ಗುರುವಾರ, ಸೆಪ್ಟೆಂಬರ್ 23, 2010

ಆಟವಾಡಿ, ಅನ್ನ ನೀಡಿ!

ಟಿ ಜಿ ಶ್ರೀನಿಧಿ

ಫ್ರೀರೈಸ್ ತಾಣ ತಲುಪಲು ಚಿತ್ರದ ಮೇಲೆ ಕ್ಲಿಕ್ಕಿಸಿ
ಗಣಕದ ಮುಂದೆ ಕುಳಿತು ಆಟವಾಡುವುದು ಅತ್ಯಂತ ವ್ಯಾಪಕವಾದ ಹವ್ಯಾಸಗಳಲ್ಲೊಂದು. ಹವ್ಯಾಸವೇನು, ಅನೇಕರಿಗೆ ಇದೊಂದು ಚಟ ಅಂತಲೇ ಹೇಳಬಹುದು. ಸದಾಕಾಲವೂ ಒಂದಿಲ್ಲೊಂದು ಆಟ ಆಡಿಕೊಂಡು ಗಣಕದ ಮುಂದೆ ಕುಳಿತಿರುವವರೂ ಇಲ್ಲದಿಲ್ಲ.

ಈಚೆಗೆ ಬಹಳ ಸುದ್ದಿಮಾಡಿದ ಇಂಥ ಆಟಗಳಲ್ಲಿ ಫಾರ್ಮ್‌ವಿಲೆ ಪ್ರಮುಖವಾದದ್ದು. ಫೇಸ್‌ಬುಕ್ ಜಾಲತಾಣದಲ್ಲಿ ಲಭ್ಯವಿರುವ ಈ ಆಟ ಆಡುವವರು ಗಣಕದಲ್ಲೇ ಉತ್ತು ಬಿತ್ತು ಬೆಳೆತೆಗೆಯುವುದು ಸಾಧ್ಯ. ಪರಿಚಯವಾದ ಒಂದು-ಒಂದೂವರೆ ವರ್ಷಗಳ ಅವಧಿಯಲ್ಲೇ ಆರು ಕೋಟಿಗೂ ಹೆಚ್ಚು ಜನಕ್ಕೆ 'ಫಾರ್ಮಿಂಗ್' ಹುಚ್ಚು ಹತ್ತಿಸಿದ ಹಿರಿಮೆ ಈ ಆಟದ್ದು.

ಗಣಕದಲ್ಲಿ ಮಾತ್ರ ಕಾಣಿಸುವ ಬತ್ತವನ್ನು ಮೌಸ್ ಬಳಸಿ ನಾಟಿಮಾಡಿ ಬೆಳೆತೆಗೆಯುವ ಫಾರ್ಮ್‌ವಿಲೆ ಆಟಗಾರರ ವರ್ಚುಯಲ್ ಸಂಭ್ರಮದ ನಡುವೆ ಇಲ್ಲಿ ಇನ್ನೂ ಒಂದು ಆನ್‌ಲೈನ್ ಆಟ ಹೆಚ್ಚಿನ ಪ್ರಚಾರವಿಲ್ಲದೆ ಕುಳಿತಿದೆ, ಹಾಗೂ ಅದು ಹಸಿದ ಹೊಟ್ಟೆಗಳಿಗೆ ನಿಜಕ್ಕೂ ಅನ್ನ ನೀಡುತ್ತದೆ ಎಂದರೆ ನಂಬುತ್ತೀರಾ?

ಖಂಡಿತಾ ನಂಬಲೇ ಬೇಕು. 'ಫ್ರೀ ರೈಸ್' ಎಂಬ ಹೆಸರಿನ ಈ ಆಟ www.freerice.com ಜಾಲತಾಣದಲ್ಲಿ ಲಭ್ಯವಿದೆ. ಇದು ತುಂಬಾ ಸುಲಭ - ಕಲೆ, ಭಾಷೆ, ರಸಾಯನಶಾಸ್ತ್ರ, ಭೂಗೋಳ, ಗಣಿತ ಮುಂತಾದವುಗಳಲ್ಲಿ ಯಾವುದಾದರೂ ಒಂದು ವಿಷಯ ಆಯ್ದುಕೊಂಡು ಆ ವಿಷಯಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಉತ್ತರಿಸುತ್ತ ಹೋದರಾಯಿತು; ಸಾಮಾನ್ಯಜ್ಞಾನ ಹೆಚ್ಚಿಸಿಕೊಳ್ಳುವ ಜೊತೆಗೆ ಹಸಿದ ಹೊಟ್ಟೆಗೆ ಅನ್ನನೀಡಿದ ಪುಣ್ಯವೂ ನಿಮಗೆ ದೊರಕುತ್ತದೆ.

ಅದು ಹೇಗೆ ಅಂದಿರಾ? ಈ ಆಟದಲ್ಲಿ ನೀವು ನೀಡುವ ಪ್ರತಿಯೊಂದು ಸರಿಯುತ್ತರಕ್ಕೂ ಹತ್ತು ಕಾಳು ಅಕ್ಕಿ ಬಹುಮಾನ. ನೀವು ಎಷ್ಟು ಕಾಳು ಅಕ್ಕಿ ಗೆಲ್ಲುತ್ತೀರೋ ಅಷ್ಟು ಅಕ್ಕಿಯನ್ನು ವಿಶ್ವದ ವಿವಿಧೆಡೆಗಳಲ್ಲಿ ಆಹಾರದ ಕೊರತೆಯಿಂದ ಬಳಲುತ್ತಿರುವ ಜನತೆಗೆ ಕೊಡುಗೆಯಾಗಿ ನೀಡಲಾಗುತ್ತದೆ.

ಪ್ರತಿಯೊಂದು ಪ್ರಶ್ನೆಯ ಕೆಳಗೂ ಪ್ರದರ್ಶಿಸಲಾಗುವ ಜಾಹೀರಾತಿನಿಂದ ಬರುವ ಆದಾಯದಿಂದ ಈ ಅಕ್ಕಿಯನ್ನು ಕೊಳ್ಳಲಾಗುತ್ತದೆ. ಆಟವಾಡುವ ಜೊತೆಗೆ ಹಣದ ರೂಪದ ದೇಣಿಗೆಯನ್ನೂ ಕೊಡುತ್ತೇವೆ ಎನ್ನುವವರಿಗೂ ಸ್ವಾಗತವಿದೆ.

ಈ ವಿಶಿಷ್ಟ ಕಲ್ಪನೆಗೆ ಜೀವಕೊಟ್ಟವನು ಜಾನ್ ಬ್ರೀನ್ ಎಂಬ ವ್ಯಕ್ತಿ, ೨೦೦೭ರಲ್ಲಿ. ನಂತರ ಆತ ಅದರ ನಿರ್ವಹಣೆಯನ್ನು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮಕ್ಕೆ (ವರ್ಲ್ಡ್ ಫುಡ್ ಪ್ರೋಗ್ರಾಂ) ಬಿಟ್ಟುಕೊಟ್ಟ. ಅಲ್ಲಿಂದೀಚೆಗೆ ಈ ಆಟ ಅಭೂತಪೂರ್ವ ಯಶಸ್ಸನ್ನು ಕಂಡಿದೆ, ಲಕ್ಷಾಂತರ ಬಡಜನರ ಅನ್ನದಾತನಾಗಿ ಬೆಳೆದಿದೆ.

ಒಂದು ಉತ್ತರಕ್ಕೆ ಹತ್ತು ಕಾಳು ಅಕ್ಕಿ ಬಹಳ ಕಡಿಮೆ ಅನ್ನಿಸಬಹುದು; ಆದರೆ ಸಾವಿರಾರು ಜನ ಈ ಆಟ ಆಡುತ್ತಿರುವಾಗ ದಿನಕ್ಕೆ ಕಡಿಮೆಯೆಂದರೂ ಒಂದು ಕೋಟಿ ಕಾಳುಗಳು ಸಂಗ್ರಹವಾಗುತ್ತವೆ - ಒಂದು ಗ್ರಾಮ್ ಅಕ್ಕಿಯಲ್ಲಿ ೫೦ ಕಾಳುಗಳಿವೆ ಎಂದುಕೊಂಡರೆ ಇನ್ನೂರು ಕೆಜಿ ಅಕ್ಕಿ!

ಈವರೆಗೆ ಈ ಆಟದ ಮೂಲಕ ಎಂಟುಸಾವಿರ ಕೋಟಿ ಅಕ್ಕಿಕಾಳುಗಳನ್ನು ಸಂಗ್ರಹಿಸಿ ವಿತರಿಸಲಾಗಿದೆ. ನೇಪಾಳ, ಕಾಂಬೋಡಿಯಾ, ಉಗಾಂಡಾ, ಬಾಂಗ್ಲಾದೇಶ, ಮ್ಯಾನ್ಮಾರ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಈ ಅಕ್ಕಿಯ ವಿತರಣೆ ನಡೆಯುತ್ತಿದೆ.

ಫ್ರೀರೈಸ್ ಡಾಟ್ ಕಾಮ್ ತಾಣವನ್ನು ನಡೆಸುತ್ತಿರುವ, ಹಾಗೂ ಈ ಮೂಲಕ ಸಂಗ್ರಹವಾಗುವ ಅಕ್ಕಿಯ ವಿತರಣೆಯ ಜವಾಬ್ದಾರಿ ಹೊತ್ತಿರುವ ವಿಶ್ವ ಆಹಾರ ಕಾರ್ಯಕ್ರಮದ ಬಗೆಗೆ ಹೆಚ್ಚಿನ ಮಾಹಿತಿಗಾಗಿ www.wfp.org ತಾಣಕ್ಕೆ ಭೇಟಿಕೊಡಬಹುದು.

ಸೆಪ್ಟೆಂಬರ್ ೩೦, ೨೦೧೦ರ ಸುಧಾದಲ್ಲಿ ಪ್ರಕಟವಾದ ಲೇಖನ

ಬುಧವಾರ, ಸೆಪ್ಟೆಂಬರ್ 8, 2010

ಸೂಪರ್‌ಮಾಡೆಲ್ ಸ್ಯಾಟೆಲೈಟಿಗೆ ಚಳಿಯಾದ ಕತೆ

GOCE ಉಪಗ್ರಹ (ಇಎಸ್‌ಎ ಚಿತ್ರ)
ಯುರೋಪಿನ ಉಪಗ್ರಹ GOCE (Gravity field and steady-state Ocean Circulation Explorer) ಈವರೆಗೆ ತಯಾರಿಸಲಾಗಿರುವ ಕೃತಕ ಉಪಗ್ರಹಗಳಲ್ಲೆಲ್ಲ ಅತ್ಯಂತ ಆಕರ್ಷಕವಾದದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾದ ಬಗ್ಗೆ ಪುಟ್ಟ ಬರಹವೊಂದು ಈ ಹಿಂದೆ ಇ-ಜ್ಞಾನದಲ್ಲಿ ಪ್ರಕಟವಾಗಿತ್ತು.

ಭೂಮಿಯ ಆಂತರಿಕ ರಚನೆ ಹಾಗೂ ಗುರುತ್ವಾಕರ್ಷಣೆಯ ಬಗೆಗೆ ವಿವರವಾದ ಮಾಹಿತಿ ಸಂಗ್ರಹಿಸಲು ಹೊರಟಿದ್ದ ಈ ಉಪಗ್ರಹ ಈಚೆಗೊಂದು ದಿನ ಇದ್ದಕ್ಕಿದ್ದ ಹಾಗೆ ತನ್ನ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ಕಳುಹಿಸುವುದನ್ನೇ ನಿಲ್ಲಿಸಿಬಿಟ್ಟಿತು.

ಇದೇನಪ್ಪಾ ಹೀಗಾಯಿತಲ್ಲ ಎಂದುಕೊಂಡ ವಿಜ್ಞಾನಿಗಳು ಏನೆಲ್ಲ ಪರದಾಡಿದರೂ ಈ ಸಮಸ್ಯೆಗೆ ಪರಿಹಾರ ದೊರೆತಿರಲಿಲ್ಲ. ಏನೇನೆಲ್ಲ ಪರದಾಡಿದ ಅವರು ಕೊನೆಗೂ ಉಪಗ್ರಹದ ಜೊತೆ ಸಂಪರ್ಕ ಸಾಧಿಸಿದಾಗ ಪತ್ತೆಯಾದ ಅಂಶ ಅದಕ್ಕೆ ಚಳಿಯಾಗಿದೆ ಎನ್ನುವುದು - ಅದರ ಬ್ಯಾಟರಿ, ಗಣಕ ಹಾಗೂ ವಿದ್ಯುತ್ ವಿತರಣಾ ವ್ಯವಸ್ಥೆ ಇದ್ದ ಭಾಗ ಹತ್ತಿರ ಹತ್ತಿರ ಸೊನ್ನೆ ಡಿಗ್ರಿಯಲ್ಲಿ ನಡುಗುತ್ತಿತ್ತಂತೆ.

ದೂರನಿಯಂತ್ರಣದ ಮೂಲಕ ಅಲ್ಲಿನ ತಾಪಮಾನವನ್ನು ಏಳೆಂಟು ಡಿಗ್ರಿ ಹೆಚ್ಚಿಸುತ್ತಿದ್ದ ಹಾಗೆಯೇ ಬೆಚ್ಚಗಾದ ಉಪಗ್ರಹ ತನ್ನ ಕೆಲಸವನ್ನು ಮತ್ತೆ ಪ್ರಾರಂಭಿಸಿದೆ, ವಿಜ್ಞಾನ ಜಗತ್ತಿನಲ್ಲಿ ಸಂತಸ ಮೂಡಿಸಿದೆ.

ಅಂದಹಾಗೆ ಈ ಉಪಗ್ರಹ ಸಂಗ್ರಹಿಸಬೇಕಿದ್ದ ಮಾಹಿತಿಯಲ್ಲಿ ಮೂರನೇ ಎರಡರಷ್ಟು ಭಾಗವನ್ನು ಈಗಾಗಲೇ ಸಂಗ್ರಹಿಸಿದೆಯಂತೆ. ತನ್ನ ಮೈಕೈ ಬೆಚ್ಚಗಿಟ್ಟುಕೊಂಡು ಮಿಕ್ಕ ಕೆಲಸವನ್ನೂ ಆದಷ್ಟುಬೇಗ ಮುಗಿಸಲಿ, ಪಾಪ ಸ್ಯಾಟೆಲೈಟು!

ಸೋಮವಾರ, ಸೆಪ್ಟೆಂಬರ್ 6, 2010

ಕಂಬಳಿಹುಳದ ಕಡಿತ: ಉರಿಗೆ ರಿಯಾಯ್ತಿ ಇಲ್ಲ!

ಬೇಳೂರು ಸುದರ್ಶನ

ಮೊನ್ನೆ ಯಾರನ್ನೋ ಭೇಟಿಯಾಗಲೆಂದು ಸರಸರ ಅಂಗಿ ಎಳೆದುಕೊಂಡು ಹೊರಬಂದೆ. ಸ್ವಲ್ಪ ದೂರ ಹೋಗುವಷ್ಟರಲ್ಲೇ ಬಲ ತೋಳಿನಲ್ಲಿ ಏನೋ ಮೃದುವಾದ ಹುಳ ಇದ್ದ ಹಾಗೆ ಅನ್ನಿಸಿ ಹೊರಗಿನಿಂದಲೇ ಮುಟ್ಟಿ ನೋಡಿದೆ.

ಯಾರೋ  ಜೇಮ್ಸ್‌ಬಾಂಡ್ ಬಳಸುವ ಅತಿಸೂಕ್ಷ್ಮ ಸೂಜಿಯನ್ನು ಚುಚ್ಚಿದ ಹಾಗೆ ಮೈಯೆಲ್ಲ ಜುಮ್ಮೆಂದಿತು. ತಕ್ಷಣ ದೇಹ ಸ್ವಯಂಚಾಲಿತವಾಗಿ, ನನ್ನನ್ನು ಕೇಳದೇ ಸ್ಪಂದಿಸಿತು. ನನ್ನ ಕೈಯಿಂದ ಕ್ಷಣಮಾತ್ರದಲ್ಲಿ ಆ ಹುಳವನ್ನು ಹಾಗೇ ಒತ್ತಿಬಿಟ್ಟೆ. ಆಮೇಲೆ ಅದನ್ನು ಕೊಡವಿದೆ. ಒಂದು ಕರಿಮುದ್ದೆಯಂಥ ಮೃತದೇಹ ರಸ್ತೆಯಲ್ಲಿ ಬಿದ್ದಿತ್ತು. ಅದನ್ನು ನೋಡೋದೇನು? ಅಷ್ಟುಹೊತ್ತಿಗೆ ನನ್ನ ತೋಳಿನ ಮೇಲ್ಭಾಗದಲ್ಲಿ ಸಾವಿರಾರು ಸೂಜಿಗಳು ಚುಚ್ಚಿದಂತಾಯಿತು. ಸರಸರನೆ ಮೈ ಕೆಂಪೇರಿತು. ಉಜ್ಜಿದ ಜಾಗದಲ್ಲಿ ಧಡಸಲುಗಳು ಮೇಲೆದ್ದವು. ಬಿಸಿ ಕಾವಲಿಯಿಂದ ಮೈಯನ್ನು ಉಜ್ಜಿಕೊಂಡಂತೆ ಉರಿ. ಜೊತೆಗೇ ವಿಪರೀತ ಎನ್ನಿಸುವಷ್ಟು ನೋವು.

ಒಂದು ಕಂಬಳಿ  ಹುಳ ನನ್ನನ್ನು ಇಷ್ಟೆಲ್ಲ ಗಾಸಿ  ಮಾಡಿ ಸತ್ತಿತ್ತು. ಅದೇನಾದರೂ ನನ್ನ  ಹ್ಯಾಂಗರಿಗೆ ನೇತಾಡಿಕೊಂಡು ಬಂದು, ಅಂಗಿಯ ಒಳಗೆ  ತೂರಿಕೊಳ್ಳದಿದ್ದರೆ.....

ಒಂದು ಸುಂದರ  ಚಿಟ್ಟೆಯಾಗಿ ಲಾಲ್‌ಬಾಗಿನಲ್ಲಿ ಹಾರಾಡುತ್ತಿತ್ತು. ಅಲ್ಲಿ ಅಕಸ್ಮಾತ್ ಕವಿಹೃದಯದವರು ವಾಕಿಂಗ್ ಹೋಗಿದ್ದರೆ ಆಹಾ, ಎಂಥ ಸುಂದರ ಚಿಟ್ಟೆ ಎಂದು ಒಂದು ಹಾಡನ್ನೇ ಬರೆಯುತ್ತಿದ್ದರು. ಪ್ರೇಮಿಗಳಾಗಿದ್ದರೆ, ಅರೆ, ಎಂಥ ಛಂದದ ಚಿಟ್ಟೆ, ಪ್ರೀತಿಯ ಸಂಕೇತ ಎಂದು ಮುದಗೊಳ್ಳುತ್ತಿದ್ದರು. ಸ್ವಾತಂತ್ರ್ಯೋತ್ಸದ ಪುಷ್ಟ ಪ್ರದರ್ಶನದಲ್ಲಿ ಹೂವಿಂದ ಹೂವಿಗೆ ಹಾರುವಂಥ ಚಿಟ್ಟೆಯಾಗಲು ಬಣ್ಣದ ರೆಕ್ಕೆಯನ್ನು ದಕ್ಕಿಸಿಕೊಳ್ಳಲಿದ್ದ ಆ ಕಂಬಳಿ ಹುಳ, ಈ ನರಮನುಷ್ಯನ ಕ್ರೌರ್ಯಕ್ಕೆ ಬಲಿಯಾಗಿ ರಸ್ತೆಯಲ್ಲಿ ನೆಣವಾಗಿ ಬಿದ್ದಿತ್ತು.

ಅದನ್ನು  ಮರೆಯೋಣ ಎಂದುಕೊಂಡರೆ ಸಾಧ್ಯವೆ? ಬರೋಬ್ಬರಿ ಒಂದು ವಾರ ನನ್ನ ತೋಳು ಉರಿಯಿಂದ  ನುಲಿಯಿತು; ನೋವಿನಿಂದ ನರಳಿತು. ಸುಂದರ  ಚಿಟ್ಟೆಯ ಬಾಲ್ಯಾವತಾರ ನನ್ನನ್ನು ಇಷ್ಟೆಲ್ಲ ಕಂಗೆಡಿಸಬಹುದೆ ಎಂದು ಮಾಹಿತಿಗಾಗಿ ಹುಡುಕಾಡಿದೆ. ನನ್ನ ನೋವನ್ನೂ ಮರೆಸುವ ಅಚ್ಚರಿಯ ಸಂಗತಿಗಳು ಸಿಕ್ಕಿದವು.

೭೦೦ಕ್ಕೂ ಕಡಿಮೆ  ಮಾಂಸಖಂಡಗಳಿರುವ ನನ್ನಂಥ ಮನುಷ್ಯನಿಗೆ ಇಷ್ಟೆಲ್ಲ ಕಿರೀಕ್ ಮಾಡಿದ ಆ ಕಂಬಳಿ ಹುಳದಲ್ಲಿ ೨೦೦೦ ಮಾಂಸಖಂಡಗಳು ಇರುತ್ತವಂತೆ! ನನಗೆ ಯಮ ಉರಿ ಕೊಟ್ಟ ಕಂಬಳಿ ಹುಳದಂಥ ಇಪ್ಪತ್ತು ಬಗೆಯ ಅಪಾಯಕಾರಿ ಕಂಬಳಿ ಹುಳಗಳು (ಚುಚ್ಚುವ ವಿಷಯದಲ್ಲಿ ಅಪಾಯಕಾರಿ, ಉಳಿದಂತೆ, ಈ ಅಪಾಯ ಅನ್ನೋದೆಲ್ಲ ಮನುಷ್ಯನ ದೃಷ್ಟಿಯಿಂದ ಬರೆದಿರೋ ಭಾವನೆಗಳು ಅಷ್ಟೆ) ಇವೆಯಂತೆ.

ಇಂಥ ಕಂಬಳಿ  ಹುಳ ಕಚ್ಚಿದರೆ ಅಥವಾ ಮೈಯನ್ನು ಚುಚ್ಚಿದರೆ ನನಗಾದ ಹಾಗೆ ಉರಿಯಾಗುವುದು ತೀರಾ ಅಲ್ಪ ಪರಿಣಾಮ. ಹಲವು ಪ್ರಕರಣಗಳಲ್ಲಿ ನೋವಿನ ಜೊತೆಗೆ ಊತವೂ ಆಗುತ್ತದೆ. ಚರ್ಮ ಮೃದುವಾಗಿದ್ದರೆ ಮಾತ್ರ ಈ ಉರಿ, ನೋವು, ಊತ ಎಲ್ಲವೂ ಹೆಚ್ಚಾಗುತ್ತದೆ. ಉಸಿರಾಡಲೂ ತೊಂದರೆಯಾಗುವಷ್ಟು ಪ್ರಭಾವ ಬೀರಬಲ್ಲ ಕಂಬಳಿ ಹುಳಗಳೂ ಇವೆ. ಅಕಸ್ಮಾತ್ ಕಂಬಳಿ ಹುಳಗಳು ಕಣ್ಣಿಗೆ ತಾಗಿದರೆ ನೀವು ತಕ್ಷಣ ಆಸ್ಪತ್ರೆಗೆ ಓಡಬೇಕು. ಇಲ್ಲಾಂದ್ರೆ ನಿಮ್ಮ ಕಣ್ಣಿನ ಕಾರ್ನಿಯಾಗೇ ಅಪಾಯವಿದೆ. ಈ ಕಂಬಳಿ ಹುಳಗಳ ಕೂದಲೇನಾದರೂ ಶ್ವಾಸಕೋಶಕ್ಕೆ ಸೇರಿದರೆ, ಉಸಿರಾಟಕ್ಕೂ ತೊಂದರೆ.

ಕಂಬಳಿಹುಳದ  ಮೈಯೆಲ್ಲ ಇರುವ ಇಂಥ ಮೊನಚು ಕೂದಲನ್ನು ಹೈಪೋಡರ್ಮಿಕ್ ನೀಡಲ್, ಅರ್ಥಾತ್ ಅತಿಸೂಕ್ಷ್ಮ ಸೂಜಿ ಎಂದೇ ಕರೆಯುತ್ತಾರೆ. ಇವು ಬರೀ ಕೂದಲಲ್ಲ. ವಿಷವನ್ನೇ ನಿಮ್ಮ ದೇಹಕ್ಕೆ ನುಗ್ಗಿಸುವ ವಿಷಪದಾರ್ಥವನ್ನು ದಾಸ್ತಾನು ಹೊಂದಿರುವ ಕೊಳವೆಗಳು; ಸೂಕ್ಷ್ಮಾಕಾರದ ಫಿರಂಗಿಗಳು ಎಂದರೂ ತಪ್ಪಿಲ್ಲ.

ಆಮೇಲೆ ಕಂಬಳಿ  ಹುಳಗಳು ತಾವಾಗೇ ಕಚ್ಚುವುದಿಲ್ಲ. ತಣ್ಣಗೆ ತಮಗೆ ಬಏಕಾದ ಗಿಡ, ಮರ, ಎಲೆ, ಹೂವುಗಳನ್ನು ತಿಂದುಕೊಂಡು ಹಾಯಾಗಿರುತ್ತವೆ. ಚಳಿಗಾಲ, ತೇವದ ವಾತಾವರಣದಲ್ಲಿ ಎಲ್ಲೆಲ್ಲೋ ಓಡಾಡುತ್ತ ಉಡುಗೆ-ತೊಡುಗೆಗಳನ್ನು ಸೇರಿಕೊಳ್ಳುವುದೂ ಇದೆ. ಅದನ್ನು ನಾವು ಉಜ್ಜಿದರೇ ಅಪಾಯವೇ ವಿನಃ, ಅವು ಚೇಳುಗಳ ಹಾಗೆ ನಮ್ಮನ್ನು ಕಚ್ಚಲೆಂದು ಬರುವುದಿಲ್ಲ.

ಹಾಗಾದರೆ ಕಂಬಳಿಹುಳ ಚುಚ್ಚಿ ಉರಿಯಾದರೆ ಏನು ಮಾಡಬೇಕು?

ಕಂಬಳಿಹುಳದ  ಕೂದಲುಗಳು ಚರ್ಮಕ್ಕೆ ಸಿಕ್ಕಿಕೊಂಡಿದ್ದರೆ:  ವೈದ್ಯಕೀಯ ಚಿಕಿತ್ಸೆಯಲ್ಲಿ ಬಳಸುವ ಟೇಪನ್ನು ಹಚ್ಚಿ ತೆಗೆಯಿರಿ. ಟೇಪಿನೊಂದಿಗೆ ಕೂದಲೂ ಹೊರಬರುತ್ತದೆ. ಉರಿಬಿದ್ದ ಜಾಗಕ್ಕೆ ಅಲೋವೀರಾ ಹಚ್ಚಿದರೆ ಕೊಂಚ ಸಮಾಧಾನವಾಗುತ್ತದೆ.

ಕಂಬಳಿಹುಳ  ಚುಚ್ಚಿದ ಜಾಗವನ್ನು ಸ್ನಾನದ ಬ್ರಶ್ಶಿನಿಂದ  ಉಜ್ಜಿದರೆ ಮತ್ತೆ ಅದೇ ನೋವು ಮರುಕಳಿಸುತ್ತದೆ.  ನಾನು ಯಾವುದೋ ಬಾತ್‌ರೂಮ್ ಹಾಡು ಗುನುಗುತ್ತ ಹೀಗೆ ಉಜ್ಜಿಕೊಂಡು ಮತ್ತೆ  ಮತ್ತೆ ಅಯ್ಯೋ ಎಂದು ಮೌನವಾಗಿ ಕಿರುಚಿದ್ದೇನೆ. ಆದ್ದರಿಂದ ಉರಿ ಇರುವ ಜಾಗವನ್ನು ಉಜ್ಜಬೇಡಿ; ಮುಟ್ಟಲೂ ಬೇಡಿ. ಮುಖ್ಯವಾಗಿ ಭುಜ ತಟ್ಟಿ ಮಾತನಾಡಿಸುವ ಸ್ನೇಹಿತರಿಂದ ದೂರ ಇರಿ. ಅವರಿಗೆ ನಿಮ್ಮ ಭುಜದಲ್ಲಿ ಇಂಥ ಉರಿ ಇದೆ ಎಂಬುದು ಮರೆತೇಹೋಗಿ ಮತ್ತೆ ಮತ್ತೆ ನಿಮ್ಮ ಭುಜ ತಟ್ಟುತ್ತಾರೆ. ಅದರಿಂದ ನಿಮಗೆ ನಗುನಗುತ್ತ ಮಾತನಾಡಲು ಆಗುವುದಿಲ್ಲ ಎಂಬುದನ್ನು ಗಮನದಲ್ಲಿಡಿ.

(ಈ ಥರ ಕಚ್ಚುವ / ಉರಿಯೂತ ಉಂಟು ಮಾಡುವ ಕಂಬಳಿ ಹುಳಗಳ ಕೆಲವೇ ಬಗೆಗಳನ್ನು ತಿಳಿಯಲು ಈ ಕೊಂಡಿಯನ್ನು ಹುಷಾರಾಗಿ, ಮೈಯೆಲ್ಲ ಕಣ್ಣಾಗಿಸಿಕೊಂಡು ಕ್ಲಿಕ್ ಮಾಡಿ!)

ಮಿತ್ರಮಾಧ್ಯಮದಲ್ಲಿ ಈ ಹಿಂದೆ ಪ್ರಕಟವಾದ ಲೇಖನ
badge