ಬುಧವಾರ, ಫೆಬ್ರವರಿ 29, 2012

ಕಳೆದುಹೋದ ಪುಟಗಳ ಹುಡುಕಾಟದಲ್ಲಿ...

ಟಿ. ಜಿ. ಶ್ರೀನಿಧಿ

ಹಿಂದೆ ಜಿಯೋಸಿಟೀಸ್ ಎಂಬುದೊಂದು ಜಾಲತಾಣ ಇತ್ತು. ವಿಶ್ವವ್ಯಾಪಿ ಜಾಲ ಆಗಷ್ಟೆ ಪರಿಚಿತವಾಗುತ್ತಿದ್ದ ಸಂದರ್ಭದಲ್ಲಿ ಅದೆಷ್ಟೋ ಲಕ್ಷ ಜನ ಬಳಕೆದಾರರು ಈ ತಾಣದ ಸೇವೆ ಬಳಸಿಕೊಂಡು ತಮ್ಮ ವೈಯಕ್ತಿಕ ವೆಬ್‌ಪುಟಗಳನ್ನು ರೂಪಿಸಿಕೊಂಡಿದ್ದರು. ಅದೆಷ್ಟೋ ಜನ ಬಳಕೆದಾರರಿಗೆ ನಮ್ಮ ಸ್ವಂತದ್ದೂ ಒಂದು ವೆಬ್‌ಪುಟ ಇದೆ ಎಂದು ಹೇಳಿಕೊಳ್ಳುವ ಖುಷಿ ಕೊಟ್ಟದ್ದು ಈ ತಾಣ. ೧೯೯೪ರಲ್ಲಿ ಪ್ರಾರಂಭವಾದ ಈ ತಾಣವನ್ನು ೧೯೯೯ರಲ್ಲಿ ಯಾಹೂ ಕೊಂಡುಕೊಂಡಿತ್ತು. ಒಂದು ಕಾಲಕ್ಕೆ ವಿಶ್ವವ್ಯಾಪಿ ಜಾಲದ ಅತ್ಯಂತ ಜನಪ್ರಿಯ ತಾಣಗಳ ಪಟ್ಟಿಯಲ್ಲಿ ಮೂರನೆಯ ಸ್ಥಾನದಲ್ಲಿದ್ದ ಜಿಯೋಸಿಟೀಸ್‌ನಲ್ಲಿ ೨೦೦೯ರ ವೇಳೆಗೆ ಮೂರೂವರೆ ಕೋಟಿಗಿಂತ ಹೆಚ್ಚು ಪುಟಗಳಿದ್ದವು.

ಆ ವೇಳೆಗೆ ಜಿಯೋಸಿಟೀಸ್ ತಾಣದ ಜನಪ್ರಿಯತೆ ಕಡಿಮೆಯಾಗುತ್ತಿತ್ತು. ಇನ್ನು ಇದನ್ನು ನಡೆಸುವುದು ಕಷ್ಟ ಎಂದುಕೊಂಡ ಯಾಹೂ ಒಂದು ದಿನ ಆ ತಾಣವನ್ನು ಮುಚ್ಚಿಯೇಬಿಟ್ಟಿತು. ಹಾಗೆ ಮುಚ್ಚುತ್ತಿದ್ದಂತೆ ಮೂರುವರೆ ಕೋಟಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದ ಅವೆಲ್ಲ ವೆಬ್ ಪುಟಗಳೂ ಅವನ್ನು ಸೃಷ್ಟಿಸಿದ್ದವರ ಪಾಲಿಗೆ ಖಾಯಂ ಆಗಿ ಕಳೆದುಹೋದವು.

ವಿಶ್ವವ್ಯಾಪಿ ಜಾಲದ ಇತಿಹಾಸದಲ್ಲಿ ಇಂತಹ ಇನ್ನೂ ಅದೆಷ್ಟೋ ಘಟನೆಗಳು ನಡೆದಿವೆ.

ಮಂಗಳವಾರ, ಫೆಬ್ರವರಿ 28, 2012

ವಿಜ್ಞಾನ ದಿನ ವಿಶೇಷ: ಸ್ವಚ್ಛ ಇಂಧನ ಹಾಗೂ ಪರಮಾಣು ಸುರಕ್ಷತೆ

ಟಿ. ಜಿ. ಶ್ರೀನಿಧಿ
೧೯೨೮ ಫೆಬ್ರವರಿ ೨೮, ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ ವಿ ರಾಮನ್ ಅವರು 'ರಾಮನ್ ಇಫೆಕ್ಟ್' ಎಂದೇ ಪ್ರಸಿದ್ಧವಾದ ತಮ್ಮ ಅಧ್ಯಯನದ ವಿವರಗಳನ್ನು ಜಗತ್ತಿಗೆ ತಿಳಿಸಿದ ದಿನ. ಇದೇ ಸಾಧನೆಗಾಗಿ ಅವರಿಗೆ ೧೯೩೦ನೇ ಇಸವಿಯಲ್ಲಿ ನೊಬೆಲ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದು ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊತ್ತಮೊದಲ ನೊಬೆಲ್ ಪುರಸ್ಕಾರವೂ ಹೌದು.

ಸಮುದ್ರದ ಬಣ್ಣವೇಕೆ ನೀಲಿ ಎನ್ನುವುದು ಬಹಳ ಕಾಲದಿಂದ ಮನುಕುಲವನ್ನು ಕಾಡುತ್ತಿದ್ದ ಪ್ರಶ್ನೆ. ಆಕಾಶದ ನೀಲಿಯನ್ನು ನೀರು ಪ್ರತಿಫಲಿಸುವುದರಿಂದ ಅದೂ ನೀಲಿಯಾಗಿ ಕಾಣುತ್ತದೆ ಎಂದು ವಿಜ್ಞಾನಿಗಳೂ ಸೇರಿದಂತೆ ಅನೇಕರು ನಂಬಿದ್ದರು. ಒಮ್ಮೆ ರಾಮನ್ ಅವರು ಹಡಗಿನಲ್ಲಿ ಯುರೋಪಿಗೆ ಹೋಗುತ್ತಿದ್ದಾಗ ಅವರಿಗೂ ಇದೇ ಪ್ರಶ್ನೆ ಎದುರಾಯಿತಂತೆ. ಸಮುದ್ರದ ನೀಲಿ ಬಣ್ಣ ಆಕಾಶದ ಬಣ್ಣದ ಪ್ರತಿಫಲನವೋ ಅಥವಾ ಈ ನೀಲಿ ಬಣ್ಣದ ಹಿಂದೆ ಬೇರೇನಾದರೂ ಗುಟ್ಟು ಅಡಗಿದೆಯೋ ಎಂದು ಪತ್ತೆಮಾಡಲು ಹೊರಟ ರಾಮನ್ ಸೂರ್ಯನ ಬೆಳಕು ನೀರಿನಲ್ಲಿ ಹರಡಿಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯವನ್ನು ಕಂಡುಹಿಡಿದರು. ಇದೇ ಅಂಶ ಮುಂದೆ ಅವರು ತಮ್ಮ ಅಧ್ಯಯನವನ್ನು ಮುಂದುವರೆಸಲು ಪ್ರೇರಣೆಯಾಯಿತು.

'ರಾಮನ್ ಪರಿಣಾಮ' ಸಂಶೋಧನೆಯ ವಿವರಗಳು ಪ್ರಕಟವಾದ ದಿನದ ನೆನಪಿನಲ್ಲಿ ಪ್ರತಿ ವರ್ಷ ಫೆಬ್ರವರಿ ೨೮ರಂದು ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತದೆ. ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶ.

ಪ್ರತೀ ವರ್ಷ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಚಟುವಟಿಕೆಗಳನ್ನು ಒಂದು ನಿರ್ದಿಷ್ಟ ವಿಷಯದ ಸುತ್ತ ಆಯೋಜಿಸಲಾಗುತ್ತದೆ. ಈ ಬಾರಿಯ ವಿಷಯ 'ಸ್ವಚ್ಛ ಇಂಧನದ ಆಯ್ಕೆಗಳು ಮತ್ತು ಪರಮಾಣು ಸುರಕ್ಷತೆ'.
ಕಳೆದ ವರ್ಷವಷ್ಟೆ ಭೂಮಿಯ ಜನಸಂಖ್ಯೆ ಏಳುನೂರು ಕೋಟಿ ತಲುಪಿದೆ. ಪ್ರಪಂಚದೆಲ್ಲೆಡೆಯ ಜನರ ಜೀವನಮಟ್ಟ ಏರುತ್ತಿದ್ದಂತೆ ಸಮೃದ್ಧಬದುಕಿನ ಕನಸು ಕಾಣುವವರ ಸಂಖ್ಯೆಯೂ ಹೆಚ್ಚುತ್ತಿದೆ. ಬಗೆಬಗೆಯ ವಸ್ತುಗಳನ್ನು ರಾಶಿಗಟ್ಟಲೆ ಕೊಳ್ಳುವ ಪ್ರವೃತ್ತಿ ವ್ಯಾಪಕವಾಗಿ ಬೆಳೆದಿದೆ.

'ಬೇಕು'ಗಳ ಪಟ್ಟಿ ದೊಡ್ಡದಾಗುತ್ತಿದ್ದಂತೆ ಅದರ ಪರಿಣಾಮ ಅಂತಿಮವಾಗಿ ಆಗುವುದು ಇಂಧನಗಳ ಮೇಲೆಯೇ ತಾನೆ! ಹೀಗಾಗಿ ಇಂಧನದ ಬೇಡಿಕೆ ಕೂಡ ತೀವ್ರವಾಗಿ ಏರುತ್ತಿದೆ.

ವಿದ್ಯುತ್ತು, ಸಂಚಾರ ವ್ಯವಸ್ಥೆ, ಆಹಾರ, ಬಟ್ಟೆಬರೆ, ಸಂವಹನ ವ್ಯವಸ್ಥೆ - ಹೀಗೆ ಯಾವುದನ್ನೇ ಗಮನಿಸಿದರೂ ಅದರ ಉತ್ಪಾದನೆಯಾಗುವಲ್ಲಿಂದ ಪ್ರಾರಂಭಿಸಿ ನಾವು ಅದನ್ನು ಬಳಸುವವರೆಗೆ ಎಲ್ಲ ಹಂತಗಳಲ್ಲೂ ಒಂದಲ್ಲ ಒಂದು ಬಗೆಯ ಇಂಧನ ಬೇಕು. ಅದರಲ್ಲೂ ಪೆಟ್ರೋಲ್, ಡೀಸಲ್ ಹಾಗೂ ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳಿಲ್ಲದೆ ಕೆಲಸ ಸಾಗುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿ ಬಹುತೇಕ ಎಲ್ಲೆಡೆಯೂ ನಿರ್ಮಾಣವಾಗಿದೆ.

ಪಳೆಯುಳಿಕೆ ಇಂಧನಗಳ ಪೂರೈಕೆ ಸೀಮಿತವಾದದ್ದು, ಅವು ಒಂದಲ್ಲ ಒಂದು ದಿನ ಮುಗಿದುಹೋಗುತ್ತವೆ ಎನ್ನುವ ಅಂಶ ನಮಗೆಲ್ಲ ಗೊತ್ತೇ ಇದೆ. ಆದರೆ ಸಮಸ್ಯೆ ಅದೊಂದೇ ಅಲ್ಲ.

ಮಂಗಳವಾರ, ಫೆಬ್ರವರಿ 21, 2012

ಕಂಪ್ಯೂಟರ್ ಲೋಕದ ದುಷ್ಟಕೂಟ

ವೈರಸ್, ವರ್ಮ್, ಟ್ರೋಜನ್, ಬಾಟ್, ಸ್ಪೈವೇರ್ - ಕಂಪ್ಯೂಟರ್ ಪ್ರಪಂಚದ ಕುತಂತ್ರಾಂಶಗಳಿಗೆ ಅದೆಷ್ಟು ಹೆಸರುಗಳು! ಮಾಡುವುದು ಕೆಟ್ಟ ಕೆಲಸವೇ ಆದರೂ ಇವುಗಳಲ್ಲಿ ಪ್ರತಿಯೊಂದೂ ಕೆಲಸಮಾಡುವ ರೀತಿ ವಿಭಿನ್ನವಾದದ್ದು. ಈ ದುಷ್ಟಕೂಟದ ಸಣ್ಣದೊಂದು ಪರಿಚಯ ಇಲ್ಲಿದೆ.

ಟಿ. ಜಿ. ಶ್ರೀನಿಧಿ

ಈಗಂತೂ ಪ್ರತಿಯೊಂದು ಕೆಲಸಕ್ಕೂ ಕಂಪ್ಯೂಟರ್ ಬೇಕು. ಕಂಪ್ಯೂಟರ್‌ನಲ್ಲಿ ಬೇರೆಬೇರೆ ರೀತಿಯ ಕೆಲಸಮಾಡಲು ಬೇರೆಬೇರೆ ತಂತ್ರಾಂಶಗಳು (ಸಾಫ್ಟ್‌ವೇರ್) ಬೇಕು. ನಮ್ಮ ಕೆಲಸದಲ್ಲಿ ತಂತ್ರಾಂಶಗಳಿಂದ ಅದೆಷ್ಟು ಸಹಾಯವಾಗುತ್ತದೋ ಅಷ್ಟೇ ಪ್ರಮಾಣದ ತೊಂದರೆಯೂ ಆಗಬಲ್ಲದು. ಸದುದ್ದೇಶಗಳಿಗಾಗಿ ಬಳಕೆಯಾಗುವ ತಂತ್ರಾಂಶಗಳಂತೆ ಕೆಟ್ಟ ಕೆಲಸಗಳಿಗಾಗಿಯೂ ತಂತ್ರಾಂಶಗಳು ರೂಪಗೊಂಡಿರುವುದು ಇದಕ್ಕೆ ಕಾರಣ.

ಕೆಟ್ಟ ಉದ್ದೇಶದ ತಂತ್ರಾಂಶಗಳ ಹಾವಳಿ ಅಷ್ಟಿಷ್ಟಲ್ಲ. ಕಂಪ್ಯೂಟರುಗಳ ಕಾರ್ಯಾಚರಣೆಗೆ ತೊಂದರೆಮಾಡುವುದು, ಶೇಖರಿಸಿಟ್ಟ ಮಾಹಿತಿಯನ್ನು ಅಳಿಸಿಹಾಕುವುದು, ವೈಯಕ್ತಿಕ ಮಾಹಿತಿಯನ್ನು ಕದ್ದು ದುರ್ಬಳಕೆ ಮಾಡಿಕೊಳ್ಳುವುದು - ಹೀಗೆ ಇಂತಹ ತಂತ್ರಾಂಶಗಳು ಬೇಕಾದಷ್ಟು ಬಗೆಯಲ್ಲಿ ತೊಂದರೆಕೊಡುತ್ತವೆ. ಒಂದಲ್ಲ ಒಂದು ರೀತಿಯಲ್ಲಿ ಬೇರೊಬ್ಬರಿಗೆ ಕೇಡುಬಗೆಯುವುದೇ ಇಂತಹ ತಂತ್ರಾಂಶಗಳ ಉದ್ದೇಶವಾದ್ದರಿಂದ ಅವನ್ನು ಮಲೀಷಿಯಸ್ ಸಾಫ್ಟ್‌ವೇರ್ ಅಥವಾ ಮಾಲ್‌ವೇರ್ ಎಂದು ಕರೆಯುತ್ತಾರೆ. ಕನ್ನಡದಲ್ಲಿ ನಾವು ಅವನ್ನು ಕುತಂತ್ರಾಂಶಗಳೆಂದು ಕರೆಯೋಣ.

ವೈರಸ್, ವರ್ಮ್, ಟ್ರೋಜನ್, ಬಾಟ್, ಸ್ಪೈವೇರ್ ಇವೆಲ್ಲ ಕುತಂತ್ರಾಂಶಗಳಿಗೆ ಉದಾಹರಣೆಗಳು.

ಗುರುವಾರ, ಫೆಬ್ರವರಿ 16, 2012

ಉತ್ತರ ಕರ್ನಾಟಕದ ವಿವಿಧೆಡೆ ವಿಜ್ಞಾನ ದಿನಾಚರಣೆ

ಇಜ್ಞಾನ ವಾರ್ತೆ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ಗುಲಬರ್ಗಾದ ಡಾ. ಪಿ. ಎಸ್. ಶಂಕರ್ ಪ್ರತಿಷ್ಠಾನದ ಸಹಯೋಗದಲ್ಲಿ ಉತ್ತರ ಕರ್ನಾಟಕದ ಹಲವೆಡೆಗಳಲ್ಲಿ 'ರಾಷ್ಟ್ರೀಯ ವಿಜ್ಞಾನ ದಿನಾಚರಣೆ - ೨೦೧೨' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಸಂದರ್ಭದಲ್ಲಿ ಈ ವರ್ಷದ ವಿಜ್ಞಾನ ದಿನಾಚರಣೆಯ ವಿಷಯವಾದ 'ಸ್ವಚ್ಛ ಇಂಧನದ ಆಯ್ಕೆಗಳು ಹಾಗೂ ಪರಮಾಣು ಸುರಕ್ಷತೆ' ಕುರಿತು ಉಪನ್ಯಾಸಗಳಿರುತ್ತವೆ.

ಕಾರ್ಯಕ್ರಮದ ವಿವರಗಳು ಹೀಗಿವೆ:
  • ಫೆಬ್ರುವರಿ ೨೩: ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯ, ಬಳ್ಳಾರಿ
  • ಫೆಬ್ರುವರಿ ೨೪: ಹೆಚ್. ಆರ್. ಶ್ರೀರಾಮುಲು ಸ್ಮಾರಕ ಮಹಾವಿದ್ಯಾಲಯ, ಗಂಗಾವತಿ (ಕೊಪ್ಪಳ ಜಿಲ್ಲೆ)
  • ಫೆಬ್ರುವರಿ ೨೫: ರಾಯಚೂರು ವಿಜ್ಞಾನ ಕೇಂದ್ರ, ರಾಯಚೂರು
  • ಫೆಬ್ರುವರಿ ೨೭: ಬಿ. ವಿ. ಭೂಮರೆಡ್ಡಿ ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯ, ಬೀದರ
  • ಫೆಬ್ರುವರಿ ೨೮: ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ, ಗುಲಬರ್ಗಾ
  • ಫೆಬ್ರುವರಿ ೨೯: ಸರಕಾರಿ ಪದವಿ ಮಹಾವಿದ್ಯಾಲಯ, ಯಾದಗಿರಿ

ಶುಕ್ರವಾರ, ಫೆಬ್ರವರಿ 10, 2012

ಜನಪ್ರಿಯ ವಿಜ್ಞಾನ ಸಾಹಿತಿಗಳ ಸಮಾವೇಶ

ಇಜ್ಞಾನ ವಾರ್ತೆ

ಜನಪ್ರಿಯ ವಿಜ್ಞಾನ ಸಾಹಿತಿಗಳ ವೇದಿಕೆ, ಕರಾವಿಪ ಹಾಗೂ ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಈ ವಾರಾಂತ್ಯ (೧೧-೧೨ ಫೆಬ್ರುವರಿ ೨೦೧೨) ೫ನೇ ರಾಜ್ಯಮಟ್ಟದ ಜನಪ್ರಿಯ ವಿಜ್ಞಾನ ಸಾಹಿತಿಗಳ ಸಮಾವೇಶ ಆಯೋಜಿಸಲಾಗಿದೆ. ಬೆಂಗಳೂರು ಬನಶಂಕರಿ ೨ನೇ ಹಂತದ ಕಿಮ್ಸ್ ಸಂಸ್ಥೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಪ್ರೊ. ಜೆ. ಆರ್. ಲಕ್ಷ್ಮಣರಾವ್, ಡಾ. ಸಿ. ಆರ್. ಚಂದ್ರಶೇಖರ, ಡಾ. ಪಿ. ಎಸ್. ಶಂಕರ್, ಪ್ರೊ. ಅಡ್ಯನಡ್ಕ ಕೃಷ್ಣಭಟ್ ಸೇರಿದಂತೆ ಅನೇಕ ಹಿರಿಯ ಸಂವಹನಕಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಂಗಳವಾರ, ಫೆಬ್ರವರಿ 7, 2012

ವಿಶ್ವಸಂಕೇತ ಯುನಿಕೋಡ್

ಟಿ. ಜಿ. ಶ್ರೀನಿಧಿ

ವಿಶ್ವವ್ಯಾಪಿ ಜಾಲದ ಮೂಲಕ ಇಮೇಲ್ ಬಳಕೆ ಪ್ರಾರಂಭವಾದ ಹೊಸದರಲ್ಲಿ ಅದರ ವ್ಯವಹಾರವೆಲ್ಲ ಇಂಗ್ಲಿಷಿನಲ್ಲೇ ಇತ್ತು. ಬರಿಯ ಇಮೇಲ್ ಅಷ್ಟೇ ಏಕೆ, ನಮ್ಮ ಮಟ್ಟಿಗೆ ಇಡಿಯ ವಿಶ್ವವ್ಯಾಪಿ ಜಾಲವೇ ಇಂಗ್ಲಿಷ್‌ಮಯವಾಗಿತ್ತು.

ಆಗ ಇಮೇಲ್‌ನಲ್ಲಿ ವ್ಯವಹರಿಸುವಾಗ ಕನ್ನಡ ಸಂದೇಶಗಳನ್ನು ಇಂಗ್ಲಿಷ್ ಲಿಪಿಯಲ್ಲೇ ಬರೆಯುವ ಅಭ್ಯಾಸವಿತ್ತು. "ಏನಪ್ಪಾ, ಚೆನ್ನಾಗಿದ್ದೀಯಾ?" ಎನ್ನುವುದಕ್ಕೆ "Enappa, chennagiddeeyaa?" ಎಂದು ಲಿಪ್ಯಂತರಿಸಿ ಬರೆಯುವ ಈ ಭಾಷೆಯನ್ನು ಈಗಲೂ ಕೆಲವರು ರೂಢಿಯಲ್ಲಿಟ್ಟುಕೊಂಡಿದ್ದಾರೆ. ಆದರೆ ಕನ್ನಡ ಸಂದೇಶಗಳನ್ನು ಇಂಗ್ಲಿಷಿನಲ್ಲಿ ಬರೆಯುವುದು ಎಷ್ಟು ಕಷ್ಟವೋ ಅದನ್ನು ಓದುವುದು ಇನ್ನೂ ಕಷ್ಟ ಎನ್ನುವುದು ನಮ್ಮೆಲ್ಲರ ಅನುಭವಕ್ಕೂ ಬಂದಿರುವ ವಿಷಯವೇ.

ನಂತರ ಕನ್ನಡ ಪದಸಂಸ್ಕಾರಕಗಳು ಬಂದವು. ಆಗ ಕನ್ನಡದಲ್ಲಿ ಸಿದ್ಧಪಡಿಸಿದ ಕಡತಗಳನ್ನು ಅಟ್ಯಾಚ್‌ಮೆಂಟ್ ರೂಪದಲ್ಲಿ ವಿನಿಮಯ ಮಾಡಿಕೊಳ್ಳುವ ಅಭ್ಯಾಸ ಶುರುವಾಯಿತು. ಮೊದಲಿಗೆ 'ಬರಹ', ಹಾಗೂ ನಂತರದ ದಿನಗಳಲ್ಲಿ 'ನುಡಿ' (ಇದರ ಮೊದಲ ಹೆಸರು 'ಕಲಿತ' ಎಂದಿತ್ತು) ತಂತ್ರಾಂಶಗಳು ಉಚಿತವಾಗಿ ದೊರಕುವಂತಾದಾಗ ಇಮೇಲ್ ಮಾಧ್ಯಮದಲ್ಲಿ ಮಾತ್ರವೇ ಅಲ್ಲ, ಒಟ್ಟು ವಿಶ್ವವ್ಯಾಪಿ ಜಾಲದಲ್ಲೇ ಕನ್ನಡದ ಬಳಕೆ ಇನ್ನಷ್ಟು ವ್ಯಾಪಕವಾಯಿತು.

ಆದರೆ ಇಲ್ಲೂ ಒಂದು ಸಮಸ್ಯೆಯಿತ್ತು. ಯಾವುದೇ ಕನ್ನಡ ತಂತ್ರಾಂಶ ಬಳಸಿ ನೀವೊಂದು ಕಡತ ತಯಾರಿಸಿದ್ದರೆ ನಿಮ್ಮ ಸಂದೇಶ ಓದುವವರಲ್ಲೂ ಆ ತಂತ್ರಾಂಶ, ಅಥವಾ ಕನಿಷ್ಠಪಕ್ಷ ಅದರ ಫಾಂಟುಗಳಾದರೂ ಇರಬೇಕಿದ್ದು ಅನಿವಾರ್ಯವಾಗಿತ್ತು. ಜಾಲತಾಣಗಳ ಪರಿಸ್ಥಿತಿಯೂ ಹೀಗೆಯೇ ಇತ್ತು. ಸರಿಯಾದ ಫಾಂಟುಗಳಿಲ್ಲದ ಕಂಪ್ಯೂಟರಿನಲ್ಲಿ ಕನ್ನಡ ತಾಣಗಳಲ್ಲಿದ್ದ ಪಠ್ಯವೆಲ್ಲ ಇಂಗ್ಲಿಷ್ ಅಕ್ಷರಗಳ ಅಸಂಬದ್ಧ ಜೋಡಣೆಯಂತೆಯೇ ಕಾಣಸಿಗುತ್ತಿದ್ದವು.

ರೆಡಿಫ್‌ಮೇಲ್, ಇ-ಪತ್ರ, ಇ-ಟಪಾಲ್ ಮುಂತಾದ ಕೆಲ ತಾಣಗಳು ಬೇರೆ ತಂತ್ರಾಂಶದ ಅಗತ್ಯವಿಲ್ಲದೆ ಕನ್ನಡದಲ್ಲೇ ಇಮೇಲ್ ಕಳುಹಿಸುವ ಸೌಲಭ್ಯವನ್ನು ಒದಗಿಸಿದವಾದರೂ ಅವು ಯಾವುವೂ ಪರಿಪೂರ್ಣವಾಗಿರಲಿಲ್ಲ. ಜಾಲತಾಣಗಳ ಮಟ್ಟಿಗೆ ಈ ಸಮಸ್ಯೆ ಡೈನಮಿಕ್ ಫಾಂಟ್‌ನಿಂದ ಕೊಂಚಮಟ್ಟಿಗೆ ನಿವಾರಣೆಯಾಯಿತು; ಆದರೂ ಮಾಹಿತಿಯೆಲ್ಲ ಫಾಂಟ್ ಮೇಲೆಯೇ ಆಧರಿತವಾಗಿದ್ದರಿಂದ ಸರ್ಚ್ ಇಂಜನ್ ಮೂಲಕ ಆಗಲೂ ಕನ್ನಡದ ಮಾಹಿತಿಯನ್ನು ಸುಲಭವಾಗಿ ಹುಡುಕಲು ಆಗುತ್ತಿರಲಿಲ್ಲ (ಕೆಲವು ಕನ್ನಡ ತಾಣಗಳ ಮಟ್ಟಿಗೆ ಈ ಪರಿಸ್ಥಿತಿ ಈಗಲೂ ಮುಂದುವರೆದಿದೆ!).

ಈ ಪರಿಸ್ಥಿತಿ ಬದಲಾದದ್ದು ಯುನಿಕೋಡ್ ಸಂಕೇತ ವಿಧಾನ ಬಳಕೆಗೆ ಬಂದಾಗ.

ಶುಕ್ರವಾರ, ಫೆಬ್ರವರಿ 3, 2012

ಸಮದ್ರದಾಳದ ವಿಶಿಷ್ಟ ಗಣತಿ

ಟಿ. ಜಿ. ಶ್ರೀನಿಧಿ

೧೯೯೦ರಲ್ಲಿ ಜಪಾನಿನ ಒಸಾಕಾದಲ್ಲಿ ಒಂದು ದೊಡ್ಡ ಪ್ರದರ್ಶನ ನಡೆದಿತ್ತು, ಅಂತರರಾಷ್ಟ್ರೀಯ ಉದ್ಯಾನ ಹಾಗೂ ವನರಾಜಿ ಪ್ರದರ್ಶನ ಅಂತ; ಚಿಕ್ಕದಾಗಿ ಅದನ್ನು ಎಕ್ಸ್‌ಪೋ '೯೦ ಅಂತ ಕರೆದಿದ್ದರು. ಉದ್ಯಾನಗಳ ಬಗೆಗೆ ಅಷ್ಟೊಂದು ದೊಡ್ಡ ಪ್ರದರ್ಶನ ನಡೆದದ್ದು ಏಷಿಯಾಕ್ಕೆಲ್ಲ ಅದೇ ಮೊದಲು. ಎಕ್ಸ್‌ಪೋ '೯೦ ನಡೆದ ಆರು ತಿಂಗಳ ಕಾಲವೂ 'ಪ್ರಕೃತಿಯ ಜೊತೆ ಮಾನವನ ಸೌಹಾರ್ದಯುತ ಸಹಬಾಳ್ವೆ' ಎಂಬ ವಿಷಯದ ಸುತ್ತ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಆದರೆ ಪ್ರಕೃತಿ-ಮಾನವನ ಸಹಬಾಳ್ವೆ ಬರಿಯ ಆರುತಿಂಗಳು ಮಾತ್ರ ತಲೆಕೆಡಿಸಿಕೊಂಡು ಆಮೇಲೆ ಮರೆತುಬಿಡುವ ವಿಷಯ ಅಲ್ಲವಲ್ಲ! ಹೀಗಾಗಿಯೇ ಎಕ್ಸ್‌ಪೋ '೯೦ ಮುಗಿದ ಮೇಲೂ ಆ ಬಗ್ಗೆ ಕೆಲಸಮಾಡುವುದು ಸಾಧ್ಯವಾಗಲಿ ಎಂದು 'ಎಕ್ಸ್‌ಪೋ '೯೦ ಸ್ಮಾರಕ ಪ್ರತಿಷ್ಠಾನ'ವನ್ನು ಸ್ಥಾಪಿಸಲಾಯಿತು. ಮಾನವ ಹಾಗೂ ಪ್ರಕೃತಿಯ ಸಂಬಂಧಗಳ ಮೇಲೆ ಬೆಳಕುಚೆಲ್ಲುವ ಮಹತ್ವದ ಸಾಧನೆಗಳನ್ನು ಗುರುತಿಸಿ ಗೌರವಿಸುವುದು ಈ ಪ್ರತಿಷ್ಠಾನದ ಉದ್ದೇಶಗಳಲ್ಲೊಂದು. ಇದಕ್ಕಾಗಿ ಈ ಪ್ರತಿಷ್ಠಾನ 'ಅಂತರರಾಷ್ಟ್ರೀಯ ಕಾಸ್ಮಾಸ್ ಬಹುಮಾನ' ಎಂಬ ಹೆಸರಿನ ಪ್ರಶಸ್ತಿಯನ್ನು ಸ್ಥಾಪಿಸಿದೆ. ಇದು ಪರಿಸರ ಕ್ಷೇತ್ರದಲ್ಲಿ ಪ್ರಪಂಚದ ಅತ್ಯುಚ್ಚ ಪ್ರಶಸ್ತಿಗಳಲ್ಲೊಂದು.

೨೦೧೧ನೇ ಸಾಲಿನಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾದದ್ದು ಸೆನ್ಸಸ್ ಆಫ್ ಮರೈನ್ ಲೈಫ್ ಎಂಬ ಯೋಜನೆ.

ನಮಗೆಲ್ಲ ಜನಗಣತಿ ಗೊತ್ತು, ಆದರೆ ಇದ್ಯಾವುದಿದು ಸಮುದ್ರಜೀವಗಳ ಗಣತಿ?

ಬುಧವಾರ, ಫೆಬ್ರವರಿ 1, 2012

ಪೈರಸಿ ಕಾಟ, ಇಂಟರ್‌ನೆಟ್ ಪರದಾಟ

ಸೋಪಾ-ಪೀಪಾ ಆದಮೇಲೆ ಈಗ ಆಕ್ಟಾ ಬೇರೆ ಬಂದಿದೆ. ಇಂಟರ್‌ನೆಟ್ ಲೋಕಕ್ಕೆ ಪೈರಸಿಯ ಜೊತೆಗೆ ಪೈರಸಿ ವಿರೋಧಿ ಕಾನೂನುಗಳ ಕಾಟವೂ ಶುರುವಾಗಿದೆ!
ಟಿ. ಜಿ. ಶ್ರೀನಿಧಿ

ಈಚೆಗೆ ಕೆಲದಿನಗಳಿಂದ ಅಂತರಜಾಲ ಪ್ರಪಂಚದಲ್ಲಿ ಗಲಾಟೆಯೋ ಗಲಾಟೆ.

ಕಳೆದ ಜನವರಿ ೧೮ರಂದು ವಿಕಿಪೀಡಿಯಾ ತಾಣ ಒಂದು ದಿನದ ಬಂದ್ ಆಚರಿಸಿದ್ದು ನಿಮಗೆಲ್ಲ ನೆನಪಿರಬೇಕು; ವಿಕಿಪೀಡಿಯಾ ಜೊತೆಗೆ ಇನ್ನೂ ಹಲವಾರು ದೊಡ್ಡ-ಸಣ್ಣ ತಾಣಗಳು ಆ ಬಂದ್‌ನಲ್ಲಿ ಪಾಲ್ಗೊಂಡಿದ್ದವು. ಇನ್ನು ಕೆಲ ಜಾಲತಾಣಗಳು ಪ್ರತಿಭಟನೆಯಲ್ಲಿ ನೇರವಾಗಿ ಭಾಗವಹಿಸದಿದ್ದರೂ ಅದಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದವು.

ಇಷ್ಟೆಲ್ಲ ಗಲಾಟೆಗೆ ಕಾರಣವಾದದ್ದು ಅಮೆರಿಕಾ ಸಂಸತ್ತಿನಲ್ಲಿ ಪ್ರಸ್ತಾಪವಾಗಿದ್ದ ಎರಡು ಮಸೂದೆಗಳು. ಅವುಗಳ ಹೆಸರೇ 'ಸೋಪಾ' (ಸ್ಟಾಪ್ ಆನ್‌ಲೈನ್ ಪೈರಸಿ ಆಕ್ಟ್) ಹಾಗೂ 'ಪೀಪಾ' (ಪ್ರೊಟೆಕ್ಟ್ ಇಂಟಲೆಕ್ಚುಯಲ್ ಪ್ರಾಪರ್ಟಿ ಆಕ್ಟ್). ಇಂಟರ್‌ನೆಟ್ ಪ್ರಪಂಚವನ್ನು ಕಾಡುತ್ತಿರುವ ಪೈರಸಿ ಪೀಡೆಯ ನಿವಾರಣೆಗೆ ಪ್ರಯತ್ನಿಸುವುದು ಈ ಮಸೂದೆಗಳ ಉದ್ದೇಶ. ಪೈರಸಿ ತಡೆಗಾಗಿ ಈ ಮಸೂದೆಗಳಲ್ಲಿ ಪ್ರಸ್ತಾಪವಾಗಿರುವ ಕೆಲ ನಿಯಮಗಳು ತೀರಾ ಕಠಿಣವಾಗಿವೆ ಎನ್ನುವುದು ಅವುಗಳ ವಿರುದ್ಧದ ಪ್ರತಿಭಟನೆಗೆ ಕಾರಣವಾಗಿತ್ತು.

ಜನವರಿ ೧೮ರ ಪ್ರತಿಭಟನೆಗಳಿಗೆ ವಿಶ್ವವ್ಯಾಪಿ ಬೆಂಬಲ ವ್ಯಕ್ತವಾದಾಗ ಸೋಪಾ-ಪೀಪಾಗಳಿಗೆ ದೊರೆತಿದ್ದ ಬೆಂಬಲ ಕೊಂಚಮಟ್ಟಿಗೆ ಕಡಿಮೆಯಾಯಿತು. ಜನರ ಒತ್ತಡಕ್ಕೆ ಮಣಿದ ಅಮೆರಿಕಾ ಸಂಸತ್ತು ಸದ್ಯಕ್ಕೆ ಈ ವಿಧೇಯಕಗಳ ಬಗೆಗೆ ಯಾವುದೇ ಕ್ರಮ ತೆಗೆದುಕೊಳ್ಳದಿರುವ ನಿರ್ಧಾರವನ್ನೂ ಪ್ರಕಟಿಸಿತು. ಪ್ರತಿಭಟನೆ ಇನ್ನೂ ಮುಗಿದಿಲ್ಲ ಎಂದು ವಿಕಿಪೀಡಿಯಾ ಹೇಳಿದೆಯಾದರೂ ಸೋಪಾ-ಪೀಪಾ ಪ್ರಸಂಗಕ್ಕೆ ಅಲ್ಪವಿರಾಮವಂತೂ ಸಿಕ್ಕಿದೆ.
badge