ಸೋಮವಾರ, ಸೆಪ್ಟೆಂಬರ್ 25, 2017

ಜಿಪಿಎಸ್ ಕುಂಚ ಭೂಪಟವೇ ಕ್ಯಾನ್ವಾಸ್!

ಟಿ. ಜಿ. ಶ್ರೀನಿಧಿ


ಹೊಸ ಜಾಗಗಳಿಗೆ ಪ್ರಯಾಣ ಬೆಳೆಸುವಾಗ, ಹಳೆಯ ಊರಿನಲ್ಲಿ ಟ್ಯಾಕ್ಸಿ ಕರೆಸುವಾಗಲೆಲ್ಲ ಜಿಪಿಎಸ್ ಸೇವೆ ಬಳಸುವುದು ನಮಗೆ ಚೆನ್ನಾಗಿಯೇ ಅಭ್ಯಾಸವಾಗಿಬಿಟ್ಟಿದೆ. ಸಾಗರದಿಂದ ಕೆಳದಿಗೆ ಹೋಗಲು ಈ ರಸ್ತೆಯಲ್ಲಿ ತಿರುಗಿ ಎಂದೋ ನಿಮ್ಮ ಕ್ಯಾಬ್ ಪಕ್ಕದ ರಸ್ತೆಯಲ್ಲಿ ಬಂದು ನಿಂತಿದೆಯೆಂದೋ ನಮ್ಮ ಸ್ಮಾರ್ಟ್‌ಫೋನ್ ಹೇಳುತ್ತದಲ್ಲ, ಅದನ್ನು ಸಾಧ್ಯವಾಗಿಸುವುದು ಇದೇ ಜಿಪಿಎಸ್ ತಂತ್ರಜ್ಞಾನ. ಜಿಪಿಎಸ್ ಎನ್ನುವುದು ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ ಎಂಬ ಹೆಸರಿನ ಹ್ರಸ್ವರೂಪ.

ನಮ್ಮ ಗಮ್ಯಸ್ಥಾನ ಮುಟ್ಟಲು ಯಾವ ಮಾರ್ಗದಲ್ಲಿ ಪ್ರಯಾಣಿಸಬೇಕು ಎನ್ನುವುದನ್ನು ಮ್ಯಾಪ್ ತಂತ್ರಾಂಶ ಭೂಪಟದ ಮೇಲೆ ಚಿತ್ರಿಸಿ ತೋರಿಸುತ್ತದೆ. ಅದೇರೀತಿ ಟ್ಯಾಕ್ಸಿಯಲ್ಲಿ ಪ್ರಯಾಣಿಸಿದಾಗ ನಾವು ಯಾವ ಮಾರ್ಗದಲ್ಲಿ ಬಂದೆವು ಎನ್ನುವುದನ್ನು ಟ್ಯಾಕ್ಸಿ ಆಪ್ ನಮ್ಮ ರಸೀತಿಯ ಜೊತೆಯಲ್ಲೇ ಕಳಿಸುತ್ತದೆ. ಆ ತಂತ್ರಾಂಶಗಳಿಗೆ ಈ ಮಾಹಿತಿ ಸಿಗುವುದು ಮೊಬೈಲಿನಲ್ಲಿ (ಅಥವಾ ಕಾರಿನ ಮಾರ್ಗದರ್ಶಕ ಸಾಧನದಲ್ಲಿ) ಅಳವಡಿಸಲಾಗಿರುವ ಜಿಪಿಎಸ್ ರಿಸೀವರಿನಿಂದ.

