ಗುರುವಾರ, ಜನವರಿ 14, 2010

ಸಂಕ್ರಾಂತಿ ಮತ್ತು ಸೂರ್ಯಗ್ರಹಣ

ಟಿ ಜಿ ಶ್ರೀನಿಧಿ

ಸಮೃದ್ಧಿಯ ಸಂಕೇತವಾದ ಸಂಕ್ರಾಂತಿ ಹಬ್ಬವನ್ನು ಜನವರಿ ೧೪ರಂದು ಭಾರತದೆಲ್ಲೆಡೆ ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡುವ ಹಬ್ಬ ಈ ಸಂಕ್ರಾಂತಿ. ಇದು ಬೆಳೆ ಕಟಾವಿನ ಕಾಲವೂ ಹೌದು.

ಪ್ರತಿ ವರ್ಷ ಡಿಸೆಂಬರ್ ೨೧-೨೨ರ ವೇಳೆಗೆ ಭೂಮಿಯ ಮಕರಸಂಕ್ರಾಂತಿ ವೃತ್ತದ ಮೇಲೆ ಸೂರ್ಯ ನೇರವಾಗಿ ಪ್ರಕಾಶಿಸಲು ಪ್ರಾರಂಭಿಸುತ್ತಾನೆ. ಸೂರ್ಯನ ಉತ್ತರದಿಕ್ಕಿನ ಪ್ರಯಾಣದ ಆರಂಭವನ್ನು ಸೂಚಿಸುವ, ಹಗಲಿನ ಸಮಯ ಹೆಚ್ಚುತ್ತಾ ಹೋಗುವ ಈ ಕಾಲವೇ ಉತ್ತರಾಯಣ. ಹಿಂದೆ ಉತ್ತರಾಯಣ ಸಂಕ್ರಾಂತಿ ಹಬ್ಬದ ದಿನವೇ ಪ್ರಾರಂಭವಾಗುತ್ತಿತ್ತು. ಆದರೆ ಸಮಯ ಸರಿದಂತೆ ಭೂಮಿಯ ಚಲನೆಯಲ್ಲಿ ಉಂಟಾದ ಬದಲಾವಣೆಗಳಿಂದ ಉತ್ತರಾಯಣ ಡಿಸೆಂಬರ್‌ನಲ್ಲೇ ಪ್ರಾರಂಭವಾಗುತ್ತದೆ. ಆದರೂ ನಾವು ಮಾತ್ರ ಸಂಕ್ರಾಂತಿಯನ್ನು ಜನವರಿ ೧೪ರಂದೇ ಆಚರಿಸುತ್ತೇವೆ.

ಸಂಕ್ರಾಂತಿಯ ಮರುದಿನ ಕಂಕಣ ಸೂರ್ಯಗ್ರಹಣ ಈ ವರ್ಷದ ವಿಶೇಷ.

ಭೂಮಿಗೂ ಸೂರ್ಯನಿಗೂ ನಡುವೆ ಚಂದ್ರ ಅಡ್ಡ ಬಂದಾಗ ಸೂರ್ಯಗ್ರಹಣ ಆಗುತ್ತದೆ ಎಂದು ನಮಗೆಲ್ಲ ಗೊತ್ತು. ಗ್ರಹಣದ ಸಂದರ್ಭದಲ್ಲಿ ಚಂದ್ರ ಸೂರ್ಯನನ್ನು ಪೂರ್ತಿಯಾಗಿ ಮರೆಮಾಡಿದರೆ ಆಗ ಅದು ಪೂರ್ಣ ಸೂರ್ಯಗ್ರಹಣ ಆಗುತ್ತದೆ. ಆದರೆ ಈ ಬಾರಿ ಹಾಗಲ್ಲ. ಚಂದ್ರ ಸೂರ್ಯನಿಗೆ ಅಡ್ಡವಾಗಿ ಬಂದರೂ ಸೂರ್ಯ ಸಂಪೂರ್ಣವಾಗಿ ಮರೆಯಾಗುವುದಿಲ್ಲ. ಸೂರ್ಯನ ಬಿಂಬ ಬಳೆಯ ಹಾಗೆ ಬೆಳಗುತ್ತದೆ. ಹಾಗಾಗಿಯೇ ಇದು ಕಂಕಣ ಗ್ರಹಣ.

ಗ್ರಹಣ ಒಂದು ನೈಸರ್ಗಿಕ ಘಟನೆ, ಅದನ್ನು ನೋಡಿ ಆನಂದಿಸಬೇಕೇ ಹೊರತು ಹೆದರಿ ಮನೆಯೊಳಗೆ ಅವಿತಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಆದರೆ ನೆನಪಿಡಿ, ಸೂರ್ಯನನ್ನು ಬರಿಗಣ್ಣಿನಿಂದ ನೋಡುವುದು ಅಪಾಯಕಾರಿ. ಗ್ರಹಣ ನೋಡಲೆಂದೇ ತಯಾರಿಸಿರುವ ವಿಶೇಷ ಕನ್ನಡಕ ಅಥವಾ ವಿಶಿಷ್ಟ ಕ್ಯಾಮೆರಾಗಳನ್ನು ಬಳಸಿ ಮಾತ್ರವೇ ಸೂರ್ಯಗ್ರಹಣ ನೋಡಬಹುದು.

ಚಿಣ್ಣರ ಚೇತನ ಗೋಡೆ ಪತ್ರಿಕೆಯ ಜನವರಿ ೨೦೧೦ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಶನಿವಾರ, ಜನವರಿ 2, 2010

ಬಾನಂಗಳದತ್ತ ಕಣ್ಣುಗಳು

ದೂರದರ್ಶಕದ ಆವಿಷ್ಕಾರವಾಗಿ ನಾನ್ನೂರು ವರ್ಷಗಳು ಪೂರ್ಣವಾದ ಸಂದರ್ಭದಲ್ಲಿ ಯುರೋಪಿಯನ್ ಸ್ಪೇಸ್ ಏಜೆನ್ಸಿ, ಇಂಟರ್‌ನ್ಯಾಷನಲ್ ಆಸ್ಟ್ರನಾಮಿಕಲ್ ಯೂನಿಯನ್ ಹಾಗೂ ಯುರೋಪಿಯನ್ ಸದರ್ನ್ ಅಬ್ಸರ್ವೇಟರಿಗಳ ಸಹಭಾಗಿತ್ವದಲ್ಲಿ 'Eyes on the Skies' ಎಂಬ ಚಲನಚಿತ್ರವನ್ನು ಸಿದ್ಧಪಡಿಸಲಾಗಿದೆ. ಒಟ್ಟು ಮೂವತ್ತಮೂರು ಭಾಷೆಗಳ ಸಬ್-ಟೈಟಲ್ ಹೊಂದಿರುವ ಇದು ಅಂತರರಾಷ್ಟ್ರೀಯ ಖಗೋಳವಿಜ್ಞಾನ ವರ್ಷದ ಅಧಿಕೃತ ಚಲನಚಿತ್ರವೂ ಹೌದು.

ಕನ್ನಡ ಸಬ್‌ಟೈಟಲ್ ಹೊಂದಿರುವ ಈ ಚಲನಚಿತ್ರದ ಡಿವಿಡಿ ಕಳೆದ ನವೆಂಬರ್‌ನಿಂದ  ಬೆಂಗಳೂರಿನ ಜವಾಹರ್‌ಲಾಲ್ ಪ್ಲಾನೆಟೇರಿಯಂ ಮೂಲಕ ಲಭ್ಯವಿದೆ. ’ಬಾನಂಗಳದತ್ತ ಕಣ್ಣುಗಳು’ ಎಂಬ ಹೆಸರಿನ ಈ ಚಲನಚಿತ್ರ ದೂರದರ್ಶಕದ ಇತಿಹಾಸ ಹಾಗೂ ಅದು ಬೆಳೆದುಬಂದ ದಾರಿಯನ್ನು ವಿವರಿಸುತ್ತದೆ. ಏಳು ಅಧ್ಯಾಯಗಳಿರುವ, ಒಟ್ಟು ಅರುವತ್ತು ನಿಮಿಷದ ಈ ಚಲನಚಿತ್ರದ ಬಗೆಗಿನ ಹೆಚ್ಚಿನ ವಿವರಗಳಿಗೆ ತಾರಾಲಯದ ಜಾಲತಾಣ ನೋಡಿ.  'Eyes on the Skies'ನ ಜಾಲತಾಣ ಇಲ್ಲಿದೆ.

ಶುಕ್ರವಾರ, ಜನವರಿ 1, 2010

ಬಾಹ್ಯಾಕಾಶಕ್ಕೆ ಟೂರು!

ಟಿ ಜಿ ಶ್ರೀನಿಧಿ
 

ಬಾಹ್ಯಾಕಾಶಕ್ಕೆ ಪ್ರವಾಸ  ಹೋಗುವ ಆಲೋಚನೆ ಹೊಸದೇನಲ್ಲ. ಹಿಂದೆ  ಬರಿಯ ಕತೆ-ಕಾದಂಬರಿಗಳಿಗಷ್ಟೇ ಸೀಮಿತವಾಗಿದ್ದ ಈ ಕನಸು ನನಸಾಗಿಯೇ ಹತ್ತು ವರ್ಷಗಳ  ಮೇಲಾಗಿದೆ. ಆದರೆ ಈ ಪ್ರವಾಸದ ವೆಚ್ಚ ಈವರೆಗೂ ಸುಮಾರು ನೂರು ಕೋಟಿ ರೂಪಾಯಿಗಳ ಆಸುಪಾಸಿನಲ್ಲಿರುವುದರಿಂದ ನಮ್ಮಂಥ ಸಾಮಾನ್ಯರು ಬಾಹ್ಯಾಕಾಶ ಪ್ರವಾಸದ ಬಗ್ಗೆ ಯೋಚಿಸುವುದು ಮಾತ್ರ ಸಾಧ್ಯವಾಗಿರಲಿಲ್ಲ.

ಪ್ರಸ್ತುತ ಕೋಟಿಗಳಲ್ಲಿರುವ ಟಿಕೇಟಿನ ಬೆಲೆ ಕನಿಷ್ಠಪಕ್ಷ ಲಕ್ಷಗಳಿಗಾದರೂ ಇಳಿದರೆ  ಮಾತ್ರ ಜನಸಾಮಾನ್ಯರು ಬಾಹ್ಯಾಕಾಶಕ್ಕೆ ಹೋಗಿಬರುವುದು ಸಾಧ್ಯ ಎಂದು ಅರಿತುಕೊಂಡ ಅನೇಕ ಸಂಸ್ಥೆಗಳು ಈ ನಿಟ್ಟಿನಲ್ಲಿ ಬಹಳವರ್ಷಗಳಿಂದ ಕೆಲಸಮಾಡುತ್ತಿವೆ.

ಇಂಥ ಸಂಸ್ಥೆಗಳಲ್ಲೊಂದು ಅಮೆರಿಕಾದ ಸ್ಕೇಲ್ಡ್ ಕಾಂಪೋಸಿಟ್ಸ್. ಅಂತರಿಕ್ಷಯಾತ್ರೆಯನ್ನು  ಸುಲಭವಾಗಿಸುವ ನಿಟ್ಟಿನಲ್ಲಿ ಅತ್ಯುತ್ತಮ  ಪ್ರಯತ್ನಕ್ಕಾಗಿ ಮೀಸಲಾಗಿದ್ದ ಒಂದು ಕೋಟಿ ಡಾಲರ್  ಮೊತ್ತದ ’ಎಕ್ಸ್ ಪ್ರೈಜ್’ ಬಹುಮಾನ ಗೆದ್ದ ಸಂಸ್ಥೆ ಇದು. ಈ ಸಂಸ್ಥೆ ತಯಾರಿಸಿದ ’ಸ್ಪೇಸ್ ಶಿಪ್ ಒನ್’ ಎಂಬ ಅಂತರಿಕ್ಷವಾಹನ ೨೦೦೪ರಲ್ಲಿ ಯಶಸ್ವಿ ಯಾನ ಕೈಗೊಂಡು ಭೂಮಿಯ ಮೇಲಿಂದ ನೂರಾ ಹತ್ತು ಕಿಲೋಮೀಟರುಗಳಷ್ಟು ಎತ್ತರದವರೆಗೆ ಹೋಗಿಬಂದಿತ್ತು.

ಅಂತರಿಕ್ಷ ಪ್ರವಾಸದ  ಕಮರ್ಷಿಯಲ್ ಸಾಧ್ಯಾಸಾಧ್ಯತೆಗಳ ಬಗ್ಗೆ ಗಂಭೀರ ಚಿಂತನೆ ನಡೆದದ್ದೇ ಆಗ. ಎಲ್ಲ ಸರಿಯಾಗಿ ನಡೆದರೆ ಇದೆಷ್ಟು ದೊಡ್ಡ ಪ್ರಮಾಣದ ಮಾರುಕಟ್ಟೆಯಾಗಬಲ್ಲದು ಎಂದು ಅರಿತುಕೊಂಡ ವರ್ಜಿನ್ ಸಂಸ್ಥೆ ತಕ್ಷಣವೇ ಸ್ಕೇಲ್ಡ್ ಕಾಂಪೋಸಿಟ್ಸ್ ಜೊತೆಗೆ ಕೈಗೂಡಿಸಿತು; ವರ್ಜಿನ್ ಗೆಲಾಕ್ಟಿಕ್ ಎಂಬ ಸಂಸ್ಥೆಯನ್ನೂ ಹುಟ್ಟುಹಾಕಿತು.

ಈ ಸಹಭಾಗಿತ್ವದ ಫಲವಾಗಿ ಸ್ಪೇಸ್ ಶಿಪ್ ಒನ್‌ನ ಸುಧಾರಿತ ಆವೃತ್ತಿ  ’ವಿಎಸ್‌ಎಸ್ ಎಂಟರ್‌ಪ್ರೈಸ್’ ಎಂಬ ಹೆಸರಿನಲ್ಲಿ ಇದೀಗ  ಸಿದ್ಧವಾಗಿದೆ. ಈ ಅಂತರಿಕ್ಷವಾಹನ ಬಳಸಿ ಆಸಕ್ತರಿಗೆ  ಅಂತರಿಕ್ಷಕ್ಕೆ ಹೋಗಿಬರುವ ಅವಕಾಶ ಕಲ್ಪಿಸುವುದು  ವರ್ಜಿನ್ ಸಂಸ್ಥೆಯ ಮುಖ್ಯಸ್ಥ ರಿಚರ್ಡ್  ಬ್ರಾನ್ಸನ್ ಗುರಿ.

ಮುಂದಿನ ಹದಿನೆಂಟು ತಿಂಗಳುಗಳ ಕಾಲ ವಿವಿಧ ಪರೀಕ್ಷೆಗಳಿಗೆ ಒಳಪಡಲಿರುವ ’ವಿಎಸ್‌ಎಸ್ ಎಂಟರ್‌ಪ್ರೈಸ್’ ಆನಂತರ ತನ್ನ ವಾಣಿಜ್ಯ ಸೇವೆ ಪ್ರಾರಂಭಿಸಲಿದೆ. ಅಷ್ಟು ಹೊತ್ತಿಗೆ ಅದರ ಹಾರಾಟಕ್ಕೆ ಬೇಕಾದ ಸ್ಪೇಸ್‌ಪೋರ್ಟ್ ಕೂಡ ಸಿದ್ಧವಾಗಲಿದೆ.

ಈ ಅಂತರಿಕ್ಷ ವಾಹನದಲ್ಲಿ  ಆರು ಜನ ಪ್ರವಾಸಿಗರ ಜೊತೆಗೆ ಇಬ್ಬರು  ಸಿಬ್ಬಂದಿ ಪ್ರಯಾಣಿಸಬಹುದು. ಸುಮಾರು ಹದಿನೈದು ಕಿಲೋಮೀಟರ್ ಎತ್ತರದವರೆಗೆ ’ವೈಟ್ ನೈಟ್’ ಎಂಬ ಮಾತೃನೌಕೆಯ ಬೆನ್ನೇರಿ ಸವಾರಿಮಾಡುವ ಈ ಅಂತರಿಕ್ಷವಾಹನ ಅಲ್ಲಿ ಮಾತೃನೌಕೆಯಿಂದ ಬೇರ್ಪಟ್ಟು ಗಂಟೆಗೆ ನಾಲ್ಕುಸಾವಿರ ಕಿಲೋಮೀಟರ್ ವೇಗದಲ್ಲಿ ಮೇಲ್ಮುಖವಾಗಿ ಚಲಿಸಲಿದೆ; ಕೇವಲ ಒಂದೂವರೆ ನಿಮಿಷದಲ್ಲಿ ತನ್ನ ಪ್ರಯಾಣಿಕರನ್ನು ೧೧೦ ಕಿಲೋಮೀಟರ್ ಎತ್ತರಕ್ಕೆ ಕೊಂಡೊಯ್ದು ಭಾರರಹಿತ ಸ್ಥಿತಿಯ ಅನುಭವ ನೀಡಲಿದೆ.

ಕ್ಷಣಮಾತ್ರದ್ದಾದರೂ ಅಪೂರ್ವವಾದ  ಈ ಅನುಭವವನ್ನು ತಮ್ಮದಾಗಿಸಿಕೊಳ್ಳಲು  ಕನಿಷ್ಠ ೩೦೦ ಜನ ಈಗಾಗಲೇ ನೋಂದಾಯಿಸಿಕೊಂಡಿದ್ದಾರಂತೆ.  ವರ್ಜಿನ್ ಸಂಸ್ಥೆ ಅವರಿಂದ ತಲಾ ಸುಮಾರು ಒಂದು ಕೋಟಿ ರೂಪಾಯಿ ಶುಲ್ಕ ಪಡೆಯುವ ನಿರೀಕ್ಷೆಯಿದೆ.

ಡಿಸೆಂಬರ್ ೨೪, ೨೦೦೯ರ ಸುಧಾದಲ್ಲಿ ಪ್ರಕಟವಾದ ಲೇಖನ
badge