ಬುಧವಾರ, ಡಿಸೆಂಬರ್ 30, 2015

ಏಸಸ್ ಜೆನ್‌ಪ್ಯಾಡ್: ಮನರಂಜನೆಗೊಂದು ಹೊಸ ಟ್ಯಾಬ್ಲೆಟ್

ದೊಡ್ಡಗಾತ್ರದ ಮೊಬೈಲ್ ಫೋನುಗಳು ಸರ್ವೇಸಾಮಾನ್ಯವಾಗುತ್ತಿರುವ ಈ ದಿನಗಳಲ್ಲಿ ಟ್ಯಾಬ್ಲೆಟ್ಟುಗಳು ಪ್ರಸ್ತುತವೋ ಇಲ್ಲವೋ ಎನ್ನುವುದು ನಮಗೆ ಪದೇ ಪದೇ ಎದುರಾಗುವ ಪ್ರಶ್ನೆ. ಪರಿಸ್ಥಿತಿ ಹೀಗಿದ್ದರೂ ಮಾರುಕಟ್ಟೆಗೆ ಹೊಸ ಟ್ಯಾಬ್ಲೆಟ್ಟುಗಳು ಇನ್ನೂ ಬರುತ್ತಲೇ ಇವೆ, ಹೊಸ ಸೌಲಭ್ಯಗಳನ್ನೂ ಪರಿಚಯಿಸುತ್ತಿವೆ.

ಈಚೆಗೆ ಮಾರುಕಟ್ಟೆ ಪ್ರವೇಶಿಸಿರುವ ಏಸಸ್ ಸಂಸ್ಥೆಯ ಜೆನ್‌ಪ್ಯಾಡ್ ೭, ಇಂತಹುದೊಂದು ಟ್ಯಾಬ್ಲೆಟ್. ಅದರ ಪರಿಚಯ ಇಲ್ಲಿದೆ.


ಜೆನ್‌ಪ್ಯಾಡ್‌ನ ವಿನ್ಯಾಸ ಮೊದಲ ನೋಟಕ್ಕೇ ಗಮನಸೆಳೆಯುವಂತಿದೆ. ಹಿಂಬದಿ ರಕ್ಷಾಕವಚ ಪ್ಲಾಸ್ಟಿಕ್‌ನದೇ ಆದರೂ ಗೀರುಗಳಿರುವ (ಲೆದರ್‌/ರೆಗ್ಸಿನ್‌ನಂತಹ) ವಿನ್ಯಾಸದಿಂದಾಗಿ ಆಕರ್ಷಕವಾಗಿ ಕಾಣುತ್ತದೆ - ಜಾರುವುದಿಲ್ಲವಾದ್ದರಿಂದ ಹಿಡಿದುಕೊಳ್ಳಲೂ ಅನುಕೂಲಕರ.

ಮಂಗಳವಾರ, ಡಿಸೆಂಬರ್ 29, 2015

ಫ್ರೀ ಬೇಸಿಕ್ಸ್ ಎಂಬ ಗೊಂದಲದ ಸುತ್ತ

ಟಿ. ಜಿ. ಶ್ರೀನಿಧಿ

ಅಂತರಜಾಲವನ್ನು ಇನ್‌ಫರ್ಮೇಶನ್ ಸೂಪರ್‌ಹೈವೇ ಎಂದು ಕರೆಯುತ್ತಾರಲ್ಲ, ಅದನ್ನು ಒಂದು ರಸ್ತೆಯಾಗಿಯೇ ಕಲ್ಪಿಸಿಕೊಳ್ಳಿ. ಆ ರಸ್ತೆಯಲ್ಲಿ ಎಲ್ಲ ಜಾಲತಾಣ ಹಾಗೂ ಆಪ್ ಬಳಕೆದಾರರಿಗೆ ಸಂಬಂಧಪಟ್ಟ ಮಾಹಿತಿಯೂ ಓಡಾಡುತ್ತಿರುತ್ತದೆ. ಕೆಲವರದು ಎಸ್‌ಯುವಿ ಇರಬಹುದು, ಇನ್ನು ಕೆಲವರದು ಕಾರು-ಬೈಕು-ಬಸ್ಸು-ಲಾರಿಗಳಿರಬಹುದು, ಸೈಕಲ್ ಓಡಿಸುವವರೂ ಇರಬಹುದು. ಆದರೆ ರಸ್ತೆ ಮಾತ್ರ ಎಲ್ಲರಿಗೂ ಒಂದೇ. ಟೋಲ್ ಬಂದಾಗ ಟೋಲ್ ಪಾವತಿಸಿ, ಇಲ್ಲದಿದ್ದರೆ ಹಾಗೆಯೇ ಗಾಡಿ ಓಡಿಸುತ್ತಿರಿ.

ಇದ್ದಕ್ಕಿದ್ದ ಹಾಗೆ ಬಹುರಾಷ್ಟ್ರೀಯ ವಾಹನ ತಯಾರಿಕಾ ಸಂಸ್ಥೆಯೊಂದು ಆ ರಸ್ತೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡುಬಿಡುತ್ತದೆ; ತಾನು ತಯಾರಿಸುವ ಕಾರುಗಳಿಗೆ ಮಾತ್ರ ಆ ರಸ್ತೆಯಲ್ಲಿ ಪ್ರವೇಶ ಎಂದು ಹೇಳುತ್ತದೆ. ಅಷ್ಟೇ ಅಲ್ಲ, ಆ ರಸ್ತೆಯ ಮೂಲಕ ಯಾವ ಊರಿಗೆ ಹೋಗಬೇಕು, ದಾರಿಯಲ್ಲಿ ಎಲ್ಲಿ ನಿಲ್ಲಿಸಬೇಕು, ಕಾಫಿ ಎಲ್ಲಿ ಕುಡಿಯಬೇಕು, ಶೌಚಾಲಯಕ್ಕೆ ಎಲ್ಲಿ ಹೋಗಬೇಕು ಎನ್ನುವುದನ್ನೂ ತಾನೇ ನಿರ್ಧರಿಸುತ್ತದೆ. ಹಾಂ, ಇಷ್ಟು ಶರತ್ತುಗಳನ್ನು ಒಪ್ಪಿದರೆ ಸಾಕು, ರಸ್ತೆ ಬಳಸಲು ಟೋಲ್ ಕೊಡುವುದೇನೂ ಬೇಡ ನೋಡಿ!

ಇದೇನೋ ಅಸಂಬದ್ಧವಾಗಿದೆಯಲ್ಲ ಎನಿಸಿದರೆ ಒಂದು ಕ್ಷಣ ಆಚೀಚೆ ನೋಡಿ - ನಿಮ್ಮ ಮನೆಯ ದಿನಪತ್ರಿಕೆಯಲ್ಲಿ, ಟೀವಿ ಕಾರ್ಯಕ್ರಮದ ನಡುವೆ, ಪಕ್ಕದ ಬಸ್ ಸ್ಟಾಪ್ ಫಲಕದಲ್ಲಿ ನಿಮಗೆ 'ಫ್ರೀ ಬೇಸಿಕ್ಸ್'ನ ಜಾಹೀರಾತು ಕಾಣಸಿಗುತ್ತದೆ. ಇಂತಿಂಥವರು ಈ ಯೋಜನೆಯನ್ನು ಬೆಂಬಲಿಸಿದ್ದಾರೆ ಎನ್ನುವ ಮಾಹಿತಿಯಂತೂ ಫೇಸ್‌ಬುಕ್‌ನಲ್ಲಿ ಕಾಣಿಸುತ್ತಲೇ ಇರುತ್ತದೆ.

ಇಷ್ಟಕ್ಕೂ ಏನಿದು ಫ್ರೀ ಬೇಸಿಕ್ಸ್?

ಸೋಮವಾರ, ಡಿಸೆಂಬರ್ 28, 2015

ಕನಸುಗಳಿಗೆ ತಂತ್ರಜ್ಞಾನದ ರೆಕ್ಕೆ

ಟಿ. ಜಿ. ಶ್ರೀನಿಧಿ

ಮಿಕ್ಸರ್ ಗ್ರೈಂಡರಿನಿಂದ ಮಸಾಲೆ ದೋಸೆಯವರೆಗೆ, ದ್ವಿಚಕ್ರ ವಾಹನದಿಂದ ದ್ವಿದಳ ಧಾನ್ಯಗಳವರೆಗೆ ಈಗ ಪ್ರತಿಯೊಂದನ್ನೂ ಆನ್‌ಲೈನ್‌ನಲ್ಲೇ ಕೊಳ್ಳುವುದು ಸಾಧ್ಯ. ಮನೆಯಿಂದ ಹೊರಗೆ ಕಾಲಿಡಬೇಕಾದ ಅಗತ್ಯವಿಲ್ಲ, ಟ್ರಾಫಿಕ್ ಜಾಮ್ ಭಯವೂ ಇಲ್ಲ - ಕೈಲಿರುವ ಮೊಬೈಲಿನಲ್ಲೋ ಪಕ್ಕದ ಕಂಪ್ಯೂಟರಿನಲ್ಲೋ ಕ್ಷಣಾರ್ಧದಲ್ಲೇ ನಮಗೆ ಬೇಕಾದ ವಸ್ತುಗಳನ್ನು ಆರ್ಡರ್ ಮಾಡುವುದು, ಅದಕ್ಕಾಗಿ ಹಣಪಾವತಿಸುವುದು ಸಾಧ್ಯ. ಇಷ್ಟೆಲ್ಲ ಅನುಕೂಲದ ಜೊತೆಗೆ ಡಿಸ್ಕೌಂಟು-ಕ್ಯಾಶ್‌ಬ್ಯಾಕುಗಳ ಆಮಿಷ ಬೇರೆ!

ನಾವು ಕ್ಷಣಾರ್ಧದಲ್ಲಿ ಆರ್ಡರ್ ಮಾಡುವುದೇನೋ ಸರಿ, ಆದರೆ ಆರ್ಡರ್ ಮಾಡಿದ ವಸ್ತು ನಮ್ಮನ್ನು ತಲುಪುವುದು ಮಾತ್ರ ನಿಧಾನ. ದೋಸೆಯೂ ಪಿಜ್ಜಾ-ಬರ್ಗರ್‌ಗಳೂ ಅರ್ಧಗಂಟೆಯಷ್ಟು ಸಮಯ ತೆಗೆದುಕೊಂಡರೆ ಇತರ ವಸ್ತುಗಳು ನಮ್ಮನ್ನು ತಲುಪಲು ಅರ್ಧದಿನವೋ ಅರ್ಧವಾರವೋ ಬೇಕಾಗುತ್ತದೆ.

ಇದೇಕೆ ಹೀಗೆ? ಯಾವುದೋ ವಸ್ತು ಬೇಕೆಂದು ನಾವು ಸಲ್ಲಿಸಿದ ಬೇಡಿಕೆ ಸಂಕೇತಗಳ ರೂಪತಳೆದು ಅಂತರಜಾಲದಲ್ಲಿ ಹಾರಿಹೋಗುತ್ತದಲ್ಲ, ಅದೇ ರೀತಿ ಆ ವಸ್ತುವೂ ಹಾರಿಬಂದು ನಮ್ಮ ಕೈಸೇರುವುದು ಸಾಧ್ಯವಿಲ್ಲವೆ?

ಕಾಲ್ಪನಿಕ ಕತೆಯಂತೆ ಕಾಣುವ ಈ ಸನ್ನಿವೇಶವನ್ನು ನಿಜವಾಗಿಸಲು ಅನೇಕ ಪ್ರಯತ್ನಗಳು ಈಗಾಗಲೇ ನಡೆದಿವೆ. ಆ ಕುರಿತ ಸುದ್ದಿಗಳು ಹಳತೂ ಆಗಿಬಿಟ್ಟಿವೆ.

ಬುಧವಾರ, ಡಿಸೆಂಬರ್ 23, 2015

ಹೊಸ ಪುಸ್ತಕ: 'ಕಂಪ್ಯೂಟರ್‌ಗೆ ಪಾಠ ಹೇಳಿ...'

ನಮ್ಮಿಂದ ಹೇಳಿಸಿಕೊಳ್ಳದೆ ಕಂಪ್ಯೂಟರ್ ಯಾವ ಕೆಲಸವನ್ನೂ ಮಾಡುವುದಿಲ್ಲ; ಅದು ಏನು ಮಾಡುವುದಿದ್ದರೂ ನಾವು ಹೇಳಿದ್ದನ್ನಷ್ಟೆ, ಹೇಳಿದಂತೆಯೇ ಮಾಡುತ್ತದೆ ಎನ್ನುವುದು ನಮಗೆ ಗೊತ್ತು. ಆದರೆ ನಮಗೇನು ಬೇಕು ಎನ್ನುವುದನ್ನು ಕಂಪ್ಯೂಟರಿಗೆ ಹೇಳುವುದು ಹೇಗೆ?

ನಮಗೆ ಬೇಕಾದ ಕೆಲಸ ಮಾಡಿಕೊಡುವ ಸಾಫ್ಟ್‌ವೇರನ್ನು ಕೊಂಡುಕೊಂಡರೆ ಆಯಿತು ನಿಜ. ಆದರೆ ಅದನ್ನು ಮೊದಲಿಗೆ ಯಾರೋ ಸಿದ್ಧಪಡಿಸಿರಬೇಕು ತಾನೆ? ಹಾಗಾದರೆ ಸಾಫ್ಟ್‌ವೇರನ್ನು ಸಿದ್ಧಪಡಿಸುವುದು ಎಂದರೇನು, ಮತ್ತು ಅದು ಸಾಧ್ಯವಾಗುವುದು ಹೇಗೆ?
badge