ಡಾ. ಯು. ಬಿ. ಪವನಜ
ಸುಮಾರು ಸಾಯಂಕಾಲ ೬:೩೦ರ ಸಮಯ. ಬೆಂಗಳೂರು ತಲುಪಲು ಇನ್ನೂ ಒಂದೂವರೆ ಗಂಟೆ ಸಮಯವಿತ್ತು. ಆ ಸಮಯಕ್ಕೆ ಸರಿಯಾಗಿ ಬೆಂಗಳೂರಿನ ದಿನಪತ್ರಿಕೆಯೊಂದರಿಂದ ಫೋನು ಬಂತು. ಪ್ರೂಫ್ ಕಳುಹಿಸಿದ್ದೇವೆ, ಪರಿಶೀಲಿಸಿ, ಎಂದು. ಆ ಪತ್ರಿಕೆಯಲ್ಲಿ ಪ್ರತಿ ಸೋಮವಾರ ನನ್ನ ಅಂಕಣ ಪ್ರಕಟವಾಗುತ್ತದೆ. ಸಾಮಾನ್ಯವಾಗಿ ನಾನು ಪ್ರತಿ ಸಂಚಿಕೆಯಲ್ಲೂ ಒಂದೆರಡು ಜಾಲತಾಣಗಳ ವಿಳಾಸ ನೀಡುತ್ತೇನೆ. ಈ ವಿಳಾಸಗಳಲ್ಲಿ, ಸ್ವಲ್ಪ ಹೆಚ್ಚು ಕಡಿಮೆಯಾದರೂ ಆ ಜಾಲತಾಣವನ್ನು ತೆರೆಯಲು ಪ್ರಯತ್ನಿಸುವವರಿಗೆ ತೊಂದರೆಯಾಗುತ್ತದೆ. ಬೇರೆ ವಿಷಯದಲ್ಲಿ ಸ್ವಲ್ಪ ಎಡವಟ್ಟಾದರೂ ಓದುಗರು ಅದು ಮುದ್ರಾರಾಕ್ಷಸನ ಹಾವಳಿ ಎಂದುಕೊಂಡು ಮನಸ್ಸಿನಲ್ಲೇ ತಪ್ಪನ್ನು ತಿದ್ದಿಕೊಂಡು ಓದುತ್ತಾರೆ. ಆದರೆ ಜಾಲತಾಣದ ವಿಳಾಸದಲ್ಲಿ ತಪ್ಪು ಆಗಲೇ ಬಾರದು. ಅದುದರಿಂದ ನಾನು ಮುಂಚಿತವಾಗಿಯೇ ಲೇಖನದ ಕರಡನ್ನು ಪಿಡಿಎಫ್ ರೂಪದಲ್ಲಿ ಇಮೈಲ್ ಮೂಲಕ ತರಿಸಿಕೊಳ್ಳುತ್ತೇನೆ. ಪತ್ರಿಕೆಯವರಿಗೆ ಆದಷ್ಟು ಬೇಗನೆ ನಾನು ಅವರು ಕಳುಹಿಸಿದ ಕರಡನ್ನು ಓದಿ ಅದು ಸರಿಯಿದೆಯೇ ಎಂದು ತಿಳಿಸಬೇಕಿತ್ತು. ಅದರೆ ನಾನು ಬೆಂಗಳೂರು ತಲುಪಲು ಇನ್ನೂ ಒಂದೂವರೆ ಗಂಟೆ ಸಮಯವಿತ್ತು. ಮತ್ತೆ ನನ್ನ ಸ್ಮಾರ್ಟ್‌ಫೋನ್ ಹೊರಬಂತು. ಅದರಲ್ಲಿ ಇಮೈಲ್ ಮೂಲಕ ಬಂದ ಕರಡು ಪಿಡಿಎಫ್ ಫೈಲನ್ನು ಡೌನ್‌ಲೋಡ್ ಮಾಡಿಕೊಂಡೆ. ಆ ಫೋನಿನಲ್ಲೇ ಇರುವ ತಂತ್ರಾಂಶ ಬಳಸಿ ಪಿಡಿಎಫ್ ಕಡತವನ್ನು ತೆರೆದು ಓದಿದೆ. ಅದರಲ್ಲಿ ನೀಡಿದ ಜಾಲತಾಣಗಳ ವಿಳಾಸ ಸರಿಯಿದೆಯೇ ಎಂದು ಪರಿಶೀಲಿಸಲೂ ಮತ್ತೆ ಅದೇ ಫೋನಿನಲ್ಲಿರುವ ಜಾಲತಾಣ ವೀಕ್ಷಕ ತಂತ್ರಾಂಶದ ಬಳಕೆ ಮಾಡಿದೆ. ಇಮೈಲ್ ಮೂಲಕವೇ ಉತ್ತರವನ್ನೂ ನೀಡಿದೆ.
ಹಾಗೆಯೇ ಫೋನಿನಲ್ಲಿ ಟ್ವಿಟ್ಟರ್ ತೆರೆದು ನೋಡುತ್ತಿದ್ದಾಗ ಯಾರೋ ಒಬ್ಬರು ಮಾಡಿದ ಟ್ವೀಟ್ ಅನ್ನು ಮತ್ತೊಬ್ಬರು ಮರು-ಟ್ವೀಟ್ ಮಾಡಿದ್ದು ಗಮನ ಸೆಳೆಯಿತು. ಅದರಲ್ಲಿ ಅವರು ಹೇಳಿದ್ದೇನೆಂದರೆ ಕುಣಿಗಲ್ ಮತ್ತು ತುಮಕೂರು ಮಧ್ಯೆ ಲಾರಿಯೊಂದು ಮಗುಚಿ ಬಿದ್ದು ಸಂಚಾರ ಅಸ್ತವ್ಯಸ್ತವಾಗಿದೆಯೆಂದು. ಕಾರು ನಡೆಸುತ್ತಿದ್ದ ನನ್ನ ಗೆಳೆಯರಿಗೆ ಇದೇ ವಿಷಯ ತಿಳಿಸಿದೆ. ಅವರು ದಾರಿ ಬದಲಿಸಿ ಕುಣಿಗಲ್‌ನಿಂದ ಮಾಗಡಿ ಮೂಲಕ ಬೆಂಗಳೂರಿಗೆ ಕಾರು ಚಲಾಯಿಸಿದರು. ರಾತ್ರಿ ಎಂಟು ಘಂಟೆಗೆ ಮನೆ ತಲುಪಿಯೂ ಆಯಿತು.
ಈಗ ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬ ಬೆಟ್ಟದ ಜೀವದ ಕಡೆಗೆ ಹೋಗೋಣ. ಗೋವಿಂದ ಭಟ್ಟರಿಗೆ ೬೫ ವರ್ಷ ವಯಸ್ಸು. ಇಬ್ಬರು ಮಕ್ಕಳೂ ಮದುವೆಯಾಗಿ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕಂಪೆನಿಗಳಲ್ಲಿ ಕೆಲಸದಲ್ಲಿದ್ದಾರೆ. ಅತಿ ಸಮೀಪದ ರಸ್ತೆ ಅವರ ಮನೆಯಿಂದ ಹತ್ತು ಕಿ.ಮೀ. ದೂರ ಇದೆ. ಅಲ್ಲಿಗೆ ಹೋಗಬೇಕಿದ್ದರೂ ಮಧ್ಯದಲ್ಲೊಂದು ಸೇತುವೆಯಿಲ್ಲದ ನದಿ ಇದೆ. ಮಳೆಗಾಲದಲ್ಲಿ ನದಿ ತುಂಬಿ ಹರಿಯುವಾಗ ದೋಣಿಯೇ ಗತಿ. ದೋಣಿ ದಾಟಿಸುವವನು ರಾತ್ರಿ ಒಂಬತ್ತು ಗಂಟೆಗೆ ಮಲಗಿಬಿಡುತ್ತಾನೆ. ನಂತರ ದೋಣಿ ಇಲ್ಲ. ಗೋವಿಂದ ಭಟ್ಟರಿಗೆ ಒಂದು ಮಳೆಗಾಲದ ರಾತ್ರಿ ಹನ್ನೊಂದು ಗಂಟೆಗೆ ಎದೆ ನೋವು ಪ್ರಾರಂಭವಾಗುತ್ತದೆ. ಈ ಎದೆನೋವಿನ ಒಂದು ಸಮಸ್ಯೆ ಎಂದರೆ ಅದು ಮಾಮೂಲಿ ಗ್ಯಾಸಿನ ತೊಂದರೆಯೂ ಆಗಿರಬಹುದು. ಹೃದಯಾಘಾತದ ಚಿಹ್ನೆಯೂ ಆಗಿರಬಹುದು. ಎದೆನೋವು ನಿಜವಾಗಿಯೂ ಹೃದಯಾಘಾತದ ಮುನ್ಸೂಚನೆಯೋ ಎಂದು ತಿಳಿಯಬೇಕಾದರೆ ಇಸಿಜಿ ಒಂದೇ ಪರಿಹಾರ. ರಾತ್ರಿ ಹನ್ನೊಂದು ಗಂಟೆಗೆ ಈ ಮೂಲೆಯ ಹಳ್ಳಿಯಲ್ಲಿ ಇಸಿಜಿ ಎಲ್ಲಿಂದ ತರುತ್ತೀರಾ ಎನ್ನುವಿರಾ? ಗೋವಿಂದ ಭಟ್ಟರ ಪುತ್ರರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದೆನಲ್ಲ. ಅವರ ಮಗ ಅಮೇರಿಕಾಕ್ಕೆ ಹೋಗಿದ್ದಾಗ ಒಂದು ಪುಟಾಣಿ ಇಸಿಜಿ ಯಂತ್ರ ತಂದಿದ್ದ. ಅದು ಕೈಯಲ್ಲೆ ಹಿಡಿಯುವಂತಹದ್ದು. ಅದರಲ್ಲಿ ನಿಸ್ತಂತು, ಬ್ಲೂಟೂತ್ ಸೌಕರ್ಯಗಳ ಜೊತೆ ಜಿಎಸ್‌ಎಂ ಮೊಬೈಲ್ ಸಿಮ್ ಕಾರ್ಡ್ ಹಾಕುವ ಸವಲತ್ತೂ ಇತ್ತು. ಅದರಲ್ಲಿ ಸಿಮ್ ಕಾರ್ಡ್ ಹಾಕಿಯೇ ಮಗ ಭಟ್ಟರಿಗೆ ಕೊಟ್ಟಿದ್ದ. ಅದನ್ನು ಉಪಯೋಗಿಸುವ ರೀತಿಯನ್ನೂ ತಿಳಿಸಿದ್ದ. ಭಟ್ಟರು ಈ ಯಂತ್ರವನ್ನು ಬಳಸಿ ಇಸಿಜಿ ತೆಗೆದು ಅದನ್ನು ಆ ಯಂತ್ರದಲ್ಲೇ ಇರುವ ಸಿಮ್ ಕಾರ್ಡ್ ಮೂಲಕ ಮಗನಿಗೆ ಕಳುಹಿಸಿಕೊಟ್ಟರು. ಮಗ ಅದನ್ನು ಕೂಡಲೆ ತನ್ನ ಸ್ನೇಹಿತ ಹೃದಯವೈದ್ಯರಿಗೆ ರವಾನಿಸಿದ. ಅಲ್ಲಿಂದ ಕೂಡಲೇ ಉತ್ತರವೂ ಬಂತು. ಚಿಂತಿಸುವ ಕಾರಣ ಇಲ್ಲ ಎಂದು. ಮಗ ಅದನ್ನೇ ತಂದೆಗೆ ಫೋನಾಯಿಸಿ ತಿಳಿಸಿದ.
ಈ ಉದಾಹರಣೆಗಳು ಇಂದಿನ ನಮ್ಮ ಜೀವನದಲ್ಲಿ ಯಂತ್ರ-ತಂತ್ರಗಳು ಹೇಗೆ ವ್ಯಾಪಕವಾಗಿ ಆವರಿಸಿವೆ ಮತ್ತು ಅದರಿಂದಾಗಿ ಎಷ್ಟು ಪ್ರಯೋಜನಗಳಾಗಿವೆ ಎಂಬುದನ್ನೂ ಸೂಚಿಸುತ್ತವೆ. ಇವು ಕೇವಲ ಸಾಂಕೇತಿಕ ಉದಾಹರಣೆಗಳು. ಇಂತಹ ಘಟನೆಗಳು ಹಲವಾರಿವೆ. ತಂತ್ರಜ್ಞಾನದ ಕೊಡುಗೆಗಳು ಮಾನವನ ಜೀವನದ ಹಲವು ಅಂಗಗಳಲ್ಲಿ ಪ್ರಭಾವ ಬೀರಿವೆ ಮತ್ತು ಜೀವನ ಶೈಲಿಯ ಸುಧಾರಣೆಗೆ ಕಾರಣವಾಗಿವೆ.
ಈ ಬಾರಿಯ ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಜೊತೆಗೆ ಉಚಿತ ಕೊಡುಗೆಯಾಗಿ 'ಗ್ಯಾಡ್ಜೆಟ್ ಲೋಕ' ಎಂಬ ಪುಸ್ತಕ ಇದೆ. ಅದರಿಂದ ಆಯ್ದ ಕೆಲ ಸಾಲುಗಳು ಇಲ್ಲಿವೆ.
ಲೇಖಕರು: ಡಾ. ಯು. ಬಿ. ಪವನಜ
ಪಠ್ಯ ನೆರವು: ಟಿ. ಜಿ. ಶ್ರೀನಿಧಿ ಹಾಗೂ ಪ್ರಜಾವಾಣಿ ಸಂಪಾದಕೀಯ ತಂಡ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