ಶುಕ್ರವಾರ, ಡಿಸೆಂಬರ್ 4, 2009

ಹೊಸ ಕಾರಿನ ಹುಡುಕಾಟ

ಟಿ ಜಿ ಶ್ರೀನಿಧಿ

ಕಾರುಗಳು ಕೆಲವರಿಗೆ ಪ್ರಯಾಣದ ಅನಿವಾರ್ಯ ಆಯ್ಕೆಯಾದರೆ ಇನ್ನು ಕೆಲವರಿಗೆ ಸಾರ್ವಜನಿಕ ಸಾರಿಗೆಗಿಂತ ಹೆಚ್ಚು ಅನುಕೂಲಕರ ಎಂಬ ಕಾರಣಕ್ಕಾಗಿ ಕಾರು ಬೇಕು. ಕಾರಿಟ್ಟುಕೊಳ್ಳುವುದು ಸ್ಟೇಟಸ್ ಸಿಂಬಲ್ ಎಂದು ನಂಬಿರುವವರು, ಶೋಕಿಗಾಗಿಯೇ ಕಾರು ಬಳಸುವವರೂ ಇದ್ದಾರೆ. ಒಟ್ಟಿನಲ್ಲಿ ಇಂತಹ ಯಾವುದೋ ಒಂದು ಕಾರಣದಿಂದ ಕಾರುಗಳು ನಮ್ಮ ಬದುಕುಗಳಲ್ಲಿ ಹಾಸುಹೊಕ್ಕಾಗಿಹೋಗಿವೆ. ಕೆಲವು ಸಾವಿರಗಳಿಗೆ ಸಿಗುವ ಹಳೆಯ ಕಾರುಗಳಿಂದ ಹಲವು ಲಕ್ಷಗಳಲ್ಲಿ ಸಿಗುವ ಹೊಸ ಕಾರುಗಳವರೆಗೆ ಯಾವುದೋ ಒಂದು ಕಾರು - ಅಥವಾ ಅಂಥದ್ದೊಂದನ್ನು ಕೊಳ್ಳುವ ಕನಸು - ಹೆಚ್ಚೂಕಡಿಮೆ ಎಲ್ಲರಲ್ಲೂ ಇರುತ್ತದೆ ಎಂದರೂ ತಪ್ಪಲ್ಲವೇನೋ.

ಕಾರಿನ ಆಕರ್ಷಣೆಯೇ ಅಂಥದ್ದು, ಬಿಡಿ. ಆದರೆ ಕಾರುಗಳ ಬಳಕೆ ಹೆಚ್ಚುತ್ತಾ ಹೋದಂತೆ ನಮ್ಮ ಪರಿಸರದ ಕತೆ ಏನಾಗಬಹುದು ಎಂಬ ಪ್ರಶ್ನೆ ಮಾತ್ರ ಎಂಥವರಲ್ಲೂ ಕೊಂಚಮಟ್ಟಿಗಿನ ಗಾಬರಿ ಹುಟ್ಟಿಸುತ್ತದೆ. ಟ್ರಾಫಿಕ್ ಜಾಮ್ ಇತ್ಯಾದಿಗಳೆಲ್ಲ ಸದ್ಯಕ್ಕೆ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿದೆ, ನಿಜ. ಆದರೆ ಪ್ರಪಂಚದಾದ್ಯಂತ ಕಾರುಗಳು ಕಬಳಿಸುತ್ತಿರುವ ಅಪಾರ ಪ್ರಮಾಣದ ಇಂಧನ ಹಾಗೂ ಅದರಿಂದ ಉಂಟಾಗುತ್ತಿರುವ ಮಾಲಿನ್ಯ ಮಾತ್ರ ಯಾವತ್ತಿದ್ದರೂ ದೊಡ್ಡ ಸಮಸ್ಯೆಯೇ.

ಹಾಗಂತ ಕಾರುಗಳೇ ಬೇಡ ಎನ್ನಲೂ ಆಗುವುದಿಲ್ಲವಲ್ಲ. ಹೀಗಾಗಿಯೇ ವಿದ್ಯುತ್ ಕಾರು, ಸಿಎನ್‌ಜಿ ಬಳಸುವ ಕಾರು ಮುಂತಾದ್ದನ್ನೆಲ್ಲ ರೂಪಿಸಿ ಈ ಸಮಸ್ಯೆಗೆ ಉತ್ತರ ಹುಡುಕುವ ಪ್ರಯತ್ನಗಳು ನಡೆಯುತ್ತಿವೆ.

ಇಂಥ ಪ್ರಯತ್ನಗಳನ್ನೆಲ್ಲ ಉತ್ತೇಜಿಸಿ ಅವುಗಳಲ್ಲಿ ಅತ್ಯುತ್ತಮ ಎನ್ನಿಸಿಕೊಳ್ಳುವುದನ್ನು ಗುರುತಿಸಿ ಗೌರವಿಸಲು ವಿಶಿಷ್ಟವಾದುದೊಂದು ಸ್ಪರ್ಧೆ ಇದೀಗ ನಡೆಯುತ್ತಿದೆ. ಉತ್ತಮ ಕಾರ್ಯಕ್ಷಮತೆ ಹೊಂದಿರುವ, ಮಾಲಿನ್ಯ ಉಂಟುಮಾಡದ, ಮಾರುಕಟ್ಟೆಗೆ ತರಬಹುದಾದಂಥ ಕಾರುಗಳ ವಿನ್ಯಾಸವನ್ನು ಪ್ರೋತ್ಸಾಹಿಸುವುದು ಈ ’ಪ್ರೋಗ್ರೆಸಿವ್ ಆಟೋಮೋಟಿವ್ ಎಕ್ಸ್ ಪ್ರೈಜ್’ ಸ್ಪರ್ಧೆಯ ಉದ್ದೇಶ.

ವಿವಿಧ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿರುವ ಎಕ್ಸ್ ಪ್ರ್ರೈಜ್ ಪ್ರತಿಷ್ಠಾನ ಈ ಸ್ಪರ್ಧೆ ನಡೆಸುತ್ತಿದೆ. ಒಂದು ಕೋಟಿ ಡಾಲರ್ ಬಹುಮಾನದ ಈ ಸ್ಪರ್ಧೆಯ ಸಹಪ್ರಾಯೋಜಕತ್ವ ಪ್ರೋಗ್ರೆಸಿವ್ ಇನ್ಷೂರೆನ್ಸ್ ಸಂಸ್ಥೆಯದು. ಅಮೆರಿಕಾ ಸರಕಾರದ ಹಲವು ಇಲಾಖೆಗಳೂ ಈ ಪ್ರಯತ್ನದ ಜೊತೆಗೆ ಕೈಗೂಡಿಸಿವೆ. ಈಗಾಗಲೇ ಮೊದಲ ಹಂತ ದಾಟಿ ಮುನ್ನಡೆದಿರುವ ಈ ಸ್ಪರ್ಧೆಯಲ್ಲಿ ಒಟ್ಟು ೪೩ ತಂಡಗಳು ಸ್ಪರ್ಧಿಸುತ್ತಿವೆ. ವಿದ್ಯುತ್ ಚಾಲಿತ ಏಲಿಯಾಸ್, ವಿಚಿತ್ರ ಆಕಾರದ ವೆರಿ ಲೈಟ್ ಕಾರ್, ಬಾಂಡ್ ಸಿನಿಮಾ ನೆನಪಿಸುವ ವೇವ್-೨ ಮುಂತಾದ ಹಲವಾರು ಆಕರ್ಷಕ ಕಾರುಗಳು ಈಗಾಗಲೇ ಸಿದ್ಧವೂ ಆಗಿವೆ.

ಈ ವಿಶಿಷ್ಟ ಸ್ಪರ್ಧೆಯ ಬಗೆಗೆ ಹೆಚ್ಚಿನ ಮಾಹಿತಿ www.progressiveautoxprize.org ತಾಣದಲ್ಲಿ ಲಭ್ಯವಿದೆ.

ಡಿಸೆಂಬರ್ ೧೦, ೨೦೦೯ರ ಸುಧಾದಲ್ಲಿ ಪ್ರಕಟವಾದ ಲೇಖನ
badge