ಮಂಗಳವಾರ, ಅಕ್ಟೋಬರ್ 25, 2011

ಗೂಗಲ್ ಬಜ್‌ಗೆ ಬೈ ಬೈ!

ಟಿ. ಜಿ. ಶ್ರೀನಿಧಿ

"ಜನರ ಬದುಕನ್ನೇ ಬದಲಿಸುವಂತಹ, ಅವರು ದಿನಕ್ಕೆ ಎರಡು ಮೂರು ಬಾರಿಯಾದರೂ ಬಳಸುವಂತಹ ಉತ್ಪನ್ನಗಳನ್ನು ರೂಪಿಸುವುದು ನಮ್ಮ ಆಶಯ. ಈ ಪ್ರಯತ್ನದಲ್ಲಿ ಯಶಸ್ವಿಯಾಗಲು ಏಕಾಗ್ರತೆ ಬೇಕು; ನಾವು ಏನೆಲ್ಲ ಕೆಲಸ ಮಾಡುತ್ತೇವೆ ಎಂದು ಯೋಚಿಸಿಕೊಳ್ಳುವಂತೆಯೇ ನಾವು ಏನೆಲ್ಲ ಮಾಡುವುದಿಲ್ಲ ಎನ್ನುವುದನ್ನೂ ಗುರುತಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ನಮ್ಮ ಕೆಲ ಉತ್ಪನ್ನಗಳನ್ನು ಮುಚ್ಚಲು ನಿರ್ಧರಿಸಿದ್ದೇವೆ"

ಸರಿಸುಮಾರು ಇದೇ ಅರ್ಥ ಹೊಂದಿದ್ದ ಹೇಳಿಕೆ ಕಂಡುಬಂದದ್ದು ಈಗ ಕೆಲದಿನಗಳ ಹಿಂದೆ, ಗೂಗಲ್ ಸಂಸ್ಥೆಯ ಅಧಿಕೃತ ಬ್ಲಾಗ್‌ನಲ್ಲಿ. ಕಳೆದ ಸಪ್ಟೆಂಬರ್ ತಿಂಗಳಿನಲ್ಲಿ ಪ್ರಾರಂಭವಾದ 'ಮನೆ ಕ್ಲೀನಿಂಗ್' ಕೆಲಸದ ಮುಂದುವರೆದ ಭಾಗವಾಗಿ ಈ ಹೇಳಿಕೆ ಹೊರಬಿದ್ದಿದೆ.

ಸೆಪ್ಟೆಂಬರ್‌ನ ಘೋಷಣೆಯಲ್ಲಿ ಸಾಕಷ್ಟು ಉತ್ಪನ್ನಗಳ ನಿವೃತ್ತಿ ಪ್ರಸ್ತಾಪ ಇತ್ತಾದರೂ ಅವುಗಳಲ್ಲಿ ಹೆಸರಾಂತ ಎನ್ನಬಹುದಾದ ಯಾವ ಉತ್ಪನ್ನವೂ ಇಲ್ಲದ್ದರಿಂದ ಅದು ಅಷ್ಟೇನೂ ಸುದ್ದಿಯಾಗಿರಲಿಲ್ಲ. ಸೋಶಿಯಲ್ ಸರ್ಚ್ ಕ್ಷೇತ್ರದ ಮಹತ್ವದ ತಾಣವಾಗಲಿದೆ ಎಂಬ ಹಣೆಪಟ್ಟಿ ಹೊತ್ತಿದ್ದ 'ಆರ್ಡ್‌ವರ್ಕ್' ಹಾಗೂ ಕೆಲ ವರ್ಷಗಳ ಹಿಂದೆ ನಮ್ಮಲ್ಲಿ ಅನೇಕರು ಬಳಸಿದ್ದ 'ಗೂಗಲ್ ಡೆಸ್ಕ್‌ಟಾಪ್' - ಇವು ಆಗ ನಿವೃತ್ತಿಯತ್ತ ಮುಖಮಾಡಿದ ಉತ್ಪನ್ನಗಳಲ್ಲಿ ಪ್ರಮುಖವಾದವು.

ಅಕ್ಟೋಬರ್ ೧೪ರ ಘೋಷಣೆಯಲ್ಲಿ 'ಕೋಡ್ ಸರ್ಚ್', 'ಜೈಕು' ಮುಂತಾದ ಹೆಸರುಗಳಿವೆ. ಆದರೆ ಇವುಗಳ ಜೊತೆ ಒಂದು ಪರಿಚಿತ ಹೆಸರೂ ಸೇರಿಕೊಂಡಿರುವುದು ಈ ಬಾರಿಯ ಘೋಷಣೆ ಕೊಂಚಮಟ್ಟಿಗೆ ಸುದ್ದಿಮಾಡಲು ಕಾರಣವಾಗಿದೆ.

ಗುರುವಾರ, ಅಕ್ಟೋಬರ್ 20, 2011

ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು


ಟಿ. ಜಿ, ಶ್ರೀನಿಧಿಯವರ ಹೊಸ ಪುಸ್ತಕ 'ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು' ಬರುವ ನವೆಂಬರ್ ೬ರ ಸಂಜೆ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ನಿಮಗೆ ಆದರದ ಸ್ವಾಗತ. ಹಿರಿಯ ಭಾಷಾತಜ್ಞರಾದ ಪ್ರೊ. ಜಿ. ವೆಂಕಟಸುಬ್ಬಯ್ಯ ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕ ಶ್ರೀ ಗುರುಪ್ರಸಾದ್ ಅಂದು ನಮ್ಮೊಡನೆ ಇರಲಿದ್ದಾರೆ.

ಪುಸ್ತಕದ ಮುಂಗಡ ಬುಕಿಂಗ್ www.akrutibooks.com ತಾಣದಲ್ಲಿ ಪ್ರಾರಂಭವಾಗಿದೆ. ಬುಕಿಂಗ್ ದೃಢೀಕರಣ ಇಮೇಲ್‌ನ ಮುದ್ರಿತ ಪ್ರತಿ ತಂದು ಕಾರ್ಯಕ್ರಮದ ದಿನ ನಿಮ್ಮ ಪ್ರತಿಯನ್ನು ಪಡೆದುಕೊಳ್ಳಬಹುದು. ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದವರ ಪ್ರತಿಗಳನ್ನು ಅಂಚೆ/ಕೊರಿಯರ್ ಮೂಲಕ ಕಳುಹಿಸಿಕೊಡಲಾಗುವುದು. ಅಂಚೆ ವೆಚ್ಚ ನಮ್ಮದೇ!

ಸರಳ ಶೈಲಿಯ ಬರೆವಣಿಗೆ ಜೊತೆಗೆ ಜಿ. ಎಸ್. ನಾಗನಾಥ್ ಅವರ ಕಾರ್ಟೂನುಗಳು ಈ ಪುಸ್ತಕವನ್ನು ಇನ್ನಷ್ಟು ಆಕರ್ಷಕಗೊಳಿಸಿವೆ.

ಬುಧವಾರ, ಅಕ್ಟೋಬರ್ 19, 2011

ಕೈಕೊಟ್ಟ ಬ್ಲ್ಯಾಕ್‌ಬೆರಿ, ಕಂಗೆಟ್ಟ ಬಳಕೆದಾರ

ಟಿ. ಜಿ. ಶ್ರೀನಿಧಿ

ಕಳೆದ ವಾರದಲ್ಲಿ ಬೆಂಗಳೂರಿನ ಬಿಸಿನೆಸ್‌ಮನ್ ಚೇತನ್‌ಗೆ ಕೈಕಾಲು ಕಟ್ಟಿಹಾಕಿದ ಅನುಭವ. ಕೆಲಸದ ಮೇಲೆ ಹೊರಗಡೆ ಹೋಗಿದ್ದಾಗ ಆಫೀಸಿನಿಂದ ಇಮೇಲ್ ಇಲ್ಲ, ಗ್ರಾಹಕರಿಗೆ ಅರ್ಜೆಂಟಾಗಿ ಕೊಟೇಶನ್ ಕಳುಹಿಸೋಣ ಎಂದರೆ ಅದೂ ಆಗುತ್ತಿಲ್ಲ, ಯಾವ ವೆಬ್‌ಸೈಟೂ ತೆರೆಯಲಾಗುತ್ತಿಲ್ಲ, ಅದೆಲ್ಲ ಹೋಗಲಿ ಎಂದರೆ ಗರ್ಲ್‌ಫ್ರೆಂಡ್ ಜೊತೆ ಚಾಟ್ ಮಾಡುವಂತೆಯೂ ಇಲ್ಲ!

ಇಷ್ಟೆಲ್ಲ ಫಜೀತಿಗೆ ಕಾರಣವಾಗಿದ್ದು ಅವರ ಬ್ಲ್ಯಾಕ್‌ಬೆರಿ.

ದಿನದ ಬಹುಪಾಲು ಸಮಯ ಕೆಲಸದ ಮೇಲೆ ಬಿಜಿಯಾಗಿರುವ ಚೇತನ್ ಒಂದು ಕಡೆ ಕುಳಿತುಕೊಳ್ಳುವುದೇ ಅಪರೂಪ. ಆದರೆ ಅವರ ಕೆಲಸಕ್ಕೆ ಸದಾಕಾಲ ಅಂತರಜಾಲ ಸಂಪರ್ಕ, ಇಮೇಲ್ ವ್ಯವಸ್ಥೆ ಎಲ್ಲವೂ ಬೇಕೇಬೇಕು. ಹೋದ ಕಡೆಗೆಲ್ಲ ಲ್ಯಾಪ್‌ಟಾಪ್ ತೆಗೆದುಕೊಂಡು ಹೋಗುವುದೂ ಸಮಸ್ಯೆಯೇ. ಹಾಗಾಗಿಯೇ ಅವರು ಬ್ಲ್ಯಾಕ್‌ಬೆರಿ ಬಳಸುತ್ತಾರೆ. ಎಸ್ಸೆಮ್ಮೆಸ್ ಕಳುಹಿಸಿದಷ್ಟೇ ಸುಲಭವಾಗಿ ಇಮೇಲ್ ಕಳುಹಿಸಲು ಅನುವುಮಾಡಿಕೊಡುವ ಬ್ಲ್ಯಾಕ್‌ಬೆರಿಯಲ್ಲಿ ಅಂತರಜಾಲಾಟ ಕೂಡ ಸುಲಭ. ಬ್ಲ್ಯಾಕ್‌ಬೆರಿ ಮೆಸೆಂಜರ್ (ಬಿಬಿಎಂ) ಬಳಸಿ ಗರ್ಲ್‌ಫ್ರೆಂಡ್ ಜೊತೆ ಹರಟೆಹೊಡೆಯುವುದೂ ಸುಲಭವೇ! ಬರಿಯ ಚಾಟಿಂಗ್ ಅಷ್ಟೇ ಅಲ್ಲ, ಚಿತ್ರ-ವಿಡಿಯೋ-ಧ್ವನಿರೂಪದ ಕಡತಗಳನ್ನೂ ಕಳುಹಿಸಬಹುದು.

ಆದರೆ ಹೋದವಾರ ಆದದ್ದೇ ಬೇರೆ.

ಶುಕ್ರವಾರ, ಅಕ್ಟೋಬರ್ 14, 2011

ಗ್ಯಾಡ್ಜೆಟ್ ಲೋಕ

ಡಾ. ಯು. ಬಿ. ಪವನಜ
ಈ ಬಾರಿಯ ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಜೊತೆಗೆ ಉಚಿತ ಕೊಡುಗೆಯಾಗಿ 'ಗ್ಯಾಡ್ಜೆಟ್ ಲೋಕ' ಎಂಬ ಪುಸ್ತಕ ಇದೆ. ಅದರಿಂದ ಆಯ್ದ ಕೆಲ ಸಾಲುಗಳು ಇಲ್ಲಿವೆ.
ಲೇಖಕರು: ಡಾ. ಯು. ಬಿ. ಪವನಜ
ಪಠ್ಯ ನೆರವು: ಟಿ. ಜಿ. ಶ್ರೀನಿಧಿ ಹಾಗೂ ಪ್ರಜಾವಾಣಿ ಸಂಪಾದಕೀಯ ತಂಡ

ಸುಮಾರು ಸಾಯಂಕಾಲ ೬:೩೦ರ ಸಮಯ. ಬೆಂಗಳೂರು ತಲುಪಲು ಇನ್ನೂ ಒಂದೂವರೆ ಗಂಟೆ ಸಮಯವಿತ್ತು. ಆ ಸಮಯಕ್ಕೆ ಸರಿಯಾಗಿ ಬೆಂಗಳೂರಿನ ದಿನಪತ್ರಿಕೆಯೊಂದರಿಂದ ಫೋನು ಬಂತು. ಪ್ರೂಫ್ ಕಳುಹಿಸಿದ್ದೇವೆ, ಪರಿಶೀಲಿಸಿ, ಎಂದು. ಆ ಪತ್ರಿಕೆಯಲ್ಲಿ ಪ್ರತಿ ಸೋಮವಾರ ನನ್ನ ಅಂಕಣ ಪ್ರಕಟವಾಗುತ್ತದೆ. ಸಾಮಾನ್ಯವಾಗಿ ನಾನು ಪ್ರತಿ ಸಂಚಿಕೆಯಲ್ಲೂ ಒಂದೆರಡು ಜಾಲತಾಣಗಳ ವಿಳಾಸ ನೀಡುತ್ತೇನೆ. ಈ ವಿಳಾಸಗಳಲ್ಲಿ, ಸ್ವಲ್ಪ ಹೆಚ್ಚು ಕಡಿಮೆಯಾದರೂ ಆ ಜಾಲತಾಣವನ್ನು ತೆರೆಯಲು ಪ್ರಯತ್ನಿಸುವವರಿಗೆ ತೊಂದರೆಯಾಗುತ್ತದೆ. ಬೇರೆ ವಿಷಯದಲ್ಲಿ ಸ್ವಲ್ಪ ಎಡವಟ್ಟಾದರೂ ಓದುಗರು ಅದು ಮುದ್ರಾರಾಕ್ಷಸನ ಹಾವಳಿ ಎಂದುಕೊಂಡು ಮನಸ್ಸಿನಲ್ಲೇ ತಪ್ಪನ್ನು ತಿದ್ದಿಕೊಂಡು ಓದುತ್ತಾರೆ. ಆದರೆ ಜಾಲತಾಣದ ವಿಳಾಸದಲ್ಲಿ ತಪ್ಪು ಆಗಲೇ ಬಾರದು. ಅದುದರಿಂದ ನಾನು ಮುಂಚಿತವಾಗಿಯೇ ಲೇಖನದ ಕರಡನ್ನು ಪಿಡಿಎಫ್ ರೂಪದಲ್ಲಿ ಇಮೈಲ್ ಮೂಲಕ ತರಿಸಿಕೊಳ್ಳುತ್ತೇನೆ. ಪತ್ರಿಕೆಯವರಿಗೆ ಆದಷ್ಟು ಬೇಗನೆ ನಾನು ಅವರು ಕಳುಹಿಸಿದ ಕರಡನ್ನು ಓದಿ ಅದು ಸರಿಯಿದೆಯೇ ಎಂದು ತಿಳಿಸಬೇಕಿತ್ತು. ಅದರೆ ನಾನು ಬೆಂಗಳೂರು ತಲುಪಲು ಇನ್ನೂ ಒಂದೂವರೆ ಗಂಟೆ ಸಮಯವಿತ್ತು. ಮತ್ತೆ ನನ್ನ ಸ್ಮಾರ್ಟ್‌ಫೋನ್ ಹೊರಬಂತು. ಅದರಲ್ಲಿ ಇಮೈಲ್ ಮೂಲಕ ಬಂದ ಕರಡು ಪಿಡಿಎಫ್ ಫೈಲನ್ನು ಡೌನ್‌ಲೋಡ್ ಮಾಡಿಕೊಂಡೆ. ಆ ಫೋನಿನಲ್ಲೇ ಇರುವ ತಂತ್ರಾಂಶ ಬಳಸಿ ಪಿಡಿಎಫ್ ಕಡತವನ್ನು ತೆರೆದು ಓದಿದೆ. ಅದರಲ್ಲಿ ನೀಡಿದ ಜಾಲತಾಣಗಳ ವಿಳಾಸ ಸರಿಯಿದೆಯೇ ಎಂದು ಪರಿಶೀಲಿಸಲೂ ಮತ್ತೆ ಅದೇ ಫೋನಿನಲ್ಲಿರುವ ಜಾಲತಾಣ ವೀಕ್ಷಕ ತಂತ್ರಾಂಶದ ಬಳಕೆ ಮಾಡಿದೆ. ಇಮೈಲ್ ಮೂಲಕವೇ ಉತ್ತರವನ್ನೂ ನೀಡಿದೆ.

ಗುರುವಾರ, ಅಕ್ಟೋಬರ್ 13, 2011

ಮರ್ಫಿ ಲಾ: ಏಕೆ ಎಲ್ಲವೂ ಉಲ್ಟಾಪಲ್ಟ?

"If anything can go wrong, it will."

ಮರ್ಫಿ ಲಾ ಹೆಸರನ್ನು ಕೇಳದವರು ಬೇಕಾದಷ್ಟು ಜನ ಇರಬಹುದು. ಆದರೆ ಅದರ ಅನುಭವವಾಗದವರು ಇರಲಿಕ್ಕಿಲ್ಲವೇನೋ.

ನಾಲ್ಕಾರು ಕ್ಯೂ‌ಗಳಿದ್ದ ಕಡೆ ನಾವು ನಿಂತ ಕ್ಯೂ ಮಾತ್ರ ಎಷ್ಟು ಹೊತ್ತಿಗೂ ಮುಂದಕ್ಕೆ ಹೋಗುವುದೇ ಇಲ್ಲ, ಕೈಗೇನೋ ಕೊಳೆ ಮೆತ್ತಿಕೊಂಡಾಗಲೇ ಮೂಗಿನ ತುದಿ ಕೆರೆಯಲು ಶುರುವಾಗುತ್ತದೆ... ಹೀಗೆ ಮರ್ಫಿಯ ನಿಯಮ ಬೇಕಾದಷ್ಟು ರೀತಿಯಲ್ಲಿ ನಮ್ಮ ಅನುಭವಕ್ಕೆ ಬಂದಿರುತ್ತದೆ.

ಈ ಮರ್ಫಿ ಲಾ ಬಗ್ಗೆ ಚೆಂದದ ಪುಸ್ತಕವೊಂದು ಇದೀಗ ಕನ್ನಡದಲ್ಲೂ ಬಂದಿದೆ.

ಮರ್ಫಿ ಲಾ: ಏಕೆ ಎಲ್ಲವೂ ಉಲ್ಟಾಪಲ್ಟ?
ಲೇಖಕರು: ಶ್ರೀ ಟಿ. ಆರ್. ಅನಂತರಾಮು
ಪ್ರಕಾಶಕರು: ಅಂಕಿತ ಪುಸ್ತಕ
ಮೊದಲ ಆವೃತ್ತಿ: ೨೦೧೧
ಬೆಲೆ: ರೂ. ೭೦

ಮಂಗಳವಾರ, ಅಕ್ಟೋಬರ್ 11, 2011

'ಸಿರಿ' ಬಂದ ಸಮಯ

ಟಿ. ಜಿ. ಶ್ರೀನಿಧಿ


ಕಳೆದ ವಾರದಲ್ಲಿ ಆಪಲ್ ಸಂಸ್ಥೆ ಸತತವಾಗಿ ಸುದ್ದಿಯಲ್ಲಿತ್ತು. ವಾರದ ಶುರುವಿನಲ್ಲಿ ಇದಕ್ಕೆ ಕಾರಣವಾದದ್ದು ಐಫೋನ್ ೫ರ ನಿರೀಕ್ಷೆ. ಕಳೆದ ಮಂಗಳವಾರದ "ಲೆಟ್ಸ್ ಟಾಕ್ ಐಫೋನ್" ಕಾರ್ಯಕ್ರಮದಲ್ಲಿ ಐಫೋನ್‌ನ ಈ ಹೊಸ ಅವತಾರದ ಪರಿಚಯವಾಗಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು.

ಐಫೋನ್ ೫ ಹೇಗಿರಬಹುದು, ಅದರಲ್ಲಿ ಆಪಲ್ ಏನೇನು ಹೊಸ ವೈಶಿಷ್ಟ್ಯಗಳನ್ನು ಸೇರಿಸಿರಬಹುದು ಎಂಬ ಪ್ರಶ್ನೆಗಳು ಎಲ್ಲ ದಿಕ್ಕುಗಳಿಂದಲೂ ಕೇಳಿಬಂದು ಸಾಕಷ್ಟು ಆಸಕ್ತಿ ಸೃಷ್ಟಿಯಾಗಿತ್ತು. ಸ್ಟೀವ್ ಜಾಬ್ಸ್ ನಿವೃತ್ತಿಯ ನಂತರ ಆಪಲ್‌ನ ನೇತೃತ್ವ ವಹಿಸಿಕೊಂಡಿರುವ ಟಿಮ್ ಕುಕ್ ಈ ಕಾರ್ಯಕ್ರಮವನ್ನು ಹೇಗೆ ನಡೆಸಿಕೊಡಬಹುದು ಎನ್ನುವ ಕುತೂಹಲವೂ ಇತ್ತು. ಕಾರ್ಯಕ್ರಮಕ್ಕೆ ಸ್ಟೀವ್ ಜಾಬ್ಸ್ ಬಂದರೂ ಬರಬಹುದು ಎಂಬ ವದಂತಿ ಬಿಬಿಸಿಯಲ್ಲೂ ಕಾಣಿಸಿಕೊಂಡಿತ್ತು!

ಆದರೆ ಕಾರ್ಯಕ್ರಮ ಶುರುವಾಗಿ ಸ್ವಲ್ಪಹೊತ್ತಿನಲ್ಲೇ ಕುತೂಹಲವೆಲ್ಲ ತಣ್ಣಗಾಗಿಹೋಯಿತು. ಏಕೆಂದರೆ ಅಲ್ಲಿ ಐಫೋನ್ ೫ರ ಸುದ್ದಿಯೇ ಇರಲಿಲ್ಲ!

ಬುಧವಾರ, ಅಕ್ಟೋಬರ್ 5, 2011

ವಿಜ್ಞಾನ ಸಂವಹನ ಸಂಚಿಕೆ ಬಂದಿದೆ!

ಇಜ್ಞಾನ ವಿದ್ಯುನ್ಮಾನ ಪತ್ರಿಕೆಯ 'ವಿಜ್ಞಾನ ಸಂವಹನ ಸಂಚಿಕೆ' ಇದೀಗ ಹೊರಬಂದಿದೆ. ಈ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಇಜ್ಞಾನ ವಿದ್ಯುನ್ಮಾನ ಪತ್ರಿಕೆಯ ಕುರಿತು ನಿಮ್ಮ ಅನಿಸಿಕೆಗಳನ್ನು ತಿಳಿಯುವ ಕುತೂಹಲ ನಮಗಿದೆ. ದಯಮಾಡಿ ಕಮೆಂಟಿಸಿ!

ಈ ಸಂಚಿಕೆಯ ಸಂಪಾದನೆಯಲ್ಲಿ ನೆರವುನೀಡಿ, ಅದರ ವಿನ್ಯಾಸದ ಜವಾಬ್ದಾರಿಯನ್ನೂ ಹೊತ್ತ ಶ್ರೀ ಬೇಳೂರು ಸುದರ್ಶನರಿಗೆ ಕೃತಜ್ಞತೆಗಳು.

ಮಂಗಳವಾರ, ಅಕ್ಟೋಬರ್ 4, 2011

ಟ್ಯಾಬ್ಲೆಟ್ ಲೋಕದಲ್ಲೊಂದು ಹೊಸ ಕಿಚ್ಚು

ಟಿ. ಜಿ. ಶ್ರೀನಿಧಿ

ಸ್ಯಾಮ್‌ಸಂಗ್ ಗೆಲಾಕ್ಸಿ ಟ್ಯಾಬ್, ಬ್ಲ್ಯಾಕ್‌ಬೆರಿ ಪ್ಲೇಬುಕ್, ಮೋಟರೋಲಾ ಕ್ಸೂಮ್, ಡೆಲ್ ಸ್ಟ್ರೀಕ್ - ಒಂದರ ಹಿಂದೊಂದರಂತೆ ಹೊಸಹೊಸ ಟ್ಯಾಬ್ಲೆಟ್ ಗಣಕಗಳು ಮಾರುಕಟ್ಟೆಗೆ ಬರುತ್ತಲೇ ಇದ್ದರೂ ಟ್ಯಾಬ್ಲೆಟ್ ಲೋಕದಲ್ಲಿ ಆಪಲ್ ಐಟ್ಯಾಬ್‌ನ ಆಧಿಪತ್ಯ ಬಹುತೇಕ ಅಬಾಧಿತವಾಗಿಯೇ ಇದೆ. ಈ ವರ್ಷದ ಅಂತ್ಯಕ್ಕೂ ವಿಶ್ವದ ಟ್ಯಾಬ್ಲೆಟ್ ಮಾರುಕಟ್ಟೆಯ ಮುಕ್ಕಾಲು ಭಾಗ ಆಪಲ್ ಹಿಡಿತದಲ್ಲೇ ಮುಂದುವರೆಯಲಿದೆ ಎಂಬ ಸುದ್ದಿ ಇತ್ತೀಚೆಗಷ್ಟೆ ಕೇಳಿಬಂದಿತ್ತಲ್ಲ!

ಆದರೆ ಕಳೆದ ವರ್ಷಾಂತ್ಯಕ್ಕೆ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿನ ಆಪಲ್ ಪಾಲು ಇದಕ್ಕಿಂತ ಶೇಕಡಾ ಹತ್ತರಷ್ಟು ಜಾಸ್ತಿಯಿತ್ತು ಎನ್ನುವುದು ಗಮನಾರ್ಹ. ಅಷ್ಟೇ ಅಲ್ಲ, ಈಗಷ್ಟೇ ಬೆಳೆಯುತ್ತಿರುವ ಕೆಲ ಮಾರುಕಟ್ಟೆಗಳಲ್ಲಿ (ವಿಶೇಷವಾಗಿ ನಮ್ಮ ದೇಶದಲ್ಲಿ) ಅಗ್ರಸ್ಥಾನ ತಲುಪಲು ಆಪಲ್ ಐಟ್ಯಾಬ್‌ಗೆ ಸಾಧ್ಯವಾಗಿಲ್ಲ ಎಂಬ ಸುದ್ದಿ ಕೂಡ ಇದೆ.

ಇಂತಹ ಸಂದರ್ಭದಲ್ಲಿ ಅಮೆಜಾನ್ ಡಾಟ್ ಕಾಮ್‌ನ ಹೊಸ ಉತ್ಪನ್ನ 'ಕಿಂಡ್ಲ್ ಫೈರ್' ಅನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಅಷ್ಟೇ ಅಲ್ಲ, ಈವರೆಗೂ ಬ್ರ್ಯಾಂಡ್ ನೇಮ್ ಹಾಗೂ ಟ್ಯಾಬ್ಲೆಟ್‌ನಲ್ಲಿರುವ ಸೌಲಭ್ಯಗಳ ಆಧಾರದ ಮೇಲೆ ಸ್ಪರ್ಧೆ ನಡೆಯುತ್ತಿದ್ದ ಟ್ಯಾಬ್ಲೆಟ್ ಪ್ರಪಂಚದಲ್ಲಿ ಕಿಂಡ್ಲ್ ಫೈರ್ ಪ್ರವೇಶದಿಂದಾಗಿ ದರಸಮರವೂ ಶುರುವಾಗಿದೆ!
badge