ಗುರುವಾರ, ನವೆಂಬರ್ 29, 2012

'ಫ್ಲಾಪಿಯಿಂದ ಫೇಸ್‌ಬುಕ್‌ವರೆಗೆ'

ತಂತ್ರಜ್ಞಾನ ಲೇಖಕ ಶ್ರೀ ಟಿ. ಜಿ. ಶ್ರೀನಿಧಿಯವರ 'ಫ್ಲಾಪಿಯಿಂದ ಫೇಸ್‌ಬುಕ್‌ವರೆಗೆ' ಕೃತಿ ಬರುವ ಡಿಸೆಂಬರ್ ೮ರ ಶನಿವಾರ ಸಂಜೆ ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಉದಯವಾಣಿಯ 'ಜೋಶ್' ಪುರವಣಿಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಕಟವಾಗುತ್ತಿರುವ 'ವಿಜ್ಞಾಪನೆ' ಅಂಕಣದ ಆಯ್ದ ಬರೆಹಗಳನ್ನು ಈ ಕೃತಿಯಲ್ಲಿ ಸಂಕಲಿಸಲಾಗಿದೆ.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ ಗಳಿಸಿದ್ದ ಅವರ 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಕೃತಿಯ ಎರಡನೇ ಮುದ್ರಣವೂ ಅಂದೇ ಹೊರಬರುತ್ತಿದೆ.

ಆಕೃತಿ ಪುಸ್ತಕ, ಇಜ್ಞಾನ ಡಾಟ್ ಕಾಮ್ ಹಾಗೂ ಭಾರತೀ ಪ್ರಕಾಶನ - ಇವರ ಸಹಯೋಗದಲ್ಲಿ ಏರ್ಪಡಿಸಲಾಗಿರುವ ಈ ಕಾರ್ಯಕ್ರಮ ಬೆಂಗಳೂರು ರಾಜಾಜಿನಗರದ ಆಕೃತಿ ಪುಸ್ತಕ ಮಳಿಗೆಯಲ್ಲಿ ನಡೆಯಲಿದೆ.

ಇದೇ ಸಂದರ್ಭದಲ್ಲಿ 'ಕನ್ನಡ ಮತ್ತು ಕಂಪ್ಯೂಟರ್' ಎಂಬ ವಿಷಯದ ಕುರಿತು ಸಂವಾದವನ್ನೂ ಏರ್ಪಡಿಸಲಾಗಿದೆ. ಡಾ| ಯು ಬಿ ಪವನಜ, ಶ್ರೀ ಬೇಳೂರು ಸುದರ್ಶನ ಹಾಗೂ ಶ್ರೀ ಎನ್ ಎ ಎಂ ಇಸ್ಮಾಯಿಲ್ ಅವರು ಸಂವಾದದಲ್ಲಿ ಭಾಗವಹಿಸಲಿದ್ದಾರೆ.

ಇಜ್ಞಾನ ಡಾಟ್ ಕಾಮ್ ನಿಮ್ಮನ್ನು ಈ ಕಾರ್ಯಕ್ರಮಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ.

ಸ್ಥಳ: ಆಕೃತಿ ಪುಸ್ತಕ ಮಳಿಗೆ,
೩೧/೧, ೧೨ನೇ ಮುಖ್ಯರಸ್ತೆ, ೩ನೇ ಬ್ಲಾಕ್,
ರಾಜಾಜಿನಗರ, ಬೆಂಗಳೂರು ೫೬೦೦೧೦

ಸಮಯ: ಡಿಸೆಂಬರ್ ೮, ೨೦೧೨ರ ಶನಿವಾರ ಸಂಜೆ ೫ಕ್ಕೆ

ಕೃತಿಯ ಬಗ್ಗೆ...
"ಈ ಲೇಖನಗಳು ನೀಡುವ ಒಳನೋಟ ಅಪರೂಪದ್ದು. ಸಮಾಜದ ಆಗುಹೋಗುಗಳಿಗೂ, ಆ ಕಾಲದ ಬೆಳವಣಿಗೆಗಳಿಗೂ ಇರುವ ಸಂಬಂಧವನ್ನು ಶ್ರೀನಿಧಿ ಸರಳವಾಗಿ ನಿರೂಪಿಸುತ್ತಾರೆ. ಕಲಿಯುವ ಮನಸ್ಸಿದ್ದವರಿಗೆಲ್ಲ ಅವರ ಲೇಖನಗಳು ಸಂಗ್ರಾಹ್ಯವೇ. ಸಮಕಾಲೀನ ಉದಾಹರಣೆಗಳನ್ನು ಕೊಡುತ್ತಲೇ ವರ್ತಮಾನದ ಮಾಹಿತಿ ತಂತ್ರಜ್ಞಾನದ ಕತೆ ಹೇಳುತ್ತಾರೆ. ಅಂತರಜಾಲದ ಯಾವ ಪ್ರಮುಖ ಘಟನೆಗಳೂ ಅವರ ಕಣ್ಣು ತಪ್ಪಿಸಲಾಗದು! ಬಳಕೆದಾರನನ್ನೇ ಗಮನದಲ್ಲಿ ಇಟ್ಟುಕೊಂಡು ಬರೆದ ಈ ಲೇಖನಗಳನ್ನು ಖುಷಿಯಿಂದ ಓದಬಹುದು. ನಮ್ಮ ತಿಳವಳಿಕೆಯ ದಿಗಂತವನ್ನು ವಿಸ್ತರಿಸಿಕೊಳ್ಳಬಹುದು" - ಬೇಳೂರು ಸುದರ್ಶನ (ಮುನ್ನುಡಿಯಿಂದ)

ಮಂಗಳವಾರ, ನವೆಂಬರ್ 27, 2012

ಥ್ರೀಡಿ ಎಂಬ ಮಾಯಾಮಂತ್ರ


ಟಿ. ಜಿ. ಶ್ರೀನಿಧಿ

ಕೈಯಲ್ಲೊಂದು ಪುಸ್ತಕ ಹಿಡಿದುಕೊಂಡು ನೋಡಿ. ಉದ್ದ-ಅಗಲಗಳ ಜೊತೆಗೆ ಅದರ ದಪ್ಪವೂ ಒಂದು ಆಯಾಮವಾಗಿ ನಮಗೆ ಗೋಚರವಾಗುತ್ತದೆ. ಅಷ್ಟೇ ಅಲ್ಲ, ಅದು ಹಿನ್ನೆಲೆಯಲ್ಲಿರುವ ಸೋಫಾಗಿಂತ ಅದು ನಮಗೆ ಹೆಚ್ಚು ಹತ್ತಿರದಲ್ಲಿರುವುದು ಕೂಡ ಸ್ಪಷ್ಟವಾಗಿ ಕಾಣುತ್ತದೆ.

ಆದರೆ ಅದೇ ಪುಸ್ತಕದಲ್ಲಿರುವ ಯಾವುದೋ ಚಿತ್ರವನ್ನು ಗಮನಿಸಿದಾಗ ನಮಗೆ ಇಂತಹ ಅನುಭವ ಆಗುವುದಿಲ್ಲ. ಚಿತ್ರ ಅದೆಷ್ಟೇ ನೈಜವಾಗಿದ್ದರೂ ಅದಕ್ಕೆ-ಅದರಲ್ಲಿರುವ ವಸ್ತುಗಳಿಗೆ ಉದ್ದ ಅಗಲಗಳಷ್ಟೆ ಇರುತ್ತವೆ; ಆದರೆ ಅದು ನಮಗೆ ಮೂರನೆಯ ಆಯಾಮವನ್ನು ಕಟ್ಟಿಕೊಡುವುದಿಲ್ಲ.

ಇನ್ನು ಕಿಟಕಿಯಾಚೆಗಿನ ದೃಶ್ಯವನ್ನು ಗಮನಿಸಿದರೆ ಎದುರಿಗೆ ಕಾಣುವ ಮನೆ, ರಸ್ತೆಯಲ್ಲಿ ನಿಂತಿರುವ ಕಾರು, ಮರ-ಗಿಡ ಎಲ್ಲವೂ ನಮಗೆ ಮೂರು ಆಯಾಮಗಳಲ್ಲೇ ಕಾಣಸಿಗುತ್ತವೆ. ಆದರೆ ಆಕಾಶದಲ್ಲಿರುವ ಚಂದ್ರ ಹಾಗಲ್ಲ; ಗೋಡೆಯ ಮೇಲಿನ ಕ್ಯಾಲೆಂಡರಿನಂತೆ ಅಲ್ಲೂ ಕಾಣಿಸುವುದು ಎರಡೇ ಆಯಾಮಗಳು!

ಇದಕ್ಕೆಲ್ಲ ಕಾರಣ ನಮ್ಮ ಕಣ್ಣುಗಳಲ್ಲಿರುವ ವಿಶಿಷ್ಟವಾದುದೊಂದು ಸಾಮರ್ಥ್ಯ; ನಮ್ಮ ಕಣ್ಣುಗಳು ಬೆಳಕು ಹಾಗೂ ಬಣ್ಣಗಳನ್ನು ಗುರುತಿಸುತ್ತವಲ್ಲ, ಆಗ ಎಡಗಣ್ಣಿಗೆ ಕಾಣುವ ದೃಶ್ಯ ನಮ್ಮ ಬಲಗಣ್ಣಿಗೆ ಕಾಣುವುದಕ್ಕಿಂತ ಕೊಂಚ ಭಿನ್ನವಾಗಿರುತ್ತದೆ. ಇವೆರಡೂ ಪ್ರತ್ಯೇಕ ದೃಶ್ಯಗಳು ಮೆದುಳನ್ನು ತಲುಪಿ ಒಟ್ಟಾಗಿ ಸೇರಿದಾಗಲಷ್ಟೆ ನಮಗೆ ಮೂರು ಆಯಾಮಗಳ (ಥ್ರೀಡಿ) ದೃಶ್ಯ ಗೋಚರವಾಗುತ್ತದೆ.

ನೈಜ ವಸ್ತುಗಳೇನೋ ನಮಗೆ ಥ್ರೀಡಿ ದೃಶ್ಯಗಳಾಗಿ ಕಾಣಸಿಗುತ್ತವೆ, ಆದರೆ ಪುಸ್ತಕದಲ್ಲಿ ಮುದ್ರಿತವಾದ ಚಿತ್ರಕ್ಕೆ, ಪರದೆಯ ಮೇಲೆ ಕಾಣಿಸುವ ಸಿನಿಮಾಗೆ ಮೂರನೆಯ ಆಯಾಮವೇ ಇರುವುದಿಲ್ಲವಲ್ಲ?

ಮಂಗಳವಾರ, ನವೆಂಬರ್ 20, 2012

ಮೆಮೊರಿ ಕಾರ್ಡ್ ಕೈಕೊಟ್ಟಾಗ...


ಟಿ ಜಿ ಶ್ರೀನಿಧಿ

ಡಿಜಿಟಲ್ ಉತ್ಪನ್ನಗಳ ಬಳಕೆ ಜಾಸ್ತಿಯಾದಮೇಲೆ ಎಲ್ಲೆಲ್ಲಿ ನೋಡಿದರೂ ಮೆಮೊರಿ ಕಾರ್ಡುಗಳದೇ ಭರಾಟೆ. ಮೊಬೈಲ್ ಫೋನಿನಲ್ಲೂ ಮೆಮೊರಿ ಕಾರ್ಡು, ಟ್ಯಾಬ್ಲೆಟ್ಟಿನಲ್ಲೂ ಮೆಮೊರಿ ಕಾರ್ಡು, ಡಿಜಿಟಲ್ ಕ್ಯಾಮೆರಾದಲ್ಲೂ ಮೆಮೊರಿ ಕಾರ್ಡು!

ಡಿಜಿಟಲ್ ಕ್ಯಾಮೆರಾ ಉದಾಹರಣೆಯನ್ನೇ ತೆಗೆದುಕೊಂಡರೆ ಹಿಂದಿನ ಕಾಲದಲ್ಲಿ ಫಿಲಂ ರೋಲುಗಳು ಮಾಡುತ್ತಿದ್ದ ಕೆಲಸವನ್ನು ಈಗ ಮೆಮೊರಿ ಕಾರ್ಡುಗಳು ಮಾಡುತ್ತಿವೆ. ಅಷ್ಟೇ ಅಲ್ಲ, ಮೂವತ್ತಾರು ಫೋಟೋ ಮುಗಿಯುತ್ತಿದ್ದಂತೆ ಹೊಸ ರೋಲು ಹಾಕಬೇಕಾದ ಪರಿಸ್ಥಿತಿಯನ್ನೂ ಬದಲಿಸಿವೆ. ಕಾರ್ಡಿನಲ್ಲಿ ಜಾಗ ಇರುವವರೆಗೂ ಫೋಟೋ - ವೀಡಿಯೋ ತುಂಬಿಕೊಳ್ಳುವುದು, ಕಾರ್ಡು ಭರ್ತಿಯಾಗುತ್ತಿದ್ದಂತೆ ಅವನ್ನೆಲ್ಲ ಕಂಪ್ಯೂಟರಿನೊಳಗೆ ಸುರಿಯುವುದು, ಖಾಲಿಯಾದ ಕಾರ್ಡನ್ನು ಮತ್ತೆ ಬಳಸುವುದು - ಕೆಲಸ ಇಷ್ಟೇ ಸರಳ!

ಹೀಗೆ ಮೆಮೊರಿ ಕಾರ್ಡನ್ನು ಮತ್ತೆ ಮತ್ತೆ ಬಳಸುವುದು ಸುಲಭ, ನಿಜ. ಆದರೆ ಒಂದಷ್ಟು ಸಾರಿ ಈ ಪ್ರಕ್ರಿಯೆಯ ಪುನರಾವರ್ತನೆ ಆಗುತ್ತಿದ್ದಂತೆ ಕಾರ್ಡಿನ ವಿಶ್ವಾಸಾರ್ಹತೆ ನಿಧಾನಕ್ಕೆ ಕಡಿಮೆಯಾಗುತ್ತ ಬರುತ್ತದೆ. ಅದರಲ್ಲೇನೋ ಸಮಸ್ಯೆ ಕಾಣಿಸಿಕೊಳ್ಳುತ್ತದೆ, ಅಥವಾ ಒಂದು ಕಂಪ್ಯೂಟರಿನಿಂದ ಇನ್ನೊಂದಕ್ಕೆ ಓಡಾಡುವ ಭರಾಟೆಯಲ್ಲಿ ಯಾವುದೋ ಕುತಂತ್ರಾಂಶ ಕಾರ್ಡಿನೊಳಕ್ಕೆ ಬಂದು ವಕ್ಕರಿಸಿಕೊಳ್ಳುತ್ತದೆ. ಕಾರಣ ಏನೇ ಆದರೂ ಪರಿಣಾಮ ಮಾತ್ರ ಒಂದೇ: ಕಾರ್ಡನ್ನು ಕಂಪ್ಯೂಟರಿಗೆ ಜೋಡಿಸಿದಾಗ ಅದು ಕಾರ್ಡನ್ನು ಗುರುತಿಸಲು ನಿರಾಕರಿಸುತ್ತದೆ, ಕಾರ್ಡಿನಲ್ಲಿರುವ ಫೋಟೋ ಕಾರ್ಡಿನಲ್ಲೇ ಇದ್ದರೂ ಅದನ್ನು ನೋಡುವುದು, ಕಾಪಿಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ!

ಭಾನುವಾರ, ನವೆಂಬರ್ 18, 2012

'ವಿಜ್ಞಾನ' ಸಂಪುಟಗಳ ಲೋಕಾರ್ಪಣೆ

ಇಜ್ಞಾನ ವಾರ್ತೆ

ಕನ್ನಡ ವಿಜ್ಞಾನ ಸಾಹಿತ್ಯದ ಆದ್ಯ ಪ್ರವರ್ತಕರಾದ ಶ್ರೀ ಬೆಳ್ಳಾವೆ ವೆಂಕಟನಾರಣಪ್ಪ ಹಾಗೂ ಶ್ರೀ ನಂಗಪುರಂ ವೆಂಕಟೇಶಯ್ಯಂಗಾರ್‍ಯರು ೧೯೧೮-೧೯ರಷ್ಟು ಹಿಂದೆಯೇ 'ವಿಜ್ಞಾನ' ಎಂಬ ಕನ್ನಡ ಮಾಸಪತ್ರಿಕೆಯನ್ನು ಪ್ರಾರಂಭಿಸಿದ್ದರು. ಅಷ್ಟೇ ಅಲ್ಲ, ಎಲ್ಲ ಸವಾಲುಗಳನ್ನು ಎದುರಿಸಿ ಆ ಪತ್ರಿಕೆಯನ್ನು ಎರಡು ವರ್ಷಗಳ ಕಾಲ ನಡೆಸಿಯೂ ಇದ್ದರು.

ಕನ್ನಡ ವಿಜ್ಞಾನ ಸಂವಹನ ಹಾಗೂ ಪತ್ರಿಕೋದ್ಯಮ - ಎರಡೂ ಕ್ಷೇತ್ರಗಳ ಪಾಲಿಗೆ ಇಂದಿಗೂ ಅಮೂಲ್ಯ ದಾಖಲೆಗಳಾಗಿರುವ ಈ ಇಪ್ಪತ್ನಾಲ್ಕು ಸಂಚಿಕೆಗಳು ಇದೀಗ ಎರಡು ಸಂಪುಟಗಳಲ್ಲಿ ಮರುಮುದ್ರಣ ಕಾಣುತ್ತಿವೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಉದಯಭಾನು ಕಲಾಸಂಘದ ಸಹಭಾಗಿತ್ವದಲ್ಲಿ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವಿನೊಡನೆ ಸಿದ್ಧವಾಗಿರುವ ಈ ಸಂಪುಟಗಳನ್ನು ನವೆಂಬರ್ ೧೯, ೨೦೧೨ರ ಸೋಮವಾರ ಲೋಕಾರ್ಪಣೆಗೊಳಿಸಲಾಗುತ್ತಿದೆ. ಬೆಂಗಳೂರು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯಲಿರುವ ಈ ಸಮಾರಂಭದ ಸಂದರ್ಭದಲ್ಲಿ 'ವಿಜ್ಞಾನ' ಸಂಪುಟಗಳಿಗೆ ಶೇ. ೨೫ರ ರಿಯಾಯಿತಿ ನೀಡಲಾಗುವುದು. ಆಮಂತ್ರಣ ಪತ್ರಿಕೆಯನ್ನು ದೊಡ್ಡಗಾತ್ರದಲ್ಲಿ ನೋಡಲು ಪಕ್ಕದ ಚಿತ್ರದ ಮೇಲೆ ಕ್ಲಿಕ್ ಮಾಡಿ.

ಈ ಅಪೂರ್ವ ಪತ್ರಿಕೆಯ ಸಂಚಿಕೆಗಳನ್ನು ಓದಲು ನಮಗೆ ಮತ್ತೊಂದು ಅವಕಾಶ ನೀಡಿರುವ ಸಂಕಲನಕಾರರಾದ ಪ್ರೊ. ಎಚ್. ಆರ್. ರಾಮಕೃಷ್ಣರಾವ್ ಹಾಗೂ ಶ್ರೀ ಟಿ. ಆರ್. ಅನಂತರಾಮುರವರನ್ನು ಇಜ್ಞಾನ ಡಾಟ್ ಕಾಮ್ ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.

('ವಿಜ್ಞಾನ' ಪತ್ರಿಕೆಯ ಮೊದಲ ಸಂಪುಟದ ಲೇಖನಗಳನ್ನು ಸಿರಿನುಡಿ ಜಾಲತಾಣದಲ್ಲಿ ಓದಬಹುದು)

ಬುಧವಾರ, ನವೆಂಬರ್ 7, 2012

ಕಂಪ್ಯೂಟರಿಗೆ ಕನ್ನಡ ಕಲಿಸಿದ ಕತೆ


ಟಿ. ಜಿ. ಶ್ರೀನಿಧಿ

ಶ್ರೀ ಕೆ. ಪಿ. ರಾವ್
ಈಗಷ್ಟೆ ಮಾರುಕಟ್ಟೆಗೆ ಬಂದ ಹೊಸ ಮೊಬೈಲ್ ಫೋನ್ ಇರಲಿ, ಲೇಟೆಸ್ಟ್ ಟ್ಯಾಬ್ಲೆಟ್ ಕಂಪ್ಯೂಟರ್ ಇರಲಿ, ಅಥವಾ ಕಂಪ್ಯೂಟರಿನ ಯಾವುದೋ ತಂತ್ರಾಂಶವೇ ಇರಲಿ, "ಇದರಲ್ಲಿ ಕನ್ನಡ ಬಳಸಬಹುದೇ?" ಎನ್ನುವ ಪ್ರಶ್ನೆ ನಮ್ಮೆದುರು ಆಗಿಂದಾಗ್ಗೆ ಬರುತ್ತಲೇ ಇರುತ್ತದೆ. ಆದರೆ ಈ ಪ್ರಶ್ನೆ ಯಾವುದೋ ನಿರ್ದಿಷ್ಟ ಯಂತ್ರಾಂಶ ಅಥವಾ ತಂತ್ರಾಂಶಕ್ಕಷ್ಟೆ ಸೀಮಿತವಾಗಿರುತ್ತದೆ; ಏಕೆಂದರೆ ಕಂಪ್ಯೂಟರಿನಲ್ಲಿ ಕನ್ನಡ ಮೂಡುವುದು ನಮ್ಮ ಪಾಲಿಗೆ ಹೊಸ ವಿಷಯವೇನೂ ಅಲ್ಲವಲ್ಲ!

ಆದರೆ ಕೆಲ ದಶಕಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಕಂಪ್ಯೂಟರುಗಳೇ ಅಪರೂಪವಾಗಿದ್ದ ಆ ಕಾಲದಲ್ಲಿ ಕಂಪ್ಯೂಟರ್ ಬಳಸಬೇಕು ಎಂದರೆ ಇಂಗ್ಲಿಷ್ ಗೊತ್ತಿರಲೇಬೇಕು ಎನ್ನುವಂತಹ ಪರಿಸ್ಥಿತಿ ಇತ್ತು. ಆ ಫೋನಿನಲ್ಲಿ ಕನ್ನಡ ಓದಬಹುದು, ಈ ಟ್ಯಾಬ್ಲೆಟ್ಟಿನಲ್ಲಿ ಕನ್ನಡ ಟೈಪುಮಾಡುವುದೂ ಸುಲಭ ಎಂದೆಲ್ಲ ವಿವರಿಸುವ ನಮಗೆ ಕಂಪ್ಯೂಟರ್ ಪ್ರಪಂಚದಲ್ಲಿ ಕನ್ನಡವೇ ಕಾಣಸಿಗದಿದ್ದ ದಿನಗಳನ್ನು ಊಹಿಸುವುದೇ ಕಷ್ಟ, ಅಲ್ಲವೆ?

ಅಂತಹ ದಿನಗಳಲ್ಲೂ ಕಂಪ್ಯೂಟರ್ ಪ್ರಪಂಚದಲ್ಲಿ ಸಕ್ರಿಯರಾಗಿದ್ದ ಕನ್ನಡದ ಭಗೀರಥರು ತಮ್ಮ ಅದಮ್ಯ ಉತ್ಸಾಹದಿಂದ ಕಂಪ್ಯೂಟರಿಗೂ ಅ-ಆ-ಇ-ಈ ಹೇಳಿಕೊಟ್ಟರು; ಡಿಜಿಟಲ್ ಲೋಕದಲ್ಲಿ ಕನ್ನಡ ಹುಲುಸಾಗಿ ಬೆಳೆಯಲು ಕಾರಣರಾದರು.

ಇಂಗ್ಲಿಷ್ ನಾಡಿನಿಂದ ಬಂದ ಕಂಪ್ಯೂಟರ್, ಇಂತಹ ಮೇಷ್ಟರೊಬ್ಬರ ನೆರವಿನಿಂದ ಕನ್ನಡ ಕಲಿತ ಕತೆ ಇಲ್ಲಿದೆ.
badge