ಟಿ ಜಿ ಶ್ರೀನಿಧಿ
ಕಳೆದ ದಶಕದಲ್ಲಿ ಗಣಕಗಳ ಸಂಸ್ಕರಣಾ ಸಾಮರ್ಥ್ಯದಲ್ಲಿ ಆಗಿರುವ ಬದಲಾವಣೆ ಅಭೂತಪೂರ್ವವಾದದ್ದು. ನೂರಿನ್ನೂರು ಮೆಗಾಹರ್ಟ್ಸ್ ವೇಗದ ಪ್ರಾಸೆಸರ್, ಕೆಲವು ನೂರು ಎಂಬಿಗಳಷ್ಟು ರ್‍ಯಾಮ್ - ಏಳೆಂಟು ವರ್ಷಗಳ ಹಿಂದಿನ ಗಣಕಗಳಲ್ಲಿ ಇಷ್ಟೇ ಸಾಮರ್ಥ್ಯ ಇರುತ್ತಿದ್ದದ್ದು. ಆದರೆ ಈಗ? ಪ್ರಾಸೆಸರ್‌ಗಳ ವೇಗ ಗಿಗಾಹರ್ಟ್ಸ್ ತಲುಪಿ ಎಷ್ಟೋ ಕಾಲವಾಗಿದೆ, ಒಂದೆರಡು ಜಿಬಿಗಿಂತ ಕಡಿಮೆ ರ್‍ಯಾಮ್ ಇರುವ ಗಣಕ ಹುಡುಕಿದರೂ ಸಿಗುವುದು ಕಷ್ಟ.
ಆದರೆ ಇಷ್ಟು ದೊಡ್ಡ ಸಂಸ್ಕರಣಾ ಸಾಮರ್ಥ್ಯದ ಬಳಕೆ ನಮ್ಮನಿಮ್ಮ ಮನೆಗಳಲ್ಲಿ ಸಮರ್ಪಕವಾಗಿ ಆಗುತ್ತಿದೆಯೋ ಇಲ್ಲವೋ ಎಂದು ನೋಡಿದಾಗ ಇಲ್ಲ ಎಂಬ ಉತ್ತರ ದೊರಕುವ ಸಾಧ್ಯತೆಯೇ ಹೆಚ್ಚು. ಗಣಕಗಳ ತಾಂತ್ರಿಕ ವಿನ್ಯಾಸ ಬದಲಾಗಿರುವಷ್ಟು ಅವುಗಳ ಬಳಕೆ ಹೆಚ್ಚಾಗಿಲ್ಲ. ಮುನ್ನೂರು ಮೆಗಾಹರ್ಟ್ಸ್, ಅರವತ್ತನಾಲ್ಕು ಎಂಬಿ ಮೆಮೊರಿ ಇದ್ದಾಗ ಗಣಕ ಬಳಸಿ ಏನು ಮಾಡುತ್ತಿದ್ದೆವೋ ಈಗಲೂ ಹೆಚ್ಚೂಕಡಿಮೆ ಅದೇ ಕೆಲಸ ಮಾಡುತ್ತೇವೆ, ಹೆಚ್ಚೆಂದರೆ ತಂತ್ರಾಂಶಗಳ ಆವೃತ್ತಿಗಳು ಬದಲಾಗಿವೆ ಅಷ್ಟೆ. ಹೀಗಾಗಿ ಗಣಕ ಕೆಲಸಮಾಡುತ್ತಿದ್ದಷ್ಟು ಹೊತ್ತೂ ಪ್ರಾಸೆಸರ್‌ನ ಬಳಕೆ ಬಹಳ ಕೆಳಮಟ್ಟದಲ್ಲೇ ಇರುತ್ತದೆ.
ವಿಶ್ವದಾದ್ಯಂತ ಗಣಕ ಬಳಸುವ ಬಹುತೇಕ ಮನೆಗಳ ಪರಿಸ್ಥಿತಿ ಹೆಚ್ಚೂಕಡಿಮೆ ಹೀಗೆಯೇ ಇದೆ. ಇಷ್ಟೆಲ್ಲ ಗಣಕಗಳಲ್ಲಿ ಹೀಗೆ ಉಪಯೋಗಕ್ಕೆ ಬಾರದೆ ಹೋಗುವ ಸಂಸ್ಕರಣಾ ಸಾಮರ್ಥ್ಯವನ್ನೆಲ್ಲ ಒಟ್ಟುಸೇರಿಸಿದರೆ ಅದೆಷ್ಟು ದೊಡ್ಡ ಪ್ರಮಾಣದ ಸಂಪನ್ಮೂಲ ದೊರಕಬಹುದು ಎಂಬ ಆಲೋಚನೆಯ ಪರಿಣಾಮವಾಗಿ ಹುಟ್ಟಿಕೊಂಡಿರುವ ಕ್ಷೇತ್ರವೇ 'ಗ್ರಿಡ್ ಕಂಪ್ಯೂಟಿಂಗ್'.
ಅಂತರಜಾಲ ಸಂಪರ್ಕ ಹೊಂದಿರುವ ಗಣಕಗಳು ಕೆಲಸಮಾಡುತ್ತಿರುವಾಗ ಅವುಗಳಲ್ಲಿ ಲಭ್ಯವಿರುವ ಹೆಚ್ಚುವರಿ ಸಂಸ್ಕರಣಾ ಸಾಮರ್ಥ್ಯವನ್ನು ಒಟ್ಟುಗೂಡಿಸಿ ಬಳಸಿಕೊಳ್ಳುವುದು ಗ್ರಿಡ್ ಕಂಪ್ಯೂಟಿಂಗ್‌ನ ಉದ್ದೇಶ. ದೇಶದಲ್ಲೆಲ್ಲ ಹರಡಿರುವ ವಾಹಕ ತಂತಿಗಳ ಬಲೆಯನ್ನು ಬಳಸಿ ವಿದ್ಯುತ್ ಜಾಲಗಳು (ಗ್ರಿಡ್) ಕೆಲಸಮಾಡುವಂತೆ ಇಲ್ಲಿ ವಿಶ್ವದಾದ್ಯಂತ ಅಂತರಜಾಲದ ಬಲೆಯ ಮೂಲಕ ಸಂಪರ್ಕದಲ್ಲಿರುವ ಗಣಕಗಳನ್ನು ಅತ್ಯಂತ ಸಂಕೀರ್ಣವಾದ ಲೆಕ್ಕಾಚಾರಗಳು ಹಾಗೂ ಮಾಹಿತಿ ಸಂಸ್ಕರಣೆ ಕೈಗೊಳ್ಳಲು ಬಳಸಿಕೊಳ್ಳಲಾಗುತ್ತದೆ.
ಗ್ರಿಡ್ ಕಂಪ್ಯೂಟಿಂಗ್‌ನ ಕಲ್ಪನೆ ಮೊದಲಿಗೆ ಬಂದದ್ದು ಇಯಾನ್ ಫಾಸ್ಟರ್ ಹಾಗೂ ಕಾರ್ಲ್ ಕೆಸ್ಸೆಲ್‌ಮ್ಯಾನ್ ಎಂಬ ತಂತ್ರಜ್ಞರಿಗೆ, ೧೯೯೦ರ ಸುಮಾರಿನಲ್ಲಿ. ನಂತರ ಇವರ ಜೊತೆಗೂಡಿದ ಸ್ಟೀವ್ ಟ್ಯೂಕ್ ಎಂಬಾತನ ಜೊತೆಯಲ್ಲಿ ಇವರು ಗ್ರಿಡ್ ಕಂಪ್ಯೂಟಿಂಗ್ ಕುರಿತ ಕನಸುಗಳನ್ನು ವಾಸ್ತವಕ್ಕೆ ಬದಲಿಸಲು ಶ್ರಮಿಸಿದರು. ಹೀಗಾಗಿಯೇ ಈ ತ್ರಿವಳಿಯನ್ನು ಒಟ್ಟಾಗಿ ಗ್ರಿಡ್ ಪಿತಾಮಹರೆಂದು ಗುರುತಿಸಲಾಗುತ್ತದೆ.
ಭಾರೀ ಪ್ರಮಾಣದ ಸಂಸ್ಕರಣಾ ಸಾಮರ್ಥ್ಯ ಬೇಕಾಗುವ ಅನೇಕ ವೈಜ್ಞಾನಿಕ ಚಟುವಟಿಕೆಗಳಲ್ಲಿ ಗ್ರಿಡ್ ಕಂಪ್ಯೂಟಿಂಗ್ ಬಳಕೆಯಾಗುತ್ತಿದೆ. ಇದರಿಂದಾಗಿ ಸಂಶೋಧನಾಲಯಗಳಿಗೆ ಅಪಾರ ಉಳಿತಾಯ ಆಗುತ್ತಿದೆ; ಅಷ್ಟೇ ಅಲ್ಲ, ಹೆಚ್ಚುಹೆಚ್ಚು ಆಸಕ್ತರಿಗೆ ಈ ಸಂಶೋಧನೆಗಳಲ್ಲಿ ಸಹಾಯಮಾಡಿದ ಸಂತೋಷ ಕೂಡ ಸಿಗುತ್ತಿದೆ. ಸಂಸ್ಕರಿಸಬೇಕಾದ ದತ್ತಾಂಶವನ್ನು ವಿಶ್ವದೆಲ್ಲೆಡೆಯ ಗಣಕಗಳ ನಡುವೆ ಹಂಚಲು ಬಳಸಲಾಗುತ್ತಿರುವ ಬರ್ಕ್‌ಲಿ ಓಪನ್ ಇನ್‌ಫ್ರಾಸ್ಟ್ರಕ್ಚರ್ ಫಾರ್ ನೆಟ್‌ವರ್ಕ್ ಕಂಪ್ಯೂಟಿಂಗ್ ಅಥವಾ BOINC ಎಂಬ ತಂತ್ರಜ್ಞಾನವೂ ಉಚಿತವಾಗಿ ಲಭ್ಯವಿರುವಂಥದ್ದು (ಓಪನ್ ಸೋರ್ಸ್).
ರಸಾಯನಶಾಸ್ತ್ರದಲ್ಲಿ ಉನ್ನತ ಅಧ್ಯಯನಗಳನ್ನು ಕೈಗೊಂಡಿರುವ ಫೋಲ್ಡಿಂಗ್@ಹೋಮ್, ಕ್ಷೀರಪಥ ಗೆಲಾಕ್ಸಿಯ ಕುರಿತು ಕೆಲಸಮಾಡುತ್ತಿರುವ ಮಿಲ್ಕಿವೇ@ಹೋಮ್, ಭೂಮಿಯಾಚೆಗಿನ ಬದುಕಿಗಾಗಿ ಹುಡುಕಾಟ ನಡೆಸುವ ಸೆಟಿ@ಹೋಮ್, ನಕ್ಷತ್ರಗಳ ಕುರಿತು ಸಂಶೋಧನೆ ಮಾಡುತ್ತಿರುವ ಐನ್‌ಸ್ಟೈನ್@ಹೋಮ್ ಮುಂತಾದ ಅನೇಕ ಕಾರ್ಯಕ್ರಮಗಳು ಗ್ರಿಡ್ ಕಂಪ್ಯೂಟಿಂಗ್ ಬಳಸುತ್ತಿವೆ.
ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಸಕ್ತ ಬಳಕೆದಾರರು ಅವುಗಳ ಜಾಲತಾಣಕ್ಕೆ ಹೋಗಿ ಅಗತ್ಯ ತಂತ್ರಾಂಶವನ್ನು (ಉಚಿತವಾಗಿ) ಪಡೆದುಕೊಂಡು ತಮ್ಮ ಗಣಕದಲ್ಲಿ ಅನುಸ್ಥಾಪಿಸಿಕೊಳ್ಳಬೇಕಾಗುತ್ತದೆ. ಬಳಕೆದಾರರ ಗಣಕ ತನ್ನ ಪೂರ್ಣ ಸಂಸ್ಕರಣಾ ಸಾಮರ್ಥ್ಯವನ್ನು ಬಳಸುತ್ತಿಲ್ಲದ ಸಂದರ್ಭಗಳಲ್ಲಿ ಆ ತಂತ್ರಾಂಶ ತನಗೆ ಬೇಕಾದ ಲೆಕ್ಕಾಚಾರ ಮಾಡಿಕೊಳ್ಳುತ್ತದೆ; ಸಂಸ್ಕರಿಸಬೇಕಾದ ದತ್ತಾಂಶ ಪಡೆದುಕೊಳ್ಳಲು, ಸಂಸ್ಕರಿಸಿದ ನಂತರ ದೊರೆತ ಮಾಹಿತಿಯನ್ನು ತಿರುಗಿ ಕಳುಹಿಸಲು ಅಂತರಜಾಲ ಸಂಪರ್ಕ ಇರಬೇಕಾದ್ದು ಕಡ್ಡಾಯ.
ಮುಂಬರುವ ದಿನಗಳಲ್ಲಿ ವಿಜ್ಞಾನ ಪ್ರಪಂಚಕ್ಕೆ ಭಾರೀ ಕೊಡುಗೆ ನೀಡಲಿದೆಯೆಂದು ನಿರೀಕ್ಷಿಸಲಾಗಿರುವ ಗ್ರಿಡ್ ಕಂಪ್ಯೂಟಿಂಗ್‌ನ ಬಗೆಗೆ ಭಾರತದಲ್ಲೂ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಕೇಂದ್ರ ಸರ್ಕಾರದ ನೆರವು ಹಾಗೂ ಸಿ-ಡ್ಯಾಕ್ ಸಂಸ್ಥೆಯ ನೇತೃತ್ವದಲ್ಲಿ ರೂಪುಗೊಂಡಿರುವ 'ಗರುಡ' ಭಾರತದ ಮೊದಲ ಕಂಪ್ಯೂಟರ್ ಗ್ರಿಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತ ಹಾಗೂ ಯುರೋಪಿನ ಸಂಶೋಧನಾಲಯಗಳ ನಡುವೆ ಸಂಪರ್ಕ ಕಲ್ಪಿಸುವ ಇಯು-ಇಂಡಿಯಾ ಗ್ರಿಡ್ ಕೂಡ ತನ್ನ ಕೆಲಸ ಪ್ರಾರಂಭಿಸಿದೆ.
ಡಿಸೆಂಬರ್ ೨೧, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