ಸೋಮವಾರ, ನವೆಂಬರ್ 24, 2014

ಎಲ್ಲೆಲ್ಲೂ ಎಲ್‌ಇಡಿ

ಟಿ. ಜಿ. ಶ್ರೀನಿಧಿ

೨೦೧೪ನೇ ಸಾಲಿನ ಭೌತವಿಜ್ಞಾನ ನೊಬೆಲ್ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳಿಗೆ ನೀಡಲಾಗಿದೆ. ಅವರಿಗೆ ಈ ಗೌರವ ದೊರೆತದ್ದು ನೀಲಿ ಬಣ್ಣದ ಎಲ್‌ಇಡಿಗಳನ್ನು ರೂಪಿಸಿದ್ದಕ್ಕಾಗಿ.

ಎಲ್‌ಇಡಿ, ಅಂದರೆ ಲೈಟ್ ಎಮಿಟಿಂಗ್ ಡಯೋಡ್‌ಗಳ ಪರಿಚಯ ನಮ್ಮೆಲ್ಲರಿಗೂ ಇದೆ. ಮಕ್ಕಳ ಆಟಿಕೆ - ಅಲಂಕಾರದ ಸೀರಿಯಲ್ ಸೆಟ್ - ಬಸ್ಸು, ರೈಲಿನ ಬೋರ್ಡು ಇತ್ಯಾದಿಗಳಿಂದ ಪ್ರಾರಂಭಿಸಿ ಅತ್ಯಾಧುನಿಕ ಟೀವಿ - ಮೊಬೈಲುಗಳವರೆಗೆ ಎಲ್‌ಇಡಿಗಳು ಎಲ್ಲೆಲ್ಲೂ ಬಳಕೆಯಾಗುತ್ತಿರುವುದೂ ನಮಗೆ ಗೊತ್ತು.

ವಿವಿಧ ಸಾಧನಗಳಲ್ಲಿ ಬೇರೆಬೇರೆ ಬಣ್ಣದ ಎಲ್‌ಇಡಿಗಳು ಬಳಕೆಯಾಗುತ್ತವೆ. ಕೆಂಪು ಹಾಗೂ ಹಸಿರು ಬಣ್ಣದ ಎಲ್‌ಇಡಿಗಳಂತೂ ಹಲವು ದಶಕಗಳಿಂದಲೇ ನಮಗೆಲ್ಲ ಪರಿಚಿತವಾಗಿವೆ. ಬಲ್ಬು-ಟ್ಯೂಬ್‌ಲೈಟ್-ಸಿಎಫ್‌ಎಲ್‌ಗಳಿಗೆಲ್ಲ ಪರ್ಯಾಯವಾಗಿ ಬಳಸಬಹುದಾದ ಬಿಳಿಯ ಎಲ್‌ಇಡಿಗಳೂ ಇದೀಗ ಮಾರುಕಟ್ಟೆಗೆ ಬಂದಿವೆ.

ಮಿಕ್ಕ ಬಣ್ಣಗಳ ಎಲ್‌ಇಡಿಗಳಿಗೆ ಹೋಲಿಸಿದರೆ  ಬಿಳಿಯ ಬಣ್ಣದವುಗಳಿಗೆ ಹೆಚ್ಚಿನ ಮಹತ್ವವಿದೆ. ಅವನ್ನು ಬೆಳಕಿನ ಮೂಲಗಳಾಗಿ ಬಳಸಬಹುದಾದ ಸಾಧ್ಯತೆಯೇ ಈ ಮಹತ್ವಕ್ಕೆ ಕಾರಣ. ಅದೂ ಸರಿಯೇ ಅನ್ನಿ, ಮನೆಯನ್ನು ಬೆಳಗುವ ದೀಪ ಬಿಳಿಯ ಬಣ್ಣದ್ದಾಗಿರದೆ ಕೆಂಪನೆಯದೋ ಹಸಿರು ಬಣ್ಣದ್ದೋ ಆಗಿರಲು ಸಾಧ್ಯವೆ?

ಇರಲಿ, ವಿಷಯ ಅದಲ್ಲ. ಹಿಂದಿನಿಂದಲೇ ನಮಗೆ ಪರಿಚಿತವಾಗಿರುವ ಕೆಂಪು-ಹಸಿರು ಎಲ್‌ಇಡಿಗಳಿಗೋ ಇದೀಗ ಮಾರುಕಟ್ಟೆಯಲ್ಲಿ ವಿಜೃಂಭಿಸುತ್ತಿರುವ ಬಿಳಿ ಎಲ್‌ಇಡಿಗಳಿಗೋ ದೊರೆಯದ ನೊಬೆಲ್ ನೀಲಿಯ ಎಲ್‌ಇಡಿಗಳಿಗೆ ದೊರೆಯಲು ಕಾರಣವೇನು?

