ಮಂಗಳವಾರ, ಆಗಸ್ಟ್ 30, 2011

ಫಿಶಿಂಗ್ ಅಲ್ಲ, ಇದು ವಿಶಿಂಗ್!

ಟಿ. ಜಿ. ಶ್ರೀನಿಧಿ

ಫಿಶಿಂಗ್ ಸಮಸ್ಯೆಯ ಅನೇಕ ಮುಖಗಳ ಪರಿಚಯ ನಮ್ಮಲ್ಲಿ ಅನೇಕರಿಗೆ ಇದೆ. ಬ್ಯಾಂಕಿನ ಹೆಸರಿನಲ್ಲಿ ಇಮೇಲ್ ಕಳುಹಿಸಿ ಬ್ಯಾಂಕ್ ಖಾತೆಯದೋ ಕ್ರೆಡಿಟ್ ಕಾರ್ಡಿನದೋ ವಿವರ ಕೇಳುವುದು, ಅರ್ಜಿಯನ್ನೇ ಹಾಕದಿದ್ದಾಗಲೂ ಕೆಲಸಕೊಡುವುದಾಗಿ ಸಂದೇಶ ಕಳಿಸುವುದು, ಲಕ್ಷಾಂತರ ರೂಪಾಯಿ ಬಹುಮಾನ ಬಂದಿದೆ ಎಂದು ಎಸ್ಸೆಮ್ಮೆಸ್ ಮಾಡಿ ಬಹುಮಾನ ತಲುಪಿಸಲು ಹಣ ಕೇಳುವುದು - ಇವೆಲ್ಲವುದರ ಬಗೆಗೆ ನಾವೆಲ್ಲ ಈಚೆಗೆ ಸಾಕಷ್ಟು ಎಚ್ಚರದಿಂದಿರುತ್ತೇವೆ.

ಎಲ್ಲರೂ ಹೀಗೆಯೇ ಎಚ್ಚರದಿಂದಿರಲು ಪ್ರಾರಂಭಿಸಿಬಿಟ್ಟರೆ ಕುತಂತ್ರಿಗಳ ಬೇಳೆ ಬೇಯುವುದಿಲ್ಲವಲ್ಲ! ಹಾಗಾಗಿಯೇ ಅವರು ಜನರಿಗೆ ಟೋಪಿಹಾಕುವ ಬೇರೆಬೇರೆ ತಂತ್ರಗಳನ್ನು ಹೆಣೆಯುತ್ತಿರುತ್ತಾರೆ.

ವಿಶಿಂಗ್ ಎನ್ನುವುದು ಇಂಥದ್ದೇ ಒಂದು ತಂತ್ರದ ಹೆಸರು.

ಮಂಗಳವಾರ, ಆಗಸ್ಟ್ 23, 2011

ಬಗ್ ಬ್ಯಾಂಗ್

ಟಿ. ಜಿ. ಶ್ರೀನಿಧಿ

ಗಣಕಗಳನ್ನು ಬಳಸಿ ಅನೇಕ ಕೆಲಸಗಳನ್ನು ಮಾಡಬಹುದು ಎನ್ನುವ ಹೇಳಿಕೆಯಲ್ಲಿ ಹೊಸತೇನೂ ಇಲ್ಲ. ಅವು ಒಂದು+ಒಂದು ಎಷ್ಟು ಎಂಬ ಲೆಕ್ಕವನ್ನು ಬೇಕಿದ್ದರೂ ಬಿಡಿಸಬಲ್ಲವು, ಮಂಗಳಗ್ರಹದತ್ತ ಹೊರಟ ಗಗನನೌಕೆಯ ಉಡಾವಣೆಯನ್ನು ನಿಯಂತ್ರಿಸಲೂ ಬಲ್ಲವು.

ಆದರೆ ಇಂತಹ ಯಾವುದೇ ಕೆಲಸ ಮಾಡಬೇಕಾದರೂ ಗಣಕಕ್ಕೆ ಸಂಪೂರ್ಣ ಮಾರ್ಗದರ್ಶನ ಬೇಕು. ಲೆಕ್ಕಾಚಾರ ಹೇಗೆ ಮಾಡಬೇಕು, ಅದಕ್ಕಾಗಿ ಯಾವ ದತ್ತಾಂಶ ಬಳಸಬೇಕು ಮುಂತಾದ ಎಲ್ಲ ವಿವರಗಳನ್ನೂ ಲೆಕ್ಕಾಚಾರ ಮಾಡುವಂತೆ ಹೇಳುವ ಮೊದಲೇ ನಾವು ಗಣಕಕ್ಕೆ ಹೇಳಿಕೊಟ್ಟಿರಬೇಕಾಗುತ್ತದೆ.

ಹೀಗೆ ಪ್ರತಿಯೊಂದು ಕೆಲಸವನ್ನೂ ಹೆಜ್ಜೆಹೆಜ್ಜೆಯಾಗಿ ವಿವರಿಸುವುದು ಕ್ರಮವಿಧಿ ಅಥವಾ ಪ್ರೋಗ್ರಾಮುಗಳ ಕೆಲಸ. ಗಣಕ ಯಾವುದೇ ಕೆಲಸ ಮಾಡುವಾಗಲೂ ಅದಕ್ಕೆ ಸಂಬಂಧಪಟ್ಟ ಕ್ರಮವಿಧಿಯಲ್ಲಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುತ್ತದೆ. ಉದಾಹರಣೆಗೆ ಒಂದು + ಒಂದು = ಎರಡು ಎನ್ನುವ ಬದಲು ಒಂದು + ಒಂದು = ಹನ್ನೊಂದು ಎಂದು ಕ್ರಮವಿಧಿಯಲ್ಲಿ ಹೇಳಿದ್ದರೆ ನೀವು ಒಂದು + ಒಂದು ಎಷ್ಟು ಎಂದಾಗ ಉತ್ತರ ಹನ್ನೊಂದು ಎಂದೇ ಬರುತ್ತದೆ.

ಗಣಕ ಮಾಡುವ ಲೆಕ್ಕಾಚಾರದಲ್ಲಿ ಆಗುವ ಎಡವಟ್ಟುಗಳಿಗೆ ಇಂತಹ ತಪ್ಪುಗಳೇ ಕಾರಣ. ಕ್ರಮವಿಧಿಗಳನ್ನು ಸರಿಯಾಗಿ ಪರೀಕ್ಷಿಸದೆ ಬಳಕೆದಾರರಿಗೆ ಕೊಟ್ಟಾಗ ಇಂತಹ ತಪ್ಪುಗಳು ಅವರಿಗೆ ಸಾಕಷ್ಟು ತೊಂದರೆಕೊಡುತ್ತವೆ, ಹೆಚ್ಚೂಕಡಿಮೆ ತಿಗಣೆಕಾಟದ ಹಾಗೆ. ಇದರಿಂದಲೇ ಈ ತಪ್ಪುಗಳನ್ನು 'ಬಗ್' ಎಂದು ಕರೆಯುತ್ತಾರೆ.

ಮಂಗಳವಾರ, ಆಗಸ್ಟ್ 16, 2011

ಲಂಡನ್ ರಂಪದ ಹೈಟೆಕ್ ರೂಪ

ಟಿ ಜಿ ಶ್ರೀನಿಧಿ

ಇಜ್ಞಾನ ವಿದ್ಯುನ್ಮಾನ ಪತ್ರಿಕೆಯ ಮಾಹಿತಿ ತಂತ್ರಜ್ಞಾನ ಸಂಚಿಕೆ ಇದೀಗ ಲಭ್ಯವಿದೆ. ಓದಲು ಇಲ್ಲಿ ಕ್ಲಿಕ್ ಮಾಡಿ!
ಕಳೆದ ವಾರದ ಮಾಧ್ಯಮಗಳಲ್ಲೆಲ್ಲ ಲಂಡನ್ ಗಲಭೆಗಳದೇ ಸುದ್ದಿ. ಊರತುಂಬ ಸುತ್ತುತ್ತಿದ್ದ ಗಲಭೆಕೋರ ಗುಂಪುಗಳ ಕಣ್ಣಿಗೆ ಬಿದ್ದ ಅಂಗಡಿಗಳೆಲ್ಲ ಧ್ವಂಸವಾದವು, ಪೋಲೀಸರಿಗೇ ಪೆಟ್ಟುಬಿದ್ದವು, ಕಟ್ಟಡಗಳು ಬೆಂಕಿಗೆ ಆಹುತಿಯಾದವು. ದುಬಾರಿ ವಸ್ತುಗಳನ್ನು ಮಾರುತ್ತಿದ್ದ ಅಂಗಡಿಗಳಿಗೆ ನುಗ್ಗಿದವರು ಕೈಗೆ ಸಿಕ್ಕಿದ್ದನ್ನೆಲ್ಲ ಹೊತ್ತೊಯ್ದರು; ವಿಶ್ವಸಮರಗಳಿಗೂ ಬಗ್ಗದೆ ನಿಂತಿದ್ದ ಶತಮಾನದಷ್ಟು ಹಳೆಯ ಅಂಗಡಿಯನ್ನೂ ಬಿಡದೆ ಸುಟ್ಟುಹಾಕಿದರು.

ಅಪರಾಧಿಯೆಂದು ಶಂಕಿಸಲಾದ ವ್ಯಕ್ತಿಯೊಬ್ಬ ಪೋಲೀಸರ ಗುಂಡಿಗೆ ಬಲಿಯಾದಾಗ ಶುರುವಾದದ್ದು ಈ ಗಲಭೆ. ಆದರೆ ಗಲಭೆಯ ಸ್ವರೂಪ ಅದೆಷ್ಟು ಬೇಗ ಬದಲಾಯಿತೆಂದರೆ ಕಂಡ ಅಂಗಡಿಗಳಿಗೆಲ್ಲ ನುಗ್ಗಿ ಕೈಗೆ ಸಿಕ್ಕಿದ್ದನ್ನೆಲ್ಲ ಲೂಟಿಮಾಡುವುದಷ್ಟೆ ಗಲಭೆಕೋರರ ಏಕಮಾತ್ರ ಉದ್ದೇಶವಾಗಿಹೋಯಿತು. ಅವರ್‍ಯಾರೋ ಲೂಟಿಮಾಡುತ್ತಿದ್ದಾರೆ, ನಾವೇನು ಕಮ್ಮಿ ಎಂದು ಇನ್ನಷ್ಟು ಗುಂಪುಗಳು ಲೂಟಿಗಿಳಿದವು, ಪ್ರತಿಭಟನೆಯ ರೂಪದಲ್ಲಿ ಶುರುವಾದ ಗಲಾಟೆಯ ಸುದ್ದಿ ಕೇಳಿದವರು ಊರಿನ ತುಂಬ ದರೋಡೆ ಶುರುಮಾಡಿಬಿಟ್ಟರು.

ಈ ಗಲಭೆಯ ಸ್ವರೂಪ, ಹಾಗೂ ಅದು ಊರತುಂಬ ಹರಡಿದ ವೇಗ ಅಚ್ಚರಿಮೂಡಿಸುವಂತಿತ್ತು. ಇತರ ಸಂದರ್ಭಗಳಲ್ಲಿ ಕಂಡುಬಂದಿದ್ದ ಹಾಗೆ ಯಾವುದೋ ಒಂದು ಗುಂಪು ಮಾತ್ರ ಗಲಭೆಯಲ್ಲಿ ತೊಡಗಿರಲಿಲ್ಲ; ಅಥವಾ ಒಂದೇ ಗುಂಪು ಪ್ರದೇಶದಿಂದ ಪ್ರದೇಶಕ್ಕೆ ಓಡಾಡುತ್ತಲೂ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ಎಲ್ಲೆಂದರಲ್ಲಿ ಗುಂಪುಗಳು ಸೇರುತ್ತಿದ್ದವು, ಅಂಗಡಿಮುಂಗಟ್ಟುಗಳನ್ನು ಲೂಟಿಮಾಡಿ ಕೈಗೆ ಸಿಕ್ಕಷ್ಟನ್ನು ದೋಚಿಕೊಂಡು ನಾಪತ್ತೆಯಾಗಿಬಿಡುತ್ತಿದ್ದವು, ಒಂದು ಕಡೆ ಗಲಾಟೆಯಾದ ಸುದ್ದಿ ಕೇಳಿ ಪೋಲೀಸರು ಅಲ್ಲಿಗೆ ಧಾವಿಸುವಷ್ಟರಲ್ಲಿ ಅಲ್ಲಿಂದ ಎಷ್ಟೋ ದೂರದ ಇನ್ನೊಂದು ಪ್ರದೇಶದಲ್ಲಿ ಬೇರೆಯದೇ ಗುಂಪು ಗಲಭೆ ಪ್ರಾರಂಭಿಸುತ್ತಿತ್ತು.

ಪೋಲೀಸರ ಚಲನವಲನ ಗಮನಿಸಿ ಬಹಳ ಕಡಿಮೆ ಅವಧಿಯಲ್ಲಿ ಯೋಜನೆ ರೂಪಿಸುತ್ತಿದ್ದ ಈ ಗುಂಪುಗಳು ಅತ್ಯಂತ ವ್ಯವಸ್ಥಿತವಾಗಿ ಸೇರುತ್ತಿದ್ದ ಬಗೆ ಬಹಳ ಕುತೂಹಲಕರವಾಗಿತ್ತು, ಪೋಲೀಸರು ಎಷ್ಟೇ ಪರದಾಡಿದರೂ ಅವರಿಗೆ ಗಲಭೆಕೋರರ ಪ್ಲಾನು ಗೊತ್ತಾಗುತ್ತಲೇ ಇರಲಿಲ್ಲ.

ಏಕೆಂದರೆ, ಅನೇಕ ತಜ್ಞರು ಹೇಳುವಂತೆ, ಗಲಭೆಕೋರರು ತಮ್ಮ ನಡುವೆ ಸಂವಹನಕ್ಕಾಗಿ ಬ್ಲ್ಯಾಕ್‌ಬೆರಿ ಮೆಸೆಂಜರ್ ಸೇವೆಯನ್ನು ಬಳಸುತ್ತಿದ್ದರು!

ಮಂಗಳವಾರ, ಆಗಸ್ಟ್ 9, 2011

ವೆಬ್ ವಿಹಾರದ ಎರಡು ದಶಕ

ವಿಶ್ವವ್ಯಾಪಿ ಜಾಲ ಸಾರ್ವಜನಿಕ ಬಳಕೆಗಾಗಿ ಲಭ್ಯವಾಗಿ ಇದೀಗ ಇಪ್ಪತ್ತು ವರ್ಷ ಕಳೆದಿದೆ. ಈ ಸಂದರ್ಭದಲ್ಲಿ ವೆಬ್ ಬಗೆಗೆ ಹೀಗೊಂದು ಯೋಚನಾಲಹರಿ...

ಟಿ. ಜಿ. ಶ್ರೀನಿಧಿ

ಆಗಸ್ಟ್ ೬, ೧೯೯೧ - ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಸೃಷ್ಟಿಕರ್ತ ಟಿಮ್ ಬರ್ನರ್ಸ್-ಲೀ ವಿಚಾರಜಾಲವೊಂದರಲ್ಲಿ (ನ್ಯೂಸ್‌ಗ್ರೂಪ್) ತಮ್ಮ ಸೃಷ್ಟಿಯನ್ನು ಹೊರಜಗತ್ತಿಗೆ ಪರಿಚಯಿಸಿದ ದಿನ. ವಿಶ್ವವ್ಯಾಪಿ ಜಾಲ ಸಾರ್ವಜನಿಕ ಬಳಕೆಗೆ ಸಿಗುವಂತಾಗಿ ನಿಜ ಅರ್ಥದಲ್ಲಿ ವಿಶ್ವವ್ಯಾಪಿಯಾದದ್ದೂ ಅದೇ ದಿನದಿಂದ. ಈ ಮಹತ್ವದ ಘಟನೆ ಸಂಭವಿಸಿ ಕಳೆದ ಶನಿವಾರಕ್ಕೆ ಇಪ್ಪತ್ತು ವರ್ಷ.

ಈ ಎರಡು ದಶಕಗಳಲ್ಲಿ ವಿಶ್ವವ್ಯಾಪಿ ಜಾಲ ನಮ್ಮ ಬದುಕನ್ನು ಅಪಾರವಾಗಿ ಬದಲಿಸಿಬಿಟ್ಟಿದೆ; ನಮ್ಮಲ್ಲಿ ಅನೇಕರ ಅದೆಷ್ಟೋ ಕೆಲಸಗಳು ಸಂಪೂರ್ಣವಾಗಿ ವಿಶ್ವವ್ಯಾಪಿ ಜಾಲದ ಮೇಲೆಯೇ ಅವಲಂಬಿತವಾಗಿ ಈಗಾಗಲೇ ಬಹಳ ಸಮಯ ಕಳೆದಿದೆ. ಬೆಡ್‌ರೂಮಲ್ಲಿ ಹೆಗ್ಗಣ ಬಂದರೆ ನಾವು ವಿಶ್ವವ್ಯಾಪಿ ಜಾಲದಲ್ಲಿ ದೊಣ್ಣೆ ಹುಡುಕುವುದಿಲ್ಲ, ನಿಜ. ಆದರೆ ಮಕ್ಕಳ ಹೋಮ್‌ವರ್ಕ್‌ನಿಂದ ದೊಡ್ಡವರ ಆಫೀಸ್‌ವರ್ಕ್‌ವರೆಗೆ ಅದೆಷ್ಟೋ ಸಂದರ್ಭಗಳಲ್ಲಿ ವಿಶ್ವವ್ಯಾಪಿ ಜಾಲದ ಮೊರೆಹೋಗುವುದು ಸಾಮಾನ್ಯ ಅಭ್ಯಾಸ. ಹಲವು ಸಂದರ್ಭಗಳಲ್ಲಿ ನಮ್ಮ ಜ್ಞಾಪಕಶಕ್ತಿಗಿಂತ ಹೆಚ್ಚಾಗಿ ಜಾಲತಾಣಗಳನ್ನು (ವಿಶೇಷವಾಗಿ ಗೂಗಲ್) ಅವಲಂಬಿಸುವುದೂ ಇದೆ.

ಶುಕ್ರವಾರ, ಆಗಸ್ಟ್ 5, 2011

ಇಗೋ ಇಲ್ಲಿದೆ ಮಾಹಿತಿ ತಂತ್ರಜ್ಞಾನ ಸಂಚಿಕೆ...

ಇಜ್ಞಾನ ವಿದ್ಯುನ್ಮಾನ ಪತ್ರಿಕೆಯ ಮೊದಲ ಸಂಚಿಕೆಗೆ ಒಳ್ಳೆಯ ಪ್ರತಿಕ್ರಿಯೆ ದೊರಕಿರುವುದು ತುಂಬಾ ಖುಷಿಕೊಟ್ಟಿದೆ. ಈ ಪ್ರಯತ್ನವನ್ನು ತಮ್ಮ ಓದುಗರಿಗೆ ಪರಿಚಯಿಸಿದ ಪ್ರಜಾವಾಣಿ ಹಾಗೂ ವಿಜಯ ಕರ್ನಾಟಕ ಪತ್ರಿಕೆಗಳಿಗೆ, ಪ್ರಚಾರ ದೊರಕಿಸಿಕೊಟ್ಟ ವಿಶ್ವವ್ಯಾಪಿಜಾಲದ ಮಿತ್ರರಿಗೆ, ಪ್ರತಿಕ್ರಿಯೆ ನೀಡಿದ ಸಹೃದಯರಿಗೆ ಹಾಗೂ ಇಜ್ಞಾನ ಡಾಟ್ ಕಾಮ್‌ನತ್ತ ಬಂದುಹೋದ ಎಲ್ಲ ಓದುಗರಿಗೂ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.

ಇದೇ ಖುಷಿಯಲ್ಲಿ ಇಜ್ಞಾನ ಮಾಹಿತಿ ತಂತ್ರಜ್ಞಾನ ಸಂಚಿಕೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ.

ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಹಾರ್ದಿಕ ಸ್ವಾಗತ.

ಮಂಗಳವಾರ, ಆಗಸ್ಟ್ 2, 2011

Oh! Yes, ಇದು ಓಎಸ್!

ಟಿ. ಜಿ. ಶ್ರೀನಿಧಿ

ವಿಂಡೋಸ್ ಎನ್ನುವ ಹೆಸರು ಕೇಳಿದ್ದೀರಾ?

ಓ, ಕೇಳಿಲ್ಲದೆ ಏನು! ಎಷ್ಟೇ ಆದರೂ ಗಣಕದ ಕೆಲಸ ಪ್ರಾರಂಭವಾಗುತ್ತಿದ್ದಂತೆ ಕಾಣುವ ಹೆಸರಲ್ಲವೇ ಅದು!

ಅದೇನೋ ಸರಿ, ಈ ವಿಂಡೋಸ್ ಅಂದರೆ ಏನು ಹೇಳ್ತೀರಾ?

ವಿಂಡೋಸ್ ಒಂದು ತಂತ್ರಾಂಶ.

ಅದೂ ಸರಿ, ಎಂತಹ ತಂತ್ರಾಂಶ ಅಂತ ಸ್ವಲ್ಪ ಹೇಳ್ತೀರಾ?

ನನಗೇನು ಅಷ್ಟೂ ಗೊತ್ತಿಲ್ವೇನ್ರಿ, ಅದೊಂದು ಆಪರೇಟಿಂಗ್ ಸಿಸ್ಟಂ!

ಆಪರೇಟಿಂಗ್ ಸಿಸ್ಟಂ
ಗಣಕದ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ ಜೊತೆಗೆ ಅದರ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ ತಂತ್ರಾಂಶವೇ ಆಪರೇಟಿಂಗ್ ಸಿಸ್ಟಂ ಅಥವಾ ಕಾರ್ಯಾಚರಣ ವ್ಯವಸ್ಥೆ. ನಮಗೆಲ್ಲ ಚಿರಪರಿಚಿತವಾದ ಮೈಕ್ರೋಸಾಫ್ಟ್ ವಿಂಡೋಸ್, ಲಿನಕ್ಸ್ ಮುಂತಾದವು ಕಾರ್ಯಾಚರಣ ವ್ಯವಸ್ಥೆಗೆ ಕೆಲ ಉದಾಹರಣೆಗಳು.
badge