ಮಂಗಳವಾರ, ಸೆಪ್ಟೆಂಬರ್ 4, 2012

ಮೋಡ್ ಮೋಡಿ ನೋಡಿ!

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನಿನಲ್ಲಿರುವ ಕ್ಯಾಮೆರಾದಿಂದ ಪ್ರಾರಂಭಿಸಿ ಡಿಎಸ್‌ಎಲ್‌ಆರ್‌ವರೆಗೆ ನಾವೆಲ್ಲ ಅನೇಕ ರೀತಿಯ ಡಿಜಿಟಲ್ ಕ್ಯಾಮೆರಾಗಳನ್ನು ಬಳಸುತ್ತೇವೆ. ಬೇಕಾದಷ್ಟು ಚಿತ್ರಗಳನ್ನು ಕ್ಲಿಕ್ಕಿಸುತ್ತೇವೆ.

ನಾವು ಏನನ್ನು ಕ್ಲಿಕ್ಕಿಸಲು ಹೊರಟಿದ್ದೇವೋ ಆ ವಿಷಯಕ್ಕೆ ತಕ್ಕಂತೆ ಕ್ಯಾಮೆರಾದ ತಾಂತ್ರಿಕ ಸಂಯೋಜನೆಯನ್ನು ಬದಲಾಯಿಸಿಕೊಂಡರೆ ಉತ್ತಮ ಚಿತ್ರಗಳನ್ನು ಸೆರೆಹಿಡಿಯುವುದು ಸಾಧ್ಯವಾಗುತ್ತದೆ. ಮನೆಯೊಳಗೆ ಆಡುತ್ತಿರುವ ಮಗುವಿರಲಿ, ರಸ್ತೆಯಲ್ಲಿ ಓಡುತ್ತಿರುವ ಮರ್ಸಿಡಿಸ್ ಕಾರೇ ಇರಲಿ, ಬೇರೆಬೇರೆ 'ಮೋಡ್'ಗಳನ್ನು ಬಳಸಿ ಕ್ಯಾಮೆರಾದ ತಾಂತ್ರಿಕ ಸಂಯೋಜನೆಯನ್ನು ನಾವು ಕ್ಲಿಕ್ಕಿಸಲಿರುವ ಚಿತ್ರಕ್ಕೆ ಸರಿಯಾಗಿ ಹೊಂದಿಸಿಕೊಳ್ಳಬಹುದು.

ಬಹುತೇಕ ಕ್ಯಾಮೆರಾಗಳಲ್ಲಿ ವೃತ್ತಾಕಾರದ ಒಂದು ಪುಟ್ಟ ಡಯಲ್ ಅನ್ನು ತಿರುಗಿಸುವ ಮೂಲಕ ಮೋಡ್‌ಗಳನ್ನು ಬದಲಿಸಿಕೊಳ್ಳುವುದು ಸಾಧ್ಯ (ಚಿತ್ರ ನೋಡಿ). ಮೊಬೈಲುಗಳಲ್ಲಿ ಇಂತಹ ಡಯಲ್ ಇಲ್ಲದಿದ್ದರೂ ಕೂಡ ಕ್ಯಾಮೆರಾದ ಆಯ್ಕೆಗಳಲ್ಲೇ ನಮಗೆ ಬೇಕಾದ ಮೋಡ್ ಅನ್ನು ಆರಿಸಿಕೊಳ್ಳಬಹುದು. ಇಂತಹ ಕೆಲ 'ಮೋಡ್'ಗಳ ಪರಿಚಯ ಇಲ್ಲಿದೆ.

ಆಟೋಮ್ಯಾಟಿಕ್: ಎಲ್ಲ ಬಗೆಯ ಡಿಜಿಟಲ್ ಕ್ಯಾಮೆರಾಗಳಲ್ಲೂ ಅತ್ಯಂತ ವ್ಯಾಪಕವಾಗಿ ಬಳಕೆಯಾಗುವ ಮೋಡ್ ಇದು. ಇಲ್ಲಿ ನಾವು ಕ್ಲಿಕ್ಕಿಸಲು ಹೊರಟಿರುವ ಚಿತ್ರಕ್ಕೆ ಬೇಕಾದ ತಾಂತ್ರಿಕ ಸಂಯೋಜನೆಯನ್ನು ಕ್ಯಾಮೆರಾ ತನ್ನಷ್ಟಕ್ಕೆ ತಾನೇ (ಸ್ವಯಂಚಾಲಿತವಾಗಿ) ಹೊಂದಿಸಿಕೊಳ್ಳುತ್ತದೆ. ಈ ಮೋಡ್ ಬಳಸಿ ಬಹುತೇಕ ಸಂದರ್ಭಗಳಲ್ಲಿ ಉತ್ತಮ ಚಿತ್ರವನ್ನು ತೆಗೆಯಬಹುದಾದರೂ ಇದು ಯಾವಾಗಲೂ ನಮ್ಮ ಅಪೇಕ್ಷೆಗೆ ತಕ್ಕಂತಹ ಚಿತ್ರ ಮೂಡಿಸುತ್ತದೆ ಎನ್ನಲಾಗುವುದಿಲ್ಲ. ಹಾಗಾಗಿ ಸದಾಕಾಲವೂ ಈ 'ಆಟೋ' ಹಿಂದೆ ಹೋಗದೆ ಕ್ಯಾಮೆರಾದಲ್ಲಿರುವ ಇತರ ಆಯ್ಕೆಗಳನ್ನೂ ಬಳಸುವುದು ಉತ್ತಮ.

ಪೋಟ್ರೇಟ್: ಭಾವಚಿತ್ರಗಳನ್ನು ಕ್ಲಿಕ್ಕಿಸುವಾಗ ಈ ಆಯ್ಕೆ ಉಪಯುಕ್ತ. ಈ ಮೋಡ್ ಬಳಸುವಾಗ ಕ್ಯಾಮೆರಾ ಎದುರಿಗಿರುವ ವ್ಯಕ್ತಿಯ (ಅಥವಾ ವಸ್ತುವಿನ) ಮೇಲೆ ಫೋಕಸ್ ಆಗಿ ಹಿನ್ನೆಲೆಯೆಲ್ಲ ಮಸುಕಾಗುತ್ತದೆ. ಇದರಿಂದಾಗಿ ನಾವು ಕ್ಲಿಕ್ಕಿಸುವ ಭಾವಚಿತ್ರ ಹೆಚ್ಚು ಸ್ಪಷ್ಟವಾಗಿ ಮೂಡಿಬರುತ್ತದೆ. ಉತ್ತಮ ಭಾವಚಿತ್ರಗಳನ್ನು ಪಡೆಯಲು ಚಿತ್ರದ ಚೌಕಟ್ಟಿನಲ್ಲಿ ನಾವು ಕ್ಲಿಕ್ಕಿಸಹೊರಟಿರುವ ವಿಷಯ ಪ್ರಮುಖವಾಗಿ ಮೂಡಿಬರುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಹತ್ತಿರದಿಂದ ಫೋಟೋ ತೆಗೆಯುವುದು, ಇಲ್ಲವೇ ಜೂಮ್ ಬಳಸುವುದು ಒಳ್ಳೆಯದು. ಕ್ಯಾಮೆರಾ ಎದುರಿನಿಂದ ಬೆಳಕು ಹೆಚ್ಚಿದ್ದರೆ ಫ್ಲ್ಯಾಶ್ ಕೂಡ ಬಳಸಬೇಕಾಗುತ್ತದೆ.

ಮ್ಯಾಕ್ರೋ: ಬಾಲ್ಕನಿಯಲ್ಲಿರುವ ಗಿಡದ ಎಲೆಯಿಂದ ಮಳೆಹನಿ ತೊಟ್ಟಿಕ್ಕುತ್ತಿರುವ ಚಿತ್ರ ಬೇಕು ಎಂದರೆ ಮ್ಯಾಕ್ರೋ ಮೋಡ್ ಮೊರೆಹೋಗಲೇಬೇಕು. ಹೂವು-ಎಲೆ-ಹುಳಹುಪ್ಪಟೆ ಮುಂತಾದವುಗಳ ಚಿತ್ರವನ್ನು ಅತ್ಯಂತ ಹತ್ತಿರದಿಂದ ಹಾಗೂ ಸ್ಪಷ್ಟವಾಗಿ ಕ್ಲಿಕ್ಕಿಸಲು ಈ ಮೋಡ್ ಸಹಾಯಮಾಡುತ್ತದೆ. ಇಲ್ಲಿ ಚಿತ್ರೀಕರಿಸಲಾಗುತ್ತಿರುವ ವಸ್ತು ಕ್ಯಾಮೆರಾಗೆ ತೀರಾ ಹತ್ತಿರದಲ್ಲಿರುವುದರಿಂದ ಸರಿಯಾಗಿ ಫೋಕಸ್ ಮಾಡಲು ಸ್ವಲ್ಪ ಪ್ರಯತ್ನಪಡಬೇಕಾಗುತ್ತದೆ. ಮ್ಯಾಕ್ರೋ ಛಾಯಾಗ್ರಹಣ ಮಾಡುವಾಗ ಫ್ಲ್ಯಾಶ್ ಬಳಸಿದರೆ ಬೆಳಕು ತೀರಾ ಜಾಸ್ತಿಯಾಗಿ ಚಿತ್ರ ಚೆನ್ನಾಗಿ ಬಾರದೆ ಹೋಗಬಹುದು; ಹಾಗಾಗಿ ಈ ಮೋಡ್‌ನಲ್ಲಿ ಫ್ಲ್ಯಾಶ್ ಬಳಸದಿರುವುದೇ ಒಳಿತು.

ಲ್ಯಾಂಡ್‌ಸ್ಕೇಪ್ / ಸೀನರಿ: ಕ್ಯಾಮೆರಾದಿಂದ ಕೊಂಚ ದೂರವಿರುವ ದೃಶ್ಯಗಳನ್ನು ಛಾಯಾಚಿತ್ರಗಳಲ್ಲಿ ಸೆರೆಹಿಡಿಯಲು ಈ ಮೋಡ್ ಬಹಳ ಉಪಯುಕ್ತ. ಯಾವುದಾದರೂ ಪ್ರವಾಸಿ ತಾಣಕ್ಕೆ ಹೋದಾಗ ವ್ಹಾ, ಇಲ್ಲಿನ ಸೀನರಿ ಎಷ್ಟು ಚೆನ್ನಾಗಿದೆ, ಫೋಟೋ ತೆಗೆಯೋಣ ಎಂದುಕೊಂಡರೆ ನಿಸ್ಸಂಶಯವಾಗಿ ಲ್ಯಾಂಡ್‌ಸ್ಕೇಪ್ ಮೋಡ್ ಅನ್ನು ಬಳಸಬಹುದು. ಪೋಟ್ರೇಟ್ ಮೋಡ್‌ನಲ್ಲಿ ಒಂದೇ ವಿಷಯ ಫೋಕಸ್ ಆಗುತ್ತದಲ್ಲ, ಇಲ್ಲಿ ಹಾಗಲ್ಲ. ಲ್ಯಾಂಡ್‌ಸ್ಕೇಪ್ ಚಿತ್ರಗಳಲ್ಲಿ ಹೆಚ್ಚಿನ ವಸ್ತು-ವಿಷಯಗಳನ್ನು ಸ್ಪಷ್ಟವಾಗಿ ಸೆರೆಹಿಡಿಯುವುದು ಸಾಧ್ಯ. ರಾತ್ರಿಯ ವೇಳೆ, ಅಥವಾ ತೀರಾ ಕಡಿಮೆ ಬೆಳಕಿನಲ್ಲಿ ಚಿತ್ರ ಕ್ಲಿಕ್ಕಿಸುವುದಾದರೆ ಬಳಸಬಹುದಾದ ಪ್ರತ್ಯೇಕ ಮೋಡ್ ಕೂಡ ಕೆಲ ಕ್ಯಾಮೆರಾಗಳಲ್ಲಿರುತ್ತದೆ.

ಆಕ್ಷನ್ / ಸ್ಪೋರ್ಟ್ಸ್: ನಿಶ್ಚಲವಾಗಿರುವ ವಸ್ತುವಿನ ಅಥವಾ ಪೋಸ್ ಕೊಟ್ಟುಕೊಂಡು ಕುಳಿತಿರುವ ವ್ಯಕ್ತಿಯ ಚಿತ್ರವನ್ನು ಕ್ಲಿಕ್ಕಿಸುವುದು ಸುಲಭ ಎಂದೇ ಹೇಳಬಹುದು. ಆದರೆ ಹಾರುವ ಹಕ್ಕಿಯದೋ ವೇಗವಾಗಿ ಚಲಿಸುತ್ತಿರುವ ಕಾರಿನದೋ ಚಿತ್ರ ಸೆರೆಹಿಡಿಯುವುದು ತುಲನಾತ್ಮಕವಾಗಿ ಕಷ್ಟದ ಕೆಲಸ. ಇಂತಹ ಚಿತ್ರಗಳನ್ನು ಕ್ಲಿಕ್ಕಿಸಿದಾಗ ಒಂದೋ ಚಿತ್ರದ ವಿಷಯವೇ ನಾಪತ್ತೆಯಾಗಿರುವುದು ಅಥವಾ ಶೇಕ್ ಆಗಿರುವುದು ನಮ್ಮ ಗಮನಕ್ಕೆ ಬರುತ್ತದೆ. ಈ ಬಗೆಯ ಚಿತ್ರಗಳನ್ನು ಸಮರ್ಪಕವಾಗಿ ಸೆರೆಹಿಡಿಯಲು ಆಕ್ಷನ್ ಅಥವಾ ಸ್ಪೋರ್ಟ್ಸ್ ಮೋಡ್ ಸಹಾಯಮಾಡುತ್ತದೆ. ನಮಗೆ ಬೇಕಾದ ದೃಶ್ಯವನ್ನು ಆದಷ್ಟೂ ಕ್ಷಿಪ್ರವಾಗಿ ದಾಖಲಿಸುವ ಮೂಲಕ ಸ್ಪಷ್ಟ ಚಿತ್ರಗಳನ್ನು ನೀಡುವುದು ಈ ಮೋಡ್‌ನ ವೈಶಿಷ್ಟ್ಯ. ಇಂತಹ ಸನ್ನಿವೇಶಗಳಲ್ಲಿ ಒಂದಕ್ಕಿಂತ ಹೆಚ್ಚಿನ ಚಿತ್ರಗಳನ್ನು ಪಟಪಟನೆ ಕ್ಲಿಕ್ಕಿಸಲು ಅನುವುಮಾಡಿಕೊಡುವ 'ಬರ್ಸ್ಟ್' ಸೌಲಭ್ಯ ಕೂಡ ಹಲವು ಕ್ಯಾಮೆರಾಗಳಲ್ಲಿರುತ್ತದೆ. ಹೀಗೆ ತೆಗೆದ ಚಿತ್ರಗಳನ್ನೆಲ್ಲ ನಾವು ಆನಂತರ ಪರಿಶೀಲಿಸಿ ಅವುಗಳಲ್ಲಿ ಅತ್ಯುತ್ತಮವೆನಿಸಿದ್ದನ್ನು ಆಯ್ದುಕೊಳ್ಳಬಹುದು.

ನೈಟ್: ಕಡಿಮೆ ಬೆಳಕಿನಲ್ಲಿ ಚಿತ್ರಗಳನ್ನು ತೆಗೆಯುವಾಗ ಫ್ಲ್ಯಾಶ್ ಬಳಕೆ ಅಷ್ಟಾಗಿ ಸೂಕ್ತವೆನಿಸುವುದಿಲ್ಲ. ಚಿತ್ರದ ಒಂದಷ್ಟು ಭಾಗದ ಮೇಲಷ್ಟೆ ಫ್ಲ್ಯಾಶ್‌ನ ಪ್ರಖರ ಬೆಳಕು ಬಿದ್ದು ಇತರ ಭಾಗಗಳು ಕಪ್ಪಾಗಿ ಕಂಡರೆ ಅದು ಚಿತ್ರದ ಬದಲು ವಿಚಿತ್ರವೆನಿಸುವ ಸಾಧ್ಯತೆಯೇ ಹೆಚ್ಚು. ಇಂತಹ ಸನ್ನಿವೇಶಗಳಲ್ಲಿ ನೈಟ್ ಮೋಡ್ ನಮ್ಮ ನೆರವಿಗೆ ಬರುತ್ತದೆ. ಈ ಮೋಡ್‌ನಲ್ಲಿ ಚಿತ್ರದ ವಿವರಗಳು ಕ್ಯಾಮೆರಾದಲ್ಲಿ ನಿಧಾನಕ್ಕೆ ದಾಖಲಾಗುವುದರಿಂದ ಕಡಿಮೆ ಬೆಳಕಿನ ದೃಶ್ಯಗಳೂ ಚೆನ್ನಾಗಿ ಮೂಡಿಬರುತ್ತವೆ. ಆದರೆ ಈ ಮೋಡ್‌ನಲ್ಲಿ ಚಿತ್ರಗಳನ್ನು ತೆಗೆಯುವಾಗ ಕ್ಯಾಮೆರಾದ ಶಟರ್ ಹೆಚ್ಚು ಸಮಯದವರೆಗೆ ತೆರೆದಿರುತ್ತದೆ. ಈ ಸಮಯದಲ್ಲಿ ಕ್ಯಾಮೆರಾ ಕೊಂಚವೇ ಅಲುಗಾಡಿದರೂ ಚಿತ್ರ ಚೆನ್ನಾಗಿ ಬರುವುದಿಲ್ಲ. ಹಾಗಾಗಿ ಟ್ರೈಪಾಡ್ ಸಹಾಯವಿಲ್ಲದೆ ಈ ಚಿತ್ರಗಳು ಚೆನ್ನಾಗಿ ಮೂಡಿಬರುವುದು ಕಷ್ಟ.

ಕೆಲ ಕ್ಯಾಮೆರಾಗಳಲ್ಲಿ ಇವಿಷ್ಟರ ಜೊತೆಗೆ ಇನ್ನೂ ಒಂದಷ್ಟು ವಿಶೇಷ ಮೋಡ್‌ಗಳಿರುತ್ತವೆ. ಮಕ್ಕಳ ಚಿತ್ರ, ಸೂರ್ಯೋದಯ/ಸೂರ್ಯಾಸ್ತದ ಚಿತ್ರ, ಬಾಣಬಿರುಸುಗಳ ಚಿತ್ರ, ಆಹಾರಪದಾರ್ಥಗಳ ಚಿತ್ರ - ಹೀಗೆ ಬೇರೆಬೇರೆ ರೀತಿಯ ಚಿತ್ರಗಳಿಗೆ ಬೇಕಾದ ಸಂಯೋಜನೆಯನ್ನು ಹೊಂದಿಸಿಕೊಡುವ ಮೋಡ್‌ಗಳ ಈ ಪಟ್ಟಿ ಸಾಕಷ್ಟು ದೊಡ್ಡದೇ. ಬೆಳಕಿನ ಪರಿಸ್ಥಿತಿ ಹೇಗೆಯೇ ಇದ್ದರೂ ಫ್ಲ್ಯಾಶ್ ಬಳಸುವುದು ಬೇಡ ಎನ್ನುವವರಿಗೆ 'ನೋ ಫ್ಲ್ಯಾಶ್' ಎಂಬುದೊಂದು ವಿಶೇಷ ಮೋಡ್ ಕೂಡ ಕೆಲವು ಕ್ಯಾಮೆರಾಗಳಲ್ಲಿರುತ್ತದೆ. ನೈಟ್ ಮೋಡ್ ಅನ್ನು ಇನ್ನಷ್ಟು ಪ್ರತ್ಯೇಕಿಸಿ ನೈಟ್ ಪೋಟ್ರೇಟ್, ನೈಟ್ ಸೀನರಿ ಮುಂತಾದ ಹೊಸ ಮೋಡ್‌ಗಳನ್ನು ರೂಪಿಸಿರುವುದೂ ಉಂಟು. ವೀಡಿಯೋ ಚಿತ್ರೀಕರಿಸಲು ಬಳಸಬೇಕಾದ ಆಯ್ಕೆಯೂ ಬಹುತೇಕ ಕ್ಯಾಮೆರಾಗಳಲ್ಲಿ ಮೋಡ್‌ನಂತೆಯೇ ಲಭ್ಯವಿರುತ್ತದೆ.

ಇದೆಲ್ಲ ಸಾಮಾನ್ಯ ಡಿಜಿಟಲ್ ಕ್ಯಾಮೆರಾಗಳ ಮಾತಾಯಿತು. ಕೊಂಚ ದುಬಾರಿ ಬೆಲೆಯ ಕ್ಯಾಮೆರಾಗಳತ್ತ ಬಂದರೆ ಅವುಗಳಲ್ಲಿ ಇಂತಹ ಪೂರ್ವನಿರ್ಧಾರಿತ ಮೋಡ್‌ಗಳ ಜೊತೆಗೆ ಹಲವು ಮ್ಯಾನ್ಯುವಲ್ ಮೋಡ್‌ಗಳೂ ಇರುತ್ತವೆ. ಇಂತಹ ಮೋಡ್‌ಗಳು ಕ್ಯಾಮೆರಾದ ತಾಂತ್ರಿಕ ಸಂಯೋಜನೆಯನ್ನು ನಾವೇ ಹೊಂದಿಸಿಕೊಳ್ಳಲು ಅನುವುಮಾಡಿಕೊಡುತ್ತವೆ. ಅವುಗಳನ್ನು ಬಳಸಿ ಕ್ಯಾಮೆರಾದ ಶಟರ್ ಸ್ಪೀಡ್, ಅಪರ್ಚರ್, ಐಎಸ್‌ಓ, ವೈಟ್ ಬ್ಯಾಲೆನ್ಸ್, ಫೋಕಸ್ ಮುಂತಾದ ಹತ್ತಾರು ಅಂಶಗಳನ್ನು ನಮ್ಮ ಇಚ್ಛೆಗೆ ತಕ್ಕಂತೆ ಬದಲಿಸಿಕೊಳ್ಳುವುದು ಸಾಧ್ಯ.

ಸೆಪ್ಟೆಂಬರ್ ೪, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge