ಬುಧವಾರ, ಡಿಸೆಂಬರ್ 30, 2015

ಏಸಸ್ ಜೆನ್‌ಪ್ಯಾಡ್: ಮನರಂಜನೆಗೊಂದು ಹೊಸ ಟ್ಯಾಬ್ಲೆಟ್

ದೊಡ್ಡಗಾತ್ರದ ಮೊಬೈಲ್ ಫೋನುಗಳು ಸರ್ವೇಸಾಮಾನ್ಯವಾಗುತ್ತಿರುವ ಈ ದಿನಗಳಲ್ಲಿ ಟ್ಯಾಬ್ಲೆಟ್ಟುಗಳು ಪ್ರಸ್ತುತವೋ ಇಲ್ಲವೋ ಎನ್ನುವುದು ನಮಗೆ ಪದೇ ಪದೇ ಎದುರಾಗುವ ಪ್ರಶ್ನೆ. ಪರಿಸ್ಥಿತಿ ಹೀಗಿದ್ದರೂ ಮಾರುಕಟ್ಟೆಗೆ ಹೊಸ ಟ್ಯಾಬ್ಲೆಟ್ಟುಗಳು ಇನ್ನೂ ಬರುತ್ತಲೇ ಇವೆ, ಹೊಸ ಸೌಲಭ್ಯಗಳನ್ನೂ ಪರಿಚಯಿಸುತ್ತಿವೆ.

ಈಚೆಗೆ ಮಾರುಕಟ್ಟೆ ಪ್ರವೇಶಿಸಿರುವ ಏಸಸ್ ಸಂಸ್ಥೆಯ ಜೆನ್‌ಪ್ಯಾಡ್ ೭, ಇಂತಹುದೊಂದು ಟ್ಯಾಬ್ಲೆಟ್. ಅದರ ಪರಿಚಯ ಇಲ್ಲಿದೆ.


ಜೆನ್‌ಪ್ಯಾಡ್‌ನ ವಿನ್ಯಾಸ ಮೊದಲ ನೋಟಕ್ಕೇ ಗಮನಸೆಳೆಯುವಂತಿದೆ. ಹಿಂಬದಿ ರಕ್ಷಾಕವಚ ಪ್ಲಾಸ್ಟಿಕ್‌ನದೇ ಆದರೂ ಗೀರುಗಳಿರುವ (ಲೆದರ್‌/ರೆಗ್ಸಿನ್‌ನಂತಹ) ವಿನ್ಯಾಸದಿಂದಾಗಿ ಆಕರ್ಷಕವಾಗಿ ಕಾಣುತ್ತದೆ - ಜಾರುವುದಿಲ್ಲವಾದ್ದರಿಂದ ಹಿಡಿದುಕೊಳ್ಳಲೂ ಅನುಕೂಲಕರ.


ಹೆಚ್ಚುವರಿಯಾಗಿ ಕೊಳ್ಳಬಹುದಾದ ಆಡಿಯೋ ಕವರ್ ಇದರ ಪ್ರಮುಖ ಆಕರ್ಷಣೆಗಳಲ್ಲೊಂದು. ಮೊಬೈಲು-ಟ್ಯಾಬ್ಲೆಟ್ಟುಗಳಲ್ಲೆಲ್ಲ ನಾವು ಬಳಸುವ ಸಾಮಾನ್ಯ ಫ್ಲಿಪ್ ಕವರ್‌ನಂತೆ ಪರದೆಗೆ ರಕ್ಷಣೆ ಒದಗಿಸುವ ಜೊತೆಗೆ ಆರು ಹೆಚ್ಚುವರಿ ಸ್ಪೀಕರುಗಳನ್ನೂ ಹೊಂದಿರುವುದು ಈ ಕವರ್‌ನ ಹೆಚ್ಚುಗಾರಿಕೆ. ಇದನ್ನು ಜೋಡಿಸಿದಾಗ ಜೆನ್‌ಪ್ಯಾಡಿನ ಧ್ವನಿ ಗುಣಮಟ್ಟ ಹಾಗೂ ಪ್ರಮಾಣಗಳೆರಡೂ ಉತ್ತಮಗೊಳ್ಳುತ್ತವೆ.

ಅಷ್ಟೇ ಅಲ್ಲ, ಚಿತ್ರಗಳನ್ನು ವೀಕ್ಷಿಸುವಾಗ ಜೆನ್‌ಪ್ಯಾಡ್ ಅನ್ನು ಮೇಜಿನ ಮೇಲೆ ನಿಲ್ಲಿಸಲು ಈ ಆಡಿಯೋ ಕವರ್ ಅನ್ನು ಸ್ಟಾಂಡಿನಂತೆ ಬಳಸುವುದೂ ಸಾಧ್ಯ. ಇದರ ಹೊರಭಾಗದಲ್ಲಿರುವ ರೆಗ್ಸಿನ್ ಕವಚದಿಂದಾಗಿ ಜೆನ್‌ಪ್ಯಾಡ್ ಆಕರ್ಷಣೆಯೂ ಹೆಚ್ಚುತ್ತದೆ. ಜೆನ್‌ಪ್ಯಾಡ್ ಜೊತೆಗೆ ಬರುವ ಹಿಂಬದಿ ರಕ್ಷಾಕವಚವನ್ನು ತೆಗೆದು ಆಡಿಯೋ ಕವರ್ ಜೋಡಿಸುವುದು ಕೊಂಚ ಕಿರಿಕಿರಿಯ ಕೆಲಸ ಎನ್ನುವುದು ಒಂದು ಕೊರತೆ. ಆಡಿಯೋ ಕವರ್‌ನಲ್ಲಿ ಪ್ರತ್ಯೇಕ ಬ್ಯಾಟರಿಯೂ ಇದೆ ಎನ್ನುವುದು ಇನ್ನೊಂದು ವೈಶಿಷ್ಟ್ಯ. ಆಡಿಯೋ ಕವರ್ ಅನ್ನು ಪ್ರತ್ಯೇಕವಾಗಿ ಅಥವಾ ಟ್ಯಾಬ್ಲೆಟ್ಟಿನ ಜೊತೆಯಲ್ಲೇ ಚಾರ್ಜ್ ಮಾಡುವ ಸೌಲಭ್ಯ ಇದೆ.


ಏಸಸ್ ಜೆನ್‌ಪ್ಯಾಡ್ ಚಿತ್ರಸಂಪುಟ

ಉಳಿದಂತೆ ಜೆನ್‌ಪ್ಯಾಡ್ ೭ ಆವೃತ್ತಿಯಲ್ಲಿ ೭ ಇಂಚಿನ, ೧೨೮೦*೮೦೦ ರೆಸಲ್ಯೂಶನ್ನಿನ ಸ್ಪರ್ಶಸಂವೇದಿ ಪರದೆ ಇದೆ; ಅದಕ್ಕೆ ಗೀರುಗಳಾಗದಂತೆ ಗೊರಿಲ್ಲಾ ಗ್ಲಾಸ್ ಸುರಕ್ಷತೆಯೂ ಇದೆ. ೨ ಜಿಬಿ ರ್‍ಯಾಮ್ ಹಾಗೂ ೧೬ ಜಿಬಿ ಶೇಖರಣಾ ಸಾಮರ್ಥ್ಯ (ಇಂಟರ್ನಲ್ ಸ್ಟೋರೇಜ್) ಇರುವ ಈ ಟ್ಯಾಬ್ಲೆಟ್ಟಿನಲ್ಲಿ ೩ಜಿ ಸಿಮ್ ಹಾಗೂ ೬೪ ಗಿಗಾಬೈಟ್‌ವರೆಗಿನ ಹೆಚ್ಚುವರಿ ಮೆಮೊರಿ ಕಾರ್ಡ್ ಬಳಸುವ ಸೌಲಭ್ಯಗಳೂ ಇವೆ.

ಇಂಟೆಲ್ ಆಟಮ್ ಎಕ್ಸ್ ೩, ಕ್ವಾಡ್ ಕೋರ್, ೬೪ ಬಿಟ್ ಪ್ರಾಸೆಸರ್‌ನೊಡನೆ ಬರುವ ಜೆನ್‌ಪ್ಯಾಡ್‌ನಲ್ಲಿರುವ ಕಾರ್ಯಾಚರಣ ವ್ಯವಸ್ಥೆ ಆಂಡ್ರಾಯ್ಡ್ ೫.೦. ಇದರ ಬ್ಯಾಟರಿ ಸಾಮರ್ಥ್ಯ ೩೪೫೦ ಎಂಎ‌ಎಚ್ (ಆಡಿಯೋ ಕವರ್‌ನಲ್ಲಿರುವ ಬ್ಯಾಟರಿ ೨೩೦೦ ಎಂಎ‌ಎಚ್‌ನದು) ಹಾಗೂ ತೂಕ ಸುಮಾರು ೨೭೦ ಗ್ರಾಮ್ (ಆಡಿಯೋ ಕವರ್ ಇಲ್ಲದೆ). ಎಂಟು ಮೆಗಾಪಿಕ್ಸೆಲಿನ ಪ್ರಾಥಮಿಕ ಕ್ಯಾಮೆರಾ ಹಾಗೂ ಎರಡು ಮೆಗಾಪಿಕ್ಸೆಲಿನ ಸೆಲ್ಫಿ ಕ್ಯಾಮೆರಾಗಳಿವೆ; ಇತರ ಹಲವು ಟ್ಯಾಬ್ಲೆಟ್ಟುಗಳಲ್ಲಿರುವಂತೆಯೇ ಈ ಕ್ಯಾಮೆರಾಗಳ ಗುಣಮಟ್ಟ ಸಾಧಾರಣವಾಗಿದೆ. ಉಳಿದ ಏಸಸ್ ಉತ್ಪನ್ನಗಳಲ್ಲಿರುವಂತೆಯೇ 'ಪಿಕ್ಸೆಲ್‌ಮಾಸ್ಟರ್' ಕ್ಯಾಮೆರಾ ತಂತ್ರಾಂಶ ಇಲ್ಲಿಯೂ ಉಪಯುಕ್ತವಾಗಿದೆ; ಕಾರ್ಯಾಚರಣ ವ್ಯವಸ್ಥೆಯ ಮೇಲುಹೊದಿಕೆ 'ಜೆನ್‌ ಯುಐ' ಹೆಚ್ಚು ಸಂಖ್ಯೆಯ ಆಪ್‌ಗಳು ಹಾಗೂ ಪದೇಪದೇ ಬರುವ ಅಪ್‌ಡೇಟ್‌ಗಳಿಂದ ಕಿರಿಕಿರಿಮಾಡುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ ಮನರಂಜನೆಯೇ ಮುಖ್ಯ ಉದ್ದೇಶವಾಗಿದ್ದರೆ (ಸಿನಿಮಾ-ವೀಡಿಯೋ ವೀಕ್ಷಣೆ, ಹಾಡು ಕೇಳುವುದು ಇತ್ಯಾದಿ) ಆಡಿಯೋ ಕವರ್‌ನೊಡನೆ ಜೆನ್‌ಪ್ಯಾಡ್ ಕೊಳ್ಳುವುದು ಉತ್ತಮ ಆಯ್ಕೆಯಾಗಬಲ್ಲದು. ಸಾಮಾನ್ಯ ಬಳಕೆಗಾದರೆ ತೀರಾ ವಿಶೇಷವೆನಿಸುವ ಅಂಶಗಳೇನೂ ಇಲ್ಲಿರುವಂತೆ ತೋರುವುದಿಲ್ಲ.

ಫ್ಲಿಪ್‌ಕಾರ್ಟ್‌ನಲ್ಲಿ ಏಸಸ್ ಜೆನ್‌ಪ್ಯಾಡ್ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕಾಮೆಂಟ್‌ಗಳಿಲ್ಲ:

badge