ಮಂಗಳವಾರ, ಜನವರಿ 25, 2011

ಅಂತರಜಾಲಕ್ಕೂ ಬೆನ್ನೆಲುಬು!

ಟಿ ಜಿ ಶ್ರೀನಿಧಿ

ಮಳೆಗಾಲದಲ್ಲಿ ವಿದ್ಯುತ್ ಹಾಗೂ ದೂರವಾಣಿ ತಂತಿಗಳ ಮೇಲೆ ಕೊಂಬೆಯೋ ಮರವೋ ಬಿದ್ದು ದಿನಗಟ್ಟಲೆ ಸಂಪರ್ಕ ತಪ್ಪಿಹೋಗುವುದು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ಸಂಗತಿ. ಬರಿಯ ಗ್ರಾಮೀಣ ಪ್ರದೇಶಗಳೇ ಏಕೆ, ನಗರಗಳಲ್ಲೂ ಒಮ್ಮೊಮ್ಮೆ ಇಂತಹ ತೊಂದರೆ ಆಗುವುದುಂಟು. ತುಂಡಾದ ತಂತಿ ಸರಿಹೋಗುವ ತನಕ ವಿದ್ಯುತ್ತೂ ಇಲ್ಲ, ದೂರವಾಣಿಯೂ ಇಲ್ಲ. ದೂರವಾಣಿ ಸಂಪರ್ಕದ ತಂತಿ ಕಡಿದುಹೋದರೆ ಅಂತರಜಾಲ ಸಂಪರ್ಕಕ್ಕೂ ಕುತ್ತು.

ಆದರೆ ಇಂತಹ ಸಂದರ್ಭಗಳಲ್ಲಿ ತೊಂದರೆಯಾಗುವುದು ಬಹಳ ಸೀಮಿತ ಪ್ರದೇಶದಲ್ಲಿ ಮಾತ್ರ - ನಗರಪ್ರದೇಶವಾದರೆ ಒಂದೋ ಎರಡೋ ರಸ್ತೆ, ಗ್ರಾಮೀಣ ಪ್ರದೇಶದಲ್ಲಿ ಒಂದೋ ಎರಡೋ ಹಳ್ಳಿ ಅಷ್ಟೆ. ಆದರೆ ದೇಶದೇಶಗಳ ಅಂತರಜಾಲ ಸಂಪರ್ಕವೇ ತಪ್ಪಿಹೋಗುವುದರ ಬಗ್ಗೆ ಕೇಳಿದ್ದೀರಾ?

ಇದು ಖಂಡಿತಾ ತಮಾಷೆಯಲ್ಲ, ಅಂತರಜಾಲದ ಬೆನ್ನೆಲುಬಿಗೆ ತೊಂದರೆಯಾದಾಗ ಇಂತಹ ಸಮಸ್ಯೆ ನಿಜಕ್ಕೂ ಕಾಣಿಸಿಕೊಳ್ಳುತ್ತದೆ!

ಅಂತರಜಾಲದ ಬ್ಯಾಕ್‌ಬೋನ್
ನಮ್ಮ ಮನೆಗಳಿಗೆ ಅಂತರಜಾಲ ಸಂಪರ್ಕ ಒದಗಿಸುವ ಬಿಎಸ್‌ಎನ್‌ಎಲ್, ಏರ್‌ಟೆಲ್ ಮುಂತಾದ ಸಂಸ್ಥೆಗಳನ್ನು ಇಂಟರ್‌ನೆಟ್ ಸರ್ವಿಸ್ ಪ್ರೊವೈಡರ್ ಅಥವಾ ಐಎಸ್‌ಪಿಗಳೆಂದು ಕರೆಯುವುದು ನಿಮಗೆ ಗೊತ್ತೇ ಇದೆ.

ನಮಗೆ ಅಂತರಜಾಲ ಸಂಪರ್ಕ ಒದಗಿಸುವ ಇಂತಹ ಸಂಸ್ಥೆಗಳಿಗೆ ಅವಕ್ಕಿಂತ ದೊಡ್ಡದಾದ ಮತ್ತೊಂದು ಐ.ಎಸ್.ಪಿ.ಯ ಜೊತೆಗೆ ಸಂಪರ್ಕ ಇರುತ್ತದೆ. ಇಂತಹ ದೊಡ್ಡ ಐ.ಎಸ್.ಪಿ.ಗಳಿಗೆ, ಇನ್ನೂ ದೊಡ್ಡ ಐ.ಎಸ್.ಪಿ.ಗಳ ಜೊತೆಗೆ ಸಂಪರ್ಕ ಇರುತ್ತದೆ. ಇಂತಹ ಸಂಪರ್ಕವನ್ನು ಸಾಮಾನ್ಯವಾಗಿ ಉಪಗ್ರಹ ಸಂಕೇತಗಳ ಮೂಲಕ ಏರ್ಪಡಿಸಿಕೊಳ್ಳಲಾಗುತ್ತದೆ.

ಕೊನೆಗೆ ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಐ.ಎಸ್.ಪಿ.ಗಳು ತಮ್ಮ ನಡುವೆ ಫೈಬರ್ ಆಪ್ಟಿಕ್ ತಂತುಗಳ ಜಾಲವನ್ನು ನಿರ್ಮಿಸಿಕೊಂಡಿರುತ್ತವೆ. ಇದನ್ನು ಫೈಬರ್ ಆಪ್ಟಿಕ್ ಬ್ಯಾಕ್‌ಬೋನ್ ಎಂದು ಕರೆಯುತ್ತಾರೆ. ಜಾಗತಿಕ ಮಟ್ಟದ ಅಂತರಜಾಲದ ಬೆನ್ನೆಲುಬು ಇದು. ಇವೆಲ್ಲ ಸಂಪರ್ಕಗಳೂ ಒಟ್ಟಾಗಿ ಅಂತರಜಾಲದ ಮೂಲಕ ಇಡೀ ವಿಶ್ವವನ್ನೇ ಒಂದುಗೂಡಿಸುತ್ತವೆ.

ಆಪ್ಟಿಕಲ್ ಫೈಬರ್
ಅತ್ಯಂತ ಶುದ್ಧ ಗಾಜಿನಿಂದ ಪಾರದರ್ಶಕ ಸಲಾಕೆಗಳನ್ನು ತಯಾರಿಸಿ ಅವು ಬಳುಕುವಷ್ಟು ತೆಳ್ಳಗೆ, ಉದ್ದಕ್ಕೆ ಆಗುವ ತನಕ ಜಗ್ಗಿಸಿ ಎಳೆಯುವುದರಿಂದ ಆಪ್ಟಿಕಲ್ ಫೈಬರ್‌ಗಳು ತಯಾರಾಗುತ್ತವೆ. ನಾವು ರಸ್ತೆಬದಿಗಳಲ್ಲಿ ನೋಡುತ್ತೇವಲ್ಲ, ದೂರವಾಣಿ ಸಂಸ್ಥೆಗಳು ಅಳವಡಿಸುವ ಬಣ್ಣಬಣ್ಣದ ದಪ್ಪನೆಯ ಕೊಳವೆಗಳು, ಆ ಕೊಳವೆಗಳ ಒಳಗಿರುವುದು ಇಂತಹವೇ ಆಪ್ಟಿಕಲ್ ಫೈಬರ್‌ಗಳು.

