ಶುಕ್ರವಾರ, ಫೆಬ್ರವರಿ 3, 2012

ಸಮದ್ರದಾಳದ ವಿಶಿಷ್ಟ ಗಣತಿ

ಟಿ. ಜಿ. ಶ್ರೀನಿಧಿ

೧೯೯೦ರಲ್ಲಿ ಜಪಾನಿನ ಒಸಾಕಾದಲ್ಲಿ ಒಂದು ದೊಡ್ಡ ಪ್ರದರ್ಶನ ನಡೆದಿತ್ತು, ಅಂತರರಾಷ್ಟ್ರೀಯ ಉದ್ಯಾನ ಹಾಗೂ ವನರಾಜಿ ಪ್ರದರ್ಶನ ಅಂತ; ಚಿಕ್ಕದಾಗಿ ಅದನ್ನು ಎಕ್ಸ್‌ಪೋ '೯೦ ಅಂತ ಕರೆದಿದ್ದರು. ಉದ್ಯಾನಗಳ ಬಗೆಗೆ ಅಷ್ಟೊಂದು ದೊಡ್ಡ ಪ್ರದರ್ಶನ ನಡೆದದ್ದು ಏಷಿಯಾಕ್ಕೆಲ್ಲ ಅದೇ ಮೊದಲು. ಎಕ್ಸ್‌ಪೋ '೯೦ ನಡೆದ ಆರು ತಿಂಗಳ ಕಾಲವೂ 'ಪ್ರಕೃತಿಯ ಜೊತೆ ಮಾನವನ ಸೌಹಾರ್ದಯುತ ಸಹಬಾಳ್ವೆ' ಎಂಬ ವಿಷಯದ ಸುತ್ತ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಆದರೆ ಪ್ರಕೃತಿ-ಮಾನವನ ಸಹಬಾಳ್ವೆ ಬರಿಯ ಆರುತಿಂಗಳು ಮಾತ್ರ ತಲೆಕೆಡಿಸಿಕೊಂಡು ಆಮೇಲೆ ಮರೆತುಬಿಡುವ ವಿಷಯ ಅಲ್ಲವಲ್ಲ! ಹೀಗಾಗಿಯೇ ಎಕ್ಸ್‌ಪೋ '೯೦ ಮುಗಿದ ಮೇಲೂ ಆ ಬಗ್ಗೆ ಕೆಲಸಮಾಡುವುದು ಸಾಧ್ಯವಾಗಲಿ ಎಂದು 'ಎಕ್ಸ್‌ಪೋ '೯೦ ಸ್ಮಾರಕ ಪ್ರತಿಷ್ಠಾನ'ವನ್ನು ಸ್ಥಾಪಿಸಲಾಯಿತು. ಮಾನವ ಹಾಗೂ ಪ್ರಕೃತಿಯ ಸಂಬಂಧಗಳ ಮೇಲೆ ಬೆಳಕುಚೆಲ್ಲುವ ಮಹತ್ವದ ಸಾಧನೆಗಳನ್ನು ಗುರುತಿಸಿ ಗೌರವಿಸುವುದು ಈ ಪ್ರತಿಷ್ಠಾನದ ಉದ್ದೇಶಗಳಲ್ಲೊಂದು. ಇದಕ್ಕಾಗಿ ಈ ಪ್ರತಿಷ್ಠಾನ 'ಅಂತರರಾಷ್ಟ್ರೀಯ ಕಾಸ್ಮಾಸ್ ಬಹುಮಾನ' ಎಂಬ ಹೆಸರಿನ ಪ್ರಶಸ್ತಿಯನ್ನು ಸ್ಥಾಪಿಸಿದೆ. ಇದು ಪರಿಸರ ಕ್ಷೇತ್ರದಲ್ಲಿ ಪ್ರಪಂಚದ ಅತ್ಯುಚ್ಚ ಪ್ರಶಸ್ತಿಗಳಲ್ಲೊಂದು.

೨೦೧೧ನೇ ಸಾಲಿನಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾದದ್ದು ಸೆನ್ಸಸ್ ಆಫ್ ಮರೈನ್ ಲೈಫ್ ಎಂಬ ಯೋಜನೆ.

ನಮಗೆಲ್ಲ ಜನಗಣತಿ ಗೊತ್ತು, ಆದರೆ ಇದ್ಯಾವುದಿದು ಸಮುದ್ರಜೀವಗಳ ಗಣತಿ?


ಸೆನ್ಸಸ್ ಆಫ್ ಮರೈನ್ ಲೈಫ್ ಭೂಮಿಯ ಮೇಲೆ ಮಾನವ ಕಾಲಿಡದ ಜಾಗವೇ ಇಲ್ಲ ಎನ್ನುವಂಥ ಪರಿಸ್ಥಿತಿ ಇದೆ. ಭೂಮಿಯಿಂದ ಆಚೆಗಿನ ಪರಿಸ್ಥಿತಿಯೂ ಅಷ್ಟೆ: ಮಾನವನಿರ್ಮಿತ ಅಂತರಿಕ್ಷವಾಹನಗಳು ಅಂತರಿಕ್ಷದ ಮೂಲೆಮೂಲೆಗಳಿಗೂ ಹೋಗಿವೆ, ಹೋಗುತ್ತಿವೆ. ಆದರೆ ಸಮುದ್ರದ ಆಳ ಮಾತ್ರ ಮನುಷ್ಯನಿಗೆ ಇನ್ನೂ ಸರಿಯಾಗಿ ಪರಿಚಯವೇ ಆಗಿಲ್ಲ. ಆಧುನಿಕ ವಿಜ್ಞಾನ ಅದೆಷ್ಟೇ ಮುಂದುವರೆದರೂ ಸಮುದ್ರದಾಳದಲ್ಲಿರುವ ಜೀವರಾಶಿಯಲ್ಲಿ ಅದೆಷ್ಟೋ ಭಾಗ ಇನ್ನೂ ಅಪರಿಚಿತವಾಗಿಯೇ ಉಳಿದಿದೆ.

ಆದರೆ ಈ ಜೀವರಾಶಿಯ ಬಗ್ಗೆ ಇನ್ನಷ್ಟು, ಮತ್ತಷ್ಟು ತಿಳಿದುಕೊಳ್ಳುವ ಕುತೂಹಲ ಮಾತ್ರ ಸದಾ ಹಸಿರು. ಈ ಕುತೂಹಲದ ಪರಿಣಾಮವಾಗಿ ರೂಪಗೊಂಡದ್ದೇ ಸೆನ್ಸಸ್ ಆಫ್ ಮರೈನ್ ಲೈಫ್ - ಸಮುದ್ರದ ಜೀವವೈವಿಧ್ಯವನ್ನು ಅರ್ಥಮಾಡಿಕೊಳ್ಳುವ ಮಹತ್ವಾಕಾಂಕ್ಷಿ ಚಟುವಟಿಕೆ.

ವಿಶ್ವದೆಲ್ಲೆಡೆಯ ಸಮುದ್ರಗಳಲ್ಲಿನ ಜೀವವೈವಿಧ್ಯವನ್ನು ಅಭ್ಯಸಿಸಿ ದಾಖಲಿಸುವುದು ಈ ಚಟುವಟಿಕೆಯ ಮುಖ್ಯ ಉದ್ದೇಶವಾಗಿತ್ತು. ಐತಿಹಾಸಿಕವಾಗಿ ಅಲ್ಲಿ ಏನೆಲ್ಲ ಬದಲಾವಣೆಗಳಾಗಿವೆ ಹಾಗೂ ಭವಿಷ್ಯದಲ್ಲಿ ಸಮುದ್ರಜೀವಗಳ ಪರಿಸ್ಥಿತಿ ಹೇಗಿರಬಹುದು ಎನ್ನುವುದನ್ನು ತಿಳಿಯುವತ್ತಲೂ ಈ ಅಧ್ಯಯನ ಗಮನಹರಿಸಿತ್ತು.

ಒಬಿಐಎಸ್ ವಿಶ್ವದ ಎಂಬತ್ತಕ್ಕಿಂತ ಹೆಚ್ಚು ರಾಷ್ಟ್ರಗಳ ವಿಜ್ಞಾನಿಗಳು ಒಟ್ಟಾಗಿ ಕೈಗೊಂಡ ಈ ಯೋಜನೆ ೨೦೦೦ನೇ ಇಸವಿಯಲ್ಲಿ ಪ್ರಾರಂಭವಾಗಿ ಹತ್ತು ವರ್ಷಗಳ ಕಾಲ ನಡೆಯಿತು. ವಿವಿಧ ರಾಷ್ಟ್ರಗಳ ೨೭೦೦ ವಿಜ್ಞಾನಿಗಳು ಒಟ್ಟಾಗಿ ನಡೆಸಿದ ಅಧ್ಯಯನ ಇದು. ಈ ಅವಧಿಯಲ್ಲಿ ಅವರು ಸುಮಾರು ೯೦೦೦ ದಿನಗಳಷ್ಟು ಕಾಲವನ್ನು ಸಮುದ್ರ ಅಧ್ಯಯನದಲ್ಲಿ ಕಳೆದರು.

ಈ ವಿಶಿಷ್ಟ ಚಟುವಟಿಕೆಯ ಅಂಗವಾಗಿ ಸಂಗ್ರಹಿಸಲಾದ ಅಗಾಧ ಮಾಹಿತಿಯನ್ನು ಓಷನ್ ಬಯೋ-ಜಿಯೋಗ್ರಫಿಕ್ ಇನ್ಫರ್ಮೇಷನ್ ಸಿಸ್ಟಂ (ಒಬಿಐಎಸ್) ಎಂಬ ದತ್ತಸಂಚಯದಲ್ಲಿ ಶೇಖರಿಸಿಡಲಾಗಿದೆ. ಸಮುದ್ರ ಜೀವವೈವಿಧ್ಯದ ಬಗೆಗೆ ಇದುವರೆಗೆ ಲಭ್ಯವಿರುವ ಮಾಹಿತಿಯ ಜೊತೆಗೆ ಈ ದತ್ತಸಂಚಯವೂ ಸೇರಿ ನಮ್ಮ ಅರಿವನ್ನು ಅಪಾರವಾಗಿ ವಿಸ್ತರಿಸುವ ನಿರೀಕ್ಷೆಯಿದೆ.

ಈ ದತ್ತಸಂಚಯದಲ್ಲಿ ಇದೀಗ ಒಂದು ಲಕ್ಷಕ್ಕೂ ಹೆಚ್ಚು ಪ್ರಭೇದಗಳ ಕುರಿತಾದ ಸುಮಾರು ೨.೮ ಕೋಟಿ ದಾಖಲೆಗಳಿವೆ. ಈ ಮಾಹಿತಿಯೆಲ್ಲ ಒಬಿಐಎಸ್ ಜಾಲತಾಣದ ಮೂಲಕ ಸಾರ್ವಜನಿಕ ಬಳಕೆಗೆ ಲಭ್ಯವಿದೆ.

ಅಪರೂಪದ ದಾಖಲೆ ಜಗತ್ತಿನ ಸಮುದ್ರಗಳಲ್ಲಿ ಸುಮಾರು ೨,೩೦,೦೦೦ ವಿಭಿನ್ನ ಪ್ರಭೇದಗಳಿಗೆ ಸೇರಿದ ಜೀವಿಗಳು ವಾಸಿಸುತ್ತಿವೆ ಎಂಬುದು ನಮ್ಮಲ್ಲಿದ್ದ ಮಾಹಿತಿ. ಈ ಸಂಖ್ಯೆ ಕಡಿಮೆಯೆಂದರೂ ೨೫೦,೦೦೦ ಮುಟ್ಟುತ್ತದೆ ಎನ್ನುವುದು ಸೆನ್ಸಸ್ ಆಫ್ ಮರೈನ್ ಲೈಫ್ ವಿಜ್ಞಾನಿಗಳ ಅನಿಸಿಕೆ. ಈವರೆಗೂ ಅಪರಿಚಿತವಾಗಿದ್ದ ೧೨೦೦ಕ್ಕೂ ಹೆಚ್ಚು 'ಹೊಸ' ಪ್ರಭೇದಗಳನ್ನು ಗುರುತಿಸಿದ ಹಿರಿಮೆ ಈ ವಿಜ್ಞಾನಿಗಳದು. ಅಧ್ಯಯನ ನಡೆಯುತ್ತಿದ್ದ ಒಂದು ದಶಕದ ಅವಧಿಯಲ್ಲಿ ೨೬೦೦ಕ್ಕೂ ಹೆಚ್ಚು ಅಧ್ಯಯನ ಲೇಖನಗಳನ್ನು ಪ್ರಕಟಿಸಿದ್ದು ಕೂಡ ಒಂದು ದಾಖಲೆಯೇ.

ಅಷ್ಟೇ ಅಲ್ಲ, ವಿಶ್ವದ ವಿವಿಧೆಡೆಗಳಲ್ಲಿ ಟ್ಯೂನಾ ಮೀನುಗಳು, ಶಾರ್ಕುಗಳು, ಹವಳದ ದಂಡೆಗಳು ಮುಂತಾದ ಹಲವು ಬಗೆಯ ಜೀವರಾಶಿಯ ಉಳಿವಿಗೆ ಗಂಭೀರ ತೊಂದರೆ ಎದುರಾಗಿರುವ ಸಂಗತಿ ಕೂಡ ಈ ಯೋಜನೆಯ ಅಂಕಿ ಅಂಶಗಳಿಂದ ದೃಢಪಟ್ಟಿದೆ.

ಸೆನ್ಸಸ್ ಆಫ್ ಮರೈನ್ ಲೈಫ್ ಬಗೆಗೆ ಹೆಚ್ಚಿನ ಮಾಹಿತಿ ಹಾಗೂ ಅಪರೂಪದ ಚಿತ್ರಗಳ ಸಂಗ್ರಹಕ್ಕಾಗಿ ಸೆನ್ಸಸ್ ಆಫ್ ಮರೈನ್ ಲೈಫ್‌ನ ಜಾಲತಾಣಕ್ಕೆ ಭೇಟಿಕೊಡಬಹುದು.

ಜನವರಿ ೨೦೧೨ರ 'ವಿಜ್ಞಾನ ಲೋಕ'ದಲ್ಲಿ ಪ್ರಕಟವಾದ ಲೇಖನ. ಚಿತ್ರಕೃಪೆ: ಸೆನ್ಸಸ್ ಆಫ್ ಮರೈನ್ ಲೈಫ್.

ಕಾಮೆಂಟ್‌ಗಳಿಲ್ಲ:

badge