ಭಾನುವಾರ, ಡಿಸೆಂಬರ್ 30, 2007

ಕನ್ನಡಪ್ರಭದಲ್ಲಿ ಇ-ಜ್ಞಾನ

ಇಂದಿನ ಕನ್ನಡಪ್ರಭ 'ಸಾಪ್ತಾಹಿಕ ಪ್ರಭ'ದ ಬ್ಲಾಗ್ ಬುಟ್ಟಿ ಅಂಕಣದ ಕಣ್ಣಿಗೆ ಇ-ಜ್ಞಾನ ಬಿದ್ದಿದೆ! ಅದರಲ್ಲಿ ಪ್ರಕಟವಾಗಿರುವ ಬರಹ ಇಲ್ಲಿದೆ ನೋಡಿ:

ಬುಧವಾರ, ಡಿಸೆಂಬರ್ 5, 2007

ಡಿಜಿಟಲ್ ಯುಗದ ಪ್ರವರ್ತಕ...

ಟಿ ಜಿ ಶ್ರೀನಿಧಿ

ಅವು ನಿಮ್ಮ ಮನೆಗಳಲ್ಲಿ ಕನಿಷ್ಟವೆಂದರೂ ಐದರಿಂದ ಹತ್ತು ಕೋಟಿಯಷ್ಟಿರುತ್ತವೆ.

"ಏನು? ಇರುವೆ-ಜಿರಲೆಗಳಾ? ಅಕ್ಕಿ ಮೂಟೆಯಲ್ಲಿರುವ ಕಾಳುಗಳಾ?" ಎಂದು ನೀವು ಕೇಳುವ ಮೊದಲೇ ಹೇಳಿಬಿಡುತ್ತೇನೆ ಕೇಳಿ - ಅವು... ಮುಂದೆ ಓದಿ

ಮಂಗಳವಾರ, ಡಿಸೆಂಬರ್ 4, 2007

ಅಯ್ಯೋ! ಈ ಮನುಷ್ಯರಿಗಿಂತಾ ನಾವೇ ವಾಸಿ!!

ಚಿಂಪಾಂಜಿ ಮರಿಗಳಿಗೆ ಮನುಷ್ಯರಿಗಿಂತ ಹೆಚ್ಚಿನ ಜ್ಞಾಪಕ ಶಕ್ತಿ ಇದೆ ಎಂಬ ಕುತೂಹಲಕರ ಅಂಶವನ್ನು ಜಪಾನಿನಲ್ಲಿ ನಡೆದ ಸಂಶೋಧನೆಯೊಂದು ಹೊರಗೆಡವಿದೆ. ಕ್ಯೋಟೋ ವಿಶ್ವವಿದ್ಯಾನಿಲಯ ನಡೆಸಿದ ಈ ಸಂಶೋಧನೆಯಲ್ಲಿ ಸಂಗತಿಗಳನ್ನು ನೆನಪಿಟ್ಟುಕೊಂಡು ಥಟ್ಟನೆ ಜ್ಞಾಪಿಸಿಕೊಳ್ಳುವ ಶಕ್ತಿಯನ್ನು ಪರೀಕ್ಷಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಹಿರಿಕಿರಿಯ ಚಿಂಪಾಂಜಿಗಳು ಹಾಗೂ ಒಂದಷ್ಟು ಮಂದಿ ವಿವಿ ವಿದ್ಯಾರ್ಥಿಗಳ ನಡುವೆ ಒಂದು ಜ್ಞಾಪಕ ಶಕ್ತಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪರದೆಯಲ್ಲಿ ಕೊಂಚಹೊತ್ತು ಪ್ರದರ್ಶಿಸಲಾದ ಅಂಕಿಗಳನ್ನು ನೋಡಿ ಕೊಂಚಹೊತ್ತಿನ ನಂತರ ಆ ಅಂಕಿಗಳನ್ನು ಮರೆಮಾಡಿದಾಗ ಎಲ್ಲೆಲ್ಲಿ ಯಾವ ಅಂಕಿ ಇತ್ತು ಎಂಬುದನ್ನು ಗುರುತಿಸುವುದು ಈ ಸ್ಪರ್ಧೆಯ ಸವಾಲು. ಈ ಸವಾಲಿನಲ್ಲಿ ಗೆದ್ದದ್ದು ಐದುವರ್ಷ ವಯಸ್ಸಿನ ಚಿಂಪಾಂಜಿ ಮರಿ! ಅದು ಅಂಕಿಗಳನ್ನು ಗುರುತಿಸಲು ತೆಗೆದುಕೊಂಡ ಸಮಯ ಒಂದು ಸೆಕೆಂಡಿನ ಐದನೇ ಒಂದು ಭಾಗ ಅಷ್ಟೆ. ಇಷ್ಟು ಕಡಿಮೆ ಸಮಯದಲ್ಲಿ ನಮಗೆ ಆ ಪರದೆಯನ್ನು ಒಂದುಬಾರಿ ಸರಿಯಾಗಿ ನೋಡಲೂ ಆಗುವುದಿಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಫೋಟೋಗ್ರಾಫಿಕ್ ಮೆಮೊರಿ ಅಂದರೆ ಇದೇ ಇರಬೇಕೇನೋ!

ಈ ಸಂಶೋಧನೆಯನ್ನು ಕುರಿತ ಹೆಚ್ಚಿನ ವಿವರಗಳು ಕರೆಂಟ್ ಬಯಾಲಜಿ ಪತ್ರಿಕೆಯಲ್ಲಿ ಪ್ರಕಟವಾಗಿವೆ.

ಭಾನುವಾರ, ಜುಲೈ 29, 2007

ಬೆಳಕು ತಂದ ಬಳ್ಳಿ!

ಟಿ ಜಿ ಶ್ರೀನಿಧಿ

ನಿಮಗೆ ಆಪ್ಟಿಕಲ್ ಫೈಬರ್ ಗೊತ್ತಾ? ಅದರ ಬಗ್ಗೆ ಇಲ್ಲೊಂದು ಲೇಖನ ಇದೆ, ಓದಿ!

ಯಾರು ಹಿತವರು ನಿಮಗೆ?

ಟಿ ಜಿ ಶ್ರೀನಿಧಿ

ಐದಾರು ವರ್ಷಗಳ ಹಿಂದಿನ ಮಾತು. ದೂರವಾಣಿ ಸಂಪರ್ಕ ಹೊಂದಲು ಯಾರಾದರೂ ಆಸೆಪಟ್ಟರೆ ಆಗ ಅವರಿಗಿದ್ದದ್ದು ಒಂದೇ ಒಂದು ಆಯ್ಕೆ. ದೂರವಾಣಿ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿ ವರ್ಷಾನುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬೇರೆ. ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ 'ನಾನು ಅಂದರೆ ಫೋನು - ಫೋನು ಅಂದರೆ ನಾನು' ಎಂದು ಮೆರೆಯುತ್ತಿದ್ದ ಕಾಲ ಅದು.
ಆದರೆ ಈಗ, ದೂರಸಂಪರ್ಕ ಕ್ಷೇತ್ರದ ತುಂಬಾ ಸ್ಪರ್ಧೆಯೇ ತುಂಬಿಕೊಂಡಿದೆ. ಸಾರ್ವಜನಿಕ ಕ್ಷೇತ್ರದ ಬಿಎಸ್‌ಎನ್‌ಎಲ್ ಜೊತೆಗೆ ಇನ್ನೂ ಹಲವಾರು ಖಾಸಗೀ ಸಂಸ್ಥೆಗಳು ಮೊಬೈಲ್, ಸ್ಥಿರ ದೂರವಾಣಿ ಹಾಗೂ ಅಂತರ್ಜಾಲ ಸಂಪರ್ಕ ಸೇವೆಗಳನ್ನು ನೀಡುತ್ತಿವೆ. ಈ ಸಂಸ್ಥೆಗಳು ಒದಗಿಸುವ ನೂರೆಂಟು ಬಗೆಯ ಸೇವೆಗಳು ಗ್ರಾಹಕರಿಗೆ ಅಪಾರ ಪ್ರಮಾಣದ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಿವೆ.
ಆದರೆ ಹೊಸ ದೂರವಾಣಿ ಸಂಪರ್ಕಕ್ಕಾಗಿ ಹುಡುಕಾಟ ನಡೆಸುವಾಗ ನಮಗೆ ಒಂದು ಸಂಸ್ಥೆಯ ಸ್ಥಳೀಯ ದರಗಳು ಇಷ್ಟವಾದರೆ ಮೊಬೈಲ್ ಕರೆಗಳಿಗಾಗಿ ಮತ್ತೊಂದು ಸಂಸ್ಥೆಯ ದರಗಳು ಪ್ರಿಯವಾಗುತ್ತವೆ. ಎಸ್‌ಟಿಡಿ ಹಾಗೂ ಐಎಸ್‌ಡಿ ಕರೆಗಳಿಗಾಗಿ ಮೂರನೆಯ ಸಂಸ್ಥೆಯೊಂದು ಪ್ರಕಟಿಸಿರುವ ದರಪಟ್ಟಿ ಬಹಳ ಆಕರ್ಷಕವಾಗಿದೆ ಎಂದೂ ಅನ್ನಿಸಲು ಪ್ರಾರಂಭವಾಗುತ್ತದೆ.
ಸಮಸ್ಯೆಯಿರುವುದೇ ಇಲ್ಲಿ. ಯಾವುದೇ ಒಂದು ಸಂಸ್ಥೆಯ ದೂರವಾಣಿ ಸಂಪರ್ಕವನ್ನು ಆಯ್ದುಕೊಂಡಮೇಲೆ ನಿಮಗೆ ಇಷ್ಟವಿದೆಯೋ ಇಲ್ಲವೋ ಅದು ಒದಗಿಸುವ ಸೇವೆಗಳನ್ನು ಬಳಸುವುದು ಅನಿವಾರ್ಯವಾಗುತ್ತದೆ. ಬೇರಾವುದೋ ಸಂಸ್ಥೆ ಇದಕ್ಕಿಂತ ಹೆಚ್ಚು ಸ್ಪರ್ಧಾತ್ಮಕ ದರಗಳಲ್ಲಿ ತನ್ನ ಸೇವೆ ಒದಗಿಸಲು ಪ್ರಾರಂಭಿಸಿದರೆ ಅದನ್ನು ನೋಡಿ ಹೊಟ್ಟೆಯುರಿ ಅನುಭವಿಸುವುದು ಮಾತ್ರ ನಮ್ಮ ಕೈಲಾಗುವ ಕೆಲಸ!
ಆದರೆ ಇನ್ನುಮುಂದೆ ಹೀಗಾಗಬೇಕಿಲ್ಲ ಎನ್ನುತ್ತಿವೆ ದೂರಸಂಪರ್ಕ ವಲಯದಲ್ಲಿ ಕೇಳಿಬರುತ್ತಿರುವ ಸುದ್ದಿಗಳು. ನಾವು ಯಾವುದೇ ಸಂಸ್ಥೆಯ ದೂರವಾಣಿ ಸಂಪರ್ಕ ಹೊಂದಿದ್ದರೂ ಪರವಾಗಿಲ್ಲ, ಅದೇ ದೂರವಾಣಿಯ ಮುಖಾಂತರ ಬೇರೆಬೇರೆ ಸಂಸ್ಥೆಗಳು ಒದಗಿಸುವ ಸೇವೆಗಳನ್ನೂ ಬಳಸಿಕೊಳ್ಳುವುದು ಸಾಧ್ಯ ಎನ್ನುತ್ತಿವೆ ಈ ಸುದ್ದಿಗಳು.
"ಸ್ಥಳೀಯ ಕರೆಗಳಿಗೆ ಈ ಸಂಸ್ಥೆ ಸಾಕು, ಆದರೆ ಎಸ್‌ಟಿಡಿ-ಐಎಸ್‌ಡಿಗೆ ಬೇರೆ ಸಂಸ್ಥೆಯೇ ಬೇಕು" ಎನ್ನುವಂತಹ ಸ್ವಾತಂತ್ರ್ಯವನ್ನು ಗ್ರಾಹಕರಿಗೆ ಒದಗಿಸಲಿರುವ ಈ ಸೌಲಭ್ಯದ ಹೆಸರೇ ಕ್ಯಾರಿಯರ್ ಪ್ರೀ-ಸೆಲೆಕ್ಷನ್ ಅಥವಾ ಸಿಪಿಎಸ್.
ಈ ಸೌಲಭ್ಯ ಬಳಸುವ ಯಾವುದೇ ಸಂಸ್ಥೆಯ ದೂರವಾಣಿ ಗ್ರಾಹಕರು ತಮಗೆ ಬೇರೆಬೇರೆ ಸೇವೆಗಳನ್ನು ಒದಗಿಸಲು ಬೇರೆಬೇರೆ ಸಂಸ್ಥೆಗಳನ್ನು ಆಯ್ದುಕೊಳ್ಳಬಹುದು. ಉದಾಹರಣೆಗೆ ನೀವು 'ಅ' ಎಂಬ ಸಂಸ್ಥೆಯ ಸ್ಥಿರದೂರವಾಣಿ ಸಂಪರ್ಕವನ್ನು ಬಳಸುತ್ತಿದ್ದೀರಿ ಎಂದುಕೊಳ್ಳೋಣ. ಈ ಸಂಸ್ಥೆ ಪ್ರತಿಯೊಂದು ಸ್ಥಳೀಯ ಕರೆಗಾಗಿ ಒಂದು ರೂಪಾಯಿಯ ದರವನ್ನು ಹಾಗೂ ಎಸ್‌ಟಿಡಿ ಕರೆಗಳಿಗಾಗಿ ಪ್ರತಿ ನಿಮಿಷಕ್ಕೆ ಎರಡು ರೂಪಾಯಿಗಳನ್ನು ನಿಗದಿಪಡಿಸಿದೆ. ಆದರೆ ಕೆಲದಿನಗಳ ನಂತರ ಸ್ಥಳೀಯ ಕರೆ ಹಾಗೂ ಎಸ್‌ಟಿಡಿ ಕರೆ ಎರಡಕ್ಕೂ ಒಂದೂವರೆ ರೂಪಾಯಿ ಮಾತ್ರ ಎಂದು 'ಬ' ಸಂಸ್ಥೆ ಪ್ರಕಟಿಸುತ್ತದೆ. ಈಗ ನೀವೇನು ಮಾಡಬಹುದು? ಕ್ಯಾರಿಯರ್ ಪ್ರೀ-ಸೆಲೆಕ್ಷನ್‌ನ ನೆರವಿನಿಂದ ನಿಮ್ಮ ಸ್ಥಳೀಯ ಕರೆಗಳಿಗಾಗಿ 'ಅ' ಸಂಸ್ಥೆಯ ಸೇವೆಯನ್ನೇ ಮುಂದುವರೆಸಿ ಎಸ್‌ಟಿಡಿಗಾಗಿ ಮಾತ್ರ 'ಬ' ಸಂಸ್ಥೆಯನ್ನು ಬಳಸಿಕೊಳ್ಳಬಹುದು. ತಿಂಗಳ ಕೊನೆಗೆ ನಿಮ್ಮ ದೂರವಾಣಿಯ ಬಾಡಿಗೆ ಹಾಗೂ ಸ್ಥಳೀಯ ಕರೆಗಳ ವೆಚ್ಚವನ್ನು 'ಅ' ಸಂಸ್ಥೆಗೆ ನೀಡಿ ನೀವು ಮಾಡಿದ ಎಸ್‌ಟಿಡಿ ಕರೆಗಳ ವೆಚ್ಚವನ್ನು ಮಾತ್ರ 'ಬ' ಸಂಸ್ಥೆಗೆ ನೀಡಿದರೆ ಆಯಿತು!
ಈ ಸೌಲಭ್ಯ ಈಗಾಗಲೇ ಯೂರೋಪ್ ಹಾಗೂ ಆಸ್ಟ್ರೇಲಿಯಾಗಳಲ್ಲಿ ಬಳಕೆಗೆ ಬರುತ್ತಿದೆ. ಅಮೆರಿಕಾದಲ್ಲಿ ಇದೇ ಸೌಲಭ್ಯವನ್ನು 'ಡಯಲಿಂಗ್ ಪ್ಯಾರಿಟಿ' ಎಂಬ ಹೆಸರಿನಿಂದ ಕರೆದರೆ ಜಪಾನ್ ಹಾಗೂ ಕೊರಿಯಾಗಳಲ್ಲಿ 'ಪ್ರಯಾರಿಟಿ ಆಕ್ಸೆಸ್' ಎಂದು ಗುರುತಿಸುತ್ತಾರೆ.
ಹ್ಞಾಂ, ನಮ್ಮ ದೇಶದಲ್ಲೂ ಈ ಸೇವೆಯನ್ನು ಆದಷ್ಟು ಬೇಗ ಜಾರಿಗೆ ತರುವ ನಿಟ್ಟಿನಲ್ಲಿ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಪ್ರಯತ್ನಗಳನ್ನು ನಡೆಸಿದೆ. ಭಾರತದಲ್ಲಿ ದೂರಸಂಪರ್ಕ ಸೇವೆ ಒದಗಿಸುತ್ತಿರುವ ಕೆಲವು ಪ್ರಮುಖ ಸಂಸ್ಥೆಗಳು ಈ ಸೌಲಭ್ಯವನ್ನು ಅಳವಡಿಸಲು ತಮ್ಮ ಕಾರ್ಯಾಚರಣ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಬೇಕಿದ್ದು ಈ ಬದಲಾವಣೆಗಳು ಕಾರ್ಯಗತವಾದ ಕೂಡಲೆ ಭಾರತದಲ್ಲಿ ಕ್ಯಾರಿಯರ್ ಪ್ರೀ-ಸೆಲೆಕ್ಷನ್ ಲಭ್ಯವಾಗುವ ನಿರೀಕ್ಷೆಯಿದೆ.

ಬುಧವಾರ, ಜೂನ್ 6, 2007

ಕರೀಬಿಲವನ್ನು ತೂಗುವ ವಿಧಾನ!

ಕೊಳ್ಳೇಗಾಲ ಶರ್ಮ

ತರಕಾರಿ ತರಲು ಹೋದಾಗಲೆಲ್ಲ, ಮಾರುವವ ಸರಿಯಾಗಿ ತೂಗುತ್ತಿದ್ದಾನೆಯೋ ಇಲ್ಲವೋ ಎನ್ನುವ ಅನುಮಾನ ಇದ್ದೇ ಇರುತ್ತದಲ್ಲ! ನನ್ನ ಗೆಳೆಯರೊಬ್ಬರು ತರಕಾರಿ ಮಾರುಕಟ್ಟೆಗೆ ಹೋಗುವಾಗ ಒಂದು ತೂಕದ ಕಲ್ಲನ್ನೂ ಹೊತ್ತು ಹೋಗುತ್ತಿದ್ದರು. ಅದನ್ನೇ ಇಟ್ಟು ತೂಗು ಎನ್ನುತ್ತಿದ್ದರು. ಕಣ್ಮುಂದೆ ನಡೆಯುವ ಮಾಪನವನ್ನೇ ನಂಬಲಾಗದ ನಮಗೆ ಇನ್ನು ಕೋಟ್ಯಂತರ ಕಿಲೋಮೀಟರು ದೂರವಿರುವ ತಾರೆಯರನ್ನು ತೂಗಬಹುದು ಎಂದರೆ ನಂಬಿಕೆ ಬರುವುದಾದರೂ ಹೇಗೆ?
ಇದು ಸತ್ಯವಾದರೂ ನಿಜ. ಸಹಸ್ರಾರು ಜ್ಯೋತಿರ್ವರ್ಷಗಳಷ್ಟು ದೂರ ಇರುವ ತಾರೆಗಳು, ಕರೀಬಿಲಗಳ ತೂಕವನ್ನು ಕಂಡು ಹಿಡಿಯುವ ಹೊಸದೊಂದು ತಂತ್ರವನ್ನು ಅಮೆರಿಕೆಯ ನಾಸಾದ ಭೌತವಿಜ್ಞಾನಿಗಳು ರೂಪಿಸಿದ್ದಾರಂತೆ. >> ಮುಂದೆ ಓದಿ

ಸಬ್‍ಮರೀನ್ ಎಂಬ ನೀರಿನಡಿಯ ಯಾತ್ರಿಕ

ಟಿ ಜಿ ಶ್ರೀನಿಧಿ

ಸಬ್‌ಮರೀನ್ - ಎಂತಹ ರೋಚಕ ಕಲ್ಪನೆ! ಮೀನಿನಂತೆ ನೀರಿನೊಳಗೆ ಓಡಾಡಿಕೊಂಡಿದ್ದು ವೈಜ್ಞಾನಿಕ ಸಂಶೋಧನೆಯಿಂದ ವೈರಿಗಳ ಮೇಲೆ ದಾಳಿಯವರೆಗೆ ಅನೇಕ ಬಗೆಯ ಕೆಲಸಗಳನ್ನು ಕೈಗೊಳ್ಳುವ ಈ ವಿಶಿಷ್ಟ ವಾಹನ ನಮ್ಮಲ್ಲಿ ಉಂಟುಮಾಡುವ ಕುತೂಹಲಕ್ಕೆ ಕೊನೆಯೇ ಇಲ್ಲ ಎಂದರೂ ತಪ್ಪಾಗಲಾರದೇನೋ.
ನೀರಿನೊಳಗೆ ಚಲಿಸಬಲ್ಲ ವಾಹನಗಳನ್ನು ರಚಿಸುವ ಹಂಬಲ ಮಾನವನಲ್ಲಿ ಬಹಳ ಹಿಂದಿನಿಂದಲೇ ಇತ್ತು. ಈ ನಿಟ್ಟಿನಲ್ಲಿ ೧೫೦೦ನೇ ಇಸವಿಯ ಸುಮಾರಿನಿಂದಲೇ ಪ್ರಯತ್ನಗಳೂ ನಡೆಯುತ್ತಿದ್ದವು. ಹದಿನಾರು-ಹದಿನೇಳನೇ ಶತಮಾನಗಳಲ್ಲೇ ಹಲವಾರು ಸಣ್ಣಪುಟ್ಟ ಸಬ್‌ಮರೀನ್‌ಗಳೂ ತಯಾರಾಗಿದ್ದವು. ಯುದ್ಧಗಳ ಸಂದರ್ಭದಲ್ಲಿ ಸಬ್‌ಮರೀನ್‌ಗಳ ಬಳಕೆ ೧೮೬೪ರಷ್ಟು ಹಿಂದೆಯೇ ನಡೆದಿತ್ತಂತೆ!
ಸಬ್‌ಮರೀನ್‌ಗಳು ಸದಾ ನೀರಿನೊಳಗೇ ಸಂಚರಿಸಬೇಕಾಗಿರುವುದರಿಂದ ಅವುಗಳ ರಚನೆ ಬಹಳ ಗಟ್ಟಿಮುಟ್ಟಾಗಿ, ’ಏರ್‌ಟೈಟ್’ ಆಗಿರಬೇಕಾಗುತ್ತದೆ. ಸಮುದ್ರದಾಳದಲ್ಲಿರುವ ಅಪಾರ ಒತ್ತಡವನ್ನು ಸಹಿಸಿಕೊಳ್ಳಲು ಇಂತಹ ಸದೃಢ ರಚನೆ ಅನಿವಾರ್ಯವೂ ಕೂಡ. ಅದಲ್ಲದೆ ಸಮುದ್ರದಾಳದಲ್ಲೇ ಕೆಲಸಮಾಡುವ ಈ ಸಬ್‌ಮರೀನ್‌ಗಳಿಗೆ ಹೆಚ್ಚಿನ ಗಾಳಿಯನ್ನು ಬಳಸದ ಇಂಜನ್‌ಗಳೂ ಬೇಕು! ಹೀಗಾಗಿಯೇ ಹೆಚ್ಚಿನ ಸಬ್‌ಮರೀನ್‌ಗಳು ಬ್ಯಾಟರಿ ಅಥವಾ ಅಣುಶಕ್ತಿಚಾಲಿತವಾಗಿರುತ್ತವೆ.
ಸಬ್‌ಮರೀನ್‌ಗಳಲ್ಲಿ ಉಪಯೋಗವಾಗುವ ಉಪಕರಣಗಳು ಕೂಡ ಸಬ್‌ಮರೀನ್‌ನಷ್ಟೇ ಕುತೂಹಲ ಮೂಡಿಸುವಂಥವು: ಸದಾ ನೀರಿನಡಿಯಲ್ಲೇ ಇರುವ ಸಬ್‌ಮರೀನ್ ಚಾಲಕವರ್ಗದವರು ತಮ್ಮ ಸುತ್ತಮುತ್ತ ನೀರಿನ ಮೇಲೆ ಏನಾಗುತ್ತಿದೆ ಎಂಬುದನ್ನು ಅರಿತುಕೊಳ್ಳಲು ಪೆರಿಸ್ಕೋಪ್ ಎಂಬ ಉಪಕರಣವನ್ನು ಬಳಸುತ್ತಾರೆ. ಇದು ಸಬ್‌ಮರೀನ್‌ನ ’ಕಣ್ಣು’ ಎನ್ನುವುದಾದರೆ ಸೋನಾರ್ ಎಂಬ ಉಪಕರಣ ಸಬ್‌ಮರೀನ್‌ನ ’ಕಿವಿ’ (ಸೋನಾರ್ ಎಂಬ ಸಂಕೇತದ ಪೂರ್ಣರೂಪ ಸೌಂಡ್ ನ್ಯಾವಿಗೇಷನ್ ಆಂಡ್ ರೇಂಜಿಂಗ್ ಎಂದು). ಈ ಉಪಕರಣ ಶಬ್ದದ ಅಲೆಗಳ ಸಹಾಯದಿಂದ ಸಬ್‌ಮರೀನ್‌ನ ಸುತ್ತಮುತ್ತ ಏನೇನಿದೆ ಎಂಬುದನ್ನು ಪತ್ತೆಹಚ್ಚುತ್ತದೆ.
ಈಗಾಗಲೇ ಹೇಳಿದಂತೆ ಸಬ್‌ಮರೀನ್‌ಗಳ ಬಳಕೆ ಕೇವಲ ಮಿಲಿಟರಿ ಉಪಯೋಗಕ್ಕಷ್ಟೆ ಸೀಮಿತವಲ್ಲ. ವೈಜ್ಞಾನಿಕ ಸಂಶೋಧನೆ ಹಾಗೂ ಸಮುದ್ರದಾಳದಲ್ಲಿ ನಡೆಯುವ ಶೋಧನಾ ಕಾರ್ಯಗಳಲ್ಲೂ ಸಬ್‌ಮರೀನ್‌ಗಳು ವ್ಯಾಪಕವಾಗಿ ಬಳಕೆಯಾಗುತ್ತವೆ - ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ನಿಕ್ಷೇಪಗಳ ಪತ್ತೆ, ಮುಳುಗಿಹೋದ ಹಡಗುಗಳ ಅನ್ವೇಷಣೆ ಹೀಗೆ. ಆದರೆ ಇಲ್ಲಿ ಉಪಯೋಗಿಸುವ ಸಬ್‌ಮರೀನ್‌ಗಳ ಗಾತ್ರ ಕೊಂಚ ಚಿಕ್ಕದಾಗಿರುತ್ತದೆ, ಅಷ್ಟೆ! ಹೀಗಾಗಿ ಈ ವಾಹನಗಳನ್ನು ’ಸಬ್‌ಮರ್ಸಿಬಲ್’ಗಳೆಂದು ಕರೆಯುತ್ತಾರೆ. ೧೯೧೨ರಲ್ಲಿ ಅಪಘಾತಕ್ಕೀಡಾಗಿ ಮುಳುಗಿಹೋದ ಟೈಟಾನಿಕ್ ಮತ್ತೆ ಪತ್ತೆಯಾದದ್ದು ಇಂತಹುದೊಂದು ಸಬ್‌ಮರ್ಸಿಬಲ್‌ನ ನೆರವಿನಿಂದಲೇ.
ದೊಡ್ಡದೊಂದು ಕೇಬಲ್‌ನ ಸಹಾಯದಿಂದ ಹಡಗಿಗೆ ಅಂಟಿಕೊಂಡು ದೂರನಿಯಂತ್ರಿತವಾಗಿ ಕೆಲಸಮಾಡುವ ಸಬ್‌ಮರೀನ್‌ಗಳೂ ಇವೆ. ಇವುಗಳನ್ನು ’ರಿಮೋಟ್‌ಲಿ ಆಪರೇಟೆಡ್ ವೆಹಿಕಲ್’ ಅಥವಾ ’ಆರ್‌ಒವಿ’ಗಳೆಂದು ಕರೆಯುತ್ತಾರೆ.

ಬುಧವಾರ, ಮೇ 9, 2007

ಐಟಿ ಸರ್ವಿಸ್ ಮ್ಯಾನೇಜ್‍ಮೆಂಟ್ (ITSM) ಮತ್ತು ಐಟಿ ಇನ್‍ಫ್ರಾಸ್ಟ್ರಕ್ಚರ್ ಲೈಬ್ರರಿ (ITIL)

ಟಿ ಜಿ ಶ್ರೀನಿಧಿ

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಹಿವಾಟು ಹೆಚ್ಚುತ್ತಿದ್ದಂತೆ ಈ ಕ್ಷೇತ್ರದಲ್ಲಿ ಒದಗಿಸಲಾಗುತ್ತಿರುವ ಸೇವೆಯ ಗುಣಮಟ್ಟದ ಬಗೆಗೆ ನೀಡಲಾಗುತ್ತಿರುವ ಮಹತ್ವ ವ್ಯಾಪಕವಾಗಿ ಹೆಚ್ಚುತ್ತಿದೆ. ಇದರಿಂದಾಗಿ ಐಟಿ ಸೇವೆ ಒದಗಿಸುವ ಸಂಸ್ಥೆಗಳು ತಮ್ಮ ಸೇವೆಗಳನ್ನು ಹೇಗೆ ವ್ಯವಸ್ಥಿತವಾಗಿ ನಿಭಾಯಿಸಬೇಕು ಎನ್ನುವುದೇ ಇದೀಗ ಒಂದು ಪ್ರತ್ಯೇಕ ಕ್ಷೇತ್ರವಾಗಿ ಬೆಳೆದು ನಿಂತಿದೆ. ಈ ಕ್ಷೇತ್ರವೇ ಐಟಿ ಸರ್ವಿಸ್ ಮ್ಯಾನೇಜ್‌ಮೆಂಟ್ ಅಥವಾ ’ಐಟಿ‌ಎಸ್‌ಎಂ’.
ಐಟಿ ಸೇವೆಗಳನ್ನು ನಿಭಾಯಿಸುವಲ್ಲಿ ವಿಶ್ವದಾದ್ಯಂತ ಪ್ರಯೋಗಿಸಿ ಯಶಸ್ವಿಯಾಗಿರುವ ಉತ್ತಮ ಅಭ್ಯಾಸಗಳು (ಬೆಸ್ಟ್ ಪ್ರಾಕ್ಟೀಸ್) ಹಾಗೂ ಪ್ರಾಸೆಸ್ ಮ್ಯಾನೇಜ್‌ಮೆಂಟ್‌ನಂತಹ ತಂತ್ರಗಳನ್ನು ಉತ್ತಮ ಗುಣಮಟ್ಟದ ಸೇವೆ ನೀಡುವಲ್ಲಿ ಬಳಸಿಕೊಳ್ಳುವುದೇ ಐಟಿ ಸರ್ವಿಸ್ ಮ್ಯಾನೇಜ್‌ಮೆಂಟ್‌ನ ಧ್ಯೇಯ. ಈ ಮೂಲಕ ಸೇವಾಮಟ್ಟ ಒಪ್ಪಂದದ (ಸರ್ವಿಸ್ ಲೆವೆಲ್ ಅಗ್ರಿಮೆಂಟ್) ನಿಬಂಧನೆಗಳಿಗೆ ಒಳಪಟ್ಟಂತೆ ಗ್ರಾಹಕರ ಅಗತ್ಯಗಳಿಗೆ ತಕ್ಕ ಸೇವೆಯನ್ನು ನೀಡಲು ಐಟಿ ಸಂಸ್ಥೆಗಳಿಗೆ ಐಟಿ‌ಎಸ್‌ಎಂ ನೆರವಾಗುತ್ತದೆ.
ಐಟಿ‌ಎಸ್‌ಎಂ ಕ್ಷೇತ್ರದಲ್ಲಿ ಇತ್ತೀಚೆಗೆ ಕೇಳಿಬರುತ್ತಿರುವ ಹೊಸ ಹೆಸರು ಐಟಿ‌ಐ‌ಎಲ್ ಅಥವಾ ಐಟಿ ಇನ್‌ಫ್ರಾಸ್ಟ್ರಕ್ಚರ್ ಲೈಬ್ರರಿಯದು. ಐಟಿ ಸೇವಾ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಕೇಳಿಬರುವ ತೊಂದರೆಗಳು (ಇನ್‌ಸಿಡೆಂಟ್ ಅಥವಾ ಪ್ರಾಬ್ಲಂ), ಬದಲಾವಣೆಗಳು (ಚೇಂಜ್), ಹೊಸ ಬಿಡುಗಡೆಗಳು (ರಿಲೀಸ್) ಮೊದಲಾದವುಗಳನ್ನು ವ್ಯವಸ್ಥಿತವಾಗಿ ನಿಭಾಯಿಸುವಲ್ಲಿ ಐಟಿ‌ಐ‌ಎಲ್ ನೆರವಾಗುತ್ತದೆ.
ಮಾಹಿತಿ ತಂತ್ರಜ್ಞಾನ ಸೇವೆಗಳನ್ನು ನಿಭಾಯಿಸುವಲ್ಲಿ ವಿಶ್ವದಾದ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿರುವ ಕಾರ್ಯತಂತ್ರಗಳಲ್ಲಿ ಐಟಿ‌ಐ‌ಎಲ್ ಅಗ್ರಗಣ್ಯವಾಗಿ ಬೆಳೆದುನಿಂತಿದೆ. ಇನ್‌ಸಿಡೆಂಟ್ ಮ್ಯಾನೇಜ್‌ಮೆಂಟ್, ಪ್ರಾಬ್ಲಂ ಮ್ಯಾನೇಜ್‌ಮೆಂಟ್, ಚೇಂಜ್ ಮ್ಯಾನೇಜ್‌ಮೆಂಟ್, ರಿಲೀಸ್ ಮ್ಯಾನೇಜ್‌ಮೆಂಟ್ ಹಾಗೂ ಸರ್ವಿಸ್ ಡೆಸ್ಕ್ ಸೇವೆಗಳಿಗೆ ಸಂಬಂಧಿಸಿದಂತೆ ಬಳಸಬಹುದಾದ ಅತ್ಯುತ್ತಮ ಅಭ್ಯಾಸಗಳ ಬಗೆಗೆ (ಬೆಸ್ಟ್ ಪ್ರಾಕ್ಟೀಸ್) ಐಟಿ‌ಐ‌ಎಲ್ ನಿರ್ದೇಶನಗಳನ್ನು ಒದಗಿಸುತ್ತದೆ.
ಇದೀಗ ವಿಶ್ವವಿಖ್ಯಾತವಾಗಿ ಬೆಳೆದಿರುವ ಐಟಿ‌ಐ‌ಎಲ್ ಅನ್ನು ಮೊತ್ತಮೊದಲ ಬಾರಿಗೆ ಬಳಕೆಗೆ ತಂದದ್ದು ಬ್ರಿಟಿಷ್ ಸರ್ಕಾರದ ಆಫೀಸ್ ಆಫ್ ಗವರ್ನಮೆಂಟ್ ಕಾಮರ್ಸ್. ಆದರೆ ಈಗ ಐಟಿ‌ಐ‌ಎಲ್ ವಿಶ್ವದೆಲ್ಲೆಡೆಯ ಐಟಿ ಸೇವಾ ಸಂಸ್ಥೆಗಳ ಪಾಲಿಗೆ ಆದರ್ಶವಾಗಿದೆ.

ಮಂಗಳವಾರ, ಮೇ 8, 2007

ಅಂಗಡಿ ಸಾಮಾನಿಗೆ ಜೀವತುಂಬುವ ’ಆರ್‌ಎಫ್‌ಐಡಿ’

ಟಿ ಜಿ ಶ್ರೀನಿಧಿ

ಮಹಾನಗರಗಳಲ್ಲಿ ಮೊದಲು ಪ್ರಾರಂಭವಾದ ಸೂಪರ್ ಮಾರ್ಕೆಟ್ ಸಂಸ್ಕೃತಿ ಈಗ ಸಣ್ಣಪುಟ್ಟ ಊರುಗಳಲ್ಲೂ ಕಾಣಿಸಿಕೊಳ್ಳಲು ಶುರುವಾಗಿದೆ. ದೊಡ್ಡದೊಡ್ಡ ಅಂಗಡಿಗಳಲ್ಲಿ ನಮಗೆ ಬೇಕಾದ ವಸ್ತುಗಳನ್ನು ಹೊರಗಡೆಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶ ಕೊಡುವ ಈ ಸೂಪರ್‌ಮಾರ್ಕೆಟ್‌ಗಳು ಬಹುತೇಕ ಎಲ್ಲರಿಗೂ ಅಚ್ಚುಮೆಚ್ಚು. ಆದರೆ ಈ ಜನಪ್ರಿಯತೆಯ ಜೊತೆಗೇ ಒಂದು ಸಮಸ್ಯೆ ಕೂಡ ಹುಟ್ಟಿಕೊಂಡಿದೆ. ಅನೇಕ ಸಂದರ್ಭಗಳಲ್ಲಿ ಸೂಪರ್‌ಮಾರ್ಕೆಟ್‌ಗಳಲ್ಲಿ ಅದೆಷ್ಟು ಜನಸಂದಣಿ ಇರುತ್ತದೆಂದರೆ ಸಾಮಾನು ಕೊಳ್ಳುವುದಕ್ಕಿಂತ ಹೆಚ್ಚಿನ ಸಮಯ ಅದಕ್ಕಾಗಿ ಹಣ ಪಾವತಿಸಲು ಬೇಕಾಗುತ್ತದೆ.
ಆದರೆ ಸಾಮಾನುಗಳನ್ನು ಆಯ್ದುಕೊಂಡ ಮೇಲೆ ಬಿಲ್ ಮಾಡಿಸಿ ಹಣ ಪಾವತಿಸಲು ಕಾಯುವ ಬದಲು ಸಾಮಾನುಗಳನ್ನೆಲ್ಲ ತೆಗೆದುಕೊಂಡು ಸೀದಾ ಮನೆಗೆ ಬಂದುಬಿಡುವ ಹಾಗಿದ್ದರೆ?
ಇದೇನು ವಿಚಿತ್ರಾನಪ್ಪಾ ಎಂದು ನೀವು ಕೇಳುವ ಮೊದಲೇ ಹೇಳಿಬಿಡುತ್ತೇನೆ, ಕೇಳಿ: ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ಅಥವಾ ಆರ್‌ಎಫ್‌ಐಡಿ ಎಂಬ ತಂತ್ರಜ್ಞಾನದ ಸಹಾಯದಿಂದ ಈ ಕನಸನ್ನು ನನಸು ಮಾಡುವುದು ಸಾಧ್ಯ!
ಈಗ ಚಾಲ್ತಿಯಲ್ಲಿರುವ ಯೂನಿವರ್ಸಲ್ ಪ್ರಾಡಕ್ಟ್ ಕೋಡ್ (ಯುಪಿಸಿ) ’ಬಾರ್ ಕೋಡ್’ ನಿಮಗೆ ಪರಿಚಯವಿರಬೇಕು: ಈ ಬಾರ್ ಕೋಡ್‌ಗಳಲ್ಲಿ ದಪ್ಪ-ಸಣ್ಣ ಗೆರೆಗಳ ಸಂಯೋಜನೆಯಿಂದ ಯಾವುದೇ ವಸ್ತುವಿನ ಬೆಲೆಯನ್ನು ಪ್ರತಿನಿಧಿಸಲಾಗುತ್ತದೆ. ಸೂಪರ್‌ಮಾರ್ಕೆಟ್‌ಗಳಲ್ಲಿ ಬಳಕೆಯಾಗುವ ಪುಟ್ಟ ಸ್ಕ್ಯಾನರ್‌ಗಳು ಈ ಗೆರೆಗಳನ್ನು ಅರ್ಥೈಸಿಕೊಂಡು ನೀವು ಕೊಂಡ ಸಾಮಾನುಗಳ ಬಿಲ್ ತಯಾರಿಸುತ್ತವೆ.
ಇಂತಹ ಬಾರ್ ಕೋಡ್‌ಗಳ ಬದಲು ಅತ್ಯಾಧುನಿಕ ತಂತ್ರಜ್ಞಾನದ ಆರ್‌ಎಫ್‌ಐಡಿ ಟ್ಯಾಗ್‌ಗಳು ಅತಿ ಶೀಘ್ರದಲ್ಲೇ ಬಳಕೆಗೆ ಬರಲಿವೆಯಂತೆ. ಈ ಟ್ಯಾಗ್‌ಗಳ ಬಳಕೆಯಿಂದ ನಮ್ಮ ಶಾಪಿಂಗ್ ಅನುಭವ ಬಹಳ ರೋಚಕವಾಗಿ ಪರವರ್ತನೆಗೊಳ್ಳಲಿದೆ ಎನ್ನುವುದು ತಜ್ಞರ ಹೇಳಿಕೆ.
ಈ ಆರ್‌ಎಫ್‌ಐಡಿ ಟ್ಯಾಗ್‌ಗಳು ಒಂದು ನಿರ್ದಿಷ್ಟ ಪ್ರಮಾಣದ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುವ ಹಾಗೂ ಆ ಮಾಹಿತಿಯನ್ನು ರೇಡಿಯೋ ಸಂಕೇತಗಳ ಮೂಲಕ ಬಿತ್ತರಿಸುವ ಶಕ್ತಿಯನ್ನು ಹೊಂದಿರುತ್ತವೆ. ಇಂತಹ ಟ್ಯಾಗ್‌ಗಳು ಹಾಗೂ ಅವು ಬಿತ್ತರಿಸುವ ಸಂಕೇತಗಳನ್ನು ಅರ್ಥಮಾಡಿಕೊಳ್ಳಬಲ್ಲ ಗ್ರಾಹಕ(ರೀಡರ್)ಗಳ ನೆರವಿನಿಂದ ಅಪೂರ್ವವಾದ ವ್ಯವಸ್ಥೆಯೊಂದನ್ನು ರೂಪಿಸಬಹುದು.
ನಾವೆಲ್ಲರೂ ನಮ್ಮ ಮನೆಗಳಿಗೆ ಹಾಲಿನ ಪೊಟ್ಟಣಗಳನ್ನು ತರಿಸಿಕೊಳ್ಳುವುದು ಸಾಮಾನ್ಯ ತಾನೆ? ಇಂತಹ ಹಾಲಿನ ಪೊಟ್ಟಣಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ.
ಡೈರಿಯಲ್ಲಿ ಹಾಲಿನ ಪ್ಯಾಕಿಂಗ್ ನಡೆಯುವಾಗ ಆ ಪೊಟ್ಟಣಗಳಲ್ಲಿ ಒಂದೊಂದು ಆರ್‌ಎಫ್‌ಐಡಿ ಟ್ಯಾಗ್‌ಗಳನ್ನು ಅಳವಡಿಸುತ್ತಾರೆ ಎಂದಿಟ್ಟುಕೊಳ್ಳೋಣ. ಪ್ಯಾಕ್ ಮಾಡಿದ ದಿನಾಂಕ, ಹಾಲಿನ ಪ್ರಮಾಣ, ಆ ಹಾಲನ್ನು ಎಷ್ಟು ದಿನಗಳ ಒಳಗೆ ಉಪಯೋಗಿಸಬೇಕು ಎಂಬಂತಹ ಮಾಹಿತಿಯನ್ನೆಲ್ಲ ಈ ಟ್ಯಾಗ್‌ಗಳಲ್ಲಿ ಶೇಖರಿಸಲಾಗುತ್ತದೆ. ಡೈರಿಯಿಂದ ಹೊರಟ ಈ ಪೊಟ್ಟಣಗಳು ಒಂದು ಸೂಪರ್‌ಮಾರ್ಕೆಟ್‌ಗೆ ಬರುತ್ತವೆ. ಈ ಟ್ಯಾಗ್‌ಗಳಿಂದ ಪ್ರಸಾರವಾಗುವ ಮಾಹಿತಿಯನ್ನು ಅಲ್ಲಿರುವ ರೀಡರ್‌ಗಳು ತಕ್ಷಣವೇ ಗ್ರಹಿಸಿ ಈಗ ಸೂಪರ್‌ಮಾರ್ಕೆಟ್‌ನಲ್ಲಿ ಎಷ್ಟು ಹಾಲಿನ ಪೊಟ್ಟಣಗಳು ದಾಸ್ತಾನಾಗಿವೆ ಎಂಬುದನ್ನು ದಾಖಲಿಸುತ್ತವೆ.
ನಂತರ ನೀವು ಸೂಪರ್‌ಮಾರ್ಕೆಟ್‌ಗೆ ಬಂದು ಹಾಲು ಖರೀದಿಸುತ್ತೀರಿ ಎಂದುಕೊಳ್ಳೋಣ. ಇಲ್ಲಿ ’ಖರೀದಿಸುವುದು’ ಎಂದರೆ ಬಹಳ ಸುಲಭ - ಹಾಲಿನ ಪೊಟ್ಟಣ ಕೈಗೆತ್ತಿಕೊಂಡು ಸೀದಾ ಆಚೆಗೆ ಬರುವುದು ಅಷ್ಟೆ! ನೀವು ಹಾಲಿನ ಪೊಟ್ಟಣದೊಡನೆ ಅಂಗಡಿಯಿಂದ ಹೊರಟ ತಕ್ಷಣ ಕಾರ್ಯಪ್ರವೃತ್ತವಾಗುವ ರೀಡರ್‌ಗಳು ಆ ಹಾಲಿನ ಪೊಟ್ಟಣದ ಬೆಲೆಯನ್ನು ನಿಮ್ಮ ಬ್ಯಾಂಕಿನ ಖಾತೆಯಿಂದ ವರ್ಗಾಯಿಸಿಕೊಳ್ಳುತ್ತವೆ. ದಾಸ್ತಾನಿನಲ್ಲಿದ್ದ ಪೊಟ್ಟಣಗಳ ಪೈಕಿ ಒಂದು ಖರ್ಚಾಯಿತು ಎಂಬುದನ್ನೂ ದಾಖಲಿಸಿಕೊಳ್ಳುತ್ತವೆ.
ನೀವು ಮನೆಗೆ ಬಂದು ಆ ಪೊಟ್ಟಣವನ್ನು ಫ್ರಿಜ್‌ನಲ್ಲಿ ಇಟ್ಟ ತಕ್ಷಣವೇ ಅಲ್ಲಿರುವ ರೀಡರ್ ಹಾಲಿನ ಪ್ರಮಾಣ, ಅದನ್ನು ಯಾವತ್ತಿನ ಮುಂಚೆ ಉಪಯೋಗಿಸಬೇಕು ಮುಂತಾದ ವಿವರಗಳನ್ನೆಲ್ಲ ಗ್ರಹಿಸಿಕೊಳ್ಳುತ್ತದೆ. ಇಲ್ಲಿಂದ ಮುಂದಕ್ಕೆ ಹಾಲು ಹಳೆಯದಾಗಿದೆ, ಅಥವಾ ಮುಗಿದುಹೋಗಿದೆ ಮುಂತಾದ ವಿವರಗಳನ್ನೆಲ್ಲ ನಿಮ್ಮ ಫ್ರಿಜ್ ನಿಮಗೆ ಹೇಳುತ್ತದೆ!
ಮುಂಬರುವ ದಿನಗಳಲ್ಲಿ ಆರ್‌ಎಫ್‌ಐಡಿ ಟ್ಯಾಗ್‌ಗಳ ಈ ರೋಚಕ ಜಗತ್ತು ಇನ್ನೂ ಹೆಚ್ಚಿನ ಬದಲಾವಣೆಗಳನ್ನು ಕಾಣಲಿದೆ ಎಂಬುದು ವಿಜ್ಞಾನಿಗಳ ಹೇಳಿಕೆ. ಇಂಥ ಉಪಕರಣಗಳ ಬಳಕೆ ಹಾಗೂ ಉತ್ಪಾದನೆ ಇದೇ ಪ್ರಮಾಣದಲ್ಲಿ ಹೆಚ್ಚುತ್ತಾ ಹೋದಾಗ ಅವುಗಳ ಉತ್ಪಾದನಾ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ; ಆಗ ಪಕ್ಕದ ಬೀದಿಯ ತರಕಾರಿ ಅಂಗಡಿಯವನೂ ಇವನ್ನು ಉಪಯೋಗಿಸಲು ಶುರುಮಾಡುತ್ತಾನೆ!

ಕಂಪ್ಯೂಟರ್ ಫೊರೆನ್ಸಿಕ್ಸ್

ಟಿ ಜಿ ಶ್ರೀನಿಧಿ

ಫೊರೆನ್ಸಿಕ್ಸ್ ಅಥವಾ ಅಪರಾಧಪತ್ತೆ ಶಾಸ್ತ್ರ - ಅಪರಾಧಗಳು ನಡೆದ ಸಂದರ್ಭದಲ್ಲಿ ಅಲ್ಲಿ ಲಭ್ಯವಿರಬಹುದಾದ ಕುರುಹುಗಳನ್ನು ಪತ್ತೆಮಾಡಿ, ಅಧ್ಯಯನ ನಡೆಸಿ ಅಪರಾಧಿಗಳನ್ನು ಪತ್ತೆಹಚ್ಚಲು ನೆರವು ನೀಡುವ ವಿಜ್ಞಾನದ ಒಂದು ಶಾಖೆ. ಸಮಾಜದ ದುಷ್ಟಶಕ್ತಿಗಳನ್ನು ಹಿಡಿತದಲ್ಲಿಟ್ಟು ಸಾಮಾಜಿಕ ಆರೋಗ್ಯ ಕಾಪಾಡುವಲ್ಲಿ ಫೊರೆನ್ಸಿಕ್ಸ್ ವಹಿಸುವ ಪಾತ್ರ ಬಲು ಮಹತ್ವದ್ದು.
ಆದರೆ ತಂತ್ರಜ್ಞಾನ ಬೆಳೆದಂತೆ ಅಪರಾಧಗಳ ಸ್ವರೂಪವೇ ಬದಲಾಗುತ್ತಿದೆ. ಗಣಕಗಳು ಹಾಗೂ ವಿಶ್ವವ್ಯಾಪಿ ಜಾಲದ ನೆರವಿನಿಂದ ನಡೆಯುತ್ತಿರುವ ಅದೆಷ್ಟೋ ಬಗೆಯ ಹೈಟೆಕ್ ಅಪರಾಧಗಳು ನಾಗರಿಕ ಸಮಾಜದ ನೆಮ್ಮದಿಯನ್ನೇ ಹಾಳುಮಾಡಲು ಹೊರಟಿವೆ.
ಇಂಥ ಅಪರಾಧಗಳನ್ನು ಪತ್ತೆಮಾಡುವ ಉದ್ದೇಶದಿಂದ ರೂಪಗೊಂಡಿರುವ ಹೊಸ ಕ್ಷೇತ್ರವೇ ಕಂಪ್ಯೂಟರ್ ಫೊರೆನ್ಸಿಕ್ಸ್. ಡಿಜಿಟಲ್ ಫೊರೆನ್ಸಿಕ್ಸ್ ಎಂದೂ ಪರಿಚಿತವಾಗಿರುವ ಈ ಕ್ಷೇತ್ರ ಗಣಕಗಳಲ್ಲಿ ಶೇಖರವಾಗಿರುವ ಮಾಹಿತಿಯ ಅಧ್ಯಯನನಡೆಸಿ ಸೈಬರ್ ಅಪರಾಧಗಳನ್ನು ಪತ್ತೆಮಾಡುವ ಉದ್ದೇಶ ಹೊಂದಿದೆ. ಕ್ರೆಡಿಟ್ ಕಾರ್ಡ್ ವಂಚನೆ, ಹ್ಯಾಕಿಂಗ್, ಡಿನಯಲ್ ಆಫ್ ಸರ್ವಿಸ್ ಮೊದಲಾದ ಅಪರಾಧಗಳು ಅಥವಾ ಗಣಕದ ನೆರವು ಪಡೆದು ಭಯೋತ್ಪಾದನೆಯಂತಹ ಕೃತ್ಯಗಳು ನಡೆದ ಸಂದರ್ಭದಲ್ಲಿ ಕಂಪ್ಯೂಟರ್ ಫೊರೆನ್ಸಿಕ್ಸ್ ವಹಿಸುವ ಪಾತ್ರ ಬಲು ಮಹತ್ವದ್ದು.

ಪೆಟ್ರೋಲ್ ಬರೋದು ಎಲ್ಲಿಂದ?