ಈ ಆಪ್ಟಿಕಲ್ ಫೈಬರ್‌ಗಳ ಮೂಲಕ ಅಪಾರ ಪ್ರಮಾಣದ ಮಾಹಿತಿಯನ್ನು ಬೆಳಕಿನ ಕಿರಣಗಳ ರೂಪದಲ್ಲಿ ಅನೇಕ ಕಿಲೋಮೀಟರುಗಳಷ್ಟು ದೂರ ರವಾನಿಸುವುದು ಸಾಧ್ಯ. ಈ ಎಳೆಗಳನ್ನು ಅತ್ಯಂತ ಶುದ್ಧವಾದ ಗಾಜಿನಿಂದ ತಯಾರಿಸಲಾಗುವುದರಿಂದ ಅದರ ಮೂಲಕ ಸಾಗುವ ಬೆಳಕಿನ ಕಿರಣಗಳು ಸಂಪೂರ್ಣ ಆಂತರಿಕ ಪ್ರತಿಫಲನ (ಟೋಟಲ್ ಇಂಟರ್ನಲ್ ರಿಫ್ಲೆಕ್ಷನ್) ಕ್ಕೆ ಒಳಗಾಗುತ್ತವೆ - ಅಂದರೆ, ಬೆಳಕಿನ ಕಿರಣಗಳು ಸಂಪೂರ್ಣವಾಗಿ ಈ ಎಳೆಯೊಳಗೇ ಪ್ರತಿಫಲಿಸಲ್ಪಡುತ್ತದೆ. ಹೀಗಾಗಿ ಆಪ್ಟಿಕಲ್ ಫೈಬರ್‌ಗಳಲ್ಲಿ ಮಾಹಿತಿ ಸೋರಿಕೆ ಬಹಳ ಕಡಿಮೆ ಹಾಗೂ ಮಾಹಿತಿ ಸಂವಹನದ ನಿಖರತೆ ಬಹಳ ಹೆಚ್ಚಾಗಿರುತ್ತದೆ.

ಆಪ್ಟಿಕಲ್ ಫೈಬರ್‌ಗಳ ಈ ವಿಶಿಷ್ಟ ಗುಣದಿಂದಾಗಿಯೇ ಅವು ಈಗ ಅಂತರಜಾಲ, ಸ್ಥಿರ ದೂರವಾಣಿ, ಮೊಬೈಲ್ ಸೇವೆಗಳು ಮುಂತಾದ ಎಲ್ಲ ಮಾಹಿತಿ ಮೂಲಗಳಿಗೂ ಬೆನ್ನೆಲುಬಿನಂತೆ ಆಗಿಬಿಟ್ಟಿವೆ. ಅಂತರಜಾಲ ಸಂಪರ್ಕಕ್ಕಾಗಿ ಬಳಕೆಯಾಗುವ ಫೈಬರ್ ಆಪ್ಟಿಕ್ ಬ್ಯಾಕ್‌ಬೋನ್‌ಗಳಂತೂ ವಿಶ್ವದ ಮೂಲೆಮೂಲೆಗಳನ್ನು ಸಂಪರ್ಕಿಸುತ್ತಿವೆ.

ಬೆನ್ನೆಲುಬಿನ ಸಮಸ್ಯೆ
ಫೈಬರ್ ಆಪ್ಟಿಕ್ ಬ್ಯಾಕ್‌ಬೋನ್‌ಗಳ ಮೂಲಕ ನಡೆಯುವ ಸಂವಹನಕ್ಕೆ ಸಬ್‌ಮರೀನ್ ಕಮ್ಯೂನಿಕೇಷನ್ಸ್ ಕೇಬಲ್‌ಗಳನ್ನು ಬಳಸಲಾಗುತ್ತದೆ; ಅಂದರೆ, ಈ ಕೇಬಲ್‌ಗಳು ಸಮುದ್ರದ ಆಳದಲ್ಲಿರುತ್ತವೆ. ಅಂತರರಾಷ್ಟ್ರೀಯ ದೂರವಾಣಿ ಕರೆಗಳಿಗೂ ಈ ಕೇಬಲ್‌ಗಳೇ ಬೇಕು. ವಿಶ್ವದ ಯಾವುದೋ ಮೂಲೆಯಲ್ಲಿರುವ ವ್ಯಕ್ತಿ ಇನ್ನಾವುದೋ ಮೂಲೆಯಲ್ಲಿರುವ ಮತ್ತೊಬ್ಬರನ್ನು ಸಂಪರ್ಕಿಸಬೇಕಾದರೆ ಆ ಸಂವಹನಕ್ಕೆ ಸಮುದ್ರದಾಳದ ಈ ಕೇಬಲ್ಲುಗಳೇ ಜೀವಾಳ. ಅನೇಕ ಸರಕಾರಗಳು ಹಾಗೂ ಖಾಸಗಿ ಸಂಸ್ಥೆಗಳ ಒಡೆತನದಲ್ಲಿ ಕಾರ್ಯನಿರ್ವಹಿಸುವ ಈ ಬಗೆಯ ಕೇಬಲ್ಲುಗಳ ಜಾಲ ಅಂಟಾರ್ಕ್‌ಟಿಕಾ ಹೊರತುಪಡಿಸಿ ಬೇರೆಲ್ಲ ಖಂಡಗಳನ್ನೂ ಪರಸ್ಪರ ಸಂಪರ್ಕಿಸುತ್ತದೆ.

ಹೀಗಾಗಿಯೇ ಈ ಕೇಬಲ್‌ಗಳಿಗೆ ಏನಾದರೂ ತೊಂದರೆಯಾದಾಗ ಬಹುದೊಡ್ಡ ಪ್ರದೇಶದ ಸಂಪರ್ಕವ್ಯವಸ್ಥೆಗೆ ಕುತ್ತುಬರುತ್ತದೆ. ೨೦೦೮ರಲ್ಲಿ ಎರಡು ಬಾರಿ ನಮ್ಮೆಲ್ಲರ ಅಂತರಜಾಲ ಸಂಪರ್ಕಗಳು ಏಕಾಏಕಿ ಕೈಕೊಟ್ಟಿದ್ದು ನಿಮಗೆ ನೆನಪಿರಬಹುದು, ಯುರೋಪ್ ಹಾಗೂ ಮಧ್ಯಪ್ರಾಚ್ಯದ ರಾಷ್ಟ್ರಗಳನ್ನು ಭಾರತಕ್ಕೆ ಸಂಪರ್ಕಿಸುವ ಸಬ್‌ಮರೀನ್ ಕೇಬಲ್ಲುಗಳಲ್ಲಿ ಕೆಲವು ಈಜಿಪ್ಟ್ ಸಮೀಪದಲ್ಲಿ ತುಂಡಾದದ್ದು ಈ ಘಟನೆಗೆ ಕಾರಣವಾಗಿತ್ತು. ತೀರಾ ಇತ್ತೀಚೆಗೆ, ೨೦೧೦ರ ಕೊನೆಯ ಭಾಗದಲ್ಲಿ ಕೂಡ ಇಂತಹವೇ ಕೆಲ ಕೇಬಲ್ಲುಗಳು ಕತ್ತರಿಸಿಹೋಗಿದ್ದರಿಂದ ಆಫ್ರಿಕಾ ಖಂಡದ ಬಹುಭಾಗದಲ್ಲಿ ಅಂತರಜಾಲ ಸಂಪರ್ಕ ಕಡಿದುಹೋಗಿತ್ತು.

ಸುಮಾರು ಎರಡೂಮುಕ್ಕಾಲು ಇಂಚು ಅಥವಾ ಅದಕ್ಕಿಂತ ಕಡಿಮೆ ವ್ಯಾಸದ, ಪ್ರತಿ ಮೀಟರ್ ಉದ್ದಕ್ಕೆ ಹೆಚ್ಚೂಕಡಿಮೆ ಹತ್ತು ಕಿಲೋಗ್ರಾಮ್ ತೂಕ ಹೊಂದಿರುವ ಈ ಕೇಬಲ್‌ಗಳ ಮಹತ್ವ ಅಂತರಜಾಲ ಲೋಕದ ಮಟ್ಟಿಗೆ ಅತ್ಯಂತ ಮಹತ್ವದ್ದು. ಇವುಗಳ ಮೂರ್ತಿ ಅಂಥಾ ಚಿಕ್ಕದೇನಲ್ಲ, ನಿಜ. ಆದರೆ ಕೀರ್ತಿ ಮಾತ್ರ ಬಹಳ ದೊಡ್ಡದು!

ಜನವರಿ ೨೫, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಶುಕ್ರವಾರ, ಜನವರಿ 21, 2011

ಸ್ನಾನ - ವಿಜ್ಞಾನ

ತುಂಬಾ ಹಿಂದೆ ಗ್ರೀಸ್ ದೇಶದಲ್ಲಿ ಒಬ್ಬ ರಾಜನಿದ್ದನಂತೆ. ಅವನು ಹೊಸದೊಂದು ಕಿರೀಟ ಮಾಡಿಸಿದ್ದ. ಆ ಕಿರೀಟ ಸಿದ್ಧವಾಗಿ ಬಂದ ಮೇಲೆ ಅವನಿಗೇಕೋ ಆ ಕಿರೀಟದ ಚಿನ್ನದಲ್ಲಿ ಕಲಬೆರಕೆ ಆಗಿರಬಹುದು ಎಂಬ ಸಂಶಯ ಬಂತು; ಈ ಸಂಶಯ ಯಾರು ನಿವಾರಿಸುತ್ತೀರೋ ಅವರಿಗೆ ಬಹುಮಾನ ಕೊಡುತ್ತೇನೆ ಎಂದು ಸವಾಲು ಹಾಕಿದ.

ಅವನ ಆಸ್ಥಾನದಲ್ಲಿ ಆರ್ಕಿಮಿಡಿಸ್ ಎಂಬ ವ್ಯಕ್ತಿ ಇದ್ದ. ಏನಾದರೂ ಮಾಡಿ ರಾಜನ ಸಂಶಯ ನಿವಾರಿಸಲೇಬೇಕು ಎಂದುಕೊಂಡ ಆತ ಅದರ ಬಗ್ಗೆ ಯೋಚಿಸಲು ಶುರುಮಾಡಿದ. ವಸ್ತುವಿನ ಸಾಂದ್ರತೆಗೆ ತಕ್ಕಂತೆ ಅದರ ಗಾತ್ರದಲ್ಲಿ ವ್ಯತ್ಯಾಸವಿರುತ್ತದೆ ಎನ್ನುವುದು ಅವನಿಗೆ ಗೊತ್ತಿತ್ತು. ಆದರೆ ಬೆರಕೆ ಲೋಹದಲ್ಲಿ ಯಾವ ಲೋಹ ಎಷ್ಟು ಮಿಶ್ರವಾಗಿದೆ ಎಂಬುದನ್ನು ಹೇಗೆ ಗುರುತಿಸಬೇಕು ಎನ್ನುವುದು ಗೊತ್ತಿರಲಿಲ್ಲ.

ಅವನು ಅದೇ ವಿಷಯದ ಬಗ್ಗೆ ಹಗಲೂ ರಾತ್ರಿ ಯೋಚಿಸುತ್ತಲೇ ಇದ್ದ. ಅವನ ಏಕಾಗ್ರತೆ ಎಷ್ಟರ ಮಟ್ಟಿಗೆ ಇತ್ತು ಎಂದರೆ ಸ್ನಾನ ಮಾಡುವಾಗಲೂ ಅದನ್ನೇ ಯೋಚಿಸುತ್ತ ಸ್ನಾನದ ತೊಟ್ಟಿಗೆ ಇಳಿದ.

ಅವನು ನೀರಿನ ತೊಟ್ಟಿಯೊಳಕ್ಕೆ ಇಳಿದ ತಕ್ಷಣ ಒಂದಷ್ಟು ನೀರು ಹೊರಚೆಲ್ಲಿತು. ಅದನ್ನು ನೋಡಿದ ತಕ್ಷಣ ಆರ್ಕಿಮಿಡಿಸ್‌ಗೆ ಅವನ ಗಾತ್ರ ಹಾಗೂ ತೊಟ್ಟಿಯಿಂದ ಹೊರಚೆಲ್ಲಿದ ನೀರಿನ ನಡುವೆ ಇರುವ ಸಂಬಂಧ ಹೊಳೆಯಿತು. ಈ ಖುಷಿಯಲ್ಲಿ ಆತ ಬಟ್ಟೆಯನ್ನೂ ಹಾಕಿಕೊಳ್ಳದೆ ಯುರೇಕಾ! ಯುರೇಕಾ!! (ನಾನು ಕಂಡುಹಿಡಿದೆ! ನಾನು ಕಂಡುಹಿಡಿದೆ!!) ಎಂದು ಕೂಗುತ್ತ ರಾಜನ ಹತ್ತಿರ ಓಡಿಹೋದನಂತೆ.

ಒಂದೇ ತೂಕದ ಚಿನ್ನದ ಗಾತ್ರಕ್ಕೂ ಕಲಬೆರಕೆಯಾಗಿದ್ದ ಲೋಹದ ಗಾತ್ರಕ್ಕೂ ವ್ಯತ್ಯಾಸವಿರುತ್ತದೆ. ಆರ್ಕಿಮಿಡಿಸ್ ಮೊದಲು ಕಿರೀಟದಷ್ಟೇ ತೂಕದ ಶುದ್ಧ ಚಿನ್ನ ತೆಗೆದುಕೊಂಡು ನೀರಿನಲ್ಲಿ ಮುಳುಗಿಸಿದಾಗ ಅದೆಷ್ಟು ನೀರನ್ನು ಹೊರಚೆಲ್ಲುತ್ತದೆ ಎನ್ನುವುದನ್ನು ಪತ್ತೆಮಾಡಿದ; ಆನಂತರ ಕಿರೀಟವನ್ನು ಮುಳುಗಿಸಿ ಅದು ಹೊರಚೆಲ್ಲಿದ ನೀರನ್ನು ಅಳೆದ. ಇದೆರಡರಲ್ಲೂ ವ್ಯತ್ಯಾಸ ಕಂಡುಬಂದಿದ್ದರಿಂದ ಕಿರೀಟದಲ್ಲಿ ಬಳಸಿದ ಚಿನ್ನ ಕಲಬೆರಕೆಯಾಗಿತ್ತು ಎನ್ನುವುದು ಆರ್ಕಿಮಿಡಿಸ್‌ಗೆ ಗೊತ್ತಾಯಿತು.

ಬಟ್ಟೆಹಾಕಿಕೊಳ್ಳದೆ ಸ್ನಾನದ ಮನೆಯಿಂದ ಓಡಿಹೋದ ಘಟನೆ ನಿಜವಾಗಿಯೂ ನಡೆದಿತ್ತೋ ಇಲ್ಲವೋ, ಆದರೆ ಆರ್ಕಿಮಿಡಿಸ್ ಈ ವಿಷಯದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿದ್ದಂತೂ ನಿಜ.

ನೀವು ಯಾವಾಗಲಾದರೂ ಕೆರೆ ಅಥವಾ ಬಾವಿಯೊಳಕ್ಕೆ ಕಲ್ಲೆಸೆದಿದ್ದೀರಾ? ಆ ಕಲ್ಲು ಎಷ್ಟೇ ಚಿಕ್ಕದಾಗಿದ್ದರೂ ತಕ್ಷಣ ಮುಳುಗಿಹೋಗುತ್ತದೆ ತಾನೆ? ಆದರೆ ಸಾವಿರಾರು ಕೆಜಿ ತೂಗುವ ಹಡಗುಗಳು ಮಾತ್ರ ನೀರಿನಲ್ಲಿ ಮುಳುಗದೆ ತೇಲುವುದು ಹೇಗೆ? ಈ ಪ್ರಶ್ನೆಗೆ ಆರ್ಕಿಮಿಡಿಸ್ ಸಿದ್ಧಾಂತ ಉತ್ತರ ನೀಡುತ್ತದೆ. ಹಡಗು ತನ್ನ ತೂಕಕ್ಕೆ ಸರಿಸಮನಾದಷ್ಟು ನೀರನ್ನು ಮಾತ್ರವೇ ತನ್ನ ಬುಡದಿಂದ ಆಚೀಚೆತಳ್ಳುವುದರಿಂದ ಅದು ಮುಳುಗದೆ ತೇಲುತ್ತದೆ ಎಂದು ಆತ ವಿವರಿಸಿದ.

ಆಯಾಸವಿಲ್ಲದೆ ಭಾರವಾದ ವಸ್ತುಗಳನ್ನು ಎತ್ತಲು ಅನುಕೂಲ ಮಾಡಿಕೊಡುವ ಸನ್ನೆ ತತ್ವವನ್ನೂ ಆತನೇ ಕಂಡುಹಿಡಿದದ್ದು ಎಂದು ಹೇಳುತ್ತಾರೆ. ಈ ಮಹಾನ್ ವ್ಯಕ್ತಿ ಕ್ರಿ. ಪೂ. ೨೮೭ರಿಂದ ೨೧೨ರ ನಡುವೆ ಜೀವಿಸಿದ್ದ.

ಚಿಣ್ಣರ ಚೇತನ ಗೋಡೆ ಪತ್ರಿಕೆಯ ೨೦೧೧ ಜನವರಿ ೧-೧೫ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಜನವರಿ 18, 2011

ಜಾಲಲೋಕದಲ್ಲಿ ಮೋಸದ ಗಾಳ

ಟಿ ಜಿ ಶ್ರೀನಿಧಿ

ನಿಮ್ಮ ಬ್ಯಾಂಕಿನ ಹೆಸರಿನಲ್ಲಿ ನಿಮಗೊಂದು ಇಮೇಲ್ ಸಂದೇಶ ಬರುತ್ತದೆ. ಇಂತಹ ಸಂದೇಶ ಸಾಮಾನ್ಯವಾಗಿ ಕೆಳಗಿರುವ ಲಿಂಕ್‌ನ ಮೇಲೆ ಕ್ಲಿಕ್ಕಿಸಿ ನಿಮ್ಮ ಖಾತೆಯ ವಿವರಗಳನ್ನು ದೃಢೀಕರಿಸಿ; ಇಲ್ಲದಿದ್ದರೆ ನಿಮ್ಮ ಖಾತೆಯನ್ನು ಮುಚ್ಚಿಬಿಡುತ್ತೇನೆ ಹುಷಾರ್! ಎಂಬ ಧಾಟಿಯಲ್ಲಿರುತ್ತದೆ. ಅದನ್ನು ನಂಬಿ ನೀವೇನಾದರೂ ನಿಮ್ಮ ವಿವರಗಳನ್ನು ಕೊಟ್ಟಿರೋ, ನಿಮ್ಮ ಖಾತೆಯಲ್ಲಿರುವ ಹಣವೆಲ್ಲ ಒಂದೇ ಬಾರಿಗೆ ಮಂಗಮಾಯವಾಗಿಬಿಡುತ್ತದೆ!

ಇದಕ್ಕೆ ಕಾರಣವಿಷ್ಟೆ: ನಿಮಗೆ ಬಂದ ಸಂದೇಶ ಮೇಲ್ನೋಟಕ್ಕೆ ನೈಜವಾಗಿಯೇ ಕಂಡರೂ ಅದನ್ನು ನಿಮ್ಮ ಬ್ಯಾಂಕು ಕಳುಹಿಸಿರುವುದೇ ಇಲ್ಲ. ಇಷ್ಟರಮೇಲೆ ಆ ಸಂದೇಶದಲ್ಲಿದ್ದ ಲಿಂಕ್‌ನ ಮೇಲೆ ಕ್ಲಿಕ್ಕಿಸಿ ನೀವು ಭೇಟಿಕೊಟ್ಟ ತಾಣ ನಿಮ್ಮ ಬ್ಯಾಂಕಿನದೂ ಆಗಿರುವುದಿಲ್ಲ.

ಇದೇ ಫಿಶಿಂಗ್ - ನಕಲಿ ಇಮೇಲ್ ಹಾಗೂ ಜಾಲತಾಣಗಳ ಸಹಾಯದಿಂದ ಅಂತರಜಾಲ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ ಭಾರೀ ಹಗರಣ.

ಈ ಹಗರಣಕ್ಕೆ ಫಿಶಿಂಗ್ (phishing) ಎಂಬ ನಾಮಕರಣವಾದದ್ದು ೧೯೯೬ರಲ್ಲಿ.  ಈ ಹಗರಣ ಗಾಳ ಹಾಕಿ ಮೀನು ಹಿಡಿಯುವ ಹಾಗೆಯೇ ನಡೆಯುವುದರಿಂದ ಇದಕ್ಕೆ ಫಿಶಿಂಗ್ ಎಂದು ಹೆಸರಿಡಲಾಯಿತು, ಈ ಹೆಸರನ್ನು ಪ್ರತ್ಯೇಕವಾಗಿ ಗುರುತಿಸಲು ಸ್ಪೆಲ್ಲಿಂಗ್‌ನಲ್ಲಿ ಮಾತ್ರ ಬದಲಾವಣೆ ಮಾಡಲಾಯಿತು ಎನ್ನುವುದು ಸಾಮಾನ್ಯ ನಂಬಿಕೆ. ಗಣಕಗಳ ಸಹಾಯದಿಂದ ಅನೇಕ ಬಗೆಯ ಅವ್ಯವಹಾರ ನಡೆಸುವ ಹ್ಯಾಕರ್‌ಗಳ ಸಮುದಾಯದಲ್ಲಿ  ಇಂತಹ ವಿಭಿನ್ನ ರೀತಿಯ ಸ್ಪೆಲ್ಲಿಂಗ್ ಬಳಕೆ ಸಾಮಾನ್ಯವಂತೆ.

ಫಿಶಿಂಗ್‌ನ ಸಮಸ್ಯೆ ಈಗ ಇಮೇಲ್‌ಗಳಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಎಸ್ಸೆಮ್ಮೆಸ್‌ಗಳು, ಇನ್ಸ್‌ಟೆಂಟ್ ಮೆಸೆಂಜರ್‌ಗಳು, ನಕಲಿ ಜಾಹಿರಾತುಗಳು - ಹೀಗೆ ಎಲ್ಲೆಡೆಗಳಲ್ಲೂ ಹರಡಿಕೊಂಡಿರುವ ಫಿಶಿಂಗ್ ಜಾಲ ಅಂತರಜಾಲ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿದೆ. ಫಿಶಿಂಗ್‌ಗೆ ಬಲಿಯಾಗುವ ಮಾಹಿತಿಯಲ್ಲಿ ಹಣಕಾಸು ವ್ಯವಹಾರಗಳಿಗೆ ಸಂಬಂಧಪಟ್ಟ ಮಾಹಿತಿಯದೇ ಹೆಚ್ಚಿನ ಪಾಲು; ಆದರೆ ಈ ಮಾಹಿತಿಯ ಜೊತೆಗೆ ಸಮುದಾಯ ತಾಣಗಳು ಹಾಗೂ ಇಮೇಲ್ ಖಾತೆಯ ಪಾಸ್‌ವರ್ಡ್‌ಗಳಂತಹ ಅನೇಕ ಬಗೆಯ ಮಾಹಿತಿಗಳೂ ಫಿಶಿಂಗ್ ಬಲೆಗೆ ಬೀಳುತ್ತವೆ.

ನಿಮಗೆ ಆದಾಯತೆರಿಗೆಯ ಮರುಪಾವತಿ ಬರುವುದಿದೆ, ಅದನ್ನು ಯಾವ ಖಾತೆಗೆ ಕಳುಹಿಸಬೇಕು ಹೇಳಿ ಎನ್ನುವ ನೆಪದಲ್ಲಿ ಬಳಕೆದಾರರ ಬ್ಯಾಂಕ್ ಖಾತೆಯ ವಿವರಗಳನ್ನು ಕದ್ದ ಅನೇಕ ಘಟನೆಗಳು ಕಳೆದ ವರ್ಷ ವಿಶ್ವದ ವಿವಿಧೆಡೆಗಳಿಂದ ವರದಿಯಾಗಿದ್ದವು. ಇನ್ನು ಇಮೇಲ್ ಖಾತೆಯ ಪಾಸ್‌ವರ್ಡ್ ಕದ್ದು "ನಾನು ಲಂಡನ್‌ನಲ್ಲಿದ್ದೇನೆ, ನನ್ನ ಪರ್ಸ್ ಕಳೆದುಹೋಗಿದೆ, ಆದಷ್ಟು ಬೇಗ ಒಂದು ಸಾವಿರ ಪೌಂಡ್ ಕಳಿಸು" ಎಂಬಂತಹ ಸಂದೇಶಗಳನ್ನು ಕಳುಹಿಸುವುದೂ ಒಂದು ದೊಡ್ಡ ದಂಧೆಯೇ. ಈ ಕುತಂತ್ರಕ್ಕೆ ಬಲಿಯಾದವರ ಸುದ್ದಿಗಳು ಆಗಿಂದಾಗ್ಗೆ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ.

ಫಿಶಿಂಗ್ ಸಂದೇಶವನ್ನು ಪಡೆಯುವವರಲ್ಲಿ ಶೇಕಡಾ ಐದರಷ್ಟು ಜನ ಅಂತಹ ಸಂದೇಶಗಳನ್ನು ನಂಬಿ ವಂಚನೆಗೆ ಒಳಗಾಗುತ್ತಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಹೀಗೆ ಫಿಶಿಂಗ್‌ನಿಂದ ವಂಚನೆಗೆ ಒಳಗಾಗುವುದು ಎಂದರೆ ಸಾಮಾನ್ಯವಾಗಿ ಭಾರೀ ಪ್ರಮಾಣದ ಆರ್ಥಿಕ ನಷ್ಟ ಅನುಭವಿಸುವುದು ಎಂದೇ ಅರ್ಥ. ಹೀಗಾಗಿ ಈ ಹಗರಣದ ಕುರಿತು ಎಚ್ಚರದಿಂದಿರಬೇಕಾದದ್ದು ಅಗತ್ಯ.

ಇಂತಹ ಯಾವುದೇ ಸಂಶಯಾಸ್ಪದ ಸಂದೇಶಗಳು ಬಂದಾಗ ತಟ್ಟನೆ ಪ್ರತಿಕ್ರಿಯಿಸುವ ಬದಲು ಸ್ವಲ್ಪ ಯೋಚಿಸುವುದು ಒಳ್ಳೆಯದು. ಬುದ್ಧಿವಂತಿಕೆಯ ಲಕ್ಷಣ. ಸಾಮಾನ್ಯವಾಗಿ ಯಾವುದೇ ಸಂಸ್ಥೆ ನಿಮ್ಮ ಪಾಸ್‌ವರ್ಡ್‌ಗಳನ್ನು ಕೊಡುವಂತೆ ಕೇಳುವುದಿಲ್ಲ ಎನ್ನುವ ವಿಷಯ ಸದಾ ನಿಮ್ಮ ನೆನಪಿನಲ್ಲಿರಲಿ.

ಆನ್‌ಲೈನ್ ಬ್ಯಾಂಕಿಂಗ್ ಸೇರಿದಂತೆ ಯಾವುದೇ ಬಗೆಯ ಖಾಸಗಿ ವ್ಯವಹಾರ ನಡೆಸುವಾಗ ವೆಬ್‌ತಾಣಗಳನ್ನು ತೆರೆಯಲು ಸಂದೇಶದಲ್ಲಿರುವ ಲಿಂಕ್‌ಗಳನ್ನು ಬಳಸಬೇಡಿ; ಇಂತಹ ಲಿಂಕ್‌ಗಳು ನಿಮ್ಮನ್ನು ನಕಲಿ ತಾಣಗಳಿಗೆ ಕೊಂಡೊಯ್ಯುವ ಸಾಧ್ಯತೆಯೇ ಹೆಚ್ಚು. ಬದಲಿಗೆ ಬ್ರೌಸರ್ ತಂತ್ರಾಂಶದಲ್ಲಿ ಜಾಲತಾಣದ ವಿಳಾಸ ಬೆರಳಚ್ಚಿಸಿಯೇ ತಾಣವನ್ನು ಪ್ರವೇಶಿಸಿ. ಲಿಂಕ್ ಮೂಲಕವೇ ತಾಣ ಪ್ರವೇಶಿಸಬೇಕಾಗಿ ಬಂದಾಗ ಬ್ರೌಸರ್‌ನ ವಿಳಾಸಪಟ್ಟಿಯಲ್ಲಿ ಸರಿಯಾದ ತಾಣದ ವಿಳಾಸವಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿ.

ಜನವರಿ ೧೮, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಜನವರಿ 11, 2011

ಬೆಳೆಯುತ್ತಿದೆ ಬ್ರೌಸರ್ ಲೋಕ

ಟಿ ಜಿ ಶ್ರೀನಿಧಿ

ಕಳೆದ ಡಿಸೆಂಬರ್‌ನಲ್ಲಿ ಗೂಗಲ್ ಸಂಸ್ಥೆ ತನ್ನ ಹೊಸ ಕೊಡುಗೆಯಾಗಿ ಕ್ರೋಮ್ ಒಎಸ್‌ನ ಪ್ರಾಯೋಗಿಕ ಆವೃತ್ತಿಯನ್ನು ಪರಿಚಯಿಸಿತು.

ಈ ಕ್ರೋಮ್ ಒಎಸ್ ಎನ್ನುವುದು ಒಂದು ಕಾರ್ಯಾಚರಣ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ). ಸರಳವಾಗಿ ಹೇಳಬೇಕಾದರೆ ಕಾರ್ಯಾಚರಣ ವ್ಯವಸ್ಥೆ ಎನ್ನುವುದು ಗಣಕದ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ, ಹಾಗೂ ಅದರಲ್ಲಿರುವ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ ತಂತ್ರಾಂಶ. ವಿಂಡೋಸ್, ಲಿನಕ್ಸ್ ಇವೆಲ್ಲ ಕಾರ್ಯಾಚರಣ ವ್ಯವಸ್ಥೆಗಳೇ.

ಆದರೆ ಕ್ರೋಮ್ ಒಎಸ್ ನಮಗೆ ಗೊತ್ತಿರುವ ಬೇರೆಲ್ಲ ಕಾರ್ಯಾಚರಣ ವ್ಯವಸ್ಥೆಗಳಿಗಿಂತ ವಿಭಿನ್ನವಾದದ್ದು.

ಅದಕ್ಕೆ ಕಾರಣ ಇಷ್ಟೆ - ಕ್ರೋಮ್ ಒಎಸ್ ಕಾರ್ಯಾಚರಣ ವ್ಯವಸ್ಥೆ ಸಂಪೂರ್ಣವಾಗಿ ಬ್ರೌಸರ್ ತಂತ್ರಾಂಶವನ್ನೇ ಆಧರಿಸಿಕೊಂಡು ಕೆಲಸಮಾಡುತ್ತದೆ. ಪದಸಂಸ್ಕರಣಾ ತಂತ್ರಾಂಶ ಬಳಸಿ ಅರ್ಜಿ ಟೈಪಿಸಬೇಕಾಗಿರಲಿ, ಸ್ಪ್ರೆಡ್‌ಶೀಟಿನಲ್ಲಿ ಲೆಕ್ಕಾಚಾರ ಹಾಕುವ ಅಗತ್ಯವಿರಲಿ - ಯಾವುದೇ ಪ್ರತ್ಯೇಕ ತಂತ್ರಾಂಶವನ್ನು ಅನುಸ್ಥಾಪಿಸಿಕೊಳ್ಳುವ ಅಗತ್ಯವಿಲ್ಲದೆ ಎಲ್ಲವೂ ವಿಶ್ವವ್ಯಾಪಿ ಜಾಲದ ಮೂಲಕವೇ ಲಭ್ಯವಾಗುತ್ತದೆ. ಈ ಕಾರ್ಯಾಚರಣ ವ್ಯವಸ್ಥೆಯಲ್ಲಿ ಸಕಲ ಕೆಲಸಗಳಿಗೂ ಬ್ರೌಸರ್ ಬೇಕೇಬೇಕು!

ಬ್ರೌಸರ್ ಅಂದರೇನು?
ವಿಶ್ವವ್ಯಾಪಿ ಜಾಲದಲ್ಲಿರುವ ಜಾಲತಾಣಗಳನ್ನು ನಮ್ಮ-ನಿಮ್ಮ ಗಣಕಗಳಲ್ಲಿ ವೀಕ್ಷಿಸಲು ಬ್ರೌಸರ್ ಅಥವಾ ವೀಕ್ಷಕ ತಂತ್ರಾಂಶಗಳು ಬಳಕೆಯಾಗುತ್ತವೆ. ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ಪಡೆದುಕೊಳ್ಳಲು ಈ ತಂತ್ರಾಂಶ ಅತ್ಯಗತ್ಯ.

ಮೊಜಿಲ್ಲಾ ಫೈರ್‌ಫಾಕ್ಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್, ಗೂಗಲ್ ಕ್ರೋಮ್ ಮೊದಲಾದವು ಈಗ ಪ್ರಚಲಿತದಲ್ಲಿರುವ ಬ್ರೌಸರ್‌ಗಳಲ್ಲಿ ಮುಖ್ಯವಾದವು. ವಿಶ್ವದ ಮೂಲೆಮೂಲೆಗಳಲ್ಲಿರುವ ಗಣಕಗಳಲ್ಲಿ ಶೇಖರವಾಗಿರುವ ವೆಬ್ ಪುಟಗಳನ್ನು ನಮ್ಮ ಗಣಕಗಳಲ್ಲಿ ವೀಕ್ಷಿಸಲು ಈ ತಂತ್ರಾಂಶಗಳು ಅನುವುಮಾಡಿಕೊಡುತ್ತವೆ. ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ನೋಡುವುದು ಮಾತ್ರವಲ್ಲ; ಆ ಮಾಹಿತಿಯನ್ನು ಉಳಿಸಿಕೊಳ್ಳುವುದು, ಮುದ್ರಿಸಿಕೊಳ್ಳುವುದು, ವಿವಿಧ ಪುಟಗಳ ನಡುವೆ ಹಿಂದೆಮುಂದೆ ಓಡಾಡುವುದು, ಅಚ್ಚುಮೆಚ್ಚಿನ ಪುಟಗಳ ವಿಳಾಸ ಸಂಗ್ರಹಿಸಿಟ್ಟುಕೊಳ್ಳುವುದು - ಇವೆಲ್ಲ ಸೌಲಭ್ಯಗಳೂ ಬ್ರೌಸರ್ ತಂತ್ರಾಂಶದಲ್ಲಿರುತ್ತವೆ.

ಬ್ರೌಸರ್ ಇತಿಹಾಸ
ವಿಶ್ವವ್ಯಾಪಿ ಜಾಲದ ಪ್ರಾರಂಭಿಕ ದಿನಗಳಲ್ಲಿ ರೂಪಗೊಂಡ ಜಾಲತಾಣಗಳಲ್ಲಿ ಪಠ್ಯ ಮಾತ್ರವೇ ಇರುತ್ತಿತ್ತು. ಆದರೆ ಜಾಲತಾಣಗಳಲ್ಲಿ ಪಠ್ಯದ ಚಿತ್ರಗಳು ಕೂಡ ಇದ್ದು ಚಿತ್ರಾತ್ಮಕ ಸಂಪರ್ಕ ಸಾಧನ (ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್) ಲಭ್ಯವಾಗುವಂತಾದಾಗ ಮಾತ್ರ ಈ ಅದ್ಭುತ ವ್ಯವಸ್ಥೆ ಸಾಮಾನ್ಯ ಜನರನ್ನೂ ತಲುಪುವಂತಾಗುತ್ತದೆ, ಎಲ್ಲರ ಆಸಕ್ತಿಯ ವಿಷಯಗಳಿಗೂ ಅಲ್ಲಿ ಸ್ಥಾನ ದೊರಕುತ್ತದೆ ಎಂಬ ಭಾವನೆ ಬಹಳಬೇಗ ಗಣಕತಜ್ಞರಲ್ಲಿ ಮೂಡಿತು.

ಹೀಗೆ ಲಭ್ಯವಾದ ಬಹುಮಾಧ್ಯಮ ಮಾಹಿತಿಯನ್ನು ಪಡೆದುಕೊಳ್ಳಲು ಹೊಸದೊಂದು ತಂತ್ರಾಂಶ ಅಗತ್ಯವಾಯಿತು. ಈಗ ನಮಗೆ ಪರಿಚಿತವಾಗಿರುವ ಬ್ರೌಸರ್ ತಂತ್ರಾಂಶದ ಪರಿಕಲ್ಪನೆ ಹುಟ್ಟಿದ್ದೇ ಆಗ.

ಅಮೆರಿಕಾದ ನ್ಯಾಷನಲ್ ಸೆಂಟರ್ ಫಾರ್ ಸೂಪರ್‌ಕಂಪ್ಯೂಟಿಂಗ್ ಅಪ್ಲಿಕೇಷನ್ಸ್‌ನಲ್ಲಿ ಅಧ್ಯಯನ ನಡೆಸುತ್ತಿದ್ದ ಮಾರ್ಕ್ ಆಂಡ್ರೀಸನ್ ಹಾಗೂ ಎರಿಕ್ ಬೀನಾ ಎಂಬ ವಿದ್ಯಾರ್ಥಿಗಳು ೧೯೯೩ರಲ್ಲಿ 'ಮೊಸಾಯಿಕ್' ಎನ್ನುವ ಬ್ರೌಸರ್ ಸಿದ್ಧಪಡಿಸಿದರು. ವಿಶ್ವವ್ಯಾಪಿ ಜಾಲಕ್ಕೆ ಮೊತ್ತಮೊದಲ ಬಾರಿಗೆ ಚಿತ್ರಾತ್ಮಕ ಸಂಪರ್ಕ ಸಾಧನವನ್ನು ಒದಗಿಸಿದ ಈ ತಂತ್ರಾಂಶ ಅದರ ಭವಿಷ್ಯವನ್ನೇ ಬದಲಾಯಿಸಿಬಿಟ್ಟಿತು.

ಮುಂದಿನ ದಿನಗಳಲ್ಲಿ
ಕ್ಲೌಡ್ ಕಂಪ್ಯೂಟಿಂಗ್‌ನ ವಿಕಾಸವಾಗುತ್ತಿದ್ದಂತೆ ಬ್ರೌಸರ್ ತಂತ್ರಾಂಶದ ಮಹತ್ವ ಹೆಚ್ಚುತ್ತಿದೆ. ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ ವಿವಿಧ ತಂತ್ರಾಂಶಗಳು ಹಾಗೂ ಸಂಬಂಧಿತ ಸೇವೆಗಳು ವಿಶ್ವವ್ಯಾಪಿ ಜಾಲದ ಮೂಲಕವೇ ಲಭ್ಯವಾಗುವುದರಿಂದ ಅವೆಲ್ಲವನ್ನೂ ಬ್ರೌಸರ್ ಮೂಲಕವೇ ಪಡೆದುಕೊಳ್ಳಬೇಕಾಗುತ್ತದೆ.

ಈ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯೋಗಗಳಲ್ಲಿ ಕ್ರೋಮ್ ಒಎಸ್ ಅಗ್ರಗಣ್ಯವಾದದ್ದು. ಗಣಕದಲ್ಲಿ ನಾವು ಬಳಸುವ ತಂತ್ರಾಂಶಗಳು ಹಾಗೂ ಅವನ್ನು ಬಳಸಿ ತಯಾರಿಸುವ ಮಾಹಿತಿ ಎರಡನ್ನೂ ವಿಶ್ವವ್ಯಾಪಿ ಜಾಲದ ಮೂಲಕ ಲಭ್ಯವಾಗಿಸಿ ಅಲ್ಲಿಯೇ ಶೇಖರಿಸಿಡುವ ಮಹತ್ವಾಕಾಂಕ್ಷೆ ಈ ಕಾರ್ಯಾಚರಣ ವ್ಯವಸ್ಥೆಯದ್ದು. ಒಂದುವೇಳೆ ಈ ಪ್ರಯೋಗ ಜನರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾದರೆ ಮುಂದಿನ ವರ್ಷಗಳಲ್ಲಿ ನಾವೆಲ್ಲ ಗಣಕ ಬಳಸುವ ವಿಧಾನದಲ್ಲಿ ಅಪಾರ ಬದಲಾವಣೆಯಾಗುವ ನಿರೀಕ್ಷೆಯಿದೆ.

ಜನವರಿ ೧೧, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಜನವರಿ 4, 2011

ಆಕಾಶದಿಂದ ಅಂತರಜಾಲ

ಟಿ ಜಿ ಶ್ರೀನಿಧಿ

೨೦೧೦ರ ಕೊನೆಯ ವಾರದಲ್ಲಿ ಕಾ-ಸ್ಯಾಟ್ ಎಂಬ ಯುರೋಪಿನ ಉಪಗ್ರಹ ಉಡಾವಣೆಯಾಯಿತು. ಉಪಗ್ರಹದ ಉಡಾವಣೆಯಲ್ಲೇನೂ ವಿಶೇಷವಿಲ್ಲವಾದರೂ ಈ ಉಪಗ್ರಹದ ಉದ್ದೇಶವೇ ವಿಶೇಷವಾದದ್ದು - ಯುರೋಪಿನ ಗ್ರಾಮೀಣ ಪ್ರದೇಶಗಳಿಗೆ ಈ ಉಪಗ್ರಹದ ಮೂಲಕ ಅಂತರಜಾಲ ಸೌಲಭ್ಯ ಒದಗಿಸಲಾಗುತ್ತದೆ.

ಇಂಟರ್‌ನೆಟ್ ಅಥವಾ ಅಂತರಜಾಲ ಎನ್ನುವುದು ಅಪಾರ ಸಂಖ್ಯೆಯ ಗಣಕಗಳನ್ನು ಒಂದುಗೂಡಿಸುವ ಒಂದು ಬೃಹತ್ ಜಾಲ. ಯಾವುದೇ ಒಂದು ಗಣಕ ಈ ಬೃಹತ್ ಜಾಲದ ಅಂಗ ಎನ್ನಿಸಿಕೊಳ್ಳಬೇಕಾದರೆ ಅದು ಅಂತರಜಾಲದೊಡನೆ ಸಂಪರ್ಕ ಹೊಂದಿರಬೇಕು. ಹಾಗಿದ್ದಾಗ ಮಾತ್ರ ಅದು ಅಂತರಜಾಲದ ಇತರ ಗಣಕಗಳೊಡನೆ ಸಂಪರ್ಕ ಏರ್ಪಡಿಸಿಕೊಳ್ಳಲು ಸಾಧ್ಯ. ಅಂತೆಯೇ ಆ ಗಣಕದ ಬಳಕೆದಾರರು - ಅಂದರೆ ನಾವು - ವಿಶ್ವದ ವಿವಿಧೆಡೆಗಳಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ವಿಶ್ವವ್ಯಾಪಿ ಜಾಲದ ಮೂಲಕ ಪಡೆದುಕೊಳ್ಳುವುದು ಕೂಡ ಸಾಧ್ಯವಾಗುತ್ತದೆ.

ಇಂತಹ ಅಂತರಜಾಲ ಸಂಪರ್ಕಗಳಲ್ಲಿ ಹಲವಾರು ಬಗೆ - ಬ್ರಾಡ್‌ಬ್ಯಾಂಡ್, ಡಯಲ್‌ಅಪ್, ಜಿಪಿಆರ್‌ಎಸ್ ಹೀಗೆ. ಈ ಸಾಲಿಗೆ ಹೊಸ ಸೇರ್ಪಡೆಯೇ ಮೇಲೆ ಹೇಳಿದ ಉಪಗ್ರಹ ಅಂತರಜಾಲ ಸಂಪರ್ಕ.

* * *

ಹೆಚ್ಚಿನ ಬ್ಯಾಂಡ್‌ವಿಡ್ತ್‌ನೊಡನೆ ಅತಿವೇಗದ ಅಂತರಜಾಲ ಸಂಪರ್ಕ ಒದಗಿಸುವ ಬ್ರಾಡ್‌ಬ್ಯಾಂಡ್ ಸೇವೆ ಸದ್ಯಕ್ಕೆ ಅಂತರಜಾಲ ಸಂಪರ್ಕಗಳಲ್ಲೆಲ್ಲ ಅತ್ಯಂತ ಪ್ರಸಿದ್ಧವಾದದ್ದು. ದೂರಸಂಪರ್ಕ ಕ್ಷೇತ್ರದ ಪ್ರಮುಖ ಸಂಸ್ಥೆಗಳಷ್ಟೇ ಅಲ್ಲದೆ ಹಲವಾರು ಕೇಬಲ್ ಟೀವಿ ಸಂಸ್ಥೆಗಳೂ ಇಂತಹ ಅತಿವೇಗದ ಅಂತರ ಜಾಲಸಂಪರ್ಕವನ್ನು ಒದಗಿಸುತ್ತಿವೆ.

ವೈರ್‌ಲೆಸ್ ಫಿಡೆಲಿಟಿ ಅಥವಾ 'ವೈ-ಫಿ' ಮಾನಕ ಆಧಾರಿತ ತಂತ್ರಜ್ಞಾನ ಬಳಸಿ ವೈರ್‌ಲೆಸ್ (ನಿಸ್ತಂತು) ಅಂತರಜಾಲ ಸಂಪರ್ಕ ಹೊಂದುವುದು ಕೂಡ ಸಾಧ್ಯವಿದೆ. ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವ ಸಂಸ್ಥೆಗಳ ಮೂಲಕ ಲಭ್ಯವಿರುವ ವೈ-ಫಿ ಮೋಡೆಮ್ ಬಳಸಿ ನಮ್ಮ ಮನೆಯಲ್ಲೇ ಇಂತಹ ಸಂಪರ್ಕ ದೊರಕುವಂತೆ ಮಾಡಿಕೊಳ್ಳಬಹುದು.

ದೂರವಾಣಿಯನ್ನು ಬಳಸಿ ಕೆಲಸಮಾಡುವ ಡಯಲ್-ಅಪ್ ಸಂಪರ್ಕ ತೀರಾ ಇತ್ತೀಚಿನವರೆಗೂ ವ್ಯಾಪಕ ಬಳಕೆಯಲ್ಲಿತ್ತು. ದೂರವಾಣಿ ತಂತಿಗಳ ಮೂಲಕ ಮಾಹಿತಿ ವಿನಿಮಯ ನಡೆಸುವ ಈ ಬಗೆಯ ಸಂಪರ್ಕ ಈಚೆಗೆ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿದೆ.

ಮೊಬೈಲ್ ದೂರವಾಣಿಗಳ ಮೂಲಕವೂ ಅಂತರಜಾಲ ಸಂಪರ್ಕ ಹೊಂದುವುದು ಸಾಧ್ಯ. ಈಗಂತೂ ಈ ತಂತ್ರಜ್ಞಾನವನ್ನು ಬಳಸಿ ಅಂತರಜಾಲ ಸಂಪರ್ಕ ಒದಗಿಸುವ ಅದೆಷ್ಟೋ ಬಗೆಯ ಮೊಬೈಲ್ ದೂರವಾಣಿಗಳು ಹಾಗೂ ನಿಸ್ತಂತು ಅಂತರಜಾಲ ಸಂಪರ್ಕ ಉಪಕರಣಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

* * *

ಸಾಮಾನ್ಯವಾಗಿ ಲಭ್ಯವಿರುವ ಅಂತರಜಾಲ ಸಂಪರ್ಕಗಳ ಸಮಸ್ಯೆ ಎಂದರೆ ಅವುಗಳ ವ್ಯಾಪ್ತಿ. ಎಲ್ಲೆಲ್ಲಿ ದೂರವಾಣಿ ಅಥವಾ ಕೇಬಲ್ ಜಾಲ ಇಲ್ಲವೋ ಅಲ್ಲಿ ಅಂತರಜಾಲ ಸಂಪರ್ಕವೂ ಇರುವುದಿಲ್ಲ. ಇನ್ನು ಡಯಲ್-ಅಪ್ ಅಥವಾ ಮೊಬೈಲ್ ಅಂತರಜಾಲ ಸಂಪರ್ಕ ಕೆಲವೆಡೆಗಳಲ್ಲಿ ಇದ್ದರೂ ಸಂಪರ್ಕದ ವೇಗ ಬಹಳ ಕಡಿಮೆ ಇರುತ್ತದೆ.

ಈ ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನವೇ ಉಪಗ್ರಹ ಅಂತರಜಾಲ ಸಂಪರ್ಕ. ಗ್ರಾಮೀಣ ಪ್ರದೇಶದ ಬಳಕೆದಾರರಿಗೆ ಉಪಗ್ರಹದ ಮೂಲಕ ಅತಿವೇಗದ ಅಂತರಜಾಲ ಸಂಪರ್ಕ ಒದಗಿಸುವುದು ಇದರ ವೈಶಿಷ್ಟ್ಯ. ಇದು ನಮಗೆಲ್ಲ ಪರಿಚಿತವಾಗಿರುವ ಡಿಟಿಹೆಚ್ ಸೇವೆಯಂತೆಯೇ ಪುಟಾಣಿ ಡಿಷ್ ಆಂಟೆನಾ ಬಳಸಿಕೊಂಡು ಕೆಲಸಮಾಡುತ್ತದೆ. ಈ ಸಂಪರ್ಕ ಬೇರೆಲ್ಲ ಬಗೆಯ ಅಂತರಜಾಲ ಸಂಪರ್ಕಗಳಿಗಿಂತ ತುಸು ದುಬಾರಿಯಾದರೂ ನಾಗರಹೊಳೆ ಕಾಡಿನ ಮಧ್ಯದಲ್ಲಿರುವ ಹಳ್ಳಿಗೂ ಹೆಚ್ಚುವೇಗದ ಅಂತರಜಾಲ ಸಂಪರ್ಕ ದೊರಕುವಂತಾಗಲು ಇದೊಂದು ಉತ್ತಮ ಮಾರ್ಗ.

ಪ್ರಪಂಚದ ಅನೇಕ ಕಡೆಗಳಲ್ಲಿ ಉಪಗ್ರಹ ಅಂತರಜಾಲ ಈಗಾಗಲೇ ಲಭ್ಯವಿದೆ; ಯುರೋಪಿನಲ್ಲಿ ನಡೆದಿರುವ ಪ್ರಯತ್ನ ಇದರ ವ್ಯಾಪ್ತಿಯನ್ನು ಇನ್ನೂ ದೊಡ್ಡದಾಗಿ ವಿಸ್ತರಿಸಲು ಹೊರಟಿದೆ. ಈ ಪ್ರಯತ್ನ ಯಶಸ್ವಿಯಾದರೆ ನಮ್ಮ ಹಳ್ಳಿಗಳಲ್ಲಿ ಡಿಟಿಹೆಚ್ ಆಂಟೆನಾಗಳು ಕಾಣಿಸುವಷ್ಟೇ ಸಾಮಾನ್ಯವಾಗಿ ಉಪಗ್ರಹ ಅಂತರಜಾಲದ ಡಿಷ್ ಆಂಟೆನಾಗಳೂ ಕಾಣಸಿಗುವ ದಿನ ದೂರವಿಲ್ಲ!

ಜನವರಿ ೪, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ
badge