ಗುರುವಾರ, ಜುಲೈ 23, 2009

ಬ್ಲಾಗ್‌ಗೊಂದು ಕಾಲ, ಮೈಕ್ರೋಬ್ಲಾಗ್‌ಗೊಂದು ಕಾಲ!

ಟಿ ಜಿ ಶ್ರೀನಿಧಿ

ಬ್ಲಾಗುಗಳು, ನಾನು-ನೀವು ಅತ್ಯಂತ ಸುಲಭವಾಗಿ ಪಡೆದುಕೊಳ್ಳಬಹುದಾದ ಜಾಲತಾಣಗಳು. ಜಾಲತಾಣ ಅನ್ನುವುದಕ್ಕಿಂತ ಅಂತರಜಾಲದಲ್ಲಿರುವ ದಿನಚರಿ ಎಂದರೆ ಇನ್ನೂ ಸೂಕ್ತವೇನೋ.

ಓದಿದ ಪುಸ್ತಕ, ಇಷ್ಟವಾದ ತಿಂಡಿ, ಇಷ್ಟವಾಗದ ಚಲನಚಿತ್ರಗಳಿಂದ ಪ್ರಾರಂಭಿಸಿ ನಮ್ಮ ಹವ್ಯಾಸಗಳು, ಬರವಣಿಗೆ, ಅಭಿಪ್ರಾಯಗಳು - ಹೀಗೆ ಮನಸ್ಸಿಗೆ ಬಂದ ಯಾವುದೇ ವಿಷಯವನ್ನು ಇಡೀ ಜಗತ್ತಿನೊಡನೆ ಹಂಚಿಕೊಳ್ಳಲು ಅನುವುಮಾಡಿಕೊಟ್ಟದ್ದು ಬ್ಲಾಗುಗಳು. ನಿನ್ನೆಮೊನ್ನೆ ಗಣಕ ಬಳಸಲು ಕಲಿತವನೂ ಕೂಡ ಬಹಳ ಸುಲಭವಾಗಿ ಬ್ಲಾಗಮಂಡಲದ ಪ್ರಜೆಯಾಗಬಹುದು.

ಇತಿಹಾಸದ ದೃಷ್ಟಿಯಿಂದ ನೋಡಿದರೆ ಬ್ಲಾಗುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿ ಹತ್ತುವರ್ಷಗಳ ಮೇಲಾಗಿದೆ. ಮೊದಲ ಕನ್ನಡ ಬ್ಲಾಗು ಸೃಷ್ಟಿಯಾಗಿದ್ದೂ ಐದಾರು ವರ್ಷಗಳ ಹಿಂದೆಯೇ. ಈಗಂತೂ ಲೇಖಕರು, ಪತ್ರಕರ್ತರು, ಅಂಕಣಕಾರರು, ತಂತ್ರಜ್ಞರು, ಹವ್ಯಾಸಿ ಬರಹಗಾರರು, ವಿವಿಧ ವಿಷಯಗಳ ಪರಿಣತರು - ಹೀಗೆ ಅನೇಕರು ಬ್ಲಾಗ್ ಪ್ರಪಂಚದಲ್ಲಿ ಸಕ್ರಿಯರಾಗಿ ಕನ್ನಡದ ಬೆಳವಣಿಗೆಗಾಗಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ; ಇವರು ಸೃಷ್ಟಿಸಿರುವ ನೂರಾರು ಬ್ಲಾಗುಗಳು ಅಂತರಜಾಲದ ಉದ್ದಗಲಕ್ಕೂ ಕನ್ನಡದ ಕಂಪನ್ನು ಪಸರಿಸುತ್ತಿವೆ.

ಗಣಕ ಜಗತ್ತಿನಲ್ಲಿ ಹತ್ತು ವರ್ಷ ಎನ್ನುವುದು ಬಹಳ ದೀರ್ಘವಾದ ಅವಧಿ. ಅದೂ ಒಂದೇ ಪರಿಕಲ್ಪನೆ ಇಷ್ಟೊಂದು ಕಾಲ ಜನಪ್ರಿಯವಾಗಿ ಉಳಿದುಕೊಳ್ಳುವುದು ಅದ್ಭುತವೇ ಸರಿ.

ಬದಲಾವಣೆಯೇ ಜಗದ ನಿಯಮ ಅಲ್ಲವೇ, ಇನ್ನು ಬ್ಲಾಗ್ ಜಗತ್ತು ಅದು ಹೇಗೆ ಬೇರೆಯಾಗಲು ಸಾಧ್ಯ?

ಹೀಗಾಗಿಯೇ ಬ್ಲಾಗ್ ಜಗತ್ತು ಈಗ ಬದಲಾಗುತ್ತಿದೆ. ಎರಡುಮೂರು ವರ್ಷಗಳ ಹಿಂದೆ ಹುಟ್ಟಿಕೊಂಡ ಹೊಸದೊಂದು ಪರಿಕಲ್ಪನೆಯ ಪುಟ್ಟ ಸಸಿ ಬ್ಲಾಗಮಂಡಲದಲ್ಲಿ ಹೊಸ ಸಂಚಲನೆ ಮೂಡಿಸಿದೆ.

ಈ ಪರಿಕಲ್ಪನೆಯ ಹೆಸರೇ ಮೈಕ್ರೋಬ್ಲಾಗಿಂಗ್ - ಪುಟ್ಟಪುಟ್ಟ ಬರಹಗಳ ಮೂಲಕ ಮಾಹಿತಿ ಸಂವಹನವನ್ನು ಇನ್ನಷ್ಟು ಸರಳ, ಕ್ಷಿಪ್ರ ಹಾಗೂ ಪರಿಣಾಮಕಾರಿಯಾಗಿಸುವ ಸುಂದರ ಪ್ರಯತ್ನ.

ಇದನ್ನು ಬ್ಲಾಗುಲೋಕದ ಎಸ್ಸೆಮ್ಮೆಸ್ ಎಂದೇ ಕರೆಯಬಹುದೇನೋ. ಸಾಮಾನ್ಯ ಬ್ಲಾಗುಗಳಿಗೂ ಮೈಕ್ರೋಬ್ಲಾಗುಗಳಿಗೂ ಇರುವ ವ್ಯತ್ಯಾಸ ಕೂಡ ಇದೇ. ಮೈಕ್ರೋಬ್ಲಾಗಿನಲ್ಲಿ ಪ್ರಕಟವಾಗುವ ಬರಹಗಳು ಎಸ್ಸೆಮ್ಮೆಸ್ಸಿನಂತೆಯೇ ೧೪೦ ಅಕ್ಷರಗಳ ಮಿತಿಯನ್ನು ಹೊಂದಿರುತ್ತವೆ. ಮೈಕ್ರೋಬ್ಲಾಗ್ ತಾಣಗಳಲ್ಲಿ ಪಠ್ಯ ಸಂದೇಶಗಳಿಗೇ ಮಹತ್ವ; ಆದರೆ ಸಾಮಾನ್ಯ ಬ್ಲಾಗುಗಳಂತೆ ಚಿತ್ರಗಳು ಹಾಗೂ ಇತರ ಕಡತಗಳನ್ನೂ ಸೇರಿಸಲು ಅನುವುಮಾಡಿಕೊಡುವ ತಾಣಗಳೂ ಇವೆ.

ಮೈಕ್ರೋಬ್ಲಾಗ್ ತಾಣಗಳಿಗೆ ಮಾಹಿತಿ ಸೇರಿಸಲು ಮೊಬೈಲ್ ಅಥವಾ ಇಮೇಲ್ ಕೂಡ ಬಳಸಬಹುದು; ಅಲ್ಲಿನ ಹೊಸ ಮಾಹಿತಿಯನ್ನೂ ಮೊಬೈಲ್‌ನಲ್ಲೇ ಪಡೆದುಕೊಳ್ಳಬಹುದು. ಹೀಗಾಗಿಯೇ ಮೈಕ್ರೋಬ್ಲಾಗ್ ತಾಣಗಳ ಜನಪ್ರಿಯತೆ ದಿನೇದಿನೇ ಹೆಚ್ಚುತ್ತಿದೆ. ನಾನೇನು ಮಾಡುತ್ತಿದ್ದೇನೆ ಅಥವಾ ಮಾಡುತ್ತಿಲ್ಲ ಎನ್ನುವುದನ್ನು ಲೋಕಕ್ಕೆಲ್ಲ ಹೇಳುವ ವೇದಿಕೆಯಾಗಿ, ಬ್ರೇಕಿಂಗ್ ನ್ಯೂಸ್ ಪಡೆಯುವ ಹೊಸ ಹಾದಿಯಾಗಿ, ಸ್ನೇಹಿತರೊಡನೆ ಹರಟೆಹೊಡೆಯುವ ಸೋಮಾರಿಕಟ್ಟೆಯಾಗಿ, ಚುನಾವಣಾ ಪ್ರಚಾರದ ಹೊಸ ರೀತಿಯಾಗಿ, ಕಡಿಮೆ ಖರ್ಚಿನ ಜಾಹೀರಾತು ಮಾಧ್ಯಮವಾಗಿ - ಒಟ್ಟಾರೆಯಾಗಿ ಮೈಕ್ರೋಬ್ಲಾಗಿಂಗ್ ಪರಿಕಲ್ಪನೆ ಅಂತರಜಾಲದ ಲೇಟೆಸ್ಟ್ ಟೆಂಡ್ ಆಗಿ ಬೆಳೆದಿದೆ. ಶಿಕ್ಷಣ ಮಾಧ್ಯಮವಾಗಿ ಹಾಗೂ ಕಚೇರಿಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸುವ ಹೊಸ ಉಪಕರಣವಾಗಿಯೂ ಮೈಕ್ರೋಬ್ಲಾಗ್‌ಗಳು ಉಪಯುಕ್ತವಾಗಲಿವೆ ಎಂಬ ಅಭಿಪ್ರಾಯಗಳೂ ಇವೆ.

