ಸೋಮವಾರ, ಫೆಬ್ರವರಿ 28, 2011

ಹಂಪಿಯಲ್ಲಿ ರಾಷ್ಟ್ರೀಯ ವಿಚಾರಸಂಕಿರಣ

ಇ-ಜ್ಞಾನ ವಾರ್ತೆ


'ಕನ್ನಡದಲ್ಲಿ ಜ್ಞಾನಾಧಾರಿತ ಪಠ್ಯಗಳ ಭಾಷಾಂತರ' ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಕಳೆದ ಫೆಬ್ರುವರಿ ೨೫ ಹಾಗೂ ೨೬ರಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯಿತು. ಭಾರತ ಸರಕಾರದ ರಾಷ್ಟ್ರೀಯ ಅನುವಾದ ಮಿಷನ್, ಮೈಸೂರಿನ ಸಿಐಐಎಲ್ ಹಾಗೂ ಹಂಪಿ ವಿವಿಯ ಭಾಷಾಂತರ ಅಧ್ಯಯನ ವಿಭಾಗ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.

ಒಟ್ಟಾರೆಯಾಗಿ ಜ್ಞಾನಾಧಾರಿತ ಪಠ್ಯಗಳ ಭಾಷಾಂತರದ ಬಗ್ಗೆ ಗಮನಹರಿಸಿದ ಈ ಕಾರ್ಯಕ್ರಮದಲ್ಲಿ ವಿಜ್ಞಾನ ಬರೆವಣಿಗೆ ವಿಷಯದ ಕಡೆಗೂ ಸಾಕಷ್ಟು ಮಹತ್ವ ನೀಡಲಾಗಿತ್ತು. ಡಾ|ಯು ಬಿ ಪವನಜ, ಶ್ರೀ ಟಿ ಆರ್  ಅನಂತರಾಮು, ಶ್ರೀ ಕೊಳ್ಳೇಗಾಲ ಶರ್ಮ, ಶ್ರೀ ಎ ಪಿ ರಾಧಾಕೃಷ್ಣ - ಇವರು ಈ ವಿಚಾರಸಂಕಿರಣದಲ್ಲಿ ಭಾಗವಹಿಸಿದ್ದ ವಿಜ್ಞಾನ-ತಂತ್ರಜ್ಞಾನ ಬರೆಹಗಾರರು.

ಈ ವಿಚಾರಸಂಕಿರಣದಲ್ಲಿ ನಾನೂ ಭಾಗವಹಿಸಿದ್ದೆ. 'ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಬರೆವಣಿಗೆ - ಸವಾಲುಗಳು' ಇದು ನಾನು ಮಂಡಿಸಿದ ಪ್ರಬಂಧದ ವಿಷಯ. - ಶ್ರೀನಿಧಿ

ಮಂಗಳವಾರ, ಫೆಬ್ರವರಿ 22, 2011

ಬಿಟ್‌ನಿಂದ ಎಕ್ಸಾಬೈಟ್‌ವರೆಗೆ

ಟಿ ಜಿ ಶ್ರೀನಿಧಿ

೧೮-೧೯ನೇ ಶತಮಾನದ ಕೈಗಾರಿಕಾ ಕ್ರಾಂತಿಯ ನಂತರ ಮನುಕುಲದ ಮೇಲೆ ಅಷ್ಟೇ ದೊಡ್ಡ ಪ್ರಭಾವ ಬೀರಿರುವುದು ಮಾಹಿತಿ ಕ್ರಾಂತಿ. ಆಧುನಿಕ ಗಣಕಗಳ ಬೆಳೆವಣಿಗೆಯೊಡನೆ ಪ್ರಾರಂಭವಾದದ್ದು ಈ ಕ್ರಾಂತಿ. ಅಂತರಜಾಲದ ವಿಕಾಸ, ವಿಶ್ವವ್ಯಾಪಿ ಜಾಲದ ಹುಟ್ಟು, ಅತ್ಯಾಧುನಿಕ ಸಂವಹನ ಮಾಧ್ಯಮಗಳ ಉಗಮ ಮುಂತಾದ ಎಲ್ಲ ಹೆಜ್ಜೆಗಳೂ ನಮ್ಮ ಬದುಕನ್ನು ಅಪಾರವಾಗಿ ಬದಲಿಸಿವೆ. ವಿಶ್ವವ್ಯಾಪಿ ಜಾಲದಲ್ಲಿ, ಮೊಬೈಲ್ ಮೂಲಕ, ದೂರದರ್ಶನ-ಆಕಾಶವಾಣಿಗಳಲ್ಲಿ, ಪತ್ರಿಕೆಗಳಲ್ಲಿ - ಹೀಗೆ ಎಲ್ಲೆಲ್ಲಿ ನೋಡಿದರೂ ಮಾಹಿತಿಯ ಮಹಾಪೂರವೇ ನಮ್ಮನ್ನು ಆವರಿಸಿಕೊಂಡಿದೆ.

ಮಂಗಳವಾರ, ಫೆಬ್ರವರಿ 15, 2011

ಗಣಕಲೋಕಕ್ಕೆ ಪವರ್‌ಕಟ್ ಭೀತಿ

ಟಿ ಜಿ ಶ್ರೀನಿಧಿ

ದೈನಂದಿನ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಆಗಿರುವ ವ್ಯಾಪಕ ಗಣಕೀಕರಣದ ಪರಿಚಯ ನಮ್ಮೆಲ್ಲರಿಗೂ ಚೆನ್ನಾಗಿಯೇ ಇದೆ. ಅತ್ಯಂತ ಹೆಚ್ಚು ಗಣಕೀಕರಣವಾಗಿರುವ ಇಂತಹ ಕ್ಷೇತ್ರಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರ ಪ್ರಮುಖವಾದದ್ದು. ಒಂದು ಶಾಖೆಯಲ್ಲಿರುವ ಖಾತೆಯನ್ನು ಬೇರೆ ಯಾವ ಖಾತೆಯಿಂದಲಾದರೂ ನಿರ್ವಹಿಸುವುದು, ಖಾತೆಗಳ ನಡುವೆ ಬಹಳ ಸುಲಭವಾಗಿ ಹಣ ವರ್ಗಾವಣೆ ಮಾಡುವುದು - ಇಂತಹ ಸೌಲಭ್ಯಗಳಿಗೆಲ್ಲ ಗಣಕೀಕರಣವೇ ಕಾರಣ.

ಗಣಕೀಕರಣದ ಇನ್ನೊಂದು ಪರಿಣಾಮವೆಂದರೆ ಬ್ಯಾಂಕಿಂಗ್ ಚಟುವಟಿಕೆಗಳಲ್ಲಿ ಗಣಕಗಳ ಮೇಲಿನ ಅವಲಂಬನೆ ತೀವ್ರವಾಗಿ ಹೆಚ್ಚಿದೆ. ಕೋಟ್ಯಂತರ ರೂಪಾಯಿಗಳ ವ್ಯವಹಾರವನ್ನು ನಿರ್ವಹಿಸುವ ಈ ಗಣಕಗಳು ಸದಾಕಾಲ ಕೆಲಸಮಾಡುತ್ತಲೇ ಇರಬೇಕಾಗುತ್ತದೆ; ತಪ್ಪುಗಳಾಗುವ ಅಥವಾ ಯಾಂತ್ರಿಕ ವೈಫಲ್ಯದ ಸಾಧ್ಯತೆಯಂತೂ ಇಲ್ಲವೇ ಇಲ್ಲದಂತೆ ನೋಡಿಕೊಳ್ಳಬೇಕಾಗುತ್ತದೆ.

ಸೋಮವಾರ, ಫೆಬ್ರವರಿ 14, 2011

ಕನ್ನಡ ವಿಜ್ಞಾನ ಸಾಹಿತಿಗಳ ಸಮಾವೇಶ

ಇ-ಜ್ಞಾನ ವಾರ್ತೆ

ಕನ್ನಡ ಜನಪ್ರಿಯ ವಿಜ್ಞಾನ ಸಾಹಿತಿಗಳ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ವಿಜ್ಞಾನ ಸಾಹಿತಿಗಳ ನಾಲ್ಕನೇ ಸಮಾವೇಶ ಕಳೆದ ವಾರಾಂತ್ಯ (ಫೆಬ್ರುವರಿ ೧೨-೧೩) ಹಾಸನ ಜಿಲ್ಲೆ ಆಲೂರಿನ ಸಮೀಪದ ಪುಣ್ಯಭೂಮಿಯಲ್ಲಿ ನಡೆಯಿತು. ಹಸಿರು ತೋಟದ ಪರಿಸರದಲ್ಲಿ ನಡೆದ ಈ ಸಮಾವೇಶದಲ್ಲಿ ಡಾ| ಪಿ ಎಸ್ ಶಂಕರ್, ಡಾ| ಪ್ರಧಾನ್ ಗುರುದತ್ತ, ಪ್ರೊ| ಎಚ್ ಬಿ ದೇವರಾಜ ಸರ್ಕಾರ್, ಶ್ರೀ ಟಿ ಆರ್ ಅನಂತರಾಮು, ಡಾ| ನಾ ಸೋಮೇಶ್ವರ, ಡಾ| ಲೀಲಾವತಿ ದೇವದಾಸ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಆರೋಗ್ಯ-ಕೃಷಿ-ವಿಜ್ಞಾನ ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ನಾಲ್ವರು ಹಿರಿಯರನ್ನು ಸಮಾವೇಶದ ಮೊದಲ ದಿನದಂದು ಸನ್ಮಾನಿಸಲಾಯಿತು.

ಈ ಸಮಾರಂಭದ ಕೆಲವು ಚಿತ್ರಗಳು ಇಲ್ಲಿವೆ.








ಬುಧವಾರ, ಫೆಬ್ರವರಿ 9, 2011

ಪುಟ್ಟ ವಿಳಾಸದ ದೊಡ್ಡ ವಿಲಾಸ

ಟಿ ಜಿ ಶ್ರೀನಿಧಿ

bit.ly/g9X0oN, goo.gl/FrX4, mcaf.ee/27f1a - ಈ ಬಗೆಯ ಪುಟ್ಟಪುಟ್ಟ ವೆಬ್ ವಿಳಾಸಗಳನ್ನು ನೀವು ನೋಡಿರಬಹುದು. 'ಶಾರ್ಟ್ ಯುಆರ್‌ಎಲ್' ಎಂದು ಕರೆಸಿಕೊಳ್ಳುವ ಇಂತಹ ಪುಟ್ಟ ವಿಳಾಸಗಳು ವಿಶ್ವವ್ಯಾಪಿ ಜಾಲದಲ್ಲಿ ಈಗ ಬಹಳ ಜನಪ್ರಿಯವಾಗಿವೆ.

ಯುಆರ್‌ಎಲ್ ಅಂದರೇನು?
ವಿಶ್ವವ್ಯಾಪಿ ಜಾಲದಲ್ಲಿ ಲಭ್ಯವಿರುವ ಕೋಟ್ಯಂತರ ಜಾಲತಾಣಗಳನ್ನು ಪ್ರತ್ಯೇಕವಾಗಿ ಗುರುತಿಸಲು ಅನುವುಮಾಡಿಕೊಡುವ ವಿಳಾಸಕ್ಕೆ ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ ಅಥವಾ ಯುಆರ್‌ಎಲ್ ಎಂದು ಹೆಸರು. ಪ್ರತಿಯೊಂದು ಜಾಲತಾಣಕ್ಕೂ ವಿಶಿಷ್ಟವಾದ ಯುಆರ್‌ಎಲ್ ಇರುತ್ತದೆ. ಇದು ಆ ಜಾಲತಾಣದ ವಿಳಾಸಕ್ಕೆ ಸಮಾನ.

ಆದರೆ ಇಂತಹ ವಿಳಾಸಗಳು ಕೆಲವೊಮ್ಮೆ ತೀರಾ ಉದ್ದವಾಗಿರುತ್ತವೆ, ಇಲ್ಲವೇ ನೆನಪಿಟ್ಟುಕೊಳ್ಳಲು ಕಷ್ಟವಾಗುವಂತಿರುತ್ತವೆ. ಉದಯವಾಣಿ ಡಾಟ್ ಕಾಮ್, ಗೂಗಲ್ ಡಾಟ್ ಕಾಂ ಮೊದಲಾದ ವಿಳಾಸಗಳನ್ನು ನೆನಪಿಟ್ಟುಕೊಂಡಷ್ಟು ಸುಲಭವಾಗಿ http://74.127.61.106/epaper/PDFList.aspx?Pg=H&Edn=BN&DispDate=2/1/2011ನಂತಹ ವಿಳಾಸವನ್ನು ನೆನಪಿಡಲು ಆಗುವುದಿಲ್ಲ.

ಪುಟ್ಟ ವಿಳಾಸಗಳ ಅಗತ್ಯ ಉಂಟಾಗುವುದೇ ಇಲ್ಲಿ. ಕಳೆದವಾರ ಈ ಅಂಕಣದಲ್ಲಿ ಪ್ರಕಟವಾಗಿದ್ದ ಬರೆಹವನ್ನು http://e-jnana.blogspot.com/2011/02/blog-post.html ಎಂಬ ವಿಳಾಸದಲ್ಲಿ ನೋಡಿ ಎಂದು ಹೇಳುವ ಬದಲು ಪುಟ್ಟದಾಗಿ goo.gl/eLnpG ನೋಡಿ ಎಂದು ಹೇಳಬಹುದು.

ಇಲ್ಲಿ goo.gl/eLnpG ಎನ್ನುವುದು ಪುಟ್ಟ ವಿಳಾಸಕ್ಕೊಂದು ಉದಾಹರಣೆ. ಮೂಲ ವಿಳಾಸವನ್ನು ದಾಖಲಿಸಿಕೊಂಡು ಅದರ ಬದಲಿಗೆ ಬಳಸಬಹುದಾದ ಇಂತಹ ಪುಟ್ಟ ವಿಳಾಸಗಳನ್ನು ಕೊಡುವ ಅನೇಕ ತಾಣಗಳು ವಿಶ್ವವ್ಯಾಪಿ ಜಾಲದಲ್ಲಿವೆ. bit.ly, ಗೂಗಲ್ ಸಂಸ್ಥೆಯ goo.gl, ಮೆಕಫಿ ಸಂಸ್ಥೆಯ mcaf.ee ಇವೆಲ್ಲ ಈ ಬಗೆಯ ಕೆಲ ತಾಣಗಳು.

ವಿಳಾಸ ಸಂಕ್ಷಿಪ್ತಗೊಳಿಸುವ (ಯುಆರ್‌ಎಲ್ ಶಾರ್ಟನಿಂಗ್) ಸೇವೆ ಒದಗಿಸುವ ಇಂತಹ ಯಾವುದೇ ಜಾಲತಾಣಕ್ಕೆ ಹೋಗಿ ನಿಮಗೆ ಉದ್ದವೆನಿಸುವ ಯಾವುದೇ ವಿಳಾಸವನ್ನು ದಾಖಲಿಸುತ್ತಿದ್ದಂತೆಯೇ ಅದಕ್ಕೆ ಪರ್ಯಾಯವಾದ ಶಾರ್ಟ್ ಯುಆರ್‌ಎಲ್ ಸಿದ್ಧವಾಗುತ್ತದೆ. ಇದನ್ನು ನೀವು ಎಲ್ಲಿ ಯಾರ ಜೊತೆಗೆ ಬೇಕಿದ್ದರೂ ಹಂಚಿಕೊಳ್ಳಬಹುದು. ಮೂಲ ವಿಳಾಸ ಹಾಗೂ ಪುಟ್ಟ ವಿಳಾಸ ಎರಡನ್ನೂ ನೆನಪಿಟ್ಟುಕೊಳ್ಳುವ ಯುಆರ್‌ಎಲ್ ಶಾರ್ಟನಿಂಗ್ ಸೇವೆ ಅವೆರಡನ್ನೂ ಹೊಂದಿಸಿ ಬಳಕೆದಾರರು ಪುಟ್ಟ ವಿಳಾಸ ದಾಖಲಿಸಿದಾಗೆಲ್ಲ ಅವರನ್ನು ಮೂಲ ವಿಳಾಸಕ್ಕೇ ಕರೆದೊಯ್ಯುತ್ತದೆ.

ಪುಟ್ಟ ವಿಳಾಸದ ಒಂದು ದಶಕ
ವಿಶ್ವವ್ಯಾಪಿ ಜಾಲದಲ್ಲಿ ಪುಟ್ಟ ವಿಳಾಸಗಳನ್ನು ಬಳಸುವ ಅಭ್ಯಾಸ ಇತ್ತೀಚಿನದೇನಲ್ಲ. 'ಮೇಕ್ ಎ ಶಾರ್ಟರ್ ಲಿಂಕ್' ಎಂಬ ಜಾಲತಾಣ ೨೦೦೧ರಷ್ಟು ಹಿಂದೆಯೇ ಯುಆರ್‌ಎಲ್ ಶಾರ್ಟನಿಂಗ್ ಸೇವೆ ಒದಗಿಸುತ್ತಿತ್ತು. ನಂತರದ ದಿನಗಳಲ್ಲಿ 'ಟೈನಿ ಯುಆರ್‌ಎಲ್' ಎಂಬ ತಾಣ ಕೂಡ ಸಾಕಷ್ಟು ಹೆಸರುಮಾಡಿತ್ತು.

೨೦೦೬ರಲ್ಲಿ ಕಾಣಿಸಿಕೊಂಡ ಟ್ವೀಟರ್‌ನಿಂದಾಗಿ ಪುಟ್ಟ ವಿಳಾಸಗಳ ಜನಪ್ರಿಯತೆ ಇನ್ನಷ್ಟು ಹೆಚ್ಚಿತು. ಇಲ್ಲಿ ನೂರಾ ನಲವತ್ತು ಅಕ್ಷರಗಳೊಳಗಾಗಿ ಸಂದೇಶಗಳನ್ನು ಬರೆಯಬೇಕಾದ ಅನಿವಾರ್ಯತೆ ಇದ್ದುದರಿಂದ ದೊಡ್ಡದೊಡ್ಡ ವಿಳಾಸಗಳಿಗೆ ಜಾಗವೇ ಇಲ್ಲದಂತಾಯಿತು.

ಇದೀಗ ಟ್ವೀಟರ್‌ನಲ್ಲಿ bit.ly ಎಂಬ ಯುಆರ್‌ಎಲ್ ಶಾರ್ಟನಿಂಗ್ ಸೇವೆ ವ್ಯಾಪಕವಾಗಿ ಬಳಕೆಯಾಗುತ್ತದೆ.

ಪುಟ್ಟದಲ್ಲ ಈ ಸಮಸ್ಯೆ
ಈ ಪುಟ್ಟ ವಿಳಾಸಗಳು ಯಾವ ಮೂಲ ವಿಳಾಸಕ್ಕೆ ಕರೆದೊಯ್ಯುತ್ತವೆ ಎಂದು ಮೇಲ್ನೋಟಕ್ಕೆ ಗೊತ್ತಾಗುವುದಿಲ್ಲ. ಹೀಗಾಗಿ ಇವುಗಳನ್ನು ವೈರಸ್ ಹರಡುವಂತಹ ಕೆಟ್ಟ ಉದ್ದೇಶಗಳಿಗಾಗಿಯೂ ಬಳಸಲಾಗುತ್ತಿದೆ. ಇತ್ತೀಚೆಗೆ ಟ್ವೀಟರ್‌ನಲ್ಲಿ ಕಾಣಿಸಿಕೊಂಡಿದ್ದ ಇಂಥದ್ದೊಂದು ಪುಟ್ಟ ವಿಳಾಸ ಸಾಕಷ್ಟು ತೊಂದರೆ ಉಂಟುಮಾಡಿತ್ತು; ಆ ವಿಳಾಸಕ್ಕೆ ಹೋದವರಿಗೆಲ್ಲ ನಿಮ್ಮ ಗಣಕಕ್ಕೆ ವೈರಸ್ ಬಂದಿದೆ ಎಂದು ಹೆದರಿಸಿ ಆಂಟಿ-ವೈರಸ್ ನೀಡುವ ನೆಪದಲ್ಲಿ ಯಾವುದೋ ಕುತಂತ್ರಾಂಶವನ್ನು ಅವರ ಗಣಕದಲ್ಲಿ ಅನುಸ್ಥಾಪಿಸಲಾಗುತ್ತಿತ್ತು. ಬೇಡದ ತಂತ್ರಾಂಶಕ್ಕೆ ದುಡ್ಡು ಬೇರೆ ಕೊಟ್ಟು ಆ ತಂತ್ರಾಂಶದಿಂದ ಆಗುವ ತೊಂದರೆಯನ್ನೂ ಅನುಭವಿಸುವ ಪಾಡು ಬಳಕೆದಾರರದು!

ಇಂತಹ ತೊಂದರೆ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗ ಅಪರಿಚಿತ ಮೂಲಗಳಿಂದ ಬಂದ, ಅಥವಾ ಸಂದೇಹಾಸ್ಪದ ಸಂದೇಶಗಳಲ್ಲಿರುವ ಪುಟ್ಟ ವಿಳಾಸಗಳ ಕೊಂಡಿಯ ಮೇಲೆ ಕ್ಲಿಕ್ಕಿಸದಿರುವುದು ಎಂದು ತಜ್ಞರು ಹೇಳುತ್ತಾರೆ. ನೀವು ನೋಡಹೊರಟಿರುವ ಪುಟ್ಟ ವಿಳಾಸ ಎಲ್ಲಿಗೆ ಕರೆದೊಯ್ಯಲಿದೆ ಎಂದು ಪರೀಕ್ಷಿಸಿನೋಡುವ ಸೌಲಭ್ಯ ಬಳಸಿಕೊಳ್ಳುವುದೂ ಒಳ್ಳೆಯ ಆಯ್ಕೆಯೇ. mcaf.ee ತಾಣ ಇಂತಹ ಸೌಲಭ್ಯ ಒದಗಿಸುತ್ತಿರುವ ಯುಆರ್‌ಎಲ್ ಶಾರ್ಟನಿಂಗ್ ಸೇವೆಗಳಿಗೊಂದು ಉದಾಹರಣೆ.

ಫೆಬ್ರುವರಿ ೮, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಫೆಬ್ರವರಿ 1, 2011

ಕಂಟ್ರೋಲ್ ಆಲ್ಟ್ ಡಿಲೀಟ್!

ಟಿ ಜಿ ಶ್ರೀನಿಧಿ

ಗಣಕದಲ್ಲಿ ಕೆಲಸಮಾಡುತ್ತಿರುವಾಗ ಕೆಲವೊಮ್ಮೆ ನೀವು ಬಳಸುತ್ತಿದ್ದ ತಂತ್ರಾಂಶ ಇದ್ದಕ್ಕಿದ್ದಹಾಗೆ ದಿಕ್ಕುತೋಚದೆ ಹ್ಯಾಂಗ್ ಆಗುವುದನ್ನು ನೀವು ಗಮನಿಸಿಯೇ ಇರುತ್ತೀರಿ. ಆಗೆಲ್ಲ ನಿಮ್ಮ ಸಹಾಯಕ್ಕೆ ಬರುವುದು ಮೂರು ಬೆರಳಿನ ಸಲಾಮು, ಅರ್ಥಾತ್ ಕಂಟ್ರೋಲ್-ಆಲ್ಟ್-ಡಿಲೀಟ್!

ಗಣಕದ ಕೀಲಿಮಣೆಯಲ್ಲಿ ಕಂಟ್ರೋಲ್, ಆಲ್ಟ್ ಹಾಗೂ ಡಿಲೀಟ್ - ಈ ಮೂರೂ ಕೀಲಿಗಳನ್ನು ಒಟ್ಟಿಗೆ ಒತ್ತುವ ಆಯ್ಕೆಯನ್ನು ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯ ಬಳಕೆದಾರರು ಬಹಳ ವ್ಯಾಪಕವಾಗಿ ಬಳಸುತ್ತಾರೆ. ತಂತ್ರಾಂಶಗಳು ಹ್ಯಾಂಗ್ ಆದಾಗ ಅವುಗಳ ಕೆಲಸವನ್ನು ಬಲವಂತವಾಗಿ ಸ್ಥಗಿತಗೊಳಿಸಲು ಅಥವಾ ಯಾವ ತಂತ್ರಾಂಶವೂ ಪ್ರತಿಕ್ರಿಯೆ ನೀಡದ ಸಂದರ್ಭದಲ್ಲಿ ಗಣಕವನ್ನು ರೀಬೂಟ್ ಮಾಡಲು ಅನುವುಮಾಡಿಕೊಡುವ ರಾಮಬಾಣ ಈ ಕಂಟ್ರೋಲ್-ಆಲ್ಟ್-ಡಿಲೀಟ್.

ಅಷ್ಟೇ ಅಲ್ಲ, ಗಣಕಕ್ಕೆ ಲಾಗ್‌ಆನ್ ಆಗುವಾಗ, ಗುಪ್ತಪದ ಬದಲಿಸಲು, ಟಾಸ್ಕ್ ಮ್ಯಾನೇಜರ್ ತಂತ್ರಾಂಶವನ್ನು ತೆರೆಯಲು, ಲಾಗ್‌ಆಫ್ ಅಥವಾ ಶಟ್‌ಡೌನ್ ಮಾಡಲು - ಹೀಗೆ ಅನೇಕ ಕೆಲಸಗಳಿಗೂ ಇದೇ ಮೂರು ಕೀಲಿಗಳ ಸಂಯೋಜನೆ ಸಹಾಯಮಾಡುತ್ತದೆ. ಓಎಸ್/೨ ಹಾಗೂ ಲಿನಕ್ಸ್ ಕಾರ್ಯಾಚರಣ ವ್ಯವಸ್ಥೆ ಬಳಸುವ ಗಣಕಗಳಲ್ಲೂ ಕಂಟ್ರೋಲ್-ಆಲ್ಟ್-ಡಿಲೀಟ್ ಬಳಸಿ ರೀಬೂಟ್ ಮಾಡುವುದು ಸಾಧ್ಯ. ಇಷ್ಟೆಲ್ಲ ಕೆಲಸಗಳಿಗೆ ಸಹಾಯಮಾಡುವ ಈ ಸಂಯೋಜನೆಗೆ ಮೂರು ಬೆರಳಿನ ಸಲಾಮು ಅಥವಾ ಥ್ರೀ ಫಿಂಗರ್ ಸಲ್ಯೂಟ್ ಎಂಬ ಅಡ್ಡಹೆಸರೂ ಇದೆ.

ಯಾವುದೇ ಕೆಲಸ ಸಾಧಿಸಲು ಕೀಲಿಮಣೆಯಲ್ಲಿ ಮೂರು ಕೀಲಿಗಳನ್ನು ಒಟ್ಟಿಗೆ ಒತ್ತುವ ಕಲ್ಪನೆಯೇ ವಿಚಿತ್ರವಾದದ್ದು. ಅದರಲ್ಲೂ ಕೀಲಿಮಣೆಯ ಒಂದು ಮೂಲೆಯಲ್ಲಿರುವ ಕಂಟ್ರೋಲ್ ಹಾಗೂ ಆಲ್ಟ್ ಜೊತೆಗೆ ಇನ್ನೊಂದು ಮೂಲೆಯಲ್ಲಿರುವ ಡಿಲೀಟ್ ಕೀಲಿಯನ್ನು ಒತ್ತುವುದಂತೂ ಇನ್ನೂ ವಿಚಿತ್ರವಾದ ಕಲ್ಪನೆ. ಆದರೂ ವಿಶ್ವದೆಲ್ಲೆಡೆ ಕೋಟ್ಯಂತರ ಜನರು ಈ ಸಂಯೋಜನೆಯನ್ನು ಹೆಚ್ಚೂಕಡಿಮೆ ಮೂವತ್ತು ವರ್ಷಗಳಿಂದ ಬಳಸುತ್ತಿದ್ದಾರೆ.

ಕಂಟ್ರೋಲ್ ಆಲ್ಟ್ ಡಿಲೀಟ್ ಇಷ್ಟೆಲ್ಲ ಜನಪ್ರಿಯವಾಗುತ್ತದೆ ಎಂಬ ಕಲ್ಪನೆ ಅದರ ಸೃಷ್ಟಿಕರ್ತ ಡೇವಿಡ್ ಬ್ರಾಡ್ಲಿಗೂ ಇರಲಿಲ್ಲವಂತೆ. ೧೯೮೦ರಲ್ಲೋ ೮೧ರಲ್ಲೋ ಆದ ಈ ಸಂಯೋಜನೆಯ ಸೃಷ್ಟಿ ಅಂತಹ ಸ್ಮರಣಾರ್ಹ ಘಟನೆಯೇನೂ ಆಗಿರಲಿಲ್ಲ ಎಂಬುದು ಅವರ ಹೇಳಿಕೆ.

ಆಗ ಐಬಿಎಂ ಸಂಸ್ಥೆಯಲ್ಲಿ 'ಐಬಿಎಂ ಪಿಸಿ'ಯ ಮೇಲೆ ಕೆಲಸ ನಡೆಯುತ್ತಿತ್ತು. ಅದಕ್ಕಾಗಿ ತಂತ್ರಾಂಶಗಳನ್ನು ರೂಪಿಸಿ ಪರೀಕ್ಷಿಸುತ್ತಿದ್ದ ತಂತ್ರಜ್ಞರು ಅನೇಕಬಾರಿ ಗಣಕವನ್ನು ರೀಬೂಟ್ ಮಾಡಬೇಕಾಗುತ್ತಿತ್ತು. ಪ್ರತಿಬಾರಿಯೂ ಗಣಕವನ್ನು ಆರಿಸಿ ಪುನಃ ಚಾಲೂ ಮಾಡುವಾಗ ಪವರ್ ಆನ್ ಸೆಲ್ಫ್ ಟೆಸ್ಟ್(ಪೋಸ್ಟ್)ನಿಂದಾಗಿ ಕೆಲ ನಿಮಿಷಗಳಷ್ಟು ಸಮಯ ವ್ಯಯವಾಗುತ್ತಿತ್ತು. ಇದರ ಬದಲು ಗಣಕವನ್ನು ಆರಿಸದೆಯೇ ರೀಬೂಟ್ ಮಾಡಿದರೆ ಸಾಕಷ್ಟು ಸಮಯದ ಉಳಿತಾಯವಾಗಬಹುದು ಎಂಬ ಆಲೋಚನೆಯ ಪರಿಣಾಮವೇ ಕಂಟ್ರೋಲ್ ಆಲ್ಟ್ ಡಿಲೀಟ್ ಸಂಯೋಜನೆಯ ಸೃಷ್ಟಿ.

ಆಕಸ್ಮಿಕವಾಗಿ ಕೀಲಿಗಳನ್ನು ಒತ್ತುವ ಸಾಧ್ಯತೆ ತಪ್ಪಿಸುವ ಒಂದೇ ಕಾರಣದಿಂದ ಕೀಲಿಮಣೆಯ ವಿರುದ್ಧ ಮೂಲೆಗಳಲ್ಲಿರುವ ಕಂಟ್ರೋಲ್, ಆಲ್ಟ್ ಹಾಗೂ ಡಿಲೀಟ್ ಕೀಲಿಗಳನ್ನು ಈ ಉದ್ದೇಶಕ್ಕಾಗಿ ಆರಿಸಿಕೊಳ್ಳಲಾಯಿತಂತೆ. ಆ ಸಮಯದಲ್ಲಿ ನಮ್ಮನಿಮ್ಮಂತಹ ಗಣಕ ಬಳಕೆದಾರರಿಗೆ ಈ ಆಯ್ಕೆ ಒದಗಿಸುವ ಯಾವ ಉದ್ದೇಶವೂ ಇರಲಿಲ್ಲ ಎನ್ನುವುದು ತಮಾಷೆಯ ಸಂಗತಿ.

ಈ ಕೀಲಿಗಳ ಆಯ್ಕೆಗಾಗಲೀ ಅಥವಾ ಈ ಸಂಯೋಜನೆಯನ್ನು ಬಳಸಿದಾಗ ಗಣಕವನ್ನು ರೀಬೂಟ್ ಮಾಡುವ ತಂತ್ರಾಂಶದ ಸೃಷ್ಟಿಗಾಗಲೀ ಹೆಚ್ಚೇನೂ ಸಮಯ ಹಿಡಿಸಲಿಲ್ಲ ಎಂದು ಬ್ರಾಡ್ಲಿ ಹೇಳುತ್ತಾರೆ. ಗಣಕ ಕ್ಷೇತ್ರದಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿರುವ ಅವರು ತಮ್ಮ ಸಣ್ಣದೊಂದು ಸೃಷ್ಟಿ ಇಷ್ಟೆಲ್ಲ ಜನಪ್ರಿಯವಾಗುತ್ತದೆ ಎಂದು ಖಂಡಿತಾ ಅಂದುಕೊಂಡಿರಲಿಲ್ಲವಂತೆ.

ಫೆಬ್ರುವರಿ ೧, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ
badge