ಮಂಗಳವಾರ, ಆಗಸ್ಟ್ 2, 2011

Oh! Yes, ಇದು ಓಎಸ್!

ಟಿ. ಜಿ. ಶ್ರೀನಿಧಿ

ವಿಂಡೋಸ್ ಎನ್ನುವ ಹೆಸರು ಕೇಳಿದ್ದೀರಾ?

ಓ, ಕೇಳಿಲ್ಲದೆ ಏನು! ಎಷ್ಟೇ ಆದರೂ ಗಣಕದ ಕೆಲಸ ಪ್ರಾರಂಭವಾಗುತ್ತಿದ್ದಂತೆ ಕಾಣುವ ಹೆಸರಲ್ಲವೇ ಅದು!

ಅದೇನೋ ಸರಿ, ಈ ವಿಂಡೋಸ್ ಅಂದರೆ ಏನು ಹೇಳ್ತೀರಾ?

ವಿಂಡೋಸ್ ಒಂದು ತಂತ್ರಾಂಶ.

ಅದೂ ಸರಿ, ಎಂತಹ ತಂತ್ರಾಂಶ ಅಂತ ಸ್ವಲ್ಪ ಹೇಳ್ತೀರಾ?

ನನಗೇನು ಅಷ್ಟೂ ಗೊತ್ತಿಲ್ವೇನ್ರಿ, ಅದೊಂದು ಆಪರೇಟಿಂಗ್ ಸಿಸ್ಟಂ!

ಆಪರೇಟಿಂಗ್ ಸಿಸ್ಟಂ
ಗಣಕದ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ ಜೊತೆಗೆ ಅದರ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ ತಂತ್ರಾಂಶವೇ ಆಪರೇಟಿಂಗ್ ಸಿಸ್ಟಂ ಅಥವಾ ಕಾರ್ಯಾಚರಣ ವ್ಯವಸ್ಥೆ. ನಮಗೆಲ್ಲ ಚಿರಪರಿಚಿತವಾದ ಮೈಕ್ರೋಸಾಫ್ಟ್ ವಿಂಡೋಸ್, ಲಿನಕ್ಸ್ ಮುಂತಾದವು ಕಾರ್ಯಾಚರಣ ವ್ಯವಸ್ಥೆಗೆ ಕೆಲ ಉದಾಹರಣೆಗಳು.

ಗಣಕದಲ್ಲಿ ಯಾವುದೇ ಯಂತ್ರಾಂಶ ಅಥವಾ ತಂತ್ರಾಂಶ ಬಳಸಬೇಕಾದರೂ ಕಾರ್ಯಾಚರಣ ವ್ಯವಸ್ಥೆ ಇರಲೇಬೇಕು. ಅಷ್ಟೇ ಅಲ್ಲ, ಇವುಗಳಲ್ಲಿ ಏನನ್ನು ಬಳಸಬೇಕಾದರೂ ಮೊದಲಿಗೆ ಕಾರ್ಯಾಚರಣ ವ್ಯವಸ್ಥೆ ಪ್ರಾರಂಭವಾಗಿರಬೇಕು.

ನೀವು ಗುಂಡಿ ಒತ್ತಿದ ತಕ್ಷಣವೇ ಗಣಕ ತನ್ನಲ್ಲಿ ಈ ಕಾರ್ಯಾಚರಣ ವ್ಯವಸ್ಥೆ ಎಲ್ಲಿ ಶೇಖರವಾಗಿದೆ ಎಂದು ಹುಡುಕಿ ಅದನ್ನು ಪ್ರಾರಂಭಿಸುತ್ತದೆ. 'ಬೂಟ್' ಮಾಡುವುದು ಎನ್ನುವುದು ಇದಕ್ಕೇ. ಬೂಟ್ ಮಾಡುವ ಜವಾಬ್ದಾರಿ ಬಯಾಸ್ ಎಂಬ ತಂತ್ರಾಂಶದ್ದು.
ಒಮ್ಮೆ ಗಣಕ ಬೂಟ್ ಆದಮೇಲೆ ನಾವು ಮಾಡುವ ಪ್ರತಿಯೊಂದು ಕೆಲಸಕ್ಕೂ ಕಾರ್ಯಾಚರಣ ವ್ಯವಸ್ಥೆಯ ಸಹಾಯ ಬೇಕು. ಬೇರೆ ತಂತ್ರಾಂಶಗಳನ್ನು ತೆರೆಯಲು, ಅವುಗಳನ್ನು ಬಳಸಿ ಕೆಲಸಮಾಡಲು, ಮಾಡಿದ ಕೆಲಸವನ್ನು ಉಳಿಸಿಡಲು - ಎಲ್ಲವುದಕ್ಕೂ ಕಾರ್ಯಾಚರಣ ವ್ಯವಸ್ಥೆ ಸಹಾಯಮಾಡುತ್ತದೆ. ಹಾಗೆ ನೋಡಿದರೆ ಈ ತಂತ್ರಾಂಶವನ್ನು ನಿಮ್ಮ ಗಣಕದ ಉಸ್ತುವಾರಿ ಸಚಿವ ಎಂದೇ ಕರೆಯಬಹುದೇನೋ!

ಆದರೆ ನಮ್ಮ ಕೆಲಸ ಒಂದೇ ಗಣಕಕ್ಕೆ ಸೀಮಿತವಾಗಿದ್ದ ಕಾಲ ಈಗಾಗಲೇ ಮುಗಿದುಹೋಗಿದೆ. ಈಗಿನದು ಕ್ಲೌಡ್ ಕಂಪ್ಯೂಟಿಂಗ್ ಯುಗ - ಗಣಕದಲ್ಲಿ ಮಾಡುವ ಮುಕ್ಕಾಲುಪಾಲು ಕೆಲಸಕ್ಕೆ ಅಂತರಜಾಲ ಸಂಪರ್ಕ ಬೇಕು. ನಾವು ದಿನನಿತ್ಯ ಬಳಸುವ ಅದೆಷ್ಟೋ ತಂತ್ರಾಂಶಗಳು ಜಾಲಲೋಕದಲ್ಲಿಯೇ ಲಭ್ಯವಿರುವುದರಿಂದ ಅವನ್ನು ನಮ್ಮ ಗಣಕದಲ್ಲಿ ಅನುಸ್ಥಾಪಿಸುವ ಅಗತ್ಯವೇ ಇಲ್ಲ. ಆಗಿಂದಾಗ್ಗೆ ಅಪ್‌ಗ್ರೇಡ್ ಮಾಡಿಕೊಳ್ಳಬೇಕಾದ ಅಗತ್ಯವಂತೂ ಇಲ್ಲವೇ ಇಲ್ಲ. ಇನ್ನು ಕಡತಗಳೂ ಅಷ್ಟೆ, ಒಮ್ಮೆ ಜಾಲಲೋಕಕ್ಕೆ ಸೇರಿಸಿದ ಮೇಲೆ ಯಾವ ಊರಿನ ಯಾವ ಗಣಕದಿಂದ ಬೇಕಾದರೂ ಅವನ್ನು ಪಡೆದುಕೊಳ್ಳಬಹುದು.

ಹೀಗಿರುವಾಗ ಕಾರ್ಯಾಚರಣ ವ್ಯವಸ್ಥೆಗಳು ಬದಲಾಗದಿದ್ದರೆ ಆದೀತೆ?

ಜಾಲಕ್ಕೂ ಓಎಸ್
ಈ ಪ್ರಶ್ನೆಗೆ ಉತ್ತರವಾಗಿ ರೂಪಗೊಂಡಿರುವುದೇ ಕ್ಲೌಡ್ ಆಧರಿತ ಕಾರ್ಯಾಚರಣ ವ್ಯವಸ್ಥೆಯ ಪರಿಕಲ್ಪನೆ.

ಗೂಗಲ್‌ನ ಕ್ರೋಮ್ ಓಎಸ್, ಮೊತ್ತಮೊದಲ ಕ್ಲೌಡ್ ಆಧರಿತ ಕಾರ್ಯಾಚರಣ ವ್ಯವಸ್ಥೆ. ಈ ಕಾರ್ಯಾಚರಣ ವ್ಯವಸ್ಥೆಯಲ್ಲಿ ನಿಮಗೆ ಕಾಣುವುದು ಬ್ರೌಸರ್ ತಂತ್ರಾಂಶ ಮಾತ್ರ. ಗಣಕದಲ್ಲಿ ನಾವು ಬಳಸುವ ತಂತ್ರಾಂಶಗಳು ಹಾಗೂ ಅವನ್ನು ಬಳಸಿ ತಯಾರಿಸುವ ಮಾಹಿತಿ ಎರಡನ್ನೂ ವಿಶ್ವವ್ಯಾಪಿ ಜಾಲದ ಮೂಲಕ ಲಭ್ಯವಾಗಿಸಿ ಅಲ್ಲಿಯೇ ಶೇಖರಿಸಿಡುವ ಮಹತ್ವಾಕಾಂಕ್ಷೆ ಈ ಕಾರ್ಯಾಚರಣ ವ್ಯವಸ್ಥೆಯದ್ದು. ಪದಸಂಸ್ಕರಣಾ ತಂತ್ರಾಂಶ ಬಳಸಿ ಅರ್ಜಿ ಟೈಪಿಸಬೇಕಾಗಿರಲಿ, ಸ್ಪ್ರೆಡ್‌ಶೀಟಿನಲ್ಲಿ ಲೆಕ್ಕಾಚಾರ ಹಾಕುವ ಅಗತ್ಯವಿರಲಿ - ಯಾವುದೇ ಪ್ರತ್ಯೇಕ ತಂತ್ರಾಂಶವನ್ನು ಅನುಸ್ಥಾಪಿಸಿಕೊಳ್ಳುವ ಅಗತ್ಯವಿಲ್ಲದೆ ಇಲ್ಲಿ ಎಲ್ಲವೂ ವಿಶ್ವವ್ಯಾಪಿ ಜಾಲದ ಮೂಲಕವೇ ಲಭ್ಯ. ಈ ಕಾರ್ಯಾಚರಣ ವ್ಯವಸ್ಥೆಯಲ್ಲಿ ಸಕಲ ಕೆಲಸಗಳಿಗೂ ಬ್ರೌಸರ್ ಬೇಕೇಬೇಕು!

ಕ್ರೋಮ್ ಓಎಸ್ ಬಳಸುವ 'ಕ್ರೋಮ್‌ಬುಕ್' ಗಣಕಗಳು ಸ್ವಲ್ಪಸಮಯದಿಂದ ಮಾರುಕಟ್ಟೆಯಲ್ಲಿವೆ. ಸದ್ಯಕ್ಕೆ ಕ್ಲೌಡ್ ಆಧರಿತ ಕಾರ್ಯಾಚರಣ ವ್ಯವಸ್ಥೆಯ ಭವಿಷ್ಯ ಈ ಗಣಕಗಳ ಯಶಸ್ಸಿನ ಮೇಲೆಯೇ ಅವಲಂಬಿತವಾಗಿರುವುದರಿಂದ ಅವುಗಳತ್ತ ಬಳಕೆದಾರರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಕಾದುನೋಡಲಾಗುತ್ತಿದೆ.

ಮೊಬೈಲ್‌ಗೂ ಬೇಕು
ಇಂದಿನ ಆಧುನಿಕ ಮೊಬೈಲ್ ದೂರವಾಣಿಗಳು ಯಾವ ಗಣಕಕ್ಕೂ ಕಡಿಮೆಯಿಲ್ಲ. ಗಣಕದಲ್ಲಿ ಸಾಧ್ಯವಾಗುವ ಬಹುತೇಕ ಎಲ್ಲ ಕೆಲಸಗಳನ್ನು ಮೊಬೈಲ್‌ನಲ್ಲೂ ಮಾಡುವುದು ಸಾಧ್ಯ. ಹೀಗಾಗಿ ಇಂದಿನ ಬಹುತೇಕ ಮೊಬೈಲ್ ದೂರವಾಣಿಗಳಲ್ಲೂ (ಸ್ಮಾರ್ಟ್‌ಫೋನ್) ಕಾರ್ಯಾಚರಣ ವ್ಯವಸ್ಥೆ ಇರುತ್ತದೆ.