ಟಿ ಜಿ ಶ್ರೀನಿಧಿ

ಪೆಟ್ರೋಲ್, ಡೀಸೆಲ್, ಸೀಮೆ ಎಣ್ಣೆ - ಹೀಗೆ ಅನೇಕ ಬಗೆಯ ಇಂಧನಗಳನ್ನು ನಾವು ಪ್ರತಿದಿನವೂ ಒಂದಲ್ಲ ಒಂದು ಬಗೆಯಲ್ಲಿ ಬಳಸುತ್ತಿರುತ್ತೇವೆ. ಆದರೆ ಇವೆಲ್ಲ ಎಲ್ಲಿಂದ ಹೇಗೆ ಬರುತ್ತವೆ ಎನ್ನುವುದು ನಿಮಗೆ ಗೊತ್ತೆ?
ಈ ತೈಲಗಳಿಗೆಲ್ಲ ಮೂಲ ಕಚ್ಚಾ ತೈಲ ಅಥವಾ ಕ್ರೂಡ್ ಆಯಿಲ್, ಭೂಮಿಯೊಳಗೆ ಅದೆಷ್ಟೋ ಆಳದಲ್ಲಿ ಅವಿತಿರುವ ಅತ್ಯಮೂಲ್ಯ ಸಂಪನ್ಮೂಲ.
ಈ ತೈಲವನ್ನು ಹೊರತೆಗೆಯಲೆಂದೇ ಬಹು ದೊಡ್ಡ ತೈಲಬಾವಿಗಳನ್ನು ಕೊರೆಯಲಾಗಿರುತ್ತದೆ. ಭೂಮಿಯ ಆಳದಿಂದ ಕಚ್ಚಾತೈಲವನ್ನು ಹೊರತೆಗೆದು ದೊಡ್ಡದೊಡ್ಡ ಕೊಳವೆಮಾರ್ಗಗಳಿಗೆ ಪೂರೈಸುವುದು ಈ ತೈಲಬಾವಿಗಳ ಕೆಲಸ. ಇದಕ್ಕಾಗಿ ಅತ್ಯಾಧುನಿಕ ಇಂಜಿನಿಯರಿಂಗ್ ತಂತ್ರಜ್ಞಾನ ಬಳಕೆಯಾಗುತ್ತದೆ.
ಸಮುದ್ರದ್ದೋ ಮರುಭೂಮಿಯದೋ ಮಧ್ಯದಲ್ಲಿರುವ ತೈಲಬಾವಿಗಳಿಂದ ಹೊರಬಂದ ಈ ಕಚ್ಚಾತೈಲ ತಮ್ಮ ಮುಂದಿನ ಗುರಿ ಸೇರಲು ಕೊಳವೆಮಾರ್ಗಗಳ ಮೂಲಕ ಪ್ರಯಾಣ ಸಾಗಿಸುತ್ತವೆ. ಸಾವಿರಾರು ಕಿಲೋಮೀಟರ್ ಉದ್ದದ ಈ ಕೊಳವೆಮಾರ್ಗಗಳ ಮೂಲಕ ಕಚ್ಚಾತೈಲ ಸಾಗಲು ಬೇಕಾದ ಒತ್ತಡ ಒದಗಿಸಲು ಕೊಳವೆಮಾರ್ಗದ ಉದ್ದಕ್ಕೂ ಅಲ್ಲಲ್ಲಿ ಪಂಪಿಂಗ್ ಕೇಂದ್ರಗಳಿರುತ್ತವೆ. ಹಿಂದಿನ ಕೇಂದ್ರದಿಂದ ಬಂದ ಕಚ್ಚಾತೈಲವನ್ನು ಮುಂದಿನ ಕೇಂದ್ರದವರೆಗೂ ’ನೂಕುವುದು’ ಈ ಕೇಂದ್ರಗಳ ಕೆಲಸ.
ಹೀಗೆ ಕೊಳವೆಮಾರ್ಗದ ಕೊನೆಯ ತನಕ ಪ್ರಯಾಣಿಸುವ ಕಚ್ಚಾತೈಲ ತನ್ನ ಪ್ರಯಾಣದ ಕೊನೆಯಲ್ಲಿ ದೊಡ್ಡದೊಡ್ಡ ತೊಟ್ಟಿಗಳಲ್ಲಿ ಶೇಖರವಾಗುತ್ತದೆ. ಇಲ್ಲಿಂದ ಮುಂದಕ್ಕೆ ಕಚ್ಚಾತೈಲದ ಸಂಸ್ಕರಣೆ ಪ್ರಾರಂಭವಾಗುತ್ತದೆ.
ಕಚ್ಚಾತೈಲದ ಸಂಸ್ಕರಣೆ ನಡೆಯುವುದು ರಿಫೈನರಿ ಎಂಬ ಹೆಸರಿನ ಸಂಸ್ಕರಣಾ ಕೇಂದ್ರಗಳಲ್ಲಿ. ಇಲ್ಲಿ ಕಚ್ಚಾತೈಲವನ್ನು ಹೆಚ್ಚಿನ ತಾಪಮಾನಗಳಲ್ಲಿ ಬಿಸಿಮಾಡಲಾಗುತ್ತದೆ. ಹೀಗೆ ಬಿಸಿಮಾಡಿದಾಗ ಕಚ್ಚಾತೈಲ ವಿವಿಧ ವಸ್ತುಗಳಾಗಿ ವಿಭಜನೆಹೊಂದುತ್ತದೆ. ಹೆಚ್ಚಿನ ಭಾರದಿಂದಾಗಿ ತಳದಲ್ಲಿ ಶೇಖರವಾಗುವ ವಸ್ತು ನಮ್ಮ ರಸ್ತೆಗಳ ಡಾಂಬರೀಕರಣಕ್ಕಾಗಿ ಬಳಕೆಯಾಗುತ್ತದೆ. ಕೀಲೆಣ್ಣೆ, ಮಷೀನ್ ಆಯಿಲ್, ಮೇಣ ಮುಂತಾದವುಗಳು ದೊರೆತ ನಂತರ ಪೆಟ್ರೋಲ್ ಸಿಗುತ್ತದೆ. ಅಲ್ಲಿಂದ ಮುಂದಕ್ಕೆ ಅಡುಗೆ ಅನಿಲ (ಎಲ್‍ಪಿಜಿ) ಕೂಡ ದೊರಕುತ್ತದೆ.
ಇಲ್ಲಿಂದ ಮುಂದೆ ಕೊಳವೆಮಾರ್ಗಗಳು, ರೈಲುಗಳು ಹಾಗೂ ಲಾರಿಗಳ ಮೂಲಕ ಪಯಣಿಸುವ ಪೆಟ್ರೋಲು ನಿಮ್ಮ ಊರಿನ ಪೆಟ್ರೋಲ್ ಬಂಕ್ ತಲುಪುತ್ತದೆ, ನಿಮ್ಮ ವಾಹನಕ್ಕೆ ಆಹಾರ ಒದಗಿಸುತ್ತದೆ!
_____________________
ಈ ಲೇಖನದಲ್ಲಿದ್ದ ಮಾಹಿತಿ ದೋಷವನ್ನು ಸರಿಪಡಿಸಲು ನೆರವಾದ ’ಬಾನಾಡಿ’ಗೆ ಧನ್ಯವಾದಗಳು!

ಗುರುವಾರ, ಏಪ್ರಿಲ್ 26, 2007

ಹೀಗೂ ಒಂದು ಬ್ಲಾಗು...

ಕನ್ನಡದಲ್ಲಿ ವಿಜ್ಞಾನ ವಿಷಯಗಳ ಬಗೆಗೆ ಒಂದು ಬ್ಲಾಗು ಶುರುಮಾಡಬಹುದು ಅಂತ ನನಗೆ ಮೊದಲು ಹೇಳಿದವರು ಶ್ರೀ ಕೊಳ್ಳೇಗಾಲ ಶರ್ಮ. ಅವರ ಐಡಿಯಾ ಮೆಚ್ಚಿಕೊಂಡು ಈ ಬ್ಲಾಗಿಗೆ ಇಜ್ಞಾನ ಅಂತ ನಾಮಕರಣ ಮಾಡಿದ್ದು ಗೆಳೆಯ ನಂದಕಿಶೋರ. ಅಂತೂ ಇಂತೂ ಈ ಬ್ಲಾಗು ಕಣ್ಣುಬಿಟ್ಟಿದೆ. ಬಹಳ ಬೇಗ ಬೆಳೆಯುತ್ತದೆ ಎನ್ನುವ ನಂಬಿಕೆ ನನಗಿದೆ. ಒಂಚೂರು ಕಾದುನೋಡಿ, ಪ್ಲೀಸ್!
badge