ಮೊಬೈಲ್ ಫೋನ್ ಬಳಕೆ ಹೆಚ್ಚಿದಂತೆ ತಯಾರಕರು ಅವುಗಳ ಕಾರ್ಯಕ್ಷಮತೆಯನ್ನು ಉತ್ತಮಪಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಉನ್ನತ ಬ್ಯಾಟರಿ ಸಾಮರ್ಥ್ಯದ ಫೋನುಗಳು ಮಾರುಕಟ್ಟೆಗೆ ಬರುತ್ತಿವೆ. ಇಂತಹ ಹಲವು ಫೋನುಗಳೊಡನೆ ಗಮನಸೆಳೆದಿರುವ ಏಸುಸ್ ಸಂಸ್ಥೆ ಇತ್ತೀಚೆಗೆ ಜೆನ್‌ಫೋನ್ ಮ್ಯಾಕ್ಸ್ ಪ್ರೋ ಎಂ೧ ಎಂಬ ಹೊಸದೊಂದು ಮಾದರಿಯನ್ನು ಪರಿಚಯಿಸಿದೆ.
ಶಕ್ತಿಶಾಲಿ ಬ್ಯಾಟರಿ,ಶುದ್ಧ ಆಂಡ್ರಾಯ್ಡ್ ಅನುಭವ ಹಾಗೂ ಸಮರ್ಥ ಹೊಸ ಪ್ರಾಸೆಸರ್ ಈ ಫೋನಿನ ಹೈಲೈಟ್. ಸದ್ಯ ಮಾರುಕಟ್ಟೆಯಲ್ಲಿರುವ, ಇದೇ ಬೆಲೆಯಲ್ಲಿ ಸಿಗುವ ಫೋನುಗಳ ಹೋಲಿಕೆಯಲ್ಲಿ ಇದು ಬಹಳ ಉತ್ತಮ ಆಯ್ಕೆಯೆಂದೇ ಹೇಳಬೇಕು.
ಇದರಲ್ಲಿ ಬಳಕೆಯಾಗಿರುವುದು ಹೊಸ ಸ್ನಾಪ್‌ಡ್ರಾಗನ್ ೬೩೬ ಸರಣಿಯ ೧.೮ ಗಿಗಾಹರ್ಟ್ಸ್ ಪ್ರಾಸೆಸರ್. ಆಂಡ್ರಾಯ್ಡ್ ೮.೧ ಆಪರೇಟಿಂಗ್ ಸಿಸ್ಟಂ ಬಳಸುವ ಈ ಫೋನು ಯಾವುದೇ ಅನಗತ್ಯ ಆಪ್‌ಗಳಿಲ್ಲದ ಶುದ್ಧ ಆಂಡ್ರಾಯ್ಡ್ ಅನುಭವ ನೀಡುತ್ತದೆ. ನಾವು ಪರೀಕ್ಷಿಸಿದ ಮಾದರಿಯಲ್ಲಿ ೩ ಜಿಬಿ ರ್‍ಯಾಮ್ ಹಾಗೂ ೩೨ ಜಿಬಿ ಆಂತರಿಕ ಶೇಖರಣಾ ಸಾಮರ್ಥ್ಯ ಇದೆ.
ಪೆನ್‌ಡ್ರೈವ್, ಕೀಬೋರ್ಡ್, ಮೌಸ್ ಮುಂತಾದ ಸಾಧನಗಳನ್ನು ಬಳಸಲು ನೆರವಾಗುವ ಓಟಿಜಿ ಸೌಲಭ್ಯ ಇದೆ. ಈಚೆಗೆ ಸಾಮಾನ್ಯವಾಗುತ್ತಿರುವ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಜೊತೆಗೆ ಇದರಲ್ಲಿ ಚಹರೆ ಗುರುತಿಸಿ ಮೊಬೈಲನ್ನು ಅನ್‌ಲಾಕ್ ಮಾಡುವ ಪರಿಣಾಮಕಾರಿ ಫೇಸ್ ರೆಕಗ್ನಿಶನ್ ಸೌಲಭ್ಯವೂ ಇದೆ.
ಈ ಫೋನಿನಲ್ಲಿ ೫.೯೯ ಇಂಚಿನ ಫುಲ್-ಎಚ್‌ಡಿ "ಫುಲ್-ವ್ಯೂ" ಪರದೆ ಇದೆ. ಇಲ್ಲಿರುವ ಬ್ಯಾಟರಿಯ ೫೦೦೦ ಎಂಎಎಚ್ ಸಾಮರ್ಥ್ಯ ತೃಪ್ತಿಕರವಾಗಿದೆ. ಇಷ್ಟೊಂದು ಭಾರೀ ಸಾಮರ್ಥ್ಯದ ಬ್ಯಾಟರಿ ಇದ್ದರೂ ಫೋನಿನ ತೂಕ ಅಷ್ಟೇನೂ ಜಾಸ್ತಿ ಎನ್ನಿಸದಿರುವುದು ವಿಶೇಷ. ಬಹುತೇಕ ಹೊಸ ಫೋನುಗಳಂತೆ ಇದರಲ್ಲೂ ಹಿಂಬದಿ ರಕ್ಷಾಕವಚವನ್ನು ತೆರೆಯುವಂತಿಲ್ಲ.
ಬಳಕೆದಾರರಿಗೆ ಎರಡು ಸಿಮ್‌ಗಳನ್ನು ಬಳಸುವ ಸ್ವಾತಂತ್ರ್ಯ ಇದೆ. ಇಲ್ಲಿರುವುದು ಹೈಬ್ರಿಡ್ ಸ್ಲಾಟ್ ಅಲ್ಲವಾದ್ದರಿಂದ ಎರಡು ಸಿಮ್ ಜೊತೆ ಮೆಮೊರಿ ಕಾರ್ಡನ್ನೂ ಬಳಸಬಹುದು. ಮೆಮೊರಿ ಕಾರ್ಡ್ ಬಳಸಿ ೨ ಟೆರಾಬೈಟ್‌ವರೆಗಿನ ಮಾಹಿತಿ ಸಂಗ್ರಹಿಸಿಕೊಳ್ಳುವುದು ಸಾಧ್ಯ.
ಕ್ಯಾಮೆರಾ ವಿಭಾಗಕ್ಕೆ ಬಂದರೆ ಇಲ್ಲಿ ೧೩ ಹಾಗೂ ೫ ಮೆಗಾಪಿಕ್ಸೆಲ್‌ನ ಪ್ರಾಥಮಿಕ ಜೋಡಿ (ಡ್ಯುಯಲ್) ಕ್ಯಾಮೆರಾ ಇದೆ. ೮ ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಜೊತೆ ಫ್ಲ್ಯಾಶ್ ಸೌಲಭ್ಯವೂ ಇದೆ. ಎರಡೂ ಕ್ಯಾಮೆರಾಗಳ ಗುಣಮಟ್ಟ - ನಾವು ನೀಡುವ ಬೆಲೆಗೆ ಹೋಲಿಸಿದಾಗ - ಚೆನ್ನಾಗಿದೆ. ಆದರೆ ಮ್ಯಾನ್ಯುಯಲ್ ಆಯ್ಕೆಗಳನ್ನು ಅಪೇಕ್ಷಿಸುವ ಪರಿಣತ ಬಳಕೆದಾರರಿಗೆ ಈ ಕ್ಯಾಮೆರಾಗಳು ಸಂಪೂರ್ಣ ತೃಪ್ತಿ ನೀಡದಿರಬಹುದು.
ಡೀಪ್‌ಸೀ ಬ್ಲ್ಯಾಕ್ ಹಾಗೂ ಗ್ರೇ - ಎರಡು ಬಣ್ಣಗಳಲ್ಲಿ ಲಭ್ಯವಿರುವ ಈ ಫೋನಿನಲ್ಲಿ ಕನ್ನಡ ಅಕ್ಷರಗಳು ಚೆನ್ನಾಗಿ ಮೂಡುತ್ತವೆ. ಆಯ್ಕೆಗಳು ಕನ್ನಡದಲ್ಲೇ ಕಾಣಿಸುವಂತೆ ಮಾಡಿಕೊಳ್ಳುವ ಸೌಲಭ್ಯ ಇದೆ.
ಈ ಎಲ್ಲ ಸೌಲಭ್ಯಗಳಿಗೆ ಹೋಲಿಸಿದಾಗ ಈ ಫೋನಿನ ಬೆಲೆ - ರೂ. ೧೦೯೯೯ (ನಾವು ಪರೀಕ್ಷಿಸಿದ ೩ಜಿಬಿ/೩೨ಜಿಬಿ ಮಾದರಿಗೆ) ಸಮರ್ಪಕವೆಂದೇ ಹೇಳಬಹುದು. ಮೊದಲ ಮಾರಾಟದಲ್ಲಿ ಇದಕ್ಕೆ ದೊರೆತಿರುವ ಉತ್ಸಾಹಭರಿತ ಪ್ರತಿಕ್ರಿಯೆಯೂ ಇದನ್ನೇ ಸೂಚಿಸುತ್ತದೆ ಎನ್ನುವುದು ನಮ್ಮ ಅನಿಸಿಕೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