ಆಂಡ್ರಾಯ್ಡ್, ಸಿಂಬಿಯನ್, ವಿಂಡೋಸ್ ಫೋನ್ ಇವೆಲ್ಲ ಈ ಬಗೆಯ ಕಾರ್ಯಾಚರಣ ವ್ಯವಸ್ಥೆಗೆ ಉದಾಹರಣೆಗಳು. ಅಪಾರ ಜನಪ್ರಿಯತೆ ಗಳಿಸಿಕೊಂಡಿರುವ ಆಂಡ್ರಾಯ್ಡ್ ಅಂತೂ ಪ್ರಪಂಚದಲ್ಲೇ ಮೊದಲ ಸ್ಥಾನದಲ್ಲಿರುವ ಮೊಬೈಲ್ ಕಾರ್ಯಾಚರಣ ವ್ಯವಸ್ಥೆ. ಈ ಕಾರ್ಯಾಚರಣ ವ್ಯವಸ್ಥೆ ಅನೇಕ ಟ್ಯಾಬ್ಲೆಟ್ ಗಣಕಗಳಲ್ಲೂ ಬಳಕೆಯಾಗುತ್ತದೆ. ಮೊಬೈಲ್ ದೂರವಾಣಿ ಅಥವಾ ಟ್ಯಾಬ್ಲೆಟ್ ಗಣಕ ತಯಾರಿಸುವ ಯಾವುದೇ ಸಂಸ್ಥೆ ಈ ಕಾರ್ಯಾಚರಣ ವ್ಯವಸ್ಥೆಯನ್ನು ತನ್ನ ಉತ್ಪನ್ನದಲ್ಲಿ ಬಳಸಿಕೊಳ್ಳಬಹುದು.

ಇನ್ನು ನಿರ್ದಿಷ್ಟ ಸಂಸ್ಥೆಯ ಉತ್ಪನ್ನಗಳಿಗಾಗಿಯೇ ಸೀಮಿತವಾಗಿರುವ ಕಾರ್ಯಾಚರಣ ವ್ಯವಸ್ಥೆಗಳೂ ಇವೆ. ಆಪಲ್‌ನ ಐಒಎಸ್, ರೀಸರ್ಚ್ ಇನ್ ಮೋಷನ್‌ನ ಬ್ಲ್ಯಾಕ್‌ಬೆರಿ ಓಎಸ್, ಸ್ಯಾಮ್‌ಸಂಗ್ ಬಡಾ - ಇವು ಈ ಬಗೆಯ ಕೆಲ ಕಾರ್ಯಾಚರಣ ವ್ಯವಸ್ಥೆಗಳು.

ಚೀನಾದ ಆಲೀಬಾಬಾ ಸಂಸ್ಥೆ ಸಿದ್ಧಪಡಿಸಿರುವ 'ಆಲಿಯುನ್ ಓಎಸ್', ಮೊಬೈಲ್ ಕಾರ್ಯಾಚರಣ ವ್ಯವಸ್ಥೆಗಳ ಕ್ಷೇತ್ರದಲ್ಲಿ ಇತ್ತೀಚೆಗೆ ಕೇಳಿಬಂದಿರುವ ಹೆಸರು. ಈ ಕಾರ್ಯಾಚರಣ ವ್ಯವಸ್ಥೆ ಬಳಸಿ ಕೆಲಸಮಾಡುವ ಮೊತ್ತಮೊದಲ ಮೊಬೈಲ್ ದೂರವಾಣಿ ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ಯಂತ್ರಾಂಶ ಕ್ಷೇತ್ರದಲ್ಲಿ ತನ್ನನ್ನು ಬಿಟ್ಟರಿಲ್ಲ ಎಂದು ಮೆರೆಯುತ್ತಿರುವ ಚೀನಾದ ಉತ್ಪನ್ನ ಇದೀಗ ತಂತ್ರಾಂಶ ಕ್ಷೇತ್ರದಲ್ಲಿ ಎಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿಕೊಳ್ಳಬಹುದೋ ಕಾದುನೋಡಬೇಕಿದೆ.

ಇಷ್ಟರ ನಡುವೆ ಫೈರ್‌ಫಾಕ್ಸ್ ಬ್ರೌಸರ್ ತಯಾರಕರಾದ ಮೊಜಿಲ್ಲಾ ಸಂಸ್ಥೆಯೂ ಒಂದು ಮೊಬೈಲ್ ಕಾರ್ಯಾಚರಣ ವ್ಯವಸ್ಥೆ ಹೊರತರಲಿದೆ ಎಂಬ ಸುದ್ದಿ ಕೇಳಿಬಂದಿದ್ದು, ಇದು ಮುಂದಿನ ದಿನಗಳಲ್ಲಿ ಈ ಕ್ಷೇತ್ರ ಮತ್ತಷ್ಟು ಸ್ಪರ್ಧಾತ್ಮಕವಾಗಲಿರುವ ಸೂಚನೆ ಕೊಟ್ಟಿದೆ.

ಆಗಸ್ಟ್ ೨, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge