಭೂತಪೂರ್ವ  ಸಾಧನೆಯಿಂದ ವಿಶ್ವದ ಗಮನಸೆಳೆದಿರುವ ಈ ವಿಮಾನವನ್ನು ಸೃಷ್ಟಿಸಿದವರು ಬ್ರಿಟನ್ನಿನ ಕೈನೆಟಿಕ್ ಸಂಸ್ಥೆಯ ತಂತ್ರಜ್ಞರು. ಈ  ವಿಮಾನ ಅತಿ ಶೀಘ್ರದಲ್ಲೇ ಅನೇಕ ರೀತಿಯ ಉದ್ದೇಶಗಳಿಗಾಗಿ ಬಳಕೆಯಾಗಲಿದೆ ಎಂಬ ಸಂತಸ ಅವರದು. ಯಾವುದೇ ಪ್ರದೇಶದ ಮೇಲೆ ಸತತ ನಿಗಾ ಇಡುವುದನ್ನು ಸಾಧ್ಯವಾಗಿಸಲಿರುವ ಜಫೈರ್ ವಿಮಾನ ರಕ್ಷಣಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಅನೇಕ ವೈಜ್ಞಾನಿಕ ಉದ್ದೇಶಗಳಿಗಾಗಿಯೂ ಬಳಕೆಯಾಗಬಲ್ಲದು ಎಂದು ಅವರು ಹೇಳುತ್ತಾರೆ.

ಆದರೆ ಇಲ್ಲೂ ಒಂದು  ಸಮಸ್ಯೆಯಿದೆ - ಸೌರಶಕ್ತಿಚಾಲಿತ ವಿಮಾನಗಳ  ಮೇಲೆ ಸಾಕಷ್ಟು ಸಂಖ್ಯೆಯ ಸೌರಶಕ್ತಿಕೋಶಗಳಿರಬೇಕಾಗುತ್ತದೆ; ಹೀಗಾಗಿ ಇಂತಹ ವಿಮಾನಗಳ  ಗಾತ್ರವನ್ನು ಗಣನೀಯವಾಗಿ ಚಿಕ್ಕದಾಗಿಸುವುದು ಕಷ್ಟ. ದೊಡ್ಡಗಾತ್ರದ ವಿಮಾನಗಳು ಶತ್ರುಪ್ರದೇಶದಲ್ಲಿ ಗೂಢಚಾರಿಕೆ ನಡೆಸುವುದು ಎಷ್ಟು ಕಷ್ಟ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ?

ಅಮೆರಿಕಾದ ಎಂಐಟಿಯ ತಂತ್ರಜ್ಞರು ಈ ಸಮಸ್ಯೆಗೂ ಒಂದು ಪರಿಹಾರ ಹುಡುಕಲು ಹೊರಟಿದ್ದಾರೆ. ಹೆಚ್ಚೂಕಡಿಮೆ ಪ್ರಪಂಚದ ಎಲ್ಲಕಡೆಗಳಲ್ಲೂ ವ್ಯಾಪಿಸಿಕೊಂಡಿರುವ ವಿದ್ಯುತ್ ವಿತರಣಾ ಜಾಲಗಳಿಂದ ವಿದ್ಯುತ್ತನ್ನು ಕದಿಯುವುದು ಅವರ ಐಡಿಯಾ. ಶತ್ರುಪ್ರದೇಶದಲ್ಲಿ ಹಾರಾಡುವ ವಿಮಾನಕ್ಕೆ ಅವರದೇ ಖರ್ಚಿನಲ್ಲಿ ಇಂಧನವೂ ದೊರಕುವಂತೆ ಮಾಡುವ  ಉದ್ದೇಶ ಈ ತಂತ್ರಜ್ಞರದು. ನಮ್ಮ ಮನೆಗಳ ಮುಂದಿನ ವಿದ್ಯುತ್ ತಂತಿಯ ಮೇಲೆ ಕಾಗೆಗಳು ಕೂರುತ್ತವಲ್ಲ, ಅದೇ ರೀತಿ ವಿದ್ಯುತ್ ತಂತಿಗಳ ಮೇಲೆ "ಕುಳಿತು" ತನ್ನ  ಬ್ಯಾಟರಿಗಳನ್ನು ರೀಚಾರ್ಜ್ ಮಾಡಿಕೊಳ್ಳಬಲ್ಲ ಪುಟ್ಟ ವಿಮಾನವೊಂದನ್ನು ಅವರು ರೂಪಿಸುತ್ತಿದ್ದಾರೆ. ಅಮೆರಿಕಾರ ಡೇಟನ್‌ನಲ್ಲಿರುವ ಏರ್‌ಫೋರ್ಸ್ ರೀಸರ್ಚ್ ಲ್ಯಾಬೊರೇಟರಿ  ಕೂಡ ಇಂತಹುದೇ ವಿಮಾನಗಳ ತಯಾರಿಕೆಯಲ್ಲಿ ತೊಡಗಿಕೊಂಡಿದೆಯಂತೆ.

ಒಟ್ಟಿನಲ್ಲಿ ವಿಮಾನಯಾನ  ಕ್ಷೇತ್ರದಲ್ಲಿ ಹೊಸದೊಂದು ಶಕೆಯ ಆರಂಭಕ್ಕೆ ರಂಗಸಜ್ಜಿಕೆ ಸಿದ್ಧವಾಗಿದೆ. ಇದಕ್ಕೆ ಕಾರಣವಾಗುವ  ಹೊಸ ಬೆಳವಣಿಗೆಗಳು ಬರಿಯ ಯುದ್ಧರಂಗಕ್ಕಷ್ಟೆ ಸೀಮಿತವಾಗದೆ ಮನುಕುಲದ ಕಲ್ಯಾಣಕ್ಕೆ ತಮ್ಮ ಕೊಡುಗೆ ನೀಡಲಿ ಎಂದು ಹಾರೈಸುವುದಷ್ಟೆ ನಮ್ಮ ಕೆಲಸ.

ಅಕ್ಟೋಬರ್ ೨೦, ೨೦೧೦ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಅಕ್ಟೋಬರ್ 19, 2010

ನೊಬೆಲ್ ಅಲ್ಲ, ಇಗ್-ನೊಬೆಲ್!

ನನ್ನ ಅಂಕಣ 'ವಿಜ್ಞಾಪನೆ' ಇಂದಿನಿಂದ ಉದಯವಾಣಿಯಲ್ಲಿ ಪ್ರಾರಂಭವಾಗಿದೆ. ಪ್ರತಿ ಮಂಗಳವಾರದ ಪುರವಣಿಯಲ್ಲಿ ಪ್ರಕಟವಾಗುವ ಈ ಅಂಕಣದ ಮೊದಲ ಬರಹ ಇಲ್ಲಿದೆ.

ವಿಜ್ಞಾನ ತಂತ್ರಜ್ಞಾನ ಕ್ಷೇತ್ರ ಎಷ್ಟು ರೋಚಕವೋ ಅಷ್ಟೇ ವಿಚಿತ್ರ ಕೂಡ. ವಿಜ್ಞಾನಿಗಳು ಏನೇನನ್ನೋ ಕಂಡುಹಿಡಿಯುತ್ತಿರುತ್ತಾರೆ. ಹೊಸಹೊಸ ಸಿದ್ಧಾಂತಗಳನ್ನು ಮಂಡಿಸುತ್ತಿರುತ್ತಾರೆ; ಉಪಯೋಗವಿದೆಯೋ ಇಲ್ಲವೋ ಚಿತ್ರವಿಚಿತ್ರ ವಸ್ತುಗಳನ್ನು ನಿರಂತರವಾಗಿ ಸೃಷ್ಟಿಸುತ್ತಲೇ ಇರುತ್ತಾರೆ. ಜೀವನವನ್ನೇ ಬದಲಿಸುವಂಥ ಅನ್ವೇಷಣೆಗಳ ಜೊತೆಗೆ ಹಾಸ್ಯಾಸ್ಪದವಾದ ಸಂಶೋಧನೆಗಳೂ ಆಗಿಂದಾಗ್ಗೆ ಸುದ್ದಿಮಾಡುತ್ತಿರುತ್ತವೆ.

ನಮ್ಮ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಬಲ್ಲ ಸಂಶೋಧನೆಗಳಿಗೆ ನೂರೆಂಟು ಪ್ರಶಸ್ತಿಗಳಿವೆ; ಯಾವ್ಯಾವುದೋ ಏಕೆ, ನೊಬೆಲ್ ಪ್ರಶಸ್ತಿಯೇ ಇದೆ. ಅದರಲ್ಲೂ ರಾಸಾಯನಶಾಸ್ತ್ರಕ್ಕೆ, ಜೀವಶಾಸ್ತ್ರಕ್ಕೆ, ಭೌತಶಾಸ್ತ್ರಕ್ಕೆ, ವೈದ್ಯವಿಜ್ಞಾನಕ್ಕೆ - ಹೀಗೆ ಬೇರೆಬೇರೆ ವಿಷಯಗಳಿಗೆ ಬೇರೆಯದೇ ಆದ ನೊಬೆಲ್ ಪ್ರಶಸ್ತಿಗಳಿವೆ.

ಆದರೆ ವಿಚಿತ್ರ ಸಂಶೋಧನೆಗಳ ಪಾಡು ಏನಾಗಬೇಕು? ಅವುಗಳ ಸುದ್ದಿ ಕೇಳಿದ ಜನರ ಅಪಹಾಸ್ಯವೇ ಪ್ರಶಸ್ತಿ ಎಂದುಕೊಳ್ಳಲಾದೀತೆ?

ಅಂತಹ ಪರಿಸ್ಥಿತಿ ಬೇಡ ಅಂತಲೇ 'ಆನಲ್ಸ್ ಆಫ್ ಇಂಪ್ರಾಬಬಲ್ ರೀಸರ್ಚ್' ಎಂಬ ಸಂಸ್ಥೆ ವಿಚಿತ್ರ ಸಂಶೋಧನೆ-ಅಧ್ಯಯನಗಳಿಗೂ ಪ್ರಶಸ್ತಿ ನೀಡುವ ಪರಿಪಾಠ ಬೆಳೆಸಿಕೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಆಯಾ ವರ್ಷ ದಾಖಲಾಗುವ ಅತ್ಯಂತ ವಿಚಿತ್ರ, ಹಾಸ್ಯಾಸ್ಪದ ಸಾಧನೆಗಳಿಗೆ 'ಇಗ್ನೊಬೆಲ್' ಹೆಸರಿನ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಕಳೆದ ಇಪ್ಪತ್ತೊಂದು ವರ್ಷಗಳಿಂದ ನೀಡಲಾಗುತ್ತಿರುವ ಇಗ್ನೊಬೆಲ್ ಪ್ರಶಸ್ತಿ ಪ್ರದಾನ ಮಾಡಲು ನೊಬೆಲ್ ವಿಜೇತರನ್ನೇ ಆಹ್ವಾನಿಸಲಾಗುವುದು ವಿಶೇಷ.

'ಮೊದಲು ನಗಿಸಿ ಆನಂತರ ಯೋಚಿಸುವಂತೆ ಮಾಡುವ ಸಂಶೋಧನೆಗಳಿಗೆ ಈ ಪ್ರಶಸ್ತಿ' ಎನ್ನುವುದು ಇಗ್ನೊಬೆಲ್ ಆಯೋಜಕರ ಹೇಳಿಕೆ. ಅವರು ಎರಡು ತಿಂಗಳಿಗೊಮ್ಮೆ ಪ್ರಕಟಿಸುವ 'ಆನಲ್ಸ್ ಆಫ್ ಇಂಪ್ರಾಬಬಲ್ ರೀಸರ್ಚ್' ಪತ್ರಿಕೆಯ ಧ್ಯೇಯವಾಕ್ಯವೂ ಇದೇ. ತಮ್ಮ ಸಂಶೋಧನೆಗಳ ಬಗೆಗೆ ಸುಳ್ಳುಹೇಳುವ ಅಥವಾ ಜನರ ಹಿತಕ್ಕೆ ವಿರೋಧವಾಗಿರುವ ಸಂಶೋಧಕ/ಸಂಸ್ಥೆಗಳಿಗೂ ಈ ಪ್ರಶಸ್ತಿ ಆಗಿಂದಾಗ್ಗೆ ಬಿಸಿಮುಟ್ಟಿಸುತ್ತದೆ.

ಈ ವರ್ಷದ ಇಗ್ನೊಬೆಲ್ ಪ್ರಶಸ್ತಿಗಳು ಇತ್ತೀಚೆಗಷ್ಟೆ ಪ್ರಕಟವಾಗಿ ವಿಶ್ವದ ಗಮನಸೆಳೆದಿವೆ. ಕಳೆದ ಸೆಪ್ಟೆಂಬರ್ ೩೦ರಂದು ಅಮೆರಿಕಾದಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ವಿವಿಧ ವಿಜ್ಞಾನಿಗಳಿಗೆ, ಸಂಸ್ಥೆಗಳಿಗೆ ನೀಡಲಾಯಿತು.

ಇಂಜಿನಿಯರಿಂಗ್ ವಿಭಾಗದ ಪ್ರಶಸ್ತಿ ಗೆದ್ದದ್ದು ಬ್ರಿಟನ್ನಿನ ವಿಜ್ಞಾನಿ ಕರೀನಾ ವೈಟ್‌ಹೌಸ್ ಮತ್ತು ಅವರ ತಂಡ. ದೂರನಿಯಂತ್ರಿತ ಹೆಲಿಕಾಪ್ಟರ್ ಬಳಸಿ ತಿಮಿಂಗಿಲಗಳ ಉಸಿರಾಟದ ಅಧ್ಯಯನಮಾಡಿದ್ದು ಈ ತಂಡದ ಸಾಧನೆ. ತಿಮಿಂಗಿಲದ ಉಸಿರಿನಲ್ಲಿರುವ ಅನಿಲಗಳು, ಸಿಂಬಳ ಇತ್ಯಾದಿಗಳ ಅಧ್ಯಯನ ಮಾಡಿ ಅವುಗಳಲ್ಲಿರುವ ರೋಗಕಾರಕ ಸೂಕ್ಷ್ಮಾಣುಗಳನ್ನು ಪತ್ತೆಮಾಡುವುದು ಅವರ ಉದ್ದೇಶವಾಗಿತ್ತು.

ನೆದರ್‌ಲೆಂಡಿನ ಸೈಮನ್ ರೀಟ್‌ವೆಲ್ಡ್ ಮತ್ತು ಸಂಗಡಿಗರಿಗೆ ಆರೋಗ್ಯ ವಿಜ್ಞಾನ ಕ್ಷೇತ್ರದ ಇಗ್ನೊಬೆಲ್ ಪ್ರಶಸ್ತಿ ಬಂತು. ಏರುತಗ್ಗುಗಳಲ್ಲಿ ಅತಿವೇಗದ ಚಲನೆಯ ಅನುಭವ ನೀಡುವ ರೋಲರ್ ಕೋಸ್ಟರ್ ಯಾನ ಆಸ್ತಮಾ ರೋಗಕ್ಕೆ ಮದ್ದು ಎನ್ನುವುದು ಈ ತಂಡದ ಸಂಶೋಧನೆ.

ಭೌತಶಾಸ್ತ್ರದ ಪ್ರಶಸ್ತಿ ಬಂದದ್ದು ಇನ್ನೊಂದು ವಿಶಿಷ್ಟ ಸಂಶೋಧನೆಗೆ. ಚಳಿಗಾಲದಲ್ಲಿ ರಸ್ತೆಗಳಲ್ಲಿ ಹಿಮ ಬೀಳುತ್ತಲ್ಲ, ಆಗ ಜಾರಿಬೀಳುವುದನ್ನು ತಪ್ಪಿಸಲು ಕಾಲುಚೀಲವನ್ನು ಬೂಟಿನ ಮೇಲೆ ಹಾಕಿಕೊಳ್ಳಿ ಎಂದು ಹೇಳಿದ ನ್ಯೂಜಿಲೆಂಡಿನ ವಿಜ್ಞಾನಿಗಳಿಗೆ ಈ ಬಹುಮಾನ ನೀಡಲಾಗಿದೆ.

ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಇಗ್ನೊಬೆಲ್ ಗೆದ್ದ ಸಂಶೋಧನೆಯದು ಇನ್ನೂ ತಮಾಷೆಯ ಕತೆ. ಸೂಕ್ಷ್ಮಜೀವಿಗಳು ಹೆಚ್ಚಾಗಿ ಗಡ್ಡಧಾರಿ ವಿಜ್ಞಾನಿಗಳಿಗೇ ಅಂಟಿಕೊಂಡಿರುತ್ತವೆ ಎಂದು ಕಂಡುಹಿಡಿದ ಅಮೆರಿಕಾದ ವಿಜ್ಞಾನಿಗಳು ಈ ಬಹುಮಾನ ಗೆದ್ದರು.

ಅಂದಹಾಗೆ ಇಗ್ನೊಬೆಲ್ ಪ್ರಶಸ್ತಿಗಳು ಬರಿಯ ವಿಜ್ಞಾನ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ತಾವೂ ಮುಳುಗುವ ಜೊತೆಗೆ ವಿಶ್ವದ ಅರ್ಥವ್ಯವಸ್ಥೆಯನ್ನೂ ಹದಗೆಡಿಸಿದ ಹಣಕಾಸು ಸಂಸ್ಥೆಗಳ ಅಧಿಕಾರಿಗಳಿಗೆ ಅರ್ಥಶಾಸ್ತ್ರ ಕ್ಷೇತ್ರದ ಪ್ರಶಸ್ತಿ ನೀಡಲಾಗಿದೆ. ಅಂತೆಯೇ ಬೇರೆಯವರಿಗೆ ಬಯ್ಯುವುದರಿಂದ ನಿಮ್ಮ ನೋವನ್ನು ಕಡಿಮೆಮಾಡಿಕೊಳ್ಳಬಹುದು ಎಂದು ಕಂಡುಹಿಡಿದವರಿಗೆ ಇಗ್ನೊಬೆಲ್ ಶಾಂತಿ ಪ್ರಶಸ್ತಿ ಬಂದಿದೆ.

ಇಗ್ನೊಬೆಲ್ ಪ್ರಶಸ್ತಿ ಕುರಿತ ಇನ್ನೂ ಹೆಚ್ಚಿನ ವಿವರಗಳು ಈ ತಾಣದಲ್ಲಿ ಲಭ್ಯವಿವೆ. ಇಗ್ನೊಬೆಲ್ ಪರಿಕಲ್ಪನೆಯ ಪರಿಚಯ, ಇದುವರೆಗೂ ಆ ಪ್ರಶಸ್ತಿ ಪಡೆದ ವಿಚಿತ್ರ ಸಂಶೋಧನೆಗಳ ವಿವರ, 'ಆನಲ್ಸ್ ಆಫ್ ಇಂಪ್ರಾಬಬಲ್ ರೀಸರ್ಚ್' ಪತ್ರಿಕೆಯ ಸಂಚಿಕೆಗಳು ಎಲ್ಲ ಇಲ್ಲಿ ದೊರಕುತ್ತವೆ.

ಅಕ್ಟೋಬರ್ ೧೯, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಶುಕ್ರವಾರ, ಅಕ್ಟೋಬರ್ 15, 2010

ಕನ್ನಡದಲ್ಲಿ ಐಟಿ ಸಾಹಿತ್ಯ - ಮಾಹಿತಿ ಸಂಗ್ರಹಣೆಗೆ ನೆರವು ಬೇಕು!

ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಕುರಿತ ಪುಸ್ತಕಗಳು ಮೊದಲೇ ಕಡಿಮೆ. ಇರುವ ಪುಸ್ತಕಗಳಿಗೆ ಪ್ರಚಾರವಂತೂ ಇಲ್ಲವೇ ಇಲ್ಲ. ಬೇರೆ ಪುಸ್ತಕಗಳನ್ನು ನೋಡದೆ ನಮ್ಮದೇ ಮೊದಲ ಪುಸ್ತಕ ಎಂದು ಹೇಳಿಕೊಳ್ಳುವವರೂ ಇದ್ದಾರೆ. ಹೀಗಾಗಿ ಕನ್ನಡದಲ್ಲಿ ಈವರೆಗೆ ಪ್ರಕಟವಾಗಿರುವ ಐಟಿ ಪುಸ್ತಕಗಳೆಷ್ಟು ಎಂಬ ಪ್ರಶ್ನೆಗೆ ಉತ್ತರಿಸುವುದು ಬಹಳ ಕಷ್ಟದ ಕೆಲಸ.

ಇ-ಜ್ಞಾನ ಇದೀಗ ಈ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ ಶುರುಮಾಡಿದೆ. ಕನ್ನಡದಲ್ಲಿ ಈವರೆಗೆ ಪ್ರಕಟವಾಗಿರುವ ಐಟಿ ಪುಸ್ತಕಗಳ ಬಗ್ಗೆ ನಿಮ್ಮಲ್ಲಿರುವ ಮಾಹಿತಿಯನ್ನು ದಯಮಾಡಿ ನಮ್ಮೊಡನೆ ಹಂಚಿಕೊಳ್ಳಿ. ಕೆಳಗಿನ ಪಟ್ಟಿಯಲ್ಲಿ ದಾಖಲಾಗಿರುವ ಪುಸ್ತಕಗಳ ವಿವರಣೆ ತಪ್ಪು ಅಥವಾ ಅಪೂರ್ಣವಾಗಿದ್ದರೆ ಅದನ್ನೂ ಹೇಳಿ.

ಧನ್ಯವಾದಗಳು!

ಬುಧವಾರ, ಅಕ್ಟೋಬರ್ 13, 2010

ಮುಂದಿನ ಹೆಜ್ಜೆ ಸೂರ್ಯನ ಕಡೆಗೆ!

ಟಿ ಜಿ ಶ್ರೀನಿಧಿ

ಕಳೆದ ವರ್ಷ ರೋಚಕ  ಯಶಸ್ಸು ಪಡೆದ ಚಂದ್ರಯಾನದ  ನಂತರ ಪ್ರಪಂಚದ ಗಮನ ಮತ್ತೊಮ್ಮೆ ಚಂದ್ರನ ಕಡೆಗೆ ತಿರುಗಿದೆ. ಚಂದ್ರನ ಅಧ್ಯಯನವನ್ನು ಗಮನದಲ್ಲಿಟ್ಟುಕೊಂಡ ಅನೇಕ ಯೋಜನೆಗಳು ರೂಪಗೊಳ್ಳುತ್ತಿವೆ; ನಾಲ್ಕು ದಶಕಗಳ ಹಿಂದೆ ಮಾನವ ಚಂದ್ರನ ಮೇಲೆ ಇಳಿದದ್ದು ನಿಜವೋ ಸುಳ್ಳೋ ಎಂಬ ಚರ್ಚೆ ಮುಗಿಯುವ ಮೊದಲೇ ಇನ್ನೊಂದು ಬಾರಿ ಚಂದ್ರನ ಮೇಲೆ ಮನುಷ್ಯರನ್ನು ಇಳಿಸುವ ಯೋಜನೆಗಳು ಕೂಡ ಕೇಳಿಬರುತ್ತಿವೆ. 

ಆದರೆ ಅಷ್ಟರಲ್ಲೇ  ಇನ್ನೊಂದು ಹೆಜ್ಜೆ ಮುಂದೆಹೋಗಿರುವ ಅಮೆರಿಕಾದ  ನಾಸಾ ಸಂಸ್ಥೆ ಮಾನವರಹಿತ ಅಂತರಿಕ್ಷವಾಹನವೊಂದನ್ನು  ಸೂರ್ಯನ ವಾತಾವರಣದೊಳಕ್ಕೆ ನುಗ್ಗಿಸುವ  ಮಹತ್ವಾಕಾಂಕ್ಷಿ ಯೋಜನೆ ಪ್ರಕಟಿಸಿದೆ. 'ಸೋಲಾರ್  ಪ್ರೋಬ್ ಪ್ಲಸ್' ಎಂಬ ಹೆಸರಿನ ಈ ಅಂತರಿಕ್ಷವಾಹನವನ್ನು ೨೦೧೮ರ ವೇಳೆಗೆ ಉಡಾಯಿಸುವ ಆಲೋಚನೆ ನಾಸಾದ್ದು. ಸುಮಾರು ಹದಿನೆಂಟು ಕೋಟಿ ಡಾಲರ್ ವೆಚ್ಚದ ಈ ಯೋಜನೆ ನಮ್ಮೆಲ್ಲರ ಜೀವನಾಧಾರವಾದ ಸೂರ್ಯನ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಒದಗಿಸಲಿದೆ ಎಂಬ ನಿರೀಕ್ಷೆಯಿದೆ. 

ಸೂರ್ಯನ ಹೊರ ವಾತಾವರಣಕ್ಕೆ ಕರೋನಾ ಎಂದು ಹೆಸರು. ಇದು ನಮಗೆ ಕಾಣುವ ಸೂರ್ಯನ ಮೇಲ್ಮೈ(ಫೋಟೋಸ್ಫಿಯರ್)ಗಿಂತ ನೂರಾರು ಪಟ್ಟು ಹೆಚ್ಚು ಬಿಸಿಯಾಗಿರುತ್ತದೆ. ಈ ವೈಚಿತ್ರ್ಯಕ್ಕೆ ಕಾರಣ ಹುಡುಕುವುದು ಸೋಲಾರ್ ಪ್ರೋಬ್ ಪ್ಲಸ್‌ನ ಆಶಯಗಳಲ್ಲೊಂದು. 

ಜೊತೆಗೆ ಸೌರ ಮಾರುತಗಳ (ಸೋಲಾರ್ ವಿಂಡ್) ಬಗೆಗೂ ಹೆಚ್ಚಿನ ಮಾಹಿತಿ ಕಲೆಹಾಕುವ ಉದ್ದೇಶವಿದೆ. ಸೂರ್ಯನ ವಾತಾವರಣದಿಂದ ಹೊರಚಿಮ್ಮುವ ಇಲೆಕ್ಟ್ರಾನ್ ಹಾಗೂ ಪ್ರೋಟಾನುಗಳ ಈ ಧಾರೆ ನಮ್ಮ ಭೂಮಿಯ ಮೇಲೆ ಭೂಕಾಂತೀಯ ಮಾರುತಗಳು, ಅರೋರಾಗಳು ಮುಂತಾದ ಘಟನೆಗಳಿಗೆ ಕಾರಣವಾಗುತ್ತದೆ. ಧೂಮಕೇತುಗಳ ಬಾಲ ಸದಾಕಾಲ ಸೂರ್ಯನ ವಿರುದ್ಧ ದಿಕ್ಕಿಗೇ ತೋರುವುದಕ್ಕೂ ಸೌರಮಾರುತಗಳೇ ಕಾರಣ.

ಅಂತರಿಕ್ಷದ ಮೂಲೆಮೂಲೆಗಳಿಗೂ  ಲಗ್ಗೆಯಿಟ್ಟಿರುವ ಅಂತರಿಕ್ಷವಾಹನಗಳು ಈವರೆಗೂ ತಲುಪದಿರುವ ಕೆಲವೇ ಗುರಿಗಳಲ್ಲಿ ಅತ್ಯಂತ  ಪ್ರಮುಖವಾದದ್ದು ಸೂರ್ಯ. ಈ ಕೊರತೆಯನ್ನು  ನೀಗುವ ಮಹತ್ವದ ಪ್ರಯತ್ನಕ್ಕೆ ಸೋಲಾರ್ ಪ್ರೋಬ್ ಪ್ಲಸ್ ತಂಡ ಸಿದ್ಧವಾಗುತ್ತಿದೆ. 

ಆದರೆ ಸೂರ್ಯನ  ವಾತಾವರಣ ವಿಪರೀತ ಬಿಸಿಯಿರುತ್ತಲ್ಲ, ಈ ಅಂತರಿಕ್ಷವಾಹನ ಅದನ್ನು ಪ್ರವೇಶಿಸುವುದಾದರೂ ಹೇಗೆ  ಎಂದು ನೀವು ಕೇಳಬಹುದು. ನಿಜ, ಸೂರ್ಯನ  ವಾತಾವರಣ ತಲುಪುತ್ತಿದ್ದಂತೆಯೇ ಈ ವಾಹನ ಅಲ್ಲಿನ ಶಾಖ ತಾಳಲಾರದೆ ಸುಟ್ಟುಹೋಗುತ್ತದೆ. ಆದರೆ ಅಷ್ಟರೊಳಗಾಗಿಯೇ ಅದು ಅತ್ಯಂತ ಅಮೂಲ್ಯ ಮಾಹಿತಿಯನ್ನು ಸಂಗ್ರಹಿಸಿ ಕಳುಹಿಸಲಿದೆ. ಅಲ್ಲಿಯವರೆಗಿನ ತಾಪಮಾನ ಹಾಗೂ ವಿಕಿರಣದಿಂದ ಈ ಅಂತರಿಕ್ಷವಾಹನದ ಉಪಕರಣಗಳನ್ನು ಸುರಕ್ಷಿತವಾಗಿಡಲು ಬೇಕಾದ ಸುರಕ್ಷತಾ ಕವಚದ (ಕಾರ್ಬನ್ ಕಾಂಪೋಸಿಟ್ ಹೀಟ್ ಶೀಲ್ಡ್) ನಿರ್ಮಾಣ ಇಷ್ಟರಲ್ಲೇ ಪ್ರಾರಂಭವಾಗಲಿದೆ.   

ಅಂದಹಾಗೆ ಸೂರ್ಯನ  ಬಳಿ ಸಾಗುವ ಪ್ರಯತ್ನಗಳಲ್ಲಿ ಸೋಲಾರ್  ಪ್ರೋಬ್ ಪ್ಲಸ್ ಏಕಾಂಗಿಯೇನಲ್ಲ. ನಾಸಾ  ಹಾಗೂ ಯುರೋಪಿಯನ್ ಸ್ಪೇಸ್ ಏಜೆನ್ಸಿಗಳು ಜಂಟಿಯಾಗಿ ಸೋಲಾರ್ ಆರ್ಬಿಟರ್ ಎಂಬ ಯೋಜನೆಯೊಂದನ್ನು  ರೂಪಿಸುತ್ತಿವೆ. ಈ ದಶಕದ ಕೊನೆಯ ವೇಳೆಗೆ ಸೂರ್ಯನತ್ತ ಒಂದು ಉಪಗ್ರಹವನ್ನು ಕಳುಹಿಸುವ ಉದ್ದೇಶ ಈ ಯೋಜನೆಯದು. 

ಅಕ್ಟೋಬರ್ ೧೩, ೨೦೧೦ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ
badge