ಜಿಪಿಎಸ್ ವ್ಯವಸ್ಥೆಯ ಪ್ರಮುಖ ಭಾಗವೇ ಬಾಹ್ಯಾಕಾಶದಲ್ಲಿರುವ ಉಪಗ್ರಹಗಳ ಜಾಲ. ಈ ಉಪಗ್ರಹಗಳು ಯಾವುದೇ ಸಮಯದಲ್ಲಿ ತಮ್ಮ ನಿರ್ದಿಷ್ಟ ಸ್ಥಾನದ ಕುರಿತು ರೇಡಿಯೋ ಸಂಕೇತಗಳನ್ನು ಬಿತ್ತರಿಸುತ್ತಿರುತ್ತವೆ. ಮೊಬೈಲಿನಲ್ಲೋ ಕಾರಿನಲ್ಲೋ ಬೇರಾವುದೋ ಸಾಧನದಲ್ಲೋ ಇರುವ ಜಿಪಿಎಸ್ ರಿಸೀವರ್ ಈ ಸಂಕೇತ ಪಡೆದುಕೊಂಡು ಉಪಗ್ರಹಕ್ಕೂ ತನಗೂ ನಡುವಿನ ಅಂತರವನ್ನು ಪತ್ತೆಹಚ್ಚಲು ಶಕ್ತವಾಗಿರುತ್ತದೆ. ನಾಲ್ಕು ಉಪಗ್ರಹಗಳಿಂದ ಈ ಬಗೆಯ ಸಂಕೇತ ದೊರಕುತ್ತಿದ್ದಂತೆಯೇ ಜಿಪಿಎಸ್ ರಿಸೀವರ್ ಭೂಮಿಯ ಮೇಲೆ ಯಾವ ಸ್ಥಳದಲ್ಲಿದೆ ಎನ್ನುವ ಅಂಶ, ಮೂರು ಆಯಾಮಗಳಲ್ಲಿ, ಸ್ಪಷ್ಟವಾಗಿಬಿಡುತ್ತದೆ. ನಮ್ಮ ಮೊಬೈಲು ಅಥವಾ ಕಾರಿನ ಮಾರ್ಗದರ್ಶಕ ಸಾಧನ (ನ್ಯಾವಿಗೇಶನ್ ಡಿವೈಸ್) ಪ್ರಯಾಣದುದ್ದಕ್ಕೂ ಉಪಗ್ರಹದೊಡನೆ ಸಂಪರ್ಕದಲ್ಲಿರುತ್ತದಲ್ಲ, ಹಾಗಾಗಿ ನಾವು ಸಾಗುತ್ತಿರುವ ಹಾದಿಯನ್ನು ಭೂಪಟದ ಮೇಲೆ ಚಿತ್ರಿಸುವುದು ಅದರಲ್ಲಿ ಬಳಕೆಯಾಗುವ ತಂತ್ರಾಂಶಕ್ಕೆ ಸಾಧ್ಯವಾಗುತ್ತದೆ.
ಇದನ್ನೂ ಓದಿ: ಜಿಪಿಎಸ್ ಎಂಬ ಮಾರ್ಗದರ್ಶಕ
ನಮ್ಮ ಪ್ರಯಾಣದ ಮಾರ್ಗಕ್ಕೆ ಅನುಗುಣವಾಗಿ ಇಂತಹ ವಿನ್ಯಾಸಗಳು ಬೇರೆಬೇರೆ ರೀತಿಯಲ್ಲಿರುವುದು ಸಾಧ್ಯ. ಕಚೇರಿ-ಮನೆ ಎರಡೂ ರಿಂಗ್ ರಸ್ತೆಯ ಆಸುಪಾಸಿನಲ್ಲೇ ಇರುವವರಿಗೆ ಈ ವಿನ್ಯಾಸ ಸಾಕಷ್ಟು ಸರಳವಾಗಿ ಕಂಡರೆ ಹೊಸ ಬಡಾವಣೆಯೊಂದರಲ್ಲಿ ದಾರಿ ತಿಳಿಯದೆ ಸುತ್ತಿದವರ ಮೊಬೈಲಿನಲ್ಲಿ ದಾರಿಯ ಚಿತ್ರ ವಿಚಿತ್ರವಾಗಿ ಕಾಣಲಿಕ್ಕೂ ಸಾಕು. ಸೈಕಲ್ ಹೊಡೆಯುವಾಗ, ಜಾಗಿಂಗ್ ಮಾಡುವಾಗ ಜಿಪಿಎಸ್ ಸೌಲಭ್ಯವಿರುವ ಆಪ್ ಬಳಸುವವರಂತೂ ಇಂತಹ ಚಿತ್ತಾರಗಳನ್ನು ಮೂಡಿಸುತ್ತಲೇ ಇರುತ್ತಾರೆ.

ರಸ್ತೆಗಳ ವಿನ್ಯಾಸ, ನಾವು ಸಾಗುವ ಹಾದಿ ಸೇರಿದಂತೆ ಅನೇಕ ಅಂಶಗಳು ಈ ವಿನ್ಯಾಸಗಳ ಸ್ವರೂಪವನ್ನು ತೀರ್ಮಾನಿಸುತ್ತವೆ. ಇಂತಹ ವಿನ್ಯಾಸಗಳಿಗೆ ನಿರ್ದಿಷ್ಟ ಆಕಾರ-ಸ್ವರೂಪಗಳೇನೂ ಇಲ್ಲದಿರುವುದಕ್ಕೂ ಅದೇ ಕಾರಣ. ಆದರೆ ಇಂತಹ ಅಂಶಗಳು ನಮ್ಮ ಕಲ್ಪನೆಯನ್ನೆಲ್ಲಾದರೂ ಕಟ್ಟಿಹಾಕಲು ಸಾಧ್ಯವೇ?

ಅದು ಖಂಡಿತಾ ಅಸಾಧ್ಯವೆಂದು ತೋರಿಸಲೇನೋ ಎಂಬಂತೆ ವಿಶ್ವದೆಲ್ಲೆಡೆಯ ಹಲವಾರು ಮಂದಿ ಜಿಪಿಎಸ್ ಚಿತ್ರಗಳನ್ನು ತಮ್ಮ ಇಷ್ಟದ ವಿನ್ಯಾಸದಲ್ಲಿ ರೂಪಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಜಿಪಿಎಸ್ ಡ್ರಾಯಿಂಗ್ ಅಥವಾ ಜಿಪಿಎಸ್ ಆರ್ಟ್ ಎಂದೇ ಹೆಸರಾಗಿರುವ ಈ ಹವ್ಯಾಸದಲ್ಲಿ ಜಿಪಿಎಸ್ ತಂತ್ರಾಂಶವೇ ಕುಂಚ, ಮೊಬೈಲಿನಲ್ಲಿ ಕಾಣುವ ಭೂಪಟವೇ ಕ್ಯಾನ್‌ವಾಸ್ ಆಗಿರುವುದು ವಿಶೇಷ.

ಎಷ್ಟು ದೂರ ಓಡಿದೆವೆಂದೋ ಸೈಕಲಿನಲ್ಲಿ ಎಷ್ಟು ಕಿಲೋಮೀಟರ್ ಕ್ರಮಿಸಿದೆವೆಂದೋ ತಿಳಿಯಲು ಮೊಬೈಲ್ ಆಪ್ ಮೊರೆಹೋಗುವ ಅನೇಕ ಮಂದಿ ಈ ಹವ್ಯಾಸವನ್ನೂ ಬೆಳೆಸಿಕೊಂಡಿದ್ದಾರೆ. ದೈಹಿಕ ಚಟುವಟಿಕೆಯನ್ನು ಗಮನಿಸಿಕೊಳ್ಳುವ ಆಪ್‌ಗಳ ಜೊತೆಗೆ ಈ ಹವ್ಯಾಸಕ್ಕೆ ನೆರವಾಗುವ ಕೆಲ ಸೌಲಭ್ಯಗಳೂ ರೂಪುಗೊಂಡಿವೆ (ಹೆಚ್ಚಿನ ವಿವರಗಳಿಗೆ ಜಿಪಿಎಸ್ ಆರ್ಟ್ ಅಥವಾ ಜಿಪಿಎಸ್ ಡ್ರಾಯಿಂಗ್ ಎಂದು ಗೂಗಲ್ ಮಾಡಬಹುದು).
ಇದನ್ನೂ ಓದಿ: ನಮ್ಮ ಲೊಕೇಶನ್ ಕಳುಹಿಸುವುದು ಹೇಗೆ ಗೊತ್ತೇ?
ಅಂದಹಾಗೆ ದೇಹದ ಜೊತೆಗೆ ಬುದ್ಧಿಗೂ ಕಸರತ್ತು ಕೊಡುವ ಈ ಹವ್ಯಾಸ ಬರಿಯ ಓಟಕ್ಕೆ, ಸೈಕಲ್ ಸವಾರಿಗೆ ಮಾತ್ರವೇ ಸೀಮಿತವೇನಲ್ಲ. ಈಚೆಗೆ ಅಮೆರಿಕಾದಲ್ಲಿ ಪರೀಕ್ಷಾರ್ಥ ಹಾರಾಟ ಕೈಗೊಂಡಿದ್ದ ಬೋಯಿಂಗ್ ಡ್ರೀಮ್‌ಲೈನರ್ ಹೊಸ ಮಾದರಿಯ ವಿಮಾನವೊಂದು ಸುಮಾರು ಹತ್ತು ಸಾವಿರ ಮೈಲಿ ಕ್ರಮಿಸಿ ಜಿಪಿಎಸ್ ನಕ್ಷೆಯಲ್ಲಿ ವಿಮಾನವೊಂದರ ಚಿತ್ರವನ್ನೇ ಮೂಡಿಸಿಬಿಟ್ಟಿದೆ. ಅಂದಹಾಗೆ ಪಾರ್ಕು, ರಸ್ತೆಗಳಿಗಷ್ಟೇ ಸೀಮಿತವಾಗಿದ್ದ ಜಿಪಿಎಸ್ ಚಿತ್ರಕಲೆಯನ್ನು ಆಕಾಶದೆತ್ತರಕ್ಕೆ ಕೊಂಡೊಯ್ದಿದ್ದಷ್ಟೇ ಈ ಸಾಧನೆಯ ಮಹತ್ವವಲ್ಲವಂತೆ. ನಡುವೆ ಎಲ್ಲೂ ನಿಲ್ಲದೆ ಇಷ್ಟೆಲ್ಲ ದೂರ ಕ್ರಮಿಸಿರುವ ಈ ವಿಮಾನ ಅತ್ಯಂತ ದೂರ ಪ್ರಯಾಣಿಸುವ ನಾನ್‌ಸ್ಟಾಪ್ ವಾಣಿಜ್ಯ ವಿಮಾನಯಾನದ (ದೋಹಾದಿಂದ ಆಕ್ಲೆಂಡ್) ಸದ್ಯದ ದಾಖಲೆಯನ್ನೂ ಮುರಿದಿದೆ.

ಆಗಸ್ಟ್ ೧೩, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge