ಮಂಗಳವಾರ, ಡಿಸೆಂಬರ್ 28, 2010

ಜಾಲಲೋಕದ ಬೀದಿಜಗಳ

ಟಿ ಜಿ ಶ್ರೀನಿಧಿ

ಈಚಿನ ಕೆಲದಿನಗಳಲ್ಲಿ ಎಲ್ಲಿಲ್ಲಿ ನೋಡಿದರೂ ವಿಕಿಲೀಕ್ಸ್‌ನದೇ ಸುದ್ದಿ. ಈವರೆಗೂ ರಹಸ್ಯವಾಗಿಡಲಾಗಿದ್ದ ಸಾವಿರಾರು ಸಂಗತಿಗಳನ್ನು ಸಾರ್ವಜನಿಕವಾಗಿ ತಂದು ಸುರಿದಿರುವ ಈ ಜಾಲತಾಣ ಅತ್ಯಲ್ಪ ಸಮಯದಲ್ಲೇ ವಿಶ್ವದೆಲ್ಲೆಡೆ ಹೆಸರುಮಾಡಿಬಿಟ್ಟಿದೆ.

ಹೀಗೆ ಬಹಿರಂಗವಾಗಿರುವ ಸಂಗತಿಗಳು ಅದೆಷ್ಟು ಸುದ್ದಿಮಾಡಿವೆಯೋ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ವಿಕಿಲೀಕ್ಸ್ ತಾಣ ಕೂಡ ಸುದ್ದಿಯಲ್ಲಿದೆ. ವಿಶ್ವದೆಲ್ಲೆಡೆಯಿಂದ ವ್ಯಕ್ತವಾಗುತ್ತಿರುವ ಪರ-ವಿರೋಧವಾದ ಪ್ರತಿಕ್ರಿಯೆಗಳ ಜೊತೆಜೊತೆಯಲ್ಲೇ ಅಂತರಜಾಲ ಲೋಕದಲ್ಲೂ ವಿಕಿಲೀಕ್ಸ್ ಕುರಿತು ಸಾಕಷ್ಟು ಗಲಾಟೆಯಾಗುತ್ತಿದೆ.

ಇದೆಲ್ಲ ಪ್ರಾರಂಭವಾದದ್ದು ವಿಕಿಲೀಕ್ಸ್ ಜಾಲತಾಣಕ್ಕೆ ಹೋಸ್ಟಿಂಗ್ ಸೇವೆ ಒದಗಿಸಿದ್ದ ಅಮೆಜಾನ್ ಡಾಟ್ ಕಾಂ ಸಂಸ್ಥೆ ತನ್ನ ಸೇವೆಯನ್ನು ಹಿಂತೆಗೆದುಕೊಂಡಾಗ. ತಾನು ವಿಧಿಸಿರುವ ನಿಬಂಧನೆಗಳನ್ನು ವಿಕಿಲೀಕ್ಸ್ ಪಾಲಿಸುತ್ತಿಲ್ಲ ಎನ್ನುವುದು ಅಮೆಜಾನ್‌ನ ಆರೋಪ.

ಇದರ ನಂತರ ವಿಕಿಲೀಕ್ಸ್‌ಗೆ ಡೊಮೈನ್ ನೇಮ್ ಸರ್ವಿಸ್ ಒದಗಿಸುತ್ತಿದ್ದ ಸಂಸ್ಥೆ ಕೂಡ ತನ್ನ ಸೇವೆಯನ್ನು ನಿಲ್ಲಿಸಿಬಿಟ್ಟಿತು (ಯಾವುದೇ ತಾಣದ ಯುಆರ್‌ಎಲ್ ಅನ್ನು ಅದರ ಐ.ಪಿ. ವಿಳಾಸದೊಂದಿಗೆ ಹೊಂದಿಸಿಕೊಡುವ ಈ ವ್ಯವಸ್ಥೆ ಇಲ್ಲದಿದ್ದರೆ ಆ ತಾಣವನ್ನು ಯಾರೂ ನೋಡುವುದೇ ಸಾಧ್ಯವಿಲ್ಲ). ವಿಕಿಲೀಕ್ಸ್ ತಾಣದ ಮೇಲೆ ತೀವ್ರಪ್ರಮಾಣದ ಡಿಡಿಒಎಸ್ ದಾಳಿ ನಡೆಯುತ್ತಿದೆ ಹಾಗೂ ಇದರಿಂದ ತನ್ನ ವ್ಯವಸ್ಥೆಯೇ ಅಭದ್ರವಾಗುವ ಸಾಧ್ಯತೆಯಿದೆ; ಹೀಗಾಗಿ ಆ ತಾಣಕ್ಕೆ ನೀಡುತ್ತಿದ್ದ ಡೊಮೈನ್ ನೇಮ್ ಸರ್ವಿಸ್ ಅನ್ನು ನಿಲ್ಲಿಸುತ್ತಿದ್ದೇವೆ ಎನ್ನುವುದು ಆ ಸಂಸ್ಥೆ ನೀಡಿದ ಕಾರಣ.

ಏನಿದು ಡಿಡಿಒಎಸ್ ದಾಳಿ?
ಜಾಲತಾಣಗಳಿಗೆ ಅಸಂಖ್ಯಾತ ಕೃತಕ ಗ್ರಾಹಕರನ್ನು ಸೃಷ್ಟಿಸುವ ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಡಿಸ್ಟ್ರಿಬ್ಯೂಟೆಡ್ ಡಿನಯಲ್ ಆಫ್ ಸರ್ವಿಸ್ ಅಥವಾ ಡಿಡಿಒಎಸ್ ದಾಳಿ ಎಂದು ಕರೆಯುತ್ತಾರೆ. ಇದು ಸೈಬರ್ ಭಯೋತ್ಪಾದನೆಯ ವಿಧಗಳಲ್ಲೊಂದು. ಇಂತಹ ದಾಳಿಗೆ ಈಡಾಗುವ ತಾಣದ ಸರ್ವರ್‌ಗೆ ಇದ್ದಕ್ಕಿದ್ದಂತೆ ಅಪಾರ ಪ್ರಮಾಣದ ಮಾಹಿತಿ ಹರಿದುಬರಲು ಪ್ರಾರಂಭವಾಗುತ್ತದೆ. ಇದರಿಂದಾಗಿ ಆ ಜಾಲತಾಣದ ಕಾರ್ಯಾಚರಣೆ ಬಲು ನಿಧಾನವಾಗಿಬಿಡುತ್ತದೆ. ಇಂತಹ ದಾಳಿಗಳು ಹೆಚ್ಚುಕಾಲ ಮುಂದುವರೆದದ್ದೇ ಆದರೆ ಮಾಹಿತಿಯ ಮಿತಿಮೀರಿದ ಒತ್ತಡದಿಂದಾಗಿ ದಾಳಿಗೀಡಾದ ಜಾಲತಾಣ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯೂ ಇರುತ್ತದೆ.

ಸ್ಪಾಮ್ ಕಳುಹಿಸುವ ದಂಧೆಯಂತೆಯೇ ಈ ದಾಳಿಗಳಲ್ಲೂ ಸ್ಪೈವೇರ್‌ಗಳು ಹಾಗೂ ಬಾಟ್‌ನೆಟ್‌ಗಳ ಬಳಕೆ ಸಾಮಾನ್ಯ.