ಟ್ವೀಟರ್ (www.twitter.com) ಮೈಕ್ರೋಬ್ಲಾಗಿಂಗ್ ತಾಣಗಳಲ್ಲೇ ಅತ್ಯಂತ ಜನಪ್ರಿಯವಾದದ್ದು. ಟ್ವೀಟ್ಗಳೆಂಬ ಹೆಸರಿನ ಪುಟ್ಟ ಸಂದೇಶಗಳ ರೂಪದಲ್ಲಿ ಮಾಹಿತಿವಿನಿಮಯಕ್ಕೆ ಅನುವುಮಾಡಿಕೊಡುವ ವಿಶಿಷ್ಟ ತಾಣ ಇದು.

ಯಾವಾಗ ಎಲ್ಲಿಂದ ಬೇಕಾದರೂ ಸಂದೇಶಗಳನ್ನು ಕಳಿಸಿಕೊಂಡು ಗೆಳೆಯರ ಬಳಗದೊಡನೆ ಸಂಪರ್ಕದಲ್ಲಿರುವುದನ್ನು ಸಾಧ್ಯವಾಗಿಸಿರುವ ಟ್ವೀಟರ್ ತಾಣದಲ್ಲಿ ಲಕ್ಷಾಂತರ ಮಂದಿ ಸದಸ್ಯರಿದ್ದಾರೆ. ಒಂದು ನಯಾಪೈಸೆ ಆದಾಯ ಇಲ್ಲದಿದ್ದರೂ ಈ ತಾಣಕ್ಕೆ ಸುಮಾರು ನೂರು ಮಿಲಿಯ ಡಾಲರುಗಳ ಬೆಲೆ ಕಟ್ಟಲಾಗಿದೆ!

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಪ್ರಚಾರ, ಜಿ-೨೦ ಶೃಂಗಸಭೆ ಮುಂತಾದ ಅನೇಕ ಸಂದರ್ಭಗಳಲ್ಲಿ ಟ್ವೀಟರ್ ವ್ಯಾಪಕವಾಗಿ ಬಳಕೆಯಾಗಿರುವುದು ಅದರ ಜನಪ್ರಿಯತೆಗೆ ಸಾಕ್ಷಿ. ಕೆಲಸಮಯದ ಹಿಂದೆ ಅಮೆರಿಕಾದಲ್ಲಿ ವಿಮಾನವೊಂದು ನದಿಯ ಮೇಲೆ ಇಳಿದ ಸುದ್ದಿ ಮೊದಲು ಬಂದದ್ದೇ ಟ್ವೀಟರಿನಲ್ಲಿ. ನಮ್ಮನಿಮ್ಮಂಥವರ ಜೊತೆಗೆ ಅನೇಕ ಪತ್ರಿಕೆಗಳು, ಟೀವಿ ವಾಹಿನಿಗಳು ಕೂಡ ಟ್ವೀಟರ್ ಬಳಸುತ್ತಿವೆ. ೨೦೦೯ರ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ನಮ್ಮ ರಾಜಕೀಯ ಪಕ್ಷಗಳೂ ಟ್ವೀಟರ್ ಬಳಸಿವೆ.

ಮೈಕ್ರೋಬ್ಲಾಗಿಂಗ್ ಎಂದಾಕ್ಷಣ ಟ್ವೀಟರ್ ನೆನಪಿಗೆ ಬರುವಷ್ಟು ಅದರ ಜನಪ್ರಿಯತೆ ಬೆಳೆದಿದೆ, ನಿಜ. ಆದರೆ ಮೈಕ್ರೋಬ್ಲಾಗಿಂಗ್ ಸೇವೆ ಒದಗಿಸುತ್ತಿರುವ ತಾಣ ಟ್ವೀಟರ್ ಒಂದೇ ಅಲ್ಲ. ಗೂಗಲ್‌ನ ಜೈಕು (www.jaiku.com) ಹಾಗೂ ಪ್ಲರ್ಕ್ (www.plurk.com) ಕೂಡ ಸಾಕಷ್ಟು ಹೆಸರುಮಾಡಿರುವ ಮೈಕ್ರೋಬ್ಲಾಗಿಂಗ್ ತಾಣಗಳು. ಫೇಸ್‌ಬುಕ್, ಮೈಸ್ಪೇಸ್, ಲಿಂಕ್ಡ್‌ಇನ್ ಮುಂತಾದ ತಾಣಗಳು ಕೂಡ ತಮ್ಮ ಸದಸ್ಯರಿಗೆ ಸ್ಟೇಟಸ್ ಅಪ್‌ಡೇಟ್ಸ್ ಹೆಸರಿನಲ್ಲಿ ಸಣ್ಣಪ್ರಮಾಣದ ಮೈಕ್ರೋಬ್ಲಾಗಿಂಗ್ ಸೌಲಭ್ಯ ನೀಡುತ್ತಿವೆ. ಪೋಸ್ಟೆರಸ್ (www.posterous.com) ಎಂಬಲ್ಲಂತೂ ಎಲ್ಲಿಯೂ ಲಾಗಿನ್ ಆಗುವ ಅಗತ್ಯವಿಲ್ಲದೆ ಬರಿಯ ಇಮೇಲ್ ಮೂಲಕವೇ ಮೈಕ್ರೋಬ್ಲಾಗಿಂಗ್ ಸಾಧ್ಯ!

ಸಾಮಾನ್ಯವಾಗಿ ಕೆಲವು ನೂರು ಪದಗಳಷ್ಟೆ ಇರುವ ಬ್ಲಾಗ್ ಬರಹಗಳು ತೀರಾ ಉದ್ದ, ಬೋರಿಂಗು ಎಂದ ಜನ ನೂರಾ ನಲವತ್ತು ಅಕ್ಷರಗಳನ್ನು ಓದುವುದೂ ಕಷ್ಟ ಅಂದುಬಿಟ್ಟರೆ? ಅದಕ್ಕೆ ಉತ್ತರ ಹುಡುಕಿರುವುದು ಅಡೊಕು (www.adocu.com) ಎಂಬ ತಾಣ. ಟ್ವೀಟರ್‌ನಲ್ಲಿ ಒಂದು ಎಸ್ಸೆಮ್ಮೆಸ್‌ನಷ್ಟು ಉದ್ದದ ಮಾಹಿತಿ ಹಾಕುವಂತೆ ಇಲ್ಲಿ ಕೇವಲ ಒಂದು ಪದವನ್ನಷ್ಟೆ ಬರೆಯಬಹುದು. ಹಾಗಾಗಿ ಇದು ಮೈಕ್ರೋಬ್ಲಾಗಿಂಗ್ ಅಲ್ಲ, ನ್ಯಾನೋಬ್ಲಾಗಿಂಗ್!

ನಾನೀಗಊಟಮಾಡ್ತಾಇದೀನಿ, ನೀನ್ಯಾವಾಗ್ಸಿಗ್ತೀಯ? ಎಂಬಂತಹ ಸಂದೇಶಗಳನ್ನು ಪ್ರಕಟಿಸುತ್ತಿರುವ ಈ ತಾಣ ಮೇಲ್ನೋಟಕ್ಕೆ ನಗೆತರಿಸಿದರೂ ಅಂತರಜಾಲ ಲೋಕದ ಸಾಧ್ಯತೆಗಳ ಬಗ್ಗೆ ಕುತೂಹಲವನ್ನೂ ಮೂಡಿಸಿದೆ.

ಇಲ್ಲಿ ಇನ್ನೂ ಏನೇನು ಆಗಲಿದೆಯೋ, ಬಲ್ಲವರಾರು?

ಏಪ್ರಿಲ್‌ನಲ್ಲಿ ಬರೆದ ಲೇಖನ, ಆಗಸ್ಟ್ ೨೦೦೯ರ 'ವಿಜ್ಞಾನ ಲೋಕ'ದಲ್ಲಿ ಪ್ರಕಟವಾಗಿದೆ

ಬುಧವಾರ, ಜುಲೈ 22, 2009

ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?

ಬೇಳೂರು ಸುದರ್ಶನ

ಬ್ರೆಝಿಲ್ ದೇಶದ ಸುಂದರಿ ಮಾರಿಯಾನಾ ಬ್ರೀಡಿ ಡ ಕಾಸ್ಟಾ ೨೦೦೮ರ ಡಿಸೆಂಬರ್ ೩೦ರಂದು ಮೂತ್ರಕೋಶದ ಕಲ್ಲಿನ ಸಮಸ್ಯೆಗಾಗಿ ಆಸ್ಪತ್ರೆ ಸೇರಿದಳು. ೨೦೦೯ರ ಜನವರಿ ೩ನೇ ತಾರೀಖು ಅವಳ ಅಂಗಾಂಶಗಳಿಗೆ ಸಾಕಷ್ಟು ಗಾಸಿಯಾಗಿದೆ ಎಂದು ಪತ್ತೆಯಾಯಿತು. ಮೊದಲು ಅವಳ ಕೈ ಕತ್ತರಿಸಿದ ವೈದ್ಯರು ಆಮೇಲೆ ಕಾಲುಗಳನ್ನೂ ಬಿಡಲಿಲ್ಲ. ಕೊನೆಗೆ ಹೊಟ್ಟೆ, ಮೂತ್ರಪಿಂಡಗಳನ್ನು ಕತ್ತರಿಸಿ ತೆಗೆದರು. ರೆಸ್ಪಿರೇಟರ್ ಮೂಲಕ ಉಸಿರಾಡುತ್ತಿದ್ದ ಮಾರಿಯಾನಾ ಜನವರಿ ೨೪ರಂದು ಇಹಲೋಕ ತ್ಯಜಿಸಬೇಕಾಯಿತು. ಆಕೆ ತನ್ನ ೨೦ನೇ ವಯಸ್ಸಿನಲ್ಲೇ ಹಠಾತ್ತನೆ ಸತ್ತಿದ್ದಕ್ಕೆ ಸ್ಯೂಡೋನಾಮಸ್ ಏರುಗಿನೋಸಾ ಎಂಬ ಬ್ಯಾಕ್ಟೀರಿಯಾವೇ ಕಾರಣ ಎಂಬುದೀಗ ದೃಢಪಟ್ಟಿದೆ.

ಮೊನ್ನೆ ವೈರಲ್ ಫಿವರ್‌ಗೆ ತುತ್ತಾಗಿ ಡಯಾಗ್ನಾಸ್ಟಿಕ್ ಸೆಂಟರ್‌ನಿಂದ ವರದಿಯೊಂದನ್ನು ಪಡೆದಾಗ ನನ್ನ ದೇಹದಲ್ಲಿ ಸ್ಯೂಡೋಮೋನಾಸ್ ಏರುಗಿನೋಸಾ ಎಂಬ ಬ್ಯಾಕ್ಟೀರಿಯಾ ಮನೆ ಮಾಡಿದೆ ಎಂದು ಗೊತ್ತಾಗಿ ಗಾಬರಿ ಬಿದ್ದೆ. ಈ ಬ್ಯಾಕ್ಟೀರಿಯಾ ನಾಶಕ್ಕೆ ಆಂಟಿ-ಬಯಾಟಿಕ್ ತಗೊಳ್ಳಲೇಬೇಕು ಕಣೋ ಎಂದು ವೈದ್ಯಮಿತ್ರ ಹೇಳಿದಾಗ ವಿಧಿಯಿಲ್ಲದೆ ಕ್ಯಾಪ್ಸೂಲು, ಮಾತ್ರೆ ನುಂಗತೊಡಗಿದೆ. ಬ್ಯಾಕ್ಟೀರಿಯಾ ಕೊಟ್ಟ ನೋವು ಸಾಕಷ್ಟು ಕಡಿಮೆಯಾಗಿದೆ.

ಈ ಸ್ಯೂಡೋನಾಮಸ್ ಏರುಗಿನೋಸಾ ಬ್ಯಾಕ್ಟೀರಿಯಾದ ಬಗ್ಗೆ ಏನಾದ್ರೂ ಮಾಹಿತಿ ಸಿಗುತ್ತಾ ಎಂದು ಇಂಟರ್‌ನೆಟ್ ಜಾಲಾಡಿದೆ. ಸಿಗೋದೇನು.... ಪುಟಗಟ್ಟಳೆ ಪ್ರಬಂಧಗಳು, ಸುದ್ದಿಗಳು, ಲೇಖನಗಳು, ವಿಶ್ಲೇಷಣೆಗಳು ಕಂಡವು! ಈ ಮಾಹಿತಿಗಳನ್ನೆಲ್ಲ ಓದ್ತಾ ಇದ್ದ ಹಾಗೆ ಗೊತ್ತಾದ ವಿಷಯ ಏನಪ್ಪಾ ಅಂದ್ರೆ.......

ಮನುಕುಲವನ್ನು ಕಾಡುತ್ತಿರುವ ಆರು ಭಯಾನಕ ಕೀಟಾಣುಗಳಲ್ಲಿ ಸ್ಯೂಡೋನಾಮಸ್ ಏರುಗಿನೋಸಾ ಬ್ಯಾಕ್ಟೀರಿಯಾ ಕೂಡಾ ಒಂದು! ಈ ಬ್ಯಾಕ್ಟೀರಿಯಾ ಆಕ್ರಮಣವಾದ್ರೆ ಸಾವೂ ಬರಬಹುದು ಎಂದು ಒಂದು ವೈದ್ಯಕೀಯ ಮಾಹಿತಿ ಜಾಲತಾಣ ಪ್ರಕಟಿಸಿದ್ದನ್ನು ನೋಡಿ ದಿಗಿಲು ಬಿದ್ದೆ. ಮತ್ತೆ ವೈದ್ಯಮಿತ್ರನಿಗೆ ಫೋನ್ ಹೊಡೆದೆ.

ಅಂತೂ ಈ ಬ್ಯಾಕ್ಟೀರಿಯಾ ಡೇಂಜರಸ್ ಅನ್ನೋದು ತಿಳೀತಲ್ವ? ಗಾಬ್ರಿ ಆಗ್ಬೇಡ. ಅದೆಲ್ಲ ಪಾಶ್ಚಾತ್ಯ ವೆಬ್‌ಸೈಟ್‌ಗಳ ಹೇಳಿಕೆ. ಭಾರತೀಯರು ಹೆರ್ಡ್ ಕಮ್ಯುನಿಟಿಗೆ ಸೇರಿದವರು. ನಾಟಿ ಜನ. ಆದ್ದರಿಂದ ನಮ್ಮಲ್ಲಿ ಇಮ್ಯುನಿಟಿ ಶಕ್ತಿ ಹೆಚ್ಚು. ಅಮೆರಿಕಾದಲ್ಲಾಗಿದ್ದರೆ ನಿನ್ನ ವಿಮಾ ಏಜೆಂಟರೆಲ್ಲ ಹೌಹಾರಿ ಓಡಿಹೋಗ್ತಿದ್ದರು ಎಂದು ಆತ ಹೇಳಿದ್ದು ಸಮಾಧಾನವೋ, ತಣ್ಣನೆಯ ಬೆದರಿಕೆಯೋ ಗೊತ್ತಾಗಲಿಲ್ಲ. ಮಾರಿಯಾನಾ ಬಗ್ಗೆ ಜನವರಿಯಲ್ಲೇ ಓದಿ ಮರುಕಪಟ್ಟಿದ್ದ ನನಗೆ ಅವಳ ಸಾವಿನ ಕಾರಣ ಗೊತ್ತಾಗಿದ್ದೇ ಈಗ.... ಈ ಬ್ಯಾಕ್ಟೀರಿಯಾ ನನ್ನನ್ನೂ ಆವರಿಸಿದೆ ಎಂಬುದು ಕೊಂಚ ದಿಗಿಲು ಹುಟ್ಟಿಸೋ ವಿಚಾರಾನೇ ಅಂದುಕೊಳ್ಳಿ.

ಹೇಗೂ ಇರಲಿ ಅಂದುಕೊಂಡು ಈ ಅರಿ ಷಡ್ವರ್ಗಗಳ ಬಗ್ಗೆ ಮಾಹಿತಿ ಓದಿ, ಅದನ್ನೆಲ್ಲ ಕ್ರೋಡೀಕರಿಸಿ ಕೊಡ್ತಾ ಇದೀನಿ. ಮೋಡ ಕವಿದ, ಥಂಡಿ ಗಾಳಿ ಬೀಸಿ ಎಲ್ಲೆಲ್ಲೂ ವೈರಲ್ ಫಿವರ್ ಹಾವಳಿ ಹೆಚ್ಚಾದ ಈ ಹೊತ್ತಿನಲ್ಲಿ ಬಾಳೆ ದಿಂಡಿನ ರಸ ಕುಡೀತಾ ಇದನ್ನು ಓದಿ ! ಫೋರ್ಬಿಸ್ ಮ್ಯಾಗಜಿನ್‌ನಲ್ಲೇ ಈ ಟಾಪ್ ರೇಟೆಡ್ ಕೀಟಾಣುಗಳ ಬಗ್ಗೆ ಸ್ಲೈಡ್ ಶೋ ಇದೆ ಅಂದ್ರೆ ಅವು ಎಂಥ ಸ್ಟೇಟಸ್ ಪಡೆದಿವೆ ಅನ್ನೋದನ್ನು ಊಹಿಸಿ...

