ಟಿ ಜಿ ಶ್ರೀನಿಧಿ
ವಿಶ್ವವ್ಯಾಪಿ ಜಾಲದಲ್ಲಿ ಯಾವುದೋ ಮಾಹಿತಿ ಹುಡುಕಬೇಕೇ, ಗೂಗಲ್ ಡಾಟ್ ಕಾಮ್‌ಗೆ ಹೋಗಿ; ಇವತ್ತಿನ ಉದಯವಾಣಿ ಪತ್ರಿಕೆ ನೋಡಬೇಕೇ, ಉದಯವಾಣಿ ಡಾಟ್ ಕಾಮ್ ನೋಡಿ; 'ವಿಜ್ಞಾಪನೆ' ಅಂಕಣದ ಹಳೆಯ ಬರೆಹಗಳನ್ನು ಓದಬೇಕೇ, ಇಜ್ಞಾನ ಡಾಟ್ ಕಾಮ್ ನೋಡಿ...
ವಿಶ್ವವ್ಯಾಪಿ ಜಾಲಕ್ಕೂ ಡಾಟ್ ಕಾಮ್‌ಗಳಿಗೂ ಇರುವ ಅವಿನಾಭಾವ ಸಂಬಂಧ ಸುಲಭವಾಗಿ ಹೇಳಿ ಮುಗಿಸುವಂಥದ್ದಲ್ಲ. ವಿಶ್ವವ್ಯಾಪಿ ಜಾಲದಲ್ಲಿರುವ ತಾಣಗಳನ್ನು (ವೆಬ್‌ಸೈಟ್) ಬಹಳಷ್ಟು ಜನ ಗುರುತಿಸುವುದು ಡಾಟ್‌ಕಾಮ್‌ಗಳೆಂದೇ.
ಜಾಲತಾಣ, ಮತ್ತದರ ವಿಳಾಸ
ವಿಶ್ವವ್ಯಾಪಿ ಜಾಲದ ಮೂಲಕ ಲಭ್ಯವಿರುವ ಮಾಹಿತಿ ನಮಗೆ ದೊರಕುವುದು ವೆಬ್‌ಸೈಟ್ ಅಥವಾ ಜಾಲತಾಣಗಳ ಮೂಲಕ. ಮೇಲಿನ ಉದಾಹರಣೆಯಲ್ಲಿ ಹೇಳಿದ ಗೂಗಲ್ ಡಾಟ್ ಕಾಮ್, ಉದಯವಾಣಿ ಡಾಟ್ ಕಾಮ್, ಇಜ್ಞಾನ ಡಾಟ್ ಕಾಮ್ ಇವೆಲ್ಲ ಜಾಲತಾಣಕ್ಕೆ ಉದಾಹರಣೆಗಳು.
ಜಾಲತಾಣಗಳ ವಿಳಾಸಕ್ಕೆ ಡಾಟ್ ಕಾಮ್ ಎಂಬ ಪ್ರತ್ಯಯ ಸೇರಿದಂದಿನಿಂದ ಇಂದಿನವರೆಗಿನ ಕಾಲು ಶತಮಾನದ ಅವಧಿಯಲ್ಲಿ ಡಾಟ್ ಕಾಮ್ ಎನ್ನುವುದು ಜಾಲತಾಣದ ಹೆಸರಿಗೆ ಪರ್ಯಾಯವಾಗಿ ಬೆಳೆದುಬಿಟ್ಟಿದೆ, ನಿಜ. ಆದರೆ ವಾಸ್ತವದಲ್ಲಿ ಈ ಡಾಟ್ ಕಾಮ್ ಎನ್ನುವುದು ಜಾಲತಾಣಗಳ ವಿಳಾಸದ ಒಂದು ಭಾಗ ಮಾತ್ರ.
ವಿಶ್ವವ್ಯಾಪಿ ಜಾಲದಲ್ಲಿ ಲಭ್ಯವಿರುವ ಕೋಟ್ಯಂತರ ಜಾಲತಾಣಗಳನ್ನು ಪ್ರತ್ಯೇಕವಾಗಿ ಗುರುತಿಸಲು ಅನುವುಮಾಡಿಕೊಡುವ ವಿಳಾಸವನ್ನು ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ ಅಥವಾ ಯುಆರ್‌ಎಲ್ ಎಂದು ಹೆಸರು.
www.ejnana.com - ಇದು ಯುಆರ್‌ಎಲ್‌ಗೊಂದು ಉದಾಹರಣೆ. ಈ ವಿಳಾಸದ ಪ್ರಾರಂಭದಲ್ಲಿರುವ www ಎಂಬ ಸಂಕೇತ ಈ ತಾಣ ವಿಶ್ವವ್ಯಾಪಿ ಜಾಲದ ಮುಖಾಂತರ ಲಭ್ಯವಿದೆ ಎನ್ನುವುದನ್ನು ಸೂಚಿಸುತ್ತದೆ. ಇನ್ನು ejnana ಎನ್ನುವುದು ಜಾಲತಾಣದ ಹೆಸರು. ಕೊನೆಯ ಬಾಲಂಗೋಚಿಯೇ ಡಾಟ್ ಕಾಮ್.
ಬಾಲಂಗೋಚಿಯ ಕತೆ
ಯಾವುದೇ ಜಾಲತಾಣ ಯಾವ ವಿಷಯಕ್ಕೆ ಸಂಬಂಧಿಸಿದ್ದು ಎಂಬುದನ್ನು ಸೂಚಿಸುವುದು ಈ ಬಾಲಂಗೋಚಿಯ ಕೆಲಸ. ಜೆನರಿಕ್ ಟಾಪ್ ಲೆವೆಲ್ ಡೊಮೈನ್ ಅಥವಾ gTLDಗಳೆಂದು ಕರೆಸಿಕೊಳ್ಳುವ .com, .net, .org ಮುಂತಾದ ಇಪ್ಪತ್ತೆರಡು ವಿವಿಧ ಬಾಲಂಗೋಚಿಗಳು ಸದ್ಯದಲ್ಲಿ ಲಭ್ಯವಿವೆ. ಈ ಇಪ್ಪತ್ತೆರಡರ ಜೊತೆಗೆ ಜಾಲತಾಣ ಯಾವ ರಾಷ್ಟ್ರದ್ದು ಎನ್ನುವುದನ್ನು ಸೂಚಿಸುವ ಇನ್ನೊಂದಷ್ಟು ಬಾಲಂಗೋಚಿಗಳೂ ಇವೆ; ಭಾರತೀಯ ತಾಣಗಳಿಗೆ .in, ಆಸ್ಟ್ರೇಲಿಯಾದ ತಾಣಗಳಿಗೆ .au, ಫ್ರಾನ್ಸಿನ ತಾಣಗಳಿಗೆ .fr - ಹೀಗೆ. ಇವುಗಳಿಗೆ ಕಂಟ್ರಿ-ಕೋಡ್ ಟಾಪ್ ಲೆವೆಲ್ ಡೊಮೈನ್ ಅಥವಾ ccTLDಗಳೆಂದು ಹೆಸರು.
ಇವೆಲ್ಲವುದರ ಮೇಲ್ವಿಚಾರಣೆ ಇಂಟರ್‌ನೆಟ್ ಕಾರ್ಪೊರೇಷನ್ ಫಾರ್ ಅಸೈನ್ಡ್ ನೇಮ್ಸ್ ಆಂಡ್ ನಂಬರ್ಸ್ (ICANN) ಎಂಬ ಸಂಸ್ಥೆಯದು. ಪ್ರಪಂಚದ ಯಾವುದೇ ಜಾಲತಾಣ ತನ್ನ ವಿಳಾಸದಲ್ಲಿ ಈ ಸಂಸ್ಥೆಯ ಒಪ್ಪಿಗೆ ಪಡೆದಿರುವ ಬಾಲಂಗೋಚಿಯನ್ನು ಮಾತ್ರವೇ ಬಳಸುವುದು ಸಾಧ್ಯ.
ಈ ಸಂಸ್ಥೆ ಇದೀಗ ಬಾಲಂಗೋಚಿಯ ಕತೆಗೊಂದು ವಿಶಿಷ್ಟ ತಿರುವು ನೀಡಲು ಹೊರಟಿದೆ.
ನಿಮ್ಮ ತಾಣಕ್ಕೆ ನಿಮ್ಮಿಷ್ಟದ ವಿಳಾಸ
ICANN ಯೋಜಿಸಿರುವ ಈ ಬದಲಾವಣೆ ಜಾರಿಗೆ ಬಂದಾಗಲಿಂದ ಜಾಲತಾಣದ ವಿಳಾಸಗಳಲ್ಲಿ ನಮ್ಮ ಇಚ್ಛೆಯ ಯಾವುದೇ ಬಾಲಂಗೋಚಿಯನ್ನು ಬಳಸುವುದು ಸಾಧ್ಯವಾಗಲಿದೆ.
ಇದಕ್ಕಾಗಿ ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆ ೨೦೧೨ರ ಜನವರಿ ೧೨ರಿಂದ ಪ್ರಾರಂಭವಾಗಲಿದೆಯಂತೆ. ಜಾಲತಾಣದ ವಿಳಾಸದಲ್ಲಿ ತಮ್ಮ ಇಚ್ಛೆಯ ಬಾಲಂಗೋಚಿ ಬಳಸಲು ಬಯಸುವವರು ೧,೮೫,೦೦೦ ಡಾಲರುಗಳ ಭಾರೀ ಮೊತ್ತವನ್ನೇ ಪಾವತಿಸಬೇಕು. ಅಷ್ಟೇ ಅಲ್ಲ, ಆ ಬಾಲಂಗೋಚಿಯಲ್ಲಿ ಬಳಸಲಾಗುವ ಹೆಸರಿನ ಹಕ್ಕುಸ್ವಾಮ್ಯವೂ ಅವರಲ್ಲೇ ಇರಬೇಕು. ಅಂದರೆ, ನಾನು-ನೀವು ಹೋಗಿ .google ಎಂದೋ .bbc ಎಂದೋ ಕೊನೆಯಾಗುವ ವಿಳಾಸಕ್ಕೆ ಅರ್ಜಿ ಸಲ್ಲಿಸುವಂತಿಲ್ಲ.
ನಿಮ್ಮದೇ ಭಾಷೆಯಲ್ಲೂ!
ಜಾಲತಾಣದ ವಿಳಾಸದಲ್ಲಿ ನಿಮ್ಮಿಷ್ಟದ ಹೆಸರು, ಬಾಲಂಗೋಚಿ ಎಲ್ಲ ಇದ್ದರೂ ಅದನ್ನು ಈವರೆಗೆ ಕಡ್ಡಾಯವಾಗಿ ಇಂಗ್ಲಿಷ್ ಅಕ್ಷರಗಳಲ್ಲೇ ಬರೆಯಬೇಕಿತ್ತು. ಆದರೆ ಈಗ ಬೇರೆ ಭಾಷೆಗಳಲ್ಲೂ ಯುಆರ್‌ಎಲ್‌ಗಳನ್ನು ಹೊಂದುವುದು ಸಾಧ್ಯವಾಗಿದೆ.
ಸಂಪೂರ್ಣವಾಗಿ ಅರೇಬಿಕ್ ಲಿಪಿಯಲ್ಲಿಯೇ ಇರುವ ವಿಳಾಸಗಳ ಬಳಕೆ - ಈಜಿಪ್ಟ್, ಸೌದಿ ಅರೇಬಿಯಾ ಹಾಗೂ ಯು.ಎ.ಇ.ಗಳಲ್ಲಿ - ಈಗಾಗಲೇ ಪ್ರಾರಂಭವಾಗಿದೆ. ಚೈನೀಸ್, ಥಾಯ್ ಹಾಗೂ ತಮಿಳು ಭಾಷೆಯಲ್ಲೂ ಜಾಲತಾಣ ವಿಳಾಸಗಳು ಲಭ್ಯವಾಗಿವೆ. ಈ ಸೌಲಭ್ಯ ಸದ್ಯದಲ್ಲೇ ಇನ್ನೂ ಅನೇಕ ಭಾಷೆಗಳಲ್ಲಿ ದೊರಕುವ ನಿರೀಕ್ಷೆಯಿದೆ.
ಇದಕ್ಕೆ ನಮ್ಮ ದೇಶದಲ್ಲೂ ಸಿದ್ಧತೆಗಳು ನಡೆದಿವೆ - ಈಗಾಗಲೇ ಪಟ್ಟಿಯಲ್ಲಿರುವ ತಮಿಳು ಭಾಷೆಯ ಜೊತೆಗೆ ಹಿಂದಿ, ಗುಜರಾತಿ, ಉರ್ದು, ಪಂಜಾಬಿ, ಬೆಂಗಾಲಿ ಹಾಗೂ ತೆಲುಗು ಭಾಷೆಗಳಲ್ಲೂ ಜಾಲತಾಣಗಳ ವಿಳಾಸ ರೂಪಿಸಿಕೊಳ್ಳಲು ICANN ಅನುಮತಿ ದೊರೆತಿದೆ. ಆದರೆ ಅದೇಕೋ ಇಲ್ಲೂ ಕನ್ನಡಕ್ಕೆ ಸ್ಥಾನ ಸಿಕ್ಕಿಲ್ಲ; ಅತಿ ಶೀಘ್ರದಲ್ಲೇ ಸಿಗಲಿ ಎಂದು ಹಾರೈಸೋಣ.
* * *

ಯುಆರ್‌ಎಲ್ ಬಾಲಂಗೋಚಿಗಳುಜೂನ್ ೨೮, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ
- .com : ಮೂಲತಃ 'ಕಂಪನಿ'ಗಳಿಗಾಗಿ ಇದ್ದದ್ದು; ಈಗ ಎಲ್ಲ ಬಗೆಯ ತಾಣಗಳೂ ಈ ಬಾಲಂಗೋಚಿ ಬಳಸುತ್ತವೆ.
- .edu : ಶೈಕ್ಷಣಿಕ ಸಂಸ್ಥೆಗಳಿಗಾಗಿ
- .gov : ಸರಕಾರಿ ಸಂಸ್ಥೆಗಳಿಗೆ
- .int : ಅಂತರರಾಷ್ಟ್ರೀಯ ಸಂಸ್ಥೆಗಳಿಗೆ
- .mil : ರಕ್ಷಣಾಕ್ಷೇತ್ರದ (ಮಿಲಿಟರಿ) ಸಂಸ್ಥೆಗಳಿಗೆ
- .net : ಮೂಲತಃ ನೆಟ್‌ವರ್ಕಿಂಗ್ ತಂತ್ರಜ್ಞಾನಗಳಿಗಾಗಿ ಇದ್ದದ್ದು, ಈಗ ಎಲ್ಲ ಬಗೆಯ ತಾಣಗಳೂ ಈ ಬಾಲಂಗೋಚಿ ಬಳಸುತ್ತವೆ.
- .org : ವಾಣಿಜ್ಯೇತರ ಸಂಸ್ಥೆಗಳಿಗಾಗಿ
- .arpa : ಮೊತ್ತಮೊದಲು ಲಭ್ಯವಾದ ಬಾಲಂಗೋಚಿ, ಮೂಲತಃ ಅಡ್ವಾನ್ಸ್‌ಡ್ ರಿಸರ್ಚ್ ಪ್ರಾಜೆಕ್ಟ್ ಏಜೆನ್ಸಿಯ (ARPA) ಹೆಸರನ್ನು ಸೂಚಿಸುತ್ತಿತ್ತು. ಈಗ Address and Routing Parameter Area. ಸಾಮಾನ್ಯ ಬಳಕೆದಾರರಿಗೆ ಈ ಬಾಲಂಗೋಚಿ ಲಭ್ಯವಿಲ್ಲ.
- .aero : ವಿಮಾನಯಾನಕ್ಕೆ ಸಂಬಂಧಪಟ್ಟ ಸಂಸ್ಥೆಗಳಿಗೆ
- .biz : ವ್ಯಾಪಾರೋದ್ಯಮಗಳಿಗಾಗಿ; ಬಿಸಿನೆಸ್ ಎನ್ನುವುದರ ಹ್ರಸ್ವರೂಪ
- .coop : ಸಹಕಾರ ಸಂಸ್ಥೆಗಳಿಗೆ
- .info : ಇನ್ಫರ್ಮೇಷನ್ (ಮಾಹಿತಿ) ಎನ್ನುವುದರ ಹ್ರಸ್ವರೂಪ; ಯಾವುದೇ ಬಗೆಯ ತಾಣ ಈ ಬಾಲಂಗೋಚಿ ಬಳಸಬಹುದು
- .museum : ವಸ್ತುಸಂಗ್ರಹಾಲಯಗಳಿಗಾಗಿ
- .name : ವ್ಯಕ್ತಿಗಳ ಹೆಸರನ್ನು ಸೂಚಿಸುವ ಬಾಲಂಗೋಚಿ
- .pro : ವೃತ್ತಿಪರರಿಗಾಗಿ
- .asia : ಏಷ್ಯಾ ಖಂಡದ ತಾಣಗಳಿಗೆ
- .cat : ಕ್ಯಾಟಲನ್ ಭಾಷೆಯ ತಾಣಗಳಿಗೆ
- .jobs : ಉದ್ಯೋಗಾವಕಾಶಗಳನ್ನು ಕುರಿತ ತಾಣಗಳಿಗೆ
- .mobi : ಮೊಬೈಲ್ ದೂರವಾಣಿಯಲ್ಲಿ ವೀಕ್ಷಣೆಗೆಂದೇ ವಿಶೇಷವಾಗಿ ಸಿದ್ಧಪಡಿಸಲಾದ ತಾಣಗಳು
- .post : ಅಂಚೆ ಸೇವೆ ಒದಗಿಸುವ ಸಂಸ್ಥೆಗಳಿಗೆ
- .tel : ದೂರಸಂಪರ್ಕ ಸೇವೆ ಒದಗಿಸುವ ಸಂಸ್ಥೆಗಳಿಗೆ
- .travel : ಪ್ರವಾಸ ಸೇವೆ ಒದಗಿಸುವ ಸಂಸ್ಥೆಗಳಿಗೆ
ಇವಿಷ್ಟರ ಜೊತೆಗೆ ಕಾಮಪ್ರಚೋದಕ ಮಾಹಿತಿ ಹೊಂದಿರುವ ತಾಣಗಳಿಗಾಗಿಯೇ ಮೀಸಲಾದ .xxx ಎಂಬ ಹೊಸ ಬಾಲಂಗೋಚಿಯನ್ನೂ ಈ ವರ್ಷ ಪರಿಚಯಿಸಲಾಗುತ್ತಿದೆ.
1 ಕಾಮೆಂಟ್:
ಒಳ್ಳೆಯ ಲೇಖನ. ಕಾಕತಾಳೀಯವೆಂಬಂತೆ ಇದೇ ವಿಷಯದ ಬಗ್ಗೆ ನನ್ನ ಗಣಕಿಂಡಿಯಲ್ಲೂ ಬರೆದಿದ್ದೆ. ಅದೇ ರೀತಿ ಅಶೋಕ್ ಕುಮಾರ‍್ ಅವರೂ ಇದೇ ವಿಷಯದ ಬಗ್ಗೆ ಬರೆದಿದ್ದರು. ಮೂರು ಲೇಖನಗಳೂ ಒಂದೇ ವಾರ ಪ್ರಕಟವಾಗಿವೆ. ಅಂದರೆ ವಿಷಯ ಎಷ್ಟು ಪ್ರಾಮುಖ್ಯ ಎಂದು ವೇದ್ಯವಾಗುತ್ತದೆ.
ಕಾಮೆಂಟ್ ಪೋಸ್ಟ್ ಮಾಡಿ