ಗುರುವಾರ, ನವೆಂಬರ್ 27, 2014

ಪಾಸ್‌ವರ್ಡ್: ಕಂಪ್ಯೂಟರ್ ಲೋಕದ ಕೀಲಿಕೈ

ಡಿಜಿಟಲ್ ಪ್ರಪಂಚದಲ್ಲಿ ನಮ್ಮ ಮಾಹಿತಿಯನ್ನೆಲ್ಲ ಸುರಕ್ಷಿತವಾಗಿಡಲು, ಅದು ಅಪಾತ್ರರ ಕೈಗೆ ಸಿಗದಂತೆ ನೋಡಿಕೊಳ್ಳಲು, ನಮ್ಮ ಮಾಹಿತಿ ನಮಗಷ್ಟೆ ಗೊತ್ತು ಎಂಬ ಸಮಾಧಾನದ ಭಾವನೆ ಮೂಡಿಸಲು ಪಾಸ್‌ವರ್ಡ್ ಬೇಕೇಬೇಕು. ಇಷ್ಟೆಲ್ಲ ಶಕ್ತಿಶಾಲಿಯಾದ ಈ ಪಾಸ್‌ವರ್ಡ್‌ನ ಕುರಿತು ಡಿಸೆಂಬರ್ ೨೦೧೪ರ 'ಉತ್ಥಾನ' ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಇಲ್ಲಿದೆ. 
ಟಿ. ಜಿ. ಶ್ರೀನಿಧಿ

ಆಲಿಬಾಬನ ಕತೆ ಗೊತ್ತಲ್ಲ, ಅದರಲ್ಲಿ ನಲವತ್ತು ಮಂದಿ ಕಳ್ಳರು ತಾವು ಕದ್ದು ತಂದ ಸಂಪತ್ತನ್ನೆಲ್ಲ ಒಂದು ಗುಹೆಯಲ್ಲಿ ಅವಿಸಿಡುತ್ತಿರುತ್ತಾರೆ. ಮತ್ತೆ ಕಳ್ಳತನಕ್ಕೆ ಹೋದಾಗ ಬೇರೆ ಕಳ್ಳರು ಬಂದು ಇವರ ಸಂಪತ್ತನ್ನೇ ಕದ್ದುಬಿಡಬಾರದಲ್ಲ, ಅದಕ್ಕಾಗಿ 'ಬಾಗಿಲು ತೆರೆಯೇ ಸೇಸಮ್ಮ' ಎಂದು ಹೇಳದ ಹೊರತು ಗುಹೆಯೊಳಕ್ಕೆ ಯಾರೂ ಹೋಗಲಾಗದಂತಹ ವ್ಯವಸ್ಥೆಯನ್ನೂ ರೂಪಿಸಿಕೊಂಡಿರುತ್ತಾರೆ.

ಕಳ್ಳರ ಬಂದೋಬಸ್ತು ಜೋರಾಗಿಯೇ ಇತ್ತು ನಿಜ. ಆದರೆ ಆಲಿಬಾಬ ಯಾವಾಗ ಅವರ ಗುಪ್ತಸಂಕೇತವನ್ನು ಕೇಳಿಸಿಕೊಂಡನೋ ಅಲ್ಲಿಂದ ಸೇಸಮ್ಮ ಆಲಿಬಾಬನಿಗೂ ಬಾಗಿಲು ತೆರೆಯಲು ಶುರುಮಾಡಿದಳು!

ಆಲಿಬಾಬನ ಈ ಕತೆ ಕಲ್ಪನೆಯದೇ ಇರಬಹುದು. ಆದರೆ ಅಂತರಜಾಲದ ಪ್ರಪಂಚದಲ್ಲಿ ಈ ಕತೆಯಲ್ಲಿ ನಡೆದಂತಹ ಸನ್ನಿವೇಶಗಳು ಈಗ ತೀರಾ ಸಾಮಾನ್ಯವಾಗಿಬಿಟ್ಟಿವೆ. ಕತೆಯ ಆಲಿಬಾಬ ಕಳ್ಳರಿಂದ ಕದ್ದರೆ ಅಂತರಜಾಲದ ಖದೀಮರು ಸಿಕ್ಕಸಿಕ್ಕವರನ್ನೆಲ್ಲ ದೋಚಲು ಹೊರಟಿದ್ದಾರೆ.

ಇಂತಹ ಪರಿಸ್ಥಿತಿಯನ್ನು ತಂದಿಟ್ಟಿರುವುದು ಕೇವಲ ಒಂದು ಪದ ಎಂದರೆ ನಮಗೆ ಆಶ್ಚರ್ಯವೇನೂ ಆಗಲಿಕ್ಕಿಲ್ಲ. ಏಕೆಂದರೆ ಜಾಲಜಗತ್ತಿನ ಅದೆಷ್ಟೋ ಬಾಗಿಲುಗಳನ್ನು ತೆರೆಯುವ ಪಾಸ್‌ವರ್ಡ್ ಎಂಬ ಶಕ್ತಿಶಾಲಿ ಶಬ್ದ ಆಲಿಬಾಬ ಕತೆಯ ಸೇಸಮ್ಮನಂತೆಯೇ ತಾನೆ!

ನಿಜ, ಡಿಜಿಟಲ್ ಪ್ರಪಂಚದಲ್ಲಿ ನಮ್ಮ ಮಾಹಿತಿಯನ್ನೆಲ್ಲ ಸುರಕ್ಷಿತವಾಗಿಡಲು, ಅದು ಅಪಾತ್ರರ ಕೈಗೆ ಸಿಗದಂತೆ ನೋಡಿಕೊಳ್ಳಲು, ನಮ್ಮ ಮಾಹಿತಿ ನಮಗಷ್ಟೆ ಗೊತ್ತು ಎಂಬ ಸಮಾಧಾನದ ಭಾವನೆ ಮೂಡಿಸಲು ಪಾಸ್‌ವರ್ಡ್ ಬೇಕೇ ಬೇಕು.

ಕಂಪ್ಯೂಟರ್ ಪ್ರಪಂಚಕ್ಕೆ ಪಾಸ್‌ವರ್ಡುಗಳು ಪಾದಾರ್ಪಣೆ ಮಾಡಿದ್ದು ಸುಮಾರು ೧೯೬೦ರ ಆಸುಪಾಸಿನಲ್ಲಿ.

ಬುಧವಾರ, ನವೆಂಬರ್ 26, 2014

ಐಟಿ ಜಗದಲ್ಲಿ ಕನ್ನಡದ ಬಾವುಟ

ಕಂಪ್ಯೂಟರಿನಲ್ಲಿ ಕನ್ನಡವೆಂದರೆ ಟೈಪಿಂಗ್ ಅಷ್ಟೇ ಅಲ್ಲ. ಇಂಗ್ಲಿಷಿನಲ್ಲೋ ಬೇರೊಂದು ಭಾಷೆಯಲ್ಲೋ ಕಂಪ್ಯೂಟರ್ ಬಳಸಿ ಏನೆಲ್ಲ ಸಾಧಿಸಬಹುದೋ ಅವನ್ನೆಲ್ಲ ಕನ್ನಡದಲ್ಲೂ ಸಾಧ್ಯವಾಗಿಸುವ ದಿನ ದೂರವಿಲ್ಲ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳನ್ನು ಪರಿಚಯಿಸುವ ಲೇಖನ ಇಲ್ಲಿದೆ. ಇಂತಹ ಇನ್ನೂ ಹಲವಾರು ಪ್ರಯತ್ನಗಳನ್ನು ಮುಂದಿನ ದಿನಗಳಲ್ಲಿ ಕನ್ನಡದ ಓದುಗರಿಗೆ ಪರಿಚಯಿಸುವ ಉದ್ದೇಶ ಇಜ್ಞಾನ ಡಾಟ್ ಕಾಮ್‌ ತಾಣಕ್ಕಿದೆ. ನಿಮ್ಮ ಗಮನಕ್ಕೆ ಬಂದ ಕನ್ನಡ ತಂತ್ರಾಂಶಗಳನ್ನು (ಕಂಪ್ಯೂಟರಿನ ತಂತ್ರಾಂಶಗಳು - ಮೊಬೈಲ್ ಆಪ್‌ಗಳೆರಡೂ ಸೇರಿದಂತೆ) ಇಜ್ಞಾನ ಫೇಸ್‌ಬುಕ್ ಪುಟದ ಮೂಲಕ ನಮಗೂ ಪರಿಚಯಿಸಿ!
ಟಿ. ಜಿ. ಶ್ರೀನಿಧಿ