ಈ ಪ್ರಶ್ನೆಗೆ ಉತ್ತರಿಸಲು ಕಷ್ಟಪಡುವ ಅಗತ್ಯವೇ ಇಲ್ಲ; ಏಕೆಂದರೆ ಎಲ್‌ಇಡಿಗಳಿಂದ ಬಿಳಿಯ ಬಣ್ಣದ ಬೆಳಕನ್ನು ಹೊರಹೊಮ್ಮಿಸುವ ಕನಸನ್ನು ನನಸಾಗಿಸಿದ್ದೇ ನೀಲಿ ಎಲ್‌ಇಡಿಯ ಆವಿಷ್ಕಾರ.

ಎಲ್‌ಇಡಿಗಳ ಆವಿಷ್ಕಾರವಾಗಿ ಹಲವು ವರ್ಷಗಳೇ ಕಳೆದಿದ್ದರೂ, ಕೆಂಪು-ಹಸಿರು ಎಲ್‌ಇಡಿಗಳೆಲ್ಲ ಮಾರುಕಟ್ಟೆಯಲ್ಲಿದ್ದರೂ ನೀಲಿ ಬಣ್ಣದ ಬೆಳಕನ್ನು ಸೂಸುವ ಎಲ್‌ಇಡಿಗಳನ್ನು ರೂಪಿಸುವಲ್ಲಿ ವಿಜ್ಞಾನಿಗಳಿಗೆ ಯಶಸ್ಸು ದೊರೆತಿರಲಿಲ್ಲ.

ಸತತ ಪ್ರಯತ್ನಗಳ ನಂತರ ಕಡೆಗೂ ನೀಲಿ ಎಲ್‌ಇಡಿಗಳ ಸೃಷ್ಟಿಯಾದದ್ದು ೧೯೯೦ರ ದಶಕದ ಪ್ರಾರಂಭದಲ್ಲಿ. ಕೆಂಪು-ಹಸಿರು ಎಲ್‌ಇಡಿಗಳ ಜೊತೆಗೆ ನೀಲಿ ಬಣ್ಣದ ಎಲ್‌ಇಡಿ ತಯಾರಾಗುತ್ತಿದ್ದಂತೆಯೇ ಆ ಮೂರು ತಂತ್ರಜ್ಞಾನಗಳನ್ನೂ ಒಟ್ಟಾಗಿ ಬಳಸಿ ಬಿಳಿಯ ಬೆಳಕನ್ನು ಹೊರಹೊಮ್ಮಿಸುವುದು ಸಾಧ್ಯವಾಯಿತು.

ಬಿಳಿಯ ಬೆಳಕು ಬೇರೆ ಮೂಲಗಳಿಂದಲೂ ಸಿಗುತ್ತದಲ್ಲ, ಅದು ಎಲ್‌ಇಡಿಗಳಿಂದ ಬರುವಂತಾದುದಕ್ಕೆ ಇಷ್ಟೆಲ್ಲ ಸಂಭ್ರಮವೇಕೆ ಎಂದು ನೀವು ಕೇಳಬಹುದು.

ಈ ಸಂಭ್ರಮಕ್ಕೆ ಪ್ರಮುಖ ಕಾರಣ ಎಲ್‌ಇಡಿಗಳ ಉನ್ನತ ಕಾರ್ಯಕ್ಷಮತೆ. ಸದ್ಯ ಪ್ರಪಂಚದಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುತ್ತಿನ ಶೇ. ೨೦ರಷ್ಟು ಭಾಗ ಬೆಳಕಿಗಾಗಿಯೇ ಖರ್ಚಾಗುತ್ತಿದೆಯಂತೆ. ಎಲ್‌ಇಡಿಗಳ ಸಮರ್ಪಕ ಬಳಕೆಯಿಂದ ಈ ಪ್ರಮಾಣವನ್ನು ಶೇ. ೪ರಷ್ಟಕ್ಕೆ ಇಳಿಸುವುದು ಸಾಧ್ಯವಾಗಲಿದೆ ಎಂದು ತಜ್ಞರು ಹೇಳುತ್ತಾರೆ. ಪ್ರಪಂಚದ ಲೆಕ್ಕವೆಲ್ಲ ಏಕೆ, ನಮ್ಮ ಮೈಸೂರು ಅರಮನೆಯ ಸಾವಿರಾರು ಬಲ್ಬುಗಳನ್ನು ಎಲ್‌ಇಡಿ ದೀಪಗಳಿಗೆ ಬದಲಾಯಿಸುವುದು ಸಾಧ್ಯವಾದರೆ ವಿದ್ಯುತ್ ಬಳಕೆಯಲ್ಲಿ ಎಷ್ಟೊಂದು ಉಳಿತಾಯವಾಗಬಹುದಲ್ಲ!

ವಿದ್ಯುತ್ ಸಂಪರ್ಕವಿಲ್ಲದ ಪ್ರದೇಶಗಳಲ್ಲೂ ಎಲ್‌ಇಡಿ ದೀಪಗಳು ಬಹು ಉಪಯುಕ್ತವಾಗಬಲ್ಲವು. ಕಡಿಮೆ ಪ್ರಮಾಣದ ವಿದ್ಯುತ್ತಿನಿಂದ ಹೆಚ್ಚುಕಾಲ ಬೆಳಗಬಲ್ಲ ಎಲ್‌ಇಡಿಗಳು ಸೌರಶಕ್ತಿ ಆಧರಿತ ದೀಪಗಳಿಗೆ ಹೇಳಿ ಮಾಡಿಸಿದ ಜೋಡಿ.

ಅಂದಹಾಗೆ ನೀಲಿ ಎಲ್‌ಇಡಿಗಳ ಕೈವಾಡ ಬರಿಯ ದೀಪಗಳಿಗಷ್ಟೇ ಸೀಮಿತವಾಗಿಲ್ಲ. ಎಲ್‌ಇಡಿ ಟೀವಿಗಳು, ಕಂಪ್ಯೂಟರ್ ಮಾನಿಟರುಗಳು ಹಾಗೂ ಮೊಬೈಲ್-ಟ್ಯಾಬ್ಲೆಟ್ಟುಗಳ ಪರದೆಗಳನ್ನೆಲ್ಲ ಇದೀಗ ಎಲ್‌ಇಡಿಗಳು ಬೆಳಗುತ್ತಿವೆ. ಕಡಿಮೆ ವಿದ್ಯುತ್ ಬಳಸುವ ಜೊತೆಗೆ ಉತ್ಕೃಷ್ಟ ಗುಣಮಟ್ಟದ ಚಿತ್ರಗಳನ್ನೂ ಮೂಡಿಸುತ್ತಿವೆ.



ಎಲ್‌ಇಡಿ ಕೆಲಸಮಾಡುವುದು ಹೇಗೆ?
ಎಲ್‌ಇಡಿ ಎನ್ನುವುದು ಲೈಟ್ ಎಮಿಟಿಂಗ್ ಡಯೋಡ್ ಎನ್ನುವ ಹೆಸರಿನ ಹ್ರಸ್ವರೂಪ. ಡಯೋಡ್ ಎಂಬ ಅರೆವಾಹಕ (ಸೆಮಿಕಂಡಕ್ಟರ್) ಸಾಧನದ ಮೂಲಕ ವಿದ್ಯುತ್ ಹರಿಸಿದಾಗ ಅದರೊಳಗೆ ಸಂಚರಿಸುವ ಇಲೆಕ್ಟ್ರಾನುಗಳು ಫೋಟಾನ್ ಎಂಬ ಕಣಗಳನ್ನು ಬಿಡುಗಡೆಮಾಡುತ್ತವೆ. ಬೆಳಕಿನ ಮೂಲ ಕಣಗಳೇ ಈ ಫೋಟಾನುಗಳು. ಬಹಳಷ್ಟು ಡಯೋಡುಗಳಿಂದ ಹೊರಸೂಸುವ ಬೆಳಕು ನಮ್ಮ ಕಣ್ಣಿಗೆ ಕಾಣದ ರೂಪದಲ್ಲಿರುತ್ತವೆ (ಉದಾ: ಇನ್‌ಫ್ರಾರೆಡ್, ಅಂದರೆ ಅತಿರಕ್ತ ಕಿರಣಗಳು). ಡಯೋಡುಗಳ ನಿರ್ಮಾಣದಲ್ಲಿ ನಿರ್ದಿಷ್ಟ ಅರೆವಾಹಕ ವಸ್ತುಗಳನ್ನು ಬಳಸುವ ಮೂಲಕ ನಮ್ಮ ಕಣ್ಣಿಗೆ ಕಾಣುವ ಬೆಳಕು ಹೊರಸೂಸುವಂತೆ ಮಾಡುವುದೂ ಸಾಧ್ಯ. ಎಲ್‌ಇಡಿಗಳು ಇದೇ ಪರಿಕಲ್ಪನೆಯನ್ನು ಬಳಸುತ್ತವೆ.

ಬಳಕೆ ಎಲ್ಲೆಲ್ಲಿ?
ಟ್ರಾಫಿಕ್ ಸಂಕೇತಗಳಲ್ಲಿ, ಜಾಹೀರಾತು ಫಲಕಗಳಲ್ಲಿ, ವಾಹನಗಳಲ್ಲಿ, ದೊಡ್ಡದೊಡ್ಡ ಪ್ರದರ್ಶನ ಫಲಕಗಳಲ್ಲಿ ಈಗಾಗಲೇ ಬಳಕೆಯಾಗುತ್ತಿರುವ ಈ ದೀಪಗಳು ಇದೀಗ ಬಲ್ಬುಗಳನ್ನು, ಟ್ಯೂಬ್‌ಲೈಟ್-ಸಿಎಫ್‌ಎಲ್ ಇತ್ಯಾದಿಗಳನ್ನು ಬದಲಾಯಿಸಲು ಹೊರಟಿವೆ. ಟೀವಿ, ಕಂಪ್ಯೂಟರ್, ಟ್ಯಾಬ್ಲೆಟ್ ಹಾಗೂ ಮೊಬೈಲ್ ದೂರವಾಣಿ ಪರದೆಗಳನ್ನೂ ಎಲ್‌ಇಡಿಗಳು ಬೆಳಗುತ್ತಿವೆ.

ಎಲ್‌ಇಡಿ ಭವಿಷ್ಯ
ಮುಂದಿನ ದಿನಗಳಲ್ಲಿ ನೀರಿನ ಶುದ್ಧೀಕರಣ, ಮಾಹಿತಿ ಸಂವಹನ ಮುಂತಾದ ಕ್ಷೇತ್ರಗಳಲ್ಲೂ ಎಲ್‌ಇಡಿಗಳು ಬಳಕೆಯಾಗಲಿವೆ. ತೀಕ್ಷ್ಣವಾದ ಅಲ್ಟ್ರಾವಯೊಲೆಟ್ (ಯೂವಿ) ಬೆಳಕಿನ ಕಿರಣಗಳನ್ನು ಬಳಸಿ ಕುಡಿಯುವ ನೀರನ್ನು ಶುದ್ಧೀಕರಿಸುವ ಬಗ್ಗೆ ನೀವು ಕೇಳಿರಬಹುದು. ಈ ಪ್ರಕ್ರಿಯೆಯಲ್ಲಿ ಅಲ್ಟ್ರಾವಯೊಲೆಟ್ ಬೆಳಕನ್ನು ಪಡೆಯಲು ಹೆಚ್ಚು ವಿದ್ಯುತ್ ಬಳಸುವ ಹಾಗೂ ದುಬಾರಿಯಾದ ಯೂವಿ ದೀಪಗಳನ್ನು ಬಳಸಲಾಗುತ್ತದೆ. ಇಂತಹ ದೀಪಗಳ ಬದಲಿಗೆ ಎಲ್‌ಇಡಿಗಳನ್ನು ಬಳಸಿದರೆ ಬಹಳ ಕಡಿಮೆ ಖರ್ಚಿನಲ್ಲಿ ನೀರಿನ ಶುದ್ಧೀಕರಣ ಸಾಧ್ಯ ಎಂದು ವಿಜ್ಞಾನಿಗಳು ಹೇಳುತ್ತಾರೆ.

ನಿಸ್ತಂತು (ವೈರ್‌ಲೆಸ್) ಮಾಹಿತಿ ಸಂವಹನದಲ್ಲಿ ರೇಡಿಯೋ ಅಲೆಗಳ ಬದಲಿಗೆ ಬೆಳಕಿನ ಕಿರಣಗಳನ್ನು ಬಳಸಿದರೆ ಕ್ಷಿಪ್ರ ಹಾಗೂ ಸುರಕ್ಷಿತ ಮಾಹಿತಿ ಸಂವಹನ ಸಾಧ್ಯವಾಗುತ್ತದೆ. ನಮಗೆಲ್ಲ ಪರಿಚಯವಿರುವ ವೈ-ಫಿ ತಂತ್ರಜ್ಞಾನಕ್ಕೆ ಪರ್ಯಾಯವಾಗಿ ಬೆಳೆಯಬಲ್ಲ ಈ ಲೈ-ಫಿ, ಅಂದರೆ 'ಲೈಟ್ ಎನೇಬಲ್ಡ್ ವೈ-ಫಿ'ಯಲ್ಲಿ ಎಲ್‌ಇಡಿಗಳ ಬಳಕೆ ಸಾಧ್ಯವೆಂದು ವಿಜ್ಞಾನಿಗಳು ಈಗಾಗಲೇ ತೋರಿಸಿದ್ದಾರೆ.

ನವೆಂಬರ್ ೨೪, ೨೦೧೪ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge