ಗುರುವಾರ, ಮೇ 31, 2018

ಜೆನ್‌ಫೋನ್ ಮ್ಯಾಕ್ಸ್ ಪ್ರೋ ಎಂ೧: ಇದು ಏಸುಸ್‌ನ ಹೊಸ ಪವರ್‌ಸ್ಟಾರ್!

ಮೊಬೈಲ್ ಫೋನ್ ಬಳಕೆ ಹೆಚ್ಚಿದಂತೆ ತಯಾರಕರು ಅವುಗಳ ಕಾರ್ಯಕ್ಷಮತೆಯನ್ನು ಉತ್ತಮಪಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಉನ್ನತ ಬ್ಯಾಟರಿ ಸಾಮರ್ಥ್ಯದ ಫೋನುಗಳು ಮಾರುಕಟ್ಟೆಗೆ ಬರುತ್ತಿವೆ. ಇಂತಹ ಹಲವು ಫೋನುಗಳೊಡನೆ ಗಮನಸೆಳೆದಿರುವ ಏಸುಸ್ ಸಂಸ್ಥೆ ಇತ್ತೀಚೆಗೆ ಜೆನ್‌ಫೋನ್ ಮ್ಯಾಕ್ಸ್ ಪ್ರೋ ಎಂ೧ ಎಂಬ ಹೊಸದೊಂದು ಮಾದರಿಯನ್ನು ಪರಿಚಯಿಸಿದೆ.

ಶಕ್ತಿಶಾಲಿ ಬ್ಯಾಟರಿ,ಶುದ್ಧ ಆಂಡ್ರಾಯ್ಡ್ ಅನುಭವ ಹಾಗೂ ಸಮರ್ಥ ಹೊಸ ಪ್ರಾಸೆಸರ್ ಈ ಫೋನಿನ ಹೈಲೈಟ್. ಸದ್ಯ ಮಾರುಕಟ್ಟೆಯಲ್ಲಿರುವ, ಇದೇ ಬೆಲೆಯಲ್ಲಿ ಸಿಗುವ ಫೋನುಗಳ ಹೋಲಿಕೆಯಲ್ಲಿ ಇದು ಬಹಳ ಉತ್ತಮ ಆಯ್ಕೆಯೆಂದೇ ಹೇಳಬೇಕು.

ಬುಧವಾರ, ಮೇ 30, 2018

ಜೂನ್ ೧೦ರಂದು ಇಜ್ಞಾನ ಕಾರ್ಯಕ್ರಮ: ಆನ್‌ಲೈನ್ ಲೋಕದ ಅಆಇಈ

ಇಜ್ಞಾನ ವಾರ್ತೆ

ನಮ್ಮದೇ ಆದ ಜಾಲತಾಣವನ್ನು (ವೆಬ್‌ಸೈಟ್) ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ರೂಪಿಸಿ ನಿರ್ವಹಿಸುವುದರ ಕುರಿತು ಇಜ್ಞಾನ ಟ್ರಸ್ಟ್ ಒಂದು ದಿನದ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮ ಬರುವ ಜೂನ್ ೧೦ರ ಭಾನುವಾರದಂದು ಬೆಳಿಗ್ಗೆ ೧೧ರಿಂದ ಸಂಜೆ ೪ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

ಮಂಗಳವಾರ, ಮೇ 29, 2018

ಇಂಧನ ಸಮಸ್ಯೆಗೆ ಪರಿಹಾರ ಸೂರ್ಯ

ಕ್ಷಮಾ ವಿ. ಭಾನುಪ್ರಕಾಶ್


ದಿನೇ ದಿನೇ ಏರುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆಗಳಿಗೆ ಮತ್ತು ಇವುಗಳಿಂದ ಉಂಟಾಗುತ್ತಿರುವ ಜಾಗತಿಕ ತಾಪಮಾನ ಏರಿಕೆಗೆ ಉತ್ತರವೆಂದರೆ ನವೀಕರಿಸಬಹುದಾದ ಸಂಪನ್ಮೂಲಗಳು. ಅವುಗಳಲ್ಲಿ ಬಹಳ ಸಮರ್ಥವಾಗಿ ಮತ್ತು ಸುಲಭವಾಗಿ ಬಳಕೆಯಾಗಬಲ್ಲುದು ಸೌರಶಕ್ತಿ. ಸೌರಶಕ್ತಿಯನ್ನು ಶಾಖ ಉತ್ಪಾದಿಸಲು ಮತ್ತು ವಿದ್ಯುತ್ತನ್ನು ಉತ್ಪಾದಿಸಲು ಬಳಸಬಹುದು.

ಬುಧವಾರ, ಮೇ 23, 2018

ಎಸ್ಸೆಮ್ಮೆಸ್‌ಗೆ ಮರುಹುಟ್ಟು

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನ್ ಪರಿಚಯವಾದ ಹೊಸದರಲ್ಲಿ ಅದರಲ್ಲಿ ಕೆಲವೇ ಆಯ್ಕೆಗಳು ಇರುತ್ತಿದ್ದವು. ಮಾತನಾಡಬೇಕಾದರೆ ದೂರವಾಣಿ ಕರೆ, ಸಂದೇಶ ಕಳಿಸಬೇಕಾದರೆ ಎಸ್ಸೆಮ್ಮೆಸ್ - ಆಗ ನಮಗಿರುತ್ತಿದ್ದ ಆಯ್ಕೆಯ ಸ್ವಾತಂತ್ರ್ಯ ಇಷ್ಟೇ.

ಆದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಸ್ಮಾರ್ಟ್‌ಫೋನ್ ಹಾಗೂ ಅದರಲ್ಲಿ ಬಳಸಬಹುದಾದ ಆಪ್‌ಗಳಿಂದಾಗಿ ಪ್ರತಿ ಕೆಲಸಕ್ಕೂ ಹತ್ತಾರು ಆಯ್ಕೆಗಳು ನಮಗೆ ದೊರಕುತ್ತಿವೆ. ಸಂದೇಶ ಕಳಿಸುವ ಉದಾಹರಣೆಯನ್ನೇ ತೆಗೆದುಕೊಂಡರೆ ಈಗ ವಾಟ್ಸ್‌ಆಪ್, ಮೆಸೆಂಜರ್, ಟೆಲಿಗ್ರಾಂ ಮುಂತಾದ ಆಪ್‌ಗಳದೇ ರಾಜ್ಯಭಾರ. ಕೆಲ ವರ್ಷಗಳ ಹಿಂದೆ ವ್ಯಾಪಕವಾಗಿ ಬಳಕೆಯಾಗುತ್ತಿದ್ದ ಎಸ್ಸೆಮ್ಮೆಸ್ ಇದೀಗ ಹೆಚ್ಚಾಗಿ ಬಳಕೆಯಾಗುತ್ತಿರುವುದು ಓಟಿಪಿ ಪಡೆದುಕೊಳ್ಳಲು ಮಾತ್ರವೇ ಇರಬೇಕೇನೋ!

ಬುಧವಾರ, ಮೇ 16, 2018

ಬೆಳಕಿನ ದಿನ ವಿಶೇಷ: ಬೆಳಕೆಂಬ ಬೆರಗು

ಟಿ. ಜಿ. ಶ್ರೀನಿಧಿ

ಬೆಳಕಿನ ಮಹತ್ವ ಏನು ಎಂಬ ಪ್ರಶ್ನೆಗೆ ಉತ್ತರಿಸುವುದು ಬಹಳ ಸುಲಭ: ನಮ್ಮ ಸುತ್ತಮುತ್ತಲ ಪ್ರಪಂಚವನ್ನು ನೋಡಲು ಬೆಳಕು ಬೇಕು. ಸಸ್ಯಗಳು ಆಹಾರ ತಯಾರಿಸಿಕೊಳ್ಳಬೇಕಾದರೂ ಬೆಳಕು ಇರಬೇಕು. ಸೋಲಾರ್ ಹೀಟರಿನಲ್ಲಿ ನೀರು ಬಿಸಿಯಾಗುವುದೂ ಬೆಳಕಿನ ಸಹಾಯದಿಂದ. ಇದನ್ನೆಲ್ಲ ಬರೆದಿರುವ ಈ ಲೇಖನದ ಸಾಲುಗಳು ನಮಗೆ ಕಾಣುತ್ತಿರುವುದೂ ಬೆಳಕಿನ ಕಾರಣದಿಂದಲೇ!

ಇಂತಹ ಅನೇಕ ಉಪಯೋಗಗಳಿಗೆ ಒದಗಿಬರುವುದು ಸೂರ್ಯನ ಬೆಳಕು. ಸೂರ್ಯನ ಬೆಳಕು ಇಲ್ಲದಾಗ ಅಥವಾ ನಮ್ಮ ಅಗತ್ಯಕ್ಕೆ ಸಾಲದಾದಾಗ ನಾವು ಟ್ಯೂ‌ಬ್‌ಲೈಟ್, ಬಲ್ಬ್ ಮುಂತಾದ ಕೃತಕ ಬೆಳಕಿನ ಮೂಲಗಳನ್ನೂ ಬಳಸುತ್ತೇವೆ.

ಆದರೆ ಬೆಳಕಿನ ಮಹತ್ವ ಇಷ್ಟಕ್ಕೇ ಮುಗಿಯುವುದಿಲ್ಲ. ಸುಲಭವಾಗಿ ನಮ್ಮ ಗಮನಕ್ಕೆ ಬರದ, ಕೆಲವೊಮ್ಮೆ ನಮ್ಮ ಕಣ್ಣಿಗೂ ಕಾಣದ ಹಲವು ಬಗೆಗಳಲ್ಲಿ ಬೆಳಕು ನಮಗೆ ನೆರವಾಗುತ್ತದೆ.

ಸೋಮವಾರ, ಮೇ 14, 2018

ಮಳೆ ಬಂತು, ಮಣ್ಣಿನ ಘಮ ತಂತು!

ಕ್ಷಮಾ ವಿ. ಭಾನುಪ್ರಕಾಶ್


ಮೊದಲ ಮಳೆ ಹೊತ್ತು ತರುವ ನೆನಪು ಮತ್ತು ಪರಿಮಳ ಸಾಟಿ ಇಲ್ಲದ್ದು. ಮೊದಲ ಮಳೆ ಇಳೆಯನ್ನು ಸ್ಪರ್ಶಿಸಿದಾಗ ಹೊರಹೊಮ್ಮುವ ಘಮಕ್ಕೆ ಮುಖ್ಯ ಕಾರಣ ಮಣ್ಣಿನಲ್ಲಿರುವ ಒಂದು ಬಗೆಯ ಬ್ಯಾಕ್ಟೀರಿಯ ಎಂದರೆ ನಂಬುವುದೇ ಕಷ್ಟ.

ಮಳೆಯ ಜೊತೆ ಬರುವ ಈ ಪರಿಮಳಕ್ಕೆ ಕಾರಣವಾಗುವ ಬ್ಯಾಕ್ಟೀರಿಯಗಳ ಗುಂಪಿನ ಹೆಸರು 'ಆಕ್ಟಿನೋಮೈಸೀಟ್ಸ್'. ಇವು ಬರಿಯ ಕಣ್ಣಿಗೆ ಕಾಣದ ಬಹು ಉಪಯುಕ್ತ ಸೂಕ್ಷ್ಮ ಜೀವಿಗಳು. ಈ ಬಗೆಯ ಬ್ಯಾಕ್ಟೀರಿಯಗಳ ರಚನೆ ಉದ್ದುದ್ದ ತಂತುಗಳಂತೆ ಇರುತ್ತದೆ. ಮನುಷ್ಯರಲ್ಲಿ, ಪ್ರಾಣಿಗಳಲ್ಲಿ ಹಲವಾರು ಖಾಯಿಲೆಗಳಿಗೆ ಕಾರಣವಾಗುವ ಇವು ಹಲವಾರು ಆಂಟೀಬಯೋಟಿಕ್, ಅಂದರೆ ಪ್ರತಿಜೀವಕಗಳನ್ನೂ ಉತ್ಪಾದಿಸುತ್ತವೆ.

ಶುಕ್ರವಾರ, ಮೇ 11, 2018

ವೀಕೆಂಡ್ ಇಜ್ಞಾನ: ಇಮೇಲ್ ಕಸದ ನಾಲ್ಕು ದಶಕ

ಟಿ. ಜಿ. ಶ್ರೀನಿಧಿ


ವ್ಯವಹಾರವಿರಲಿ, ವೈಯಕ್ತಿಕ ವಿಷಯವೇ ಇರಲಿ, ಆಧುನಿಕ ಜಗತ್ತಿನ ಸಂವಹನ ಮಾಧ್ಯಮಗಳಲ್ಲಿ ಇಮೇಲ್‌ಗೆ ಪ್ರಮುಖ ಸ್ಥಾನವಿದೆ. ಈ ಮಾಧ್ಯಮ ಅದೆಷ್ಟು ಜನಪ್ರಿಯವೆಂದರೆ ಪ್ರಪಂಚದಲ್ಲಿ ಪ್ರತಿನಿತ್ಯ ೨೫ ಸಾವಿರ ಕೋಟಿಗೂ ಹೆಚ್ಚು ಸಂಖ್ಯೆಯ ಇಮೇಲ್ ಸಂದೇಶಗಳನ್ನು ಕಳುಹಿಸಲಾಗುತ್ತದಂತೆ.

ಇಷ್ಟೆಲ್ಲ ಸಂಖ್ಯೆಯ ಇಮೇಲ್ ಸಂದೇಶಗಳನ್ನು ಜನರು ಬಳಸುತ್ತಿದ್ದಾರಲ್ಲ ಎಂದು ಆಶ್ಚರ್ಯಪಡುವ ಮುನ್ನ ಇಲ್ಲಿ ಹೇಳಲೇಬೇಕಾದ ವಿಷಯವೊಂದಿದೆ: ವಿನಿಮಯವಾಗುವ ಒಟ್ಟು ಇಮೇಲ್‌ಗಳ ಪೈಕಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಅನಪೇಕ್ಷಿತವಾದವು!

ಬುಧವಾರ, ಮೇ 2, 2018

ಗೂಗಲ್ ಮಾಡಿ ನೋಡಿ!

ಟಿ. ಜಿ. ಶ್ರೀನಿಧಿ


ಹತ್ತಿಪ್ಪತ್ತು ವರ್ಷಗಳ ಹಿಂದೆ ನಮಗೆ ಏನಾದರೂ ಮಾಹಿತಿ ಬೇಕಾದಾಗ ಮನೆಯಲ್ಲಿದ್ದ ಪುಸ್ತಕಗಳಲ್ಲಿ ಹುಡುಕುವುದು, ಗ್ರಂಥಾಲಯಗಳಿಗೆ ಹೋಗುವುದು ಸಾಮಾನ್ಯವಾಗಿತ್ತು. ನೂರಾರು ಪುಟದ ಪುಸ್ತಕಗಳಲ್ಲಿ ನಮಗೆ ಬೇಕಾದ್ದನ್ನು ಹುಡುಕಿಕೊಳ್ಳುವ ಕೆಲಸ ಸಾಕಷ್ಟು ಕ್ಲಿಷ್ಟವೂ ಆಗಿತ್ತು. ಪಠ್ಯರೂಪದ ಮಾಹಿತಿಯನ್ನೇನೋ ಪುಸ್ತಕದಿಂದ ನಕಲಿಸಿಕೊಳ್ಳಬಹುದಿತ್ತು, ಸರಿ. ಚಿತ್ರಗಳು ಬೇಕಾದವೆಂದರೆ ಹಳೆಯ ಪತ್ರಿಕೆಗಳನ್ನು ಆಶ್ರಯಿಸುವುದು, ಅವನ್ನು ಕತ್ತರಿಸಲು ಪರದಾಡುವುದು - ಇದೇ ನಮಗಿದ್ದ ಆಯ್ಕೆ.

ಈ ಪರದಾಟವನ್ನು ಕಡಿಮೆ ಮಾಡಬಲ್ಲ ಹಿರಿಯರ ನೆರವು ಎಲ್ಲೋ ಕೆಲವರಿಗಷ್ಟೇ ದೊರಕುತ್ತಿತ್ತು. ಶಾಲೆಯ ಮೇಷ್ಟರು, ಅನುಭವಿ ಗ್ರಂಥಪಾಲಕರು ಬೇಕಾದ್ದನ್ನು ಥಟ್ಟನೆ ಹುಡುಕಿಕೊಟ್ಟರೆ ನಮಗೆ ಏನೋ ಮಹತ್ವದ್ದನ್ನು ಸಾಧಿಸಿದಷ್ಟು ಸಂತೋಷವಾಗುತ್ತಿತ್ತು!

ಈಗ ಪರಿಸ್ಥಿತಿ ಎಷ್ಟೆಲ್ಲ ಬದಲಾಗಿದೆಯೆಂದರೆ ಹಿಂದೊಮ್ಮೆ ಹೀಗೆಲ್ಲ ಇತ್ತು ಎನ್ನುವುದೂ ಇಂದಿನ ಕಿರಿಯರಿಗೆ ತಿಳಿದಿಲ್ಲ. ಹೊಯ್ಸಳ ವಾಸ್ತುಶಿಲ್ಪವಿರಲಿ, ಹರಪ್ಪಾ ನಾಗರೀಕತೆ ಇರಲಿ, ಆಫ್ರಿಕಾದ ವನ್ಯಜೀವನವೇ ಇರಲಿ - ಯಾವ ವಿಷಯದ ಬಗ್ಗೆ ಮಾಹಿತಿ ಬೇಕೆಂದರೂ ಅವರು ಹೇಳುವುದು ಒಂದೇ ಮಾತು: "ಗೂಗಲ್ ಮಾಡಿ!"
badge