ಸ್ಯೂಡೋನಾಮಸ್ ಏರುಗಿನೋಸಾ ಬ್ಯಾಕ್ಟೀರಿಯಾ

ಇದು ಶ್ವಾಸಕೋಶ, ಮೂತ್ರನಾಳ ಇಲ್ಲೆಲ್ಲ ಮನೆಮಾಡುತ್ತೆ. ಸಾಮಾನ್ಯವಾಗಿ ಆಸ್ಪತ್ರೆಯಲ್ಲೇ ಈ ಬ್ಯಾಕ್ಟೀರಿಯಾ ಇರುತ್ತಂತೆ! ಸಿಪ್ರೋ, ಲೆವಾಕ್ವಿನ್, ನೋರ್‌ಫ್ಲಾಕ್ಸಾಸಿನ್ ಮುಂತಾದ ಆಚಿಟಿ ಬಯಾಟಿಕ್‌ಗಳಿಗೆ ಪ್ರತಿರೋಧ ಬೆಳೆಸಿಕೊಂಡಿರೋ ಈ ಬ್ಯಾಕ್ಟೀರಿಯಾ ಉಳಿದೈದು ಕೀಟಾಣುಗಳಿಗಿಂತ ತುಂಬಾ ಬೇಗ ಔಷಧಿಗಳಿಗೆ ಪ್ರತಿರೋಧ ಬೆಳೆಸಿಕೊಳ್ಳುತ್ತೆ. ಅಂಥ ಬ್ಯಾಕ್ಟೀರಿಯಾ ಶ್ವಾಸಕೋಶಕ್ಕೆ ತಗುಲಿದರೆ, ಶ್ವಾಸಕೋಶವನ್ನೇ ಬದಲಿಸಬೇಕಂತೆ.

ಮೆಥಿಸಿಲಿನ್ ಪ್ರತಿರೋಧಕ ಶಕ್ತಿಯ ಸ್ಟಾಫಿಲೋಕೋಕಸ್ ಆರೆಯಸ್ (ಎಂ ಎಸ್ ಆರ್ ಎ)

ಇದು ಅಮೆರಿಕಾದಲ್ಲಿ ಪ್ರತಿವರ್ಷ ಒಂದು ಲಕ್ಷ ಜನರಿಗೆ ತಗುಲುವ ಕಿಲ್ಲರ್ ಬ್ಯಾಕ್ಟೀರಿಯಾ.

ಎಸ್‌ಶೀರಿಯಾ ಕೋಲಿ ಮತ್ತು ಕೆಬ್‌ಸೀಲಾ

ಇದೂ ಮೂತ್ರನಾಳದಲ್ಲೇ ಕಾಲೋನಿ ಕಟ್ಟುತ್ತೆ. ಕರುಳುಬೇನೆ ಇದ್ದವರನ್ನು, ಗಾಯಗೊಂಡವರನ್ನು ಬಿಡೋದಿಲ್ಲ.

ಅಸಿನೆಟೋಬ್ಯಾಕ್ಟರ್ ಬಾಮಾನ್ನಿ

ಇರಾಕಿನಿಂದ ಬಂದ ಸೈನಿಕರನ್ನೇ ಆಕ್ರಮಣ ಮಾಡಿದ ಬ್ಯಾಕ್ಟೀರಿಯಾ ಇದು. ನ್ಯೂಮೋನಿಯಾ ಕಾಯಿಲೆಗೆ ಈ ಬ್ಯಾಕ್ಟೀರಿಯಾವೂ ಕಾರಣ. ಇದಕ್ಕೂ ಖಚಿತ ಔಷಧಿ ಅಂತ ಇಲ್ಲ.

ಆಸ್ಪರ್‌ಗಿಲ್ಲಿಸ್

ಕ್ಯಾನ್ಸರ್ ರೋಗಿಗಳು, ಅಂಗಾಂಗ ಕಸಿ ಮಾಡಿಕೊಂಡವರು, ಕಡಿಮೆ ಪ್ರತಿರೋಧಕ ಶಕ್ತಿ ಇರೋರು ಇಂಥವರಿಗೆ ಈ ಫಂಗಸ್ (ಇದು ಬ್ಯಾಕ್ಟೀರಿಯಾ ಅಲ್ಲ) ತಗುಲುತ್ತದೆ.

ವ್ಯಾಂಕೋಮೈಸಿನ್ ಪ್ರತಿರೋಧ ಶಕ್ತಿಯ ಎಂಟೆರೋಕಾಕಸ್ ಫೀಸಿಯಮ್ ( ವಿ ಆರ್ ಇ)

ಹೃದಯ, ಮೆದುಳು ಮತ್ತು ಕಿಬ್ಬೊಟ್ಟೆಯಲ್ಲಿ ಈ ಬ್ಯಾಕ್ಟೀರಿಯಾ ವಾಸಿಸುತ್ತದೆ. ಅಮೆರಿಕಾದ ಶೇ. ೧೦ರಷ್ಟು ರೋಗಿಗಳಲ್ಲಿ ಈ ಬ್ಯಾಕ್ಟೀರಿಯಾ ವಾಸಿಸಿದ್ದನ್ನು ಗುರುತಿಸಿದ್ದಾರೆ.

ಈ ಆರು ಕೀಟಾಣುಗಳಿಂದ ಅಮೆರಿಕಾದಲ್ಲೇ ಪ್ರತಿವರ್ಷ ೯೦ ಸಾವಿರ ಜನ ಸಾಯುತ್ತಿದ್ದಾರೆ.

ವಿಶ್ವದಾದ್ಯಂತ ಅಸಿನೆಟೋಬ್ಯಾಕ್ಟರ್ ಬಾಮಾನ್ನಿ ಬ್ಯಾಕ್ಟೀರಿಯಾದ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಾಂಕ್ರಾಮಿಕ ರೋಗತಜ್ಞ, ಗ್ರೀಸ್ ದೇಶದ ಆಲ್ಫಾ ಇನ್‌ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಸೈನ್ಸಸ್‌ನ ನಿರ್ದೇಶಕ ಮ್ಯಾಥ್ಯೂ ಫಲಗಾಸ್ ಹೇಳುತ್ತಾರೆ.

ಪರಿಹಾರಕ್ಕಾಗಿ ತಡಕಾಟ

ಇಂಥ ಬ್ಯಾಕ್ಟೀರಿಯಾಗಳ ವಿರುದ್ಧ ಔಷಧರಂಗ ಸಮರ ಸಾರುತ್ತಿದೆ. (ಕ್ಷಮಿಸಿ, ಈ ಔಷಧ ರಂಗವೂ ಒಂದು ರ್‍ಯಾಕೆಟ್ ಅಲ್ಲವೆ ಇತ್ಯಾದಿ ವಿಷಯಗಳು ಈ ಲೇಖನದ ಮಿತಿಯಾಚೆ ಇವೆ)

ಸ್ಯೂಡೋನಾಮಸ್ ಏರುಗಿನೋಸಾವು ಶ್ವಾಸಕೋಶದಲ್ಲಿದ್ದರೆ ಅದನ್ನು ನಿವಾರಿಸಲು ಕೇಸ್ಟನ್ (ಸಿ ಎಕ್ಸ್ ಎ ೧೦೧) ಎಂಬ ಪುಡಿಯನ್ನು ಕ್ಯಾಲಿಕ್ಸಾ ಥೆರೋಪೇಟಿಕ್ಸ್ ಸಂಸ್ಥೆ ಅಭಿವೃದ್ಧಿಪಡಿಸುತ್ತಿದೆಯಂತೆ.

ಈ ಥರ ಔಷಧಿಗಳಿಗೇ ಸೆಡ್ಡು ಹೊಡೆಯುವ ಕೀಟಾಣುಗಳಿಗೆ ಔಷಧ ತಯಾರಿಸಲು ೭೭ ಲಕ್ಷ ಯೂರೋ (ಸುಮಾರು ೫೨ ಕೋಟಿ ರೂ.) ವೆಚ್ಚದಲ್ಲಿ ಸ್ಪೇನ್, ಜರ್ಮನಿ, ಫ್ರಾನ್ಸ್ ಮತ್ತು ಬಲ್ಗೇರಿಯಾ ದೇಶಗಳ ಆರು ಸಂಸ್ಥೆಗಳು ಒಗ್ಗೂಡಿ ಸಂಶೋಧನೆ ನಡೆಸಲಿವೆ. ಇನ್ನು ನಾಲ್ಕು ವರ್ಷಗಳಲ್ಲಿ ಈ ಸಂಶೋಧನೆಗಳು ಒಂದು ಹಂತಕ್ಕೆ ಬರಬಹುದು. ಮುಖ್ಯವಾಗಿ ಸ್ಯೂಡೋನಾಮಸ್ ಏರುಗಿನೋಸಾ ಮತ್ತು ಅಸಿನೆಟೋಬ್ಯಾಕ್ಟರ್ ಬಾಮಾನ್ನಿ ಬಗ್ಗೆಯೇ ಈ ಸಂಶೋಧನೆಗಳು ನಡೆಯಲಿವೆ. ಈ ಯೋಜನೆಗೆ ಆಂಟಿ ಪ್ಯಾಥೋ ಜಿ ಎನ್ ಎಂದು ಕರೆದಿದ್ದಾರೆ.

ಹಾಗಾದರೆ ಬಾಳೆ ದಿಂಡಿನ ರಸ ಯಾಕೆ ಕುಡೀಬೇಕು ಎಂದು ನೀವೀಗ ಕೇಳಬಹುದು

ಬಾಳೆ ದಿಂಡಿನ ರಸವು ಮೂತ್ರಕೋಶದ ಕಲ್ಲುಗಳನ್ನು ನಿವಾರಿಸಲು ಅತ್ಯಂತ ಶಕ್ತಿಯುತವಾದ ಪರಿಹಾರ ಎಂದು ಸಂಶೋಧನೆಗಳು ದೃಢಪಡಿಸಿವೆ. ಯಾಕೆಂದರೆ ಬಾಳೆ ದಿಂಡಿನ ರಸದ ಚಿಕಿತ್ಸೆಯ ಬಗ್ಗೆ ಆಯುರ್ವೇದದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ವಿವರಣೆಗಳಿವೆ. ಸ್ಯೂಡೋನಾಮಸ್ ಏರುಗಿನೋಸಾ ವಿರುದ್ಧವೂ ಬಾಳೆ ದಿಂಡಿನ ರಸ ಸಮರ್ಥವಾಗಿ ಕೆಲಸ ಮಾಡುತ್ತದೆ. ಇದಕ್ಕೆ, ಈಗ ಆರಾಮಾಗಿ ಲೇಖನ ಬರೆಯುತ್ತಿರುವ ನಾನೇ ಸಾಕ್ಷಿ ! ದಿನಾ ಬೆಳಗ್ಗೆ ಮತ್ತು ರಾತ್ರಿ ಒಂದು ಲೋಟ ಬಾಳೆ ದಿಂಡಿನ ರಸವನ್ನು ಕುಡಿಯುತ್ತೇನೆ. ಆಂಟಿ ಬಯಾಟಿಕ್‌ನನ್ನೇ ನಂಬಿ ಕೂರುವುದಕ್ಕೆ ಸಾಧ್ಯವೆ? ಅದರಲ್ಲೂ ವಿಜ್ಞಾನಿಗಳೇ ಕೈ ಚೆಲ್ಲಿ ಕೂತಿರೋವಾಗ!

ಕ್ರೆಡಿಟ್ ಕಾರ್ಡ್ ಸುರಕ್ಷೆಗೆ ಹೊಸದೊಂದು ಉಪಾಯ

ಟಿ ಜಿ ಶ್ರೀನಿಧಿ

ಕ್ರೆಡಿಟ್ ಕಾರ್ಡು ಬಳಸುವುದು ಎಷ್ಟು ಅನುಕೂಲಕರವೋ ಅಷ್ಟೇ 'ರಿಸ್ಕಿ' ಎಂದು ಎಲ್ಲರೂ ಒಪ್ಪುತ್ತಾರೆ. ಅಂತರಜಾಲದಲ್ಲಿ ಬಳಸುವಾಗಲಂತೂ ಈ ರಿಸ್ಕು ಇನ್ನೂ ಹೆಚ್ಚು. ಕ್ರೆಡಿಟ್ ಕಾರ್ಡ್ ನಿಮ್ಮ ಬಳಿಯಲ್ಲೇ ಭದ್ರವಾಗಿರುವಾಗಲೂ ನಿಮ್ಮ ಕಾರ್ಡ್ ಸಂಖ್ಯೆ, ಮಾನ್ಯತೆಯ ಅವಧಿ ಹಾಗೂ ಕಾರ್ಡ್ ಪರಿಶೀಲಿಸುವ ಸಂಕೇತ(ಸಿವಿವಿ) - ಈ ಮೂರನ್ನೂ ಬಲ್ಲ ಯಾರು ಬೇಕಿದ್ದರೂ ನಿಮ್ಮ ಲೆಕ್ಕದಲ್ಲಿ ಶಾಪಿಂಗ್ ಮಾಡಿಬಿಡಬಹುದು!

ಈ ಎಲ್ಲ ಮಾಹಿತಿಯೂ ಕ್ರೆಡಿಟ್ ಕಾರ್ಡಿನ ಮೇಲೆಯೇ ಮುದ್ರಿತವಾಗಿರುವುದು ತಲೆನೋವಿನ ಸಂಗತಿ. ವಿವಿಧ ಸ್ಥಳಗಳಲ್ಲಿ ಕಾರ್ಡ್ ಬಳಸುವಾಗ ಈ ಮಾಹಿತಿಯನ್ನು ಯಾರು ಬೇಕಾದರೂ ಕದಿಯುವುದು ಸಾಧ್ಯ. ಹೀಗಾಗಿಯೇ ಅಂತರಜಾಲದಲ್ಲಿ ಕ್ರೆಡಿಟ್ ಕಾರ್ಡ್ ಅವ್ಯವಹಾರಗಳು ತೀರಾ ವ್ಯಾಪಕವಾಗಿ ನಡೆಯುತ್ತವೆ. ಒಂದು ಅಂದಾಜಿನ ಪ್ರಕಾರ ೨೦೦೮ರಲ್ಲಿ ನಡೆದ ಇಂತಹ ಅವ್ಯವಹಾರದ ಒಟ್ಟು ಮೊತ್ತ ೨೩೦೦ ಕೋಟಿ ರೂಪಾಯಿಗೂ ಹೆಚ್ಚು.

ಇಷ್ಟೆಲ್ಲ ದೊಡ್ಡ ಪ್ರಮಾಣದ ಅವ್ಯವಹಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ಸಾಗಿವೆ. ಕ್ರೆಡಿಟ್ ಕಾರ್ಡಿನ ಮೇಲೆ ಮುದ್ರಿತವಾಗಿರುವ ಮಾಹಿತಿಯ ಜೊತೆಗೆ ಇನ್ನೊಂದು ರಹಸ್ಯ ಸಂಕೇತವನ್ನೂ ಬಳಸುವಂತೆ ಮಾಡುವ ಮಾಸ್ಟರ್‌ಕಾರ್ಡ್ ಸೆಕ್ಯೂರ್‌ಕೋಡ್, ವೆರಿಫೈಡ್ ಬೈ ವೀಸಾ ಮುಂತಾದ ವ್ಯವಸ್ಥೆಗಳು ಬಳಕೆಗೆ ಬಂದಿರುವುದೂ ಇದೇ ಉದ್ದೇಶದಿಂದ.

ವಿಶ್ವವಿಖ್ಯಾತ ಕ್ರೆಡಿಟ್ ಕಾರ್ಡ್ ಸಂಸ್ಥೆ ವೀಸಾ ಈ ನಿಟ್ಟಿನಲ್ಲಿ ಇನ್ನೊಂದು ವಿಶಿಷ್ಟ ಪ್ರಯತ್ನ ಕೈಗೊಂಡಿದೆ. ಆಸ್ಟ್ರೇಲಿಯಾ ಮೂಲದ ಈಮ್ಯೂ ಟೆಕ್ನಾಲಜೀಸ್ ಎಂಬ ಸಂಸ್ಥೆ ಈ ಪ್ರಯತ್ನದಲ್ಲಿ ವೀಸಾ ಜೊತೆ ಕೈಗೂಡಿಸಿದೆ.

ಈಮ್ಯೂ ಸಂಸ್ಥೆ ತಯಾರಿಸಿರುವ ಹೊಸ ಬಗೆಯ ಕಾರ್ಡು ಈ ಪ್ರಯತ್ನದ ವೈಶಿಷ್ಟ್ಯ. ಕಾರ್ಡಿನಲ್ಲೇ ಅಳವಡಿಸಲಾಗಿರುವ ವಿಶೇಷ ವ್ಯವಸ್ಥೆ ಪ್ರತಿ ಬಾರಿ ಪಾವತಿ ಮಾಡಲು ಪ್ರಯತ್ನಿಸಿದಾಗಲೂ ಹೊಸತೊಂದು ಸಂಖ್ಯೆಯನ್ನು ಪ್ರದರ್ಶಿಸುತ್ತದೆ. ಈ ಸಂಖ್ಯೆಯನ್ನು ಉಪಯೋಗಿಸಿದಾಗ ಮಾತ್ರ ಅಂತರಜಾಲತಾಣಗಳು ಕಾರ್ಡ್ ಬಳಕೆಯನ್ನು ಮಾನ್ಯಮಾಡುತ್ತವೆ. ಹೀಗಾಗಿ ಕ್ರೆಡಿಟ್ ಕಾರ್ಡ್ ಮಾಹಿತಿ ಕದ್ದು ಬಳಸುವವರು ಈ ಕಾರ್ಡಿನ ದುರ್ಬಳಕೆ ಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ.

ಈ ವಿಶೇಷ ಸಂಖ್ಯೆಯನ್ನು ಪಡೆಯಲು ನಮ್ಮ ಪಿನ್ ಸಂಖ್ಯೆಯನ್ನು ದಾಖಲಿಸಬೇಕು. ಇದಕ್ಕಾಗಿ ಕಾರ್ಡಿನಲ್ಲಿ ಒಂದು ಪುಟ್ಟ ಕೀಲಿಮಣೆಯನ್ನೂ ಅಳವಡಿಸಲಾಗಿದೆ. ಬಹುರಾಷ್ಟ್ರೀಯ ಸಂಸ್ಥೆಯೊಂದರ ಐನೂರು ಉದ್ಯೋಗಿಗಳು ಸದ್ಯ ಈ ತಂತ್ರಜ್ಞಾನವನ್ನು ಪರೀಕ್ಷಾರ್ಥವಾಗಿ ಬಳಸುತ್ತಿದ್ದಾರೆ. ಅವರ ಪರೀಕ್ಷೆಗಳೆಲ್ಲ ಯಶಸ್ವಿಯಾಗಿ ಮುಗಿದ ಮೇಲೆ ಈ ಕಾರ್ಡುಗಳು ವಿಶ್ವದೆಲ್ಲೆಡೆ ಲಭ್ಯವಾಗಲಿವೆ.

ಪ್ರತಿಬಾರಿ ಬಳಸುವಾಗಲೂ ಪಿನ್ ಸಂಖ್ಯೆ ದಾಖಲಿಸಿ ಹೊಸ ಸಂಕೇತ ಪಡೆಯಬೇಕಾದ 'ಸೆಕ್ಯೂರ್ ಐಡಿ' ಕಾರ್ಡುಗಳು ಗಣಕ ಜಾಲಗಳಿಗೆ ಸುರಕ್ಷಿತ ಪ್ರವೇಶ ಕಲ್ಪಿಸಲು ಈಗಾಗಲೇ ಯಶಸ್ವಿಯಾಗಿ ಬಳಕೆಯಾಗುತ್ತಿವೆ. ಹೀಗಾಗಿ ಕ್ರೆಡಿಟ್ ಕಾರ್ಡುಗಳಲ್ಲೂ ಈ ಪರಿಕಲ್ಪನೆ ಯಶಸ್ಸು ಕಾಣುವ, ಹಾಗೂ ಕೋಟ್ಯಂತರ ರೂಪಾಯಿಗಳ ಅವ್ಯವಹಾರಕ್ಕೆ ತಡೆಹಾಕುವ ನಿರೀಕ್ಷೆಯಿದೆ.

ಜುಲೈ ೨೨, ೨೦೦೯ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

ಗುರುವಾರ, ಜುಲೈ 16, 2009

ಐ.ಸಿ.ಗೆ ಐವತ್ತು!

ಬೇಳೂರು ಸುದರ್ಶನ

ಇಂಟೆಗ್ರೇಟೆಡ್ ಸರ್ಕೂಟ್‌ಗೆ (ಐ ಸಿ) ೫೦ ವರ್ಷ ಆಯ್ತು. ಈಗ ಸಂಭ್ರಮಾಚರಣೆಯ ಸಮಯ!

ನಾನು, ನೀವು, ಜಗತ್ತಿನ ಕೋಟ್ಯಂತರ ಜನ ಬಳಸ್ತಾ ಇರೋ ಕಂಪ್ಯೂಟರುಗಳು ಕುಬ್ಜವಾಗಲು, ಮೊಬೈಲ್‌ಗಳ ಸರ್ಕೂಟ್‌ಗಳು ಮತ್ತಷ್ಟು ಚಪ್ಪಟೆಯಾಗಲು ಕಾರಣವಾದ ಈ ಇಂಟೆಗ್ರೇಟೆಡ್ ಸರ್ಕೂಟ್ ಪರಿಕಲ್ಪನೆ ಮೂಡಿ, ಅದು ಕಾರ್ಯಗತವಾಗಿ, ನಂಬಲಸಾಧ್ಯ ಪ್ರಕ್ರಿಯೆಗಳ ಮೂಲಕ ಕಣ್ಣಿಗೆ ಕಾಣಿಸುವ ಸಾಧನವಾದ ಕಥೆ ನಿಜಕ್ಕೂ ರೋಚಕ. ಥ್ರಿಲ್ಲರ್ ಸಿನೆಮಾ ಥರ!

ಈ ಐ ಸಿ ಸಂಶೋಧನೆಗೆ ಮೂಲ ಕಾರಣ ವಿಜ್ಞಾನರಂಗದಲ್ಲಿ ಅಷ್ಟ ದ್ರೋಹಿಗಳು ಎಂದೇ ಖ್ಯಾತರಾದ ಎಂಟು ವಿಜ್ಞಾನಿಗಳ ಬಂಡಾಯ!

೧೯೫೭ನೇ ಇಸವಿ. ಟ್ರಾನ್ಸಿಸ್ಟರ್‌ನ್ನು ಕಂಡು ಹಿಡಿದಿದ್ದಕ್ಕೆ ಹಿಂದಿನ ವರ್ಷವಷ್ಟೇ ನೋಬೆಲ್ ಪ್ರಶಸ್ತಿ ಬಂದಿತ್ತು. ಮೌಂಟನ್ ವ್ಯೂನಲ್ಲಿದ್ದದ ಶಾಕ್‌ಲೇ ಸೆಮಿಕಂಡಕ್ಟರ್ ಲ್ಯಾಬೋರೇಟರಿ ಸಂಸ್ಥೆಯಲ್ಲಿದ್ದ ಎಂಟು ವಿಜ್ಞಾನಿಗಳು ರಾಜೀನಾಮೆ ಬಿಸಾಕಿ ಹೊರಬಂದರು. ಅವರೇ ಜ್ಯೂಲಿಯಸ್ ಬ್ಲಾಂಕ್, ವಿಕ್ಟರ್ ಗ್ರಿನಿಶ್, ಜೀನ್ ಹೋಯೆರ್ನಿ, ಯೂಜೀನ್ ಕ್ಲೈನರ್, ಜೇ ಲಾಸ್ಟ್, ಗೋರ್ಡೋನ್ ಮೂರ್, ರಾಬರ್ಟ್ ನಾಯ್ಸ್ ಮತ್ತು ಶೆಲ್ಡನ್ ರಾಬರ್ಟ್ಸ್.

ವಿಲಿಯಂ ಶಾಕ್‌ಲೇ ಏನೂ ಕಡಿಮೆ ಆಸಾಮಿಯಲ್ಲ; ಟ್ರಾನ್ಸಿಸ್ಟರ್ನ ಅಧಿಕೃತ ಸ್ವರೂಪವನ್ನು ಕಂಡು ಹಿಡಿದಾತ! ಈ ಸಂಶೋಧನೆಗೆಂದೇ ಅವನಿಗೆ ಜಾನ್ ಬಾರ್ಡೀನ್ ಮತ್ತು ವಾಲ್ಟರ್ ಹೌಸರ್ ಬ್ರಿಟ್ಟನ್ ಜೊತೆಸೇರಿ ನೋಬೆಲ್ ಬಂದಿದ್ದು.

ಈ ಎಂಟು ವಿಜ್ಞಾನಿಗಳು ಇಂಥ ಪ್ರಚಂಡ ವಿಜ್ಞಾನಿಯ ಸಂಸ್ಥೆಗೇ ಸೆಡ್ಡು ಹೊಡೆದು ಫೇರ್‌ಚೈಲ್ಡ್ ಸೆಮಿಕಂಡಕ್ಟರ್ ಕಾರ್ಪೋರೇಶನ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಶಾಕ್‌ಲೇಯ ವಿಚಿತ್ರ ವರ್ತನೆಗಳೇ ಇವರ ಈ ಬಂಡಾಯಕ್ಕೆ ಕಾರಣ ಎಂದು ಇತಿಹಾಸ ಹೇಳುತ್ತದೆ.

ಏನೇ ಇರಲಿ, ಫೇರ್‌ಚೈಲ್ಡ್ ಸಂಸ್ಥೆಯಲ್ಲಿ ಸಂಶೋಧನೆಗಳು ಚಿಗುರಿದವು. ಸಿಲಿಕಾನ್ ಸರ್ಕೂಟ್‌ಗಳೇನೋ ಆಗ ಚಾಲ್ತಿಯಲ್ಲಿದ್ದವು. ಆಗ ಜೀನ್ ಹೋಯೆರ್ನಿಯನ್ನು ಉಳಿದವರು ಅಷ್ಟಾಗಿ ಪರಿಗಣಿಸಿರಲಿಲ್ಲ. ಆತ ಎಷ್ಟಂದ್ರೂ ಥಿಯರಿ ವಿಜ್ಞಾನಿ. ಪ್ರಾಯೋಗಿಕವಾಗಿ ಅಂಥದ್ದೇನನ್ನೂ ಮಾಡುತ್ತಿರಲಿಲ್ಲ. ಆದರೆ ಆತ ಒಂದು ಸಲ ಈ ಟ್ರಾನ್ಸಿಸ್ಟರ್‌ಗಳಲ್ಲಿ ಬಳಸುತ್ತಿದ್ದ ಸಿಲಿಕಾನ್ ಆಕ್ಸೈಡ್‌ನ್ನು ಒರೆಸಿಹಾಕದೇ ಹಾಗೇ ಉಳಿಸಿಕೊಂಡರೆ ಹ್ಯಾಗಿರುತ್ತೆ ಎಂದು ಮೂಸೆಯಲ್ಲಿ ಕಷ್ಟಪಡುತ್ತಿದ್ದ ಇತರೆ ವಿಜ್ಞಾನಿಗಳನ್ನು ಕೇಳಿದ್ದ. ಛೆ, ಛೆ, ಎಲ್ಲಾದ್ರೂ ಉಂಟೆ, ಅದನ್ನು ಕ್ಲೀನ್ ಮಾಡ್ಲೇಬೇಕು ಎಂದು ಅವನ ಸ್ನೇಹಿತರು ಹೇಳಿದ್ದರು. ಈ ಥರ ಸರ್ಕೂಟ್‌ಗಳನ್ನು ಪದರ ಪದರವಾಗಿ ಮಾಡೋದರ ಬಗ್ಗೆ ಪ್ರಬಂಧ ಬರೆದ ಹೋಯೆರ್ನಿ ಇದನ್ನು ಪ್ಲೇನಾರ್ ಪ್ರಕ್ರಿಯೆ ಅಂತ ಕರೆದ.

ಹೀಗೇ ಒಂದೂವರೆ ವರ್ಷ ಕಳೆದ ಮೇಲೆ ಒಂದು ದಿನ ಬಾಬ್ ನಾಯ್ಸ್‌ಗೆ ಹೋಯೆರ್ನಿಯ ಸಿದ್ಧಾಂತವನ್ನು ಕಾರ್ಯಗತ ಮಾಡುವ ಉಪಾಯ ಹೊಳೆದೇ ಬಿಟ್ಟಿತು. ಆಕ್ಸೈಡನ್ನು ಹಾಗೇ ಬಿಟ್ಟರೆ ವಿವಿಧ ಟ್ರಾನ್ಸಿಸ್ಟರ್‌ಗಳ ನಡುವೆ ಅಂತರ್ ಸಂಪರ್ಕ ಉಳಿದುಕೊಳ್ಳುತ್ತೆ; ಹಾಗೇ ಈ ಟ್ರಾನ್ಸಿಸ್ಟರ್‌ಗಳನ್ನು ಪ್ರತ್ಯೇಕವಾಗಿಯೂ ಇಟ್ಟುಕೊಳ್ಳಬಹುದು ಅನ್ನೋ ಸೂತ್ರವನ್ನು ರಾಬರ್ಟ್ ನಾಯ್ಸ್ ಕಾರ್ಯಗತಗೊಳಿಸಿದ. ಹೀಗೆ ಪದರ ಪದರವಾಗಿ ಟ್ರಾನ್ಸಿಸ್ಟರ್‌ಗಳನ್ನು ಒಳಗೊಂಡ, ಏಕೀಕೃತ ಸರ್ಕೂಟ್ ಜನ್ಮ ತಾಳಿತು. ಅದೇ ಇಂಟೆಗ್ರೇಟೆಡ್ ಸರ್ಕೂಟ್!

ಅದಕ್ಕೇ ನಾಯ್ಸ್ ಮತ್ತು ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್‌ನಲ್ಲಿದ್ದ ಜಾಕ್ ಎಸ್ ಕಿಲ್ಬಿ (ಈತನಿಗೆ ೨೦೦೦ದಲ್ಲಿ ನೋಬೆಲ್ ಬಂತು) ಇಬ್ಬರನ್ನೂ ಇಂಟೆಗ್ರೇಟೆಡ್ ಸರ್ಕೂಟ್‌ನ ಜಂಟಿ ಸಂಶೋಧಕರು ಎಂದು ಕರೆಯುತ್ತಾರೆ. ಆದರೆ ಇದರಲ್ಲಿ ಹೋಯೆರ್ನಿನ ಪ್ಲೇನಾರ್ ಪ್ರೋಸೆಸ್ ಸಿದ್ಧಾಂತವೇ ಪ್ರಮುಖ ಪಾತ್ರ ವಹಿಸಿತು ಅನ್ನೋದನ್ನ ಮರೆಯಕ್ಕಾಗಲ್ಲ ಅಲ್ವೆ?

ಈ ಎಂಟು ಮಂದಿ ಜಾಣರಲ್ಲಿ ಗೋರ್ಡೋನ್ ಮೂರ್ ಮತ್ತು ರಾಬರ್ಟ್ ನಾಯ್ಸ್ ಸೇರಿಕೊಂಡು ಸ್ಥಾಪಿಸಿದ ಸಂಸ್ಥೆಯೇ ಇಂಟೆಲ್. ಇವತ್ತು ಜಗತ್ತಿನ ಅಗ್ರಮಾನ್ಯ ಐಸಿ ತಯಾರಿಕಾ ಸಂಸ್ಥೆ. ಅಷ್ಟೇ ಅಲ್ಲ, ಐಸಿಗಳ ಬಗ್ಗೆ ಮೂರ್‍ಸ್ ಲಾ ಅಂತ ಒಂದು ಸಿದ್ಧಾಂತ ಇದೆಯಲ್ಲ, ಅದನ್ನು ಮಂಡಿಸಿದವನೇ ಈ ರಾಬರ್ಟ್ ಮೂರ್.

ಹಾಗೆ ನೋಡಿದರೆ, ಸಿಲಿಕಾನ್ ಕಣಿವೆ ಅಂತ ಕರೀತಾರಲ್ಲ, ಈ ಕಣಿವೆಗೆ ಈ ಹೆಸರು ಬಂದಿದ್ದೇ ಈ ವಿಜ್ಞಾನಿಗಳ ಇಂಥ ಇತಿಹಾಸಪ್ರಸಿದ್ಧ ಗಲಾಟೆಯಿಂದ!

ಇಂಟೆಗ್ರೇಟೆಡ್ ಸರ್ಕೂಟ್‌ನ ಸಂಶೋಧನೆ ಮನುಕುಲದ ಅತ್ಯಂತ ಮುಖ್ಯ ಕ್ಷಣಗಳಲ್ಲೊಂದು ಅಂತ ನಮ್ಮ ಮಹಾನ್ ವಿಜ್ಞಾನ ಲೇಖಕ ಐಸಾಕ್ ಅಸಿಮೋವ್ ಹೇಳಿದ್ದಾನೆ. ಅದಕ್ಕೇ ಈ ವರ್ಷ ವಿಶ್ವದ ಎಲೆಕ್ಟ್ರಾನಿಕ್ ರಂಗದ ಸಂಸ್ಥೆ ಐ ಇ ಇ ಇ ಯಿಂದ ಜೀನ್ ಹೋಯೆರ್ನಿ ಮತ್ತು ರಾಬರ್ಟ್ ನಾಯ್ಸ್ ಇಬ್ಬರನ್ನೂ ಗೌರವಿಸಿದೆ. ಸಿದ್ಧಾಂತ ಬರೆದಾತ ಹೋಯೆರ್ನಿ; ಅದನ್ನು ವಾಸ್ತವರೂಪಕ್ಕೆ ತಂದಾತ ನಾಯ್ಸ್. ೧೯೫೯ರ ಜನವರಿ ೨೩ರಂದು ಹೋಯೆರ್ನಿ ಬರೆದ ದಿನಚರಿ ಟಿಪ್ಪಣಿ ಹೀಗಿದೆ:
"In many applications now it would be desirable to make multiple devices on a single piece of silicon in order to be able to make interconnections between devices as part of the manufacturing process, and thus reduce size, weight, etc., as well as cost per active element.”
ಈಗ, ಐವತ್ತು ವರ್ಷಗಳ ನಂತರ, ಐ ಸಿ ತಯಾರಿಕೆ ಅನ್ನೋದು ೨೦೦ ಬಿಲಿಯ ಡಾಲರ್‌ಗಳ ವ್ಯವಹಾರ! ಇಂಥ ಅತಿಬೇಡಿಕೆಯ ಸಾಧನವನ್ನು ರೂಪಿಸಿದ ಈ ಇಬ್ಬರು ಸಂಶೋಧಕರ ಬಗ್ಗೆ ಐ ಇ ಇ ಇ ಹೀಗೆ ಶ್ಲಾಘನಾ ಪತ್ರ ನೀಡಿದೆ.
SEMICONDUCTOR PLANAR PROCESS AND INTEGRATED CIRCUIT, 1959

The 1959 invention of the Planar Process by Jean A. Hoerni and the Integrated Circuit (IC) based on planar technology by Robert N. Noyce catapulted the semiconductor industry into the silicon IC era. This pair of pioneering inventions led to the present IC industry, which today supplies a wide and growing variety of advanced semiconductor products used throughout the world.

May 2009, INSTITUTE OF ELECTRICAL AND ELECTRONICS ENGINEERS
ವಿಕ್ಟರ್ ಗ್ರೀನಿಶ್ ಇಂಟ್ರೊಡಕ್ಷನ್ ಟಿ ಇಂಟೆಗ್ರೇಟೆಡ್ ಸರ್ಕೂಟ್ಸ್ ಅನ್ನೋ ಪುಸ್ತಕ ಬರೆದಿದ್ದಾನೆ. ಯೂಜೀನ್ ಕ್ಲೈನರ್ (೧೯೨೩ ೨೦೦೩) ನೇ ಈ ಎಂಟು ವಿಜ್ಞಾನಿಗಳ ಬಂಡಾಯದ ನಾಯಕ. ಈತ ಮುಂದೆ ಇಂಟೆಲ್‌ನಲ್ಲೂ ಬಂಡವಾಳ ಹೂಡುತ್ತಾನೆ. ೧೯೭೨ರಲ್ಲಿ ಈತ ಕ್ಲೈನರ್ ಪರ್ಕಿನ್ಸ್ ಎಂಬ ವೆಂಚರ್ ಕ್ಯಾಪಿಟಲ್ ಸಂಸ್ಥೆಯನ್ನು ಹುಟ್ಟುಹಾಕುತ್ತಾನೆ. ಜ್ಯೂಲಿಯಸ್ ಬ್ಲಾಂಕ್ ೧೯೭೮ರಲ್ಲಿ ಕ್ಸೈಕಾರ್ ಎಂಬ ಸಂಸ್ಥೆಯನ್ನು ಸ್ಥಾಪಿಸುತ್ತಾನೆ. ಜೇ ಲಾಸ್ಟ್ ಕಲೆಯಲ್ಲೂ ಅಸಕ್ತಿ ಬೆಳೆಸಿಕೊಂಡವನು. ಆತ ಹಲವು ಕಲಾ ಪುಸ್ತಕಗಳನ್ನು ಬರೆದಿದ್ದಾನೆ. ಆರ್ಕಿಯಾಲಾಜಿಕಲ್ ಕನ್ಸರ್ವೆನ್ಸಿ ಎಂಬ ಸಂಸ್ಥೆಯ ಮೂಲಕ ಅಮೆರಿಕಾದ ೧೫೦ಕ್ಕೂ ಹೆಚ್ಚು ಐತಿಹಾಸಿಕ ಸ್ಥಳಗಳನ್ನು ಸಂರಕ್ಷಿಸುವಲ್ಲಿ ನೆರವಾಗಿದ್ದಾನೆ. ರಾಬರ್ಟ್ ನಾಯ್ಸ್‌ಗೆ ಸಿಲಿಕಾನ್ ಕಣಿವೆಯ ಮೇಯರ್ ಅನ್ನೋ ಬಿರುದೇ ಇದೆ! ಶೆಲ್ಡನ್ ರಾಬರ್ಟ್ಸ್ ಮುಂದೆ ಹೋಯೆರ್ನಿ ಮತ್ತು ಜೇ ಲಾಸ್ಟ್ ಜೊತೆಗೂಡಿ ಟೆಲೆಡೈನ್ ಸಂಸ್ಥೆಯನ್ನು ಸ್ಥಾಪಿಸುತ್ತಾನೆ. ಗೋರ್ಡೋನ್ ಮೂರ್‌ಗೆ ಮಾರ್ಕೋನಿ ಸೊಸೈಟಿಯ ಜೀವಿತಾವಧಿ ಸಾಧನೆ ಪ್ರಶಸ್ತಿ ಬರುತ್ತೆ.

ಅಂದ್ರೆ ಈ ಎಂಟು ಮಂದಿಯಲ್ಲಿ ಒಬ್ಬರಿಗೂ ನೋಬೆಲ್ ಪ್ರಶಸ್ತಿ ಬರಲಿಲ್ಲ! ಪರವಾಗಿಲ್ಲ ಬಿಡಿ. ಸಿಲಿಕಾನ್ ಕಣಿವೆಯನ್ನೇ ಈಗ ಎಬ್ಬಿಸಿದ್ದಾರಲ್ಲ..... ಅದಕ್ಕಿಂತ ಇನ್ನೇನು ಸಾಧನೆ ಬೇಕು ಹೇಳಿ?
ಹೆಚ್ಚಿನ ಮಾಹಿತಿಗೆ:
ಹೋಯೆರ್ನಿಯ ಸಿದ್ಧಾಂತದ ವೈಜ್ಞಾನಿಕ ವಿವರಣೆ ಇಲ್ಲಿದೆ.
ಅಷ್ಟ ದ್ರೋಹಿಗಳ ಕಥೆಯನ್ನು ಗೋರ್ಡೋನ್ ಮೂರ್ ಇಲ್ಲಿ ಹೀಗೆ ಬಣ್ಣಿಸಿದ್ದಾರೆ.
ಮೂರ್‍ಸ್ ಲಾ ಬಗ್ಗೆ ತಿಳ್ಕೋಬೇಕು ಅಂದ್ರೆ ಇಲ್ಲಿ ಕ್ಲಿಕ್ ಮಾಡಿ.
ಪ್ಲೇನಾರ್ ಪ್ರೋಸೆಸ್ ಬಗ್ಗೆ ಇನ್ನಷ್ಟು ತಿಳ್ಕೊಳ್ಳೋದಕ್ಕೆ ಇಲ್ಲಿಗೆ ಬನ್ನಿ.
ಮೇಲಿನ ಚಿತ್ರದ ಮೂಲ ಇದು.

ಗುರುವಾರ, ಜುಲೈ 9, 2009

ವಿಜ್ಞಾನ ಸಾಹಿತ್ಯ ಪಿತಾಮಹ - ಶ್ರೀ ಬೆಳ್ಳಾವೆ ವೆಂಕಟನಾರಣಪ್ಪ

ಸನ್ಮಾನ್ಯ ಶ್ರೀ ಬೆಳ್ಳಾವೆ ವೆಂಕಟನಾರಣಪ್ಪನವರು (ಫೆಬ್ರವರಿ ೧೮೭೨ - ಆಗಸ್ಟ್ ೧೯೪೩) ಕನ್ನಡದ ಮೊದಲ ವಿಜ್ಞಾನ ಲೇಖಕರಲ್ಲೊಬ್ಬರು, ಕನ್ನಡದಲ್ಲಿ ವಿಜ್ಞಾನವನ್ನು ಪರಿಣಾಮಕಾರಿಯಾಗಿ ವಿವರಿಸಲು ಸಾಧ್ಯ ಎಂದು ತೋರಿಸಿಕೊಟ್ಟವರು.

ಬೆ.ವೆಂ. ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಭೌತಶಾಸ್ತ್ರವಷ್ಟೆ ಅಲ್ಲದೆ ಜೀವಶಾಸ್ತ್ರದಲ್ಲಿ ಕೂಡ ಅವರಿಗೆ ಪ್ರಾವೀಣ್ಯವಿತ್ತು. ೧೯೩೦ರ ದಶಕದಲ್ಲಿ ಪ್ರಕಟವಾದ ಅವರ 'ಜೀವವಿಜ್ಞಾನ' ಕೃತಿ (ಮೈಸೂರು ವಿವಿ ಪ್ರಕಟಣೆ) ಕನ್ನಡ ವಿಜ್ಞಾನ ಸಾಹಿತ್ಯದ ಇತಿಹಾಸದಲ್ಲೇ ಅತ್ಯಂತ ಗಮನಾರ್ಹ ಸ್ಥಾನ ಪಡೆದುಕೊಂಡಿದೆ.

ಕನ್ನಡ ಹಾಗೂ ವಿಜ್ಞಾನಗಳೆರಡರ ಬಗೆಗೂ ಅಪಾರ ಕಳಕಳಿ ಹೊಂದಿದ್ದ ಅವರು ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದ ಅಧ್ಯಕ್ಷರಾಗಿ, ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲೊಬ್ಬರಾಗಿ ಸೇವೆಸಲ್ಲಿಸಿದ್ದರು. 'ಕರ್ಣಾಟಕ ವಿಜ್ಞಾನ ಪ್ರಚಾರಿಣೀ ಸಮಿತಿ'ಯ ಮೂಲಕ ವಿಜ್ಞಾನ ಎಂಬ ಮಾಸಪತ್ರಿಕೆ ನಡೆಸುತ್ತಿದ್ದರು; ಕನ್ನಡದಲ್ಲಿ ವಿಜ್ಞಾನ ಪ್ರಚಾರಕ್ಕೆ ಮಾರ್ಗದರ್ಶಕರಾಗಿದ್ದರು.

ಬೆ.ವೆಂ.ರವರ ಚಿತ್ರ ನನಗೆ ಸಿಕ್ಕಿದ್ದು ಮತ್ತೊಬ್ಬ ಅದ್ವಿತೀಯ ವಿಜ್ಞಾನ ಬರಹಗಾರ ಡಾ. ಬಿ.ಜಿ.ಎಲ್.ಸ್ವಾಮಿಯವರ 'ಪಂಚಕಲಶ ಗೋಪುರ' ಕೃತಿಯಲ್ಲಿ. ಈ ಕೃತಿಯಲ್ಲಿ ಬೆ.ವೆಂ.ರವರ ಆತ್ಮೀಯ ಪರಿಚಯ ಕೂಡ ಇದೆ.

ಇದೊಂದು ಅಪೂರ್ಣ ಬರಹ. ಬೆ.ವೆಂ.ರವರ ಬಗ್ಗೆ, ಅವರ ಕೃತಿಗಳ ಬಗ್ಗೆ ನಿಮ್ಮಲ್ಲಿರುವ ಮಾಹಿತಿ ಹಂಚಿಕೊಳ್ಳಿ!
badge