ಮಂಗಳವಾರ, ಜೂನ್ 28, 2011

ಜಾಲತಾಣದ ಬಾಲದ ಕುರಿತು

ಟಿ ಜಿ ಶ್ರೀನಿಧಿ

ವಿಶ್ವವ್ಯಾಪಿ ಜಾಲದಲ್ಲಿ ಯಾವುದೋ ಮಾಹಿತಿ ಹುಡುಕಬೇಕೇ, ಗೂಗಲ್ ಡಾಟ್ ಕಾಮ್‌ಗೆ ಹೋಗಿ; ಇವತ್ತಿನ ಉದಯವಾಣಿ ಪತ್ರಿಕೆ ನೋಡಬೇಕೇ, ಉದಯವಾಣಿ ಡಾಟ್ ಕಾಮ್ ನೋಡಿ; 'ವಿಜ್ಞಾಪನೆ' ಅಂಕಣದ ಹಳೆಯ ಬರೆಹಗಳನ್ನು ಓದಬೇಕೇ, ಇಜ್ಞಾನ ಡಾಟ್ ಕಾಮ್ ನೋಡಿ...

ವಿಶ್ವವ್ಯಾಪಿ ಜಾಲಕ್ಕೂ ಡಾಟ್ ಕಾಮ್‌ಗಳಿಗೂ ಇರುವ ಅವಿನಾಭಾವ ಸಂಬಂಧ ಸುಲಭವಾಗಿ ಹೇಳಿ ಮುಗಿಸುವಂಥದ್ದಲ್ಲ. ವಿಶ್ವವ್ಯಾಪಿ ಜಾಲದಲ್ಲಿರುವ ತಾಣಗಳನ್ನು (ವೆಬ್‌ಸೈಟ್) ಬಹಳಷ್ಟು ಜನ ಗುರುತಿಸುವುದು ಡಾಟ್‌ಕಾಮ್‌ಗಳೆಂದೇ.

ಜಾಲತಾಣ, ಮತ್ತದರ ವಿಳಾಸ
ವಿಶ್ವವ್ಯಾಪಿ ಜಾಲದ ಮೂಲಕ ಲಭ್ಯವಿರುವ ಮಾಹಿತಿ ನಮಗೆ ದೊರಕುವುದು ವೆಬ್‌ಸೈಟ್ ಅಥವಾ ಜಾಲತಾಣಗಳ ಮೂಲಕ. ಮೇಲಿನ ಉದಾಹರಣೆಯಲ್ಲಿ ಹೇಳಿದ ಗೂಗಲ್ ಡಾಟ್ ಕಾಮ್, ಉದಯವಾಣಿ ಡಾಟ್ ಕಾಮ್, ಇಜ್ಞಾನ ಡಾಟ್ ಕಾಮ್ ಇವೆಲ್ಲ ಜಾಲತಾಣಕ್ಕೆ ಉದಾಹರಣೆಗಳು.

ಜಾಲತಾಣಗಳ ವಿಳಾಸಕ್ಕೆ ಡಾಟ್ ಕಾಮ್ ಎಂಬ ಪ್ರತ್ಯಯ ಸೇರಿದಂದಿನಿಂದ ಇಂದಿನವರೆಗಿನ ಕಾಲು ಶತಮಾನದ ಅವಧಿಯಲ್ಲಿ ಡಾಟ್ ಕಾಮ್ ಎನ್ನುವುದು ಜಾಲತಾಣದ ಹೆಸರಿಗೆ ಪರ್ಯಾಯವಾಗಿ ಬೆಳೆದುಬಿಟ್ಟಿದೆ, ನಿಜ. ಆದರೆ ವಾಸ್ತವದಲ್ಲಿ ಈ ಡಾಟ್ ಕಾಮ್ ಎನ್ನುವುದು ಜಾಲತಾಣಗಳ ವಿಳಾಸದ ಒಂದು ಭಾಗ ಮಾತ್ರ.

ವಿಶ್ವವ್ಯಾಪಿ ಜಾಲದಲ್ಲಿ ಲಭ್ಯವಿರುವ ಕೋಟ್ಯಂತರ ಜಾಲತಾಣಗಳನ್ನು ಪ್ರತ್ಯೇಕವಾಗಿ ಗುರುತಿಸಲು ಅನುವುಮಾಡಿಕೊಡುವ ವಿಳಾಸವನ್ನು ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ ಅಥವಾ ಯುಆರ್‌ಎಲ್ ಎಂದು ಹೆಸರು.

www.ejnana.com - ಇದು ಯುಆರ್‌ಎಲ್‌ಗೊಂದು ಉದಾಹರಣೆ. ಈ ವಿಳಾಸದ ಪ್ರಾರಂಭದಲ್ಲಿರುವ www ಎಂಬ ಸಂಕೇತ ಈ ತಾಣ ವಿಶ್ವವ್ಯಾಪಿ ಜಾಲದ ಮುಖಾಂತರ ಲಭ್ಯವಿದೆ ಎನ್ನುವುದನ್ನು ಸೂಚಿಸುತ್ತದೆ. ಇನ್ನು ejnana ಎನ್ನುವುದು ಜಾಲತಾಣದ ಹೆಸರು. ಕೊನೆಯ ಬಾಲಂಗೋಚಿಯೇ ಡಾಟ್ ಕಾಮ್.

ಸೋಮವಾರ, ಜೂನ್ 27, 2011

ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ!

ಬೇಳೂರು ಸುದರ್ಶನ

ಇದು ಲೀಪ್ರೋಚ್!
2006ರ ಒಂದು ದಿನ. ಕೇಪ್ ಟೌನ್ ವಿಶ್ವವಿದ್ಯಾಲಯದ ಜೀವಶಾಸ್ತ್ರ ವಿಭಾಗದ ಮೈಕ್ ಪಿಕರ್ ಮತ್ತು ಡಾ|| ಜೊನಾಥನ್ ಕೋಲ್ವಿಲ್ಲೆ ಹತ್ತಿರದ ಸಿಲ್ವರ್ ಮೈನ್ ಪ್ರಾಕೃತಿಕ ಮೀಸಲು ಪ್ರದೇಶದಲ್ಲಿ ಬಲೆ ಬೀಸುತ್ತಿದ್ದರು. ಯಾವುದಾದರೂ ಹಾರುವ ಕೀಟ ಸಿಗಬಹುದೇ ಎಂದು ಕಾಯುತ್ತಿದ್ದರು. ಹೀಗೇ ಸುಮ್ಮನೇ ಅವರ ಬಲೆಗೆ ಸಿಕ್ಕಿದ್ದು... ಜಿಗಿಯುವ ಜಿರಲೆ!

ಮೊದಲು ಇದೇನು ಮಿಡತೆಯೇ ಎಂದು ನೋಡಿದ ಅವರಿಗೆ, ಅದು ಜಿರಲೆ ಎಂದು ಗೊತ್ತಾದಾಗ ಅಚ್ಚರಿ. ಸರಿ, ಅದನ್ನು ಪ್ರಯೋಗಾಲಯಕ್ಕೆ ತಂದು ನಿಕಟ ಪರೀಕ್ಷೆಗೆ ಒಡ್ಡಿದಾಗ ಅದು ಈವರೆಗೂ ನೋಡಿರದ ಜಿರಲೆಯ ಜೀವಜಾತಿ ಎಂಬುದು ಖಚಿತವಾಯಿತು. ಆಮೇಲಿನ ನಾಲ್ಕು ವರ್ಷಗಳ ಕಾಲ ಅವರಿಬ್ಬರ ಸಂಶೋಧನಾ ಸಮಯವೆಲ್ಲ ಹಾರುವ ಜಿರಲೆಗೇ ಮೀಸಲಾಯಿತು. 2010ರಲ್ಲಿ ಅವರು ಈ ಜಿರಲೆಯ ಬಗ್ಗೆ ಸಂಶೋಧನಾ ಲೇಖನವನ್ನು ಪ್ರಕಟಿಸಿದರು. `ಸಾಲ್ಟೋಬ್ಲಾಟೆಲ್ಲಾ (ಹಾರುವ ಚಿಕ್ಕ ಜಿರಲೆ) ಮಾಂಟಿಸ್ ಟ್ಯಾಬುಲಾರಿಸ್ (ಟೇಬಲ್ ಮೌಂಟನ್ ರಾಷ್ಟ್ರೀಯ ಉದ್ಯಾನದಲ್ಲಿ ಸಿಕ್ಕಿದ್ದಕ್ಕಾಗಿ)' ಎಂಬ ನಾಮಕರಣದೊಂದಿಗೆ ವಸುಂಧರೆ ಜೀವಜಾಲದ ಇನ್ನೊಂದು ಕೌತುಕ ಪ್ರಕಟವಾಯಿತು. ಕಪ್ಪೆಯಂತೆ ಜಿಗಿಯುವ ಈ ಜಿರಲೆಗೆ ಲೀಪ್ರೋಚ್ (ಲೀಪ್ – ಕುಪ್ಪಳಿಸು) ಎಂಬ ಹೆಸರನ್ನೂ ಇಡಲಾಗಿದೆ.

ಬುಧವಾರ, ಜೂನ್ 22, 2011

'ಆಗಸದ ಅಲೆಮಾರಿಗಳು' ಕೃತಿಗೆ ಅಕಾಡೆಮಿ ಗೌರವ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೦೯ನೇ ಸಾಲಿನ ಪುಸ್ತಕ ಬಹುಮಾನ ವಿತರಣಾ ಸಮಾರಂಭ ಜೂನ್ ೨೯, ೨೦೧೧ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ.

ಡಾ| ಬಿ. ಎಸ್. ಶೈಲಜಾ ಅವರು ಈ ಸಂದರ್ಭದಲ್ಲಿ ವಿಜ್ಞಾನ ಸಾಹಿತ್ಯ ಪ್ರಕಾರದ ಬಹುಮಾನ ಸ್ವೀಕರಿಸಲಿದ್ದಾರೆ. ಅವರ 'ಆಗಸದ ಅಲೆಮಾರಿಗಳು' ಕೃತಿಗಾಗಿ ಈ ಗೌರವ ಲಭಿಸಿದೆ.

ಡಾ| ಶೈಲಜಾ ಅವರಿಗೆ ಇಜ್ಞಾನ ಡಾಟ್ ಕಾಮ್ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.

ಮಂಗಳವಾರ, ಜೂನ್ 21, 2011

ಹ್ಯಾಕಿಂಗ್ ಹಾವಳಿ

ಟಿ ಜಿ ಶ್ರೀನಿಧಿ

ಈಚಿನ ಕೆಲದಿನಗಳಿಂದ ಗಣಕ ಲೋಕದಲ್ಲೆಲ್ಲ ಹ್ಯಾಕಿಂಗ್‌ನದೇ ಸುದ್ದಿ. ಸೋನಿ, ಲಾಕ್‌ಹೀಡ್ ಮಾರ್ಟಿನ್, ಹೋಂಡಾ, ನಿಂಟೆಂಡೋ, ಸಿಟಿಬ್ಯಾಂಕ್ - ಹೀಗೆ ದೊಡ್ಡದೊಡ್ಡ ಸಂಸ್ಥೆಗಳೆಲ್ಲ ಒಂದರ ಹಿಂದೊಂದರಂತೆ ಹ್ಯಾಕರ್‌ಗಳ ದಾಳಿಗೆ ತುತ್ತಾಗುತ್ತಿವೆ. ತನ್ನ ಪ್ಲೇಸ್ಟೇಷನ್ ಜಾಲದ ಲಕ್ಷಾಂತರ ಬಳಕೆದಾರರಿಗೆ ಸಂಬಂಧಿಸಿದ ಮಾಹಿತಿ ಹ್ಯಾಕರ್‌ಗಳ ಕೈಸೇರಿದ್ದನ್ನು ಒಪ್ಪಿಕೊಂಡು ಬಹಿರಂಗವಾಗಿ ಕ್ಷಮೆಯಾಚಿಸುವಂತಹ ಪರಿಸ್ಥಿತಿ ಸೋನಿಯಂತಹ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆಗೂ ಬಂದಿದೆ. ಅಷ್ಟೇ ಏಕೆ, ಗಣಕಗಳಲ್ಲಿರುವ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಬೇರೆ ಸಂಸ್ಥೆಗಳಿಗೆಲ್ಲ ನೆರವುನೀಡುವ ಆರ್‌ಎಸ್‌ಎ ಸಂಸ್ಥೆಗೂ ಹ್ಯಾಕರ್‌ಗಳ ಕಾಟ ತಪ್ಪಿಲ್ಲ.

ಈ ಎಲ್ಲ ಹ್ಯಾಕಿಂಗ್ ದಾಳಿಗಳಿಂದಾಗಿ ರಹಸ್ಯ ಕಡತಗಳು, ಹಣಕಾಸು ವ್ಯವಹಾರಕ್ಕೆ ಸಂಬಂಧಪಟ್ಟ ಮಾಹಿತಿ, ಬಳಕೆದಾರರ ವೈಯಕ್ತಿಕ ವಿವರಗಳು ಸೇರಿದಂತೆ ಅಪಾರ ಪ್ರಮಾಣದ ಮಾಹಿತಿ ಈಗಾಗಲೇ ಅಪಾತ್ರರ ಕೈಸೇರಿದೆ ಎನ್ನಲಾಗಿದೆ. ಹೀಗೆ ಕಳುವಾದ ಮಾಹಿತಿಯನ್ನು ಬಳಸಿಕೊಂಡು ದುಷ್ಕರ್ಮಿಗಳು ಯಾವಾಗ ಏನು ಮಾಡುತ್ತಾರೋ ಎಂದು ಗಾಬರಿಯಿಂದ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಷ್ಟಕ್ಕೂ ಈ ಹ್ಯಾಕಿಂಗ್ ಎಂದರೇನು?

ಸೋಮವಾರ, ಜೂನ್ 20, 2011

ಪುಸ್ತಕ ಬಿಡುಗಡೆ - "ಭೂಮಿಗುದುರಿತೆ ಜೀವ?"


ಶ್ರೀ ಕೊಳ್ಳೇಗಾಲ ಶರ್ಮ ಅವರ "ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು" ಕೃತಿ ಜೂನ್ ೨೫ರಂದು ಸಂಜೆ ಲೋಕಾರ್ಪಣೆಗೊಳ್ಳಲಿದೆ. ಬೆಂಗಳೂರಿನ ಜೆ. ಸಿ. ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಓದುಗರಿಗೆ ತಮ್ಮ ನೆಚ್ಚಿನ ವಿಜ್ಞಾನ ಬರಹಗಾರರನ್ನೆಲ್ಲ ಒಟ್ಟಿಗೆ ಭೇಟಿಯಾಗುವ ಅವಕಾಶ ಒದಗಿಸಲಿದೆ. ಇದೇ ಸಂದರ್ಭದಲ್ಲಿ ಹಿರಿಯ ವಿಜ್ಞಾನ ಬರಹಗಾರರಾದ ಪ್ರೊ. ಅಡ್ಯನಡ್ಕ ಕೃಷ್ಣಭಟ್, ಪ್ರೊ. ಜೆ. ಆರ್. ಲಕ್ಷ್ಮಣರಾವ್ ಹಾಗೂ ನವಕರ್ನಾಟಕ ಪ್ರಕಾಶನದ ಶ್ರೀ ಆರ್. ಎಸ್. ರಾಜಾರಾಮ್ ಅವರನ್ನು ಪೆನ್ ಸರ್ಕಲ್ ಅಂತರಜಾಲ ಬಳಗದ ವತಿಯಿಂದ ಗೌರವಿಸಲಾಗುವುದು.

ಹೆಚ್ಚಿನ ವಿವರಗಳಿಗಾಗಿ ಆಹ್ವಾನ ಪತ್ರಿಕೆಯ ಮೇಲೆ ಕ್ಲಿಕ್ ಮಾಡಿ.

ಶುಕ್ರವಾರ, ಜೂನ್ 17, 2011

ಮಳೆಗಾಡಿನ ಬಿರುಗಾಳಿ

ಪಶ್ಚಿಮಘಟ್ಟದ ಅರಣ್ಯ ಪ್ರದೇಶವನ್ನು ವಿಶ್ವಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲು ಒಪ್ಪದ ರಾಜ್ಯ ಸರಕಾರದ ನಿಲುವು ಸಾಕಷ್ಟು ವಾದವಿವಾದಗಳನ್ನು ಹುಟ್ಟುಹಾಕಿದೆ. ಈ ಕುರಿತು ಹಿರಿಯ ವಿಜ್ಞಾನ ಲೇಖಕ ಶ್ರೀ ಟಿ. ಆರ್. ಅನಂತರಾಮುರವರ ಅಭಿಪ್ರಾಯಗಳು ಇಲ್ಲಿವೆ...
ವಿಶ್ವಪರಂಪರಾ ತಾಣಗಳ ಪಟ್ಟಿಯಲ್ಲಿ ಪಶ್ಚಿಮಘಟ್ಟದಲ್ಲಿ ಗುರುತಿಸಿರುವ ಹತ್ತು ತಾಣಗಳನ್ನು ಕೈಬಿಡಿ ಎಂದು ಕರ್ನಾಟಕ ಸರ್ಕಾರ ಯುನೆಸ್ಕೋಗೆ ಒತ್ತಾಯ ಮಾಡಿರುವುದನ್ನು ನೋಡಿದರೆ ಬಹುಶಃ ಸರ್ಕಾರದ ಯಾರೊಬ್ಬರಿಗೂ ವಿಶ್ವಪರಂಪರಾತಾಣದ ಬಗ್ಗೆ ಮೂಲ ಪರಿಕಲ್ಪನೆಯೇ ಇಲ್ಲ ಎನ್ನಿಸುತ್ತದೆ.

ಇದಕ್ಕಿಂತ ಹೆಚ್ಚಿನ ಅಚ್ಚರಿ ಮೂಡಿಸಿರುವುದು ೧೯೮೬ರಲ್ಲಿ ಯುನೆಸ್ಕೋ `ಮನುಷ್ಯ ಮತ್ತು ಜೀವಿಗೋಳ' (ಮ್ಯಾನ್ ಅಂಡ್ ಬಯೋಸ್ಪಿಯರ್) ಯೋಜನೆಯಡಿ ಈಗಾಗಲೇ ಭಾರತದಲ್ಲಿ ೧೭ ತಾಣಗಳನ್ನು ಗುರುತಿಸಿ, ಆ ಪೈಕಿ ನಮ್ಮ ನೀಲಗಿರಿಯ ೫,೫೨೦ ಚದರ ಕಿಲೋ ಮೀಟರ್ ಪ್ರದೇಶವನ್ನು (ಬಂಡೀಪುರ, ನಾಗರಹೊಳೆ, ವೈನಾಡು, ಸಿರೂರು ಪರ್ವತ ಸೇರಿದಂತೆ) ಜೀವಿಗೋಳದ ರಕ್ಷಿತಪ್ರದೇಶವೆಂದು ಸಾರಿದೆ. ಇಲ್ಲೂ ಕೇಂದ್ರ ಸರ್ಕಾರವೇ ಯುನೆಸ್ಕೋ ಗಮನ ಸೆಳೆದಿತ್ತು. ಈಗ ಈ ತಾಣಗಳಲ್ಲಿ ವ್ಯಾಪಕ ಕಾರ್ಯಕ್ರಮಗಳನ್ನು ಯುನೆಸ್ಕೋ ಭಾರತದ ನೆರವಿನೊಂದಿಗೆ ಕೈಗೊಂಡಿದೆ. ಈ ಕಾರ್ಯಕ್ರಮದಡಿ ಮನುಷ್ಯ ಮತ್ತು ನಿಸರ್ಗದ ಮಧ್ಯೆ ಎರಡಕ್ಕೂ ಗಾಸಿಯಾಗದಂತೆ ನಾವು ಜೀವಿ ಪರಿಸ್ಥಿತಿಯನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದೂ ಒಂದು. ಇನ್ನೊಂದು ಇಂದಿನ ನಮ್ಮ ಚಟುವಟಿಕೆಗಳಿಗೆ ನಾಳೆ ನಿಸರ್ಗ ಹೇಗೆ ಸ್ಪಂದಿಸುತ್ತದೆ ಎಂಬ ಎಚ್ಚರ ತಳೆಯುವುದು.

ಬುಧವಾರ, ಜೂನ್ 8, 2011

ವಿಶ್ವವ್ಯಾಪಿ ಜಾಲ ಹುಟ್ಟಿದ ಕಥೆ

ಟಿ ಜಿ ಶ್ರೀನಿಧಿ

ಈಚಿನ ವರ್ಷಗಳಲ್ಲಿ ವಿಶ್ವವ್ಯಾಪಿ ಜಾಲ (ವರ್ಲ್ಡ್‌ವೈಡ್ ವೆಬ್) ನಮ್ಮ ಬದುಕುಗಳ ಭಾಗವೇ ಆಗಿಹೋಗಿದೆ. ಅಂತರಜಾಲದಲ್ಲಿ (ಇಂಟರ್‌ನೆಟ್) ಲಭ್ಯವಿರುವ ಮಾಹಿತಿಯನ್ನು ನಮಗೆ ಸುಲಭವಾಗಿ ದೊರಕುವಂತೆ ಮಾಡುವ ಅತ್ಯಂತ ಜನಪ್ರಿಯ ವ್ಯವಸ್ಥೆ ಇದು.

ವಿಶ್ವವ್ಯಾಪಿ ಜಾಲದಲ್ಲಿ ವಿಹರಿಸುವಾಗ ಅದರ ಅಗಾಧತೆ ಹಾಗೂ ವೈವಿಧ್ಯಮಯ ಸಾಧ್ಯತೆಗಳು ನಮ್ಮಲ್ಲಿ ಬೆರುಗು ಹುಟ್ಟಿಸುತ್ತವೆ. ಕೆಲವೊಂದು ಸಲ ಇಷ್ಟೊಂದು ಸಂಕೀರ್ಣವಾದ ಈ ವ್ಯವಸ್ಥೆಯನ್ನು ಅದ್ಯಾರು ರೂಪಿಸಿದರಪ್ಪ ಎಂಬ ಪ್ರಶ್ನೆಯೂ ಮೂಡುತ್ತದೆ.

ಆ ಪ್ರಶ್ನೆಗೆ ಉತ್ತರರೂಪವಾಗಿ ನಿಲ್ಲುವ ಹೆಸರು ಸರ್ ಟಿಮ್ ಬರ್ನರ್ಸ್-ಲೀ ಅವರದು.

ಭಾನುವಾರ, ಜೂನ್ 5, 2011

ಇಜ್ಞಾನ ವಿಶೇಷ: ಪರಿಸರ ದಿನ ಮತ್ತೆ ಬಂದಿದೆ...

ನಾಗೇಶ ಹೆಗಡೆ
ಇಜ್ಞಾನ ಪರಿಸರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ. ಪರಿಸರ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಈ ಬಾರಿಯ ವಿಶ್ವ ಪರಿಸರ ದಿನಾಚರಣೆಗೆ ವಿಶೇಷ ಮಹತ್ವ ಇದೆ. ಇದೇ ಮೊದಲ ಬಾರಿಗೆ ಭಾರತವನ್ನು 'ಆತಿಥೇಯ ರಾಷ್ಟ್ರ' ಎಂದು ವಿಶ್ವಸಂಸ್ಥೆ ಘೋಷಿಸಿದೆ. ದಿಲ್ಲಿ ಮತ್ತು ಮುಂಬೈಗಳಲ್ಲಿ ವಿಶ್ವಸಂಸ್ಥೆಯೇ ಭಾರತದೊಂದಿಗೆ ಜಂಟಿಯಾಗಿ ಜೂನ್ ೫ರಂದು ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಮತ್ತು ಅದು ಜಗತ್ತಿಗೆಲ್ಲ ಟಾಮ್ ಟಾಮ್ ಆಗುವಂತೆ ನೋಡಿಕೊಳ್ಳುತ್ತದೆ.

೨೦೧೧ರ ಇಡೀ ವರ್ಷವನ್ನು 'ಅರಣ್ಯಗಳ ಅಂತರರಾಷ್ಟ್ರೀಯ ವರ್ಷ' ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿರುವುದರಿಂದ ಸಹಜವಾಗಿಯೇ ಜಾಗತಿಕ ಮಟ್ಟದ ಎಲ್ಲ ಕಾರ್ಯಕ್ರಮಗಳಲ್ಲೂ ಅರಣ್ಯವೇ ಒತ್ತುಗುರಿ ಆಗಿರುತ್ತದೆ. ಅದಕ್ಕೇ ಈ ಬಾರಿಯ ವಿಶ್ವ ಪರಿಸರ ದಿನಕ್ಕೂ ಅರಣ್ಯವನ್ನೇ ಮುಖ್ಯ ವಿಷಯವನ್ನಾಗಿ ಮಾಡಿಕೊಳ್ಳಲು ಎಲ್ಲ ರಾಷ್ಟ್ರಗಳಿಗೆ ಸೂಚಿಸಲಾಗಿದೆ. ಅದರಲ್ಲೂ ಈ ವರ್ಷ 'ಅರಣ್ಯ: ನಿಮ್ಮ ಸೇವೆಯಲ್ಲಿ ನಿಸರ್ಗ' ಎಂಬ ಧ್ಯೇಯವಾಕ್ಯವನ್ನೇ ಮುಂದಿಟ್ಟುಕೊಂಡು ಜೂನ್ ೫ರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಇ-ಜ್ಞಾನ ಪರಿಸರ ಸಂಚಿಕೆ

ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಕನ್ನಡ ವಿದ್ಯುನ್ಮಾನ ಪತ್ರಿಕೆಯ ಮೊದಲ ಸಂಚಿಕೆಯನ್ನು ಜ್ಞಾನ ನಿಮ್ಮ ಮುಂದಿಡುತ್ತಿದೆ.

'ಪರಿಸರ ಸಂಚಿಕೆ'ಯಾಗಿ ಮೂಡಿಬಂದಿರುವ ನಮ್ಮ ಮೊದಲ ಪ್ರಯತ್ನ ಇದೀಗ ಜ್ಞಾನ ಡಾಟ್ ಕಾಮ್‌ನಲ್ಲಿ ಲಭ್ಯವಿದೆ. ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಆದರದ ಸ್ವಾಗತ.

ಜ್ಞಾನ ಪರಿಸರ ಸಂಚಿಕೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶನಿವಾರ, ಜೂನ್ 4, 2011

ಪರಿಸರ ದಿನ ವಿಶೇಷ: ವನ್ಯಜೀವಿ ಪ್ರೇಮ - ನಮ್ಮ ನಿಮ್ಮಲ್ಲಿ!?

ಟಿ. ಎಸ್. ಗೋಪಾಲ್

ನಾಳೆ (ಜೂನ್ ೫) ವಿಶ್ವ ಪರಿಸರ ದಿನ. ಈ ಸಂದರ್ಭದಲ್ಲಿ ಇಜ್ಞಾನ ವಿದ್ಯುನ್ಮಾನ ಪತ್ರಿಕೆಯ ಮೊದಲ ಸಂಚಿಕೆ 'ಪರಿಸರ ಸಂಚಿಕೆ'ಯಾಗಿ ಲಭ್ಯವಾಗಲಿದೆ. ನಿರೀಕ್ಷಿಸಿ!!!

"ಬದುಕನ್ನು ಕುರಿತು ನಿಜವಾದ ಪ್ರೀತಿಯಿದ್ದವನಿಗೆ ಮಾತ್ರ ಅದರ ಸಮೃದ್ಧಿಯಲ್ಲಿ, ವೈವಿಧ್ಯತೆಯಲ್ಲಿ ಆಸಕ್ತಿ ಹುಟ್ಟೀತು. ಅದಿಲ್ಲದೆ, ಬದುಕನ್ನು ಕೇವಲ ವ್ಯಾವಹಾರಿಕವಾಗಿ ಹಾಗೂ ಪ್ರಾಯೋಜನಿಕ ದೃಷ್ಟಿಯಿಂದ ನೋಡುವವನಿಗೆ ಅದರೊಳಗಿನ ಚಟುವಟಿಕೆಯಾಗಲೀ ಜೀವಂತಿಕೆಯಾಗಲೀ ಕಂಡೀತು ಹೇಗೆ?" - ಡಾ|| ಜಿ. ಎಸ್. ಶಿವರುದ್ರಪ್ಪ

ಕಾಡನ್ನು ಉಳಿಸಬೇಕು, ವನ್ಯಪ್ರಾಣಿಗಳನ್ನು ಕಾಪಾಡಬೇಕು ಎಂದು ಮಂತ್ರಿಗಳಿಂದ ಹಿಡಿದು ಶ್ರೀಸಾಮಾನ್ಯನವರೆಗೆ ಎಲ್ಲರೂ ಹೇಳುತ್ತಾರೆ. ಆದರೆ ಅದು ಹೇಗೆಂದು ಯಾರೂ ಯೋಚಿಸುವ ಗೋಜಿಗೆ ಹೋಗುವುದಿಲ್ಲ. ಹೇಗಿದ್ದರೂ ಅದು ಅರಣ್ಯ ಇಲಾಖೆಯವರ ಕೆಲಸ, ನೋಡಿಕೊಳ್ಳಲಿ - ಎಂಬುದೇ ಬಹುಜನರ ಆಲೋಚನೆ.

ಅಣೆಕಟ್ಟೆಗಳಿಂದ ಹಿಡಿದು ಬೃಹದಾಕಾರದ ವಿದ್ಯುತ್ ಕಂಬಗಳವರೆಗೆ ಸಕಲವೂ ಅರಣ್ಯಪ್ರದೇಶಗಳಲ್ಲೇ ಸ್ಥಾಪಿತವಾಗುವಂತೆ ಯೋಜನೆಗಳನ್ನು ರೂಪಿಸುವ ತಜ್ಞರು, ವೋಟುಗಳು ಮಾತ್ರವೇ ಶಾಶ್ವತ ಸತ್ಯವೆಂದು ಭ್ರಮಿಸಿರುವ ರಾಜಕಾರಣಿಗಳು, ಜನಪರ ಕಾರ್ಯಗಳ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾತರರಾಗಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ಕಾಡನ್ನೇ ನೋಡದೆ ವನ್ಯಜೀವಿ ಹಾಗೂ ಮಾನವನ ಸಹಜೀವನದ ಬಗೆಗೆ ಭಾಷಣಬಿಗಿಯುವ ಪರಿಸರವಾದಿ ಮಹಾಶಯರು ಮೊದಲಾಗಿ ಸಕಲರೂ ಅರಣ್ಯನಾಶದ ಪಾಲುದಾರರಾಗಿದ್ದಾರೆ.

ಗುರುವಾರ, ಜೂನ್ 2, 2011

ಏಳುನೂರು ಕೋಟಿ ತಲುಪಲಿದೆ ಭೂಮಿಯ ಜನಸಂಖ್ಯೆ: ಆಹಾರ-ಇಂಧನ ಸಮತೋಲನ ಹೇಗೆ?

ಟಿ ಜಿ ಶ್ರೀನಿಧಿ

೨೦೧೧ - ಭೂಗ್ರಹದ ಇತಿಹಾಸದ ಮಹತ್ವದ ಮೈಲಿಗಲ್ಲುಗಳಲ್ಲೊಂದು. ಭೂಮಿಯ ಜನಸಂಖ್ಯೆ ಈ ವರ್ಷದಲ್ಲಿ ಏಳುನೂರು ಕೋಟಿ ತಲುಪಲಿದೆ.

ಈಚಿನ ವರ್ಷಗಳಲ್ಲಿ ಜನರ ಜೀವನಮಟ್ಟ ಕೊಂಚ ಸುಧಾರಿಸಿದೆ, ನಿಜ. ಆದರೆ ಇಂದಿಗೂ ಜಗತ್ತಿನಲ್ಲಿರುವ ಸಂಪತ್ತಿನ ಅರ್ಧಭಾಗವನ್ನು ಶೇಕಡಾ ಎರಡರಷ್ಟು ಸಂಖ್ಯೆಯ ಜನರೇ ನಿಯಂತ್ರಿಸುತ್ತಿದ್ದಾರೆ.

ಬಡವರು ಹಾಗೂ ಶ್ರೀಮಂತರ ನಡುವಿನ ಈ ಭಾರೀ ಕಂದರವನ್ನು ಮಧ್ಯಮವರ್ಗದ ಜನ ನಿಧಾನವಾಗಿ ಮುಚ್ಚುತ್ತಿದ್ದಾರೆ. ಬಡವರನ್ನು ಮಧ್ಯಮವರ್ಗದತ್ತ, ಮಧ್ಯಮವರ್ಗದವರನ್ನು ಸಿರಿವಂತಿಕೆಯತ್ತ ಕೊಂಡೊಯ್ಯುವ ಪ್ರಕ್ರಿಯೆ, ನಿಧಾನವಾಗಿಯಾದರೂ, ನಡೆಯುತ್ತಿದೆ.

ಹಿಂದುಳಿದ ರಾಷ್ಟ್ರಗಳು ತಮ್ಮ ಹಣೆಪಟ್ಟಿ ಕಳಚಿಕೊಳ್ಳುವ ಉದ್ದೇಶದಿಂದ ಅಭಿವೃದ್ಧಿಹೊಂದಿದ ರಾಷ್ಟ್ರಗಳ ಜೀವನಶೈಲಿ ಅನುಕರಿಸಲು ಪ್ರಯತ್ನಿಸುತ್ತಿವೆ. ಇನ್ನು ಅಭಿವೃದ್ಧಿಹೊಂದಿದ ದೇಶಗಳಿಗೆ ತಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಯಾವ ಉದ್ದೇಶವೂ ಇದ್ದಂತಿಲ್ಲ. ಹೀಗಾಗಿ ವಿಶ್ವದ ಸಂಪನ್ಮೂಲಗಳಿಗೆ ಬೇಡಿಕೆ ತೀವ್ರವಾಗಿ ಹೆಚ್ಚುತ್ತಿದೆ.

'ಬೇಕು'ಗಳ ಪಟ್ಟಿ ದೊಡ್ಡದಾಗುತ್ತಿದ್ದಂತೆ ಅದರ ಪರಿಣಾಮ ಅಂತಿಮವಾಗಿ ಆಗುವುದು ಇಂಧನಗಳ ಮೇಲೆಯೇ. ವಿದ್ಯುತ್ತು, ಸಂಚಾರ ವ್ಯವಸ್ಥೆ, ಆಹಾರ, ಬಟ್ಟೆಬರೆ, ಸಂವಹನ ವ್ಯವಸ್ಥೆ - ಹೀಗೆ ಯಾವುದನ್ನೇ ಗಮನಿಸಿದರೂ ಅದರ ಉತ್ಪಾದನೆಯಾಗುವಲ್ಲಿಂದ ಪ್ರಾರಂಭಿಸಿ ನಾವು ಅದನ್ನು ಬಳಸುವವರೆಗೆ ಎಲ್ಲ ಹಂತಗಳಲ್ಲೂ ಒಂದಲ್ಲ ಒಂದು ಬಗೆಯ ಇಂಧನ ಬೇಕು. ಕೃಷಿಯ ಉದಾಹರಣೆಯನ್ನೇ ನೋಡಿ - ರಸಗೊಬ್ಬರ ತಯಾರಿಕೆಗೆ, ಅದರ ಸಾಗಾಣಿಕೆಗೆ, ಕೃಷಿಭೂಮಿಯಲ್ಲಿ ಟ್ರಾಕ್ಟರ್ ನಡೆಸಲು, ಬೆಳೆಯನ್ನು ಸಂಸ್ಕರಿಸಲು ಎಲ್ಲದಕ್ಕೂ ಇಂಧನ ಬೇಕು. ಆಮೇಲೂ ಅಷ್ಟೆ - ಕೃಷಿ ಉತ್ಪನ್ನವನ್ನು ಮಾರುಕಟ್ಟೆಗೆ ತಲುಪಿಸಲು, ಅಲ್ಲಿ ಕೊಂಡ ವಸ್ತುಗಳನ್ನು ಮನೆಗೆ ಒಯ್ಯಲು, ಕಡೆಗೆ ಬೇಯಿಸಿ ತಿನ್ನಲಿಕ್ಕೂ ಇಂಧನ ಬೇಕೇ ಬೇಕು. ಹೀಗಾಗಿ ಪೆಟ್ರೋಲ್, ಡೀಸಲ್ ಮುಂತಾದ ಪಳೆಯುಳಿಕೆ ಇಂಧನಗಳಿಲ್ಲದೆ ಯಾವ ಕೆಲಸವೂ ಸಾಗುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಆದರೆ ಒಂದಲ್ಲ ಒಂದುದಿನ ಮುಗಿದುಹೋಗಲಿರುವ ಈ ಇಂಧನಮೂಲಗಳನ್ನು ನೆಚ್ಚಿಕೊಳ್ಳುವುದು ಎಷ್ಟು ಸರಿ? ಹೆಚ್ಚುತ್ತಿರುವ ಜನಸಂಖ್ಯೆ, ಏರುತ್ತಿರುವ ಬೇಡಿಕೆಗಳಿಗೆ ಸರಿಸಮಾನವಾಗಿ ಇಂಧನ ಪೂರೈಕೆ ವ್ಯವಸ್ಥೆಮಾಡಿಕೊಳ್ಳುವುದು ಹೇಗೆ?
badge