ಹಿರಿಯ ವಿದ್ವಾಂಸ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಯಾವುದೋ ಸಂದರ್ಭದಲ್ಲಿ ನಿರ್ದಿಷ್ಟ ಪದ್ಯವೊಂದನ್ನು ಉದಾಹರಿಸಬೇಕಾಗಿ ಬಂದಿತ್ತು. ಆಗ ಅದರ ಪೂರ್ಣಪಾಠವನ್ನು ಒಮ್ಮೆ ನೋಡಿಬಿಡೋಣ ಎಂದು ಅವರು ತಮ್ಮ ಪುಸ್ತಕ ಸಂಗ್ರಹದಲ್ಲಿ ಹುಡುಕುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದ ಅವರ ಮೊಮ್ಮಗಳು ಆ ಪದ್ಯವನ್ನು ಅಂತರಜಾಲದ ಮೂಲಕ ಕೆಲವೇ ಕ್ಷಣಗಳಲ್ಲಿ ಹುಡುಕಿಕೊಟ್ಟರಂತೆ!

ನಮ್ಮ ಬದುಕನ್ನು ಮಾಹಿತಿ ತಂತ್ರಜ್ಞಾನ ಹೇಗೆ ಬದಲಿಸುತ್ತಿದೆ ಎನ್ನುವ ಕುರಿತು ಮಾತನಾಡುವಾಗ ಜೀವಿಯವರು ಹೇಳಿದ ಉದಾಹರಣೆ ಇದು. ನಿಜ, ಕೆಲವೇ ವರ್ಷಗಳ ಹಿಂದೆ ಯೋಚಿಸಿಕೊಳ್ಳಲೂ ಕಷ್ಟವಾಗುವಂತಿದ್ದ ಕೆಲಸಗಳು ಇಂದು ಮಾಹಿತಿ ತಂತ್ರಜ್ಞಾನದಿಂದಾಗಿ ಬಹಳ ಸುಲಭವಾಗಿಬಿಟ್ಟಿವೆ. ಅಷ್ಟೇ ಅಲ್ಲ, ಮಾಹಿತಿ ತಂತ್ರಜ್ಞಾನದ ಅನುಕೂಲಗಳನ್ನು ಪಡೆಯಲು ಇದ್ದ ಭಾಷೆಯ - ತಾಂತ್ರಿಕ ಜ್ಞಾನದ ಅಡೆತಡೆಗಳೂ ನಿಧಾನಕ್ಕೆ ದೂರವಾಗುತ್ತಿವೆ.

ಸೋಮವಾರ, ನವೆಂಬರ್ 24, 2014

ಎಲ್ಲೆಲ್ಲೂ ಎಲ್‌ಇಡಿ

ಟಿ. ಜಿ. ಶ್ರೀನಿಧಿ

೨೦೧೪ನೇ ಸಾಲಿನ ಭೌತವಿಜ್ಞಾನ ನೊಬೆಲ್ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳಿಗೆ ನೀಡಲಾಗಿದೆ. ಅವರಿಗೆ ಈ ಗೌರವ ದೊರೆತದ್ದು ನೀಲಿ ಬಣ್ಣದ ಎಲ್‌ಇಡಿಗಳನ್ನು ರೂಪಿಸಿದ್ದಕ್ಕಾಗಿ.

ಎಲ್‌ಇಡಿ, ಅಂದರೆ ಲೈಟ್ ಎಮಿಟಿಂಗ್ ಡಯೋಡ್‌ಗಳ ಪರಿಚಯ ನಮ್ಮೆಲ್ಲರಿಗೂ ಇದೆ. ಮಕ್ಕಳ ಆಟಿಕೆ - ಅಲಂಕಾರದ ಸೀರಿಯಲ್ ಸೆಟ್ - ಬಸ್ಸು, ರೈಲಿನ ಬೋರ್ಡು ಇತ್ಯಾದಿಗಳಿಂದ ಪ್ರಾರಂಭಿಸಿ ಅತ್ಯಾಧುನಿಕ ಟೀವಿ - ಮೊಬೈಲುಗಳವರೆಗೆ ಎಲ್‌ಇಡಿಗಳು ಎಲ್ಲೆಲ್ಲೂ ಬಳಕೆಯಾಗುತ್ತಿರುವುದೂ ನಮಗೆ ಗೊತ್ತು.

