ಬುಧವಾರ, ಫೆಬ್ರವರಿ 28, 2018

ರಾಷ್ಟ್ರೀಯ ವಿಜ್ಞಾನ ದಿನ ವಿಶೇಷ: ವಿಜ್ಞಾನದ ಹಾದಿಯಲ್ಲಿ ಭಾರತದ ಹೆಜ್ಜೆಗುರುತುಗಳು

ಉದಯ ಶಂಕರ ಪುರಾಣಿಕ
ಟಿ. ಜಿ. ಶ್ರೀನಿಧಿ

ವಿಜ್ಞಾನ - ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆಗಳೇನು ಎನ್ನುವುದು ಪದೇಪದೇ ಕೇಳಸಿಗುವ ಪ್ರಶ್ನೆ. ಈ ಪ್ರಶ್ನೆಗೆ ದೊರಕುವ ಉತ್ತರ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. "ಪಾಶ್ಚಿಮಾತ್ಯ ದೇಶಗಳ ಸಾಧನೆಗಳೆಲ್ಲ ಸಾಧ್ಯವಾಗಿರುವುದು ಭಾರತದಿಂದಾಗಿಯೇ" ಎನ್ನುವಂತಹ ವಾದಗಳಿಂದ ಪ್ರಾರಂಭಿಸಿ "ವಿಜ್ಞಾನ-ತಂತ್ರಜ್ಞಾನದ ಸಾಧನೆಗಳಷ್ಟೂ ಹೊರದೇಶಗಳಲ್ಲೇ ಆಗಿರುವುದು" ಎನ್ನುವುದರವರೆಗೆ ಈ ಉತ್ತರ ಹಲವು ಬಗೆಯದಾಗಿರುವುದು ಸಾಧ್ಯ.

ಈ ಕ್ಷೇತ್ರದಲ್ಲಿ ಭಾರತದ - ಭಾರತೀಯರ ಸಾಧನೆಗಳಿಗೆ ಉದಾಹರಣೆ ಕೊಡಿ ಎಂದು ಕೇಳಿದರೆ ಉದಾಹರಣೆಗಳ ಪಟ್ಟಿ ಚರಕ - ಸುಶ್ರುತ, ಆರ್ಯಭಟ - ಭಾಸ್ಕರರಿಂದ ಪ್ರಾರಂಭವಾಗಿ ಜಗದೀಶಚಂದ್ರ ಬೋಸ್ - ಸಿ ವಿ ರಾಮನ್‌ರ ಹೆಸರುಗಳೊಡನೆ ನಿಂತುಹೋಗುವುದೂ ಉಂಟು.

ಹೀಗೆಲ್ಲ ಇದೆ ಎಂದಮಾತ್ರಕ್ಕೆ ವಿಜ್ಞಾನ - ತಂತ್ರಜ್ಞಾನಗಳಲ್ಲಿ ಭಾರತದ ಸಾಧನೆ ಕಡಿಮೆಯೆಂದಾಗಲೀ ಕಳಪೆಯೆಂದಾಗಲೀ ಖಂಡಿತಾ ಅರ್ಥವಲ್ಲ. ಯಾರು ಏನೆನ್ನುತ್ತಾರೆ ಎನ್ನುವ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ನಮ್ಮ ದೇಶ ಈ ಕ್ಷೇತ್ರಗಳಲ್ಲಿ ಕೆಲಸಮಾಡುತ್ತಲೇ ಇದೆ. ಈ ಕೆಲಸದ ಪರಿಣಾಮವಾಗಿಯೇ ಅನೇಕ ಸಾಧನೆಗಳನ್ನು ಮಾಡಿದೆ, ತಲೆಕೆಡಿಸಿಕೊಳ್ಳದ ಕಾರಣದಿಂದ ಇನ್ನಷ್ಟು ಸಾಧನೆಗಳನ್ನು ಮಾಡದೆಯೂ ಉಳಿದಿದೆ.

ಗುರುವಾರ, ಫೆಬ್ರವರಿ 22, 2018

ನಮ್ಮ ಭಾಷೆ ಮತ್ತು ತಂತ್ರಜ್ಞಾನ

ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ, ಅದರಲ್ಲೂ ಮಾಹಿತಿ ತಂತ್ರಜ್ಞಾನ ಎಂದಕೂಡಲೇ ಕೇಳಸಿಗುವ ಆರೋಪ: ಅದರಿಂದ ನಮ್ಮ ಭಾಷೆಗೆ ತೊಂದರೆಯಾಗಿದೆ ಅಥವಾ ಆಗುತ್ತಿದೆ ಎನ್ನುವುದು. ಇದು ಕೊಂಚಮಟ್ಟಿಗೆ ನಿಜವೂ ಹೌದು. ಪ್ರಪಂಚದಲ್ಲಿರುವ ಸಾವಿರಾರು ಭಾಷೆಗಳ ಪೈಕಿ ಶೇ. ೯೬ರಷ್ಟನ್ನು ಬಳಸುವವರು ನಮ್ಮ ಜನಸಂಖ್ಯೆಯ ಶೇ. ೪ರಷ್ಟು ಮಂದಿ ಮಾತ್ರ ಎಂದು ವಿಶ್ವಸಂಸ್ಥೆಯ ಜಾಲತಾಣವೇ ಹೇಳುತ್ತದೆ. ಇಂತಹ ಭಾಷೆಗಳಿಗೆ ಶಿಕ್ಷಣ ವ್ಯವಸ್ಥೆಯಲ್ಲೂ ಮಾಹಿತಿ ತಂತ್ರಜ್ಞಾನದ ಜಗತ್ತಿನಲ್ಲೂ ಪ್ರಾಮುಖ್ಯ ದೊರಕದಿದ್ದರೆ ಅವುಗಳ ಬಳಕೆ ಇನ್ನಷ್ಟು ಕಡಿಮೆಯಾಗುವುದು, ಬೆಳವಣಿಗೆ ಕುಂಠಿತವಾಗುವುದು ಸಹಜವೇ.

ಹೌದು, ಇಂದಿನ ಬದುಕಿನಲ್ಲಿ ಮಾಹಿತಿ ತಂತ್ರಜ್ಞಾನದ ಪಾತ್ರ ಮಹತ್ವದ್ದು. ಬೆಳಗಿನಿಂದ ರಾತ್ರಿಯವರೆಗೆ ಒಂದಲ್ಲ ಒಂದು ರೂಪದಲ್ಲಿ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ನಾವೆಲ್ಲ ಬಳಸುತ್ತಲೇ ಇರುತ್ತೇವೆ. ಈ ವ್ಯವಹಾರವನ್ನೆಲ್ಲ ನಮ್ಮ ಭಾಷೆಯಲ್ಲೇ ನಡೆಸುವಂತಾದರೆ ಭಾಷೆ-ತಂತ್ರಜ್ಞಾನಗಳೆರಡರ ವ್ಯಾಪ್ತಿಯೂ ಹೆಚ್ಚುತ್ತದೆ, ಎರಡೂ ಪರಸ್ಪರ ಪೂರಕವಾಗಿ ಬೆಳೆಯುತ್ತವೆ.

ಮಂಗಳವಾರ, ಫೆಬ್ರವರಿ 20, 2018

ಮೊಬೈಲ್ ಲೋಕದ ರೆಟ್ರೋ ಸವಾರಿ

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನ್ ಎಂದ ತಕ್ಷಣ ನಮ್ಮ ಗಮನ ಹೋಗುವುದು ಸ್ಮಾರ್ಟ್‌ಫೋನುಗಳ ಕಡೆಗೆ. "ಈಗೇನು ಎಲ್ಲ ಫೋನುಗಳೂ ಸ್ಮಾರ್ಟ್ ತಾನೇ?" ಎಂದು ಕೇಳುವವರೂ ಬೇಕಾದಷ್ಟು ಜನ ಇದ್ದಾರೆ.

ಪ್ರತಿವಾರವೂ ಮಾರುಕಟ್ಟೆಗೆ ಬರುವ ಹೊಸ ಸ್ಮಾರ್ಟ್‌ಫೋನುಗಳನ್ನೂ ಅವುಗಳಲ್ಲಿರುವ ನೂರೆಂಟು ವೈಶಿಷ್ಟ್ಯಗಳನ್ನೂ ನೋಡಿದವರಲ್ಲಿ ಫೋನ್ ಅಂದರೆ ಸ್ಮಾರ್ಟ್‌ಫೋನೇ ಎನ್ನುವ ಅಭಿಪ್ರಾಯ ಮೂಡುವುದು ಸಹಜವೇ. ಆದರೆ ಅಂಕಿ ಅಂಶಗಳ ಪ್ರಕಾರ ಭಾರತದ ಮೊಬೈಲ್ ಬಳಕೆದಾರರ ಪೈಕಿ ಅರ್ಧಕ್ಕಿಂತ ಹೆಚ್ಚುಮಂದಿ ಇಂದಿಗೂ ಸ್ಮಾರ್ಟ್ ಫೋನ್ ಬಳಕೆದಾರರಲ್ಲ!

ಇಷ್ಟೆಲ್ಲ ದೊಡ್ಡ ಸಂಖ್ಯೆಯ ಗ್ರಾಹಕರು ಬಳಸುವುದು, ಸ್ಮಾರ್ಟ್‌ಫೋನ್ ಬಳಕೆದಾರರ ಪಾಲಿಗೆ ಔಟ್‌ಡೇಟೆಡ್ ಎನ್ನಿಸುವ ಹಳೆಯಕಾಲದ ಫೋನುಗಳನ್ನು.

ಗುರುವಾರ, ಫೆಬ್ರವರಿ 15, 2018

ವಿಮಾನದಲ್ಲಿ ವೈ-ಫೈ

ಟಿ. ಜಿ. ಶ್ರೀನಿಧಿ

ಪ್ರವಾಸಕ್ಕೆಂದೋ ಕಚೇರಿ ಕೆಲಸಕ್ಕೆಂದೋ ವಿಮಾನಯಾನ ಕೈಗೊಳ್ಳುವವರ ಸಂಖ್ಯೆ ಈಚಿನ ಕೆಲವರ್ಷಗಳಲ್ಲಿ ಗಮನಾರ್ಹವಾಗಿ ಹೆಚ್ಚಿದೆ. ಅಂತಾರಾಷ್ಟ್ರೀಯ ವೈಮಾನಿಕ ಸಾರಿಗೆ ಒಕ್ಕೂಟ (ಐಎಟಿಎ), ಸಿಎಪಿಎ - ಸೆಂಟರ್ ಫಾರ್ ಏವಿಯೇಶನ್ ಮುಂತಾದ ಸಂಸ್ಥೆಗಳು ಪ್ರಕಟಿಸಿರುವ ಅಂಕಿ ಅಂಶಗಳಷ್ಟೇ ಅಲ್ಲ; ಭಾರತದ ನಗರಗಳನ್ನು ಪರಸ್ಪರ ಸಂಪರ್ಕಿಸುತ್ತಿರುವ ವಿಮಾನಗಳ ಸಂಖ್ಯೆ, ವಿಮಾನ ನಿಲ್ದಾಣಗಳಲ್ಲಿ ಕಾಣಸಿಗುವ ಪ್ರಯಾಣಿಕರ ದಟ್ಟಣೆ, ಕಡೆಗೆ ನಮ್ಮ ಫೇಸ್‌ಬುಕ್ ಪುಟದಲ್ಲಿ ಕಾಣಸಿಗುವ ಏರ್‌ಪೋರ್ಟ್ ಚೆಕ್-ಇನ್‌ಗಳ ಪ್ರಮಾಣ ಕೂಡ ಈ ಹೇಳಿಕೆಗೆ ಪುಷ್ಟಿಕೊಡುತ್ತಿವೆ!

ಬೆಂಗಳೂರು ವಿಮಾನ ನಿಲ್ದಾಣದಲ್ಲಿದ್ದೇನೆ ಎಂದು ಫೇಸ್ ಬುಕ್ ನಲ್ಲಿ ಹಾಕಿರುತ್ತಾರಲ್ಲ, ಅವರು ಮತ್ತೆ ಪೋಸ್ಟ್ ಮಾಡುವುದು ಮುಂದಿನ ವಿಮಾನ ನಿಲ್ದಾಣ ತಲುಪಿದ ಮೇಲೆಯೇ. ಇದೇಕೆ ಹೀಗೆ? ಏರ್‌ಪೋರ್ಟಿನಲ್ಲಿ ಸೆಲ್ಫಿ ತೆಗೆದು ಪೋಸ್ಟ್ ಮಾಡಿದವರು ವಿಮಾನದಲ್ಲಿ ತಿಂದ ತಿಂಡಿಯ ಫೋಟೋ ಏಕೆ ಹಾಕುವುದಿಲ್ಲ?

ಶನಿವಾರ, ಫೆಬ್ರವರಿ 10, 2018

ವಾರಾಂತ್ಯ ವಿಶೇಷ: ಸ್ಮಾರ್ಟ್ ಸಹಾಯಕರ ಸುತ್ತಮುತ್ತ

ಟಿ. ಜಿ. ಶ್ರೀನಿಧಿ

ಒಬ್ಬರು ಹೇಳಿದ ಕೆಲಸವನ್ನು ಇನ್ನೊಬ್ಬರು ಮಾಡುವುದಿಲ್ಲ ಎನ್ನುವುದು ಬಹುತೇಕ ಮನೆಗಳಲ್ಲಿ ವಾಗ್ವಾದಕ್ಕೆ, ಜಗಳಕ್ಕೆ ಕಾರಣವಾಗುವ ವಿಷಯ. ಕುಡಿಯಲು ನೀರು ಬೇಕು, ಬುಟ್ಟಿಯಲ್ಲಿ ಹಾಲಿನ ಕೂಪನ್ ಇಡಬೇಕು, ದಿನಸಿ ತರಿಸಬೇಕು, ಬೆಳಿಗ್ಗೆ ಏಳಲು ಅಲಾರಂ ಇಡಬೇಕು... ಹೀಗೆ ಇಂತಹ ಕೆಲಸಗಳಲ್ಲಿ ಹಲವಾರು ವಿಧಗಳಿರುವುದು ಸಾಧ್ಯ. ಈ ಪೈಕಿ ಕೆಲವು ಕೆಲಸಗಳಿಗೆ ಓಡಾಟ ಬೇಕು, ಇನ್ನು ಕೆಲವನ್ನು ಕಂಪ್ಯೂಟರಿನಲ್ಲೋ ಮೊಬೈಲಿನಲ್ಲೋ ಮಾಡಿಕೊಳ್ಳಬಹುದು.

ಓಡಾಡಿ ಮಾಡಬೇಕಿರುವ ಕೆಲಸಗಳು ಹಾಗಿರಲಿ, ಮೊಬೈಲಿನಲ್ಲೋ ಕಂಪ್ಯೂಟರಿನಲ್ಲೋ ಮಾಡಬೇಕಾದ ಕೆಲಸಗಳನ್ನಾದರೂ ಯಾರಾದರೂ ಮಾಡಿಕೊಡುವಂತಿದ್ದರೆ? ಜೀವನ ಸ್ವಲ್ಪವಾದರೂ ಸರಳವಾಗುತ್ತದೆ - ಮನೆಯ ಜಗಳ ಕೊಂಚಮಟ್ಟಿಗೆ ಕಡಿಮೆಯಾಗುತ್ತದೆ ಅಲ್ಲವೇ? 'ಸ್ಮಾರ್ಟ್ ಸಹಾಯಕ'ರ ಸೃಷ್ಟಿಯ ಹಿಂದಿರುವುದು ಇದೇ ಆಲೋಚನೆ.

ಇಷ್ಟಕ್ಕೂ ಸ್ಮಾರ್ಟ್ ಸಹಾಯಕರೆಂದರೆ ಯಾರು? ಬುದ್ಧಿವಂತ ಮನೆಕೆಲಸದವರೇ?

ಶುಕ್ರವಾರ, ಫೆಬ್ರವರಿ 2, 2018

ತಂತ್ರಾಂಶ ರಚನೆಗೆ ಇಂಗ್ಲಿಷ್ ಭಾಷೆಯೇ ಬೇಕೇ?

ಟಿ. ಜಿ. ಶ್ರೀನಿಧಿ

ಗೃಹೋಪಯೋಗಿ ಸಾಮಗ್ರಿಗಳಿಂದ ಪ್ರಾರಂಭಿಸಿ ಅಂತರ್-ಗ್ರಹ ವಾಹನಗಳವರೆಗೆ ಎಲ್ಲೆಡೆಯೂ ತಂತ್ರಾಂಶಗಳ  ಕೈವಾಡವನ್ನು ನಾವು ಕಾಣಬಹುದು. ಇಂತಹ ಪ್ರತಿಯೊಂದು ಉದಾಹರಣೆಯಲ್ಲೂ ಆಯಾ ಯಂತ್ರಕ್ಕೆ ಹೀಗೆ ಮಾಡೆಂದು ನಿರ್ದೇಶಿಸುವುದು ತಂತ್ರಾಂಶಗಳೇ.

ಯಾವುದೇ ತಂತ್ರಾಂಶವನ್ನು (ಸಾಫ್ಟ್‌ವೇರ್) ತೆಗೆದುಕೊಂಡರೂ ಅದರಲ್ಲಿ ಒಂದು ಅಥವಾ ಹೆಚ್ಚಿನ ಸಂಖ್ಯೆಯ  ಕ್ರಮವಿಧಿಗಳು (ಪ್ರೋಗ್ರಾಮ್) ಇರುತ್ತವೆ. ಎರಡು ಅಂಕಿಗಳನ್ನು ಕೂಡಿಸುವ ಸರಳ ಕೆಲಸವಿರಲಿ, ಯಾರಿಗೂ ಡಿಕ್ಕಿಹೊಡೆಯದಂತೆ ವಾಹನವನ್ನು ಮುನ್ನಡೆಸುವ ಕ್ಲಿಷ್ಟ ಸವಾಲೇ ಇರಲಿ - ಇಂತಿಂತಹ ಕೆಲಸಗಳನ್ನು ಇಂಥದ್ದೇ ರೀತಿಯಲ್ಲಿ ಮಾಡು ಎಂದು ಹೇಳುವುದು ಈ ಕ್ರಮವಿಧಿಗಳ ಕೆಲಸ.

ಹೀಗೆ ಯಾವಾಗ ಏನನ್ನು ಯಾವ ಕ್ರಮದಲ್ಲಿ ಮಾಡಬೇಕೆಂದು ಕಂಪ್ಯೂಟರಿನಲ್ಲಿ ಬರೆದಿಡುವ ಕೆಲಸವಿದೆಯಲ್ಲ, ಅದಕ್ಕೆ ಪ್ರೋಗ್ರಾಮಿಂಗ್ ಎಂದು ಹೆಸರು. ಈ ಕೆಲಸ ಮಾಡುವವರು ಪ್ರೋಗ್ರಾಮರ್‌ಗಳು.
badge