ಮಂಗಳವಾರ, ಸೆಪ್ಟೆಂಬರ್ 25, 2012

ಸೂಪರ್‌ಕಂಪ್ಯೂಟರ್ ಬಗ್ಗೆ ಇನ್ನಷ್ಟು

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಕುಟುಂಬದ ಸದಸ್ಯರ ಪೈಕಿ ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯ ಹೊಂದಿರುವ, ಹಾಗೂ ಅತ್ಯಂತ ದುಬಾರಿಯಾಗಿರುವ ಹೆಚ್ಚುಗಾರಿಕೆ ಸೂಪರ್‌ಕಂಪ್ಯೂಟರುಗಳದು. ಕ್ಲಿಷ್ಟ ಲೆಕ್ಕಾಚಾರಗಳ ಅಗತ್ಯವಿರುವ ಹವಾಮಾನ ಮುನ್ಸೂಚನೆ, ವೈಜ್ಞಾನಿಕ ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಸೂಪರ್‌ಕಂಪ್ಯೂಟರುಗಳು ಬಳಕೆಯಾಗುತ್ತವೆ.

ಇವುಗಳ ಸಂಸ್ಕರಣಾ ಸಾಮರ್ಥ್ಯ ತೀರಾ ಉನ್ನತಮಟ್ಟದ್ದಾಗಿರುವುದರಿಂದಲೇ ಅದನ್ನು ಅಳೆಯಲು 'ಫ್ಲೋಟಿಂಗ್ ಪಾಯಿಂಟ್ ಇನ್ಸ್‌ಟ್ರಕ್ಷನ್ಸ್ ಪರ್ ಸೆಕೆಂಡ್', ಅಂದರೆ FLOPS ಎಂಬ ಏಕಮಾನವನ್ನು ಬಳಸಲಾಗುತ್ತದೆ. ದಶಾಂಶವಿರುವ ದೊಡ್ಡದೊಡ್ಡ ಸಂಖ್ಯೆಗಳ ಮೇಲೆ ಯಾವುದೇ ಕಂಪ್ಯೂಟರ್ ಒಂದು ಸೆಕೆಂಡಿನಲ್ಲಿ ಗುಣಾಕಾರ, ಭಾಗಾಕಾರ, ವರ್ಗಮೂಲ ಮುಂತಾದ ಎಷ್ಟು ಲೆಕ್ಕಾಚಾರಗಳನ್ನು ಕೈಗೊಳ್ಳಬಲ್ಲದು ಎನ್ನುವುದನ್ನು ಈ ಮಾಪನ ತಿಳಿಸುತ್ತದೆ.

ನಮಗೆಲ್ಲ ಪರಿಚಿತವಿರುವ ಕ್ಯಾಲ್‌ಕ್ಯುಲೇಟರುಗಳ ಸಾಮರ್ಥ್ಯ FLOPS ಏಕಮಾನದಲ್ಲಿ ಸುಮಾರು ಹತ್ತು ಇರಬಹುದು. ೧೯೬೦ರ ಸುಮಾರಿಗೆ ಬಂದ ಸೂಪರ್‌ಕಂಪ್ಯೂಟರುಗಳಲ್ಲಿ ಇದಕ್ಕಿಂತ ಕೆಲವೇ ನೂರು ಪಟ್ಟು ಹೆಚ್ಚಿನ, ಅಂದರೆ ಕೆಲವು ಸಾವಿರ ಫ್ಲಾಪ್ಸ್‌ನಷ್ಟು ಸಂಸ್ಕರಣಾ ಸಾಮರ್ಥ್ಯ ಇರುತ್ತಿತ್ತೆಂದು ತೋರುತ್ತದೆ. ಅದೇ ಇಂದಿನ ಸ್ಮಾರ್ಟ್‌ಫೋನುಗಳ ವಿಷಯಕ್ಕೆ ಬಂದರೆ ಅವುಗಳ ಸಾಮರ್ಥ್ಯ ಒಂದೆರಡು ಕೋಟಿ ಫ್ಲಾಪ್ಸ್ ಇರಬಹುದು. ಇನ್ನು ಟ್ಯಾಬ್ಲೆಟ್ ಗಣಕಗಳ ವಿಷಯಕ್ಕೆ ಬಂದರಂತೂ ಅವುಗಳಲ್ಲಿ ಇನ್ನೂ ಎಂಟು-ಹತ್ತು ಪಟ್ಟು ಜಾಸ್ತಿ ಸಂಸ್ಕರಣಾ ಸಾಮರ್ಥ್ಯ ಇರುತ್ತದೆ.

ಮೇಲ್ನೋಟಕ್ಕೆ ಭಲೇ ಎನ್ನಿಸಿದರೂ ಸೂಪರ್‌ಕಂಪ್ಯೂಟರುಗಳ ಸಾಮರ್ಥ್ಯದ ಇದೆಲ್ಲ ಏನೇನೂ ಅಲ್ಲ. ಏಕೆಂದರೆ ಸದ್ಯದ ಸೂಪರ್‌ಕಂಪ್ಯೂಟರುಗಳ ಸಾಮರ್ಥ್ಯ ಪೆಟಾಫ್ಲಾಪ್ಸ್‌ಗಳಲ್ಲಿದೆ! ಕಿಲೋ ಅಂದರೆ ಸಾವಿರ, ಮೆಗಾ ಅಂದರೇನೇ ಹತ್ತು ಲಕ್ಷ, ಇನ್ನು ಪೆಟಾ ಅಂದರೆ?

ಮಂಗಳವಾರ, ಸೆಪ್ಟೆಂಬರ್ 18, 2012

ಕೀಬೋರ್ಡ್ ಕತೆ

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಬಳಕೆದಾರರಿಗೆಲ್ಲ ಚಿರಪರಿಚಿತ ಯಂತ್ರಾಂಶ ಕೀಬೋರ್ಡ್. ಕಂಪ್ಯೂಟರಿಗೆ ನಾವು ನೀಡಬೇಕಾದ ಆದೇಶಗಳಿರಲಿ, ಮುದ್ರಣಕ್ಕೆ ಸಿದ್ಧಪಡಿಸಬೇಕಿರುವ ಕಡತವಿರಲಿ, ಎಲ್ಲವುದಕ್ಕೂ ಕೀಬೋರ್ಡ್ ಬೇಕು. ಕೀಬೋರ್ಡಿನ ಕೀಲಿಗಳನ್ನು ಒತ್ತಿದರೆ ಸಾಕು, ನಾವು ಹೇಳಬೇಕಿರುವುದು ಕಂಪ್ಯೂಟರಿಗೆ ತಿಳಿದುಬಿಡುತ್ತದೆ! ಎಂದು ಈಗಷ್ಟೆ ಕಂಪ್ಯೂಟರ್ ಬಳಕೆ ಕಲಿತವರೂ ಹೇಳಬಲ್ಲರು.

ಕೇಳಲು, ನೋಡಲು ಅದೆಷ್ಟು ಸರಳವೆಂದು ತೋರಿದರೂ ಕೀಬೋರ್ಡ್ ಕೆಲಸಮಾಡುವ ವಿಧಾನ ಸಾಕಷ್ಟು ಸಂಕೀರ್ಣವಾದದ್ದೇ. ಹಾಗೆ ನೋಡಿದರೆ ಅದನ್ನೊಂದು ಸಣ್ಣ ಕಂಪ್ಯೂಟರ್ ಎಂದೇ ಕರೆಯಬಹುದು. ಬಳಕೆದಾರರು ಯಾವ ಕೀಲಿಯನ್ನು ಒತ್ತಿದ್ದಾರೆ ಎಂದು ಪತ್ತೆಮಾಡಿ ಸೂಕ್ತ ಸಂಕೇತದ ಮೂಲಕ ಆ ಮಾಹಿತಿಯನ್ನು ಕಂಪ್ಯೂಟರಿಗೆ ತಿಳಿಸಲು ಬೇಕಾದ ವ್ಯವಸ್ಥೆಯೆಲ್ಲ ಕೀಬೋರ್ಡಿನಲ್ಲಿರುತ್ತದೆ.

ಬುಧವಾರ, ಸೆಪ್ಟೆಂಬರ್ 12, 2012

ಫ್ಲ್ಯಾಶ್ ನ್ಯೂಸ್!

ಟಿ. ಜಿ. ಶ್ರೀನಿಧಿ

ಮೂರೂವರೆಸಾವಿರದ ಮೊಬೈಲ್ ಆಗಿರಲಿ, ಅದಕ್ಕಿಂತ ಹತ್ತು ಪಟ್ಟು ಹೆಚ್ಚಿನ ಬೆಲೆಯ ಡಿಎಸ್‌ಎಲ್‌ಆರ್ ಆಗಿರಲಿ, ನಮ್ಮಲ್ಲಿರುವ ಕ್ಯಾಮೆರಾ ಬಳಸಿ ಒಳ್ಳೆಯ ಚಿತ್ರಗಳನ್ನು ಕ್ಲಿಕ್ಕಿಸಬೇಕೆನ್ನುವುದೇ ನಮ್ಮೆಲ್ಲರ ಆಸೆ. ಕ್ಯಾಮೆರಾದಲ್ಲಿರುವ ಬೇರೆಬೇರೆ ಮೋಡ್‌ಗಳನ್ನು ಬಳಸುವುದು, ವಿಭಿನ್ನ ಕೋನಗಳಿಂದ ಚಿತ್ರ ತೆಗೆಯಲು ಪ್ರಯತ್ನಿಸುವುದು - ಎಲ್ಲವೂ ಇದೇ ಉದ್ದೇಶಕ್ಕಾಗಿಯೇ ಅಲ್ಲವೆ?

ಹೀಗೆ ಚಿತ್ರಗಳನ್ನು ಕ್ಲಿಕ್ಕಿಸುವಾಗ ನಮ್ಮ ಕೈಲಿರುವ ಕ್ಯಾಮೆರಾ ಹಾಗೂ ಅದರ ಮುಂದಿರುವ ದೃಶ್ಯದಷ್ಟೇ ಮಹತ್ವದ ವಿಷಯ ಇನ್ನೊಂದಿದೆ. ಅದೇ ಬೆಳಕು. ಬೆಳಕಿನ ಸಂಯೋಜನೆ ಸರಿಯಿಲ್ಲದೆ ಎಷ್ಟೇ ಅದ್ಭುತವಾದ ದೃಶ್ಯವನ್ನು ಕ್ಲಿಕ್ಕಿಸಿದರೂ ಒಳ್ಳೆಯ ಚಿತ್ರ ಸಿಗುವುದು ಅಸಾಧ್ಯವೆಂದೇ ಹೇಳಬಹುದು.

ಹಾಗೆಂದಮಾತ್ರಕ್ಕೆ ಎಲ್ಲ ಸನ್ನಿವೇಶಗಳಲ್ಲೂ ಫೋಟೋ ತೆಗೆಯಲು ಅನುಕೂಲಕರವಾದ ಬೆಳಕನ್ನು ನಿರೀಕ್ಷಿಸುವಂತಿಲ್ಲವಲ್ಲ?

ಸೋಮವಾರ, ಸೆಪ್ಟೆಂಬರ್ 10, 2012

ಅನಿಸಿಕೆ ತಿಳಿಸಿ ಬಹುಮಾನ ಗೆಲ್ಲಿ!

ಇಜ್ಞಾನ ಡಾಟ್ ಕಾಮ್‌ನಲ್ಲಿ ವಾರಕ್ಕೊಂದರಂತೆ ಪ್ರಕಟವಾಗುತ್ತಿರುವ ತಂತ್ರಜ್ಞಾನ ಲೇಖನಗಳನ್ನು ನೀವು ಗಮನಿಸಿದ್ದೀರಿ. ಪ್ರತಿ ಮಂಗಳವಾರ ಉದಯವಾಣಿಯ ಜೋಶ್ ಪುರವಣಿಯಲ್ಲಿ ಮೂಡಿಬರುವ ಈ ಅಂಕಣದ ನೂರನೆಯ ಕಂತು ಇನ್ನು ಕೆಲವೇ ವಾರಗಳಲ್ಲಿ ಪ್ರಕಟವಾಗಲಿದೆ.

ನೂರನೆಯ ಕಂತಿನಲ್ಲಿ ನೀವು ಯಾವ ವಿಷಯದ ಕುರಿತ ಬರೆಹವನ್ನು ಓದಲು ಇಷ್ಟಪಡುತ್ತೀರಿ?

ನಿಮ್ಮ ಅನಿಸಿಕೆಯನ್ನು ಸೆಪ್ಟೆಂಬರ್ ೩೦, ೨೦೧೨ರೊಳಗೆ ನಮಗೆ ತಿಳಿಸಿ. ಆಯ್ಕೆಯಾದ ಉತ್ತರಕ್ಕೆ ಇಜ್ಞಾನ ಡಾಟ್ ಕಾಮ್ ವತಿಯಿಂದ ವಿಶೇಷ ಬಹುಮಾನವಿದೆ!*


*ಷರತ್ತುಗಳು ಅನ್ವಯಿಸುತ್ತವೆ.

ಗುರುವಾರ, ಸೆಪ್ಟೆಂಬರ್ 6, 2012

ಹುಲಿ ಉಳಿಸುವ ದಾರಿ

ಇಜ್ಞಾನ ವಾರ್ತೆ


ಹೆಸರಾಂತ ವನ್ಯಜೀವಿ ಚಿತ್ರನಿರ್ಮಾಪಕ ಶ್ರೀ ಶೇಖರ್ ದತ್ತಾತ್ರಿಯವರು ನಿರ್ಮಿಸಿರುವ 'ದ ಟ್ರುಥ್ ಅಬೌಟ್ ಟೈಗರ್ಸ್' ಸಾಕ್ಷ್ಯಚಿತ್ರದ ಕನ್ನಡ ಆವೃತ್ತಿ ಇಂದು (ಸೆಪ್ಟೆಂಬರ್ ೬) ಸಂಜೆ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಬಿಡುಗಡೆಯಾಯಿತು. ಅಳಿವಿನಂಚಿನಲ್ಲಿರುವ ಭಾರತದ ರಾಷ್ಟ್ರಪ್ರಾಣಿ ಹುಲಿಯನ್ನೂ, ಅದರ ನೈಜ ನೆಲೆಗಳನ್ನೂ ಸಂರಕ್ಷಿಸುವ ಅಗತ್ಯ ಮತ್ತು ಅದಕ್ಕಾಗಿ ಅನುಸರಿಸಬೇಕಾದ ಕ್ರಮಗಳನ್ನು ಈ ಸಾಕ್ಷ್ಯಚಿತ್ರ ನಿರೂಪಿಸುತ್ತದೆ. ಈ ಪರಿಣಾಮಕಾರಿ ಚಿತ್ರವನ್ನು 'ಹುಲಿ ಉಳಿಸುವ ದಾರಿ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿರುವವರು ಶ್ರೀ ಟಿ. ಎಸ್. ಗೋಪಾಲ್ ಹಾಗೂ ಡಾ| ಕೆ. ಉಲ್ಲಾಸ ಕಾರಂತ.

ಯಾವುದೇ ವಾಣಿಜ್ಯ ಉದ್ದೇಶಗಳಿಲ್ಲದ ಈ ಚಿತ್ರ ಹಾಗೂ ಅದರಲ್ಲಿರುವ ಮಾಹಿತಿಯ ಬಗ್ಗೆ ಹೆಚ್ಚಿನ ವಿವರಗಳನ್ನು www.truthabouttigers.org ಜಾಲತಾಣದಲ್ಲಿ ಪಡೆಯಬಹುದು. ಅಷ್ಟೇ ಅಲ್ಲ, ಸಂಪೂರ್ಣ ಸಾಕ್ಷ್ಯಚಿತ್ರವನ್ನು ಯುಟ್ಯೂಬ್‌ನಲ್ಲಿ (www.youtube.com/truthabouttigers) ಮುಕ್ತವಾಗಿ ವೀಕ್ಷಿಸಲೂಬಹುದು.

ಮಂಗಳವಾರ, ಸೆಪ್ಟೆಂಬರ್ 4, 2012

ಮೋಡ್ ಮೋಡಿ ನೋಡಿ!

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನಿನಲ್ಲಿರುವ ಕ್ಯಾಮೆರಾದಿಂದ ಪ್ರಾರಂಭಿಸಿ ಡಿಎಸ್‌ಎಲ್‌ಆರ್‌ವರೆಗೆ ನಾವೆಲ್ಲ ಅನೇಕ ರೀತಿಯ ಡಿಜಿಟಲ್ ಕ್ಯಾಮೆರಾಗಳನ್ನು ಬಳಸುತ್ತೇವೆ. ಬೇಕಾದಷ್ಟು ಚಿತ್ರಗಳನ್ನು ಕ್ಲಿಕ್ಕಿಸುತ್ತೇವೆ.

ನಾವು ಏನನ್ನು ಕ್ಲಿಕ್ಕಿಸಲು ಹೊರಟಿದ್ದೇವೋ ಆ ವಿಷಯಕ್ಕೆ ತಕ್ಕಂತೆ ಕ್ಯಾಮೆರಾದ ತಾಂತ್ರಿಕ ಸಂಯೋಜನೆಯನ್ನು ಬದಲಾಯಿಸಿಕೊಂಡರೆ ಉತ್ತಮ ಚಿತ್ರಗಳನ್ನು ಸೆರೆಹಿಡಿಯುವುದು ಸಾಧ್ಯವಾಗುತ್ತದೆ. ಮನೆಯೊಳಗೆ ಆಡುತ್ತಿರುವ ಮಗುವಿರಲಿ, ರಸ್ತೆಯಲ್ಲಿ ಓಡುತ್ತಿರುವ ಮರ್ಸಿಡಿಸ್ ಕಾರೇ ಇರಲಿ, ಬೇರೆಬೇರೆ 'ಮೋಡ್'ಗಳನ್ನು ಬಳಸಿ ಕ್ಯಾಮೆರಾದ ತಾಂತ್ರಿಕ ಸಂಯೋಜನೆಯನ್ನು ನಾವು ಕ್ಲಿಕ್ಕಿಸಲಿರುವ ಚಿತ್ರಕ್ಕೆ ಸರಿಯಾಗಿ ಹೊಂದಿಸಿಕೊಳ್ಳಬಹುದು.

ಬಹುತೇಕ ಕ್ಯಾಮೆರಾಗಳಲ್ಲಿ ವೃತ್ತಾಕಾರದ ಒಂದು ಪುಟ್ಟ ಡಯಲ್ ಅನ್ನು ತಿರುಗಿಸುವ ಮೂಲಕ ಮೋಡ್‌ಗಳನ್ನು ಬದಲಿಸಿಕೊಳ್ಳುವುದು ಸಾಧ್ಯ (ಚಿತ್ರ ನೋಡಿ). ಮೊಬೈಲುಗಳಲ್ಲಿ ಇಂತಹ ಡಯಲ್ ಇಲ್ಲದಿದ್ದರೂ ಕೂಡ ಕ್ಯಾಮೆರಾದ ಆಯ್ಕೆಗಳಲ್ಲೇ ನಮಗೆ ಬೇಕಾದ ಮೋಡ್ ಅನ್ನು ಆರಿಸಿಕೊಳ್ಳಬಹುದು. ಇಂತಹ ಕೆಲ 'ಮೋಡ್'ಗಳ ಪರಿಚಯ ಇಲ್ಲಿದೆ.
badge