ಗೂಢಚಾರಿ ತಂತ್ರಾಂಶ ಅಥವಾ ಸ್ಪೈವೇರ್, ಗಣಕಲೋಕವನ್ನು ಕಾಡುವ ಕುತಂತ್ರಾಂಶಗಳಲ್ಲೊಂದು. ಇವು ಸಾಮಾನ್ಯವಾಗಿ ಉಪಯುಕ್ತ ತಂತ್ರಾಂಶಗಳ ಸೋಗಿನಲ್ಲಿ ಬಳಕೆದಾರರ ಗಣಕವನ್ನು ಪ್ರವೇಶಿಸುತ್ತವೆ. ಬಳಕೆದಾರರ ಗಣಕವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅದನ್ನು ತಮ್ಮ ಕುಕೃತ್ಯಗಳಿಗೆ ಬಳಸಿಕೊಳ್ಳುವಲ್ಲಿ ಈ ತಂತ್ರಾಂಶಗಳು ಹ್ಯಾಕರ್‌ಗಳಿಗೆ ನೆರವಾಗುತ್ತವೆ. ಪ್ರತಿ ಬಾರಿ ಗಣಕವನ್ನು ಚಾಲೂ ಮಾಡಿದಾಗಲೂ ಸಕ್ರಿಯವಾಗುವ ಈ ತಂತ್ರಾಂಶ ಹ್ಯಾಕರ್‌ನ ಆದೇಶಗಳನ್ನು ಪಾಲಿಸಲು ಪ್ರಾರಂಭಿಸುತ್ತದೆ; ಅಂದರೆ ಆ ಗಣಕ ಒಂದು ಜಾಂಬಿ ಗಣಕ ಅಥವಾ 'ಬಾಟ್' ಆಗಿ ಬದಲಾಗುತ್ತದೆ (ಬಾಟ್ ಎನ್ನುವುದು ರೋಬಾಟ್ ಎಂಬ ಹೆಸರಿನ ಅಪಭ್ರಂಶ). ಪ್ರಪಂಚದಾದ್ಯಂತ ಇರುವ ಇಂತಹ ನೂರಾರು-ಸಾವಿರಾರು ಬಾಟ್‌ಗಳನ್ನು ಒಗ್ಗೂಡಿಸಿದ 'ಬಾಟ್‌ನೆಟ್'ಗಳೆಂಬ ಜಾಲಗಳೂ ಸಿದ್ಧವಾಗುತ್ತವೆ.

ಡಿಡಿಒಎಸ್ ದಾಳಿಗೆ ತುತ್ತಾಗುವ ತಾಣಗಳಿಗೆ ಅಪಾರ ಪ್ರಮಾಣದ ಮಾಹಿತಿ ಹರಿದುಬರುವುದು ಇವೇ ಬಾಟ್‌ನೆಟ್‌ಗಳಿಂದ. ಈ ಗಣಕಗಳು ಜಗತ್ತಿನ ಯಾವ ಮೂಲೆಯಲ್ಲಿ ಬೇಕಾದರೂ ಇರಬಹುದಾದ್ದರಿಂದ ಅನೇಕ ಸನ್ನಿವೇಶಗಳಲ್ಲಿ ನಿಜವಾದ ಅಪರಾಧಿಯ ಪತ್ತೆಯಾಗುವುದೇ ಇಲ್ಲ.

ವಿಕಿಲೀಕ್ಸ್ ವಾರ್
ವಿಕಿಲೀಕ್ಸ್ ವಿರೋಧಿಗಳು ಪ್ರಾರಂಭಿಸಿದ ಡಿಡಿಒಎಸ್ ದಾಳಿಗಳ ಬೆನ್ನಲ್ಲೇ ಡಿಎನ್‌ಎಸ್ ಸೇವೆಯೂ ನಿಂತುಹೋದದ್ದರಿಂದ ವಿಕಿಲೀಕ್ಸ್ ತಾಣ ತನ್ನ ವಿಳಾಸವನ್ನು ಬದಲಾಯಿಸಿಕೊಳ್ಳಬೇಕಾಗಿಬಂತು. ಇದರ ಬೆನ್ನಲ್ಲೇ ವಿಕಿಲೀಕ್ಸ್ ತಾಣಕ್ಕೆ ಬರುವ ದೇಣಿಗೆಗಳನ್ನು ನಾವು ಇನ್ನುಮುಂದೆ ಸಂಗ್ರಹಿಸುವುದಿಲ್ಲ ಎಂದು ವೀಸಾ, ಮಾಸ್ಟರ್‌ಕಾರ್ಡ್ ಹಾಗೂ ಪೇಪಾಲ್ ಸಂಸ್ಥೆಗಳೂ ಘೋಷಿಸಿಬಿಟ್ಟವು.

ಇಷ್ಟೆಲ್ಲ ಆದಾಗ ವಿಕಿಲೀಕ್ಸ್ ಬೆಂಬಲಿಗರಿಗೆ ಕೋಪಬಂತು. ತಮ್ಮ ಕೋಪ ತೋರಿಸಿಕೊಳ್ಳಲು ಅವರೂ ಡಿಡಿಒಎಸ್ ದಾಳಿಗಳ ಮೊರೆಹೋದರು. ಅಮೆಜಾನ್, ವೀಸಾ, ಮಾಸ್ಟರ್‌ಕಾರ್ಡ್ ಹಾಗೂ ಪೇಪಾಲ್ ತಾಣಗಳು ಅವರ ಕೋಪಕ್ಕೆ ಗುರಿಯಾಗಬೇಕಾಯಿತು.

ಹಬ್ಬುತ್ತಿರುವ ಹಾವಳಿ
ಹೀಗೆ ಡಿಡಿಒಎಸ್ ದಾಳಿಗಳನ್ನು ಮಾಡುವ ಮೂಲಕ ತಮ್ಮ ಸಿಟ್ಟುತೀರಿಸಿಕೊಳ್ಳುವ ಚಾಳಿ ಅಂತರಜಾಲ ಲೋಕದಲ್ಲಿ ವ್ಯಾಪಕವಾಗಿ ಬೆಳೆಯುತ್ತಿದೆ ಎಂದು ತಜ್ಞರು ಹೇಳುತ್ತಾರೆ.

ವಿವಿಧ ಸಂಘಸಂಸ್ಥೆಗಳ ಜಾಲತಾಣಗಳ ಮೇಲೆ ಅವರ ವಿರೋಧಿಗಳು ಡಿಡಿಒಎಸ್ ದಾಳಿ ನಡೆಸುವುದು ಸಾಮಾನ್ಯವಾಗಿಹೋಗಿದೆಯಂತೆ. ಯಾವುದೋ ಸಿದ್ಧಾಂತವನ್ನು ವಿರೋಧಿಸುವ ಸೋಗಿನಲ್ಲ್ಲಿ ತಮ್ಮ ದುರುದ್ದೇಶ ಈಡೇರಿಸಿಕೊಳ್ಳಲು ಪ್ರಯತ್ನಿಸುವ ಸೈಬರ್ ದುಷ್ಕರ್ಮಿಗಳೂ ಈ ತಂತ್ರ ಉಪಯೋಗಿಸುತ್ತಿರುವ ಸಂಶಯವೂ ಇದೆ. ಡಿಡಿಒಎಸ್ ದಾಳಿಗಳನ್ನು ನಡೆಸಲು ಅನುವುಮಾಡಿಕೊಡುವ ತಂತ್ರಾಂಶಗಳು ವಿಶ್ವವ್ಯಾಪಿ ಜಾಲದ ಮೂಲಕ ಸುಲಭವಾಗಿ ಲಭ್ಯವಾಗುತ್ತಿರುವುದೂ ಈ ದಾಳಿಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಡಲಾಗುತ್ತಿದೆ.

ಯಾವ ಉದ್ದೇಶಕ್ಕೇ ಆಗಲಿ, ಡಿಡಿಒಎಸ್ ದಾಳಿ ಅಥವಾ ಅದರಂತಹ ಇನ್ನಾವುದೇ ಸೈಬರ್ ದುಷ್ಕೃತ್ಯಗಳಲ್ಲಿ ಭಾಗಿಯಾಗುವುದು ಶಿಕ್ಷಾರ್ಹ ಅಪರಾಧವಾಗುತ್ತದೆ; ಹೀಗಾಗಿ ಇವೆಲ್ಲ ತಾಪತ್ರಯಗಳಿಂದ ದೂರವೇ ಇರಿ ಎನ್ನುವುದು ತಜ್ಞರ ಸಲಹೆ.

ಡಿಸೆಂಬರ್ ೨೮, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಡಿಸೆಂಬರ್ 21, 2010

ಗ್ರಿಡ್ ಕಂಪ್ಯೂಟಿಂಗ್ ಮಾಯೆ

ಟಿ ಜಿ ಶ್ರೀನಿಧಿ

ಕಳೆದ ದಶಕದಲ್ಲಿ ಗಣಕಗಳ ಸಂಸ್ಕರಣಾ ಸಾಮರ್ಥ್ಯದಲ್ಲಿ ಆಗಿರುವ ಬದಲಾವಣೆ ಅಭೂತಪೂರ್ವವಾದದ್ದು. ನೂರಿನ್ನೂರು ಮೆಗಾಹರ್ಟ್ಸ್ ವೇಗದ ಪ್ರಾಸೆಸರ್, ಕೆಲವು ನೂರು ಎಂಬಿಗಳಷ್ಟು ರ್‍ಯಾಮ್ - ಏಳೆಂಟು ವರ್ಷಗಳ ಹಿಂದಿನ ಗಣಕಗಳಲ್ಲಿ ಇಷ್ಟೇ ಸಾಮರ್ಥ್ಯ ಇರುತ್ತಿದ್ದದ್ದು. ಆದರೆ ಈಗ? ಪ್ರಾಸೆಸರ್‌ಗಳ ವೇಗ ಗಿಗಾಹರ್ಟ್ಸ್ ತಲುಪಿ ಎಷ್ಟೋ ಕಾಲವಾಗಿದೆ, ಒಂದೆರಡು ಜಿಬಿಗಿಂತ ಕಡಿಮೆ ರ್‍ಯಾಮ್ ಇರುವ ಗಣಕ ಹುಡುಕಿದರೂ ಸಿಗುವುದು ಕಷ್ಟ.

ಆದರೆ ಇಷ್ಟು ದೊಡ್ಡ ಸಂಸ್ಕರಣಾ ಸಾಮರ್ಥ್ಯದ ಬಳಕೆ ನಮ್ಮನಿಮ್ಮ ಮನೆಗಳಲ್ಲಿ ಸಮರ್ಪಕವಾಗಿ ಆಗುತ್ತಿದೆಯೋ ಇಲ್ಲವೋ ಎಂದು ನೋಡಿದಾಗ ಇಲ್ಲ ಎಂಬ ಉತ್ತರ ದೊರಕುವ ಸಾಧ್ಯತೆಯೇ ಹೆಚ್ಚು. ಗಣಕಗಳ ತಾಂತ್ರಿಕ ವಿನ್ಯಾಸ ಬದಲಾಗಿರುವಷ್ಟು ಅವುಗಳ ಬಳಕೆ ಹೆಚ್ಚಾಗಿಲ್ಲ. ಮುನ್ನೂರು ಮೆಗಾಹರ್ಟ್ಸ್, ಅರವತ್ತನಾಲ್ಕು ಎಂಬಿ ಮೆಮೊರಿ ಇದ್ದಾಗ ಗಣಕ ಬಳಸಿ ಏನು ಮಾಡುತ್ತಿದ್ದೆವೋ ಈಗಲೂ ಹೆಚ್ಚೂಕಡಿಮೆ ಅದೇ ಕೆಲಸ ಮಾಡುತ್ತೇವೆ, ಹೆಚ್ಚೆಂದರೆ ತಂತ್ರಾಂಶಗಳ ಆವೃತ್ತಿಗಳು ಬದಲಾಗಿವೆ ಅಷ್ಟೆ. ಹೀಗಾಗಿ ಗಣಕ ಕೆಲಸಮಾಡುತ್ತಿದ್ದಷ್ಟು ಹೊತ್ತೂ ಪ್ರಾಸೆಸರ್‌ನ ಬಳಕೆ ಬಹಳ ಕೆಳಮಟ್ಟದಲ್ಲೇ ಇರುತ್ತದೆ.

ವಿಶ್ವದಾದ್ಯಂತ ಗಣಕ ಬಳಸುವ ಬಹುತೇಕ ಮನೆಗಳ ಪರಿಸ್ಥಿತಿ ಹೆಚ್ಚೂಕಡಿಮೆ ಹೀಗೆಯೇ ಇದೆ. ಇಷ್ಟೆಲ್ಲ ಗಣಕಗಳಲ್ಲಿ ಹೀಗೆ ಉಪಯೋಗಕ್ಕೆ ಬಾರದೆ ಹೋಗುವ ಸಂಸ್ಕರಣಾ ಸಾಮರ್ಥ್ಯವನ್ನೆಲ್ಲ ಒಟ್ಟುಸೇರಿಸಿದರೆ ಅದೆಷ್ಟು ದೊಡ್ಡ ಪ್ರಮಾಣದ ಸಂಪನ್ಮೂಲ ದೊರಕಬಹುದು ಎಂಬ ಆಲೋಚನೆಯ ಪರಿಣಾಮವಾಗಿ ಹುಟ್ಟಿಕೊಂಡಿರುವ ಕ್ಷೇತ್ರವೇ 'ಗ್ರಿಡ್ ಕಂಪ್ಯೂಟಿಂಗ್'.

ಅಂತರಜಾಲ ಸಂಪರ್ಕ ಹೊಂದಿರುವ ಗಣಕಗಳು ಕೆಲಸಮಾಡುತ್ತಿರುವಾಗ ಅವುಗಳಲ್ಲಿ ಲಭ್ಯವಿರುವ ಹೆಚ್ಚುವರಿ ಸಂಸ್ಕರಣಾ ಸಾಮರ್ಥ್ಯವನ್ನು ಒಟ್ಟುಗೂಡಿಸಿ ಬಳಸಿಕೊಳ್ಳುವುದು ಗ್ರಿಡ್ ಕಂಪ್ಯೂಟಿಂಗ್‌ನ ಉದ್ದೇಶ. ದೇಶದಲ್ಲೆಲ್ಲ ಹರಡಿರುವ ವಾಹಕ ತಂತಿಗಳ ಬಲೆಯನ್ನು ಬಳಸಿ ವಿದ್ಯುತ್ ಜಾಲಗಳು (ಗ್ರಿಡ್) ಕೆಲಸಮಾಡುವಂತೆ ಇಲ್ಲಿ ವಿಶ್ವದಾದ್ಯಂತ ಅಂತರಜಾಲದ ಬಲೆಯ ಮೂಲಕ ಸಂಪರ್ಕದಲ್ಲಿರುವ ಗಣಕಗಳನ್ನು ಅತ್ಯಂತ ಸಂಕೀರ್ಣವಾದ ಲೆಕ್ಕಾಚಾರಗಳು ಹಾಗೂ ಮಾಹಿತಿ ಸಂಸ್ಕರಣೆ ಕೈಗೊಳ್ಳಲು ಬಳಸಿಕೊಳ್ಳಲಾಗುತ್ತದೆ.

ಗ್ರಿಡ್ ಕಂಪ್ಯೂಟಿಂಗ್‌ನ ಕಲ್ಪನೆ ಮೊದಲಿಗೆ ಬಂದದ್ದು ಇಯಾನ್ ಫಾಸ್ಟರ್ ಹಾಗೂ ಕಾರ್ಲ್ ಕೆಸ್ಸೆಲ್‌ಮ್ಯಾನ್ ಎಂಬ ತಂತ್ರಜ್ಞರಿಗೆ, ೧೯೯೦ರ ಸುಮಾರಿನಲ್ಲಿ. ನಂತರ ಇವರ ಜೊತೆಗೂಡಿದ ಸ್ಟೀವ್ ಟ್ಯೂಕ್ ಎಂಬಾತನ ಜೊತೆಯಲ್ಲಿ ಇವರು ಗ್ರಿಡ್ ಕಂಪ್ಯೂಟಿಂಗ್ ಕುರಿತ ಕನಸುಗಳನ್ನು ವಾಸ್ತವಕ್ಕೆ ಬದಲಿಸಲು ಶ್ರಮಿಸಿದರು. ಹೀಗಾಗಿಯೇ ಈ ತ್ರಿವಳಿಯನ್ನು ಒಟ್ಟಾಗಿ ಗ್ರಿಡ್ ಪಿತಾಮಹರೆಂದು ಗುರುತಿಸಲಾಗುತ್ತದೆ.

ಭಾರೀ ಪ್ರಮಾಣದ ಸಂಸ್ಕರಣಾ ಸಾಮರ್ಥ್ಯ ಬೇಕಾಗುವ ಅನೇಕ ವೈಜ್ಞಾನಿಕ ಚಟುವಟಿಕೆಗಳಲ್ಲಿ ಗ್ರಿಡ್ ಕಂಪ್ಯೂಟಿಂಗ್ ಬಳಕೆಯಾಗುತ್ತಿದೆ. ಇದರಿಂದಾಗಿ ಸಂಶೋಧನಾಲಯಗಳಿಗೆ ಅಪಾರ ಉಳಿತಾಯ ಆಗುತ್ತಿದೆ; ಅಷ್ಟೇ ಅಲ್ಲ, ಹೆಚ್ಚುಹೆಚ್ಚು ಆಸಕ್ತರಿಗೆ ಈ ಸಂಶೋಧನೆಗಳಲ್ಲಿ ಸಹಾಯಮಾಡಿದ ಸಂತೋಷ ಕೂಡ ಸಿಗುತ್ತಿದೆ. ಸಂಸ್ಕರಿಸಬೇಕಾದ ದತ್ತಾಂಶವನ್ನು ವಿಶ್ವದೆಲ್ಲೆಡೆಯ ಗಣಕಗಳ ನಡುವೆ ಹಂಚಲು ಬಳಸಲಾಗುತ್ತಿರುವ ಬರ್ಕ್‌ಲಿ ಓಪನ್ ಇನ್‌ಫ್ರಾಸ್ಟ್ರಕ್ಚರ್ ಫಾರ್ ನೆಟ್‌ವರ್ಕ್ ಕಂಪ್ಯೂಟಿಂಗ್ ಅಥವಾ BOINC ಎಂಬ ತಂತ್ರಜ್ಞಾನವೂ ಉಚಿತವಾಗಿ ಲಭ್ಯವಿರುವಂಥದ್ದು (ಓಪನ್ ಸೋರ್ಸ್).

ರಸಾಯನಶಾಸ್ತ್ರದಲ್ಲಿ ಉನ್ನತ ಅಧ್ಯಯನಗಳನ್ನು ಕೈಗೊಂಡಿರುವ ಫೋಲ್ಡಿಂಗ್@ಹೋಮ್, ಕ್ಷೀರಪಥ ಗೆಲಾಕ್ಸಿಯ ಕುರಿತು ಕೆಲಸಮಾಡುತ್ತಿರುವ ಮಿಲ್ಕಿವೇ@ಹೋಮ್, ಭೂಮಿಯಾಚೆಗಿನ ಬದುಕಿಗಾಗಿ ಹುಡುಕಾಟ ನಡೆಸುವ ಸೆಟಿ@ಹೋಮ್, ನಕ್ಷತ್ರಗಳ ಕುರಿತು ಸಂಶೋಧನೆ ಮಾಡುತ್ತಿರುವ ಐನ್‌ಸ್ಟೈನ್@ಹೋಮ್ ಮುಂತಾದ ಅನೇಕ ಕಾರ್ಯಕ್ರಮಗಳು ಗ್ರಿಡ್ ಕಂಪ್ಯೂಟಿಂಗ್ ಬಳಸುತ್ತಿವೆ.

ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಸಕ್ತ ಬಳಕೆದಾರರು ಅವುಗಳ ಜಾಲತಾಣಕ್ಕೆ ಹೋಗಿ ಅಗತ್ಯ ತಂತ್ರಾಂಶವನ್ನು (ಉಚಿತವಾಗಿ) ಪಡೆದುಕೊಂಡು ತಮ್ಮ ಗಣಕದಲ್ಲಿ ಅನುಸ್ಥಾಪಿಸಿಕೊಳ್ಳಬೇಕಾಗುತ್ತದೆ. ಬಳಕೆದಾರರ ಗಣಕ ತನ್ನ ಪೂರ್ಣ ಸಂಸ್ಕರಣಾ ಸಾಮರ್ಥ್ಯವನ್ನು ಬಳಸುತ್ತಿಲ್ಲದ ಸಂದರ್ಭಗಳಲ್ಲಿ ಆ ತಂತ್ರಾಂಶ ತನಗೆ ಬೇಕಾದ ಲೆಕ್ಕಾಚಾರ ಮಾಡಿಕೊಳ್ಳುತ್ತದೆ; ಸಂಸ್ಕರಿಸಬೇಕಾದ ದತ್ತಾಂಶ ಪಡೆದುಕೊಳ್ಳಲು, ಸಂಸ್ಕರಿಸಿದ ನಂತರ ದೊರೆತ ಮಾಹಿತಿಯನ್ನು ತಿರುಗಿ ಕಳುಹಿಸಲು ಅಂತರಜಾಲ ಸಂಪರ್ಕ ಇರಬೇಕಾದ್ದು ಕಡ್ಡಾಯ.

ಮುಂಬರುವ ದಿನಗಳಲ್ಲಿ ವಿಜ್ಞಾನ ಪ್ರಪಂಚಕ್ಕೆ ಭಾರೀ ಕೊಡುಗೆ ನೀಡಲಿದೆಯೆಂದು ನಿರೀಕ್ಷಿಸಲಾಗಿರುವ ಗ್ರಿಡ್ ಕಂಪ್ಯೂಟಿಂಗ್‌ನ ಬಗೆಗೆ ಭಾರತದಲ್ಲೂ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಕೇಂದ್ರ ಸರ್ಕಾರದ ನೆರವು ಹಾಗೂ ಸಿ-ಡ್ಯಾಕ್ ಸಂಸ್ಥೆಯ ನೇತೃತ್ವದಲ್ಲಿ ರೂಪುಗೊಂಡಿರುವ 'ಗರುಡ' ಭಾರತದ ಮೊದಲ ಕಂಪ್ಯೂಟರ್ ಗ್ರಿಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತ ಹಾಗೂ ಯುರೋಪಿನ ಸಂಶೋಧನಾಲಯಗಳ ನಡುವೆ ಸಂಪರ್ಕ ಕಲ್ಪಿಸುವ ಇಯು-ಇಂಡಿಯಾ ಗ್ರಿಡ್ ಕೂಡ ತನ್ನ ಕೆಲಸ ಪ್ರಾರಂಭಿಸಿದೆ.

ಡಿಸೆಂಬರ್ ೨೧, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಡಿಸೆಂಬರ್ 14, 2010

ಸ್ಪಾಮ್ ಎಂಬ ಇಮೇಲ್ ಕಸ

ಟಿ ಜಿ ಶ್ರೀನಿಧಿ

ಈಚೆಗೆ ಅಮೆರಿಕಾದ ಎಫ್‌ಬಿಐ ರಷ್ಯಾದ ಯುವಕನೊಬ್ಬನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿತು. ಓಲೆಗ್ ನಿಕೋಲ್ಯಾಂಕೋ ಎಂಬ ಇಪ್ಪತ್ತಮೂರು ವರ್ಷದ ಈ ಯುವಕನ ಮೇಲೆ ಹೊರಿಸಲಾಗಿರುವ ಆರೋಪಗಳು ಸಾಬೀತಾದರೆ ಕನಿಷ್ಟ ಮೂರು ವರ್ಷ ಜೈಲುಶಿಕ್ಷೆಯ ಜೊತೆಗೆ ಎರಡೂವರೆ ಲಕ್ಷ ಡಾಲರುಗಳಷ್ಟು ದಂಡವನ್ನೂ ತೆರಬೇಕಾಗುತ್ತದೆ ಎಂದು ಪತ್ರಿಕಾ ವರದಿಗಳು ಹೇಳುತ್ತವೆ.

ಈತ ಎಲ್ಲೂ ಬಾಂಬ್ ಸಿಡಿಸಿಲ್ಲ, ಅಥವಾ ಇನ್ನಾವುದೇ ರೂಪದ ಭಯೋತ್ಪಾದನೆ ಮಾಡಿಲ್ಲ; ಆತನ ಮೇಲಿರುವುದು ಇಮೇಲ್ ಮೂಲಕ ಕೋಟಿಗಟ್ಟಲೆ ರದ್ದಿ ಸಂದೇಶಗಳನ್ನು ಕಳಿಸಿ ಜನರನ್ನು ವಂಚಿಸಿದ, ಹಾಗೂ ಆ ಮೂಲಕ ಅಂತರಜಾಲದ ದುರ್ಬಳಕೆ ಮಾಡಿಕೊಂಡ ಆರೋಪ. ಒಂದು ಸಮಯದಲ್ಲಿ ಅಂತರಜಾಲದ ಮೂಲಕ ಹರಿದಾಡುತ್ತಿದ್ದ ಇಮೇಲ್ ರದ್ದಿ ಸಂದೇಶಗಳಲ್ಲಿ ಮೂರನೇ ಒಂದರಷ್ಟಕ್ಕೆ ಈತನೇ ಕಾರಣನಾಗಿದ್ದನಂತೆ!

ಸ್ಪಾಮ್ ಬಂತು ಸ್ಪಾಮ್
ಇಮೇಲ್ ಮಾಧ್ಯಮದ ಮೂಲಕ ಅನಗತ್ಯ ಮಾಹಿತಿಯನ್ನು ಬಲವಂತವಾಗಿ ಹೊತ್ತು ತರುವ ಇಂತಹ ರದ್ದಿ ಸಂದೇಶಗಳ ಹೆಸರೇ ಸ್ಪಾಮ್.

ಲೈಂಗಿಕ ಶಕ್ತಿ ಹೆಚ್ಚಿಸುವ ಮಾಯಾ ಔಷಧಿ, ರೋಲೆಕ್ಸ್‌ನಂತೆಯೇ ಕಾಣುವ ನಕಲಿ ಕೈಗಡಿಯಾರ, ಸಾವಿರದೊಂದು ಬಗೆಯ ಹೊಸರುಚಿ ಕಲಿಸಿಕೊಡುವ ಸಿ.ಡಿ., ಸುಲಭವಾಗಿ ದುಡ್ಡುಮಾಡುವ ವಿಧಾನ ಮೊದಲಾದ ವಿವಿಧ ಬಗೆಯ ಜಾಹೀರಾತುಗಳನ್ನು ನಾವು ಸ್ಪಾಮ್ ಸಂದೇಶಗಳಲ್ಲಿ ಕಾಣಬಹುದು. ವೈದ್ಯರ ಸಲಹೆಯಿಲ್ಲದೆ ಮಾರಾಟ ಮಾಡಬಾರದಾದ ಔಷಧಗಳನ್ನು (ಪ್ರಿಸ್ಕ್ರಿಪ್ಷನ್ ಡ್ರಗ್ಸ್) ಅನಧಿಕೃತವಾಗಿ ಮಾರುವವರ ದಂಧೆಗಂತೂ ಸ್ಪಾಮ್ ಸಂದೇಶಗಳೇ ಜೀವಾಳ.

ಭಾರೀ ಮೊತ್ತದ ಹಣದ ಆಮಿಷ ಒಡ್ಡಿ ಜನರನ್ನು ವಂಚಿಸುವವರು ಕೂಡ ಸ್ಪಾಮ್ ಸಂದೇಶಗಳನ್ನೇ ಬಳಸುತ್ತಾರೆ. ನನ್ನ ಬಳಿ ಅದೆಷ್ಟೋ ಲಕ್ಷ ಡಾಲರ್‌ಗಳಷ್ಟು ಕಪ್ಪು ಹಣ ಇದೆ; ಅದನ್ನು ನನ್ನ ದೇಶದಿಂದ ಹೊರಕ್ಕೆ ತರಲು ಸಹಾಯ ಮಾಡಿದರೆ ನಿನಗೆ ಅದರಲ್ಲಿ ಅರ್ಧಪಾಲು ಕೊಡುತ್ತೇನೆ ಎಂದೋ, ನಿನಗೆ ನಮ್ಮ ಸಂಸ್ಥೆ ನಡೆಸುವ ಲಾಟರಿಯಲ್ಲಿ ಲಕ್ಷಾಂತರ ಡಾಲರುಗಳ ಬಹುಮಾನ ಬಂದಿದೆ ಎಂದೋ ಅಥವಾ ನಿನಗೆ ವಿದೇಶದಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದೋ ಹೇಳುವ ಸ್ಪಾಮ್ ಸಂದೇಶಗಳು ಇಂತಹ ವಂಚನೆಗಳಿಗೆ ನಾಂದಿಹಾಡುತ್ತವೆ.

ನಕಲಿ ಇಮೇಲ್ ಹಾಗೂ ಜಾಲತಾಣಗಳ ಸಹಾಯದಿಂದ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ ಫಿಶಿಂಗ್ ಹಗರಣದಲ್ಲೂ ಸ್ಪಾಮ್ ಸಂದೇಶಗಳು ಬಳಕೆಯಾಗುತ್ತವೆ. ಸಾಕಷ್ಟು ನೈಜವಾಗಿಯೇ ತೋರುವ ಈ ಸಂದೇಶಗಳು ಸಾಮಾನ್ಯವಾಗಿ ಬೇರೆಬೇರೆ ಬ್ಯಾಂಕುಗಳ ಹೆಸರಿನಲ್ಲಿ ಆಗಿಂದಾಗ್ಗೆ ಬರುತ್ತಿರುತ್ತವೆ. ಬ್ಯಾಂಕಿನ ಹೆಸರು ಹೇಳಿ ನಂಬಿಸಿ ಬ್ಯಾಂಕ್ ಖಾತೆಯ ಅಥವಾ ಕ್ರೆಡಿಟ್ ಕಾರ್ಡಿನ ವಿವರಗಳನ್ನು ಕದಿಯುವುದು ಇಂತಹ ನಕಲಿ ಸಂದೇಶಗಳ ಉದ್ದೇಶವಾಗಿರುತ್ತದೆ. ಇದೇ ರೀತಿಯಲ್ಲಿ ಇಮೇಲ್ ಖಾತೆಯ ಪಾಸ್‌ವರ್ಡ್ ಕದ್ದು ಅದನ್ನು ದುರ್ಬಳಕೆ ಮಾಡಿಕೊಂಡ ಉದಾಹರಣೆಗಳೂ ಇವೆ.

ಬಾಟ್ ಮತ್ತು ಬಾಟ್‌ನೆಟ್
ವಿಶ್ವದಾದ್ಯಂತ ಹರಿದಾಡುವ ಸ್ಪಾಮ್ ಸಂದೇಶಗಳಲ್ಲಿ ದೊಡ್ಡ ಪಾಲು ನಮ್ಮನಿಮ್ಮಂಥ ಸಾಮಾನ್ಯ ಬಳಕೆದಾರರ ಗಣಕಗಳಿಂದ ಬರುತ್ತಿದೆಯಂತೆ. ಗೂಢಚಾರಿ ತಂತ್ರಾಂಶಗಳ ಮೂಲಕ ಈ ಗಣಕಗಳನ್ನು 'ಹೈಜಾಕ್' ಮಾಡುವ ಹ್ಯಾಕರ್‌ಗಳು ಅವನ್ನು ಸ್ಪಾಮ್ ಸಂದೇಶಗಳ ರವಾನೆಗಾಗಿ ಬಳಸುತ್ತಾರೆ.

ಯಾವುದೋ ಉಪಯುಕ್ತ ತಂತ್ರಾಂಶದ ಸೋಗಿನಲ್ಲಿ ಗಣಕವನ್ನು ಪ್ರವೇಶಿಸುವ ಇಂತಹ ತಂತ್ರಾಂಶ ಗಣಕದ ಕಾರ್ಯಾಚರಣ ವ್ಯವಸ್ಥೆಗೆ ಅಂಟಿಕೊಳ್ಳುತ್ತದೆ. ಪ್ರತಿ ಬಾರಿ ಗಣಕವನ್ನು ಚಾಲೂ ಮಾಡಿದಾಗಲೂ ಈ ತಂತ್ರಾಂಶ ಸಕ್ರಿಯವಾಗುತ್ತದೆ; ಸ್ವಇಚ್ಛೆಯಿಲ್ಲದೆಯೇ ಹ್ಯಾಕರ್‌ನ ಆದೇಶಗಳನ್ನು ಪಾಲಿಸಲು ಪ್ರಾರಂಭಿಸುವ ಗಣಕ ಹ್ಯಾಕರ್‌ನ ಅಣತಿಯಂತೆ ಸ್ಪಾಮ್ ಸಂದೇಶಗಳನ್ನು ರವಾನಿಸುತ್ತಲೇ ಹೋಗುತ್ತದೆ. ಇಂತಹ ಗಣಕಗಳು ಬೇರೊಬ್ಬರ ಆದೇಶ ಪಾಲಿಸುವ ಯಂತ್ರಮಾನವನಂತೆ (ರೋಬಾಟ್) ಕೆಲಸಮಾಡುವುದರಿಂದ ಅವುಗಳನ್ನು ಬಾಟ್‌ಗಳೆಂದು ಕರೆಯುತ್ತಾರೆ. ಬಾಟ್ ಎನ್ನುವುದು ರೋಬಾಟ್ ಎಂಬ ಹೆಸರಿನ ಅಪಭ್ರಂಶ. ಇಂತಹ ನೂರಾರು-ಸಾವಿರಾರು ಬಾಟ್‌ಗಳನ್ನು ಒಗ್ಗೂಡಿಸಿ ರಚನೆಯಾಗುವ ಜಾಲಗಳಿಗೆ 'ಬಾಟ್‌ನೆಟ್'ಗಳೆಂದು ಹೆಸರು.

ಅತ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವ ಈ ಜಾಲಗಳು ಸ್ಪಾಮ್ ಸಮಸ್ಯೆಯ ಕೇಂದ್ರಬಿಂದುಗಳೆಂದರೆ ತಪ್ಪಲ್ಲ. ಇದೀಗ ಎಫ್‌ಬಿಐ ಕೈಗೆ ಸಿಕ್ಕುಹಾಕಿಕೊಂಡಿರುವ ಓಲೆಗ್ ನಿಕೋಲ್ಯಾಂಕೋ ಕೂಡ ಇಂತಹುದೇ ಬಾಟ್‌ನೆಟ್ ಒಂದನ್ನು ನಿರ್ವಹಿಸುತ್ತಿದ್ದ. ಆತನ ಜಾಲ ದಿನಕ್ಕೆ ಹತ್ತು ಬಿಲಿಯನ್ ರದ್ದಿ ಸಂದೇಶಗಳನ್ನು ಕಳುಹಿಸಲು ಶಕ್ತವಾಗಿತ್ತು ಎಂದು ತಜ್ಞರು ಹೇಳಿದ್ದಾರೆ. ನಕಲಿ ವಾಚುಗಳು ಹಾಗೂ ಅನಧಿಕೃತ ಔಷಧಿ ಮಾರಾಟಗಾರರಿಂದ ಹಣ ಪಡೆದು ಆತ ಇಷ್ಟೆಲ್ಲ ರದ್ದಿ ಸಂದೇಶಗಳನ್ನು ಕಳುಹಿಸುತ್ತಿದ್ದನಂತೆ.

ಸ್ಪಾಮ್ ತಡೆ ಹೇಗೆ?
ಸ್ಪಾಮ್ ಕಾಟದಿಂದ ಪಾರಾಗಲು ಬಳಕೆದಾರರ ವಿವೇಚನೆಯೇ ಸೂಕ್ತ ಮಾರ್ಗ ಎನ್ನುವುದು ತಜ್ಞರ ಅಭಿಪ್ರಾಯ. ಸಂದೇಹಾಸ್ಪದ ಜಾಲತಾಣಗಳಲ್ಲಿ ನಿಮ್ಮ ಸಂಪರ್ಕ ವಿವರಗಳನ್ನು ದಾಖಲಿಸದಿರುವುದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ. ಅಂತೆಯೇ ನಂಬಲಸಾಧ್ಯವೆಂದು ತೋರುವ ಸಂದೇಶಗಳನ್ನು ಕಡ್ಡಾಯವಾಗಿ ನಂಬದಿರುವುದು ಇನ್ನೊಂದು ಅತ್ಯಗತ್ಯ ಕ್ರಮ. ಯಾವುದೋ ದೇಶದಲ್ಲಿರುವ ಯಾರೋ ನಿಮಗೆ ಕೋಟ್ಯಂತರ ರೂಪಾಯಿ ಕೊಡುತ್ತೇವೆ ಎಂದೋ ನೀವು ಕೇಳಿಲ್ಲದೆಯೇ ವಿದೇಶದಲ್ಲಿ ಉದ್ಯೋಗಾವಕಾಶ ಕೊಡುತ್ತೇವೆ ಎಂದೋ ಹೇಳಿದರೆ ಅದರಲ್ಲಿ ಖಂಡಿತಾ ಏನೋ ಮೋಸವಿರುತ್ತದೆ ಎನ್ನುವುದು ನೆನಪಿರಲಿ. ಹಾಗೆಯೇ ಯಾವುದೇ ತಾಣ ನಿಮ್ಮ ಬ್ಯಾಂಕ್, ಕ್ರೆಡಿಟ್ ಕಾರ್ಡ್ ಅಥವಾ ಇಮೇಲ್ ಖಾತೆಯ ವಿವರಗಳನ್ನು ದಾಖಲಿಸಲು ಹೇಳಿದರೆ ಎಚ್ಚರವಹಿಸಿ, ಸುಖಾಸುಮ್ಮನೆ ಯಾವ ಸಂಸ್ಥೆಯೂ ನಿಮ್ಮ ವೈಯುಕ್ತಿಕ ವಿವರಗಳನ್ನು ಕೇಳುವುದಿಲ್ಲ ಎನ್ನುವ ವಿಷಯ ಸದಾ ನಿಮ್ಮ ನೆನಪಿನಲ್ಲಿರಲಿ.

ಡಿಸೆಂಬರ್ ೧೪, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಡಿಸೆಂಬರ್ 7, 2010

ಮೌಸ್ ಪುರಾಣ

ಟಿ ಜಿ ಶ್ರೀನಿಧಿ

ಈ ವರ್ಷದ ಜುಲೈನಲ್ಲಿ ಆಪಲ್ ಸಂಸ್ಥೆ ತನ್ನ ಗಣಕಗಳ ಬಳಕೆದಾರರಿಗಾಗಿ ಮ್ಯಾಜಿಕ್ ಟ್ರ್ಯಾಕ್‌ಪಾಡ್ ಎಂಬುದೊಂದು ಹೊಸ ಸಾಧನವನ್ನು ಪರಿಚಯಿಸಿತು. ಲ್ಯಾಪ್‌ಟಾಪ್ ಗಣಕಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ಪರ್ಶಸಂವೇದಿ ಟಚ್‌ಪ್ಯಾಡುಗಳನ್ನು ಡೆಸ್ಕ್‌ಟಾಪ್‌ಗಳಲ್ಲೂ ಬಳಸುವಂತೆ ಮಾಡುವ ಪ್ರಯತ್ನ ಇದು. ಕೀಬೋರ್ಡ್ ಪಕ್ಕದಲ್ಲಿ ಇಟ್ಟುಕೊಳ್ಳುವ ಈ ಪುಟ್ಟ ಗಾಜಿನ ತುಂಡಿನ ಮೇಲೆ ಬೆರಳುಗಳನ್ನು ಓಡಾಡಿಸುವ ಮೂಲಕ - ಥೇಟ್ ಟಚ್ ಸ್ಕ್ರೀನ್ ಮೊಬೈಲ್‌ನಂತೆಯೇ - ಗಣಕವನ್ನು ನಿಯಂತ್ರಿಸುವುದು ಸಾಧ್ಯ. ಕ್ಲಿಕ್ ಮಾಡುವುದು, ಸ್ಕ್ರಾಲ್ ಮಾಡುವುದು, ಪರದೆಯ ಮೇಲಿನ ಚಿತ್ರವನ್ನು ಹೇಗೆ ಬೇಕೋ ಹಾಗೆ ತಿರುಗಿಸುವುದು, ಇ-ಪುಸ್ತಕದ ಪುಟಗಳನ್ನು ಮಗುಚುವುದು - ಇವೆಲ್ಲ ಬೆರಳುಗಳ ಚಲನೆಯಿಂದಲೇ ಸಾಧ್ಯವಾಗುವಾಗ ಮೌಸ್‌ನ ಅಗತ್ಯವೇ ಇಲ್ಲ!

ಹೀಗಾಗಿಯೇ ಮ್ಯಾಜಿಕ್ ಟ್ರ್ಯಾಕ್‌ಪ್ಯಾಡ್‌ನ ಜೊತೆಗೆ ಹಳೆಯದೊಂದು ಪ್ರಶ್ನೆಯೂ ಗಣಕ ಲೋಕದತ್ತ ಮತ್ತೊಮ್ಮೆ ಹರಿದುಬಂತು - "ಕಂಪ್ಯೂಟರ್ ಮೌಸ್‌ಗೆ ವಿದಾಯ ಹೇಳುವ ಕಾಲ ಸಮೀಪಿಸಿದೆಯೆ?

ಇಲಿ ಇತಿಹಾಸ
ವಿಶ್ವದ ಗಣಕ ಬಳಕೆದಾರರ ಅಚ್ಚುಮೆಚ್ಚಿನ ಸಂಗಾತಿಯಾಗಿ ಸಾಗಿಬಂದಿರುವ ಸಾಧನ ಕಂಪ್ಯೂಟರ್ ಮೌಸ್. ಗಣಕ ಬಳಸಬೇಕಾದರೆ ಮೌಸ್ ಬೇಕೇಬೇಕು ಎನ್ನುವಷ್ಟರ ಮಟ್ಟದ್ದು ಈ ಸಾಧನದ ಜನಪ್ರಿಯತೆ. ನಾಲ್ಕು ದಶಕಗಳ ಹಿಂದೆ ಬಳಕೆಗೆ ಬಂದ ಈ ಸಾಧನದ ಸೃಷ್ಟಿ ಪ್ರಾಯಶಃ ಗಣಕ ಜಗತ್ತಿನ ಅತ್ಯಂತ ಪ್ರಮುಖ ಸಾಧನೆಗಳಲ್ಲೊಂದು.

ಕಂಪ್ಯೂಟರ್ ಮೌಸ್‌ನ ಇತಿಹಾಸ ಶುರುವಾಗುವುದು ೧೯೬೮ರಲ್ಲಿ. ಆಗಿನ್ನೂ ಕಂಪ್ಯೂಟರ್ ತಂತ್ರಜ್ಞಾನ ನಿಧಾನವಾಗಿ ಅಭಿವೃದ್ಧಿ ಹೊಂದುತ್ತಿತ್ತು. ಆ ವರ್ಷ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನಡೆದ ಕಂಪ್ಯೂಟರ್ ತಂತ್ರಜ್ಞಾನ ಸಮ್ಮೇಳನದಲ್ಲಿ ಡಗ್ಲಾಸ್ ಎಂಗೆಲ್‌ಬಾರ್ಟ್ ಎಂಬಾತ 'ಎಕ್ಸ್-ವೈ ಪೊಸಿಷನ್ ಇಂಡಿಕೇಟರ್ ಫಾರ್ ಎ ಡಿಸ್ಪ್ಲೇ ಸಿಸ್ಟಮ್' ಎಂಬ ಸಾಧನವನ್ನು ಪ್ರದರ್ಶಿಸಿದ. ಇದೇ ಇಂದಿನ ಗಣಕಗಳ ಜೀವಾಳವಾಗಿರುವ ಮೌಸ್‌ನ ಪೂರ್ವಜ.

ಎಂಗೆಲ್‌ಬಾರ್ಟ್‌ನ ಮೊದಲ ಮೌಸ್ ಮರದಿಂದ ತಯಾರಿಸಿದ್ದಾಗಿತ್ತು. ಆತನ ಸಹಚರ ಬಿಲ್ ಇಂಗ್ಲಿಷ್ ಎಂಬಾತ ಇದನ್ನು ನಿರ್ಮಿಸಿದ್ದ. ಈ ಸಾಧನದ ತಳದಲ್ಲಿ ಎರಡು ಗಾಲಿಗಳಿದ್ದರೆ, ಮೇಲ್ಭಾಗದಲ್ಲಿ ಒಂದೇ ಒಂದು ಕೆಂಪು ಬಣ್ಣದ ಗುಂಡಿ ಇತ್ತು. ಎಂಗೆಲ್‌ಬಾರ್ಟ್‌ನ ಸಹೋದ್ಯೋಗಿಗಳಿಗೆ ಈ ವಿಚಿತ್ರ ಯಂತ್ರ ಇಲಿಯಂತೆ ಕಂಡಿದ್ದರಿಂದ ಅವರು ಅದನ್ನು ಮೌಸ್ ಎಂದು ಕರೆದರು ಎನ್ನುವುದು ಪ್ರತೀತಿ.

ಇದೇ ಎಂಗೆಲ್‌ಬಾರ್ಟ್ ಮುಂದೆ ಚಿತ್ರಾತ್ಮಕ ಸಂಪರ್ಕ ಸಾಧನ - ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್ (ಜಿಯುಐ) - ಅನ್ನೂ ಸೃಷ್ಟಿಸಿದ. ಪಠ್ಯರೂಪದ ಆದೇಶಗಳ ಬದಲಿಗೆ ಮೌಸ್ ಕ್ಲಿಕ್‌ಗಳಿಂದ ಗಣಕಕ್ಕೆ ಆದೇಶ ನೀಡುವುದು ಈ ವ್ಯವಸ್ಥೆಯಿಂದಾಗಿ ಸಾಧ್ಯವಾಯಿತು. ಈ ವ್ಯವಸ್ಥೆಯನ್ನು ಆಧರಿಸಿ ರೂಪಗೊಂಡ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆ ಗಣಕಗಳ ಬಳಕೆಯಲ್ಲಿ ಹೊಸದೊಂದು ಶಕೆಯನ್ನೇ ಪ್ರಾರಂಭಿಸಿತು. ಗಣಕಗಳಲ್ಲಿ ಚಿತ್ರಾತ್ಮಕ ಸಂಪರ್ಕ ಸಾಧನ ಹೊಂದಿರುವ ತಂತ್ರಾಂಶಗಳ ಬಳಕೆ ಹೆಚ್ಚುತ್ತಿದ್ದಂತೆ ಮೌಸ್‌ನ ಜನಪ್ರಿಯತೆಯೂ ಹೆಚ್ಚುತ್ತಾ ಹೋಯಿತು.

ಮೌಸ್ ಬದಲು ನೌಸ್
ಈಚಿನ ವರ್ಷಗಳಲ್ಲಿ ಹೊಸ ತಂತ್ರಜ್ಞಾನಗಳು ಅಭಿವೃದ್ಧಿ ಹೊಂದಿದಂತೆ ಕಂಪ್ಯೂಟರ್ ಮೌಸ್‌ಗೆ ಹಲವಾರು ಬದಲಿಗಳು ತಯಾರಾಗಿವೆ. ಸ್ಪರ್ಷವನ್ನು ಗ್ರಹಿಸಿ ಕೆಲಸಮಾಡುವ ಟಚ್ ಸ್ಕ್ರೀನ್ ತಂತ್ರಜ್ಞಾನವಂತೂ ಬಹಳ ಸಾಮಾನ್ಯವಾಗಿಹೋಗಿದೆ: ಮೊಬೈಲ್ ದೂರವಾಣಿ, ಎಟಿಎಂಗಳಿಂದ ಪ್ರಾರಂಭಿಸಿ ಗಣಕದ ಮಾನಿಟರ್‌ವರೆಗೆ ಎಲ್ಲೆಲ್ಲೂ ಟಚ್‌ಸ್ಕ್ರೀನ್ ಭರಾಟೆ ಕಾಣಸಿಗುತ್ತಿದೆ.

ಬಳಕೆದಾರರ ಮುಖಭಾವ, ಕಣ್ಣಿನ ದೃಷ್ಟಿ, ಹಾವಭಾವಗಳನ್ನು ಗ್ರಹಿಸಿ ಕೆಲಸಮಾಡುವ ಸಾಧನಗಳೂ ತಯಾರಾಗುತ್ತಿವೆ. ಗಣಕದ ಮುಂದೆ ಕುಳಿತ ಬಳಕೆದಾರನ ಮೂಗಿನ ಚಲನೆಯನ್ನು ಕ್ಯಾಮೆರಾ ಮೂಲಕ ಗಮನಿಸಿಕೊಂಡು ಅದಕ್ಕೆ ತಕ್ಕಂತೆ ಕೆಲಸಮಾಡುವ 'ನೌಸ್' ಎಂಬ ವಿಚಿತ್ರ ಸಾಧನ ಕೂಡ ಇದೆ - ನೋಸ್ ಬಳಸಿ ಉಪಯೋಗಿಸುವ ಮೌಸ್ ಇದು. ಬಳಕೆದಾರರ ಮೂಗು ಹೇಗೆಲ್ಲ ಚಲಿಸುತ್ತದೋ ಪರದೆಯ ಮೇಲಿನ ಮೌಸ್ ಪಾಯಿಂಟರ್ ಕೂಡ ಹಾಗೆಯೇ ಓಡಾಡುತ್ತದೆ. ಕ್ಲಿಕ್ ಮಾಡಲು ಕಣ್ಣು ಮಿಟುಕಿಸಿದರೆ ಸಾಕು!

ದಿನೇದಿನೇ ಬೆಳೆಯುತ್ತಿರುವ ಕಂಪ್ಯೂಟರ್ ಗೇಮ್ಸ್ ಮಾರುಕಟ್ಟೆ ಮತ್ತಷ್ಟು ಹೊಸ ಪ್ರಯೋಗಗಳಿಗೆ ಕೈಹಾಕಿದೆ. ಕೀಬೋರ್ಡ್, ಜಾಯ್‌ಸ್ಟಿಕ್ ಎಲ್ಲ ಬಿಟ್ಟು ಪುಟ್ಟದೊಂದು ಉಪಕರಣ ಹಿಡಿದುಕೊಂಡು ಕೈಯನ್ನು ಆಚೀಚೆ ಬೀಸುವ ಮೂಲಕವೇ ಆಟವನ್ನು ನಿಯಂತ್ರಿಸಲು ಅನುವುಮಾಡಿಕೊಟ್ಟ 'ನಿಂಟೆಂಡೋ ವೀ' ಈಗಾಗಲೇ ಅಪಾರ ಜನಪ್ರಿಯತೆ ಗಳಿಸಿದೆ. ಮೊಬೈಲ್‌ನಲ್ಲೂ ಅಷ್ಟೆ, ಚಲನೆಯನ್ನು ಪತ್ತೆಮಾಡುವ (ಮೋಷನ್ ಡಿಟೆಕ್ಷನ್) ತಂತ್ರಜ್ಞಾನದಿಂದಾಗಿ ಮೊಬೈಲ್ ದೂರವಾಣಿಯನ್ನು ಆಚೀಚೆ ಅಲುಗಾಡಿಸುವ ಮೂಲಕವೇ ಆಟವಾಡುವುದು ಸಾಧ್ಯವಾಗಿದೆ.

ಆಲೋಚನೆಗಳನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ವರ್ತಿಸುವ ಉಪಕರಣಗಳೂ ಇಷ್ಟರಲ್ಲೇ ತಯಾರಾಗಲಿವೆ ಎಂಬ ಸುದ್ದಿ ಕೂಡ ಇದೆ.

ಇವೆಲ್ಲ ಘಟನೆಗಳು ಮೌಸ್‌ನ ಅಂತ್ಯಕಾಲ ಸಮೀಪಿಸಿರುವುದರ ಸೂಚನೆಗಳು ಎಂದು ತಜ್ಞರು ಹೇಳುತ್ತಾರೆ. ಕಳೆದ ಐದಾರು ವರ್ಷಗಳಲ್ಲಿ ಕಾಣದಂತೆ ಮಾಯವಾದ ಫ್ಲಾಪಿಗಳ ಹಾಗೆಯೇ ಮೌಸ್ ಕೂಡ ಮುಂಬರುವ ವರ್ಷಗಳಲ್ಲಿ ಅಪರೂಪವಾಗಲಿದೆ ಎನ್ನುವುದು ಅವರ ಅಭಿಪ್ರಾಯ.

ಡಿಸೆಂಬರ್ ೭, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ
badge