ಮಂಗಳವಾರ, ಆಗಸ್ಟ್ 30, 2016

ಭಾರತದ ಐಟಿ ಜಗತ್ತು

ಟಿ. ಜಿ. ಶ್ರೀನಿಧಿ


ಕಂಪ್ಯೂಟರ್ ವಿಜ್ಞಾನ ಹಾಗೂ ನಮ್ಮ ದೇಶದ ನಂಟು ಸಾಕಷ್ಟು ಹಳೆಯದು. ಭಾರತದ ವೈಜ್ಞಾನಿಕ ಕಾರ್ಯಕ್ರಮಗಳಿಗೆ ಭದ್ರ ಬುನಾದಿ ಹಾಕಿಕೊಟ್ಟ ಹೋಮಿ ಭಾಭಾರಂತಹ ದಾರ್ಶನಿಕರ ಪ್ರಯತ್ನಗಳನ್ನು ಈ ನಂಟಿನ ಹಿನ್ನೆಲೆಯಲ್ಲಿ ನಾವು ಕಾಣಬಹುದು. ಭಾರತೀಯ ಕಂಪ್ಯೂಟರ್ ವಿಜ್ಞಾನ ಕ್ಷೇತ್ರದ ಭೀಷ್ಮಪಿತಾಮಹ ಪ್ರೊ. ಆರ್. ನರಸಿಂಹನ್ ನೇತೃತ್ವದಲ್ಲಿ ನಮ್ಮ ಮೊದಲ ಕಂಪ್ಯೂಟರ್ TIFRAC ಸೃಷ್ಟಿಯ ಕೆಲಸ ೧೯೫೦ರ ದಶಕದಲ್ಲೇ ಪ್ರಾರಂಭವಾಗಿತ್ತು. ಸರಿಸುಮಾರು ಇದೇ ಸಮಯದಲ್ಲಿ ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲೂ ಕಂಪ್ಯೂಟರ್ ವಿಜ್ಞಾನ ಅಧ್ಯಯನದ ವಿಷಯಗಳಲ್ಲೊಂದಾಗಿ ಪ್ರಚಲಿತವಾಯಿತು.

ಇದರ ಬೆನ್ನಲ್ಲೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳೂ ಸಕ್ರಿಯವಾದವು. ವಾಯುಯಾನ, ಬೃಹತ್ ಕೈಗಾರಿಕೆ ಮುಂತಾದೆಡೆಗಳಂತೆ ಐಟಿ ಕ್ಷೇತ್ರದಲ್ಲೂ ಟಾಟಾ ಸಂಸ್ಥೆ ಪ್ರಾರಂಭಿಕ ಹಂತದಲ್ಲೇ ಭಾಗಿಯಾಗಿದ್ದು ವಿಶೇಷ. ೧೯೬೦-೮೦ರ ಆಸುಪಾಸಿನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಪಟ್ನಿ ಕಂಪ್ಯೂಟರ್ ಸಿಸ್ಟಮ್ಸ್, ಎಚ್‌ಸಿಎಲ್ ಟೆಕ್ನಾಲಜೀಸ್, ವಿಪ್ರೋ, ಇನ್‌ಫೋಸಿಸ್ -  ಹೀಗೆ ಹಲವು ಸಂಸ್ಥೆಗಳು ಕೆಲಸ ಪ್ರಾರಂಭಿಸಿದವು.

ನಮ್ಮಲ್ಲಿ ಲಭ್ಯವಿದ್ದ ಮಾನವ ಸಂಪನ್ಮೂಲವನ್ನೇ ಬಂಡವಾಳವನ್ನಾಗಿಟ್ಟುಕೊಂಡು ಬೆಳೆದ ಐಟಿ ಉದ್ದಿಮೆಯ ಪ್ರಾರಂಭಿಕ ಉದ್ದೇಶ ಹೊರದೇಶದ ಸಂಸ್ಥೆಗಳಲ್ಲಿ ಕೆಲಸಮಾಡಲು ಸಾಫ್ಟ್‌ವೇರ್ ತಂತ್ರಜ್ಞರನ್ನು ಒದಗಿಸುವುದಷ್ಟೇ ಆಗಿತ್ತು.