ವಿವಿಧ ಸಾಧನಗಳಲ್ಲಿ ಬೇರೆಬೇರೆ ಬಣ್ಣದ ಎಲ್‌ಇಡಿಗಳು ಬಳಕೆಯಾಗುತ್ತವೆ. ಕೆಂಪು ಹಾಗೂ ಹಸಿರು ಬಣ್ಣದ ಎಲ್‌ಇಡಿಗಳಂತೂ ಹಲವು ದಶಕಗಳಿಂದಲೇ ನಮಗೆಲ್ಲ ಪರಿಚಿತವಾಗಿವೆ. ಬಲ್ಬು-ಟ್ಯೂಬ್‌ಲೈಟ್-ಸಿಎಫ್‌ಎಲ್‌ಗಳಿಗೆಲ್ಲ ಪರ್ಯಾಯವಾಗಿ ಬಳಸಬಹುದಾದ ಬಿಳಿಯ ಎಲ್‌ಇಡಿಗಳೂ ಇದೀಗ ಮಾರುಕಟ್ಟೆಗೆ ಬಂದಿವೆ.

ಮಿಕ್ಕ ಬಣ್ಣಗಳ ಎಲ್‌ಇಡಿಗಳಿಗೆ ಹೋಲಿಸಿದರೆ  ಬಿಳಿಯ ಬಣ್ಣದವುಗಳಿಗೆ ಹೆಚ್ಚಿನ ಮಹತ್ವವಿದೆ. ಅವನ್ನು ಬೆಳಕಿನ ಮೂಲಗಳಾಗಿ ಬಳಸಬಹುದಾದ ಸಾಧ್ಯತೆಯೇ ಈ ಮಹತ್ವಕ್ಕೆ ಕಾರಣ. ಅದೂ ಸರಿಯೇ ಅನ್ನಿ, ಮನೆಯನ್ನು ಬೆಳಗುವ ದೀಪ ಬಿಳಿಯ ಬಣ್ಣದ್ದಾಗಿರದೆ ಕೆಂಪನೆಯದೋ ಹಸಿರು ಬಣ್ಣದ್ದೋ ಆಗಿರಲು ಸಾಧ್ಯವೆ?

ಇರಲಿ, ವಿಷಯ ಅದಲ್ಲ. ಹಿಂದಿನಿಂದಲೇ ನಮಗೆ ಪರಿಚಿತವಾಗಿರುವ ಕೆಂಪು-ಹಸಿರು ಎಲ್‌ಇಡಿಗಳಿಗೋ ಇದೀಗ ಮಾರುಕಟ್ಟೆಯಲ್ಲಿ ವಿಜೃಂಭಿಸುತ್ತಿರುವ ಬಿಳಿ ಎಲ್‌ಇಡಿಗಳಿಗೋ ದೊರೆಯದ ನೊಬೆಲ್ ನೀಲಿಯ ಎಲ್‌ಇಡಿಗಳಿಗೆ ದೊರೆಯಲು ಕಾರಣವೇನು?

ಶುಕ್ರವಾರ, ನವೆಂಬರ್ 7, 2014

ಜಿ. ವಿ. ನಿರ್ಮಲ ಹೇಳುತ್ತಾರೆ... "ವಿಷಯಗಳನ್ನು ನೀರಸವಾಗಿ ಓದುಗರ ಮುಂದಿರಿಸಿದರೆ ಸಾಲದು"

ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಯಲ್ಲಿ ವಿಜ್ಞಾನಿಯಾಗಿ ಸೇವೆಸಲ್ಲಿಸಿ ನಿವೃತ್ತರಾಗಿರುವ ಶ್ರೀಮತಿ ಜಿ. ವಿ. ನಿರ್ಮಲ ವಿಜ್ಞಾನ ಹಾಗೂ ತಂತ್ರಜ್ಞಾನ ವಿಷಯಗಳ ಕುರಿತು ಕನ್ನಡದಲ್ಲಿ ಬರೆಯುತ್ತಿರುವ ಲೇಖಕಿಯರಲ್ಲೊಬ್ಬರು. ಮೈಸೂರು ವಿವಿಯಿಂದ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಿರ್ಮಲರ ಲೇಖನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಕಂಪ್ಯೂಟರ್ ಪದವಿವರಣ ಕೋಶ'ದ ತಯಾರಿಕೆಯಲ್ಲಿ ಸಹಸಂಪಾದಕಿಯಾಗಿ, 'ಇತಿಹಾಸದಲ್ಲಿ ವಿಜ್ಞಾನ' ಮಾಲಿಕೆಯ ಅನುವಾದಕರಲ್ಲೊಬ್ಬರಾಗಿ, 'ವಿಜ್ಞಾನ ಸಿರಿ' ಸಂಕಲನದ ಸಂಪಾದಕರಲ್ಲೊಬ್ಬರಾಗಿ ಕೆಲಸಮಾಡಿದ್ದಾರೆ. 'ಮಾಹಿತಿ ಸಂಪತ್ತು ಡಿಜಿಟಲ್ ಜಗತ್ತು' ಕೃತಿಯ ಲೇಖಕರು. 'ಅದ್ಭುತ ಯಂತ್ರ ಗಣಕ', 'ಗಣಕ ಲೋಕದೊಳಗೆ ಒಂದು ಪಯಣ' ಮುಂತಾದ ಕೃತಿಗಳ ಸಹಲೇಖಕರು. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ..  
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ಮೈಸೂರು ವಿಶ್ವವಿದ್ಯಾಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ನಂತರ ಕೆಲವು ವರ್ಷ ಅಧ್ಯಾಪಕಿಯಾಗಿಯೂ, ಆನಂತರ ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಯಲ್ಲಿ ವಿಜ್ಞಾನಿಯಾಗಿಯೂ ಸೇವೆ ಸಲ್ಲಿಸಿದೆ. ನಮ್ಮ ತಂದೆ ದಿವಂಗತ ಡಾ.ಜಿ.ವರದರಾಜರಾವ್‌ರವರು ದಾಸ ಸಾಹಿತ್ಯದಲ್ಲಿ ವಿದ್ವಾಂಸರು ಹಾಗೂ ಸಾಹಿತಿಗಳು. ಆದ್ದರಿಂದ ಮನೆಯಲ್ಲಿ ಸಾಹಿತ್ಯಿಕ ವಾತಾವರಣವಿತ್ತು. ಕಾಲೇಜು ಪತ್ರಿಕೆಗಳಲ್ಲಿ ಬರೆಯುತ್ತಿದ್ದೆ. ನನ್ನ ವೃತ್ತಿ ಜೀವನದುದ್ದಕ್ಕೂ ವೈಜ್ಞಾನಿಕ ವಿಷಯಗಳನ್ನು ತಿಳಿದುಕೊಳ್ಳುವ ಅನೇಕ ಸಂದರ್ಭಗಳು ಮತ್ತು ಅವಕಾಶಗಳಿದ್ದವು. ವಿಶೇಷವಾಗಿ ರಾ.ವೈ.ಪ್ರ ಕನ್ನಡ ಸಂಘದಿಂದ ಪ್ರಕಟವಾಗುವ 'ಕಣಾದ' ವಿಜ್ಞಾನ ಪತ್ರಿಕೆ ವಿಜ್ಞಾನ ಲೇಖನಗಳನ್ನು ಬರೆಯಬೇಕೆಂಬ ಆಸೆಯನ್ನು ನನ್ನಲ್ಲಿ ಜಾಗೃತಗೊಳಿಸಿತು.

ಸೋಮವಾರ, ನವೆಂಬರ್ 3, 2014

ಡ್ರೋನ್ ಡೆಲಿವರಿ!

ಟಿ. ಜಿ. ಶ್ರೀನಿಧಿ

ಈಚೆಗೆ ಒಂದೆರಡು ವರ್ಷಗಳಿಂದ 'ಡ್ರೋನ್' ಎಂಬ ಹೆಸರು ಸಾಕಷ್ಟು ಸುದ್ದಿಮಾಡುತ್ತಿದೆ. ಪಾಕಿಸ್ತಾನದಲ್ಲೋ ಅಫಘಾನಿಸ್ಥಾನದಲ್ಲೋ ಭಯೋತ್ಪಾದಕರ ಅಡಗುದಾಣಗಳ ಮೇಲೆ ಡ್ರೋನ್ ದಾಳಿ ಆಯಿತಂತೆ ಎನ್ನುವಂತಹ ಸುದ್ದಿಗಳನ್ನು ನಾವು ಆಗಿಂದಾಗ್ಗೆ ನೋಡುತ್ತಿರುತ್ತೇವೆ.

ಚಾಲಕರ ಅಗತ್ಯವಿಲ್ಲದ, ದೂರದಿಂದಲೇ ನಿಯಂತ್ರಿಸಬಹುದಾದ ಈ ಸಣ್ಣ ವಿಮಾನಗಳು ಮಿಲಿಟರಿ ಕ್ಷೇತ್ರದಲ್ಲಿ ಸಾಕಷ್ಟು ಸಮಯದಿಂದ ಬಳಕೆಯಲ್ಲಿವೆ.  ಆಧುನಿಕ ಯುದ್ಧವಿಮಾನಗಳಲ್ಲಿರುವ ಬಹುತೇಕ ಸೌಲಭ್ಯಗಳು ಈ ಡ್ರೋನ್‌ಗಳಲ್ಲೂ ಇವೆಯಂತೆ.

ಯುದ್ಧರಂಗದಲ್ಲಿ, ಸಂಶೋಧನಾ ಕ್ಷೇತ್ರದಲ್ಲೆಲ್ಲ ಕೆಲಸ ಮಾಡಿರುವ ಡ್ರೋನ್‌ಗಳು ಇದೀಗ ನಮ್ಮ ಮನೆಗಳತ್ತ ಹೊರಡಲು ತಯಾರಾಗುತ್ತಿವೆ ಎನ್ನುವುದು ಇತ್ತೀಚಿನ ಸುದ್ದಿ. ಹಾಗೆಂದ ತಕ್ಷಣ ಗಾಬರಿಯಾಗಬೇಕಾದ ಅಗತ್ಯವೇನೂ ಇಲ್ಲ. ಡ್ರೋನ್‌ಗಳು ಬರುತ್ತಿರುವುದು ನಮ್ಮ ಮೇಲೆ ಬಾಂಬ್ ಹಾಕಲಿಕ್ಕಲ್ಲ, ಆನ್‌ಲೈನ್ ಶಾಪಿಂಗ್ ತಾಣದಲ್ಲಿ ನಾವು ಕೊಂಡ ವಸ್ತುಗಳನ್ನು ತಲುಪಿಸಲಿಕ್ಕೆ!

'ಥ್ರೀ ಇಡಿಯಟ್ಸ್' ಚಿತ್ರದಲ್ಲಿ ಅಮೀರ್ ಖಾನ್ ಹಾರಿಸುತ್ತಾನಲ್ಲ, ಅಂತಹವೇ ಹಾರುವ ಯಂತ್ರಗಳು ಇವು. ಆನ್‌ಲೈನ್ ಅಂಗಡಿಯಲ್ಲಿ ಕೊಂಡ ಮೊಬೈಲ್ ಫೋನ್ ಇರಲಿ, ಪಕ್ಕದ ರಸ್ತೆಯ ಅಂಗಡಿಯಿಂದ ಬರಬೇಕಿರುವ ಪಿಜ್ಜಾ ಇರಲಿ - ಅದನ್ನೆಲ್ಲ ಇವು ನೇರಾನೇರ ನಮ್ಮ ಕೈಗೇ ತಂದೊಪ್ಪಿಸಲಿವೆಯಂತೆ.

ಶನಿವಾರ, ನವೆಂಬರ್ 1, 2014

ಶಿಕ್ಷಣ ಮಿತ್ರ

'ಕಂಪ್ಯೂಟರ್ ಮತ್ತು ಕನ್ನಡ' ಕೃತಿಯ ಆನ್‌ಲೈನ್ ಆವೃತ್ತಿಯನ್ನು ಪ್ರಕಟಿಸುವ ಮೂಲಕ ಇಜ್ಞಾನ ಶಿಕ್ಷಣ ಮಿತ್ರ ಜಾಲತಾಣ ಇದೀಗ ನಿಮ್ಮ ಮುಂದೆ ಬಂದಿದೆ. ಓದಿ, ಪ್ರತಿಕ್ರಿಯೆ ನೀಡಿ, ನಿಮ್ಮ ಆಪ್ತರಿಗೂ ತಿಳಿಸಿ. ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಇಜ್ಞಾನ ಶಿಕ್ಷಣ ಮಿತ್ರ ಜಾಲತಾಣಕ್ಕೆ ಭೇಟಿನೀಡಲು ಇಲ್ಲಿ ಕ್ಲಿಕ್ ಮಾಡಿ

badge