ಸೋಮವಾರ, ಡಿಸೆಂಬರ್ 22, 2014

ಇದು 'ಅಲ್ಟ್ರಾ ಎಚ್‌ಡಿ' ಸಮಯ!

ಟಿ. ಜಿ. ಶ್ರೀನಿಧಿ

ಟೀವಿ ಕೊಳ್ಳಲು ಹೊರಟಾಗ ಅದು ಎಚ್‌ಡಿ ಚಿತ್ರಗಳನ್ನು ಪ್ರದರ್ಶಿಸಬಲ್ಲದೋ ಇಲ್ಲವೋ ಎಂಬ ಪ್ರಶ್ನೆ ಏಳುವುದು ಇಂದಿನ ತಂತ್ರಜ್ಞಾನ ಲೋಕದಲ್ಲಿ ಅತ್ಯಂತ ಸಾಮಾನ್ಯವಾಗಿರುವ ಸಂಗತಿ. 'ಎಚ್‌ಡಿ ರೆಡಿ', 'ಫುಲ್ ಎಚ್‌ಡಿ'ಗಳಿಂದ ಪ್ರಾರಂಭವಾದ ಈ ಎಚ್‌ಡಿ ಯಾನ ಇದೀಗ '೪ಕೆ', 'ಅಲ್ಟ್ರಾ ಎಚ್‌ಡಿ'ಗಳವರೆಗೂ ತಲುಪಿಬಿಟ್ಟಿದೆ.

ಇಷ್ಟೆಲ್ಲ ಸದ್ದುಮಾಡುತ್ತಿರುವ 'ಎಚ್‌ಡಿ' ಎನ್ನುವ ಈ ಹೆಸರು 'ಹೈ ಡೆಫನಿಷನ್' ಎನ್ನುವುದರ ಹ್ರಸ್ವರೂಪ. ಉತ್ತಮ ಗುಣಮಟ್ಟದ, ಹೆಚ್ಚು ಸ್ಪಷ್ಟವಾದ ವೀಡಿಯೋಗಳನ್ನು ಎಚ್‌ಡಿ ವೀಡಿಯೋ ಎಂದೇ ಗುರುತಿಸುವ ಅಭ್ಯಾಸ ಈಗ ವ್ಯಾಪಕವಾಗಿದೆ.

ಹಾಗೆಂದಮಾತ್ರಕ್ಕೆ ಸ್ಪಷ್ಟ ವೀಡಿಯೋಗಳೆಲ್ಲ ಎಚ್‌ಡಿ ಏನಲ್ಲ. ತಾಂತ್ರಿಕವಾಗಿ ಯಾವುದೇ ವೀಡಿಯೋ 'ಎಚ್‌ಡಿ' ಎಂದು ಕರೆಸಿಕೊಳ್ಳಬೇಕಾದರೆ ಅದಕ್ಕೆ ಕೆಲವು ನಿರ್ದಿಷ್ಟ ಅರ್ಹತೆಗಳು ಇರಬೇಕಾಗುತ್ತದೆ.

ಅವುಗಳಲ್ಲಿ ಮೊದಲನೆಯದು ರೆಸಲ್ಯೂಶನ್. ಯಾವುದೇ ವೀಡಿಯೋದ ಉದಾಹರಣೆ ತೆಗೆದುಕೊಂಡರೆ ಅದರ ಪ್ರತಿ ಫ್ರೇಮಿನಲ್ಲೂ ಒಂದಷ್ಟು 'ಪಿಕ್ಚರ್ ಎಲಿಮೆಂಟ್'ಗಳಿರುತ್ತವೆ; ಡಿಜಿಟಲ್ ಛಾಯಾಚಿತ್ರಗಳಲ್ಲಿ ಪಿಕ್ಸೆಲ್‌ಗಳಿರುತ್ತವಲ್ಲ, ಹಾಗೆಯೇ ಇಲ್ಲಿಯೂ ಪಿಕ್ಸೆಲ್‌ಗಳು ಅಥವಾ ಸಾಲುಗಳು ('ಲೈನ್') ವೀಡಿಯೋದ ಸ್ಪಷ್ಟತೆಯನ್ನು ತೀರ್ಮಾನಿಸುತ್ತವೆ.

ಗುರುವಾರ, ಡಿಸೆಂಬರ್ 11, 2014

ವಿಜ್ಞಾನಲೋಕದ ವಿದ್ಯಾಲಂಕಾರ

ಟಿ. ಆರ್. ಅನಂತರಾಮು 
ರೋಹಿತ್ ಚಕ್ರತೀರ್ಥ

"ತುಂಬ ಬೋರು ಹೊಡೆಯುತ್ತದೆ ಎನ್ನುವ ಕಾರಣಕ್ಕೆ ಮಿಸ್ಟರ್ ಟಾಂಪ್ಕಿನ್ಸ್ ಹತ್ತಿರದ ಕಟ್ಟಡವೊಂದರಲ್ಲಿ ನಡೆಯುತ್ತಿದ್ದ ಉಪನ್ಯಾಸ ಕೇಳಲು ಹೋದ. ಅದು ಹೇಳಿಕೇಳಿ ಸಾಪೇಕ್ಷ ಸಿದ್ಧಾಂತದ ಮೇಲೆ ನಡೆಯುತ್ತಿದ್ದ ಭೀಕರಭಾಷಣ! ಬಿಸಿಲುಗಾಲಕ್ಕೆ ಕಪ್ಪೆ ಬಂಡೆಯೇರಿ ಕೂತ ಹಾಗಾಯಿತು! ಈಗಾಗಲೇ ಬೋರಾಗಿದ್ದ ಟಾಂಪ್ಕಿನ್ಸ್ ಬೋರಲುಬಿದ್ದು ನಿದ್ದೆಗೆ ಜಾರಿದ. ಆಗ ಅವನಿಗೊಂದು ಕನಸು ಬಿತ್ತು. ಕನಸಿನಲ್ಲಿ ಅವನೊಂದು ಹೊಸಲೋಕಕ್ಕೆ ಪ್ರವೇಶ ಪಡೆದಿದ್ದ. ಸೆಕೆಂಡಿಗೆ ಮೂರುಲಕ್ಷ ಕಿಮೀಗಳನ್ನು ಕ್ರಮಿಸುತ್ತ ಯಮವೇಗದಲ್ಲಿ ಓಡಬೇಕಿದ್ದ ಬೆಳಕು ಈ ವಿಚಿತ್ರ ಜಗತ್ತಿನಲ್ಲಿ ಸೆಕೆಂಡಿಗೆ ಕೇವಲ ಹತ್ತು ಕಿಮೀ ಮಾತ್ರ ಸಾಗುತ್ತಿತ್ತು! ಇನ್ನೂ ಸ್ವಾರಸ್ಯದ ಸಂಗತಿಯೆಂದರೆ, ಅಲ್ಲಿನ ವಸ್ತುಗಳ ಗಾತ್ರ, ರಾಶಿ, ಗುರುತ್ವಗಳೆಲ್ಲ ಭೂಮಿಯ ಲೆಕ್ಕಾಚಾರಕ್ಕಿಂತ ಸಂಪೂರ್ಣ ಭಿನ್ನವಾಗಿದ್ದವು.." - ಹೀಗೆ ಶುರುವಾಗುತ್ತದೆ ಜಾರ್ಜ್ ಗ್ಯಾಮೋ ಎಂಬ ಜಗತ್ಪ್ರಸಿದ್ಧ ಭೌತವಿಜ್ಞಾನಿ, ಪ್ರೊಫೆಸರ್ ಮತ್ತು ವಿಜ್ಞಾನಲೇಖಕ ಬರೆದ ಕತೆ "ಮಿಸ್ಟರ್ ಟಾಂಪ್ಕಿನ್ಸ್ ಇನ್ ವಂಡರ್‌ಲ್ಯಾಂಡ್".

ವಿಜ್ಞಾನಾಸಕ್ತರ - ಅದರಲ್ಲೂ ಮುಖ್ಯವಾಗಿ ಸಾಪೇಕ್ಷ ಸಿದ್ಧಾಂತವೆಂಬ ಆ ಕಾಲದ ಕಬ್ಬಿಣದ ಕಡಲೆಯನ್ನು ಜಗಿದು ಹಲ್ಲು ಮುರಿದುಕೊಳ್ಳುತ್ತಿದ್ದವರನ್ನು ಆಕರ್ಷಿಸಿದ್ದ ಈ ಪುಸ್ತಕ ಹೋಗಿಹೋಗಿ ಒಬ್ಬರು ಕನ್ನಡಪಂಡಿತರ ಕೈಗೆ ಬಿತ್ತು. ಬೇರೆಯವರ ಉಡಿಗೆ ಬಿದ್ದಿದ್ದರೆ ಅದೆಲ್ಲಿ ಪಂಪಕುಮಾರವ್ಯಾಸರ ನಡುವೆ ಕಳೆದುಹೋಗುತ್ತಿತ್ತೋ. ಆದರೆ ಇವರು ಆಸಕ್ತಿಯಿಂದ ಓದತೊಡಗಿದ್ದೇ, ಸಾಲುಸಾಲುಗಳನ್ನು ಆಸ್ವಾದಿಸುತ್ತ ವಿಜ್ಞಾನಸಾಹಿತ್ಯದ ಕಚಗುಳಿರುಚಿಯನ್ನು ಚಪ್ಪರಿಸತೊಡಗಿದರು! "ಅಯ್ಯೋ, ಇಂತಹ ಪುಸ್ತಕ ಇದೆಯೆನ್ನುವುದೇ ಗೊತ್ತಿಲ್ಲದೆ ಕನ್ನಡಿಗ ಕೈಕಟ್ಟಿ ಕೂತಿದ್ದಾನಲ್ಲ!" ಎಂದು ಪಂಡಿತರ ಹೊಟ್ಟೆ ಚುರ್ ಅಂದಿತು. ತನ್ನ ಕಿರಿಯ ಮಿತ್ರರೊಬ್ಬರನ್ನು ಕರೆದು ದೀಕ್ಷೆ ಕೊಟ್ಟೇಬಿಟ್ಟರು. "ಈ ಪುಸ್ತಕ ಕನ್ನಡದಲ್ಲಿ ಬರಲಿಕ್ಕೇಬೇಕು. ವಿಚಿತ್ರ ಲೋಕದಲ್ಲಿ ವಿದ್ಯಾಲಂಕಾರ - ಅಂತ ಟೈಟಲ್ ಇಟ್ಟುಕೋ. ಪ್ರಕಟಿಸುವ ಜವಾಬ್ದಾರಿ ನನ್ನದು" ಎಂಬ ಆಗ್ರಹಪೂರ್ವಕ ಬಿನ್ನಹ ಮಾಡಿದರು.

ಇದು ೧೯೫೧ರ ಮಾತು. ಬಡಮೇಸ್ಟ್ರ ತಿಂಗಳ ಸಂಬಳ ಹೆಚ್ಚೆಂದರೆ ಅರುವತ್ತೆಪ್ಪತ್ತು ಇದ್ದ ಸಮಯ. ಹಾಗಿರುವಾಗ, ಗೆಳೆಯ ಬರೆದ ಪುಸ್ತಕ ಪ್ರಕಟಿಸಲು ೮೦೦ ರುಪಾಯಿ ತೊಡಗಿಸಿ ಕೈಸುಟ್ಟುಕೊಳ್ಳುವುದುಂಟೆ? "ಹಾಗೆ ಹಿಮ್ಮೆಟ್ಟುತ್ತ ಕೂತರೆ ಕನ್ನಡಕ್ಕೆ ವಿಜ್ಞಾನ ತರುವವರು ಯಾರು? ಈ ಸಹಾಯವನ್ನು ನಾನು ಮಾಡಿಲ್ಲವಾದರೆ ಬೇರಾರು ಮಾಡಬೇಕು?" ಎಂದ ಮೇಸ್ಟ್ರು ಎರಡನೇ ಯೋಚನೆಯನ್ನೇ ಮಾಡಲಿಲ್ಲ. ಪುಸ್ತಕ ಪ್ರಕಟವಾಯಿತು.

ಸೋಮವಾರ, ಡಿಸೆಂಬರ್ 8, 2014

ಜಿಪಿಎಸ್ ಎಂಬ ಮಾರ್ಗದರ್ಶಕ

ಟಿ. ಜಿ. ಶ್ರೀನಿಧಿ

ಸಿನಿಮಾಗೆ ಹೋದದ್ದು ಗೆಳೆಯರಿಗೆಲ್ಲ ಗೊತ್ತಾಗಲಿ ಎಂದು ಫೇಸ್‌ಬುಕ್‌ನಲ್ಲಿ 'ಚೆಕ್ ಇನ್' ಮಾಡಲು ಹೋದರೆ ನಾವು ಯಾವ ಮಲ್ಟಿಪ್ಲೆಕ್ಸಿನಲ್ಲಿದ್ದೇವೆ ಎಂದು ಅದೇ ತೋರಿಸಿಬಿಡುತ್ತದೆ. ಸಿನಿಮಾ ಮುಗಿದ ಮೇಲೆ ಊಟಕ್ಕೆಂದು ಹೋಟಲಿಗೆ ಹೋಗಬೇಕೆ? ಅದಕ್ಕೆ ಟ್ಯಾಕ್ಸಿ ಸಂಸ್ಥೆಯ ಮೊಬೈಲ್ ಆಪ್ ಬಳಸಿದರೆ ಸಾಕು - ಹತ್ತಿರದಲ್ಲಿ ಯಾವುದಾದರೂ ಟ್ಯಾಕ್ಸಿ ಇದೆಯೇ ಎನ್ನುವುದು ನಮಗೆ ಗೊತ್ತಾಗುತ್ತದೆ, ನಮ್ಮ ಸಾರಥಿಯಾಗಲಿರುವ ಟ್ಯಾಕ್ಸಿ ಚಾಲಕನಿಗೆ ನಾವೆಲ್ಲಿದ್ದೇವೆ ಎನ್ನುವುದೂ ತಿಳಿದುಬಿಡುತ್ತದೆ. ಇನ್ನು ಟ್ಯಾಕ್ಸಿ ಹತ್ತಿ ಹೊರಟಮೇಲೂ ಅಷ್ಟೆ, ಚಾಲಕನ ಮುಂದಿರುವ ಪರದೆಯಲ್ಲಿ ಟ್ಯಾಕ್ಸಿ ಸಾಗುತ್ತಿರುವ ದಾರಿಯ ಮ್ಯಾಪು ಸ್ಪಷ್ಟವಾಗಿ ಮೂಡಿಬರುತ್ತದೆ. ಆತನಿಗೆ ಸರಿಯಾದ ದಾರಿ ಗೊತ್ತಿಲ್ಲದಿದ್ದರೂ ಚಿಂತೆಯಿಲ್ಲ, ಏಕೆಂದರೆ ಮ್ಯಾಪ್ ತೋರಿಸುತ್ತಿರುವ ತಂತ್ರಾಂಶ ಆ ಹೋಟಲಿಗೆ ತಲುಪುವುದು ಹೇಗೆ ಎನ್ನುವುದನ್ನೂ ಹೇಳಿಕೊಡುತ್ತದೆ!

ಹೊಸ ಊರಿಗೆ ಪ್ರವಾಸ ಹೋದಾಗ, ಹಳೆಯ ಊರಿನಲ್ಲಿ ಅಡ್ರೆಸ್ ಸಿಗದೆ ಪರದಾಡುವಾಗಲೆಲ್ಲ ನಾವು ಈ ಹಿಂದೆಯೂ ಮೊಬೈಲ್ ಬಳಸುತ್ತಿದ್ದದ್ದುಂಟು. ಆದರೆ ಅದು ಆ ಪ್ರದೇಶದ ಪರಿಚಯವಿರುವವರಿಂದ ಸಹಾಯ ಕೇಳಲು ಮಾತ್ರವೇ ಆಗಿರುತ್ತಿತ್ತು. ಈಗಿನ ಪರಿಸ್ಥಿತಿ ಹಾಗಿಲ್ಲ, ಯಾವ ಹೋಟಲಿನಲ್ಲಿದ್ದೇವೆ ಎಂದು ಫೇಸ್‌ಬುಕ್ ಅಪ್‌ಡೇಟ್ ಹಾಕುವುದರಿಂದ ಹಿಡಿದು ನಾವು ತಲುಪಬೇಕಿರುವ ವಿಳಾಸಕ್ಕೆ ಹೋಗಬೇಕಾದ ಮಾರ್ಗ ತಿಳಿದುಕೊಳ್ಳುವವರೆಗೆ ಅದೆಷ್ಟೋ ಸಂದರ್ಭಗಳಲ್ಲಿ ಮೊಬೈಲ್ ಫೋನ್ ನಮ್ಮ ನೆರವಿಗೆ ಬರುತ್ತದೆ. ಅಷ್ಟೇ ಅಲ್ಲ, ಆ ಎಲ್ಲ ಸಂದರ್ಭಗಳಲ್ಲೂ ನಾವು ಇರುವ ಸ್ಥಳವನ್ನು ಅದು ಬಹುತೇಕ ಸರಿಯಾಗಿಯೇ ಗುರುತಿಸಿರುತ್ತದೆ.

ಮೊಬೈಲ್ ಫೋನ್ ಇರುವ ಜಾಗವನ್ನು ಗುರುತಿಸಿ ಅದರ ಆಧಾರದ ಮೇಲೆ ಇಷ್ಟೆಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ನೆರವಾಗುವ ತಂತ್ರಜ್ಞಾನವೇ ಜಿಪಿಎಸ್, ಅಂದರೆ ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ.

ಶುಕ್ರವಾರ, ಡಿಸೆಂಬರ್ 5, 2014

ಯಂತ್ರಮಾನವ ಮಾನವಯಂತ್ರ

ಟಿ. ಜಿ. ಶ್ರೀನಿಧಿ

ಇಪ್ಪತ್ತನೇ ಶತಮಾನದ ಪ್ರಾರಂಭದ ಕಾಲವನ್ನು ಯಂತ್ರಯುಗವೆಂದು ಕರೆಯುವ ಅಭ್ಯಾಸವಿದೆ. ಬೃಹತ್ ಕಾರ್ಖಾನೆಗಳು ವಸ್ತುಗಳ ತಯಾರಿಕೆಯನ್ನು ಸುಲಭವಾಗಿಸಿದ್ದು, ಹೊಸ ಯಂತ್ರಗಳು ಮನುಷ್ಯನ ದೈಹಿಕ ಶ್ರಮವನ್ನು ಕಡಿಮೆಮಾಡಿದ್ದು, ಕಲ್ಪಿಸಿಕೊಳ್ಳಲೂ ಕಷ್ಟವಾಗಿದ್ದ ಸಂಗತಿಗಳು ತಂತ್ರಜ್ಞಾನದ ನೆರವಿನಿಂದ ಸಾಕಾರಗೊಳ್ಳಲು ಪ್ರಾರಂಭವಾದದ್ದು ಇದೇ ಅವಧಿಯಲ್ಲಿ. ಇಂದು ತಂತ್ರಜ್ಞಾನ ನಮ್ಮ ಜೀವನದ ಎಲ್ಲ ಆಯಾಮಗಳನ್ನೂ ಪ್ರಭಾವಿಸಿದೆಯಲ್ಲ, ಆ ಅದ್ಭುತ ಬೆಳವಣಿಗೆಯ ಮೂಲವನ್ನು ನಾವು ಈ ಯಂತ್ರಯುಗದಲ್ಲಿ ಕಾಣಬಹುದು.

ಮನುಷ್ಯ ಹಾಗೂ ಯಂತ್ರಗಳ ನಡುವಿನ ಒಡನಾಟ ಹೆಚ್ಚಲು ಶುರುವಾದದ್ದೂ ಇದೇ ಸಮಯದಲ್ಲಿ. ಯಂತ್ರಗಳ ನೆರವಿನಿಂದ ಮನುಷ್ಯನ ಬದುಕಿನ ಗುಣಮಟ್ಟ ಗಮನಾರ್ಹವಾಗಿ ಹೆಚ್ಚಿತು; ಅದರ ಜೊತೆಗೆ "ಯಂತ್ರಗಳು ಮನುಷ್ಯನ ಕೆಲಸವನ್ನು ತಾವೇ ಮಾಡಿ ಕೆಲಸಗಾರರನ್ನು ಬೀದಿಗೆ ತರುತ್ತವೆ", "ತಂತ್ರಜ್ಞಾನ ಹೀಗೆಯೇ ಬೆಳೆಯುತ್ತ ಹೋದರೆ ಮುಂದೊಂದು ದಿನ ಯಂತ್ರಗಳೇ ನಮ್ಮನ್ನು ಆಳಬಹುದು" ಮುಂತಾದ ಭಾವನೆಗಳೂ ವ್ಯಾಪಕವಾಗಿ ಕಾಣಿಸಿಕೊಂಡವು. ಮನುಷ್ಯ ಹಾಗೂ ಯಂತ್ರಗಳ ನಡುವೆ ಒಂದು ರೀತಿಯ ಸ್ಪರ್ಧೆಯೇ ಉಂಟಾಯಿತು ಎಂದರೂ ಸರಿಯೇ.

ಅಲ್ಲಿಂದ ಮುಂದಕ್ಕೆ ತಂತ್ರಜ್ಞಾನ ಬೆಳೆದುಬಂದಿರುವ ಪರಿ ನಮಗೆಲ್ಲ ಗೊತ್ತೇ ಇದೆ. ನಮ್ಮ ಕೆಲಸಗಳನ್ನು ಸುಲಭಗೊಳಿಸುವುದಿರಲಿ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಷೇತ್ರದಲ್ಲಿ ನಡೆದಿರುವ ಬೆಳವಣಿಗೆಗಳು ಯಂತ್ರಗಳಿಗೆ ಸ್ವತಃ ಯೋಚಿಸುವ - ಆ ಯೋಚನೆಗಳಿಗೆ ತಕ್ಕಂತೆ ಕೆಲಸಮಾಡುವ ಶಕ್ತಿಯನ್ನೂ ನೀಡಲು ಪ್ರಯತ್ನಿಸುತ್ತಿವೆ.

ಯಂತ್ರಗಳು ಇಷ್ಟೆಲ್ಲ ಅಭಿವೃದ್ಧಿಯಾಗಿ ಮಾನವರಂತೆಯೇ ಆಗುವುದಾದರೆ ಮನುಷ್ಯರು ಕೊಂಚಮಟ್ಟಿಗಾದರೂ ಯಂತ್ರಗಳಾಗುವುದರಲ್ಲಿ ಏನು ತಪ್ಪು?

ಮಂಗಳವಾರ, ಡಿಸೆಂಬರ್ 2, 2014

ಕನ್ನಡನಾಡಿನ ಐಟಿ ಜಗತ್ತು

ಕನ್ನಡನಾಡಿನ ಇತಿಹಾಸದಿಂದ ಪರಿಸರದವರೆಗೆ, ಕನ್ನಡದ ಸಾಹಿತ್ಯ-ಸಂಸ್ಕೃತಿಯಿಂದ ಆಹಾರ ವೈವಿಧ್ಯದವರೆಗೆ ಪ್ರತಿಯೊಂದು ಅಂಶವೂ ವಿಶಿಷ್ಟವೇ. ಹಿಂದಿನ ಕಾಲದಿಂದಲೂ ನಮ್ಮ ನಾಡಿನೊಡನೆ ಬಂದಿರುವ ಈ ಹೆಚ್ಚುಗಾರಿಕೆಗಳ ಸಾಲಿಗೆ ಕಳೆದ ಕೆಲ ದಶಕಗಳಲ್ಲಿ ಸೇರಿದ್ದು ಮಾಹಿತಿ ತಂತ್ರಜ್ಞಾನದ ತವರು ಎನ್ನುವ ಇನ್ನೊಂದು ಹಿರಿಮೆ. ಈ ಸಂಗತಿ ಅದೆಷ್ಟು ಜನಪ್ರಿಯ ಎಂದರೆ ಪ್ರಪಂಚದ ಯಾವುದೋ ಮೂಲೆಯಲ್ಲಿ, ಹೆಸರು ಹೇಳಲೂ ಕಷ್ಟವಾಗುವಂತಹ ಊರಿನಲ್ಲಿರುವವರಿಗೂ ಬೆಂಗಳೂರಿನ ಪರಿಚಯವಿರುತ್ತದೆ. ಕನ್ನಡನಾಡಿನೊಳಗೊಂದು ಐಟಿ ಜಗತ್ತು ರೂಪುಗೊಂಡ, ಬೆಳೆದುನಿಂತ ಈ ಪ್ರಕ್ರಿಯೆಯ ಒಂದು ಸಿಂಹಾವಲೋಕನ ಇಲ್ಲಿದೆ.

ಟಿ. ಜಿ. ಶ್ರೀನಿಧಿ

ಚಿತ್ರಕೃಪೆ: bangaloreitbt.in
ನಮ್ಮ ದೇಶದಲ್ಲಿ ಐಟಿ ಉದ್ದಿಮೆಯ ಪ್ರಾರಂಭವಾದದ್ದು ಸುಮಾರು ಎಪ್ಪತ್ತರ ದಶಕದಲ್ಲಿರಬೇಕು. ಆಗಿನ ಕಾಲದಲ್ಲಿ ಹೆಚ್ಚೂಕಡಿಮೆ ಎಲ್ಲ ಸಂಸ್ಥೆಗಳೂ ಮುಂಬಯಿಯಿಂದಲೇ ಕಾರ್ಯನಿರ್ವಹಿಸುತ್ತಿದ್ದವು ಎಂದು ತೋರುತ್ತದೆ. ತಂತ್ರಜ್ಞಾನದಲ್ಲಿ ಪರಿಣತರಾದವರನ್ನು ಅಂತಹವರ ಅಗತ್ಯವಿದ್ದ ಸಂಸ್ಥೆಗಳಿಗೆ ಕಳುಹಿಸಿಕೊಡುವುದು, ಹಾಗೂ ಆ ಸೇವೆಯನ್ನು ಒದಗಿಸಿಕೊಟ್ಟದ್ದಕ್ಕೆ ತಮ್ಮ ಶುಲ್ಕ ಪಡೆದುಕೊಳ್ಳುವುದು - ಇದು ಇಂತಹ ಬಹಳಷ್ಟು ಸಂಸ್ಥೆಗಳ ಪ್ರಾಥಮಿಕ ಚಟುವಟಿಕೆಯಾಗಿತ್ತು ಎನ್ನಬಹುದು.

ಮೊದಲಿಗೆ ಸೀಮಿತ ಪ್ರಮಾಣದಲ್ಲೇ ನಡೆಯುತ್ತಿದ್ದ ಈ ಸಂಸ್ಥೆಗಳ ವಹಿವಾಟು ಕಂಪ್ಯೂಟರ್ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಜಾಸ್ತಿಯಾಗುತ್ತ ಬಂತು. ಹೆಚ್ಚುಹೆಚ್ಚು ಸಂಸ್ಥೆಗಳು ಐಟಿ ಕ್ಷೇತ್ರ ಪ್ರವೇಶಿಸಿ ಅಲ್ಲಿ ಸ್ಪರ್ಧೆ ಹೆಚ್ಚುತ್ತಿದ್ದಂತೆ ಮುಂಬಯಿಯಷ್ಟೇ ಉತ್ತಮವಾದ ಸೌಕರ್ಯಗಳನ್ನು ಹೊಂದಿರುವ, ಸಾಧ್ಯವಾದರೆ ಅದಕ್ಕಿಂತ ಹೆಚ್ಚೇ ಅನುಕೂಲಕರವಾದ ಊರಿಗಾಗಿ ಹುಡುಕಾಟ ಪ್ರಾರಂಭವಾಯಿತು.

ಆಗ ಆಯ್ಕೆಯಾದದ್ದೇ ನಮ್ಮ ಬೆಂಗಳೂರು.
badge