ಮಂಗಳವಾರ, ಆಗಸ್ಟ್ 23, 2016

ವರ್ಲ್ಡ್‌ವೈಡ್ ವೆಬ್: 25

ವಿಶ್ವವ್ಯಾಪಿ ಜಾಲದ (ವರ್ಲ್ಡ್‌ವೈಡ್ ವೆಬ್) ಇತಿಹಾಸದಲ್ಲಿ ೧೯೯೧ರ ಆಗಸ್ಟ್ ತಿಂಗಳಿಗೆ ಮಹತ್ವದ ಸ್ಥಾನವಿದೆ. ತಮ್ಮ ಆವಿಷ್ಕಾರದ ಕುರಿತು ಈ ಮಾಯಾಜಾಲದ ರೂವಾರಿ ಟಿಮ್ ಬರ್ನರ್ಸ್-ಲೀ ಮೊದಲಬಾರಿಗೆ ಬರೆದದ್ದು ಆ ತಿಂಗಳ ೬ರಂದು, ಮತ್ತು ವಿಶ್ವವ್ಯಾಪಿ ಜಾಲ ಇಡೀ ವಿಶ್ವಕ್ಕೆ ತೆರೆದುಕೊಂಡದ್ದು ೨೩ರಂದು. ಆ ಘಟನೆ ನಡೆದು ಇಂದಿಗೆ ೨೫ ವರ್ಷ. ಈ ಸಂದರ್ಭದಲ್ಲಿ ವಿಶ್ವವ್ಯಾಪಿ ಜಾಲದ ಹುಟ್ಟಿಗೆ ಕಾರಣವಾದ ಘಟನೆಗಳತ್ತ ಒಂದು ಹಿನ್ನೋಟ, ನಿಮಗಾಗಿ!

ಟಿ. ಜಿ. ಶ್ರೀನಿಧಿ
ನಮ್ಮ ಬದುಕಿನಲ್ಲಿ ಮಹತ್ವದ ಬದಲಾವಣೆಗಳನ್ನು ತಂದ ವಿಶ್ವವ್ಯಾಪಿ ಜಾಲ (ವರ್ಲ್ಡ್‌ವೈಡ್ ವೆಬ್) ನಮಗೆಲ್ಲರಿಗೂ ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಅಂತಲೇ ಹೆಚ್ಚು ಪರಿಚಯ. ಈ ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಎಂದರೇನು ಎಂದು ಕೇಳಿದಾಗ ಮಾತ್ರ ನಮ್ಮಲ್ಲಿ ಅನೇಕರಿಗೆ ಕೊಂಚ ಗೊಂದಲವಾಗುತ್ತದೆ. "ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಎಂದರೆ ಇಂಟರ್‌ನೆಟ್ ತಾನೆ?" ಎನ್ನುವುದು ಅವರಲ್ಲಿ ಬಹಳಷ್ಟು ಜನ ಕೇಳುವ ಪ್ರಶ್ನೆ.

ಅಲ್ಲ, ಈ ವಿಶ್ವವ್ಯಾಪಿ ಜಾಲ ಅಂತರಜಾಲದ ಒಂದು ಅಂಗ ಮಾತ್ರ. ವಿಶ್ವವ್ಯಾಪಿ ಜಾಲ ಹುಟ್ಟುವ ಮೊದಲೇ ಅಂತರಜಾಲ ಇತ್ತು. ಆದರೆ ಅದು ಆಗ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಮಾತ್ರವೇ ಹೆಚ್ಚಾಗಿ ಬಳಕೆಯಲ್ಲಿತ್ತು. ಸಾಮಾನ್ಯ ಜನತೆಗೆ ಆಗಿನ್ನೂ ಅದು ಅಷ್ಟಾಗಿ ಪರಿಚಿತವಾಗಿರಲಿಲ್ಲ.

ಇಂತಹ ಪರಿಸ್ಥಿತಿಯಿದ್ದಾಗ, ೧೯೮೦ರ ದಶಕದ ಪ್ರಾರಂಭದಲ್ಲಿ, ಟಿಮ್ ಬರ್ನರ್ಸ್ ಲೀ ಎಂಬ ತಂತ್ರಜ್ಞ ಸ್ವಿಟ್ಜರ್‌ಲೆಂಡಿನ ಜಿನೀವಾದಲ್ಲಿರುವ ಯೂರೋಪಿಯನ್ ಪಾರ್ಟಿಕಲ್ ಫಿಸಿಕ್ಸ್ ಲ್ಯಾಬೊರೇಟರಿಯಲ್ಲಿ (ಸರ್ನ್) ತಾತ್ಕಾಲಿಕವಾಗಿ ಕೆಲಸಕ್ಕೆ ಸೇರಿದರು.

ಶುಕ್ರವಾರ, ಆಗಸ್ಟ್ 19, 2016

ವಿಶ್ವ ಛಾಯಾಗ್ರಹಣ ದಿನ ವಿಶೇಷ: ಕ್ಲಿಕ್ ಮಾಡಿ ನೋಡಿ!

ಕಂಪ್ಯೂಟರ್ ಕ್ಷೇತ್ರದಲ್ಲಿ ಜನಪ್ರಿಯವಾಗಿರುವ 'ಓಪನ್ ಸೋರ್ಸ್' ಪರಿಕಲ್ಪನೆಯ ರೂಪವೊಂದನ್ನು ೧೭೭ ವರ್ಷಗಳ ಹಿಂದೆಯೇ ಪರಿಚಯಿಸಿದ್ದು ಡಿಗೇರೋಟೈಪ್ ತಂತ್ರಜ್ಞಾನ. ಲೂಯಿ ಡಿಗೇರ್ ರೂಪಿಸಿದ ಈ ತಂತ್ರಜ್ಞಾನದ ಹಕ್ಕುಸ್ವಾಮ್ಯವನ್ನು ೧೮೩೯ರಲ್ಲಿ ಫ್ರೆಂಚ್ ಸರಕಾರ ಕೊಂಡು ಅದನ್ನು "ಮನುಕುಲಕ್ಕೆ ಕೊಡುಗೆ"ಯಾಗಿ ಸಮರ್ಪಿಸಿದ ದಿನವೇ ಆಗಸ್ಟ್ ೧೯. ಇದೀಗ ವಿಶ್ವ ಛಾಯಾಗ್ರಹಣ ದಿನವೆಂದು ನಾವು ಗುರುತಿಸುವುದು ಇದೇ ದಿನವನ್ನು. ಛಾಯಾಗ್ರಹಣದ ವಿಕಾಸ ಕುರಿತು ನಾವು ಹಿಂದೊಮ್ಮೆ ಪ್ರಕಟಿಸಿದ್ದ ಲೇಖನವನ್ನು ಈ ಸಂದರ್ಭದಲ್ಲಿ ಮರುಪ್ರಕಟಿಸುತ್ತಿದ್ದೇವೆ.
ಟಿ. ಜಿ. ಶ್ರೀನಿಧಿ

ಮನುಷ್ಯ ತನ್ನ ಕಣ್ಣಮುಂದಿನ ದೃಶ್ಯವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಉದ್ದೇಶದಿಂದ ಮಾಡದ ಪ್ರಯತ್ನವೇ ಇಲ್ಲ ಎನ್ನಬಹುದೇನೋ. ಶಿಲಾಯುಗದ ರೇಖಾಚಿತ್ರಗಳಿಂದ ಪರಿಣತರ ಕಲಾಕೃತಿಗಳವರೆಗೆ ಅನೇಕ ಸೃಷ್ಟಿಗಳ ಉದ್ದೇಶ ಇದೇ ಆಗಿರುವುದನ್ನು ನಾವು ಗಮನಿಸಬಹುದು.

ಆದರೆ ಇಂತಹ ಪ್ರಯತ್ನಗಳಿಗೆ ಒಂದು ದೊಡ್ಡ ಸಮಸ್ಯೆ ಅಡ್ಡಬರುತ್ತಿತ್ತು - ಕಂಡದ್ದನ್ನು ಕಂಡಂತೆ ಚಿತ್ರಿಸಲು ಎಲ್ಲರಿಗೂ ಬರುವುದಿಲ್ಲ, ಹಾಗೂ ನಮಗೆ ಬಂದಂತೆ ಚಿತ್ರಿಸಿದರೆ ಅದು ನಾವು ಕಂಡದ್ದನ್ನು ನಿಖರವಾಗಿ ಪ್ರತಿನಿಧಿಸುವುದಿಲ್ಲ!

ಹಾಗಾದರೆ ನಾವು ಕಂಡದ್ದನ್ನು ಕಂಡಹಾಗೆಯೇ ದಾಖಲಿಸಿಟ್ಟುಕೊಳ್ಳುವುದು ಹೇಗೆ? ಈ ನಿಟ್ಟಿನಲ್ಲಿ ನಡೆದ ಪ್ರಯತ್ನಗಳು ಒಂದೆರಡಲ್ಲ.

ಇಂತಹ ಪ್ರಯತ್ನಗಳಲ್ಲೊಂದಾದ 'ಕ್ಯಾಮೆರಾ ಅಬ್ಸ್‌ಕ್ಯೂರಾ' (Camera Obscura, ಪಿನ್‌ಹೋಲ್ ಕ್ಯಾಮೆರಾ ಎಂದೂ ಪರಿಚಿತ) ನಮ್ಮ ಎದುರಿನ ದೃಶ್ಯದ ತಲೆಕೆಳಗಾದ ರೂಪವನ್ನು ಪರದೆಯ ಮೇಲೆ ಚಿಕ್ಕದಾಗಿ ಮೂಡಿಸಿ ಚಿತ್ರಕಾರರಿಗೆ ಅದನ್ನು ನಕಲು ಮಾಡಿಕೊಳ್ಳಲು ನೆರವಾಗುತ್ತಿತ್ತು. ಬೇಕಾದ ದೃಶ್ಯವನ್ನು ಕ್ಷಿಪ್ರವಾಗಿ ಬರೆದುಕೊಳ್ಳುವ ಕಲಾವಿದರಿಗೇನೋ ಸರಿ, ಆದರೆ ಚಿತ್ರಬಿಡಿಸಲು ಬಾರದವರಿಗೆ ಇದರಿಂದ ಯಾವ ಉಪಯೋಗವೂ ಆಗುತ್ತಿರಲಿಲ್ಲ.

ಚಿತ್ರಬಿಡಿಸಲು ಬಾರದವರೂ ಈ ತಂತ್ರ ಬಳಸಬೇಕೆಂದರೆ ಪರದೆಯ ಮೇಲೆ ಮೂಡುವ ಚಿತ್ರ ತನ್ನಷ್ಟಕ್ಕೆ ತಾನೇ ಒಂದೆಡೆ ದಾಖಲಾಗುವಂತಿರಬೇಕು. ಹಾಗೆಂದು ಯೋಚಿಸಿ ಕಾರ್ಯಪ್ರವೃತ್ತನಾದವನು ಫ್ರಾನ್ಸಿನ ನಿಸೆಫೋರ್ ನಿಯಪ್ಸ್ ಎಂಬ ವ್ಯಕ್ತಿ. ಕ್ಯಾಮೆರಾ ಅಬ್ಸ್‌ಕೂರಾದಲ್ಲಿ ಚಿತ್ರಕಾರರಿಗಾಗಿ ಇದ್ದ ಪರದೆಯ ಜಾಗದಲ್ಲಿ ರಾಸಾಯನಿಕವಾಗಿ ಸಂಸ್ಕರಿಸಿದ ಲೋಹದ ಫಲಕವನ್ನು ತಂದು ಕೂರಿಸಿ 'ಹೀಲಿಯೋಗ್ರಫಿ' ಎಂಬ ತಂತ್ರಜ್ಞಾನವನ್ನು ರೂಪಿಸಿದ್ದು ಇವನ ಸಾಧನೆ.

ಗುರುವಾರ, ಆಗಸ್ಟ್ 11, 2016

ಹಾಲ್ದೊಡ್ಡೇರಿ ಹೇಳುತ್ತಾರೆ, "ಬದಲಾವಣೆಗಳು ನಮ್ಮ ಭಾಗವಾಗಬೇಕು"

ಇಜ್ಞಾನ ಡಾಟ್ ಕಾಮ್‌ ಸಹಯೋಗದಲ್ಲಿ ಮೈಸೂರಿನ ಭಾರತೀ ಪ್ರಕಾಶನ ಇತ್ತೀಚೆಗೆ ಪ್ರಕಟಿಸಿರುವ ಕೃತಿ 'ಟೆಕ್ಸ್ಟ್ ಬುಕ್ ಅಲ್ಲ, ಇದು ಟೆಕ್ ಬುಕ್!' ತಂತ್ರಜ್ಞಾನ ಕ್ಷೇತ್ರದ ಹತ್ತಾರು ವಿಷಯಗಳನ್ನು ಸರಳ ಭಾಷೆಯಲ್ಲಿ ತಿಳಿಸುವ ಈ ಪುಸ್ತಕಕ್ಕೆ ಹೆಸರಾಂತ ವಿಜ್ಞಾನ ಸಂವಹನಕಾರ, ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ ಬರೆದ ಮುನ್ನುಡಿಯ ಪೂರ್ಣಪಾಠ ಇಲ್ಲಿದೆ. ಟೆಕ್ ಬುಕ್ ಕೊಳ್ಳಲು ಭೇಟಿಕೊಡಿ: tinyurl.com/ejnanatechbook

ಸುಧೀಂದ್ರ ಹಾಲ್ದೊಡ್ದೇರಿ       

ಕನ್ನಡದಲ್ಲಿನ ವಿಜ್ಞಾನ ಬರವಣಿಗೆಗೆ ಸುದೀರ್ಘ ಇತಿಹಾಸವಿದೆ.  ಮೊದಲ ಪೀಳಿಗೆಯ ಬೆಳ್ಳಾವೆ ವೆಂಕಟನಾರಣಪ್ಪ- ಆರ್.ಎಲ್. ನರಸಿಂಹಯ್ಯ, ಎರಡನೆಯ ಪೀಳಿಗೆಯ ಜಿ.ಟಿ.ನಾರಾಯಣರಾವ್-ಜೆ.ಆರ್.ಲಕ್ಷ್ಮಣರಾವ್, ಮೂರನೆಯ ಪೀಳಿಗೆಯ ನಾಗೇಶ ಹೆಗಡೆ-ಟಿ.ಆರ್.ಅನಂತರಾಮು ... ಹೀಗೆ ಪರಂಪರಾಗತವಾಗಿ ವಿಜ್ಞಾನ ಸಾಹಿತ್ಯ, ಅದರಲ್ಲೂ ವಿಶೇಷವಾಗಿ ಇಂದು ಪ್ರಸ್ತುತವಾದ ತಂತ್ರಜ್ಞಾನ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಮಹನೀಯರಿವರು.  ಆಯಾ ಪೀಳಿಗೆಯಲ್ಲಿಯೇ ಅನೇಕ ಬರಹಗಾರರು ವಿಜ್ಞಾನ ಸಾಹಿತ್ಯದ ಅಭಿವೃದ್ಧಿಗೆ ಬಹುದೊಡ್ಡ ಕಾಣಿಕೆ ನೀಡಿದ್ದಾರೆ, ಪ್ರಾಸಂಗಿಕವಾಗಿ ಕೆಲವರ ಹೆಸರನ್ನು ಮಾತ್ರ ಇಲ್ಲಿ ಉಲ್ಲೇಖಿಸಿದ್ದೇನೆ.  ಈ ನಿಟ್ಟಿನಲ್ಲಿ ಹೊಸ ಬರಹಗಾರರೆಂದು ಹೇಳಲಾಗದಷ್ಟು ಹಳಬರಾಗಿರುವ, ತಮ್ಮ ಹುಲುಸಾದ ವಿಜ್ಞಾನ ಫಸಲಿನ ಮೂಲಕ ಕನ್ನಡ ಓದುಗರಿಗೆ, ಪ್ರಮುಖವಾಗಿ ಕನ್ನಡ ದಿನಪತ್ರಿಕೆಗಳ ವಾಚಕರಿಗೆ ಪರಿಚಿತರಾಗಿರುವವರು ಟಿ.ಜಿ.ಶ್ರೀನಿಧಿ.  ಹಿಂದಿನ ಶ್ರೇಷ್ಠ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸಲು ಪಣ ತೊಟ್ಟವರಂತೆ ಅವರು ನಿಖರ, ಸ್ಪಷ್ಟ ಹಾಗೂ ಸರಳ ಭಾಷೆಯಲ್ಲಿ ವಿಜ್ಞಾನ ಕುರಿತು ನಿರಂತರವಾಗಿ ಬರೆಯುತ್ತಿದ್ದಾರೆ.

‘ಟೆಕ್ ಬುಕ್’ ಹೆಸರಿನ ‘ಟೆಕ್ಸ್ಟ್ ಬುಕ್’ ಅಲ್ಲದ ಈ ಪುಸ್ತಕವನ್ನು ಕೈಯ್ಯಲ್ಲಿ ಹಿಡಿದೊಡನೆ ನಮ್ಮ ಶ್ರೀನಿಧಿ ಅಪ್ಪಟ ಮೈಸೂರಿನವರೆನ್ನುವುದಕ್ಕೆ ನನಗೆ ಬೇರೆ ಸಾಕ್ಷಿ ಬೇಕಿರಲಿಲ್ಲ.  ಮನೆಯ ಥ್ರೀಡಿ ಪ್ರಿಂಟರು ಅವರ ಕಲ್ಪನೆಗೆ ಸಿಲುಕಿ ಕೇವಲ ಮೈಸೂರುಪಾಕನ್ನೇ ಮುದ್ರಿಸಿಕೊಡುತ್ತದೆ. ಚಾಲಕರಹಿತ, ಸ್ವನಿಯಂತ್ರಿತ, ಪುಟಾಣಿ ವಿಮಾನಗಳಾದ ‘ಡ್ರೋನ್’ಗಳ ಉಪಯೋಗದ ಬಗ್ಗೆ ಬರೆಯುವಾಗ ಅವರ ಕಣ್ಣಿಗೆ ಪೀಡ್ಝಾ ಕಾಣುವುದಿಲ್ಲ, ಮಸಾಲೆ ದೋಸೆ ಅವರ ದೃಷ್ಟಿಗೆ ಬೀಳುತ್ತದೆ.  ಹಾಗೆಯೇ ‘ಇಂಟರ್ ನೆಟ್ ಆಫ್ ಥಿಂಗ್ಸ್’ ಕುರಿತ ಲೇಖನದಲ್ಲಿ ಅವರ ಫ್ರಿಜ್ಜು ತರಿಸಿಕೊಳ್ಳುವುದು ಕೊತ್ತಂಬರಿ ಸೊಪ್ಪನ್ನೇ ಹೊರತು ಚೀಸ್ ಅಲ್ಲ.  ಈ ಮಾತುಗಳನ್ನಿಲ್ಲಿ ವಿಶೇಷವಾಗಿ ಹೇಳಲೇಬೇಕಾಯಿತು.  ಶ್ರೀನಿಧಿಯವರಿಗೆ ಎಲ್ಲ ವಿಷಯಗಳನ್ನೂ ‘ಲೋಕಲೈಸ್’ ಮಾಡಿಕೊಳ್ಳುವ ವಿಶೇಷ ಸಾಮರ್ಥ್ಯವಿದೆಯೆಂಬುದರ ಸಾಬೀತಿಗೆ ಮೇಲಿನ ಉದಾಹರಣೆಗಳೇ ಸಾಕು.

ಮಂಗಳವಾರ, ಆಗಸ್ಟ್ 9, 2016

ಸಿಮ್ ಕಾರ್ಡಿನ ಕಾಲು ಶತಮಾನ

ಟಿ. ಜಿ. ಶ್ರೀನಿಧಿ


ಮೊಬೈಲ್ ಸಂಪರ್ಕ ಪಡೆಯಲು ಏನೆಲ್ಲ ಬೇಕು? ಮೊದಲಿಗೆ ಒಂದು ಮೊಬೈಲ್ ಫೋನ್ ಬೇಕು, ಆಮೇಲೊಂದು ಸಿಮ್ ಕಾರ್ಡ್ ಬೇಕು!

ಹೌದು, ನಿಮ್ಮ ಮೊಬೈಲ್ ಫೋನು ಯಾವುದೇ ಇರಲಿ - ಸ್ಮಾರ್ಟ್ ಆಗಿರಲಿ ಇಲ್ಲದಿರಲಿ - ಜಿಎಸ್‌ಎಂ ತಂತ್ರಜ್ಞಾನ ಬಳಸುವುದಾದರೆ ಅದರಲ್ಲೊಂದು ಸಿಮ್ ಅಂತೂ ಇರಲೇಬೇಕು. 'ಸಿಮ್' ಎಂಬ ಹೆಸರು 'ಸಬ್‌ಸ್ಕ್ರೈಬರ್  ಐಡೆಂಟಿಫಿಕೇಶನ್ ಮಾಡ್ಯೂಲ್' (ಚಂದಾದಾರರನ್ನು ಗುರುತಿಸುವ ಘಟಕ) ಎನ್ನುವುದರ ಹ್ರಸ್ವರೂಪ. ಹೆಸರೇ ಹೇಳುವಂತೆ ಚಂದಾದಾರರನ್ನು ಗುರುತಿಸಿ ಮೊಬೈಲ್ ಜಾಲದೊಡನೆ ಅವರ ಸಂಪರ್ಕ ಏರ್ಪಡಿಸುವಲ್ಲಿ ಈ ಪುಟ್ಟ ಬಿಲ್ಲೆಯದು ಮಹತ್ವದ ಪಾತ್ರ.

ಈ ವಿಶಿಷ್ಟ ಸಾಧನ ಸೃಷ್ಟಿಯಾಗಿ ಇದೀಗ ಇಪ್ಪತ್ತೈದು ವರ್ಷ. ತಂತ್ರಜ್ಞಾನ ಲೋಕದ ಮಟ್ಟಿಗೆ ಇದೊಂದು ಬಹುದೊಡ್ಡ ಅವಧಿ. ಇಷ್ಟೆಲ್ಲ ಸಮಯದವರೆಗೂ ಚಾಲ್ತಿಯಲ್ಲಿ ಉಳಿದುಕೊಂಡಿರುವುದು ಸಿಮ್‌ನ ಹಿರಿಮೆಯೇ ಸರಿ!
badge