ಗುರುವಾರ, ಫೆಬ್ರವರಿ 22, 2018

ನಮ್ಮ ಭಾಷೆ ಮತ್ತು ತಂತ್ರಜ್ಞಾನ

ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ, ಅದರಲ್ಲೂ ಮಾಹಿತಿ ತಂತ್ರಜ್ಞಾನ ಎಂದಕೂಡಲೇ ಕೇಳಸಿಗುವ ಆರೋಪ: ಅದರಿಂದ ನಮ್ಮ ಭಾಷೆಗೆ ತೊಂದರೆಯಾಗಿದೆ ಅಥವಾ ಆಗುತ್ತಿದೆ ಎನ್ನುವುದು. ಇದು ಕೊಂಚಮಟ್ಟಿಗೆ ನಿಜವೂ ಹೌದು. ಪ್ರಪಂಚದಲ್ಲಿರುವ ಸಾವಿರಾರು ಭಾಷೆಗಳ ಪೈಕಿ ಶೇ. ೯೬ರಷ್ಟನ್ನು ಬಳಸುವವರು ನಮ್ಮ ಜನಸಂಖ್ಯೆಯ ಶೇ. ೪ರಷ್ಟು ಮಂದಿ ಮಾತ್ರ ಎಂದು ವಿಶ್ವಸಂಸ್ಥೆಯ ಜಾಲತಾಣವೇ ಹೇಳುತ್ತದೆ. ಇಂತಹ ಭಾಷೆಗಳಿಗೆ ಶಿಕ್ಷಣ ವ್ಯವಸ್ಥೆಯಲ್ಲೂ ಮಾಹಿತಿ ತಂತ್ರಜ್ಞಾನದ ಜಗತ್ತಿನಲ್ಲೂ ಪ್ರಾಮುಖ್ಯ ದೊರಕದಿದ್ದರೆ ಅವುಗಳ ಬಳಕೆ ಇನ್ನಷ್ಟು ಕಡಿಮೆಯಾಗುವುದು, ಬೆಳವಣಿಗೆ ಕುಂಠಿತವಾಗುವುದು ಸಹಜವೇ.

ಹೌದು, ಇಂದಿನ ಬದುಕಿನಲ್ಲಿ ಮಾಹಿತಿ ತಂತ್ರಜ್ಞಾನದ ಪಾತ್ರ ಮಹತ್ವದ್ದು. ಬೆಳಗಿನಿಂದ ರಾತ್ರಿಯವರೆಗೆ ಒಂದಲ್ಲ ಒಂದು ರೂಪದಲ್ಲಿ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ನಾವೆಲ್ಲ ಬಳಸುತ್ತಲೇ ಇರುತ್ತೇವೆ. ಈ ವ್ಯವಹಾರವನ್ನೆಲ್ಲ ನಮ್ಮ ಭಾಷೆಯಲ್ಲೇ ನಡೆಸುವಂತಾದರೆ ಭಾಷೆ-ತಂತ್ರಜ್ಞಾನಗಳೆರಡರ ವ್ಯಾಪ್ತಿಯೂ ಹೆಚ್ಚುತ್ತದೆ, ಎರಡೂ ಪರಸ್ಪರ ಪೂರಕವಾಗಿ ಬೆಳೆಯುತ್ತವೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಾರಂಭಿಕ ವರ್ಷಗಳಲ್ಲಿ ಅಲ್ಲಿನ ಬಹುಪಾಲು ವ್ಯವಹಾರ ಇಂಗ್ಲಿಷಿನಲ್ಲೇ ನಡೆಯುತ್ತಿತ್ತು. ಆನಂತರ ಈ ಕ್ಷೇತ್ರದ ಪ್ರಯೋಜನ ಇನ್ನಷ್ಟು ಜನರಿಗೆ ತಲುಪಿತಾದರೂ ಅವರು ಈ ಪ್ರಯೋಜನವನ್ನು ಇಂಗ್ಲಿಷ್ ಭಾಷೆಯ ಮೂಲಕ ಪಡೆದುಕೊಳ್ಳಬೇಕಾದ ಪರಿಸ್ಥಿತಿಯೂ ಇತ್ತು.

ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ೨೦೨೦ರ ವೇಳೆಗೆ ಅಂತರಜಾಲದ ಸಂಪರ್ಕಕ್ಕೆ ಬರುವ ಹೊಸ ಬಳಕೆದಾರರ ಪೈಕಿ ಶೇ. ೭೫ರಷ್ಟು ಮಂದಿ ಗ್ರಾಮೀಣ ಪ್ರದೇಶಗಳವರು ಎಂದು ನ್ಯಾಸ್‌ಕಾಮ್ ಸಂಸ್ಥೆಯ ಅಂದಾಜು ಹೇಳುತ್ತದೆ. ಇಂತಹ ಅದೆಷ್ಟೋ ಬಳಕೆದಾರರು ಅಂತರಜಾಲ ಬಳಕೆಯ ಪ್ರಾಥಮಿಕ ಸಾಧನವಾಗಿ ತಮ್ಮ ಮೊಬೈಲ್ ಫೋನುಗಳನ್ನು ಬಳಸುತ್ತಾರೆ ಹಾಗೂ ಅಂತರಜಾಲದ ಸವಲತ್ತುಗಳನ್ನು ತಮ್ಮ ಪರಿಸರದ ಭಾಷೆಯಲ್ಲೇ ಬಳಸಲು ಇಷ್ಟಪಡುತ್ತಾರೆ. ಕೀಲಿಮಣೆ ಇಂಗ್ಲಿಷಿನಲ್ಲಿದೆಯೆಂದೋ ಕನ್ನಡದ ತಂತ್ರಾಂಶ ದೊರಕಲಿಲ್ಲವೆಂದೋ ಇಂಗ್ಲಿಷ್ ಮೂಲಕವೇ ಕಂಪ್ಯೂಟರ್ ಬಳಕೆ ಕಲಿತವರ ಅನೇಕ ಸಮಸ್ಯೆಗಳು ಈ ಹೊಸ ಬಳಕೆದಾರರನ್ನು ಬಹುಶಃ ಅಷ್ಟಾಗಿ ಬಾಧಿಸಲಾರವು.

ತಂತ್ರಜ್ಞಾನದ ಸವಲತ್ತುಗಳನ್ನು ನಮ್ಮ ಭಾಷೆಯಲ್ಲೇ ಬಳಸುವುದರ ಹಿಂದೆ ಭಾಷಾಭಿಮಾನವಷ್ಟೇ ಇರಬೇಕು ಎಂದೇನೂ ಇಲ್ಲ. ಇಂಗ್ಲಿಷಿನಲ್ಲೋ ಬೇರೊಂದು ಐರೋಪ್ಯ ಭಾಷೆಯಲ್ಲೋ ಇರುವಂತಹ ಸೌಲಭ್ಯಗಳನ್ನು ನಮ್ಮ ಬಳಕೆದಾರರಿಗೆ ಒದಗಿಸುವ, ಆ ಮೂಲಕ ನಮ್ಮದೇ ಯುವಜನತೆಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಅವಕಾಶವೂ ಇಲ್ಲಿದೆ. ನಮ್ಮ ಭಾಷೆಯಲ್ಲಿರುವ ಮಾಹಿತಿಯನ್ನು ಒಗ್ಗೂಡಿಸಿ ಮೊಬೈಲ್ ಬಳಕೆದಾರರಿಗೆ ಒದಗಿಸುವ ಸೇವೆಗಳನ್ನು, ಧ್ವನಿರೂಪದ ನಮ್ಮ ಆದೇಶಗಳನ್ನು ಗುರುತಿಸಿ ಪ್ರತಿಕ್ರಿಯೆ ನೀಡುವಂತಹ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿರುವ ಹಲವು ಸ್ಥಳೀಯ ಸಂಸ್ಥೆಗಳು ಈ ಅವಕಾಶವನ್ನು, ಸೀಮಿತ ಪ್ರಮಾಣದಲ್ಲೇ ಆದರೂ, ಈಗಾಗಲೇ ಬಳಸಿಕೊಂಡಿರುವುದು ಸಂತೋಷದ ಸಂಗತಿ.

ಮಾರುಕಟ್ಟೆಯ ವರ್ತನೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಒಂದೇ ರೀತಿ ಇರುತ್ತದೆ. ಗ್ರಾಹಕರ ಸಂಖ್ಯೆ ಮತ್ತು ಅವರ ಬೇಡಿಕೆಗಳ ಪ್ರಮಾಣ ಹೆಚ್ಚಿದಂತೆ ಆ ಬೇಡಿಕೆಗಳನ್ನು ಪೂರೈಸುವವರ ಸಂಖ್ಯೆಯೂ ಹೆಚ್ಚುತ್ತದೆ, ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ದೊರಕುತ್ತವೆ. ಹೆಚ್ಚಿನ ಭೌಗೋಳಿಕ ವ್ಯಾಪ್ತಿಯಿರುವ (ಇಂಗ್ಲಿಷಿನಂತಹ) ಭಾಷೆಗಳಲ್ಲಿ ಈ ಪ್ರಕ್ರಿಯೆಗೆ ಜಾಸ್ತಿ ಸಮಯ ಬೇಡ; ಆದರೆ ಸ್ಥಳೀಯ ಭಾಷೆಗಳ ಸೀಮಿತ ಗಾತ್ರದ ಮಾರುಕಟ್ಟೆ ಬೆಳೆಯಲು ಕೊಂಚ ಸಮಯ ಹಿಡಿಯುತ್ತಿದೆ ಅಷ್ಟೇ. ಅಮೆಜಾನ್‌ನ ಅಲೆಕ್ಸಾ ವ್ಯವಸ್ಥೆ ಇಂಗ್ಲಿಷೇತರ ಭಾಷೆಗಳನ್ನು ಕಲಿಯುತ್ತಿರುವುದು, ಗೂಗಲ್ ಜಾಹೀರಾತುಗಳಲ್ಲಿ ಇಂಗ್ಲಿಷ್ ಜೊತೆಗೆ ಸ್ಥಳೀಯ ಭಾಷೆಗಳಿಗೂ ಸ್ಥಾನ ದೊರಕುತ್ತಿರುವುದೆಲ್ಲ ಸ್ಥಳೀಯ ಭಾಷಾ ಮಾರುಕಟ್ಟೆಗಳೂ ಬೆಳೆಯುತ್ತಿರುವ ಸೂಚನೆಗಳೇ ತಾನೇ?

ಈ ಪ್ರಕ್ರಿಯೆ ಒಂದು ಹಂತಕ್ಕೆ ಬಂದು ತಂತ್ರಜ್ಞಾನದ ಇತ್ತೀಚಿನ ಸವಲತ್ತುಗಳೆಲ್ಲ ನಮ್ಮ ಭಾಷೆಯಲ್ಲೂ ದೊರಕುವಂತೆ ಆಗುವವರೆಗೆ ಬಳಕೆದಾರರಾದ ನಾವು ಮಾಡಬೇಕಾದ ಕೆಲಸಗಳೂ ಬೇಕಾದಷ್ಟಿವೆ. ಈಗಾಗಲೇ ಲಭ್ಯವಿರುವ ಸವಲತ್ತುಗಳ ಬಗ್ಗೆ ತಿಳಿದುಕೊಳ್ಳುವುದು, ಆ ಸವಲತ್ತುಗಳನ್ನು ಬಳಸುವುದು ಹಾಗೂ ಅವನ್ನು ನಮ್ಮ ಆಪ್ತರಿಗೆ ಪರಿಚಯಿಸುವುದು ಇಂತಹ ಕೆಲಸಗಳ ಪೈಕಿ ಪ್ರಮುಖವಾದದ್ದು. ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವ ಪುಸ್ತಕ, ಪತ್ರಿಕೆ ಹಾಗೂ ಜಾಲತಾಣಗಳನ್ನು ಪ್ರೋತ್ಸಾಹಿಸುವುದು ಇಲ್ಲಿ ನಾವು ಮಾಡಬಹುದಾದ ಇನ್ನೊಂದು ಕೆಲಸ.

ಅಗತ್ಯ ತಾಂತ್ರಿಕ ಜ್ಞಾನವಿರುವವರು ಹೊಸ ಸವಲತ್ತುಗಳನ್ನು ರೂಪಿಸುವ, ಲಭ್ಯ ಸವಲತ್ತುಗಳನ್ನು ಕನ್ನಡೀಕರಿಸುವ ಅಥವಾ ಕನಿಷ್ಟಪಕ್ಷ ತಮ್ಮ ಜ್ಞಾನವನ್ನು ಇತರರೊಡನೆ ಅವರ ಭಾಷೆಯಲ್ಲೇ ಹಂಚಿಕೊಳ್ಳುವ ಪ್ರಯತ್ನವನ್ನೂ ಮಾಡಬಹುದು. ಎಂಬತ್ತರ ದಶಕದಲ್ಲೇ ಕನ್ನಡ ತಂತ್ರಾಂಶವೊಂದನ್ನು ರೂಪಿಸಿ ಮುಕ್ತವಾಗಿ ವಿತರಿಸಿದ ನಾಡೋಜ ಕೆ. ಪಿ. ರಾಯರಂತಹ ಮಹನೀಯರ ಉದಾಹರಣೆಗಳು ಇಲ್ಲಿ ನಮಗೆ ಮಾರ್ಗದರ್ಶಕವಾಗಬೇಕಿವೆ.

ಅಂದಹಾಗೆ ತಂತ್ರಾಂಶಗಳನ್ನು, ಜಾಲತಾಣಗಳನ್ನು, ಕನ್ನಡದಲ್ಲೂ ನೋಡಲು ಅನುವುಮಾಡಿಕೊಡುವ ಉದ್ದೇಶದಿಂದ ಹಲವು ಅನುವಾದ ಕಾರ್ಯಕ್ರಮಗಳು ಗುಂಪುಗುತ್ತಿಗೆ, ಅಂದರೆ ಕ್ರೌಡ್‌ಸೋರ್ಸಿಂಗ್ ಆಧಾರದಲ್ಲಿ ನಡೆಯುತ್ತಿವೆ. ಇಂತಹ ಕೆಲಸಗಳಲ್ಲಿ ಪಾಲ್ಗೊಳ್ಳಲು ಹೆಚ್ಚಿನ ತಾಂತ್ರಿಕ ಜ್ಞಾನವೇನೂ ಬೇಕಿಲ್ಲ ಎನ್ನುವುದು ವಿಶೇಷ. ಫೇಸ್‌ಬುಕ್‌ನಲ್ಲೋ, ಗೂಗಲ್ ಮ್ಯಾಪ್ಸ್‌ನಲ್ಲೋ, ಬೇರೊಂದು ಜಾಲತಾಣ ಅಥವಾ ತಂತ್ರಾಂಶದಲ್ಲೋ ಬಳಸಿರುವ ಕನ್ನಡ ಸರಿಯಿಲ್ಲ ಎಂದು ಲೇವಡಿಮಾಡಿ ಸಂದೇಶಗಳನ್ನು ಹರಿಬಿಡುವ ಬದಲು ಸೂಕ್ತ ಅನುವಾದಕ್ಕೆ ನಮ್ಮ ಕೈಲಾದಷ್ಟು ಸಹಾಯಮಾಡುವುದು ನಿಜಕ್ಕೂ ಒಳ್ಳೆಯ ಕೆಲಸವಾಗಬಲ್ಲದು.

ಫೆಬ್ರುವರಿ ೨೧, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

* * *

ನುಡಿಯ ನಾಳೆಗಳು

ಭಾಷೆಯ ಬೆಳವಣಿಗೆಯಲ್ಲಿ ತಂತ್ರಜ್ಞಾನದ ಪಾತ್ರ ಮಹತ್ವದ್ದು. ಇದೇ ರೀತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳ ಕುರಿತು ಜನರಿಗೆ ಅವರದೇ ಭಾಷೆಯಲ್ಲಿ ಮಾಹಿತಿ ನೀಡುವುದು ಕೂಡ ಮಹತ್ವದ ಕೆಲಸವೇ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆದಿರುವ ಕನ್ನಡದ ಕೆಲಸಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಇಂತಹ ಕಾರ್ಯಕ್ರಮವೊಂದನ್ನು ಬೆಂಗಳೂರಿನ ಸುರಾನಾ ಕಾಲೇಜು ಹಾಗೂ ಇಜ್ಞಾನ ಟ್ರಸ್ಟ್ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ಭಾಷೆ ಬೆಳೆದಿರುವ, ಬೆಳೆಯುತ್ತಿರುವ ಪರಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದ ಈ ಕಾರ್ಯಕ್ರಮಕ್ಕೆ ಪೂರಕ ಮಾಹಿತಿ ನೀಡುವ 'ನುಡಿಯ ನಾಳೆಗಳು' ಎಂಬ ಕಿರುಪುಸ್ತಕವನ್ನು ಬೆಂಗಳೂರಿನ ಹೆಮ್ಮರ ಪ್ರಕಾಶನ ಇದೇ ಸಂದರ್ಭದಲ್ಲಿ ಪ್ರಕಟಿಸಿದೆ. ನಮ್ಮ ಭಾಷೆಯಲ್ಲೂ ಬಳಸಬಹುದಾದ ತಂತ್ರಜ್ಞಾನದ ಸವಲತ್ತುಗಳು ಹಾಗೂ ಅವು ನಮ್ಮೆದುರು ತೆರೆದಿಟ್ಟಿರುವ ಹೊಸ ಸಾಧ್ಯತೆಗಳ ಸಂಕ್ಷಿಪ್ತ ಪರಿಚಯವನ್ನು ಈ ಪುಸ್ತಿಕೆ ಮಾಡಿಕೊಡುತ್ತದೆ.

ತಮ್ಮ ಸಂಸ್ಥೆಗಳಲ್ಲಿ ಇಂತಹುದೇ ಕಾರ್ಯಕ್ರಮಗಳನ್ನು ಆಯೋಜಿಸಲು ಬಯಸುವವರು ejnana.trust@gmail.com ಇಮೇಲ್ ವಿಳಾಸವನ್ನು ಸಂಪರ್ಕಿಸಬಹುದು.

ಕಾಮೆಂಟ್‌ಗಳಿಲ್ಲ:

badge