ಭಾನುವಾರ, ಜುಲೈ 29, 2007

ಯಾರು ಹಿತವರು ನಿಮಗೆ?

ಟಿ ಜಿ ಶ್ರೀನಿಧಿ

ಐದಾರು ವರ್ಷಗಳ ಹಿಂದಿನ ಮಾತು. ದೂರವಾಣಿ ಸಂಪರ್ಕ ಹೊಂದಲು ಯಾರಾದರೂ ಆಸೆಪಟ್ಟರೆ ಆಗ ಅವರಿಗಿದ್ದದ್ದು ಒಂದೇ ಒಂದು ಆಯ್ಕೆ. ದೂರವಾಣಿ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿ ವರ್ಷಾನುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬೇರೆ. ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ 'ನಾನು ಅಂದರೆ ಫೋನು - ಫೋನು ಅಂದರೆ ನಾನು' ಎಂದು ಮೆರೆಯುತ್ತಿದ್ದ ಕಾಲ ಅದು.
ಆದರೆ ಈಗ, ದೂರಸಂಪರ್ಕ ಕ್ಷೇತ್ರದ ತುಂಬಾ ಸ್ಪರ್ಧೆಯೇ ತುಂಬಿಕೊಂಡಿದೆ. ಸಾರ್ವಜನಿಕ ಕ್ಷೇತ್ರದ ಬಿಎಸ್‌ಎನ್‌ಎಲ್ ಜೊತೆಗೆ ಇನ್ನೂ ಹಲವಾರು ಖಾಸಗೀ ಸಂಸ್ಥೆಗಳು ಮೊಬೈಲ್, ಸ್ಥಿರ ದೂರವಾಣಿ ಹಾಗೂ ಅಂತರ್ಜಾಲ ಸಂಪರ್ಕ ಸೇವೆಗಳನ್ನು ನೀಡುತ್ತಿವೆ. ಈ ಸಂಸ್ಥೆಗಳು ಒದಗಿಸುವ ನೂರೆಂಟು ಬಗೆಯ ಸೇವೆಗಳು ಗ್ರಾಹಕರಿಗೆ ಅಪಾರ ಪ್ರಮಾಣದ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಿವೆ.
ಆದರೆ ಹೊಸ ದೂರವಾಣಿ ಸಂಪರ್ಕಕ್ಕಾಗಿ ಹುಡುಕಾಟ ನಡೆಸುವಾಗ ನಮಗೆ ಒಂದು ಸಂಸ್ಥೆಯ ಸ್ಥಳೀಯ ದರಗಳು ಇಷ್ಟವಾದರೆ ಮೊಬೈಲ್ ಕರೆಗಳಿಗಾಗಿ ಮತ್ತೊಂದು ಸಂಸ್ಥೆಯ ದರಗಳು ಪ್ರಿಯವಾಗುತ್ತವೆ. ಎಸ್‌ಟಿಡಿ ಹಾಗೂ ಐಎಸ್‌ಡಿ ಕರೆಗಳಿಗಾಗಿ ಮೂರನೆಯ ಸಂಸ್ಥೆಯೊಂದು ಪ್ರಕಟಿಸಿರುವ ದರಪಟ್ಟಿ ಬಹಳ ಆಕರ್ಷಕವಾಗಿದೆ ಎಂದೂ ಅನ್ನಿಸಲು ಪ್ರಾರಂಭವಾಗುತ್ತದೆ.
ಸಮಸ್ಯೆಯಿರುವುದೇ ಇಲ್ಲಿ. ಯಾವುದೇ ಒಂದು ಸಂಸ್ಥೆಯ ದೂರವಾಣಿ ಸಂಪರ್ಕವನ್ನು ಆಯ್ದುಕೊಂಡಮೇಲೆ ನಿಮಗೆ ಇಷ್ಟವಿದೆಯೋ ಇಲ್ಲವೋ ಅದು ಒದಗಿಸುವ ಸೇವೆಗಳನ್ನು ಬಳಸುವುದು ಅನಿವಾರ್ಯವಾಗುತ್ತದೆ. ಬೇರಾವುದೋ ಸಂಸ್ಥೆ ಇದಕ್ಕಿಂತ ಹೆಚ್ಚು ಸ್ಪರ್ಧಾತ್ಮಕ ದರಗಳಲ್ಲಿ ತನ್ನ ಸೇವೆ ಒದಗಿಸಲು ಪ್ರಾರಂಭಿಸಿದರೆ ಅದನ್ನು ನೋಡಿ ಹೊಟ್ಟೆಯುರಿ ಅನುಭವಿಸುವುದು ಮಾತ್ರ ನಮ್ಮ ಕೈಲಾಗುವ ಕೆಲಸ!
ಆದರೆ ಇನ್ನುಮುಂದೆ ಹೀಗಾಗಬೇಕಿಲ್ಲ ಎನ್ನುತ್ತಿವೆ ದೂರಸಂಪರ್ಕ ವಲಯದಲ್ಲಿ ಕೇಳಿಬರುತ್ತಿರುವ ಸುದ್ದಿಗಳು. ನಾವು ಯಾವುದೇ ಸಂಸ್ಥೆಯ ದೂರವಾಣಿ ಸಂಪರ್ಕ ಹೊಂದಿದ್ದರೂ ಪರವಾಗಿಲ್ಲ, ಅದೇ ದೂರವಾಣಿಯ ಮುಖಾಂತರ ಬೇರೆಬೇರೆ ಸಂಸ್ಥೆಗಳು ಒದಗಿಸುವ ಸೇವೆಗಳನ್ನೂ ಬಳಸಿಕೊಳ್ಳುವುದು ಸಾಧ್ಯ ಎನ್ನುತ್ತಿವೆ ಈ ಸುದ್ದಿಗಳು.
"ಸ್ಥಳೀಯ ಕರೆಗಳಿಗೆ ಈ ಸಂಸ್ಥೆ ಸಾಕು, ಆದರೆ ಎಸ್‌ಟಿಡಿ-ಐಎಸ್‌ಡಿಗೆ ಬೇರೆ ಸಂಸ್ಥೆಯೇ ಬೇಕು" ಎನ್ನುವಂತಹ ಸ್ವಾತಂತ್ರ್ಯವನ್ನು ಗ್ರಾಹಕರಿಗೆ ಒದಗಿಸಲಿರುವ ಈ ಸೌಲಭ್ಯದ ಹೆಸರೇ ಕ್ಯಾರಿಯರ್ ಪ್ರೀ-ಸೆಲೆಕ್ಷನ್ ಅಥವಾ ಸಿಪಿಎಸ್.
ಈ ಸೌಲಭ್ಯ ಬಳಸುವ ಯಾವುದೇ ಸಂಸ್ಥೆಯ ದೂರವಾಣಿ ಗ್ರಾಹಕರು ತಮಗೆ ಬೇರೆಬೇರೆ ಸೇವೆಗಳನ್ನು ಒದಗಿಸಲು ಬೇರೆಬೇರೆ ಸಂಸ್ಥೆಗಳನ್ನು ಆಯ್ದುಕೊಳ್ಳಬಹುದು. ಉದಾಹರಣೆಗೆ ನೀವು 'ಅ' ಎಂಬ ಸಂಸ್ಥೆಯ ಸ್ಥಿರದೂರವಾಣಿ ಸಂಪರ್ಕವನ್ನು ಬಳಸುತ್ತಿದ್ದೀರಿ ಎಂದುಕೊಳ್ಳೋಣ. ಈ ಸಂಸ್ಥೆ ಪ್ರತಿಯೊಂದು ಸ್ಥಳೀಯ ಕರೆಗಾಗಿ ಒಂದು ರೂಪಾಯಿಯ ದರವನ್ನು ಹಾಗೂ ಎಸ್‌ಟಿಡಿ ಕರೆಗಳಿಗಾಗಿ ಪ್ರತಿ ನಿಮಿಷಕ್ಕೆ ಎರಡು ರೂಪಾಯಿಗಳನ್ನು ನಿಗದಿಪಡಿಸಿದೆ. ಆದರೆ ಕೆಲದಿನಗಳ ನಂತರ ಸ್ಥಳೀಯ ಕರೆ ಹಾಗೂ ಎಸ್‌ಟಿಡಿ ಕರೆ ಎರಡಕ್ಕೂ ಒಂದೂವರೆ ರೂಪಾಯಿ ಮಾತ್ರ ಎಂದು 'ಬ' ಸಂಸ್ಥೆ ಪ್ರಕಟಿಸುತ್ತದೆ. ಈಗ ನೀವೇನು ಮಾಡಬಹುದು? ಕ್ಯಾರಿಯರ್ ಪ್ರೀ-ಸೆಲೆಕ್ಷನ್‌ನ ನೆರವಿನಿಂದ ನಿಮ್ಮ ಸ್ಥಳೀಯ ಕರೆಗಳಿಗಾಗಿ 'ಅ' ಸಂಸ್ಥೆಯ ಸೇವೆಯನ್ನೇ ಮುಂದುವರೆಸಿ ಎಸ್‌ಟಿಡಿಗಾಗಿ ಮಾತ್ರ 'ಬ' ಸಂಸ್ಥೆಯನ್ನು ಬಳಸಿಕೊಳ್ಳಬಹುದು. ತಿಂಗಳ ಕೊನೆಗೆ ನಿಮ್ಮ ದೂರವಾಣಿಯ ಬಾಡಿಗೆ ಹಾಗೂ ಸ್ಥಳೀಯ ಕರೆಗಳ ವೆಚ್ಚವನ್ನು 'ಅ' ಸಂಸ್ಥೆಗೆ ನೀಡಿ ನೀವು ಮಾಡಿದ ಎಸ್‌ಟಿಡಿ ಕರೆಗಳ ವೆಚ್ಚವನ್ನು ಮಾತ್ರ 'ಬ' ಸಂಸ್ಥೆಗೆ ನೀಡಿದರೆ ಆಯಿತು!
ಈ ಸೌಲಭ್ಯ ಈಗಾಗಲೇ ಯೂರೋಪ್ ಹಾಗೂ ಆಸ್ಟ್ರೇಲಿಯಾಗಳಲ್ಲಿ ಬಳಕೆಗೆ ಬರುತ್ತಿದೆ. ಅಮೆರಿಕಾದಲ್ಲಿ ಇದೇ ಸೌಲಭ್ಯವನ್ನು 'ಡಯಲಿಂಗ್ ಪ್ಯಾರಿಟಿ' ಎಂಬ ಹೆಸರಿನಿಂದ ಕರೆದರೆ ಜಪಾನ್ ಹಾಗೂ ಕೊರಿಯಾಗಳಲ್ಲಿ 'ಪ್ರಯಾರಿಟಿ ಆಕ್ಸೆಸ್' ಎಂದು ಗುರುತಿಸುತ್ತಾರೆ.
ಹ್ಞಾಂ, ನಮ್ಮ ದೇಶದಲ್ಲೂ ಈ ಸೇವೆಯನ್ನು ಆದಷ್ಟು ಬೇಗ ಜಾರಿಗೆ ತರುವ ನಿಟ್ಟಿನಲ್ಲಿ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಪ್ರಯತ್ನಗಳನ್ನು ನಡೆಸಿದೆ. ಭಾರತದಲ್ಲಿ ದೂರಸಂಪರ್ಕ ಸೇವೆ ಒದಗಿಸುತ್ತಿರುವ ಕೆಲವು ಪ್ರಮುಖ ಸಂಸ್ಥೆಗಳು ಈ ಸೌಲಭ್ಯವನ್ನು ಅಳವಡಿಸಲು ತಮ್ಮ ಕಾರ್ಯಾಚರಣ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಬೇಕಿದ್ದು ಈ ಬದಲಾವಣೆಗಳು ಕಾರ್ಯಗತವಾದ ಕೂಡಲೆ ಭಾರತದಲ್ಲಿ ಕ್ಯಾರಿಯರ್ ಪ್ರೀ-ಸೆಲೆಕ್ಷನ್ ಲಭ್ಯವಾಗುವ ನಿರೀಕ್ಷೆಯಿದೆ.

1 ಕಾಮೆಂಟ್‌:

ಯಜಮಾನ ಹೇಳಿದರು...

bahaLa oLLeya suddi idu. aadarE carrier free service - CPS aagOdu hEge? CFS aagbEkalva? naanu London nalli iddaage idara bagge kELale illa. aadarE neevu Europe'nalli e seve labhya andri. elli anta svalpa vivara..

badge