ಬುಧವಾರ, ಸೆಪ್ಟೆಂಬರ್ 30, 2015

ಕನ್ನಡದ ಕೇಳುಪುಸ್ತಕಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ಓದುವ ಪುಸ್ತಕಗಳ ಜೊತೆಗೆ ಕನ್ನಡದ ಕೇಳು ಪುಸ್ತಕಗಳೂ ಇವೆ. ಹೆಸರಾಂತ ಲೇಖಕರ ಕತೆ - ಕಾದಂಬರಿಗಳ ಧ್ವನಿಮುದ್ರಣವನ್ನು ಇದೀಗ ವಿವಿಧ ಜಾಲತಾಣಗಳಲ್ಲಿ ಕೊಳ್ಳಬಹುದು; ಸಿಡಿ ರೂಪದಲ್ಲಿ ಅಥವಾ ಡೌನ್‌ಲೋಡ್ ಮಾಡಿಕೊಂಡು ಕೇಳಬಹುದು. ಮಾಸ್ತಿಯವರ 'ಸುಬ್ಬಣ್ಣ', ಭೈರಪ್ಪನವರ 'ಧರ್ಮಶ್ರೀ', ಬೀಚಿಯವರ 'ಮಾತನಾಡುವ ದೇವರುಗಳು', ವಸುಧೇಂದ್ರರ 'ನಮ್ಮಮ್ಮ ಅಂದ್ರೆ ನಂಗಿಷ್ಟ' ಸೇರಿದಂತೆ ಹಲವು ಕೃತಿಗಳು ಧ್ವನಿಮುದ್ರಿತ ರೂಪದಲ್ಲಿ ಪ್ರಕಟವಾಗಿವೆ. 'ಕೇಳಿ ಕಥೆಯ' ಎನ್ನುವ ಕೇಳುಪುಸ್ತಕದಲ್ಲಂತೂ ಕತೆಗಳ ಗೊಂಚಲೇ ಇದೆ!

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಮಗ್ರ ವಚನಸಾಹಿತ್ಯ ಹಾಗೂ ಸಮಗ್ರ ದಾಸಸಾಹಿತ್ಯ ತಾಣಗಳಲ್ಲಿ ವಚನಗಳು ಹಾಗೂ ದಾಸಸಾಹಿತ್ಯದ ಧ್ವನಿಮುದ್ರಣ ಲಭ್ಯವಿದೆ.

ಗುರುವಾರ, ಸೆಪ್ಟೆಂಬರ್ 24, 2015

ಅನುವಾದ

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯ ಮಹಾಪೂರ ಇಂಗ್ಲಿಷಿನಲ್ಲೇ ಇರಬೇಕು ಎಂದೇನೂ ಇಲ್ಲವಲ್ಲ! ಫ್ರೆಂಚ್‌ನಲ್ಲೋ ಜರ್ಮನ್‌ನಲ್ಲೋ ಇರುವ ತಾಣದಲ್ಲೂ ನಮಗೆ ಬೇಕಾದ ಮಾಹಿತಿ ಇರಬಹುದು. ಹೀಗೆ ಬೇರಾವುದೋ ಭಾಷೆಯಲ್ಲಿ ಇರುವ ಮಾಹಿತಿಯನ್ನು ನಮ್ಮ ಭಾಷೆಗೆ ಅನುವಾದಿಸಿಕೊಳ್ಳುವ ಸೌಲಭ್ಯ 'ಗೂಗಲ್ ಟ್ರಾನ್ಸ್‌ಲೇಟ್' ಮೂಲಕ ಕನ್ನಡಕ್ಕೂ ಬಂದಿದೆ.

ಈ ಸೇವೆ ಬಳಸಿ ವಿವಿಧ ಭಾಷೆಗಳಲ್ಲಿರುವ ಮಾಹಿತಿಯನ್ನು - ತಕ್ಕಮಟ್ಟಿಗಿನ ನಿಖರತೆಯೊಂದಿಗೆ - ಕನ್ನಡಕ್ಕೆ ಅನುವಾದಿಸಿಕೊಳ್ಳಬಹುದು. ಅನುವಾದ ತಪ್ಪು ಎನಿಸಿದಾಗ ನಾವೇ ಅದನ್ನು ತಿದ್ದುವುದೂ ಸಾಧ್ಯ.

ಭಾನುವಾರ, ಸೆಪ್ಟೆಂಬರ್ 20, 2015

ಕನ್ನಡದ ಬ್ರೌಸರ್‌ಗಳು

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಬಳಕೆದಾರರೆಲ್ಲರೂ ಕಡ್ಡಾಯವಾಗಿ ಬಳಸುವ ತಂತ್ರಾಂಶವೆಂದರೆ ಬ್ರೌಸರ್. ವಿಶ್ವವ್ಯಾಪಿ ಜಾಲದಲ್ಲಿರುವ ತಾಣಗಳನ್ನು ತಮ್ಮ ಕಂಪ್ಯೂಟರಿನಲ್ಲಿ ವೀಕ್ಷಿಸಲು ಬಳಕೆದಾರರಿಗೆ ನೆರವಾಗುವುದು ಈ ತಂತ್ರಾಂಶದ ಕೆಲಸ. ಗೂಗಲ್ ಕ್ರೋಮ್, ಮೊಜಿಲ್ಲಾ ಫೈರ್‌ಫಾಕ್ಸ್, ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಸೇರಿದಂತೆ ಹಲವಾರು ಪ್ರಮುಖ ಬ್ರೌಸರುಗಳ ಕನ್ನಡ ಆವೃತ್ತಿ ಇದೀಗ ಲಭ್ಯವಿದೆ. ಇದರಿಂದಾಗಿ ಆ ಬ್ರೌಸರುಗಳಲ್ಲಿರುವ ಆಯ್ಕೆಗಳನ್ನೆಲ್ಲ ನಾವು ಕನ್ನಡದಲ್ಲಿ ನೋಡಬಹುದು, ಬಳಸಬಹುದು.

ಶುಕ್ರವಾರ, ಸೆಪ್ಟೆಂಬರ್ 11, 2015

ಪದಪರೀಕ್ಷೆ

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]

ಇಂಗ್ಲಿಷ್ ಪದಗಳನ್ನು ಟೈಪಿಸುವಾಗ ಏನಾದರೂ ಅಕ್ಷರದೋಷಗಳಿದ್ದರೆ ಅವನ್ನು ಕೆಂಪು ಅಡಿಗೆರೆಯ ಮೂಲಕ ಗುರುತಿಸುವ, ಸ್ಪೆಲಿಂಗ್ ಸರಿಪಡಿಸಲು ಸಹಾಯವನ್ನೂ ಮಾಡುವ ಸೌಲಭ್ಯಗಳನ್ನು ನಾವು ಹಲವು ತಂತ್ರಾಂಶಗಳಲ್ಲಿ, ಜಾಲತಾಣಗಳಲ್ಲಿ ಗಮನಿಸಿರುತ್ತೇವೆ. ಇಂತಹ ಸೌಲಭ್ಯ ಕನ್ನಡದಲ್ಲೂ ಇದೆ. ಪದಸಂಸ್ಕಾರಕಗಳ ಉದಾಹರಣೆ ನೋಡುವುದಾದರೆ 'ಪದ' ತಂತ್ರಾಂಶದಲ್ಲಿ ಟೈಪಿಸಿದ ನಮ್ಮ ಪಠ್ಯದಲ್ಲಿರುವ (ಬಹುತೇಕ) ತಪ್ಪುಗಳನ್ನು ಗುರುತಿಸುವುದು ಹಾಗೂ ಸರಿಯಾದ ರೂಪಗಳನ್ನು ನೋಡುವುದು ಸಾಧ್ಯ. ಅಷ್ಟೇ ಅಲ್ಲ, ಮೊದಲ ಕೆಲ ಅಕ್ಷರಗಳನ್ನು ಟೈಪಿಸುತ್ತಿದ್ದಂತೆ ಆ ಅಕ್ಷರಗಳಿಂದ ಪ್ರಾರಂಭವಾಗುವ ಪದವನ್ನು ಸೂಚಿಸುವ ಸೌಲಭ್ಯ ಕೂಡ ಇಲ್ಲಿದೆ.

ಶನಿವಾರ, ಸೆಪ್ಟೆಂಬರ್ 5, 2015

ಟೀವಿಯನ್ನು ಸ್ಮಾರ್ಟ್ ಮಾಡೋಣ ಬನ್ನಿ!


ಒಂದು ಕಾಲವಿತ್ತು, ಬೀದಿಗೊಂದು ಟೀವಿ ಇದ್ದರೆ ಆಗ ಅದೇ ಹೆಚ್ಚು. ಶುಕ್ರವಾರದ ಚಿತ್ರಮಂಜರಿ - ಭಾನುವಾರದ ಚಲನಚಿತ್ರಗಳನ್ನೆಲ್ಲ ನೋಡಲು ಬರುವವರನ್ನು ಸಂಭಾಳಿಸುವ ಹೆಚ್ಚುವರಿ ಜವಾಬ್ದಾರಿ ಆಗಿನ ಟೀವಿ ಮಾಲೀಕರಿಗೆ ಉಚಿತವಾಗಿ ದೊರಕುತ್ತಿತ್ತು. ಟೀವಿ ನೋಡಲು ನೆರೆಮನೆಗೆ ಹೋಗುವ ವ್ಯವಸ್ಥೆ ಅಂದಿನ ಕಾಲದ ಸೋಶಿಯಲ್ ನೆಟ್‌ವರ್ಕ್ ಆಗಿತ್ತು ಎಂದರೂ ಸರಿಯೇ!

ಮುಂದೆ ಟೀವಿಯ ಜನಪ್ರಿಯತೆ ಹಾಗೂ ಅದನ್ನು ಕೊಳ್ಳುವ ಶಕ್ತಿಗಳೆರಡೂ ಹೆಚ್ಚಿದಂತೆ ಎಲ್ಲ ಮನೆಗಳಿಗೂ ಟೀವಿಯ ಆಗಮನವಾಯಿತು. ಕಪ್ಪು ಬಿಳುಪು ಹೋಗಿ ಬಣ್ಣದ ಟೀವಿ ಬಂತು, ಫ್ಲ್ಯಾಟ್ ಸ್ಕ್ರೀನ್ - ಎಲ್‌ಸಿಡಿ - ಎಲ್‌ಇಡಿ ಟೀವಿಗಳ ಪರಿಚಯವಾಯಿತು, ನೈಜ ದೃಶ್ಯದಷ್ಟೇ ಸುಸ್ಪಷ್ಟವಾಗಿ ಚಿತ್ರಗಳನ್ನು ಪ್ರದರ್ಶಿಸುವ ಹೈ ಡೆಫನಿಶನ್ (ಎಚ್‌ಡಿ) ಟೀವಿಗಳೂ ಬಂದವು.

ಬುಧವಾರ, ಸೆಪ್ಟೆಂಬರ್ 2, 2015

ಯುನಿಕೋಡ್

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ  [ಹಿಂದಿನ ಲೇಖನ]


ಹಿಂದಿನ ಕನ್ನಡ ಪದಸಂಸ್ಕಾರಕಗಳನ್ನು ಬಳಸುವಾಗ ನಾವು ನಿರ್ದಿಷ್ಟ ಫಾಂಟುಗಳನ್ನು ಅವಲಂಬಿಸಬೇಕಾದ್ದು ಅನಿವಾರ್ಯವಾಗಿತ್ತು. ಟೈಪಿಸುವುದು ಹಾಗಿರಲಿ, ಫಾಂಟ್ ಇನ್‌ಸ್ಟಾಲ್ ಮಾಡಿಕೊಳ್ಳದೆ ಕನ್ನಡದ ಪಠ್ಯ ಓದುವುದೂ ಆಗ ಸಾಧ್ಯವಾಗುತ್ತಿರಲಿಲ್ಲ.

ಈ ಪರಿಸ್ಥಿತಿ ಬದಲಾದದ್ದು ಯುನಿಕೋಡ್ ಸಂಕೇತ ವಿಧಾನ ಬಳಕೆಗೆ ಬಂದಾಗ (ನೆನಪಿಡಿ, ಯುನಿಕೋಡ್ ಒಂದು ಸಂಕೇತ ವಿಧಾನ - ತಂತ್ರಾಂಶ ಅಲ್ಲ). ಈ ಸೌಲಭ್ಯವಿರುವ ತಂತ್ರಾಂಶಗಳಲ್ಲಿ ಬೆರಳಚ್ಚು ಮಾಡಿದ ಮಾಹಿತಿಯನ್ನು ನೇರವಾಗಿ ಯುನಿಕೋಡ್‌ನಲ್ಲೇ ಸಂಗ್ರಹಿಸಿಡಲಾಗುತ್ತದೆ, ಹಳೆಯ ತಂತ್ರಾಂಶಗಳಂತೆ ಅಕ್ಷರಶೈಲಿಯ (ಫಾಂಟ್) ಸಂಕೇತಗಳಲ್ಲಿ ಅಲ್ಲ. ಹಾಗಾಗಿ ಯುನಿಕೋಡ್‌ನಲ್ಲಿರುವ ಮಾಹಿತಿಯನ್ನು ಬೇರೊಬ್ಬರು ಓದಲು ಕನ್ನಡದ ಯಾವುದೇ ಯುನಿಕೋಡ್ ಅಕ್ಷರಶೈಲಿ (ಓಪನ್‌ಟೈಪ್ ಫಾಂಟ್) ಇದ್ದರೆ ಸಾಕು.
badge