ಬುಧವಾರ, ಸೆಪ್ಟೆಂಬರ್ 12, 2012

ಫ್ಲ್ಯಾಶ್ ನ್ಯೂಸ್!

ಟಿ. ಜಿ. ಶ್ರೀನಿಧಿ

ಮೂರೂವರೆಸಾವಿರದ ಮೊಬೈಲ್ ಆಗಿರಲಿ, ಅದಕ್ಕಿಂತ ಹತ್ತು ಪಟ್ಟು ಹೆಚ್ಚಿನ ಬೆಲೆಯ ಡಿಎಸ್‌ಎಲ್‌ಆರ್ ಆಗಿರಲಿ, ನಮ್ಮಲ್ಲಿರುವ ಕ್ಯಾಮೆರಾ ಬಳಸಿ ಒಳ್ಳೆಯ ಚಿತ್ರಗಳನ್ನು ಕ್ಲಿಕ್ಕಿಸಬೇಕೆನ್ನುವುದೇ ನಮ್ಮೆಲ್ಲರ ಆಸೆ. ಕ್ಯಾಮೆರಾದಲ್ಲಿರುವ ಬೇರೆಬೇರೆ ಮೋಡ್‌ಗಳನ್ನು ಬಳಸುವುದು, ವಿಭಿನ್ನ ಕೋನಗಳಿಂದ ಚಿತ್ರ ತೆಗೆಯಲು ಪ್ರಯತ್ನಿಸುವುದು - ಎಲ್ಲವೂ ಇದೇ ಉದ್ದೇಶಕ್ಕಾಗಿಯೇ ಅಲ್ಲವೆ?

ಹೀಗೆ ಚಿತ್ರಗಳನ್ನು ಕ್ಲಿಕ್ಕಿಸುವಾಗ ನಮ್ಮ ಕೈಲಿರುವ ಕ್ಯಾಮೆರಾ ಹಾಗೂ ಅದರ ಮುಂದಿರುವ ದೃಶ್ಯದಷ್ಟೇ ಮಹತ್ವದ ವಿಷಯ ಇನ್ನೊಂದಿದೆ. ಅದೇ ಬೆಳಕು. ಬೆಳಕಿನ ಸಂಯೋಜನೆ ಸರಿಯಿಲ್ಲದೆ ಎಷ್ಟೇ ಅದ್ಭುತವಾದ ದೃಶ್ಯವನ್ನು ಕ್ಲಿಕ್ಕಿಸಿದರೂ ಒಳ್ಳೆಯ ಚಿತ್ರ ಸಿಗುವುದು ಅಸಾಧ್ಯವೆಂದೇ ಹೇಳಬಹುದು.

ಹಾಗೆಂದಮಾತ್ರಕ್ಕೆ ಎಲ್ಲ ಸನ್ನಿವೇಶಗಳಲ್ಲೂ ಫೋಟೋ ತೆಗೆಯಲು ಅನುಕೂಲಕರವಾದ ಬೆಳಕನ್ನು ನಿರೀಕ್ಷಿಸುವಂತಿಲ್ಲವಲ್ಲ?
ಹಾಗಾಗಿಯೇ ಬಹುತೇಕ ಎಲ್ಲ ಕ್ಯಾಮೆರಾಗಳಲ್ಲೂ (ಹಲವು ಮೊಬೈಲುಗಳೂ ಸೇರಿದಂತೆ) ಫ್ಲ್ಯಾಶ್ ಸೌಲಭ್ಯ ಇರುತ್ತದೆ. ಫ್ಲ್ಯಾಶ್ ಇಲ್ಲದ ಛಾಯಾಗ್ರಹಣವನ್ನು ಕಲ್ಪಿಸಿಕೊಳ್ಳುವುದೇ ಕಷ್ಟ ಎನ್ನುವ ಮಟ್ಟಿನ ಜನಪ್ರಿಯತೆ ಈ ಸೌಲಭ್ಯದ್ದು.

ಕ್ಯಾಮೆರಾ ಮುಂದಿನ ದೃಶ್ಯವನ್ನು ಛಾಯಾಚಿತ್ರವಾಗಿ ಸೆರೆಹಿಡಿಯುವಾಗ ಪ್ರಖರವಾದ ಬೆಳಕನ್ನು ಹೊರಸೂಸುವ ಮೂಲಕ ನೆರವುನೀಡುವುದು ಫ್ಲ್ಯಾಶ್‌ನ ಕೆಲಸ. ಬೆಳಕು ಕಡಿಮೆಯಿರುವ ಸಂದರ್ಭಗಳಲ್ಲಿ ಉತ್ತಮ ಚಿತ್ರಗಳನ್ನು ಕ್ಲಿಕ್ಕಿಸಲು ಈ ಸೌಲಭ್ಯ ವಿಶೇಷವಾಗಿ ಬಳಕೆಯಾಗುತ್ತದೆ. ಕೆಲವೊಮ್ಮೆ ತೀರಾ ಪ್ರಖರ ಬೆಳಕಿದ್ದಾಗಲೂ ನೆರಳು ಬೆಳಕಿನ ವೈಪರೀತ್ಯಗಳನ್ನು ಹೋಗಲಾಡಿಸಲು ಫ್ಲ್ಯಾಶ್ ಬಳಕೆಯಾಗುತ್ತದೆ.

ಕ್ಯಾಮೆರಾದಲ್ಲಿನ ಆಟೋಮ್ಯಾಟಿಕ್ ('ಆಟೋ') ಮೋಡ್ ಬಳಸುವಾಗ ಬೆಳಕಿನ ಪ್ರಮಾಣವನ್ನು ತಾನೇ ಅಂದಾಜಿಸಿಕೊಳ್ಳುವ ಕ್ಯಾಮೆರಾ ಅಗತ್ಯವೆನಿಸಿದಾಗ ಸ್ವಯಂಚಾಲಿತವಾಗಿ ಫ್ಲ್ಯಾಶ್ ಬಳಸುತ್ತದೆ. ಅದೇ ಸಾಕಷ್ಟು ಬೆಳಕಿರುವಲ್ಲಿ ಚಿತ್ರ ತೆಗೆಯಲು ಹೋದಾಗ ಫ್ಲ್ಯಾಶ್ ಅಗತ್ಯವಿಲ್ಲ ಎಂದು ತಂತಾನೇ ಅರಿತುಕೊಳ್ಳುವ ಅದು ತೆಪ್ಪಗೂ ಇರುತ್ತದೆ.

ಇದು ಆಟೋಮ್ಯಾಟಿಕ್ ಫ್ಲಾಶ್‌ನ ಕತೆಯಾಯಿತು. ಆದರೆ ಇದೇ ತಂತ್ರವನ್ನು ಎಲ್ಲ ಸಂದರ್ಭಗಳಲ್ಲೂ ಬಳಸುವುದು ಕಷ್ಟ. ಹೀಗಾಗಿಯೇ ಫ್ಲ್ಯಾಶ್ ಬಳಸಬೇಕೋ ಬೇಡವೋ ಎಂದು ತೀರ್ಮಾನಿಸುವ ಅಧಿಕಾರವನ್ನು ನಮಗೆ ನೀಡುವ ಸೌಲಭ್ಯವೂ ಕ್ಯಾಮೆರಾಗಳಲ್ಲಿರುತ್ತದೆ. ಫ್ಲ್ಯಾಶ್ ಅನ್ನು ಬಲವಂತವಾಗಿ ಬಳಸಲು ಅಥವಾ ಬಳಸದೆ ಇರಲು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.

ಒಟ್ಟಾರೆಯಾಗಿ ಸಮರ್ಪಕ ಬೆಳಕಿದ್ದರೂ ಕೂಡ ಚಿತ್ರದ ವಿಷಯದ ಮೇಲೆ ಅಲ್ಲಲ್ಲಿ ನೆರಳು ಬೀಳುತ್ತಿದೆ ಎಂದಾಗ, ಅಥವಾ ಚಿತ್ರದ ವಿಷಯದ ಹಿಂದಿನಿಂದ ಬೆಳಕು ಬೀಳುತ್ತಿರುವ ಸಂದರ್ಭದಲ್ಲಿ ಬೆಳಕಿನ ಸಂಯೋಜನೆಯನ್ನು ಸರಿಪಡಿಸಲು ಬಲವಂತವಾಗಿಯೇ ಫ್ಲ್ಯಾಶ್ ಬಳಸಬೇಕಾಗುತ್ತದೆ.

ಅದೇ ರೀತಿ ಕಡಿಮೆ ಬೆಳಕಿನ ಚಿತ್ರಗಳನ್ನು ತೆಗೆಯುವಾಗ, ಅಥವಾ ಫ್ಲ್ಯಾಶ್ ಬಳಕೆ ಸಾಧ್ಯವಿಲ್ಲದ ಕಡೆ ಅದನ್ನು ಆರಿಸಿಡಬಹುದು. ಚಿಕ್ಕ ಮಕ್ಕಳ ಚಿತ್ರಗಳನ್ನು ಕ್ಲಿಕ್ಕಿಸುವಾಗಲಂತೂ ಫ್ಲ್ಯಾಶ್ ಬಳಸದಿರುವುದೇ ಒಳ್ಳೆಯದು. ಅದೇ ರೀತಿ ದೀಪದ ಚಿತ್ರವನ್ನೋ ದೀಪಾವಳಿ ಪಟಾಕಿಗಳನ್ನೋ ಕ್ಲಿಕ್ಕಿಸುವಾಗಲೂ ಫ್ಲ್ಯಾಶ್ ಬೇಕಾಗುವುದಿಲ್ಲ.

ಫ್ಲ್ಯಾಶ್ ಬಳಸಿ ಭಾವಚಿತ್ರಗಳನ್ನು ಕ್ಲಿಕ್ಕಿಸಿದಾಗ ಕಾಣಸಿಗುವ ಇನ್ನೊಂದು ಸಮಸ್ಯೆ ಕೆಂಪು ಕಣ್ಣು, ಅರ್ಥಾತ್ 'ರೆಡ್-ಐ'ನದು. ಫ್ಲ್ಯಾಶ್‌ನ ಬೆಳಕು ಕಣ್ಣಿನಲ್ಲಿರುವ ರಕ್ತನಾಳಗಳ ಮೇಲೆ ಬಿದ್ದು ಪ್ರತಿಫಲಿತವಾದಾಗ ಕ್ಯಾಮೆರಾ ಮುಂದಿರುವ ವ್ಯಕ್ತಿಯ ಕಣ್ಣು ಚಿತ್ರದಲ್ಲಿ ಕೆಂಪಗೆ ಮೂಡುತ್ತದೆ. ಫೋಟೋ ತೆಗೆಸಿಕೊಳ್ಳುತ್ತಿರುವ ವ್ಯಕ್ತಿ ಕ್ಯಾಮೆರಾ ಸಮೀಪದಲ್ಲೇ ಇದ್ದರಂತೂ ಈ ತೊಂದರೆ ಇನ್ನೂ ಹೆಚ್ಚು. ರೆಡ್-ಐ ತಾಪತ್ರಯ ನಿವಾರಿಸಿಕೊಳ್ಳಲು ಬಹುತೇಕ ಕ್ಯಾಮೆರಾಗಳಲ್ಲಿರುವ ರೆಡ್ ಐ ರಿಡಕ್ಷನ್ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಫೋಟೋ ತೆಗೆಸಿಕೊಳ್ಳುವವರು ನೇರವಾಗಿ ಕ್ಯಾಮೆರಾ ನೋಡದೆ ದೃಷ್ಟಿಯನ್ನು ಸ್ವಲ್ಪ ಪಕ್ಕಕ್ಕೆ ಹೊರಳಿಸಿದರೂ ಆದೀತು. ಇಷ್ಟರ ಮೇಲೂ ಚಿತ್ರದಲ್ಲಿ ಕೆಂಪು ಕಣ್ಣು ಕಾಣಿಸಿಕೊಂಡರೆ ಅದನ್ನು ನಿವಾರಿಸಲು ಫೋಟೋ ಎಡಿಟಿಂಗ್ ತಂತ್ರಾಂಶಗಳ ಮೊರೆಹೋಗಬೇಕಾಗುತ್ತದೆ.

ಕಡಿಮೆ ಬೆಳಕಿರುವಲ್ಲಿ ಫ್ಲ್ಯಾಶ್ ಸಹಾಯಪಡೆದು ಭಾವಚಿತ್ರಗಳನ್ನು ಕ್ಲಿಕ್ಕಿಸಿದಾಗ ಬಹಳಷ್ಟು ಸಾರಿ ಚಿತ್ರದ ವಿಷಯದ ಮೇಲೆ ಬೆಳಕು ತೀರಾ ಜಾಸ್ತಿಯಾಗಿ ಫೋಟೋ ಚೆನ್ನಾಗಿ ಮೂಡುವುದಿಲ್ಲ. ಈ ಸಮಸ್ಯೆಗೆ ಫ್ಲ್ಯಾಶ್ ಬ್ಲೋಔಟ್ ಎಂದು ಹೆಸರು. ಇದನ್ನು ನಿವಾರಿಸುವ ಮೊದಲ ಪ್ರಯತ್ನವಾಗಿ ತೀರಾ ಹತ್ತಿರದಿಂದ ಚಿತ್ರ ಕ್ಲಿಕ್ಕಿಸುವುದನ್ನು ತಪ್ಪಿಸುವುದು ಒಳಿತು. ಟಿಶ್ಯೂ ಕಾಗದವನ್ನೋ ತೆಳುವಾದ ಬಿಳಿ ಬಟ್ಟೆಯನ್ನೋ ಅಡ್ಡ ಹಿಡಿದು ಫ್ಲ್ಯಾಶ್ ಪ್ರಖರತೆಯನ್ನು ಕಡಿಮೆಮಾಡುವುದು ಈ ನಿಟ್ಟಿನಲ್ಲಿ ಇನ್ನೊಂದು ತಂತ್ರ. ಸ್ಟುಡಿಯೋಗಳಲ್ಲಿ ಫ್ಲ್ಯಾಶ್ ಬೆಳಕು ಬಿಳಿಯ ಛತ್ರಿಯೊಳಗಿಂದ ಬರುತ್ತದಲ್ಲ, ಹಾಗೆಯೇ ಇದೂ!

ಕ್ಯಾಮೆರಾದೊಳಗೇ ಇರುವ ಫ್ಲ್ಯಾಶ್ ಬದಲಿಗೆ ಪ್ರತ್ಯೇಕ ಫ್ಲ್ಯಾಶ್ ಉಪಕರಣವನ್ನು ಉಪಯೋಗಿಸುವ ಆಯ್ಕೆ ಡಿಎಸ್‌ಎಲ್‌ಆರ್ ಬಳಕೆದಾರರಿಗೆ ಲಭ್ಯವಿರುತ್ತದೆ. ಸಾಮಾನ್ಯ ಫ್ಲ್ಯಾಶ್‌ಗಳಿಗೆ ಹೋಲಿಸಿದಾಗ ಇಂತಹ ಬಾಹ್ಯ ಫ್ಲ್ಯಾಶ್ ಉಪಕರಣಗಳ ಬಳಕೆ ಕೆಲವೊಮ್ಮೆ ಪ್ರಯೋಜನಕಾರಿಯಾಗಿರುತ್ತದೆ. ಅಗತ್ಯಬಿದ್ದಾಗ ಹೆಚ್ಚು ಪ್ರಖರ ಬೆಳಕನ್ನು ಬಳಸುವುದು, ಬೆಳಕು ನೇರವಾಗಿ ಬೀಳುವುದನ್ನು ತಪ್ಪಿಸಿ ಬೇರೊಂದು ಮೇಲ್ಮೈಯಿಂದ ಪ್ರತಿಫಲಿಸುವಂತೆ ಮಾಡುವುದು ('ಬೌನ್ಸಿಂಗ್') ಇವೆಲ್ಲ ಬಾಹ್ಯ ಫ್ಲ್ಯಾಶ್ ಬಳಕೆಯಿಂದ ಸಾಧ್ಯವಾಗುತ್ತದೆ.


ಫೋಟೋಗ್ರಫಿ ಎಂಬ ಹೆಸರಿನಲ್ಲಿರುವ ಫೋಟೋ ಎಂದರೇನೇ ಬೆಳಕು ಎಂದರ್ಥ. ಫೋಟೋಗ್ರಫಿ ಎನ್ನುವ ಹೆಸರು ರೂಪುಗೊಂಡಿದ್ದು ಗ್ರೀಕ್ ಭಾಷೆಯ phōtos (ಬೆಳಕು) ಹಾಗೂ graphé (ಚಿತ್ರಿಸುವುದು) ಎಂಬ ಪದಗಳ ಜೋಡಣೆಯಿಂದ. ಬೆಳಕಿನ ಸಹಾಯದಿಂದ ಚಿತ್ರಿಸುವುದೇ ಫೋಟೋಗ್ರಫಿ!

ಸೆಪ್ಟೆಂಬರ್ ೧೧, ೨೦೧೨ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge