ಮಂಗಳವಾರ, ನವೆಂಬರ್ 20, 2012

ಮೆಮೊರಿ ಕಾರ್ಡ್ ಕೈಕೊಟ್ಟಾಗ...


ಟಿ ಜಿ ಶ್ರೀನಿಧಿ

ಡಿಜಿಟಲ್ ಉತ್ಪನ್ನಗಳ ಬಳಕೆ ಜಾಸ್ತಿಯಾದಮೇಲೆ ಎಲ್ಲೆಲ್ಲಿ ನೋಡಿದರೂ ಮೆಮೊರಿ ಕಾರ್ಡುಗಳದೇ ಭರಾಟೆ. ಮೊಬೈಲ್ ಫೋನಿನಲ್ಲೂ ಮೆಮೊರಿ ಕಾರ್ಡು, ಟ್ಯಾಬ್ಲೆಟ್ಟಿನಲ್ಲೂ ಮೆಮೊರಿ ಕಾರ್ಡು, ಡಿಜಿಟಲ್ ಕ್ಯಾಮೆರಾದಲ್ಲೂ ಮೆಮೊರಿ ಕಾರ್ಡು!

ಡಿಜಿಟಲ್ ಕ್ಯಾಮೆರಾ ಉದಾಹರಣೆಯನ್ನೇ ತೆಗೆದುಕೊಂಡರೆ ಹಿಂದಿನ ಕಾಲದಲ್ಲಿ ಫಿಲಂ ರೋಲುಗಳು ಮಾಡುತ್ತಿದ್ದ ಕೆಲಸವನ್ನು ಈಗ ಮೆಮೊರಿ ಕಾರ್ಡುಗಳು ಮಾಡುತ್ತಿವೆ. ಅಷ್ಟೇ ಅಲ್ಲ, ಮೂವತ್ತಾರು ಫೋಟೋ ಮುಗಿಯುತ್ತಿದ್ದಂತೆ ಹೊಸ ರೋಲು ಹಾಕಬೇಕಾದ ಪರಿಸ್ಥಿತಿಯನ್ನೂ ಬದಲಿಸಿವೆ. ಕಾರ್ಡಿನಲ್ಲಿ ಜಾಗ ಇರುವವರೆಗೂ ಫೋಟೋ - ವೀಡಿಯೋ ತುಂಬಿಕೊಳ್ಳುವುದು, ಕಾರ್ಡು ಭರ್ತಿಯಾಗುತ್ತಿದ್ದಂತೆ ಅವನ್ನೆಲ್ಲ ಕಂಪ್ಯೂಟರಿನೊಳಗೆ ಸುರಿಯುವುದು, ಖಾಲಿಯಾದ ಕಾರ್ಡನ್ನು ಮತ್ತೆ ಬಳಸುವುದು - ಕೆಲಸ ಇಷ್ಟೇ ಸರಳ!

ಹೀಗೆ ಮೆಮೊರಿ ಕಾರ್ಡನ್ನು ಮತ್ತೆ ಮತ್ತೆ ಬಳಸುವುದು ಸುಲಭ, ನಿಜ. ಆದರೆ ಒಂದಷ್ಟು ಸಾರಿ ಈ ಪ್ರಕ್ರಿಯೆಯ ಪುನರಾವರ್ತನೆ ಆಗುತ್ತಿದ್ದಂತೆ ಕಾರ್ಡಿನ ವಿಶ್ವಾಸಾರ್ಹತೆ ನಿಧಾನಕ್ಕೆ ಕಡಿಮೆಯಾಗುತ್ತ ಬರುತ್ತದೆ. ಅದರಲ್ಲೇನೋ ಸಮಸ್ಯೆ ಕಾಣಿಸಿಕೊಳ್ಳುತ್ತದೆ, ಅಥವಾ ಒಂದು ಕಂಪ್ಯೂಟರಿನಿಂದ ಇನ್ನೊಂದಕ್ಕೆ ಓಡಾಡುವ ಭರಾಟೆಯಲ್ಲಿ ಯಾವುದೋ ಕುತಂತ್ರಾಂಶ ಕಾರ್ಡಿನೊಳಕ್ಕೆ ಬಂದು ವಕ್ಕರಿಸಿಕೊಳ್ಳುತ್ತದೆ. ಕಾರಣ ಏನೇ ಆದರೂ ಪರಿಣಾಮ ಮಾತ್ರ ಒಂದೇ: ಕಾರ್ಡನ್ನು ಕಂಪ್ಯೂಟರಿಗೆ ಜೋಡಿಸಿದಾಗ ಅದು ಕಾರ್ಡನ್ನು ಗುರುತಿಸಲು ನಿರಾಕರಿಸುತ್ತದೆ, ಕಾರ್ಡಿನಲ್ಲಿರುವ ಫೋಟೋ ಕಾರ್ಡಿನಲ್ಲೇ ಇದ್ದರೂ ಅದನ್ನು ನೋಡುವುದು, ಕಾಪಿಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ!


ಕಾರ್ಡು ಕ್ರ್ಯಾಶ್ ಆಗಿದೆ ಎಂದು ಹೇಳುವುದು ಆಗಲೇ.

ಮೆಮೊರಿ ಕಾರ್ಡುಗಳ ಮೇಲೆ ನಮ್ಮ ಅವಲಂಬನೆ ಎಷ್ಟರ ಮಟ್ಟಿಗಿದೆ ಎನ್ನುವ ವಿಷಯ ಅರಿವಾಗುವುದು ಇಂತಹ ಸಂದರ್ಭಗಳಲ್ಲಷ್ಟೇ ಇರಬೇಕು. ಮೊನ್ನೆ ರಾಜ್ಯೋತ್ಸವದಲ್ಲಿ ಮಾಡಿದ ಭಾಷಣದ ಫೋಟೋ, ಕಳೆದ ವಾರ ನಡೆದ ನಾಮಕರಣ ಕಾರ್ಯಕ್ರಮದ ಫೋಟೋ, ಹದಿನೈದು ದಿನ ಹಿಂದೆ ದಸರಾದಲ್ಲಿ ಜಗಮಗಿಸುತ್ತಿದ್ದ ಮೈಸೂರು ನಗರದ ಫೋಟೋಗಳೆಲ್ಲ ಆ ಕಾರ್ಡಿನಲ್ಲಿದ್ದರಂತೂ ಕಾರ್ಡುದಾರನ ಕತೆ ಯಾರಿಗೂ ಬೇಡ. ನಮ್ಮ ಬದುಕಿನ ಪುಟ್ಟದೊಂದು ಚೂರು ಇದ್ದಕ್ಕಿದ್ದಂತೆ ಮಾಯವಾದ ಅನುಭವ ಅದು.

ನಿನ್ನೆವರೆಗೂ ಚೆನ್ನಾಗಿದ್ದ ಮೆಮೊರಿ ಕಾರ್ಡು ಈಗ ಇದ್ದಕ್ಕಿದ್ದಂತೆ ಕೈಕೊಟ್ಟುಬಿಟ್ಟರೆ ನಾವು ಏನುತಾನೆ ಮಾಡಬಹುದು ಎನ್ನುತ್ತೀರಾ?

ಎಲ್ಲ ನಮ್ಮ ಗ್ರಹಚಾರ ಎಂದುಕೊಂಡು ತಕ್ಷಣವೇ ಕೈಚೆಲ್ಲಿ ಕೂರಬೇಕಾಗೇನೂ ಇಲ್ಲ. ಕಾರ್ಡಿನೊಳಗೆ ಕಳೆದುಹೋಗಿರುವ ಮಾಹಿತಿಯನ್ನು ಮತ್ತೆ ಪಡೆಯುವ ನಿಟ್ಟಿನಲ್ಲಿ ನಾವೂ ಒಂದಷ್ಟು ಪ್ರಯತ್ನ ಮಾಡಬಹುದು.

ಮೆಮೊರಿ ಕಾರ್ಡ್ ಇದ್ದಕ್ಕಿದ್ದಂತೆ ಕೆಲಸಮಾಡುತ್ತಿಲ್ಲ ಎಂದರೆ ಅದಕ್ಕೆ ಹಲವಾರು ಕಾರಣಗಳಿರಬಹುದು. ಬಹಳಷ್ಟು ಸಾರಿ ಬಳಸಿದ ಮೇಲೆ ಮೆಮೊರಿ ಕಾರ್ಡು ಹಳೆಯದಾಗಿರುವುದರಿಂದ ಅದು ಹಾಳಾಗಿರಬಹುದು, ಅಥವಾ ಅದರಲ್ಲಿ ಬ್ಯಾಡ್ ಸೆಕ್ಟರ್ ಸಮಸ್ಯೆ ಸೃಷ್ಟಿಯಾಗಿರಬಹುದು. ವೈರಸ್ ಬಂದಿರುವ ಅಥವಾ ಕಂಪ್ಯೂಟರಿನಲ್ಲೇ ಸಮಸ್ಯೆಯಿರುವ ಸಾಧ್ಯತೆಯೂ ಇರುತ್ತದೆ.

ಹೀಗಾಗಿ ಮೆಮೊರಿ ಕಾರ್ಡ್ ಸರಿಯಾಗಿ ಕೆಲಸಮಾಡುತ್ತಿಲ್ಲ ಎಂದಾಗ ಮೊದಲಿಗೆ ಅದನ್ನು ಬೇರೊಂದು ಕಂಪ್ಯೂಟರಿನಲ್ಲಿ ಬಳಸಲು ಪ್ರಯತ್ನಿಸಬಹುದು. ಲ್ಯಾಪ್‌ಟಾಪ್ ಆದರೆ ಅದರಲ್ಲೇ ಇರುವ ಕಾರ್ಡ್ ರೀಡರ್‌ನಲ್ಲಿ, ಪ್ರತ್ಯೇಕ ಕಾರ್ಡ್ ರೀಡರ್ ಉಪಕರಣದಲ್ಲಿ, ಕ್ಯಾಮೆರಾಗೆ ಕೇಬಲ್ ಸಂಪರ್ಕ ಇದ್ದರೆ ಅದರಲ್ಲಿ - ಹೀಗೆ ಬೇರೆಬೇರೆ ಆಯ್ಕೆಗಳನ್ನು ಪ್ರಯತ್ನಿಸಿನೋಡುವುದೂ ಒಳ್ಳೆಯದೇ.

ಇತ್ತೀಚಿನ ಆಂಟಿವೈರಸ್ ತಂತ್ರಾಂಶ ಬಳಸಿ ಒಮ್ಮೆ ಸ್ಕ್ಯಾನ್ ಮಾಡಿಯೂ ನೋಡಬಹುದು. ವೈರಸ್ ಕಾಟವೇನಾದರೂ ಇದ್ದರೆ ಅದನ್ನು ಪತ್ತೆಮಾಡಿ ಹೋಗಲಾಡಿಸಲು ಇದು ನೆರವಾಗುತ್ತದೆ.

ಇಷ್ಟಾದರೂ ಸಮಸ್ಯಾತ್ಮಕ ಮೆಮೊರಿ ಕಾರ್ಡನ್ನು ನಿಮ್ಮ ಕಂಪ್ಯೂಟರ್ ಗುರುತಿಸುತ್ತಲೇ ಇಲ್ಲ ಎನ್ನುವುದಾದರೆ ಫೈಲ್ ರಿಕವರಿ ತಂತ್ರಾಂಶಗಳ ಮೊರೆಹೋಗಬೇಕಾದ್ದು ಅನಿವಾರ್ಯ.

ಮೆಮೊರಿ ಕಾರ್ಡ್, ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ಮುಂತಾದ ಶೇಖರಣಾ ಮಾಧ್ಯಮಗಳಿಂದ ಅಳಿಸಿಹೋದ ಮಾಹಿತಿಯನ್ನು ಮತ್ತೆ ಪಡೆಯಲು ನೆರವಾಗುವುದು ಈ ತಂತ್ರಾಂಶಗಳ ವೈಶಿಷ್ಟ್ಯ. ಹತ್ತಾರು ಬಗೆಯ ಫೈಲ್ ರಿಕವರಿ ತಂತ್ರಾಂಶಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ; ಅವುಗಳಲ್ಲಿ ಕೆಲವು ಉಚಿತವಾಗಿಯೂ ದೊರಕುವುದು ವಿಶೇಷ. ಇಂತಹ ತಂತ್ರಾಂಶಗಳಲ್ಲಿ www.cgsecurity.org ತಾಣದಲ್ಲಿ ದೊರಕುವ 'ಫೋಟೋರೆಕ್' ಕೂಡ ಒಂದು. ಇದು ಉಚಿತ (ಫ್ರೀ) ತಂತ್ರಾಂಶವಷ್ಟೇ ಅಲ್ಲ, ಮುಕ್ತ (ಓಪನ್ ಸೋರ್ಸ್) ಕೂಡ. ಇನ್ನೂ ಅನೇಕ ಫೈಲ್ ರಿಕವರಿ ತಂತ್ರಾಂಶಗಳಿಗಾಗಿ ಗೂಗಲ್ ಮಾಡಿ ನೋಡಬಹುದು.  

ತೊಂದರೆಯಿರುವ ಮೆಮೊರಿ ಕಾರ್ಡನ್ನು ಕಾರ್ಡ್ ರೀಡರ್ ಮೂಲಕ ಕಂಪ್ಯೂಟರಿಗೆ ಜೋಡಿಸಿ, ಇಂತಹ ಯಾವುದೇ ತಂತ್ರಾಂಶದ ಸಹಾಯದಿಂದ ಸ್ಕ್ಯಾನ್ ಮಾಡಿದರೆ ಯಾವೆಲ್ಲ ಚಿತ್ರಗಳನ್ನು ಮತ್ತೆ ಪಡೆದುಕೊಳ್ಳಬಹುದೆನ್ನುವುದು ಗೊತ್ತಾಗುತ್ತದೆ. ಆನಂತರ ಅವನ್ನು ನಮಗೆ ಬೇಕಾದ ಕಡೆ ಉಳಿಸಿಟ್ಟುಕೊಳ್ಳುವುದು ಸಾಧ್ಯ. ಇದಕ್ಕಾಗಿ ನಾವು ಅನುಸರಿಸಬೇಕಾದ ಕ್ರಮಗಳು ತಂತ್ರಾಂಶದಿಂದ ತಂತ್ರಾಂಶಕ್ಕೆ ಕೊಂಚಮಟ್ಟಿಗೆ ಬೇರೆಯಾಗಿರುತ್ತವೆ; ಅವುಗಳ ವಿವರವನ್ನು ತಂತ್ರಾಂಶದೊಡನೆ ಇರುವ ಸಹಾಯದಲ್ಲೋ ('ಹೆಲ್ಪ್') ಅಥವಾ ಅದರ ಜಾಲತಾಣದಲ್ಲೋ ಪಡೆದುಕೊಳ್ಳಬಹುದು.

ಅಳಿಸಿಹೋದ ಚಿತ್ರಗಳೆಲ್ಲ ಮತ್ತೆ ಸಿಕ್ಕಿದ್ದು ಖಚಿತವಾದ ಮೇಲೆ ಮೆಮೊರಿ ಕಾರ್ಡನ್ನು ಫಾರ್ಮ್ಯಾಟ್ ಮಾಡಿ ಅದು ಮತ್ತೆ ಮೊದಲಿನಂತೆಯೇ ಕೆಲಸಮಾಡುತ್ತದೆಯೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಬಹುದು.

ಅಂದಹಾಗೆ ಮೆಮೊರಿ ಕಾರ್ಡಿನಿಂದ ಕಿರಿಕಿರಿಯಾಗಬೇಕಾದರೆ ಅದು ಕೆಟ್ಟುಹೋಗಲೇಬೇಕು ಎಂದೇನೂ ಇಲ್ಲ. ನಮ್ಮ ಸ್ವಯಂಕೃತ ತಪ್ಪುಗಳೂ ತಲೆನೋವಿಗೆ ಕಾರಣವಾಗಬಹುದು. ಯಾವುದೋ ಬೇಡದ ಫೋಟೋ ಡಿಲೀಟ್ ಮಾಡಲು ಕೈತಪ್ಪಿ 'ಡಿಲೀಟ್ ಆಲ್' ಆಯ್ಕೆಗೆ ಓಕೆ ಎಂದುಬಿಟ್ಟರೆ ಸಾಕು, ಕಾರ್ಡಿನಲ್ಲಿರುವ ಫೋಟೋಗಳೆಲ್ಲ ಮಂಗಮಾಯವಾಗಿಬಿಡುತ್ತವೆ. ಅಂತಹ ಸನ್ನಿವೇಶಗಳಲ್ಲೂ ಧೃತಿಗೆಡಬೇಕಿಲ್ಲ. ಕಾರ್ಡಿನಲ್ಲಿ ಕಾಣೆಯಾಗಿರುವ ಮಾಹಿತಿಯನ್ನು ಹುಡುಕಿಕೊಳ್ಳಲು ಫೈಲ್ ರಿಕವರಿ ತಂತ್ರಾಂಶ ಸಹಾಯ ಮಾಡುತ್ತದಲ್ಲ, ಅದೇ ತಂತ್ರವನ್ನು ಇಲ್ಲೂ ಬಳಸಬಹುದು. ಅಳಿಸಿಹೋದ ಫೋಟೋಗಳೆಲ್ಲ ಮತ್ತೆ ಸಿಗುವವರೆಗೂ ಬೇರೆ ಫೋಟೋ ತೆಗೆಯಲು ಅದೇ ಕಾರ್ಡ್ ಬಳಸದಿದ್ದರೆ ಆಯಿತು ಅಷ್ಟೆ. ಇಷ್ಟೆಲ್ಲ ತಲೆನೋವು ಬೇಡ ಎನ್ನುವುದಾದರೆ ಡಿಲೀಟ್ ಆಯ್ಕೆ ಬಳಸುವಾಗ ಇನ್ನಷ್ಟು ಹುಷಾರಾಗಿದ್ದರೂ ಸಾಕು!

ಕಂಪ್ಯೂಟರಿನ ಜೊತೆಗೆ ಮೆಮೊರಿ ಕಾರ್ಡ್ ಬಳಸುವಾಗಲೂ ಅಷ್ಟೆ; ಕಾರ್ಡ್ ರೀಡರ್ ಅಥವಾ ಕೇಬಲ್ ಸಹಾಯದಿಂದ ಮೆಮೊರಿ ಕಾರ್ಡ್ ಉಪಯೋಗಿಸಿ ಆದ ಮೇಲೆ ಥಟ್ಟನೆ ಅದರ ಸಂಪರ್ಕ ತಪ್ಪಿಸದೆ ಸರಿಯಾಗಿ ಬೇರ್ಪಡಿಸಬೇಕಾದ್ದು ಅತ್ಯಗತ್ಯ. ಹೀಗೆ ಮಾಡುವುದರಿಂದ ಅದಕ್ಕೆ ಅನಿರೀಕ್ಷಿತ ಹಾನಿಯಾಗುವುದನ್ನು ತಪ್ಪಿಸಬಹುದು. ವಿಂಡೋಸ್ ಬಳಕೆದಾರರಾದರೆ 'ಸೇಫ್‌ಲಿ ರಿಮೂವ್ ಹಾರ್ಡ್‌ವೇರ್' ಅಥವಾ 'ಇಜೆಕ್ಟ್' ಆಯ್ಕೆಯ ಮೇಲೆ ಕ್ಲಿಕ್ಕಿಸಿದ ನಂತರವೇ ಮೆಮೊರಿ ಕಾರ್ಡನ್ನು ಹೊರತೆಗೆಯುವುದು ಒಳಿತು. ಮೆಮೊರಿ ಕಾರ್ಡಿಗಷ್ಟೇ ಅಲ್ಲ, ಪೆನ್ ಡ್ರೈವ್ - ಎಕ್ಸ್‌ಟರ್ನಲ್ ಹಾರ್ಡ್ ಡಿಸ್ಕ್ ಮುಂತಾದ ಮಾಧ್ಯಮಗಳಿಗೂ ಇದೇ ಸೂತ್ರ ಅನುಸರಿಸಬಹುದು.

ನವೆಂಬರ್ ೨೦, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge