ಗುರುವಾರ, ಡಿಸೆಂಬರ್ 28, 2017

ಮೊಬೈಲ್ ಫೋನ್: ಇನ್ನೂ ಮುಗಿದಿಲ್ಲ ಬದಲಾವಣೆಯ ಸಮಯ!

ಟಿ. ಜಿ. ಶ್ರೀನಿಧಿ

ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಂತ ಹೆಚ್ಚು ಬದಲಾವಣೆಗಳನ್ನು ಕಂಡಿರುವ, ಕಾಣುತ್ತಿರುವ ಸಾಧನಗಳ ಪೈಕಿ ದೂರವಾಣಿಗೆ ಪ್ರಮುಖ ಸ್ಥಾನವಿದೆ. ರಸ್ತೆಗೊಂದು, ಊರಿಗೊಂದು ಇರುತ್ತಿದ್ದ ಫೋನುಗಳು ಪ್ರತಿ ಮನೆಗೆ, ಪ್ರತಿ ಕೈಗೂ ತಲುಪಿರುವುದು ಎಷ್ಟು ದೊಡ್ಡ ಸಾಧನೆಯೋ ದೂರವಾಣಿಯ ರೂಪರೇಷೆಯಲ್ಲಿ ಆಗಿರುವ ಬದಲಾವಣೆಯೂ ಅಷ್ಟೇ ಮಹತ್ವದ ಸಾಧನೆ.

ನಾವೆಲ್ಲ ಚಿಕ್ಕವರಾಗಿದ್ದಾಗ ನಮ್ಮ ದೊಡ್ಡಪ್ಪನ ಮನೆಯಲ್ಲೊಂದು ದೂರವಾಣಿ ಇತ್ತು. ಫೋನನ್ನು ನೋಡುವುದೇ ಅಪರೂಪವಾಗಿದ್ದ  ಆ ಕಾಲದಲ್ಲಿ ಕೇಜಿ ತೂಕದ ಆ ಫೋನಿನ ರಿಸೀವರ್ ಎತ್ತಿ ಮಾತನಾಡುವುದೇ ಒಂದು ವಿಶೇಷ ಅನುಭವ. ಯಾವುದಾದರೂ ಕರೆಬಂದಾಗ ಅದನ್ನು ರಿಸೀವ್ ಮಾಡುವವರು ಯಾರು ಎನ್ನುವುದನ್ನು ತೀರ್ಮಾನಿಸಲು ಮಕ್ಕಳ ನಡುವೆ ಜಗಳ ನಡೆಯುತ್ತಿದ್ದದ್ದೂ ಉಂಟು.

ಈಗ, ನೂರು ಗ್ರಾಮ್ ಆಸುಪಾಸು ತೂಗುವ - ಕೆಲವೇ ಮಿಲೀಮೀಟರ್ ದಪ್ಪದ ಮೊಬೈಲುಗಳನ್ನು ನೋಡಿದಾಗ ದೂರವಾಣಿಯ ರೂಪಾಂತರ ಪರ್ವ ಸಂಪೂರ್ಣವಾಗಿದೆ ಎನ್ನಿಸದಿರದು. ಬರಿಯ ಮಾತನಾಡಲಷ್ಟೇ ಬಳಸಬಹುದಾಗಿದ್ದ ಅಷ್ಟುದೊಡ್ಡ ಯಂತ್ರದಿಂದ ಅಂಗೈ ಮೇಲಿನ ಕಂಪ್ಯೂಟರಿನಂತಹ ಇಂದಿನ ಗ್ಯಾಜೆಟ್‌ವರೆಗೆ ದೂರವಾಣಿ ಸಾಗಿಬಂದಿರುವ ಹಾದಿಯನ್ನು ನೋಡಿದಾಗ ಇನ್ನೇನು ತಾನೇ ಬದಲಾಗಲು ಸಾಧ್ಯ ಎಂಬ ಪ್ರಶ್ನೆ ಮೂಡಿದರೆ ಅದರಲ್ಲಿ ತಪ್ಪೂ ಇಲ್ಲ ಬಿಡಿ. ಆದರೆ ದೂರವಾಣಿಯ ಸ್ವರೂಪ ಬದಲಾಗುವ ಈ ಪ್ರಕ್ರಿಯೆ ಇನ್ನೂ ಮುಗಿದಿಲ್ಲ!

ಸೋಮವಾರ, ಡಿಸೆಂಬರ್ 25, 2017

ಮುಂದಿನ ಗುರಿ ಸ್ವಚ್ಛ ಬಾಹ್ಯಾಕಾಶ!

ಟಿ. ಜಿ. ಶ್ರೀನಿಧಿ


ಬೆಳಿಗ್ಗೆ ಟ್ಯಾಕ್ಸಿ ಹಿಡಿದು ಆಫೀಸಿಗೆ ಹೋಗುವುದರಿಂದ ಪ್ರಾರಂಭಿಸಿ ಸಂಜೆ ಮನೆಯಲ್ಲಿ ಕುಳಿತು ಧಾರಾವಾಹಿ ನೋಡುವವರೆಗೆ ದಿನನಿತ್ಯದ ಅದೆಷ್ಟೋ ಕೆಲಸಗಳು ಕೃತಕ ಉಪಗ್ರಹಗಳನ್ನು ಅವಲಂಬಿಸಿರುವ ವಿಷಯ ನಮಗೆಲ್ಲ ಗೊತ್ತೇ ಇದೆ. ಬಾಹ್ಯಾಕಾಶ ವಿಜ್ಞಾನದ ಹೊಸ ಸಾಧನೆಗಳ ಬಗೆಗೂ ನಾವು ಆಗಿಂದಾಗ್ಗೆ ಕೇಳುತ್ತಿರುತ್ತೇವೆ. ಹೊಸ ಉಪಗ್ರಹಗಳು ಗಗನಕ್ಕೆ ಚಿಮ್ಮಿದಂತೆಲ್ಲ ಹೊಸ ಸಾಧ್ಯತೆಗಳು ನಮ್ಮೆದುರು ತೆರೆದುಕೊಳ್ಳುತ್ತಲೇ ಹೋಗುತ್ತವೆ ಎನ್ನುವುದು ನಮ್ಮಲ್ಲಿ ಅನೇಕರ ಅಭಿಪ್ರಾಯ.

ಗುರುವಾರ, ಡಿಸೆಂಬರ್ 21, 2017

ಜಿಯೋಫೋನ್ ಬಂದಿದೆ, ಅದರಲ್ಲಿ ಏನಿದೆ?

ಅಭಿಷೇಕ್ ಜಿ. ಎಸ್.

ರಿಲಯನ್ಸ್‌ ಸಂಸ್ಥೆಯ ಜಿಯೋ ಉಚಿತ ಅಂತರ್ಜಾಲ ಸೇವೆಗಳನ್ನು ನೀಡುವುದರ ಮೂಲಕ ಬಹು ಬೇಗನೆ ಬಳಕೆದಾರರನ್ನು ತಲುಪಿದ್ದು ನಮಗೆಲ್ಲ ಗೊತ್ತೇ ಇದೆ. ಭಾರತದಾದ್ಯಂತ ಕೋಟ್ಯಂತರ ಬಳಕೆದಾರರು ಇದೀಗ ಜಿಯೋ ಸೇವೆಗಳನ್ನು ಬಳಸುತ್ತಿದ್ದಾರೆ.

ಇತರ ಸಂಸ್ಥೆಗಳಂತೆ ಮೊಬೈಲ್ ಸೇವೆಗಳಿಗೆ ಮಾತ್ರ ಸೀಮಿತವಾಗಿ ಉಳಿಯಲು ಬಯಸದ ಜಿಯೋ ಈಚೆಗೆ 'ಇಂಡಿಯಾದ ಸ್ಮಾರ್ಟ್‌ಫೋನ್' ಎಂಬ ಘೋಷಣೆಯೊಂದಿಗೆ ತನ್ನ ಮೊದಲ ಮೊಬೈಲ್ ಫೋನ್ ಆದ 'ಜಿಯೋಫೋನ್' ಅನ್ನು ಮಾರುಕಟ್ಟೆಗೆ ತಂದಿದೆ.

ಸೋಮವಾರ, ಡಿಸೆಂಬರ್ 18, 2017

ತೂಕ - ಕೌತುಕ!

ವಿನಾಯಕ ಕಾಮತ್


ಒಂದು ಸರಳ ಪ್ರಶ್ನೆ.

ಎರಡು ವಸ್ತುಗಳಿವೆ. ಒಂದು ಭೂಮಿಯ ಮೇಲಿದ್ದರೆ, ಇನ್ನೊಂದು ಚಂದ್ರನ ಮೇಲಿದೆ. ಆದರೆ ಎರಡೂ ವಸ್ತುಗಳ ತೂಕ (weight) ಒಂದೇ! ಹಾಗಿದ್ದರೆ, ಯಾವುದಕ್ಕೆ ಹೆಚ್ಚಿನ ದ್ರವ್ಯರಾಶಿ (mass) ಇರುತ್ತದೆ? ಮೇಲಿನ ಪ್ರಶ್ನೆಗೆ ನಿಮ್ಮ ಉತ್ತರ, 'ತೂಕ ಒಂದೇ ಎಂದ ಮೇಲೆ ದ್ರವ್ಯರಾಶಿಯೂ ಒಂದೇ ಇರಬೇಕಲ್ಲವೇ?' ಅಥವಾ 'ತೂಕ ಮತ್ತು ದ್ರವ್ಯರಾಶಿಯ ನಡುವೆ ವ್ಯತ್ಯಾಸ ವಿದೆಯೇ?' ಎಂಬುದಾಗಿದ್ದರೆ, ನೀವು ಈ ಲೇಖನವನ್ನು ಖಂಡಿತ ಓದಬೇಕು!

ಗುರುವಾರ, ಡಿಸೆಂಬರ್ 14, 2017

ಸೈಬರ್‍ ಅಪರಾಧಗಳ ಲೋಕದಲ್ಲಿ

ಉದಯ ಶಂಕರ ಪುರಾಣಿಕ


ಇ-ಮೇಲ್‍, ಜಾಲತಾಣ, ಮೊಬೈಲ್ ಫೋನ್‍, ಬ್ಯಾಂಕು ಖಾತೆ, ಖಾಸಗಿ ದಾಖಲೆಗಳು, ವೈಯಕ್ತಿಕ ಮಾಹಿತಿ, ಹೀಗೆ ವಿವಿಧ ರೀತಿಯ ಸೈಬರ್‍ ಅಪರಾಧಗಳನ್ನು ಕುರಿತು ಸುದ್ದಿಗಳನ್ನು ಮಾಧ್ಯಮಗಳು ಪ್ರಕಟಿಸುತ್ತಿವೆ. ಈ ಕೆಲಸ ಮಾಡಿದ ಪಡ್ಡೆ ಹುಡುಗರು ಚೀನಾದಲ್ಲಿದ್ದಾರೆ, ಅವರು ಮನಸ್ಸು ಮಾಡಿದರೆ ಇಡೀ ಭಾರತವನ್ನು ಹ್ಯಾಕ್‍ ಮಾಡಬಲ್ಲರು ಎನ್ನುವಂತಹ ಮಾಹಿತಿಯನ್ನೆಲ್ಲ ಹೆಸರು ಹೇಳಲು ಇಚ್ಛಿಸದ ಸರ್ಕಾರಿ ಅಧಿಕಾರಿ ನೀಡಿದರು, ಸೈಬರ್‍ ಕ್ರೈಂ ವಿಭಾಗದ ಹಿರಿಯ ಅಧಿಕಾರಿ ಹೇಳಿದರು ಎನ್ನುವಂತಹ ವರದಿಗಳೂ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ.

ಸೋಮವಾರ, ಡಿಸೆಂಬರ್ 11, 2017

ಡೂಪ್ಲಿಕೇಟ್ ಡಾಟ್ ಕಾಮ್!

ಟಿ. ಜಿ. ಶ್ರೀನಿಧಿ


ಬಹುಮಾನದ ಆಮಿಷವನ್ನೋ ಖಾತೆ ಸ್ಥಗಿತಗೊಳಿಸುವ ಬೆದರಿಕೆಯನ್ನೋ ಒಡ್ಡಿ ನಮ್ಮ ಖಾಸಗಿ ಮಾಹಿತಿ ಕದಿಯಲು ಪ್ರಯತ್ನಿಸುವವರ ಹಲವು ಕತೆಗಳನ್ನು ನಾವು ಕೇಳಿದ್ದೇವೆ. ಇಂತಹ ಕುತಂತ್ರಿಗಳ ಗಾಳಕ್ಕೆ ಸಿಲುಕಿ ಮೋಸಹೋದವರ ಬಗೆಗೂ ಪತ್ರಿಕೆಗಳಲ್ಲಿ ಓದಿದ್ದೇವೆ.

ಇವರೆಲ್ಲ ಮೋಸಹೋದದ್ದು ಹೇಗೆಂದು ಹುಡುಕಿಕೊಂಡು ಹೊರಟರೆ ಸಿಗುವ ಉತ್ತರಗಳ ಪೈಕಿ ಅತ್ಯಂತ ಸಾಮಾನ್ಯವಾದದ್ದು - ಇಮೇಲ್ ಅಥವಾ ಎಸ್ಸೆಮ್ಮೆಸ್‌ನಲ್ಲಿ ಬಂದ ಕೊಂಡಿಯನ್ನು ಕ್ಲಿಕ್ ಮಾಡಿದ್ದು, ಆಗ ತೆರೆದುಕೊಂಡ ತಾಣದಲ್ಲಿ ಅದು ಕೇಳಿದ ಮಾಹಿತಿಯನ್ನೆಲ್ಲ ಭರ್ತಿಮಾಡಿದ್ದು!

ಗುರುವಾರ, ಡಿಸೆಂಬರ್ 7, 2017

ಇದ್ದರೆ ಕೊಂಚವೇ ಎಚ್ಚರ, ವೈ-ಫೈ ಬಳಕೆ ಬಲು ಸರಳ!

ಟಿ. ಜಿ. ಶ್ರೀನಿಧಿ

ನಮ್ಮ ದೇಶದಲ್ಲಿ ಅಂತರಜಾಲ ಬಳಕೆ ಕಳೆದೊಂದು ವರ್ಷದಲ್ಲಿ ಹೆಚ್ಚಾಗಿದೆಯಲ್ಲ, ಆ ಏರಿಕೆಯ ಪ್ರಮಾಣ ಬಹುಶಃ ಜಾಗತಿಕ ಮಟ್ಟದಲ್ಲೇ ಒಂದು ದಾಖಲೆಯಿರಬೇಕು. ಮೊಬೈಲ್ ಡೇಟಾ ಬಳಕೆಯ ಪ್ರಮಾಣದಲ್ಲಂತೂ ವಿಶ್ವದ ರಾಷ್ಟ್ರಗಳ ಪೈಕಿ ನೂರೈವತ್ತನೇ ಸ್ಥಾನದಲ್ಲಿದ್ದ ಭಾರತ ಕಳೆದ ಒಂದೇ ವರ್ಷದಲ್ಲಿ ಮೊದಲ ಸ್ಥಾನಕ್ಕೇರಿಬಿಟ್ಟಿದೆ.

ಸದ್ಯ ಅಂತರಜಾಲ ಬಳಕೆಯ ದೊಡ್ಡದೊಂದು ಪಾಲು ಮೊಬೈಲ್ ಫೋನುಗಳ ಮೂಲಕವೇ ಆಗುತ್ತದೆ, ನಿಜ. ಆದರೆ ವೈ-ಫೈ (ನಿಸ್ತಂತು ಅಂತರಜಾಲ) ಬಳಕೆಯ ಪ್ರಮಾಣವೂ ಸಣ್ಣದೇನಲ್ಲ. ಕಚೇರಿಯ ಲ್ಯಾಪ್‌ಟಾಪ್, ಮನೆಯ ಸ್ಮಾರ್ಟ್ ಟೀವಿ, ಡೆಸ್ಕ್‌ಟಾಪ್, ಟ್ಯಾಬ್ಲೆಟ್ ಸೇರಿದಂತೆ ಅದೆಷ್ಟೋ ಸಾಧನಗಳು ಅಂತರಜಾಲದೊಡನೆ ಬೆಸೆದುಕೊಳ್ಳಲು ವೈ-ಫೈ ಸಂಪರ್ಕವನ್ನೇ ಅವಲಂಬಿಸಿರುತ್ತವೆ.

ಸೋಮವಾರ, ಡಿಸೆಂಬರ್ 4, 2017

ಗ್ಯಾಜೆಟ್ ಜಗತ್ತಿಗೂ ಉಂಟು ಗಣಿಗಾರಿಕೆಯ ನಂಟು

ಟಿ. ಜಿ. ಶ್ರೀನಿಧಿ


ನೀವು ಶಾಲೆ ಅಥವಾ ಕಾಲೇಜಿನಲ್ಲಿ ರಸಾಯನವಿಜ್ಞಾನದ ವಿದ್ಯಾರ್ಥಿಯಾಗಿದ್ದರೆ ಪೀರಿಯಾಡಿಕ್ ಟೇಬಲ್, ಅರ್ಥಾತ್ ಆವರ್ತ ಕೋಷ್ಟಕವೆಂಬ ಹೆಸರು ನಿಮಗೆ ನೆನಪಿರುವುದು ಸಾಧ್ಯ. ಜಗತ್ತಿನಲ್ಲಿರುವ ಅಷ್ಟೂ ಧಾತುಗಳನ್ನು (ಎಲಿಮೆಂಟ್ಸ್) ಕ್ರಮಬದ್ಧವಾಗಿ ಜೋಡಿಸಿಟ್ಟು ಅವುಗಳೆಲ್ಲದರ ಕುರಿತು ಪ್ರಾಥಮಿಕ ಮಾಹಿತಿ ನೀಡುವುದು ಈ ಕೋಷ್ಟಕದ ವೈಶಿಷ್ಟ್ಯ.

ಸಾಧಾರಣ ರಾಸಾಯನಿಕ ವಿಧಾನಗಳ ಮೂಲಕ ಇವನ್ನು ಇನ್ನಷ್ಟು ಸರಳ ಪದಾರ್ಥಗಳನ್ನಾಗಿ ವಿಭಜಿಸುವುದು ಸಾಧ್ಯವಾಗುವುದಿಲ್ಲ ಎನ್ನುವುದು ಧಾತುಗಳ ಪ್ರಮುಖ ಲಕ್ಷಣ. ಇವು ಲೋಹ, ಅಲೋಹ, ಅನಿಲ ಮುಂತಾದ ಹಲವಾರು ಗುಂಪುಗಳ ಪೈಕಿ ಯಾವುದಕ್ಕಾದರೂ ಸೇರಿರುವುದು ಸಾಧ್ಯ.

ಶುಕ್ರವಾರ, ಡಿಸೆಂಬರ್ 1, 2017

ಅಂಗೈಯಲ್ಲೇ ಗ್ರಂಥಾಲಯ, ಇದು ಡಿಜಿಟಲ್ ಲೈಬ್ರರಿ!

ಡಿಸೆಂಬರ್ ೧, ಪುಸ್ತಕಗಳನ್ನು ಇ-ಲೋಕಕ್ಕೆ ಕರೆತಂದ 'ಪ್ರಾಜೆಕ್ಟ್ ಗುಟನ್‌ಬರ್ಗ್' ಯೋಜನೆ ಪ್ರಾರಂಭವಾದ ದಿನ. ಇಂತಹ ಡಿಜಿಟಲ್ ಗ್ರಂಥಾಲಯಗಳ ಕುರಿತು ಇಜ್ಞಾನದಲ್ಲಿ ಹಿಂದೊಮ್ಮೆ ಪ್ರಕಟವಾಗಿದ್ದ ಲೇಖನವನ್ನು ನಿಮ್ಮ ವಿರಾಮದ ಓದಿಗಾಗಿ ಮತ್ತೆ ಪ್ರಕಟಿಸುತ್ತಿದ್ದೇವೆ.

ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ ಲೋಕದಲ್ಲಿ ಕೆಲವು ಘಟನೆಗಳಿಗೆ ಎಲ್ಲಿಲ್ಲದ ಮಹತ್ವ, ಜಗತ್ತನ್ನೇ ಬದಲಿಸಿದ ಶ್ರೇಯ.

ಈ ಘಟನೆಗಳಲ್ಲಿ ಹೊಸ ಸಂಗತಿಗಳ ಆವಿಷ್ಕಾರವೇ ಆಗಿರಬೇಕು ಎಂದೇನೂ ಇಲ್ಲ. ಆಗಲೇ ಅಸ್ತಿತ್ವದಲ್ಲಿರುವ ಪರಿಕಲ್ಪನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕವೂ ಇಂತಹ ಮೈಲಿಗಲ್ಲುಗಳು ಸೃಷ್ಟಿಯಾಗುವುದುಂಟು.

ಇಂತಹುದೊಂದು ಘಟನೆಯ ಹಿಂದೆ ಇದ್ದ ವ್ಯಕ್ತಿ ಜರ್ಮನಿಯ ಯೊಹಾನೆಸ್ ಗುಟನ್‌ಬರ್ಗ್. ಏಷಿಯಾದ ಹಲವೆಡೆ ಹಂತಹಂತಗಳಲ್ಲಿ ರೂಪುಗೊಂಡಿದ್ದ ಮುದ್ರಣ ತಂತ್ರಜ್ಞಾನವನ್ನು ಕೊಂಚ ಸುಧಾರಿಸಿ, ಪ್ರಾಯೋಗಿಕವಾಗಿ ಅಳವಡಿಸಿದ ಆತನ ಸಾಧನೆ ಮುದ್ರಣ ತಂತ್ರಜ್ಞಾನದ ಉಗಮಕ್ಕೆ ಕಾರಣವಾಯಿತು. ಆ ಮೂಲಕ ಜ್ಞಾನಪ್ರಸಾರಕ್ಕೆ ಹೊಸ ವೇಗ ದೊರಕಿತು; ಮಾಹಿತಿಯನ್ನು ಯಾರು ಯಾವಾಗ ಬೇಕಿದ್ದರೂ ಪಡೆದುಕೊಳ್ಳಬಹುದೆಂಬ ಸಾಧ್ಯತೆ ಜಗತ್ತಿಗೆ ಗೋಚರಿಸಿತು.

ಮುಂದೆ ಕೆಲ ಶತಮಾನಗಳ ನಂತರ ಜ್ಞಾನಪ್ರಸಾರಕ್ಕೆ ಇಷ್ಟೇ ಮಹತ್ವದ ಕೊಡುಗೆ ನೀಡಿದ ಸಾಧನೆಗಳ ಸಾಲಿನಲ್ಲಿ ಅಂತರಜಾಲಕ್ಕೆ (ಇಂಟರ್‌ನೆಟ್) ಪ್ರಮುಖ ಸ್ಥಾನವಿರುವುದು ನಮಗೆಲ್ಲ ಗೊತ್ತೇ ಇದೆ. ಇದೇ ಅಂತರಜಾಲದ ಮೂಲಕ ಜ್ಞಾನಪ್ರಸಾರದ ವಿನೂತನ ಮಾರ್ಗವೊಂದನ್ನು ತೋರಿಸಿಕೊಟ್ಟ ಸಾಧನೆಯ ಜೊತೆಯಲ್ಲೂ ಗುಟನ್‌ಬರ್ಗ್ ಹೆಸರೇ ಇರುವುದು ವಿಶೇಷ.

ಭಾನುವಾರ, ನವೆಂಬರ್ 26, 2017

ಆಡಳಿತ, ತಂತ್ರಜ್ಞಾನ ಮತ್ತು ಕನ್ನಡ

೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭ ನವೆಂಬರ್ ೨೬, ೨೦೧೭ರಂದು ನಡೆದ 'ಕನ್ನಡ ತಂತ್ರಜ್ಞಾನ' ಗೋಷ್ಠಿಯಲ್ಲಿ ಇ-ಆಡಳಿತ ಅನುಷ್ಠಾನದ ಸಮಸ್ಯೆಗಳ ಕುರಿತು ಮಂಡಿಸಿದ ಅಭಿಪ್ರಾಯಗಳ ಸಾರಾಂಶ

ಕೆ. ಎ. ದಯಾನಂದ, ಕ.ಆ.ಸೇ.

ಕ್ಷೀರ ಸಾಗರದೊಳಗಿದ್ದು ಹಂಸ ಹಾಲ ಬಯಸಲುಂಟೆ
ಕಡಲೊಳಗಿದ್ದ ಕಪ್ಪೆ ಜಲವ ಬಯಸಲುಂಟೆ
ಪುಷ್ಪದೊಳಗಿದ್ದ ದುಂಬಿ ಪರಿಮಳವ ಅರಸಲುಂಟೆ
ಎದೆಂತಯ್ಯ ತಾ ಲಿಂಗದೊಳಗಿದ್ದು ಬೇರೆ ಇತರ
ಕಾವ್ಯದೊಳಗಿರ್ಪ ಭ್ರಾಂತರನೇನೆಂಬೆನಯ್ಯ ಗುಹೇಶ್ವರ

20ನೇ ಶತಮಾನದಲ್ಲಿ ಬಳಸುವ ಜನಸಂಖ್ಯೆ ನಶಿಸಿದ ಕಾರಣ ಅಥವ ಜನ ಭಾಷೆಯನ್ನು ಸಂವಹನಕ್ಕೆ ಬಳಸದೇ ಇರುವುರಿಂದ 110 ಭಾಷೆಗಳು ನಾಶವಾಗಿವೆ. ಆಧುನಿಕತೆಯ ವೇಗದಲ್ಲಿ ಈ ನಾಶದ ಪ್ರಕ್ರಿಯೆಯು ಕೂಡ ವೇಗ ಪಡೆದುಕೊಂಡಿದ್ದು 21ನೇ ಶತಮಾನದ ಮೊದಲ ಅವಧಿಯಲ್ಲಿನ ಕೇವಲ 16 ವರ್ಷಗಳಲ್ಲಿ 12 ಭಾಷೆಗಳು ನಾಶವಾಗಿವೆ.

ಭಾಷೆಯನ್ನು ಕೇವಲ ಜನರಾಡುವ ಭಾಷೆಯಾಗಿ ಹೆಚ್ಚು ಬಳಕೆ ಮಾಡಿದ ಮಾತ್ರಕ್ಕೆ ಭಾಷೆ ಉಳಿಯುವುದೂ ಇಲ್ಲ ಬೆಳೆಯುವುದೂ ಇಲ್ಲ. ಭಾಷೆಯನ್ನು ನಮ್ಮ ಸಂವಹನದ ಮತ್ತು ಆರ್ಥಿಕ ಬದುಕಿನ ಭಾಗವಾಗಿ ಬಳಕೆ ಮಾಡಿದಾಗ ಮಾತ್ರ ಭಾಷೆ ಉಳಿಯುತ್ತದೆ ಹಾಗೂ ಬೆಳೆಯುತ್ತದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬಳಕೆ

೮೩ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 'ವಿಜ್ಞಾನ, ತಂತ್ರಜ್ಞಾನ ಮತ್ತು ಕನ್ನಡದ ಬಳಕೆ' ಗೋಷ್ಠಿಯಲ್ಲಿ ಮಂಡಿಸಿದ ಅಭಿಪ್ರಾಯಗಳ ಸಾರಾಂಶ

ಉದಯ ಶಂಕರ ಪುರಾಣಿಕ  

ನಿರಂತರ ಸಂಶೋಧನೆ ಮತ್ತು ಆವಿಷ್ಕಾರಗಳಿಂದಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವಪೂರ್ಣ ಬದಲಾವಣೆಗಳಾಗುತ್ತಿವೆ. ಹೊಸ ಸಂಶೋಧನೆಗಳು, ಆವಿಷ್ಕಾರಗಳು ಮತ್ತು ತಂತ್ರಜ್ಞಾನಾಧಾರಿತ ಸೇವೆಗಳನ್ನು ಕನ್ನಡ ಭಾಷೆಯಲ್ಲಿ ನೀಡುವುದರಿಂದ ಹೇಗೆ
೧) ಮಾತೃ ಭಾಷೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಬಹುದು
೨) ಅರಣ್ಯ ಸಂರಕ್ಷಣೆ ಮಾಡಬಹುದು
೩) ದೀರ್ಘ ಕಾಲದ ಅಂತರ ರಾಜ್ಯ ಜಲವಿವಾದಗಳನ್ನು ಪರಿಹರಿಸಿಕೊಳ್ಳಬಹುದು
೪) ಮಳೆ, ಬೆಳೆ, ಪಶುರೋಗ ಮುನ್ಸೂಚನೆ ಮೊದಲಾದ ಮಾಹಿತಿಯನ್ನು ರೈತರಿಗೆ ನೀಡಬಹುದು
೫) ಕನ್ನಡಿಗರಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯುವಂತೆ ಮಾಡಬಹುದು

ಈ ೫ ಪ್ರಮುಖ ವಿಷಯಗಳನ್ನು ಕುರಿತು ಚರ್ಚಿಸುವ ಮೊದಲು, ಇದುವರೆಗೆ ತಂತ್ರಜ್ಞಾನ ಮತ್ತು ಸೇವೆಗಳಲ್ಲಿ ಕನ್ನಡದ ಸೌಲಭ್ಯ ಇರುವುದನ್ನು ಕುರಿತು ತಿಳಿದುಕೊಳ್ಳೋಣ.

ಗುರುವಾರ, ನವೆಂಬರ್ 23, 2017

ಈ ವಾರದ ವಿಶೇಷ: ಸೆಲ್ಫಿಗೆಂದೇ ಹೊಸ ಫೋನು

ಅಭಿಷೇಕ್ ಜಿ. ಎಸ್.

ಈಚಿನ ವರ್ಷಗಳಲ್ಲಿ ಮೊಬೈಲ್ ಫೋನಿನ ಅತಿಮುಖ್ಯ ಉಪಯೋಗಗಳಲ್ಲಿ ಸ್ಥಾನಪಡೆದುಕೊಂಡಿರುವುದು ಸೆಲ್ಫಿ. ಮೊಬೈಲ್ ಫೋನ್ ಬಳಕೆ ಹಾಗೂ ಸಮಾಜಜಾಲಗಳ (ಸೋಶಿಯಲ್ ನೆಟ್‌ವರ್ಕ್) ಜನಪ್ರಿಯತೆ ಎರಡೂ ಬೆಳೆದಂತೆ ಸೆಲ್ಫಿಗಳನ್ನು ಕ್ಲಿಕ್ ಮಾಡುವುದು ಹಾಗೂ ಇತರರೊಡನೆ ಹಂಚಿಕೊಳ್ಳುವುದು ಇದೀಗ ಸರ್ವೇಸಾಮಾನ್ಯವಾದ ಸಂಗತಿಯಾಗಿದೆ. [ಓದಿ: ಸೆಲ್ಫಿ ಸುತ್ತಮುತ್ತ]

ಸೆಲ್ಫಿ ಜನಪ್ರಿಯತೆ ಹೆಚ್ಚುತ್ತಿರುವಂತೆಯೇ ಸೆಲ್ಫಿ ಛಾಯಾಗ್ರಹಣವನ್ನೇ ಪ್ರಮುಖಾಂಶವಾಗಿಟ್ಟುಕೊಂಡ ಮೊಬೈಲುಗಳೂ ಮಾರುಕಟ್ಟೆಗೆ ಬರುತ್ತಿವೆ. ತೈವಾನಿನ ಟೆಕ್ ದಿಗ್ಗಜ ಏಸುಸ್ ಇತ್ತೀಚೆಗೆ ಪರಿಚಯಿಸಿರುವ 'ಜೆನ್‌ಫೋನ್ ೪ ಸೆಲ್ಫಿ ಪ್ರೋ' ಇಂತಹ ಫೋನುಗಳಿಗೊಂದು ಉದಾಹರಣೆ.

ಶುಕ್ರವಾರ, ನವೆಂಬರ್ 17, 2017

ವಾರಾಂತ್ಯ ವಿಶೇಷ: ತಂತ್ರಜ್ಞಾನದಲ್ಲಿ ಕನ್ನಡವೆಂದರೆ ಟೈಪಿಂಗ್ ಮಾತ್ರವೇ ಅಲ್ಲ!

ಟಿ. ಜಿ. ಶ್ರೀನಿಧಿ


ನವೆಂಬರ್ ತಿಂಗಳಿನಲ್ಲಿ ಎಲ್ಲೆಡೆಯೂ ಕನ್ನಡದ ನಾಳೆಗಳದೇ ಮಾತು. ನಮ್ಮ ಭಾಷೆ ತಂತ್ರಜ್ಞಾನಕ್ಕೆ ತೆರೆದುಕೊಳ್ಳಬೇಕು, ವಿಶ್ವದ ಇತರ ಭಾಷೆಗಳಲ್ಲಿ ಲಭ್ಯವಿರುವ ಸವಲತ್ತುಗಳು ನಮ್ಮ ಭಾಷೆಯಲ್ಲೂ ಸಿಗಬೇಕು ಎನ್ನುವಂತಹ ಹೇಳಿಕೆಗಳು ಅತಿಹೆಚ್ಚುಬಾರಿ ಕೇಳಸಿಗುವುದು ಬಹುಶಃ ಈ ತಿಂಗಳಲ್ಲೇ ಇರಬೇಕು.

ತಂತ್ರಜ್ಞಾನದಲ್ಲಿ ಕನ್ನಡ ಎಂದರೇನು?

ಸೋಮವಾರ, ನವೆಂಬರ್ 13, 2017

ಕನ್ನಡ: ನಿನ್ನೆ, ಇಂದು ಮತ್ತು ನಾಳೆ

ಇಜ್ಞಾನ ವಾರ್ತೆ

ಕನ್ನಡ ಭಾಷೆಯ ಇತಿಹಾಸ, ವರ್ತಮಾನ ಹಾಗೂ ಭವಿಷ್ಯ ಕುರಿತ 'ಕನ್ನಡ: ನಿನ್ನೆ, ಇಂದು ಮತ್ತು ನಾಳೆ' ವಿಚಾರಸಂಕಿರಣ ಬರುವ ನವೆಂಬರ್ ೧೯ರಂದು ನಡೆಯಲಿದೆ. ವಿಜ್ಞಾನ, ತಂತ್ರಜ್ಞಾನ, ಕನ್ನಡ ಹಾಗೂ ಸಂಸ್ಕೃತಿ ಕುರಿತ ವಿವಿಧ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ ನವಕರ್ನಾಟಕ ಪ್ರಕಾಶನದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಈ ವಿಚಾರಸಂಕಿರಣ ನಡೆಯಲಿದ್ದು ಕಾರ್ಯಕ್ರಮ ನವೆಂಬರ್ ೧೯, ೨೦೧೭ರ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಪ್ರಾರಂಭವಾಗಲಿದೆ.

ಗುರುವಾರ, ನವೆಂಬರ್ 9, 2017

ಹುಷಾರು, ಫಿಶಿಂಗ್ ಗಾಳಕ್ಕೆ ಸಿಕ್ಕಬೇಡಿ!

ಟಿ. ಜಿ. ಶ್ರೀನಿಧಿ


ಮೊನ್ನೆ ಬೆಳಿಗ್ಗೆ ನನ್ನ ಪರಿಚಯದ ಹಿರಿಯರಿಂದ ಒಂದು ಇಮೇಲ್ ಬಂತು. "ನಾನು ಸ್ಪೇನ್‍ಗೆ ಬಂದಿದ್ದೆ, ಹುಷಾರು ತಪ್ಪಿದೆ. ನಿನ್ನ ಬಳಿ ಅರ್ಜೆಂಟಾಗಿ ಮಾತನಾಡಬೇಕು, ಈ ಸಂಖ್ಯೆಗೆ ಕರೆಮಾಡು" ಎನ್ನುವುದು ಇಮೇಲಿನ ಸಾರಾಂಶ. ಆ ಹಿರಿಯರು ಆಗಿಂದಾಗ್ಗೆ ವಿದೇಶ ಪ್ರವಾಸ ಮಾಡುವವರೇ ಆದರೂ ಎಂದೂ ಇಂತಹ ಇಮೇಲ್ ಕಳಿಸಿದವರಲ್ಲ. ಹೀಗಾಗಿ ಅವರ ಮನೆಯ ಲ್ಯಾಂಡ್‍ಲೈನನ್ನೂ ಮೊಬೈಲನ್ನೂ ಸಂಪರ್ಕಿಸಲು ಪ್ರಯತ್ನಿಸಿದೆ. ನಾಲ್ಕು ಪ್ರಯತ್ನದ ನಂತರ ಮೊಬೈಲಿನಲ್ಲಿ ಸಿಕ್ಕವರು ನಾನೆಲ್ಲೂ ಹೋಗಿಲ್ಲ, ನಿನಗೆ ಬಂದಿರುವುದು ನಕಲಿ ಇಮೇಲ್ ಎಂದು ಖಚಿತಪಡಿಸಿದರು.

ಹಿಂದೆ ವಿದೇಶಗಳಲ್ಲಷ್ಟೇ ನಡೆಯುತ್ತಿದ್ದ, ಮಾಧ್ಯಮಗಳ ಮೂಲಕ ನಮಗೆ ತಿಳಿಯುತ್ತಿದ್ದ ಇಂತಹ ಹಗರಣಗಳು ಇದೀಗ ನಮ್ಮ ದೇಶದಲ್ಲೂ ವ್ಯಾಪಕವಾಗಿ ಬೆಳೆಯುತ್ತಿವೆ.

ಸೋಮವಾರ, ನವೆಂಬರ್ 6, 2017

ಮೊಬೈಲ್ ಫೋನ್ ಅಡಿಕ್ಷನ್: ಹೈಟೆಕ್ ಚಟವೊಂದರ ಹಿಂದೆಮುಂದೆ

'ಮೈತ್ರಿ'

ಈ ಪ್ರಪಂಚದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಅಭ್ಯಾಸವಿರುತ್ತದೆ. ಹಾಡು ಹೇಳುವುದು, ಹರಟೆ ಹೊಡೆಯುವುದು, ಮೂಗಿಗೆ ಬೆರಳು ಹಾಕುವುದು, ಸುಳ್ಳು ಹೇಳುವುದು, ಸಿಗರೇಟು ಸೇದುವುದು, ಹೆಂಡ ಕುಡಿಯುವುದು - ಹೀಗೆ ಇಂತಹ ಅಭ್ಯಾಸಗಳು ಯಾವ ರೀತಿಯದ್ದಾದರೂ ಆಗಿರುವುದು ಸಾಧ್ಯ.

ಕೆಲವೊಮ್ಮೆ ಕೆಲವು ಅಭ್ಯಾಸಗಳು ನಿಯಂತ್ರಣಗಳನ್ನೆಲ್ಲ ಮೀರಿ ಬೆಳೆದುಬಿಡುತ್ತವೆ. ಕಚೇರಿಯ ವೇಳೆಯಲ್ಲೂ ಗೆಳೆಯರೊಡನೆ ಹರಟುವ ಆಸೆಯಾಗುವುದು, ಎಷ್ಟು ಸಿಗರೇಟ್ ಸೇದಿದರೂ ಸಾಲದೆನ್ನಿಸುವುದೆಲ್ಲ ಇಂತಹ ಪರಿಸ್ಥಿತಿಯಲ್ಲೇ.

ಚಟ ಎಂದು ಕರೆಯುವುದು ಇದನ್ನೇ. ಹೆಸರಾಂತ ವಿಜ್ಞಾನಿ, ಲೇಖಕ ಡಾ. ಬಿ. ಜಿ. ಎಲ್. ಸ್ವಾಮಿ ತಮ್ಮ 'ಸಾಕ್ಷಾತ್ಕಾರದ ದಾರಿಯಲ್ಲಿ' ಕೃತಿಯಲ್ಲಿ "ಇಷ್ಟು ದೊರಕಿದರೆ ಅಷ್ಟು ಬೇಕೆಂಬಾಸೆ, ಅಷ್ಟು ದೊರಕಿದರೆ ಮತ್ತಷ್ಟರಾಸೆ"ಯನ್ನು ಹುಟ್ಟಿಸುವುದೇ ಚಟ ಎಂದು ಹೇಳುತ್ತಾರೆ.

ಈ ಕೃತಿಯಲ್ಲಿ ಎಲೆ-ಅಡಕೆ, ತಂಬಾಕು, ಅಫೀಮು-ಗಾಂಜಾ, ಕಾಫಿ-ಟೀಗಳನ್ನೆಲ್ಲ ಚಟಕ್ಕೆ ಉದಾಹರಣೆಗಳೆಂದು ಪಟ್ಟಿಮಾಡಲಾಗಿದೆ. ಸ್ವಾಮಿಯವರು ಈಗ ಇದ್ದಿದ್ದರೆ ಖಂಡಿತಾ ಇನ್ನೊಂದು ವಸ್ತುವನ್ನೂ ಈ ಸಾಲಿಗೆ ಸೇರಿಸಿರುತ್ತಿದ್ದರು ಅನ್ನಿಸುತ್ತದೆ.

ಆ ವಸ್ತುವೇ ಮೊಬೈಲ್ ಫೋನು!

ಬುಧವಾರ, ನವೆಂಬರ್ 1, 2017

ರಾಜ್ಯೋತ್ಸವದ ದಿನ ಖುಷಿಯದೊಂದು ಸುದ್ದಿ

ಇಜ್ಞಾನ ವಿಶೇಷ

ಕರ್ನಾಟಕ ರಾಜ್ಯೋತ್ಸವದ ದಿನ ಈ ವಿಷಯ ಹಂಚಿಕೊಳ್ಳಲು ಖುಷಿಯಾಗುತ್ತಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೆರವಿನೊಡನೆ ಇಜ್ಞಾನ ಟ್ರಸ್ಟ್ ರೂಪಿಸಿರುವ 'ಕಂಪ್ಯೂಟರ್-ತಂತ್ರಜ್ಞಾನ ಪದವಿವರಣ ಕೋಶ' ಕೃತಿ ಬಿಡುಗಡೆಯಾಗಿದೆ. ನಿನ್ನೆ (ಅಕ್ಟೋಬರ್ ೩೧) ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಈ ಕೃತಿಯ ಲೋಕಾರ್ಪಣೆ ನೆರವೇರಿಸಿದರು.

ಸೋಮವಾರ, ಅಕ್ಟೋಬರ್ 30, 2017

ಪಾಸ್‌ವರ್ಡ್‌ನಿಂದ 'ಫೇಸ್‌'ವರ್ಡ್‌ವರೆಗೆ...

ಟಿ. ಜಿ. ಶ್ರೀನಿಧಿ


ವಿವಿಧ ಕೆಲಸಗಳಿಗಾಗಿ ರಹಸ್ಯ ಸಂಕೇತಗಳ ಬಳಕೆ ಬಹು ಹಿಂದಿನಿಂದಲೂ ನಡೆದುಬಂದಿರುವ ಸಂಗತಿ. ಇವತ್ತಿನ ಪಾಸ್‌ವರ್ಡ್-ಪಿನ್‌ಗಳ ಕತೆ ಹಾಗಿರಲಿ, ಹಲವು ನೂರು ವರ್ಷಗಳ ಹಿಂದಿನ ಸನ್ನಿವೇಶಗಳನ್ನು ಕಟ್ಟಿಕೊಡುವ ತ.ರಾ.ಸು. ಕಾದಂಬರಿಗಳಲ್ಲೂ ಕೋಟೆಬಾಗಿಲು ತೆರೆದುಕೊಳ್ಳುವುದು ಗುಪ್ತಪದ ಹೇಳಿದಾಗಲೇ!

ಹಣಕಾಸು ವ್ಯವಹಾರಗಳಲ್ಲಿ, ಖಾಸಗಿ ಮಾಹಿತಿಯ ನಿರ್ವಹಣೆಯಲ್ಲಿ ವಿದ್ಯುನ್ಮಾನ ಸಾಧನಗಳ  ಬಳಕೆ ಹೆಚ್ಚಿದಮೇಲಂತೂ ಪಾಸ್‌ವರ್ಡ್ ಬಳಕೆಗೆ ಎಲ್ಲಿಲ್ಲದ ಮಹತ್ವ ಬಂದಿದೆ. ಸುಲಭವಾಗಿ ಊಹಿಸಲು ಸಾಧ್ಯವಿಲ್ಲದಂತಹ ಪದಗಳನ್ನು ಆರಿಸಿಕೊಳ್ಳುವುದು, ಆರಿಸಿಕೊಂಡ ಪದಗಳ ಗೌಪ್ಯತೆ ಕಾಪಾಡಿಕೊಳ್ಳುವುದು, ಕುತಂತ್ರಾಂಶಗಳು ಅವನ್ನು ಕದಿಯದಂತೆ ನೋಡಿಕೊಳ್ಳುವುದು - ಎಲ್ಲವನ್ನೂ ಹೊರಪ್ರಪಂಚದಲ್ಲಿ ಬೆಲೆಬಾಳುವ ವಸ್ತುಗಳನ್ನು ಜೋಪಾನ ಮಾಡಿದಷ್ಟೇ ಕಾಳಜಿಯಿಂದ ಮಾಡಬೇಕಾದ ಪರಿಸ್ಥಿತಿ ಇವತ್ತಿನದು.

ಗುರುವಾರ, ಅಕ್ಟೋಬರ್ 26, 2017

ಹುದುಗುವಿಕೆಯಲ್ಲಿ ಹುದುಗಿದ ರಹಸ್ಯ!

ಕ್ಷಮಾ ವಿ. ಭಾನುಪ್ರಕಾಶ್


ಹಿಂದಿನ ರಾತ್ರಿ ರುಬ್ಬಿ ಇಟ್ಟಿದ್ದ ಅರ್ಧ ಡಬ್ಬಿ ದೋಸೆ ಹಿಟ್ಟು, ಬೆಳಿಗ್ಗೆ ನೋಡಿದರೆ ಡಬ್ಬಿಯಿಂದ ಉಕ್ಕಿ ಹೊರಗೆಲ್ಲ ಚೆಲ್ಲಿದೆ. ಬೆಳಿಗ್ಗೆ ಹೆಪ್ಪು ಹಾಕಿದಾಗ ಇನ್ನೂ ಹಾಲೇ ಆಗಿತ್ತು, ಸಂಜೆ ನೋಡಿದರೆ ಮೊಸರಾಗಿದೆ.

ನಮಗೆಲ್ಲ ಚೆನ್ನಾಗಿಯೇ ಪರಿಚಯವಿರುವ ಸಂಗತಿಗಳು ಇವು. ನಮ್ಮ ಅಜ್ಜಿ-ತಾತ, ಅವರ ಅಜ್ಜಿ-ತಾತನಿಗೂ ಗೊತ್ತಿದ್ದವೇ ಇರಬೇಕು. ಹೀಗೆಲ್ಲ ಆಗುವುದರ ಹಿಂದಿನ ರಹಸ್ಯ ಏನು? ನೋಡೋಣ ಬನ್ನಿ.

ಸೋಮವಾರ, ಅಕ್ಟೋಬರ್ 23, 2017

ಗೂಗಲ್‍ನಿಂದ ಹೊಸ ಫೋನು; ಅದರಲ್ಲಿ ಹೊಸದೇನು?

ಅಭಿಷೇಕ್ ಜಿ. ಎಸ್.

ಅಂತರಜಾಲ ಆಧರಿತ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಗೂಗಲ್, ಈ ಕ್ಷೇತ್ರದ ಅತ್ಯಂತ ಜನಪ್ರಿಯ ಸಂಸ್ಥೆಗಳಲ್ಲೊಂದು. ೧೯೯೮ರಲ್ಲಿ ಪ್ರಾರಂಭವಾದ ಗೂಗಲ್ ಇದೀಗ ಅಂತರಜಾಲ ಬಳಕೆದಾರರಲ್ಲದವರಿಗೂ ಪರಿಚಿತವಾದ ಹೆಸರು.

ನಮಗೆಲ್ಲ ಗೂಗಲ್ ಎಂದೊಡನೆ ಮೊದಲು ನೆನಪಾಗುವುದು ಸರ್ಚ್ ಇಂಜನ್. ವಿಶ್ವವ್ಯಾಪಿ ಜಾಲದಲ್ಲಿ (ವರ್ಲ್ಡ್ ವೈಡ್ ವೆಬ್) ನಮಗೆ ಬೇಕಾದ ಮಾಹಿತಿಯನ್ನು ಹುಡುಕಿಕೊಳ್ಳುವ ಪ್ರಕ್ರಿಯೆಗೆ "ಗೂಗಲ್ ಮಾಡುವುದು" ಎಂಬ ಹೆಸರೇ ಇದೆಯಲ್ಲ! ಜಿಮೇಲ್, ಯೂಟ್ಯೂಬ್ ಮುಂತಾದವೂ ಗೂಗಲ್‍ ಸೇವೆಗಳೇ ಎನ್ನುವುದೂ ನಮಗೆಲ್ಲ ಗೊತ್ತು. ಆದರೆ ಗೂಗಲ್ ಉತ್ಪನ್ನಗಳಲ್ಲಿ ಸ್ಮಾರ್ಟ್‌ಫೋನ್ ಕೂಡ ಒಂದು ಎನ್ನುವ ವಿಷಯ ಬಹುತೇಕರಿಗೆ ತಿಳಿದಿಲ್ಲ.

ಬುಧವಾರ, ಅಕ್ಟೋಬರ್ 18, 2017

ವಾರದ ವಿಶೇಷ: ಬೆಳಕು ಸೂಸುವ ಡಯೋಡುಗಳ ಬಗ್ಗೆ...

ಟಿ. ಜಿ. ಶ್ರೀನಿಧಿ

ಮಕ್ಕಳ ಆಟಿಕೆ, ಸೀರಿಯಲ್ ಸೆಟ್, ಟ್ರಾಫಿಕ್ ಸಿಗ್ನಲ್, ಬಸ್ಸು - ರೈಲಿನ ಬೋರ್ಡು ಮುಂತಾದ ಕಡೆಗಳಲ್ಲಿ ಎಲ್‌ಇಡಿಗಳು ಬಳಕೆಯಾಗುವುದು ನಮಗೆ ಗೊತ್ತೇ ಇದೆ. ಬಹುತೇಕ ಟೀವಿ, ಮೊಬೈಲ್ ಫೋನುಗಳ ಪರದೆಯನ್ನು ಬೆಳಗುವುದೂ ಇದೇ ಎಲ್‌ಇಡಿಗಳು.

ಎಲ್‌ಇಡಿ ಎನ್ನುವುದು ಲೈಟ್ ಎಮಿಟಿಂಗ್ ಡಯೋಡ್ ಎನ್ನುವ ಹೆಸರಿನ ಹ್ರಸ್ವರೂಪ.

ಶುಕ್ರವಾರ, ಅಕ್ಟೋಬರ್ 13, 2017

ವೀಕೆಂಡ್ ಇಜ್ಞಾನ: ತಂತ್ರಾಂಶ ವಿಶ್ವದಲ್ಲಿ ರೋಬಾಟ್‌ಗಳ ಜಗತ್ತು

ಟಿ. ಜಿ. ಶ್ರೀನಿಧಿ

ಯಂತ್ರಮಾನವ, ಅಂದರೆ ರೋಬಾಟ್‌ಗಳ ಪರಿಕಲ್ಪನೆ ಬಹಳ ರೋಚಕವಾದದ್ದು. ಸಾಮಾನ್ಯ ಜನರಿಗೆ ರೋಬಾಟ್‌ಗಳ ಪರಿಚಯವಿರುವುದು ಹೆಚ್ಚಾಗಿ ಕತೆಗಳ-ಚಲನಚಿತ್ರಗಳ ಮೂಲಕವೇ ಇರಬಹುದು; ಆದರೆ ಈಚಿನ ವರ್ಷಗಳಲ್ಲಿ ನೈಜ ರೋಬಾಟ್‌ಗಳು ಅನೇಕ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿವೆ. ಕಾರ್ಖಾನೆಯಲ್ಲಿ ಕೆಲಸಮಾಡುವುದರಿಂದ ಪ್ರಾರಂಭಿಸಿ ಮನೆಯ ಕಸ ಗುಡಿಸುವವರೆಗೆ ಇಂತಹ ರೋಬಾಟ್‌ಗಳ ಕಾರ್ಯಕ್ಷೇತ್ರ ಬಹಳ ವಿಸ್ತಾರವಾಗಿ ವ್ಯಾಪಿಸಿಕೊಂಡಿದೆ.

ಇಂತಹ ಎಲ್ಲ ರೋಬಾಟ್‌ಗಳೂ ಒಂದಲ್ಲ ಒಂದು ಬಗೆಯ ಯಂತ್ರಗಳೇ. ಸಿನಿಮಾಗಳಲ್ಲಿ ಕಾಣಸಿಗುವ ಮನುಷ್ಯರೂಪದ ಯಂತ್ರವಿರಲಿ, ಅತ್ತಿತ್ತ ಓಡಾಡುತ್ತ ಮನೆಯ ಕಸಗುಡಿಸುವ ಪುಟಾಣಿ ಪೆಟ್ಟಿಗೆಯಂತ ಯಂತ್ರವೇ ಇರಲಿ ನಿರ್ದಿಷ್ಟ ಕೆಲಸಗಳನ್ನು ಸ್ವಯಂಚಾಲಿತವಾಗಿ ಮಾಡುವ ಶಕ್ತಿಯಿರುವುದು ರೋಬಾಟ್‌ಗಳ ವೈಶಿಷ್ಟ್ಯ.

ಯಂತ್ರಾಂಶದ (ಹಾರ್ಡ್‌ವೇರ್) ರೂಪದಲ್ಲಿ ಇಷ್ಟೆಲ್ಲ ಕೆಲಸಮಾಡಬಲ್ಲ ರೋಬಾಟ್‌ಗಳನ್ನು ತಂತ್ರಾಂಶಗಳ (ಸಾಫ್ಟ್‌ವೇರ್) ರೂಪದಲ್ಲಿ ಬಳಸಲು ಸಾಧ್ಯವಿಲ್ಲವೇ?

ಮಂಗಳವಾರ, ಅಕ್ಟೋಬರ್ 10, 2017

ಸೆಲ್ಫಿ ಸುತ್ತಮುತ್ತ

ಟಿ. ಜಿ. ಶ್ರೀನಿಧಿ

ಈಚಿನ ವರ್ಷಗಳಲ್ಲಿ ಮೊಬೈಲ್ ಫೋನುಗಳ ಬಳಕೆ ಎಷ್ಟು ವ್ಯಾಪಕವಾಗಿದೆಯೋ ಅಷ್ಟೇ ವ್ಯಾಪಕವಾಗಿ ಬೆಳೆದಿರುವುದು ಸೆಲ್ಫಿ ಸೆರೆಹಿಡಿಯುವ ಅಭ್ಯಾಸ. ಮೊಬೈಲ್ ಫೋನ್ ಬಳಕೆ ಹಾಗೂ ಸಮಾಜಜಾಲಗಳ (ಸೋಶಿಯಲ್ ನೆಟ್‌ವರ್ಕ್) ಜನಪ್ರಿಯತೆ ಎರಡೂ ಬೆಳೆದಂತೆ ಸೆಲ್ಫಿಗಳನ್ನು ಕ್ಲಿಕ್ಕಿಸುವುದು ಹಾಗೂ ಇತರರೊಡನೆ ಹಂಚಿಕೊಳ್ಳುವುದು ಸರ್ವೇಸಾಮಾನ್ಯವಾದ ಸಂಗತಿಯಾಗಿದೆ. ಫೇಸ್‌ಬುಕ್, ಇನ್ಸ್‌ಟಾಗ್ರಾಮ್, ಟ್ವಿಟರ್ ಮುಂತಾದ ತಾಣಗಳಲ್ಲಿ ಸೆಲ್ಫಿಗಳು ಲಕ್ಷಾಂತರ ಸಂಖ್ಯೆಯಲ್ಲಿರುತ್ತವೆ.

ಪ್ರವಾಸಿ ತಾಣಗಳಲ್ಲಂತೂ ಸೆಲ್ಫಿ ಕ್ಲಿಕ್ಕಿಸುವ ಭರಾಟೆ ಅತ್ಯುನ್ನತ ಮಟ್ಟದಲ್ಲಿರುವುದನ್ನು ನಾವು ನೋಡಬಹುದು. ಕಿರಿಕಿರಿಮಾಡುವ ಸ್ಮಾರ್ಟ್‌ಫೋನ್ ಅಭ್ಯಾಸಗಳ ಕುರಿತು ನಡೆದಿರುವ ಹಲವು ಸಮೀಕ್ಷೆಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ, ಹಲವು ದುರಂತಗಳಿಗೆ ಕಾರಣವಾಗಿರುವ ಕುಖ್ಯಾತಿಯೂ ಸೆಲ್ಫಿಯದೇ.

ಶುಕ್ರವಾರ, ಅಕ್ಟೋಬರ್ 6, 2017

ವೀಕೆಂಡ್ ಇಜ್ಞಾನ: ಹಾರ್ಡ್‍ಡಿಸ್ಕ್ ಮೇಲಿನ ರೋಡು, ಸೈಟು!

ಟಿ. ಜಿ. ಶ್ರೀನಿಧಿ

ಕಂಪ್ಯೂಟರಿನಲ್ಲಿ ಮಾಹಿತಿಯನ್ನು ಉಳಿಸಿಡಲು ವಿವಿಧ ಬಗೆಯ ಶೇಖರಣಾ ಸಾಧನಗಳು (ಸ್ಟೋರೇಜ್ ಡಿವೈಸಸ್) ಬಳಕೆಯಾಗುವುದು ನಮಗೆಲ್ಲ ಗೊತ್ತು. ಹಿಂದಿನ ಫ್ಲಾಪಿ‌ಡಿಸ್ಕ್‌ಗಳಿಂದ ಇಂದಿನ ಹಾರ್ಡ್ ಡಿಸ್ಕ್, ಸಿ.ಡಿ., ಡಿವಿಡಿಗಳವರೆಗೆ ಇಂತಹ ಹಲವಾರು ಶೇಖರಣಾ ಸಾಧನಗಳಲ್ಲಿ ಮಾಹಿತಿ ಸಂಗ್ರಹವಾಗುವುದು ವೃತ್ತಾಕಾರದ ತಟ್ಟೆಗಳಂತಹ (ಡಿಸ್ಕ್) ಮಾಧ್ಯಮದ ಮೇಲೆ.

ಮಂಗಳವಾರ, ಅಕ್ಟೋಬರ್ 3, 2017

ವೀಡಿಯೋ ಇಜ್ಞಾನ: ಕೀನ್ಯಾ ದೇಶದ ಹಕ್ಕಿಗಳು

ಇಜ್ಞಾನ ವಿಶೇಷಆಫ್ರಿಕಾ ಖಂಡ ಎಂದಕೂಡಲೇ ನಮ್ಮ ಮನಸ್ಸಿಗೆ ಬರುವ ಸಂಗತಿಗಳಲ್ಲಿ ಅಲ್ಲಿನ ವನ್ಯಜೀವನ ಪ್ರಮುಖವಾದದ್ದು. ಅದರಲ್ಲೂ ಜೀಬ್ರಾ, ಜಿರಾಫೆ, ಘೇಂಡಾಮೃಗ, ನೀರುಕುದುರೆ (ಹಿಪ್ಪೋ) ಮುಂತಾದ ಪ್ರಾಣಿಗಳಿಗೆ ವಿಶೇಷ ಸ್ಥಾನ.

ಪ್ರಾಯಶಃ ಆಸ್ಟ್ರಿಚ್ ಒಂದರ ಹೊರತು ನಮಗೆ ಅಷ್ಟಾಗಿ ಪರಿಚಯವಿಲ್ಲದಿದ್ದರೂ ಆಫ್ರಿಕಾದ ಪಕ್ಷಿಸಂಕುಲ ಕೂಡ ಬಹಳ ವೈವಿಧ್ಯಮಯ.

ಗುರುವಾರ, ಸೆಪ್ಟೆಂಬರ್ 28, 2017

ಮಾಹಿತಿ ಸುರಕ್ಷತೆಗೆ ಕ್ರಿಪ್ಟೋಗ್ರಫಿ

ಟಿ. ಜಿ. ಶ್ರೀನಿಧಿ

ಹಲವು ಸಂದರ್ಭಗಳಲ್ಲಿ ಮಾಹಿತಿ ವಿನಿಮಯಕ್ಕೆ ನೀಡುವಷ್ಟು, ಅಥವಾ ಅದಕ್ಕಿಂತ ಕೊಂಚ ಹೆಚ್ಚೇ, ಪ್ರಾಮುಖ್ಯವನ್ನು ಆ ವಿನಿಮಯ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದಕ್ಕೆ ಕೊಡಬೇಕಾಗುತ್ತದೆ. ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಸಂಬಂಧಿಸಿದ ಖಾಸಗಿ ಮಾಹಿತಿ ಮೂರನೆಯವರ ಕೈಸೇರದಂತೆ ಕಾಪಾಡಿಕೊಳ್ಳಲು ಇದು ಅತ್ಯಗತ್ಯ. ಇಂತಹ ಸಂದರ್ಭಗಳಲ್ಲಿ ಕ್ರಿಪ್ಟೋಗ್ರಫಿ ಅತ್ಯಂತ ಮಹತ್ವ ಪಡೆದುಕೊಳ್ಳುತ್ತದೆ.

ಮಾಹಿತಿಯನ್ನು ಸುರಕ್ಷಿತ ರೂಪಕ್ಕೆ ಪರಿವರ್ತಿಸುವ ಮೂಲಕ ಅದನ್ನು ಜೋಪಾನಮಾಡುವ ವಿಜ್ಞಾನವೇ ಕ್ರಿಪ್ಟೋಗ್ರಫಿ. ಮಾಹಿತಿಯನ್ನು ಹೀಗೆ ಸುರಕ್ಷಿತ ರೂಪಕ್ಕೆ ಪರಿವರ್ತಿಸಲು, ಕಿಡಿಗೇಡಿಗಳ ಕೈಗೆ ಸಿಕ್ಕದಂತೆ - ನಾವು ಯಾರಿಗೆ ಕಳುಹಿಸಿದ್ದೆವೋ ಅವರಿಗೆ ಮಾತ್ರ ತಲುಪುವಂತೆ ನೋಡಿಕೊಳ್ಳಲು ಎನ್‍ಕ್ರಿಪ್‍ಶನ್ (ಗೂಢಲಿಪೀಕರಣ) ಎಂಬ ಪ್ರಕ್ರಿಯೆಯನ್ನು ಬಳಸಲಾಗುತ್ತದೆ.

ಸೋಮವಾರ, ಸೆಪ್ಟೆಂಬರ್ 25, 2017

ಜಿಪಿಎಸ್ ಕುಂಚ ಭೂಪಟವೇ ಕ್ಯಾನ್ವಾಸ್!

ಟಿ. ಜಿ. ಶ್ರೀನಿಧಿ


ಹೊಸ ಜಾಗಗಳಿಗೆ ಪ್ರಯಾಣ ಬೆಳೆಸುವಾಗ, ಹಳೆಯ ಊರಿನಲ್ಲಿ ಟ್ಯಾಕ್ಸಿ ಕರೆಸುವಾಗಲೆಲ್ಲ ಜಿಪಿಎಸ್ ಸೇವೆ ಬಳಸುವುದು ನಮಗೆ ಚೆನ್ನಾಗಿಯೇ ಅಭ್ಯಾಸವಾಗಿಬಿಟ್ಟಿದೆ. ಸಾಗರದಿಂದ ಕೆಳದಿಗೆ ಹೋಗಲು ಈ ರಸ್ತೆಯಲ್ಲಿ ತಿರುಗಿ ಎಂದೋ ನಿಮ್ಮ ಕ್ಯಾಬ್ ಪಕ್ಕದ ರಸ್ತೆಯಲ್ಲಿ ಬಂದು ನಿಂತಿದೆಯೆಂದೋ ನಮ್ಮ ಸ್ಮಾರ್ಟ್‌ಫೋನ್ ಹೇಳುತ್ತದಲ್ಲ, ಅದನ್ನು ಸಾಧ್ಯವಾಗಿಸುವುದು ಇದೇ ಜಿಪಿಎಸ್ ತಂತ್ರಜ್ಞಾನ. ಜಿಪಿಎಸ್ ಎನ್ನುವುದು ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ ಎಂಬ ಹೆಸರಿನ ಹ್ರಸ್ವರೂಪ.

ನಮ್ಮ ಗಮ್ಯಸ್ಥಾನ ಮುಟ್ಟಲು ಯಾವ ಮಾರ್ಗದಲ್ಲಿ ಪ್ರಯಾಣಿಸಬೇಕು ಎನ್ನುವುದನ್ನು ಮ್ಯಾಪ್ ತಂತ್ರಾಂಶ ಭೂಪಟದ ಮೇಲೆ ಚಿತ್ರಿಸಿ ತೋರಿಸುತ್ತದೆ. ಅದೇರೀತಿ ಟ್ಯಾಕ್ಸಿಯಲ್ಲಿ ಪ್ರಯಾಣಿಸಿದಾಗ ನಾವು ಯಾವ ಮಾರ್ಗದಲ್ಲಿ ಬಂದೆವು ಎನ್ನುವುದನ್ನು ಟ್ಯಾಕ್ಸಿ ಆಪ್ ನಮ್ಮ ರಸೀತಿಯ ಜೊತೆಯಲ್ಲೇ ಕಳಿಸುತ್ತದೆ. ಆ ತಂತ್ರಾಂಶಗಳಿಗೆ ಈ ಮಾಹಿತಿ ಸಿಗುವುದು ಮೊಬೈಲಿನಲ್ಲಿ (ಅಥವಾ ಕಾರಿನ ಮಾರ್ಗದರ್ಶಕ ಸಾಧನದಲ್ಲಿ) ಅಳವಡಿಸಲಾಗಿರುವ ಜಿಪಿಎಸ್ ರಿಸೀವರಿನಿಂದ.

ಗುರುವಾರ, ಸೆಪ್ಟೆಂಬರ್ 21, 2017

ಕ್ಯಾಮೆರಾ ಇಜ್ಞಾನ: ಎಚ್‌ಡಿಆರ್ ಎಂದರೇನು?

ಟಿ. ಜಿ. ಶ್ರೀನಿಧಿ


ಡಿಜಿಟಲ್ ಕ್ಯಾಮೆರಾಗಳ ಸ್ಥಾನವನ್ನು ಮೊಬೈಲುಗಳು ಆಕ್ರಮಿಸಿಕೊಳ್ಳುತ್ತಿದ್ದಂತೆ ಕ್ಯಾಮೆರಾಗಳಲ್ಲಿದ್ದ ಸೌಲಭ್ಯಗಳು ಒಂದರ ನಂತರ ಒಂದರಂತೆ ಮೊಬೈಲಿನಲ್ಲೂ ಕಾಣಿಸಿಕೊಳ್ಳುತ್ತಿವೆ. ಇಂತಹ ಸೌಲಭ್ಯಗಳ ಪೈಕಿ ಎಚ್‍ಡಿಆರ್ ಕೂಡ ಒಂದು.

ಎಚ್‍ಡಿಆರ್‌ ಎಂಬ ಹೆಸರು 'ಹೈ ಡೈನಮಿಕ್ ರೇಂಜ್' ಇಮೇಜಿಂಗ್ ಎನ್ನುವ ಪರಿಕಲ್ಪನೆಯನ್ನು ಪ್ರತಿನಿಧಿಸುತ್ತದೆ.  ಛಾಯಾಚಿತ್ರದಲ್ಲಿರುವ ನೆರಳು-ಬೆಳಕಿನ ಪ್ರಮಾಣಗಳ ನಡುವೆ ಸಮತೋಲನ ಮೂಡಿಸುವುದು ಹಾಗೂ ಆ ಮೂಲಕ ಚಿತ್ರದ ಗುಣಮಟ್ಟವನ್ನು ಹೆಚ್ಚಿಸುವುದು ಈ ಪರಿಕಲ್ಪನೆಯ ಉದ್ದೇಶ.

ಸೋಮವಾರ, ಸೆಪ್ಟೆಂಬರ್ 18, 2017

ಕಸ ಕಹಾನಿ: ತ್ಯಾಜ್ಯದ ಸಮರ್ಥ ವಿಲೇವಾರಿಗಾಗಿ ನಾವೇನು ಮಾಡಲು ಸಾಧ್ಯ?

'ಮೈತ್ರಿ'


ಒಂದೆರಡು ದಶಕಗಳ ಹಿಂದೆ ನಮ್ಮ ಬೆಂಗಳೂರು ಗಾರ್ಡನ್ ಸಿಟಿ ಆಗಿತ್ತು. ಆ ಹೆಸರಿನ ಸ್ಪೆಲಿಂಗು ಕೊಂಚ ಬದಲಾಗಿ ನಮ್ಮೂರು ಗಾರ್ಬೇಜ್ ಸಿಟಿ ಆಗಿದ್ದು ಈಚೆಗೆ ಕೆಲವರ್ಷಗಳ ಹಿಂದೆಯಷ್ಟೇ.

ಹಾಗೆ ನೋಡಿದರೆ ಕಸದ ಸಮಸ್ಯೆ ನಮ್ಮ ಊರೊಂದಕ್ಕೇ ಸೀಮಿತವೇನಲ್ಲ. ನಮ್ಮ ಊರಷ್ಟೇ ಏಕೆ, ಇರು ಬರೀ ನಮ್ಮ ಗ್ರಹದ ಸಮಸ್ಯೆ ಮಾತ್ರವೂ ಅಲ್ಲ.

ಶುಕ್ರವಾರ, ಸೆಪ್ಟೆಂಬರ್ 15, 2017

ಪೋರ್ಟ್ ಅಂದರೆ ಏನು?

ಟಿ. ಜಿ. ಶ್ರೀನಿಧಿ

ಪೋರ್ಟ್ ಅಂದರೆ ಬಂದರು. ದೋಣಿಗಳ, ಹಡಗುಗಳ ನಿಲ್ದಾಣ. ಏರ್‌ಪೋರ್ಟ್ ಅಂದರೆ ವಿಮಾನಗಳ ನಿಲ್ದಾಣ. ಇದು ನಮಗೆಲ್ಲ ಗೊತ್ತಿರುವ ವಿಷಯವೇ. ಈ ಲೇಖನದಲ್ಲಿ ನಾವು ಮಾತನಾಡುತ್ತಿರುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 'ಪೋರ್ಟ್' ಏನನ್ನು ಪ್ರತಿನಿಧಿಸುತ್ತದೆ ಎನ್ನುವುದರ ಬಗ್ಗೆ.

ಸಾಮಾನ್ಯ ಬಳಕೆದಾರರ ದೃಷ್ಟಿಯಲ್ಲಿ ಯೋಚಿಸುವುದಾದರೆ ಪೋರ್ಟ್ ಎಂದಾಕ್ಷಣ ಮೊಬೈಲ್ ಸೇವೆ ಒದಗಿಸುವ ಸಂಸ್ಥೆಯನ್ನು ಬದಲಿಸುವ ಪ್ರಕ್ರಿಯೆಯೇ ನಮ್ಮ ನೆನಪಿಗೆ ಬರುತ್ತದೆ. ಆದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪೋರ್ಟ್ ಎನ್ನುವುದಕ್ಕೆ ಇನ್ನೂ ಕೆಲವು ಅರ್ಥಗಳಿವೆ.

ಸೋಮವಾರ, ಸೆಪ್ಟೆಂಬರ್ 11, 2017

ಮನೆಯಲ್ಲೇ ಮಲ್ಟಿಪ್ಲೆಕ್ಸ್!

ಟಿ. ಜಿ. ಶ್ರೀನಿಧಿ


ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಟೀವಿ ಇಟ್ಟುಕೊಳ್ಳುವುದು ಸಾಮಾನ್ಯ ಅಭ್ಯಾಸ. ರಿಮೋಟ್‌ ಕಂಟ್ರೋಲ್‌ಗಾಗಿ ನಡೆಯುವ ಜಗಳ ಬಗೆಹರಿಸುವ ದೃಷ್ಟಿಯಿಂದ ಇದು ಅನುಕೂಲಕರ, ನಿಜ. ಆದರೆ ಇಲ್ಲಿ ಸಮಸ್ಯೆಗಳೂ ಇವೆ: ಟೀವಿಗಳನ್ನು ಬೇಕೆಂದಾಗ ಬೇಕಾದ ಕೋಣೆಗೆ ವರ್ಗಾಯಿಸಿಕೊಳ್ಳುವುದು ಕಷ್ಟ, ಹಾಗೆಂದು ಕೋಣೆಗೊಂದು ಟೀವಿ ಕೊಳ್ಳುವುದೂ ಕಷ್ಟ. ಮನೆಯಿಂದ ಹೊರಗೆಲ್ಲೋ ಹೋಗುವಾಗ ಜೊತೆಯಲ್ಲೇ ಟೀವಿಯನ್ನೂ ಕೊಂಡೊಯ್ಯಬಹುದೇ ಎನ್ನುವುದಂತೂ ತೀರಾ ಹಾಸ್ಯಾಸ್ಪದವೆನಿಸುವ ಪ್ರಶ್ನೆ.

ಇವೆಲ್ಲ ಸಮಸ್ಯೆಗಳ ಗೊಡವೆಯಿಲ್ಲದೆ ಕೋಣೆಯ ಗೋಡೆ-ಸೀಲಿಂಗುಗಳನ್ನೇ ಪರದೆಯನ್ನಾಗಿಸಿಕೊಂಡು ನಮಗೆ ಬೇಕಾದ್ದನ್ನು ವೀಕ್ಷಿಸಲು ನೆರವಾಗುವುದು ಪ್ರೊಜೆಕ್ಟರುಗಳ ಹೆಗ್ಗಳಿಕೆ.

ಶುಕ್ರವಾರ, ಸೆಪ್ಟೆಂಬರ್ 8, 2017

ವೀಕೆಂಡ್ ವಿಶೇಷ: ಮಿಂಚು ಹುಳ ಮಿಂಚುವುದೇಕೆ?

ವಿನಾಯಕ ಕಾಮತ್


ಯಾವುದೋ ಒಂದು ಸುಂದರ ರಾತ್ರಿ. ಅಕಸ್ಮಾತ್ ಕರೆಂಟ್ ಹೋಗಿ ಬಿಟ್ಟಿದೆ. ಸುಮ್ಮನೆ ಹೊರಗೆ ಬಂದು ನಿಂತರೆ, ಬಗಲಿಗೆ ಎಲ್‌ಇಡಿ ಬಲ್ಬ್ ಕಟ್ಟಿಕೊಂಡಂತೆ ಹುಳಗಳು ಹಾರುತ್ತಿವೆ!

ಮಿಂಚು ಹುಳಗಳ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ? ಕವಿಗಳಿಗಂತೂ ಅವು ಸುಲಭವಾಗಿ ಸಿಗುವ ಬೆರಗುಗಳು. ಇತ್ತೀಚಿಗೆ ನಾನು ಸಂಗೀತ ಪ್ರಧಾನವಾದ ಮರಾಠಿ ಚಲನಚಿತ್ರ ಒಂದನ್ನು ನೋಡಿದ್ದೆ. ಅದರಲ್ಲಂತೂ ಹಾಡುಗಾರ ಸಂಗೀತದ ಮೂಲಕವೇ ಮಿಂಚು ಹುಳಗಳ ದೊಂದಿ ತಯಾರಿಸಿಬಿಡುತ್ತಾನೆ. ಒಟ್ಟಿನಲ್ಲಿ ವಿಸ್ಮಯಗಳ ಮೂಟೆಯೇ ಆಗಿರುವ ನಿಸರ್ಗದ ಸುಂದರ ಸೃಷ್ಟಿ ಈ ಮಿಂಚು ಹುಳುಗಳು.

ಈ ಮಿಂಚು ಹುಳುಗಳು 'ಲ್ಯಾಂಪೆರಿಡೇ' ಎಂಬ ಕುಟುಂಬಕ್ಕೆ ಸೇರಿದ ಕೀಟಗಳು. ಹೆಚ್ಚಿನವು ನಿಶಾಚರಿಗಳು. ನಿಶಾಚರಿಗಳಾಗಿರುವುದರಿಂದಲೋ ಏನೋ, ತಮಗೆ ಬೇಕಾದ ಬೆಳಕಿನ ವ್ಯವಸ್ಥೆಯನ್ನು ತಾವೇ ಮಾಡಿಕೊಂಡು ಬಿಟ್ಟಿವೆ. ಆದರೆ ಇವು ಮಿಂಚುವುದು ಬೆಳಕಿಗಾಗಿ ಅಲ್ಲ. ಬದಲಾಗಿ ತಮ್ಮ ಆಹಾರವಾದ ಇತರೆ ಹುಳುಗಳನ್ನು ಆಕರ್ಷಿಸಲು, ಇನ್ನೂ ಮುಖ್ಯವಾಗಿ ತಮ್ಮ ಸಂಗಾತಿಗಳನ್ನು ಆಕರ್ಷಿಸಲು.

ಸೋಮವಾರ, ಸೆಪ್ಟೆಂಬರ್ 4, 2017

ಕಣ್ಣಿಗೆ ಕಾಣದ ಕಣ್ಮಣಿಗಳು: ಕೃತಕ ಉಪಗ್ರಹಗಳ ಕುರಿತು ನಿಮಗೆಷ್ಟು ಗೊತ್ತು?

ಟಿ. ಜಿ. ಶ್ರೀನಿಧಿ

ಕೃತಕ ಉಪಗ್ರಹಗಳ ಉಡಾವಣೆಯಲ್ಲಿ ಇಸ್ರೋ ಸಾಧಿಸುತ್ತಿರುವ ವಿಕ್ರಮಗಳ ಬಗ್ಗೆ ನಾವು ಕೇಳುತ್ತಲೇ ಇದ್ದೇವೆ. ಹಲವಾರು ವರ್ಷಗಳ ಹಿಂದೆ "ಇದೆಲ್ಲ ಭಾರತೀಯರಿಂದ ಆಗುವ ಕೆಲಸವಲ್ಲ" ಎನ್ನುವ ಕುಹಕ ವ್ಯಾಪಕವಾಗಿ ಕೇಳಿಬರುತ್ತಿದ್ದದ್ದೂ ಹಲವರಿಗೆ ಗೊತ್ತು.

ಉಪಗ್ರಹಗಳ ಬಗ್ಗೆ ಇಷ್ಟೆಲ್ಲ ಕೇಳಿದ್ದರೂ ಅವುಗಳ ಉಪಯೋಗವೇನು ಎನ್ನುವ ಬಗ್ಗೆ ನಮ್ಮಲ್ಲಿ ಅಷ್ಟೇನೂ ಸ್ಪಷ್ಟವಾದ ಚಿತ್ರಣ ಇಲ್ಲ. ಉಪಗ್ರಹಗಳು ಯಶಸ್ವಿಯಾಗಿ ಅಂತರಿಕ್ಷ ಸೇರಿದ ಬಗ್ಗೆ ದೊರಕುವಷ್ಟು ಮಾಹಿತಿ ಅವು ಅಲ್ಲಿ ಏನು ಮಾಡುತ್ತವೆ ಎನ್ನುವುದರ ಕುರಿತು ದೊರಕದೆ ಇರುವುದು ಇದಕ್ಕೆ ಪ್ರಮುಖ ಕಾರಣ ಇರಬಹುದೇನೋ.

ಹಾಗೆ ನೋಡಿದರೆ ನಮ್ಮ ದಿನನಿತ್ಯದ ಬದುಕಿನಲ್ಲಿ ಕೃತಕ ಉಪಗ್ರಹಗಳ ಪಾತ್ರ ಬಹಳ ದೊಡ್ಡದು. ಹಳ್ಳಿಯಿಂದ ದಿಲ್ಲಿಯವರೆಗೆ ಎಲ್ಲರ ಬದುಕನ್ನೂ ಅವು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವಿಸುತ್ತವೆ. ಅಂತರಿಕ್ಷದಲ್ಲಿರುವ ಉಪಗ್ರಹಗಳು ನಮ್ಮ ಕಣ್ಣಿಗೆ ಕಾಣುವುದಿಲ್ಲವಲ್ಲ, ಹಾಗೆಯೇ ಅವುಗಳ ಮಹತ್ವವೂ ನಮ್ಮ ಗಮನಕ್ಕೆ ಬಂದಿರುವುದಿಲ್ಲ ಅಷ್ಟೇ.

ಕಣ್ಣಿಗೆ ಕಾಣದ ಈ ಕಣ್ಮಣಿಗಳು ನಮ್ಮ ಬದುಕನ್ನು ಹೇಗೆಲ್ಲ ಪ್ರಭಾವಿಸುತ್ತವೆ? ಒಂದಷ್ಟು ಮಾಹಿತಿ ಇಲ್ಲಿದೆ.

ಶುಕ್ರವಾರ, ಸೆಪ್ಟೆಂಬರ್ 1, 2017

ವಿಜ್ಞಾನದ ಇಜ್ಞಾನ: ಬಣ್ಣಬಣ್ಣದ ಎಲೆ ಹಣ್ಣಾಗಿ ಉದುರುವ ಬಗೆ...

ಕ್ಷಮಾ ವಿ. ಭಾನುಪ್ರಕಾಶ್


ನವಿರಾದ ಚಿಗುರು ಎಲೆಗಳ ಬಣ್ಣ ಎಷ್ಟು ತಿಳಿ ಹಸಿರು. ಬಲಿತ ಎಲೆಗಳದ್ದು ಗಾಢ ಹಸಿರು ಬಣ್ಣವಾದರೆ ಉದುರಿಹೋಗುವ ಹಣ್ಣೆಲೆಗಳ ಬಣ್ಣ ಹಳದಿ ಅಥವಾ ಕೇಸರಿ. ಇದರ ಜೊತೆಗೆ ಕೆಂಪು, ಹಳದಿ, ಕೇಸರಿ ಬಣ್ಣದ ಎಲೆಗಳಿರೋ ಗಿಡಗಳನ್ನೂ ನಾವು ನೋಡಬಹುದು.

ಎಲೆಗಳು ಹಾಗೂ ಇಡೀ ಗಿಡದ ಬಣ್ಣವನ್ನು ನಿರ್ಧರಿಸುವುದು ಅವುಗಳಲ್ಲಿ ಅಡಗಿರುವ 'ವರ್ಣದ್ರವ್ಯ', ಅಂದರೆ 'ಪಿಗ್ಮೆಂಟ್'ಗಳು.

ಹಾಗಾದರೆ ಹಸಿರು ಎಲೆಗಳಲ್ಲಿರುವುದು ಹಸಿರು ವರ್ಣದ್ರವ್ಯ ಮಾತ್ರವೇ?

ಬುಧವಾರ, ಆಗಸ್ಟ್ 30, 2017

ಸ್ಮಾರ್ಟ್‌ಫೋನ್ ಒಳಗಿನ ಸಿಹಿ: ಆಂಡ್ರಾಯ್ಡ್

ಹೊಸ ಆವೃತ್ತಿಗೆ ಸಿಕ್ತು ಕ್ರೀಮ್ ಬಿಸ್ಕತ್ ಹೆಸರು!


ಟಿ. ಜಿ. ಶ್ರೀನಿಧಿ

ಕಂಪ್ಯೂಟರಿನಂತೆ ಕೆಲಸಮಾಡಬಲ್ಲ ಮೊಬೈಲ್ ಫೋನುಗಳನ್ನು ಸ್ಮಾರ್ಟ್‌ಫೋನ್ ಎಂದು ಕರೆಯುವುದು ವಾಡಿಕೆ. ಕಂಪ್ಯೂಟರಿನಂತೆಯೇ ಇವುಗಳಲ್ಲೂ ನಮ್ಮ ಆಯ್ಕೆಯ ತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವುದು, ಬಳಸುವುದು ಸಾಧ್ಯ.

ಸ್ಮಾರ್ಟ್‌ಫೋನೂ ಕಂಪ್ಯೂಟರಿನಂತೆಯೇ ಎಂದಮೇಲೆ ಕಂಪ್ಯೂಟರಿನಲ್ಲಿರುವಂತೆ ಅದರಲ್ಲೂ ಓಎಸ್ (ಆಪರೇಟಿಂಗ್ ಸಿಸ್ಟಂ, ಕಾರ್ಯಾಚರಣ ವ್ಯವಸ್ಥೆ) ಇರಬೇಕು - ಕಂಪ್ಯೂಟರಿನಲ್ಲಿ ವಿಂಡೋಸ್, ಲಿನಕ್ಸ್‌ಗಳೆಲ್ಲ ಇದ್ದಂತೆ. ಇತರ ತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಲು, ಬಳಸಲು ಇದು ಸಹಾಯ ಮಾಡುತ್ತದೆ.

ಸ್ಮಾರ್ಟ್‍ಫೋನುಗಳಲ್ಲಿ ಬಳಕೆಯಾಗುವ ಓಎಸ್‍ಗಳ ಪೈಕಿ ಬಹಳ ಜನಪ್ರಿಯವಾಗಿರುವುದು, ನಮಗೆ ಚೆನ್ನಾಗಿ ಪರಿಚಯವಿರುವುದು ಆಂಡ್ರಾಯ್ಡ್. ಈ ಪರಿಚಯ ಎಷ್ಟರಮಟ್ಟಿನದು ಎಂದರೆ ಅನೇಕ ಮಂದಿ ಸ್ಮಾರ್ಟ್‌ಫೋನುಗಳನ್ನು ಆಂಡ್ರಾಯ್ಡ್ ಫೋನುಗಳೆಂದೇ ಗುರುತಿಸುತ್ತಾರೆ.

ಸೋಮವಾರ, ಆಗಸ್ಟ್ 28, 2017

ಮೊಬೈಲ್ ಆಪ್ ಮೂರು ವಿಧ

ಟಿ. ಜಿ. ಶ್ರೀನಿಧಿ


ಸ್ಮಾರ್ಟ್‌ಫೋನಿನಲ್ಲಿ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡು ಬಳಸುವುದು ನಮಗೆ ಚೆನ್ನಾಗಿಯೇ ಅಭ್ಯಾಸವಾಗಿರುವ ಸಂಗತಿ. ಬೇರೆಬೇರೆ ಉದ್ದೇಶಗಳಿಗೆ ಬೇರೆಬೇರೆ ಆಪ್‌ಗಳನ್ನು ಬಳಸಬೇಕೆನ್ನುವುದೂ ನಮಗೆ ಗೊತ್ತು.

ಆಪ್‌ಗಳ ಉದ್ದೇಶ ಬೇರೆಬೇರೆಯಾಗಿರುವಂತೆ ಅವುಗಳ ಕಾರ್ಯಾಚರಣೆಯ ಸ್ವರೂಪವೂ ಬೇರೆಬೇರೆಯಾಗಿರುವುದು ಸಾಧ್ಯ. ಈ ಅಂಶವನ್ನೇ ಆಧಾರವಾಗಿಟ್ಟುಕೊಂಡು ಯಾವುದೇ ಮೊಬೈಲ್ ಆಪ್‌ ಅನ್ನು ನೇಟಿವ್ ಆಪ್, ವೆಬ್ ಆಪ್ ಅಥವಾ ಹೈಬ್ರಿಡ್ ಆಪ್‌ ಎಂದು ಪ್ರತ್ಯೇಕವಾಗಿ ಗುರುತಿಸಬಹುದು.

ಗುರುವಾರ, ಆಗಸ್ಟ್ 24, 2017

ಜಿಯೋಫೋನ್ ಪ್ರಿ-ಬುಕಿಂಗ್ ಇಂದು ಸಂಜೆ ಪ್ರಾರಂಭ

ಇಜ್ಞಾನ ವಾರ್ತೆ


ರಿಲಯನ್ಸ್ ಜಿಯೋ ಸಂಸ್ಥೆಯ ಬಹುನಿರೀಕ್ಷಿತ ಜಿಯೋಫೋನ್ ಪ್ರಿ-ಬುಕಿಂಗ್ 2017 ಆಗಸ್ಟ್ 24ರ ಸಂಜೆ 5:30ಕ್ಕೆ ಪ್ರಾರಂಭವಾಗಲಿದೆ. ಇದೇ ವರ್ಷ ಜುಲೈ 21ರಂದು ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪರಿಚಯಿಸಲಾದ ಈ 4ಜಿ ಫೀಚರ್‌ಫೋನ್ ಗ್ರಾಹಕರಿಗೆ ಶೂನ್ಯ ವಾಸ್ತವಿಕ ಬೆಲೆಯಲ್ಲಿ, ಅಂದರೆ ಉಚಿತವಾಗಿ, ದೊರಕಲಿದೆ ಎಂದು ಸಂಸ್ಥೆಯ ಪ್ರಕಟಣೆ ಹೇಳಿದೆ.

ಸೋಮವಾರ, ಆಗಸ್ಟ್ 21, 2017

ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು

ಇಜ್ಞಾನ ವಾರ್ತೆ 

ಕನ್ನಡದಲ್ಲಿ  ವಿಜ್ಞಾನ ಪುಸ್ತಕಗಳ ಪ್ರಕಟಣೆಗೆ ಹೆಸರುವಾಸಿಯಾದ ನವಕರ್ನಾಟಕ ಪ್ರಕಾಶನದಿಂದ ಇದೀಗ ಇನ್ನೊಂದು ವಿಶಿಷ್ಟ ಕೃತಿ ಪ್ರಕಟವಾಗುತ್ತಿದೆ. ವಿಜ್ಞಾನದ ವಿವಿಧ ಕ್ಷೇತ್ರಗಳ ಚಾರಿತ್ರಿಕ ಬೆಳವಣಿಗೆಯ ಹಾಗೂ ಆ ಹಾದಿಯಲ್ಲಿ ಅದು ಪಡೆದುಕೊಂಡ ಮಹಾತಿರುವುಗಳ ದಾಖಲೆಯಾದ 'ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು' ಎಂಬ ಈ ಪುಸ್ತಕ ೨೦೧೭ರ ಸೆಪ್ಟೆಂಬರ್ ೩ರಂದು ಬಿಡುಗಡೆಯಾಗಲಿದೆ.

ಭೌತ ವಿಜ್ಞಾನ, ಖಭೌತ ವಿಜ್ಞಾನ, ಅಂತರಿಕ್ಷ ವಿಜ್ಞಾನ, ರಸಾಯನ ವಿಜ್ಞಾನ, ಸಸ್ಯ ವಿಜ್ಞಾನ, ಪ್ರಾಣಿ ವಿಜ್ಞಾನ,  ವೈದ್ಯ ವಿಜ್ಞಾನ, ಔಷಧಿ ವಿಜ್ಞಾನ, ವಿಧಿ ವಿಜ್ಞಾನ, ಕೃಷಿ ವಿಜ್ಞಾನ, ಭೂವಿಜ್ಞಾನ, ಪರಿಸರ ವಿಜ್ಞಾನ, ಗಣಿತ, ಎಂಜಿನಿಯರಿಂಗ್ ತಂತ್ರಜ್ಞಾನ, ದೂರಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಕುರಿತು ಒಟ್ಟು ೩೫ ಲೇಖನಗಳಿರುವ ಈ ಕೃತಿಯ ಸಂಪಾದಕರು ಡಾ. ಟಿ. ಆರ್. ಅನಂತರಾಮು.

ಶುಕ್ರವಾರ, ಆಗಸ್ಟ್ 18, 2017

ಏನಿದು ಬೆಜ಼ೆಲ್?

ಟಿ. ಜಿ. ಶ್ರೀನಿಧಿ


ದಿವಾನಖಾನೆಯ ಟೀವಿ, ಕಂಪ್ಯೂಟರಿನ ಮಾನಿಟರ್, ಅಂಗೈಯ ಸ್ಮಾರ್ಟ್‌ಫೋನ್ - ಹೀಗೆ ಒಂದಲ್ಲ ಒಂದು ರೀತಿಯ ಪ್ರದರ್ಶಕಗಳು (ಡಿಸ್ಪ್ಲೇ) ನಮ್ಮ ಕಣ್ಣಿಗೆ ಬೀಳುತ್ತಲೇ ಇರುತ್ತವೆ. ಅವು ಬಳಸುವ ತಂತ್ರಜ್ಞಾನ ಬೇರೆಯದಿರಬಹುದು; ಆದರೆ ಅಂತಹ ಎಲ್ಲ ಪ್ರದರ್ಶಕಗಳಲ್ಲೂ ಪರದೆಯ ಸುತ್ತ ಒಂದು ಚೌಕಟ್ಟು ಇರುವುದು ಸರ್ವೇಸಾಮಾನ್ಯ.

ಬುಧವಾರ, ಆಗಸ್ಟ್ 16, 2017

ಸೆ.೧೫-೧೭ : ಬೆಂಗಳೂರಿನಲ್ಲಿ ಕನ್ನಡ ವಿಜ್ಞಾನ ಸಮ್ಮೇಳನ

ಇಜ್ಞಾನ ವಾರ್ತೆಸ್ವದೇಶಿ ವಿಜ್ಞಾನ ಆಂದೋಳನ-ಕರ್ನಾಟಕದ ಆಶ್ರಯದಲ್ಲಿ ಬರುವ ಸೆಪ್ಟೆಂಬರ್ ೧೫ ರಿಂದ ೧೭ರವರೆಗೆ 'ಕನ್ನಡ ವಿಜ್ಞಾನ ಸಮ್ಮೇಳನ'ವನ್ನು (ಕರ್ನಾಟಕ ಸೈನ್ಸ್ ಕಾಂಗ್ರೆಸ್) ಆಯೋಜಿಸಲಾಗಿದೆ. ಈ ವರ್ಷದ ಕಾರ್ಯಕ್ರಮ ಬೆಂಗಳೂರಿನ ಎಂ. ಎಸ್. ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.

ಸೋಮವಾರ, ಆಗಸ್ಟ್ 14, 2017

ಈಗ ಮನೆಯೂ ಸ್ಮಾರ್ಟ್!

ಟಿ. ಜಿ. ಶ್ರೀನಿಧಿ


ಈಚಿನ ದಿನಗಳಲ್ಲಿ ಎಲ್ಲ ಸಾಧನಗಳೂ ಒಂದರ ನಂತರ ಒಂದರಂತೆ ಸ್ಮಾರ್ಟ್ ಆಗುತ್ತಿವೆ. ಸ್ಮಾರ್ಟ್ ಫೋನ್, ಸ್ಮಾರ್ಟ್ ಟೀವಿ, ಸ್ಮಾರ್ಟ್ ವಾಚ್ - ಹೀಗೆ ಮನೆಯ ಸಾಧನಗಳೆಲ್ಲ ಸ್ಮಾರ್ಟ್ ಆದಮೇಲೆ ಇನ್ನೇನು, ಪೂರ್ತಿ ಮನೆಯೂ ಸ್ಮಾರ್ಟ್ ಆಗುವುದೇ ಬಾಕಿ!

ಹೌದು, ಡಿಜಿಟಲ್ ತಂತ್ರಜ್ಞಾನದ ಅನುಕೂಲತೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮನೆ, ಅರ್ಥಾತ್ 'ಸ್ಮಾರ್ಟ್ ಹೋಮ್'ಗಳು ಇದೀಗ ರೂಪುಗೊಳ್ಳುತ್ತಿವೆ. ಇಲ್ಲಿನ ಫ್ಯಾನು-ಲೈಟುಗಳನ್ನು ಮೊಬೈಲಿನಿಂದ ನಿಯಂತ್ರಿಸಬಹುದು, ಮನೆಯ ತಾಪಮಾನ-ಗಾಳಿಯ ಗುಣಮಟ್ಟದ ಮಾಹಿತಿಯನ್ನು ಮೊಬೈಲಿನಲ್ಲೇ ಪಡೆದುಕೊಳ್ಳಬಹುದು, ವಾಶಿಂಗ್ ಮಶೀನ್ - ಮೈಕ್ರೋವೇವ್ ಓವನ್ ಕೆಲಸಗಳನ್ನೆಲ್ಲ ಆಫೀಸಿನಲ್ಲಿ ಕುಳಿತೇ ಗಮನಿಸಿಕೊಳ್ಳಬಹುದು, ಸೆಕ್ಯೂರಿಟಿ ಕ್ಯಾಮೆರಾಗೆ ಕಾಣುತ್ತಿರುವ ದೃಶ್ಯಗಳನ್ನು ಸ್ಮಾರ್ಟ್‌ಫೋನಿನಲ್ಲಿ ನೋಡಬಹುದು.

ಗುರುವಾರ, ಆಗಸ್ಟ್ 10, 2017

ಜಲವಿವಾದ ಪರಿಹರಿಸಲು ತಂತ್ರಜ್ಞಾನ

ಉದಯ ಶಂಕರ ಪುರಾಣಿಕ

ಭವಿಷ್ಯದಲ್ಲಿ ನೀರಿಗಾಗಿ ಯುದ್ಧಗಳು ನಡೆಯುತ್ತವೆ ಎನ್ನುವ ಆತಂಕವನ್ನು ವಿಶ್ವಸಂಸ್ಥೆಯ ಮಾಜಿ ಮಹಾಪ್ರಧಾನ ಕಾರ್ಯದರ್ಶಿಯವರು ವ್ಯಕ್ತಪಡಿಸಿದ್ದರು. ಕಾವೇರಿ, ಕೃಷ್ಣೆ, ಮಹದಾಯಿ ಜಲವಿವಾದಗಳು ನಮಗೆ ಗೊತ್ತಿದ್ದರೆ, ವಿಶ್ವಾದ್ಯಂತ ಎಷ್ಟು ರಾಷ್ಟ್ರಗಳ ನಡುವೆ ಜಲವಿವಾದಗಳಿವೆ ಎನ್ನುವುದು ಗೊತ್ತಿರಲಾರದು.

ಕೆಲವು ಜಲವಿವಾದಗಳನ್ನು ಪರಿಹರಿಸಿಕೊಳ್ಳಲು ಅಧುನಿಕ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಇಂತಹ ಒಂದು ಉದಾಹರಣೆ ಕುರಿತ ಮಾಹಿತಿ ಈ ಲೇಖನದಲ್ಲಿದೆ. ಕೃಷ್ಣೆ, ಮದಾಯಿ, ಕಾವೇರಿ ಮೊದಲಾದ ಜಲವಿವಾದಗಳಲ್ಲಿ ನ್ಯಾಯಾಲಯ ಮತ್ತು ಟ್ರಿಬ್ಯೂನಲ್ ಗಳಲ್ಲಿ ನೆಡೆಸಿರುವ ಕಾನೂನು ಹೋರಾಟಕ್ಕೆ ಪೂರಕವಾಗಿ ಅಧುನಿಕ ತಂತ್ರಜ್ಞಾನ ಪರಿಣಿತರ ಸೇವೆಯನ್ನು ಕೂಡಾ ರಾಜ್ಯ ಸರ್ಕಾರ ಬಳಸಿಕೊಳ್ಳಲು ಮುಂದಾಗಬೇಕಾಗಿದೆ.

ಸೋಮವಾರ, ಆಗಸ್ಟ್ 7, 2017

ಸಾಫ್ಟ್‌ವೇರ್, ಹಾರ್ಡ್‌ವೇರ್, ವೇಪರ್‌ವೇರ್!

ಟಿ. ಜಿ. ಶ್ರೀನಿಧಿ

ತಂತ್ರಜ್ಞಾನದ ಲೋಕದಲ್ಲಿ ಸದಾಕಾಲವೂ ಹೊಸ ಸಂಗತಿಗಳದೇ ಭರಾಟೆ. ಪ್ರತಿದಿನವೂ ಒಂದಲ್ಲ ಒಂದು ಹೊಸ ಯಂತ್ರಾಂಶ ಅಥವಾ ತಂತ್ರಾಂಶದ ಸುದ್ದಿ ಇಲ್ಲಿ ಕೇಳಸಿಗುತ್ತಲೇ ಇರುತ್ತದೆ.

ಆದರೆ ಹಾಗೆ ಸುದ್ದಿಮಾಡುವ ಎಲ್ಲ ಉತ್ಪನ್ನಗಳೂ ಹೇಳಿದ ಸಮಯಕ್ಕೆ ಮಾರುಕಟ್ಟೆಗೆ ಬರುವುದಿಲ್ಲ. ಈ ಪೈಕಿ ಕೆಲ ಉತ್ಪನ್ನಗಳು ಮಾರುಕಟ್ಟೆಗೆ ಬರುವುದು ತೀರಾ ನಿಧಾನವಾದರೆ ಇನ್ನು ಕೆಲವು ಪತ್ರಿಕಾಗೋಷ್ಠಿಯಿಂದಾಚೆಗೆ ಎಲ್ಲಿಯೂ ಕಾಣಿಸಿಕೊಳ್ಳುವುದೇ ಇಲ್ಲ.

ಗುರುವಾರ, ಆಗಸ್ಟ್ 3, 2017

ಡಿಜಿಟಲ್ ಲೋಕದಲ್ಲಿ ನಮ್ಮ ಹೆಜ್ಜೆಗುರುತು

ಟಿ. ಜಿ. ಶ್ರೀನಿಧಿ

ಮನೆಯಿಂದ ಹೊರಬಂದರೆ ಸಾಕು, ನಾವು ಹೋದಲ್ಲೆಲ್ಲ ಒಂದಲ್ಲ ಒಂದು ರೀತಿಯ ಕುರುಹುಗಳನ್ನು ಉಳಿಸುತ್ತಲೇ ಸಾಗುತ್ತೇವೆ. ನೀವು ಮನೆಯಿಂದ ಹೊರಹೋದದ್ದನ್ನು ಎದುರುಮನೆಯವರು ನೋಡಿರುತ್ತಾರೆ, ಪಕ್ಕದ ಬೀದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ನಿಮ್ಮ ವಾಹನ ಹಾದುಹೋಗಿದ್ದು ದಾಖಲಾಗಿರುತ್ತದೆ, ಆಫೀಸಿಗೆ ಎಷ್ಟುಹೊತ್ತಿಗೆ ತಲುಪಿದಿರಿ ಎನ್ನುವುದನ್ನು ಕಚೇರಿಯ ಹಾಜರಾತಿ ವ್ಯವಸ್ಥೆ ಗುರುತಿಟ್ಟುಕೊಳ್ಳುತ್ತದೆ.

ಡಿಜಿಟಲ್ ಜಗತ್ತಿನಲ್ಲೂ ಹೀಗೆಯೇ.

ಸೋಮವಾರ, ಜುಲೈ 31, 2017

ಕನ್ನಡ ತಂತ್ರಾಂಶ ಲೋಕಕ್ಕೆ ಎರಡು ಹೊಸ ಸೇರ್ಪಡೆ

ಇಜ್ಞಾನ ವಾರ್ತೆ

ಸದಾಕಾಲವೂ ಬದಲಾಗುತ್ತಲೇ ಇರುವುದು ತಂತ್ರಜ್ಞಾನ ಜಗತ್ತಿನ ಹೆಗ್ಗಳಿಕೆ. ಈ ಮೂಲಕ ಸೃಷ್ಟಿಯಾಗುವ ಹೊಸಹೊಸ ಸೌಲಭ್ಯಗಳು ಎಲ್ಲ ಭಾಷೆಗಳ ಬಳಕೆದಾರರನ್ನೂ ತಲುಪುತ್ತವೆ. ಇದಕ್ಕೆ ನಮ್ಮ ಕನ್ನಡವೂ ಹೊರತಲ್ಲ. ಈಚೆಗೆ ಕನ್ನಡಕ್ಕೆ ಲಭ್ಯವಾಗಿರುವ ಇಂತಹ ಎರಡು ಹೊಸ ತಂತ್ರಾಂಶ ಸವಲತ್ತುಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ದಾರಿ ತೋರುವ 'ವೇಜ಼್'

ನಮ್ಮ ಸುತ್ತಮುತ್ತಲ ಪ್ರದೇಶದ ಭೂಪಟವನ್ನೂ ಅದರಲ್ಲಿ ನಮ್ಮ ಓಡಾಟದ ದಾರಿಯನ್ನೂ ತೋರಿಸುವ ಸೌಲಭ್ಯವನ್ನು ನಾವು ಅನೇಕ ಆಪ್‌ಗಳಲ್ಲಿ, ಜಾಲತಾಣಗಳಲ್ಲಿ ಬಳಸುತ್ತೇವೆ. ವಾಹನ ಚಲಾಯಿಸಲು ನೆರವಾಗುವ ಗೂಗಲ್ ಮ್ಯಾಪ್ಸ್‌ನಂತಹ ತಂತ್ರಾಂಶಗಳಲ್ಲಂತೂ ಧ್ವನಿರೂಪದ ಮಾರ್ಗದರ್ಶನವೂ ಸಿಗುತ್ತವೆ.

ಈವರೆಗೆ ಇಂಗ್ಲಿಷಿನಲ್ಲಷ್ಟೇ ಇದ್ದ ಈ ಸೌಲಭ್ಯ ಇದೀಗ ಕನ್ನಡದಲ್ಲೂ ಸಿಗುತ್ತಿದೆ.

ಗುರುವಾರ, ಜುಲೈ 27, 2017

ವಿಜ್ಞಾನದ ಇಜ್ಞಾನ: ಹೀಗೊಂದು ಅವಲಂಬನೆಯ ಕತೆ

ಕ್ಷಮಾ ವಿ. ಭಾನುಪ್ರಕಾಶ್


ಇಂದು ಇಡೀ ವಿಶ್ವವೇ ಒಂದು ಪುಟ್ಟ ಊರಿದ್ದಂತೆ. ಆದರೆ ಜಗತ್ತಿನ ಯಾವುದೋ ಮೂಲೆಯಲ್ಲಿರುವವರೊಡನೆ ಕ್ಷಣಮಾತ್ರದಲ್ಲೇ ಸಂಪರ್ಕ ಸಾಧಿಸಲು ಗೊತ್ತಿರುವ ನಮಗೆ ಪಕ್ಕದ ಮನೆಯಲ್ಲಿರುವವರ ಪರಿಚಯವೇ ಇರುವುದಿಲ್ಲ. ಪಠ್ಯಪುಸ್ತಕಗಳಲ್ಲಿ ಓದಿದ "ಮಾನವ ಸಂಘಜೀವಿ" ಎನ್ನುವ ಹೇಳಿಕೆ ನಿಜವೇ ಎಂದು ನಮ್ಮನ್ನು ನಾವೇ ಕೇಳಿಕೊಳ್ಳಬೇಕಾಗಿರುವ ಪರಿಸ್ಥಿತಿ ಇಂದಿನದು. 

ಹೀಗೆ ಸಹಜೀವನದ ಪರಿಕಲ್ಪನೆ ಮನುಷ್ಯರ ಜೀವನದಲ್ಲಿ ಮೌಲ್ಯ ಕಳೆದುಕೊಳ್ಳುತ್ತಿರಬಹುದು, ಆದರೆ ಪ್ರಾಣಿ ಪಕ್ಷಿ ಕೀಟ ಮತ್ತು ಸೂಕ್ಷ್ಮಾಣು ಜೀವಿಗಳ ಪ್ರಪಂಚದಲ್ಲಿ ಹಾಗೇನೂ ಆಗಿಲ್ಲ. ಅಲ್ಲಿನ ಸಸ್ಯಗಳ ನಡುವೆ, ಪ್ರಾಣಿಗಳ ನಡುವೆ, ಕೀಟಗಳ ನಡುವೆ ಅಥವಾ ಪ್ರಾಣಿ - ಸಸ್ಯ, ಸಸ್ಯ -  ಕೀಟ, ಕೀಟ - ಸೂಕ್ಷ್ಮಾಣು ಜೀವಿ ಮೊದಲಾದ ಬೇರೆಬೇರೆ ಜೋಡಿಗಳ ನಡುವೆ ಸಹಬಾಳ್ವೆ ಒಂದು ಸಹಜ ಪ್ರಕ್ರಿಯೆ.

ಸೋಮವಾರ, ಜುಲೈ 24, 2017

ಜಿಬಿ, ಟಿಬಿ ಆದಮೇಲೆ?

ಟಿ. ಜಿ. ಶ್ರೀನಿಧಿ


ನಾವು ಟೈಪ್ ಮಾಡಿದ ಮಾಹಿತಿ - ಡೌನ್‌ಲೋಡ್ ಮಾಡಿ ತಂದ ಕಡತಗಳೆಲ್ಲ ಕಂಪ್ಯೂಟರಿನ ಮೆಮೊರಿಯಲ್ಲಿರುತ್ತವಲ್ಲ, ಅದೆಲ್ಲ ಕಂಪ್ಯೂಟರಿಗೆ ಅರ್ಥವಾಗಬೇಕಾದರೆ ಮೊದಲಿಗೆ ದ್ವಿಮಾನ ಪದ್ಧತಿಯ ಅಂಕಿಗಳಾಗಿ (೧ ಅಥವಾ ೦) ಬದಲಾದಾಗಬೇಕಾದ್ದು ಅನಿವಾರ್ಯ.

ದ್ವಿಮಾನ ಸಂಖ್ಯೆಯ ಆಂಗ್ಲ ಹೆಸರು ಬೈನರಿ ಡಿಜಿಟ್; ಈ ಹೆಸರಿನ ಮೊದಲ ಎರಡು ಹಾಗೂ ಕೊನೆಯದೊಂದು ಅಕ್ಷರಗಳನ್ನು ಸೇರಿಸಿ ಬಿಟ್ ಎಂಬ ಹೆಸರು ರೂಪಗೊಂಡಿದೆ. ಇದು ಮಾಹಿತಿಯ ಪ್ರಮಾಣ ಅಳೆಯಲು ಬಳಕೆಯಾಗುವ ಅತ್ಯಂತ ಸಣ್ಣ ಏಕಮಾನ.

ಗುರುವಾರ, ಜುಲೈ 20, 2017

ವಿಜ್ಞಾನದ ಇಜ್ಞಾನ: ಸಾರಾಯಿಯ ಚುಚ್ಚುಮದ್ದು ಜೀವರಕ್ಷಕ ಔಷಧವಾಗಬಹುದೇ?

ವಿನಾಯಕ ಕಾಮತ್

ಎಥೆನೋಲ್ ರಚನೆ
'ಸಾರಾಯಿಯ ಚುಚ್ಚುಮದ್ದು ಔಷಧವಾಗಬಹುದೇ?' ಎಂಬ ಪ್ರಶ್ನೆ ಯಾರಿಗಾದರೂ ಕೇಳಿದರೆ, ಎಂತಹ ನಿರಕ್ಷರಕುಕ್ಷಿಯೂ ನಕ್ಕಾನು. ಏಕೆಂದರೆ, ಹೆಂಡ-ಸಾರಾಯಿಗಳು ಎಂದಿಗೂ ಆರೋಗ್ಯಕ್ಕೆ ಹಾನಿಕರವೆಂಬುದು ಎಂಥವರಿಗೂ ಗೊತ್ತಿರುವ ಸತ್ಯ.  ಆದರೆ ಇಂತಹ ಸಾರಾಯಿಯಲ್ಲಿರುವ ಎಥೆನೋಲ್ (ethanol) ಎಂಬ ರಾಸಾಯನಿಕವೂ, ಸಂದರ್ಭಕ್ಕೆ ಜೀವರಕ್ಷಕ ಪ್ರತಿವಿಷವಾಗಬಹುದು ಎಂದರೆ ನೀವು ನಂಬಲೇಬೇಕು!

ಸೋಮವಾರ, ಜುಲೈ 17, 2017

ಡಿಜಿಟಲ್ ಲೋಕದ ಒಂದು ಮೊಟ್ಟೆಯ ಕತೆ!

ಟಿ. ಜಿ. ಶ್ರೀನಿಧಿ


ಈಚೆಗೆ, ಹ್ಯಾರಿ ಪಾಟರ್ ಸರಣಿಯ ಮೊದಲ ಪುಸ್ತಕದ ೨೦ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಫೇಸ್‌ಬುಕ್‌ನಲ್ಲೊಂದು ವೈಶಿಷ್ಟ್ಯ ಕಾಣಿಸಿಕೊಂಡಿತ್ತು. ಹ್ಯಾರಿ ಪಾಟರ್‌ನದೋ ಆ ಸರಣಿಯಲ್ಲಿ ಬರುವ ಇತರ ಕೆಲ ಪಾತ್ರಗಳದೋ ಹೆಸರನ್ನು ನಮ್ಮ ಪೋಸ್ಟ್‌ನಲ್ಲಿ ಬರೆದರೆ ಅದು ಬೇರೆ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಿತ್ತು, ಅದರ ಮೇಲೆ ಕ್ಲಿಕ್ ಮಾಡಿದರೆ ಪರದೆಯ ಕೆಳಭಾಗದಲ್ಲಿ ಮಂತ್ರದಂಡವೊಂದು ಮೂಡಿ ಬಣ್ಣಬಣ್ಣದ ಚಿತ್ತಾರಗಳನ್ನೂ ಮೂಡಿಸುತ್ತಿತ್ತು!

ತಂತ್ರಾಂಶಗಳಲ್ಲಿ, ಜಾಲತಾಣಗಳಲ್ಲಿ ಕಾಣಸಿಗುವ ಇಂತಹ ವೈಶಿಷ್ಟ್ಯಗಳನ್ನು 'ಈಸ್ಟರ್ ಎಗ್'ಗಳೆಂದು ಕರೆಯುತ್ತಾರೆ.

ಗುರುವಾರ, ಜುಲೈ 13, 2017

ರೀಟೇಲ್ ಉದ್ಯಮದಲ್ಲೊಂದು ಹೊಸ ಸಂಚಲನ

ಉದಯ ಶಂಕರ ಪುರಾಣಿಕ

ಈ ಮೊದಲು ವಸತಿ ಪ್ರದೇಶಗಳಲ್ಲಿ ಚಿಲ್ಲರೆ ವ್ಯಾಪಾರಿಗಳು ಅಥವಾ ಕಿರಾಣಿ ಅಂಗಡಿಗಳು ಸಾಮಾನ್ಯವಾಗಿದ್ದವು. ನಂತರ ಡಿಪಾರ್ಟಮೆಂಟ್ ಸ್ಟೋರ್‌ಗಳು, ಸೂಪರ್ ಮಾರುಕಟ್ಟೆಗಳು, ಶಾಪಿಂಗ್ ಮಾಲ್‌ಗಳು ಬರಲಾರಂಭಿಸಿದವು. ದೂರವಾಣಿ ಕರೆ ಮಾಡಿ ಆರ್ಡರ್ ಮಾಡಿ, ನಿಮ್ಮ ಮನೆಗೆ ತಂದು ತಲುಪಿಸುತ್ತವೆ ಎನ್ನುವ ಪಿಜ್ಜಾ ಅಂಗಡಿಗಳಂತಹ ವ್ಯಾಪಾರ, ಡ್ರೈವ್ ಇನ್ ಶಾಪಿಂಗ್ ಮಾರುಕಟ್ಟೆ, ಅಂತರಜಾಲ ಮತ್ತು ಸ್ಮಾರ್ಟ್‌ಫೋನ್ ಬಳಸಿ ಮಾಡುವ ಆನ್‌ಲೈನ್ ಶಾಪಿಂಗ್ - ಹೀಗೆ ಗ್ರಾಹಕರಿಗೆ ವಿವಿಧ ರೀತಿಯ ಶಾಪಿಂಗ್ ಸೌಲಭ್ಯಗಳು ದೊರೆಯುತ್ತಿವೆ. ಇಷ್ಟೆಲ್ಲ ಬದಲಾಗಿರುವ ರೀಟೇಲ್ ಉದ್ಯಮದಲ್ಲಿ ಹೊಸ ಸಂಚಲನ ಮೂಡಿಸಿರುವುದು 'ಅಮೇಜಾನ್ ಗೋ' ಎಂಬ ಪರಿಕಲ್ಪನೆ.

ಸೋಮವಾರ, ಜುಲೈ 10, 2017

ಎಟಿಎಂ ಬಳಸುವಾಗ ಎಚ್ಚರವಹಿಸಿ!

ಟಿ. ಜಿ. ಶ್ರೀನಿಧಿ

ಕ್ರೆಡಿಟ್ ಕಾರ್ಡ್ - ಡೆಬಿಟ್ ಕಾರ್ಡುಗಳನ್ನು ಜಾಲತಾಣಗಳಲ್ಲಿ, ಅಂಗಡಿಗಳಲ್ಲಿ ಬಳಸುವಾಗ ಹುಷಾರಾಗಿರಬೇಕು ಎನ್ನುವುದು ನಮಗೆ ಪದೇಪದೇ ಕೇಳಸಿಗುವ ಸಲಹೆ. ಇಂತಹ ಸಂದರ್ಭಗಳಲ್ಲಿ ವಂಚನೆ ನಡೆಯುವ ಸಾಧ್ಯತೆ ಹೆಚ್ಚಿರುವುದರಿಂದ ಈ ಸಲಹೆಯನ್ನು ಪಾಲಿಸುವುದು ಅಪೇಕ್ಷಣೀಯವೂ ಹೌದು.

ಹಾಗೆಂದು ನಮ್ಮ ಕಾರ್ಡನ್ನು ಎಟಿಎಂ‌ಗಳಲ್ಲಿ ಬಳಸುವಾಗ ಎಚ್ಚರಿಕೆ ಬೇಡವೇ?

ಗುರುವಾರ, ಜುಲೈ 6, 2017

ಓಸಿಆರ್ ಎಂದರೇನು?

ಟಿ. ಜಿ. ಶ್ರೀನಿಧಿ

ಮುದ್ರಿತ ಅಥವಾ ಕೈಬರಹದ ಅಕ್ಷರಗಳನ್ನು ಕಂಪ್ಯೂಟರ್ ಸಹಾಯದಿಂದ ಗುರುತಿಸಲು ನೆರವಾಗುವುದು ಓಸಿಆರ್. ಇದು 'ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್' ಎನ್ನುವುದರ ಹ್ರಸ್ವರೂಪ. ಕಂಪ್ಯೂಟರ್ ಹಾಗೂ ಮಾನವರ ನಡುವಿನ ಸಂವಹನದ ಹೊಸದೊಂದು ಆಯಾಮವನ್ನು ಪರಿಚಯಿಸುವ ತಂತ್ರಜ್ಞಾನ ಇದು.

ಸ್ಕ್ಯಾನ್ ಮಾಡಿಯೋ ಫೋಟೋ ಕ್ಲಿಕ್ಕಿಸಿಯೋ ಅಕ್ಷರಗಳನ್ನು ಕಂಪ್ಯೂಟರಿಗೆ ಊಡಿಸುತ್ತೇವಲ್ಲ, ಆ ಚಿತ್ರದಲ್ಲಿ ಇರಬಹುದಾದ ಬರಹವನ್ನು ಗುರುತಿಸುವುದು ಹೇಗೆ, ಗುರುತಿಸಿದ ಚಿತ್ರವನ್ನು ಪಠ್ಯರೂಪಕ್ಕೆ ಬದಲಿಸುವುದು ಹೇಗೆ ಎನ್ನುವುದನ್ನೆಲ್ಲ ಕಂಪ್ಯೂಟರಿಗೆ ಹೇಳಿಕೊಡುವುದು ಓಸಿಆರ್ ತಂತ್ರಾಂಶದ ಕೆಲಸ.
badge