ಶುಕ್ರವಾರ, ಜೂನ್ 17, 2011

ಮಳೆಗಾಡಿನ ಬಿರುಗಾಳಿ

ಪಶ್ಚಿಮಘಟ್ಟದ ಅರಣ್ಯ ಪ್ರದೇಶವನ್ನು ವಿಶ್ವಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲು ಒಪ್ಪದ ರಾಜ್ಯ ಸರಕಾರದ ನಿಲುವು ಸಾಕಷ್ಟು ವಾದವಿವಾದಗಳನ್ನು ಹುಟ್ಟುಹಾಕಿದೆ. ಈ ಕುರಿತು ಹಿರಿಯ ವಿಜ್ಞಾನ ಲೇಖಕ ಶ್ರೀ ಟಿ. ಆರ್. ಅನಂತರಾಮುರವರ ಅಭಿಪ್ರಾಯಗಳು ಇಲ್ಲಿವೆ...
ವಿಶ್ವಪರಂಪರಾ ತಾಣಗಳ ಪಟ್ಟಿಯಲ್ಲಿ ಪಶ್ಚಿಮಘಟ್ಟದಲ್ಲಿ ಗುರುತಿಸಿರುವ ಹತ್ತು ತಾಣಗಳನ್ನು ಕೈಬಿಡಿ ಎಂದು ಕರ್ನಾಟಕ ಸರ್ಕಾರ ಯುನೆಸ್ಕೋಗೆ ಒತ್ತಾಯ ಮಾಡಿರುವುದನ್ನು ನೋಡಿದರೆ ಬಹುಶಃ ಸರ್ಕಾರದ ಯಾರೊಬ್ಬರಿಗೂ ವಿಶ್ವಪರಂಪರಾತಾಣದ ಬಗ್ಗೆ ಮೂಲ ಪರಿಕಲ್ಪನೆಯೇ ಇಲ್ಲ ಎನ್ನಿಸುತ್ತದೆ.

ಇದಕ್ಕಿಂತ ಹೆಚ್ಚಿನ ಅಚ್ಚರಿ ಮೂಡಿಸಿರುವುದು ೧೯೮೬ರಲ್ಲಿ ಯುನೆಸ್ಕೋ `ಮನುಷ್ಯ ಮತ್ತು ಜೀವಿಗೋಳ' (ಮ್ಯಾನ್ ಅಂಡ್ ಬಯೋಸ್ಪಿಯರ್) ಯೋಜನೆಯಡಿ ಈಗಾಗಲೇ ಭಾರತದಲ್ಲಿ ೧೭ ತಾಣಗಳನ್ನು ಗುರುತಿಸಿ, ಆ ಪೈಕಿ ನಮ್ಮ ನೀಲಗಿರಿಯ ೫,೫೨೦ ಚದರ ಕಿಲೋ ಮೀಟರ್ ಪ್ರದೇಶವನ್ನು (ಬಂಡೀಪುರ, ನಾಗರಹೊಳೆ, ವೈನಾಡು, ಸಿರೂರು ಪರ್ವತ ಸೇರಿದಂತೆ) ಜೀವಿಗೋಳದ ರಕ್ಷಿತಪ್ರದೇಶವೆಂದು ಸಾರಿದೆ. ಇಲ್ಲೂ ಕೇಂದ್ರ ಸರ್ಕಾರವೇ ಯುನೆಸ್ಕೋ ಗಮನ ಸೆಳೆದಿತ್ತು. ಈಗ ಈ ತಾಣಗಳಲ್ಲಿ ವ್ಯಾಪಕ ಕಾರ್ಯಕ್ರಮಗಳನ್ನು ಯುನೆಸ್ಕೋ ಭಾರತದ ನೆರವಿನೊಂದಿಗೆ ಕೈಗೊಂಡಿದೆ. ಈ ಕಾರ್ಯಕ್ರಮದಡಿ ಮನುಷ್ಯ ಮತ್ತು ನಿಸರ್ಗದ ಮಧ್ಯೆ ಎರಡಕ್ಕೂ ಗಾಸಿಯಾಗದಂತೆ ನಾವು ಜೀವಿ ಪರಿಸ್ಥಿತಿಯನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದೂ ಒಂದು. ಇನ್ನೊಂದು ಇಂದಿನ ನಮ್ಮ ಚಟುವಟಿಕೆಗಳಿಗೆ ನಾಳೆ ನಿಸರ್ಗ ಹೇಗೆ ಸ್ಪಂದಿಸುತ್ತದೆ ಎಂಬ ಎಚ್ಚರ ತಳೆಯುವುದು.


ಯುನಸ್ಕೋ ಈ ಯೋಜನೆಯನ್ನು ೧೧೦ ರಾಷ್ಟ್ರಗಳಲ್ಲಿ ಕೈಗೊಂಡು ಈಗಾಗಲೇ ೫೬೩ ತಾಣಗಳನ್ನು ಈ ಪಟ್ಟಿಯಡಿ ತಂದು ಇಲ್ಲಿನ ಎಲ್ಲ ಅಭಿವೃದ್ಧಿ, ಬೆಳವಣಿಗೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಭಾರತ ಕೂಡ ಇದಕ್ಕೆ ಭಾಜ್ಯ. ೨೦೦೭ರ ಹೊತ್ತಿಗೆ ನಮ್ಮ ದೇಶದಲ್ಲೇ ದಕ್ಷಿಣದ ನೀಲಗಿರಿ ಸೇರಿದಂತೆ ಉತ್ತರದಲ್ಲಿ ನಂದಾದೇವಿಯವರೆಗೆ ೧೭ ತಾಣಗಳಿಗೆ ಯುನೆಸ್ಕೋ ಎಲ್ಲ ಬೆಂಬಲಗಳನ್ನೂ ನೀಡುತ್ತಿದೆ. ಆಗ ಧ್ವನಿ ಎತ್ತದ ಸರ್ಕಾರ (ಎತ್ತುವ ಅವಶ್ಯಕತೆಯೂ ಇರಲಿಲ್ಲ) ಈಗ ವಿಶ್ವಪರಂಪರಾ ತಾಣವಾಗಿ ಪಶ್ಚಿಮ ಘಟ್ಟದಲ್ಲಿ ಕರ್ನಾಟಕ ವಿಭಾಗದಲ್ಲಿ ಬರುವ ಪುಷ್ಪಗಿರಿ ವನ್ಯಜೀವಿ ಧಾಮದಿಂದ ತೊಡಗಿ ಆಗುಂಬೆ ಮೀಸಲು ಅರಣ್ಯದವರೆಗೆ ೧೦ತಾಣಗಳ ಬಗ್ಗೆ ನೀವು ತಲೆಹಾಕಬೇಡಿ ಎಂದು ಎಚ್ಚರಿಕೆ ಕೊಟ್ಟಿರುವುದು `ಪಶ್ಚಿಮಘಟ್ಟ ಉಳಿಸಿ' ಎಂದು ಒಕ್ಕೊರಲಿನಿಂದ ಸರ್ಕಾರವನ್ನು ಕೇಳುತ್ತಿದ್ದವರಿಗೆ ದಿಗ್ಭ್ರಮೆ ತಂದಿದೆ. ವಿಶ್ವ ಪರಂಪರಾ ತಾಣವಾಗಿ ಪರಿಗಣಿಸಿದರೆ ಸರ್ಕಾರಕ್ಕೆ ಲಾಭವೇ ಹೊರತು ನಷ್ಟವಲ್ಲ. ಅವು ಅಂತಾರಾಷ್ಟ್ರೀಯ ಖ್ಯಾತಿ ಗಳಿಸುತ್ತವೆ, ವಿದೇಶದಿಂದ ಹಾರಿ ಪ್ರವಾಸಿಗರು ಈ ಪರಂಪರಾ ತಾಣಗಳನ್ನು ತಲಪುವುದಿಲ್ಲ ಬದಲು ನಮ್ಮ ಪ್ರವಾಸೋದ್ಯಮವನ್ನೇ ಅವಲಂಬಿಸಬೇಕು.

ವಾಸ್ತವವಾಗಿ ಯುನೆಸ್ಕೋದ ಪಟ್ಟಿಯನ್ನು ಗಮನಿಸಿದರೆ ಹತ್ತಾರು ರಾಷ್ಟ್ರಗಳು ತಮ್ಮ ದೇಶದ ಅನೇಕ ತಾಣಗಳನ್ನು ಆ ಪಟ್ಟಿಯಲ್ಲಿ ಸೇರಿಸಲು ತುದಿಗಾಲಲ್ಲಿ ನಿಂತಿವೆ. ಒಂದುವೇಳೆ ಕರ್ನಾಟಕದಲ್ಲಿ ಗುರುತಿಸಿರುವ ಹತ್ತು ತಾಣಗಳನ್ನು ಯುನೆಸ್ಕೋ ಒಪ್ಪಿದ್ದೇ ಆದರೆ ಅದು ಕರ್ನಾಟಕದ ಭಾಗ್ಯ. ಒಂದಂತೂ ನಿಜ, ಕಡೆಯಪಕ್ಷ ವನ್ಯಜೀವಿ - ಮಾನವ ಸಂಘರ್ಷ ತಪ್ಪುತ್ತದೆ. ನಮ್ಮ ಪಶ್ಚಿಮ ಘಟ್ಟದಲ್ಲಿ ಒಂದು ಚಿಟ್ಟೆ ಕೂಡ ಕಳೆದುಹೋಗದಂತೆ ಯುನೆಸ್ಕೋ ಕ್ರಮ ಕೈಗೊಳ್ಳುತ್ತದೆ. ಪಶ್ಚಿಮ ಘಟ್ಟದ ಅಭಿವೃದ್ಧಿಗೆಂದೇ ಪ್ರಾಧಿಕಾರ ಬೇಕೆ? ಪಶ್ಚಿಮ ಘಟ್ಟ ಬರೀ ಕರ್ನಾಟಕದ ಆಸ್ತಿಯಲ್ಲ ಎಂಬುದನ್ನು ಆಳುವ ನಮ್ಮ ಪ್ರಭುಗಳು ಮೊದಲು ಅರಿಯಲಿ. ಅದು ೧,೬೦೦ ಕಿ.ಮೀ. ಉತ್ತರ ದಕ್ಷಿಣವಾಗಿ ಹಬ್ಬಿರುವ ಮಳೆಕಾಡು. ೧೬,೦೦೦ ಚ.ಕಿ.ಮೀ. ವಿಸ್ತರಿಸಿದೆ. ಮಹಾರಾಷ್ಟ್ರ, ಗೋವ, ಕರ್ನಾಟಕ, ತಮಿಳುನಾಡು, ಕೇರಳಗಳಲ್ಲಿ ಹಂಚಿಹೋಗಿದೆ. ೫,೦೦೦ ಹೂ ಬಿಡುವ ಸಸ್ಯಗಳು, ೧೩೯ ಜಾತಿಯ ಸ್ತನಿಗಳು, ೧೭೯ ಬಗೆಯ ದ್ವಿಚರಿಗಳಿರುವ ಅಪರೂಪದ ಅಗ್ರತಾಣ (ಹಾಟ್ ಸ್ಪಾಟ್). ಇನ್ನು ಮಳೆ ಮಾರುತಗಳ ಹಂಚಿಕೆಯಲ್ಲಿ ಪಶ್ಚಿಮಘಟ್ಟದ ಪಾತ್ರವೇನು ಎಂಬುದು ಮಕ್ಕಳಿಗೂ ತಿಳಿದ ಸಂಗತಿ. ಅಲ್ಲಿನ ದಟ್ಟ ಕಾಡುಗಳ ನಾಶ ನಮ್ಮ ಮಾನ್‌ಸೂನ್ ಮೇಲೆ ಬೀರುವ ಪ್ರಭಾವ ತೀವ್ರವಾದದ್ದು; ನಾವು ಹಿಂದಿನ ಆ ಮಳೆ ಕಾಡನ್ನು ಉಳಿಸಿಕೊಂಡಿದ್ದೇವೆಯೆ? ಶೇ. ೩೦ ಭಾಗ ಅರಣ್ಯವಿರಬೇಕಾದ ಕಡೆ ಶೇ. ೨೫ನ್ನೂ ದಾಟಿಲ್ಲ. ಅಭಿವೃದ್ಧಿಯ ಮಂತ್ರವೇನಾಯಿತು? ಸರ್ಕಾರಕ್ಕೆ ಈ ಲೆಕ್ಕ ಬೇಕಿಲ್ಲ. ಈಗಾಗಲೇ ಉಷ್ಣ ವಿದ್ಯುತ್ ಸ್ಥಾವರ ಮಾಡಹೋಗಿ ಸ್ಥಳೀಯರ ಪ್ರತಿರೋಧ ಎದುರಿಸಿದೆ. ವಾಸ್ತವವಾಗಿ ಇನ್ನೂ ೧೪ ತಾಣಗಳನ್ನು ಭಾರತದಲ್ಲಿ (ಥಾರ್ ಮರುಭೂಮಿಯೂ ಸೇರಿ) ಜೀವಿಗೋಳ ರಕ್ಷಿತ ವಲಯವೆಂದು ಸಾರಲು ಭಾರತ ಸರ್ಕಾರ ಒತ್ತಾಯ ತರುತ್ತಿರುವ ಈ ಹೊತ್ತಿನಲ್ಲಿ ಕರ್ನಾಟಕ ಸರ್ಕಾರದ ಈ ಬಗೆಯ ಧೋರಣೆ ಪರಿಸರ ಪ್ರಿಯರಿಗೆ ನಿರಾಶೆ ತಂದಿದೆ.

ಪಶ್ಚಿಮ ಘಟ್ಟದ ಅರಣ್ಯವನ್ನು ಉಳಿಸಲು ನಮ್ಮ ಕಾನೂನುಗಳು ಎಷ್ಟರಮಟ್ಟಿಗೆ ಪ್ರಭಾವಶಾಲಿಯಾಗಿವೆ? ಹಾಗಿದ್ದಲ್ಲಿ, ಕಾರ್ಯಪಡೆಯನ್ನು ನಿಯೋಜಿಸುವ ಅವಶ್ಯಕತೆಯಾದರೂ ಏನಿತ್ತು? ಸದ್ಯದಲ್ಲಿ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷರಾದ ಅನಂತ ಹೆಗಡೆ ಅಶೀಸರ ಸರ್ಕಾರದ ಈ ನಿರ್ಧಾರಕ್ಕೆ ನಿಜಕ್ಕೂ ನಮ್ಮ ಬೆಂಬಲವಿಲ್ಲ ಎನ್ನುತ್ತಾರೆ. ನನ್ನ ವರದಿಯನ್ನು ಸರ್ಕಾರ ಅಮಾನತು ಇಟ್ಟಿದೆ ಎನ್ನುವುದು ಕೂಡ ಶುದ್ಧ ಸುಳ್ಳು ಎಂದು ನೊಂದುಕೊಳ್ಳುತ್ತಾರೆ. ಈ ಹಿಂದೆ ಕೈಗಾ ಪರಮಾಣು ಸ್ಥಾವರದ ವಿರುದ್ಧ ದನಿ ಎತ್ತಿದ್ದ ನಾಗೇಶ ಹೆಗಡೆ ಸರ್ಕಾರದ ಈಗಿನ ನಿಲವನ್ನು `ಕೆಲವರ ಹಿತಾಸಕ್ತಿಗಾಗಿ ಇಡೀ ಪಶ್ಚಿಮ ಘಟ್ಟದ ಜೀವಿ ಮಂಡಲವನ್ನು ಬಲಿಕೊಡುತ್ತಿದ್ದೇವೆ' ಎಂದು ಪ್ರತಿಕ್ರಿಯಿಸುತ್ತಾರೆ.

ನಾವು ಪಶ್ಚಿಮ ಘಟ್ಟದ ಈ ಭಾಗವನ್ನು ವಿಶ್ವ ಪರಂಪರಾ ತಾಣ ಪಟ್ಟಿಯಿಂದ ಕೈಬಿಟ್ಟ ಮಾತ್ರಕ್ಕೆ ಕೇರಳ, ಮಹಾರಾಷ್ಟ್ರ, ಗೋವ, ತಮಿಳುನಾಡು ಸರ್ಕಾರಗಳು ಕಣ್ಣುಮುಚ್ಚಿ ಕೂಡುವುದಿಲ್ಲ. ಇದೇ ಜೂನ್ ೧೯ರಿಂದ ೨೯ರವರೆಗೆ ವಿಶ್ವ ಪರಂಪರಾ ತಾಣದ ಸಭೆ ಪ್ಯಾರಿಸ್‌ನಲ್ಲಾಗುತ್ತದೆ. ಹಾಗೆಯೇ ಇದೇ ೨೭-೨೮ರಂದು ಜರ್ಮನಿಯ ಡ್ರೆಸ್‌ಡನ್‌ನಲ್ಲಿ ಮನುಷ್ಯ ಜೀವಿಗೋಳ ಕುರಿತ ೪೦ನೇ ವಾರ್ಷಿಕ ಸಭೆ ನಡೆಯುತ್ತದೆ. ಅಲ್ಲಿ ಪ್ರತಿನಿಧಿಸುವ ಭಾರತ ಇತರ ದೇಶಗಳ ದೃಷ್ಟಿಯಲ್ಲಿ ನಗೆಪಾಟಲಿಗೆ ಗುರಿಯಾಗುತ್ತದೆ. ಇನ್ನೂ ಒಂದು ಮಾತು ಇಲ್ಲಿ ಮುಖ್ಯವಾಗುತ್ತದೆ. ಪಶ್ಚಿಮ ಘಟ್ಟವನ್ನು ಜಾಗತಿಕ ಮಟ್ಟದ ಜೀವಿಗೋಳವೆಂದು ಯುನೆಸ್ಕೋ ಪರಿಗಣಿಸಲು ಅದು ಕೇಳಿದ್ದು ಕೇಂದ್ರವನ್ನಷ್ಟೇ, ರಾಜ್ಯವನ್ನಲ್ಲ. ಈಗಲೂ ಕರ್ನಾಟಕ ಸರ್ಕಾರ ಕಣ್ಣುಮುಚ್ಚಿ ಕೂಡುವುದು ಬೇಡ.

ವಿಜಯ ನೆಕ್ಸ್ಟ್ ಪತ್ರಿಕೆಯಲ್ಲಿ ಪ್ರಕಟವಾದ ಬರಹ

ಕಾಮೆಂಟ್‌ಗಳಿಲ್ಲ:

badge